ಪಂಡಿತ್ ಸೋಮನಾಥ್ ಮರಡೂರ ಅವರಿಗೆ ಸಂಗೀತ ವಿದ್ವಾನ್ ಪ್ರಶಸ್ತಿ

ಧಾರಾವಾಡದ ಪಂಡಿತ್ ಸೋಮನಾಥ್ ಮರಡೂರ ಅವರನ್ನು ಪ್ರಸ್ತಕ ಸಾಲಿನ ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ. ಪ್ರಶಸ್ತಿಯನ್ನು ಮೈಸೂರು ದಸರಾ ಸಂದರ್ಭದಲ್ಲಿ ನೀಡಲಾಗುವುದೆಂದು ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ತಿಳಿಸಿದ್ದಾರೆ.

  • ಪಂಡಿತ್ ವೆಂಕಟೇಶ ಕುಮಾರ್ ನೇತೃತ್ವದ ಸಮಿತಿಯು ಪಂಡಿತ್ ಮರಡೂರ ಅವರ ಹೆಸರನ್ನು ಪ್ರಶಸ್ತಿಗೆ ಶಿಫಾರಸ್ಸು ಮಾಡಿತ್ತು.
  • ಪ್ರಶಸ್ತಿಯು ರೂ 3 ಲಕ್ಷ ನಗದು ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ.

ವಿಶ್ವದ ಅತಿದೊಡ್ಡ ರೇಡಿಯೋ ಟೆಲಿಸ್ಕೋಪ್ ಚೀನಾದಲ್ಲಿ ನಿರ್ಮಾಣ

ವಿಶ್ವದ ಅತಿದೊಡ್ಡ ರೇಡಿಯೋ ಟೆಲಿಸ್ಕೋಪ್ ಅನ್ನು ಚೀನಾ ನಿರ್ಮಿಸಿದೆ. ಟಿಯಾನ್ಐ ಅಥವಾ ದ ಫೈವ್ ಹಂಡ್ರೆಡ್ ಮೀಟರ್ಸ್ ಅಪರ್ಚರ್ ಸ್ಫೆರಿಕಲ್ ರೇಡಿಯೋ ಟೆಲಿಸ್ಕೋಪ್ (FAST) ಹೆಸರಿನ ಎಂದು ಕರೆಯಲಾಗುವ ಈ ಟೆಲಿಸ್ಕೋಪ್ ಕೆಲಸ ಆರಂಭಿಸಿರುವುದಾಗಿ ಚೀನಾ ತಿಳಿಸಿದೆ. ಗ್ಯುಝೋವುವಿನ ಪ್ರಾಂತ್ಯದಲ್ಲಿರುವ ನೈಸರ್ಗಿಕ ಕುಳಿಯಲ್ಲಿ ಇದನ್ನು ನಿರ್ಮಿಸಲಾಗಿದೆ.

ಪ್ರಮುಖಾಂಶಗಳು:

  • ಪ್ರಸ್ತುತ ಈ ಟೆಲಿಸ್ಕೋಪ್ ಪರೀಕ್ಷಾರ್ಥ ಸೇವೆಯನ್ನು ಆರಂಭಿಸಿದೆ. ನಿಖರವಾಗಿ ಕಾರ್ಯನಿರ್ವಹಿಸಲು ಇನ್ನು ಮೂರು ವರ್ಷಗಳ ಕಾಲ ಕಾಯಬೇಕಿದೆ.
  • ಇದರ ಸ್ಥಾಪನೆಯಿಂದ ಚೀನಾ ವಿಜ್ಞಾನ ಕ್ಷೇತ್ರದಲ್ಲಿ ಮತ್ತೊಮ್ಮೆ ಪ್ರಾಬಲ್ಯ ಸಾಧಿಸಿದಂತಾಗಿದೆ.
  • ಇದು ಚೀನಾದ ನ್ಯಾಷನಲ್ ಅಸ್ಟ್ರೋನಾಮಿಕಲ್ ಅಬ್ಸರ್ವೇಟರಿಸ್ ನ ಮಹತ್ವದ ಯೋಜನೆಯಾಗಿದೆ.
  • ಇದುವರೆಗೂ ರಷ್ಯಾದ RATAN-600 ವಿಶ್ವದ ಅತಿ ದೊಡ್ಡ ರೇಡಿಯೋ ಟೆಲಿಸ್ಕೋಪ್ ಆಗಿತ್ತು.
  • ಸುಮಾರು 4,450 ಪ್ಯಾನೆಲ್ ಗಳನ್ನು ಈ ಟೆಲೆಸ್ಕೋಪ್ ಹೊಂದಿದ್ದು, 30 ಫುಟ್ಬಾಲ್ ಪಿಚ್ ನಷ್ಟು ವಿಸ್ತೀರ್ಣದ ಪ್ರತಿಫಲಕವನ್ನು ಹೊಂದಿದೆ. ಇದು 500 ಮೀಟರ್ ವ್ಯಾಸವನ್ನು ಹೊಂದಿದೆ.
  • ದೂರದ ಆಕಾಂಶಗಂಗೆಯಲ್ಲಿರುವ ನೈಸರ್ಗಿಕ ಜಲಜನಕ ಹಾಗೂ ಸಾಮಾನ್ಯ ಟೆಲಿಸ್ಕೋಪ್‌ಗಳ ಪತ್ತೆ ಮಾಡದ ಆಕಾಶಕಾಯಗಳನ್ನು ಇದು ಪತ್ತೆ ಮಾಡಲಿದೆ. ಇದಕ್ಕಿಂತ ಹೆಚ್ಚಾಗಿ ಇನ್ನಿತರ ಆಕಾಶಕಾಯ, ಜನವಸತಿ ಪ್ರದೇಶಗಳಿಂದ ಹೊರಹೊಮ್ಮುವ ಸೂಕ್ಷಾತೀಸೂಕ್ಷ್ಮ ತರಂಗಗಳನ್ನು ಈ ಟೆಲಿಸ್ಕೋಪ್‌ ಗ್ರಹಿಸುವ ಸಾಮರ್ಥ್ಯ ಹೊಂದಿದೆ.

“ಸಿಂಧೂನದಿ ಜಲ ಒಪ್ಪಂದ”ದಿಂದ ಹಿಂದೆ ಸರಿಯಲು ಭಾರತ ಚಿಂತನೆ

ಭಾರತದ ಉರಿ ಸೇನಾ ನೆಲೆ ಮೇಲೆ ಪಾಕ್ ಪ್ರಚೋದಿತ ಉಗ್ರರು ದಾಳಿ ನಡೆಸಿದ ಹಿನ್ನಲೆಯಲ್ಲಿ ಸಿಂಧೂನದಿ ಜಲ ಒಪ್ಪಂದದ ಮೇಲೆ ಯಾವುದೇ ಚರ್ಚೆ ನಡೆಸದಿರಲು ಭಾರತ ನಿರ್ಧರಿಸಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಭೆಯಲ್ಲಿ ಈ ನಿರ್ಣಯವನ್ನು ಕೈಗೊಳ್ಳಲಾಗಿದೆ. ಈ ಸಭೆಯಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೊವಲ್, ವಿದೇಶಾಂಗ ಕಾರ್ಯದರ್ಶಿ ಎಸ್ ಜಯಶಂಕರ್ ಮತ್ತು ಕೇಂದ್ರದ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

ಪ್ರಮುಖಾಂಶಗಳು:

  • ಒಪ್ಪಂದವನ್ನು ಪರಾಮರ್ಶಿಸಿದಿರಲು ಅಥವಾ ರದ್ದುಪಡಿಸಿದಿರಲು ತೀರ್ಮಾನ ಕೈಗೊಳ್ಳಲಾಗಿದೆ.
  • ಭಾರತದ ಪಾಲಿನ ನೀರನ್ನು ಪೂರ್ಣವಾಗಿ ಬಳಸಿಕೊಳ್ಳಲು ನಿರ್ಧಾರ.
  • ಪಾಕಿಸ್ತಾನ ಭಯೋತ್ಪಾದನೆಗೆ ಕುಮ್ಮಕ್ಕು ನೀಡುವುದನ್ನು ನಿಲ್ಲಿಸುವವರೆಗೂ ಶಾಶ್ವತ ಸಿಂಧೂ ಆಯೋಗ ಕುರಿತಾದ ಮಾತುಕತೆ ನಡೆಸದಿರಲು ಚಿಂತನೆ.
  • ಪಾಕಿಸ್ತಾನದ ವಿರೋದದಿಂದ 1987 ರಲ್ಲಿ ಸ್ಥಗಿತಗೊಂಡಿರುವ ಟುಲ್ ಬುಲ್ ಯೋಜನೆಯನ್ನು ಪುನರ್ ಕೈಗೆತ್ತಿಕೊಳ್ಳಲು ಪರಿಶೀಲನೆ ಮಾಡುವುದು.
  • ಸಿಂದೂ, ಜೀಲಂ ಮತ್ತು ಚೀನಾಬ್ ನದಿಗಳ ಮೇಲೆ ಹೆಚ್ಚು ಜಲವಿದ್ಯುತ್ ಯೋಜನೆಗಳನ್ನು ಕೈಗೊಳ್ಳಲು ಯೋಚನೆ.
  • ಜಮ್ಮು ಕಾಶ್ಮೀರದಲ್ಲಿ ಉದ್ದೇಶಿತ ಪಕಲ್ ದುಲ್, ಸವಲ್ಕೋಟ್, ಬರ್ಸರ್ ಅಣೆಕಟ್ಟು ಕಾಮಗಾರಿಗಳನ್ನು ತ್ವರಿತಗೊಳಿಸುವುದು.

ಸಿಂಧೂನದಿ ಜಲ ಒಪ್ಪಂದ (Indus Water Treaty):

  • ಸಿಂಧೂನದಿ ಜಲ ಒಪ್ಪಂದ ಭಾರತ ಮತ್ತು ಪಾಕಿಸ್ತಾನ ನಡುವಿನ ನೀರು ಹಂಚಿಕೆ ಕುರಿತಾದ ಜಲ ಒಪ್ಪಂದ. ವಿಶ್ವಬ್ಯಾಂಕ್ ಮಧ್ಯಸ್ಥಿಕೆಯಲ್ಲಿ ಈ ಒಪ್ಪಂದವನ್ನು ಜಾರಿಗೆ ತರಲಾಗಿದೆ.
  • ಈ ಒಪ್ಪಂದವು ಆರು ನದಿಗಳಾದ ಬಿಯಾಸ್, ರಾವಿ, ಸಟ್ಲೇಜ್, ಸಿಂಧೂ, ಚೀನಾಬ್ ಮತ್ತು ಜೀಲಂ ನದಿಗಳ ನೀರು ಹಂಚಿಕೆಗೆ ಸಂಬಂಧಿಸಿದೆ.
  • ಅಂದಿನ ಭಾರತದ ಪ್ರಧಾನ ಮಂತ್ರಿಗಳಾದ ಜವಹಾರ್ ಲಾಲ್ ನೆಹರೂ ಹಾಗೂ ಪಾಕಿಸ್ತಾನದ ಅಧ್ಯಕ್ಷರಾದ ಅಯೂಬ್ ಖಾನ್ ನಡುವೆ ಸೆಪ್ಟೆಂಬರ್ 19, 1960 ರಲ್ಲಿ ಈ ಒಪ್ಪಂದಕ್ಕೆ ಸಹಿಹಾಕಲಾಯಿತು.
  • ಒಪ್ಪಂದದ ಅನ್ವಯ ಪೂರ್ವಾಭಿಮುಖವಾಗಿ ಹರಿಯುವ ನದಿಗಳಾದ ರಾವಿ, ಬಿಯಾಸ್ ಮತ್ತು ಸಟ್ಲೇಜ್ ನದಿಗಳ ಮೇಲೆ ಭಾರತ ನಿಯಂತ್ರಣ ಹೊಂದಲಿದೆ. ಹಾಗೆಯೇ ಪಶ್ಚಿಮಭಿಮುಖವಾಗಿ ಹರಿಯುವ ನದಿಗಳಾದ ಸಿಂಧೂ, ಜೀಲಂ ಮತ್ತು ಚೀನಾಬ್ ನದಿಗಳ ಮೇಲೆ ಪಾಕಿಸ್ತಾನ ನಿಯಂತ್ರಣ ಹೊಂದಿದೆ.
  • ಭಾರತದ ಮೂಲಕ ಹರಿಯುವ ಸಿಂಧೂ ನದಿಯ ಕೇವಲ 20% ನೀರನ್ನು ಮಾತ್ರ ನೀರಾವರಿ, ವಿದ್ಯುತ್ ಉತ್ಪಾದನೆಗೆ ಮತ್ತು ಸಾರಿಗೆ ಸೇವೆಗೆ ಭಾರತ ಬಳಸಬಹುದಾಗಿದೆ.
  • 1965, 1971 ಹಾಗೂ 1999ರ ಕಾರ್ಗಿಲ್ ಯುದ್ದ ಹೊರತಾಗಿಯೂ ಈ ಒಪ್ಪಂದ ಇದುವರೆಗೂ ಜೀವಂತವಾಗಿದೆ. ವಿಶ್ವದ ಕೆಲವೇ ಯಶಸ್ವಿ ಒಪ್ಪಂದಗಳಲ್ಲಿ ಸಿಂಧೂನದಿ ಜಲ ಒಪ್ಪಂದ ಸಹ ಒಂದಾಗಿದೆ.

“ಗಾಂಧಿ ಪಥ ಗ್ರಾಮ ಪಥ” ಯೋಜನೆಗೆ ರಾಜ್ಯ ಸರ್ಕಾರ ಒಪ್ಪಿಗೆ

ರಾಜ್ಯದ ಗ್ರಾಮೀಣ ವಿಧಾನಸಭಾ ಕ್ಷೇತ್ರಗಳಲ್ಲಿ ರಸ್ತೆ ಅಭಿವೃದ್ದಿಪಡಿಸಲು “ಗಾಂಧಿಪಥ ಗ್ರಾಮ ಪಥ” ಯೋಜನೆಗೆ ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಈ ಯೋಜನೆಯಡಿ ರಾಜ್ಯದ 189 ಗ್ರಾಮೀಣ ವಿಧಾನಸಭೆ ಕ್ಷೇತ್ರಗಳ ತಲಾ 20 ಕಿ.ಮೀ. ರಸ್ತೆ ಅಭಿವೃದ್ಧಿಪಡಿಸಲಾಗುವುದು. ಇದಕ್ಕಾಗಿ 3,261 ಕೋಟಿ ರೂ. ಬಿಡುಗಡೆ ಮಾಡಲು ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ.

ಪ್ರಮುಖಾಂಶಗಳು:

  • ಈ ಹಿಂದೆ ‘ನಮ್ಮ ಗ್ರಾಮ ನಮ್ಮ ರಸ್ತೆ’ ಹೆಸರಿನಲ್ಲಿದ್ದ ಯೋಜನೆಯನ್ನು ಇದೀಗ ‘ಗಾಂಧಿ ಪಥ ಗ್ರಾಮ ಪಥ’ ಎಂದು ಬದಲಾಯಿಸಲಾಗಿದೆ.
  • ಈ ಯೋಜನೆಯಡಿ 189 ಕ್ಷೇತ್ರಗಳ 4,290 ಕಿ.ಮೀ ರಸ್ತೆಯನ್ನು ಅಭಿವೃದ್ಧಿಪಡಿಸಲು ತೀರ್ಮಾನ ಕೈಗೊಳ್ಳಲಾಗಿದೆ.
  • ಯಾವ ರಸ್ತೆ ಅಭಿವೃದ್ಧಿ ಮಾಡಬೇಕೆಂಬುದನ್ನು ಸ್ಥಳೀಯ ಶಾಸಕರ ನೇತೃತ್ವದ ಕಾರ್ಯಪಡೆ ನಿರ್ಧಾರ ಮಾಡಲಿದೆ.

ಇತರೆ ನಿರ್ಣಯಗಳು:

  • ಮುಖ್ಯಮಂತ್ರಿಯವರ ನಗರೋತ್ಥಾನ ಯೋಜನೆಯಡಿ ಸಣ್ಣ ಮತ್ತು ಮಧ್ಯಮ ನಗರಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿ ಪಡಿಸುವ ಮೂರನೇ ಹಂತದ 2,836.50 ಕೋಟಿ ರೂ. ಯೋಜನೆಗೂ ಅನುಮೋದನೆ ನೀಡಿದೆ.
  • ಬಿಪಿಎಲ್ ಕಾರ್ಡ್ದಾರರಿಗೆ ಪ್ರತಿ ಕೆಜಿ ತೊಗರಿಬೇಳೆಗೆ 30 ರೂ. ಸಬ್ಸಿಡಿ ನೀಡಲು ತೀರ್ಮಾನಿಸಿದೆ. ಬಿಪಿಎಲ್ ಕಾರ್ಡ್ಗಳಿಗೆ ರಿಯಾಯಿತಿ ದರದಲ್ಲಿ ತೊಗರಿಬೇಳೆ ನೀಡುವ ಮುಖ್ಯಮಂತ್ರಿಗಳ ಭರವಸೆಯಂತೆ ಪ್ರತಿ ಕುಟುಂಬಕ್ಕೆ ತಿಂಗಳಿಗೆ ಒಂದು ಕೆಜಿ ತೊಗರಿಬೇಳೆ ವಿತರಿಸುವುದು. ಅದರ ಬೆಲೆಯಲ್ಲಿ ಪ್ರತಿ ಕೆಜಿಗೆ 30 ರೂ. ಸರಕಾರದ ವತಿಯಿಂದ ಸಬ್ಸಿಡಿ ನೀಡಲು ಸಂಪುಟ ಒಪ್ಪಿಗೆ ನೀಡಿದೆ. ಇದರಿಂದ ಸರಕಾರಕ್ಕೆ ವಾರ್ಷಿಕ 360 ಕೋಟಿ ರೂ. ಹೊರೆಯಾಗಲಿದೆ .
  • ಆಧಾರ್ ಕಡ್ಡಾಯ: ಕೇಂದ್ರದ ಯೋಜನೆಗಳಡಿ ಸಿಗುವ ಸಬ್ಸಿಡಿ, ಪ್ರೋತ್ಸಾಹ ಧನ, ಸಾಮಾಜಿಕ ಸುರಕ್ಷಾ ಯೋಜನೆಯ ನೆರವು ಪಡೆಯಲು ರಾಜ್ಯದಲ್ಲೂ ಆಧಾರ್ ಕಡ್ಡಾಯಗೊಳಿಸಲು ಹಾಗೂ ಆ ಎಲ್ಲ ಯೋಜನೆಗಳ ಹಣ ನೇರವಾಗಿ ಫಲಾನುಭವಿಗಳ ಖಾತೆಗೆ ಜಮೆ ಮಾಡಲು ಸಂಪುಟ ತೀರ್ಮಾನಿಸಿದೆ. ಇದರಿಂದಾಗಿ ಕೇಂದ್ರದ ಯೋಜನೆ ಪಡೆಯಲು 2017ರ ಮಾ. 31ರೊಳಗೆ ಆಧಾರ್ ಮಾಡಿಸಿಕೊಳ್ಳುವುದು ಕಡ್ಡಾಯವಾಗಲಿದೆ.
  • ವಾಹನ ಚಾಲಕರಿಗೆ ವಿಮೆ: ರಾಜ್ಯ ಖಾಸಗಿ ವಾಣಿಜ್ಯ ವಾಹನ ಚಾಲಕರ ಅಪಘಾತ ಪರಿಹಾರ ನಿಧಿ ಸ್ಥಾಪನೆಗೆ ರಾಜ್ಯ ಸಂಪುಟ ಅನುಮೋದನೆ ನೀಡಲಾಗಿದ್ದು, ಇದರಡಿ ಆಟೋ, ಕ್ಯಾಬ್ ಚಾಲಕರು ಸೇರಿ 30 ಲಕ್ಷ ಜನರು ಉಪಯೋಗ ಪಡೆದುಕೊಳ್ಳಬಹುದಾಗಿದೆ. ಕರ್ತವ್ಯದಲ್ಲಿದ್ದಾಗ ಚಾಲಕರು ಮೃತಪಟ್ಟರೆ 2 ಲಕ್ಷ ರೂ., ದೇಹದ ಅಂಗಗಳು ಪೂರ್ಣ ಅಥವಾ ಬಾಗಶಃ ಹಾನಿಯಾದರೆ 2 ಲಕ್ಷ ರೂ., ಆಸ್ಪತ್ರೆ ವೆಚ್ಚ 1 ಲಕ್ಷ ರೂ., ಹದಿನೈದು ದಿನ ಒಳರೋಗಿಯಾಗಿ ಚಿಕಿತ್ಸೆ ಪಡೆದರೆ 50 ಸಾವಿರ ರೂ. ಸಿಗಲಿದೆ.

ಐತಿಹಾಸಿಕ 500ನೇ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ವಿರುದ್ದ ಭಾರತಕ್ಕೆ ಜಯ

ಐತಿಹಾಸಿಕ 500ನೇ ಟೆಸ್ಟ್ ಪಂದ್ಯದಲ್ಲಿ ಭಾರತ ನ್ಯೂಜಿಲ್ಯಾಂಡ್ ತಂಡವನ್ನು ಸೋಲಿಸಿದೆ. ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ 197 ರನ್ ಗಳಿಂದ ಗೆಲುವು ಸಾಧಿಸುವ ಮೂಲಕ 500ನೇ ಐತಿಹಾಸಿಕ ಟೆಸ್ಟ್ ಪಂದ್ಯವನ್ನು ಅವಿಸ್ಮರಣೀಯವಾಗಿಸಿಕೊಂಡಿದೆ. ನ್ಯೂಜಿಲ್ಯಾಂಡ್ ವಿರುದ್ದದ ಮೂರು ಟೆಸ್ಟ್ ಪಂದ್ಯಗಳಲ್ಲಿ ಮೊದಲ ಪಂದ್ಯದಲ್ಲಿ ಭಾರತ ಜಯಗಳಿಸಿ 1-0 ಮುನ್ನಡೆ ಸಾಧಿಸಿದೆ. ಗೆಲಲ್ಲು 434 ರನ್‌ಗಳ ಗುರಿ ಬೆನ್ನತ್ತಿದ ನ್ಯೂಜಿಲೆಂಡ್ 236ಕ್ಕೆ ಅಲೌಟ್ ಆಗಿ 197 ರನ್ ಗಳ ಸೋಲನ್ನು ಒಪ್ಪಿಕೊಂಡಿತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿದ್ದ ಭಾರತ ತಂಡ ಮೊದಲನೇ ಇನ್ನಿಂಗ್ಸ್ ನಲ್ಲಿ 318 ರನ್ ಗಳಿಗೆ ಆಲೌಟ್ ಆಗಿತ್ತು. ಇದಕ್ಕೆ ಉತ್ತರವಾಗಿ ಭರ್ಜರಿ ಆರಂಭ ಪಡೆದ ನ್ಯೂಜಿಲೆಂಡ್ ತಂಡ ಕೊನೆಯಲ್ಲಿ ಭಾರತದ ಸ್ಪಿನ್ ದಾಳಿಗೆ ತಲೆ ಭಾಗಿ 262ರನ್ ಗಳಿಗೆ ಅಲೌಟ್ ಆಗಿತ್ತು. ಬಳಿಕ ಎರಡನೇ ಇನ್ನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾ 5 ವಿಕೆಟ್ ಕಳೆದುಕೊಂಡು 377 ರನ್ ಕಲೆ ಹಾಕಿ ಡಿಕ್ಲೇರ್ ಮಾಡಿಕೊಂಡು ಕಿವೀಸ್ ಗೆ 434ರನ್ ಗಳ ಟಾರ್ಗೆಟ್ ನೀಡಿತ್ತು. ಮೊದಲನೇ ಇನ್ನಿಂಗ್ ನಲ್ಲಿ ರವೀಂದ್ರ ಜಡೇಜಾ 5 ವಿಕೆಟ್ ಅಶ್ವಿನ್ 4 ವಿಕೆಟ್ ಪಡೆದಿದ್ದರು. ಎರಡನೇ ಇನ್ನಿಂಗ್ ನಲ್ಲಿ ಅಶ್ವಿನ್ 6 ವಿಕೆಟ್ ಪಡೆದು ಟೆಸ್ಟ್ ಪಂದ್ಯವೊಂದರಲ್ಲಿ 10 ವಿಕೆಟ್ ಪಡೆದ ಸಾಧನೆ ಮಾಡಿದರು. ಬ್ಯಾಟಿಂಗ್ ಹಾಗೂ ಬೌಲಿಂಗ್ ನಲ್ಲಿ ಮಿಂಚಿದ ಜಡೇಜಾ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

  • 500 ಟೆಸ್ಟ್ ಗಳನ್ನು ಆಡುತ್ತಿರುವ ನಾಲ್ಕನೇ ತಂಡ ಭಾರತ. ಇಂಗ್ಲೆಂಡ್ 976 ಪಂದ್ಯಗಳನ್ನು ಆಡುವ ಮೂಲಕ ಅತಿ ಹೆಚ್ಚು ಪಂದ್ಯಗಳನ್ನು ಆಡಿರುವ ತಂಡವೆನಿಸಿದೆ. ಆಸ್ಟ್ರೇಲಿಯಾ 791 ಪಂದ್ಯ ಹಾಗೂ ವೆಸ್ಟ್ ಇಂಡೀಸ್ 517 ಪಂದ್ಯಗಳನ್ನು ಆಡಿವೆ.
  • ಭಾರತ ತನ್ನ ಮೊದಲ ಟೆಸ್ಟ್ ಪಂದ್ಯವನ್ನು ಇಂಗ್ಲೆಂಡ್ ವಿರುದ್ದ ಜೂನ್ 25, 1932 ರಲ್ಲಿ ಆಡಿತು. ಸಿ.ಕೆ ನಾಯ್ಡು ರವರು ಭಾರತ ತಂಡದ ನಾಯಕರಾಗಿದ್ದರು.

ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ (CSIR)ಗೆ ವಜ್ರಮಹೋತ್ಸವ ಸಂಭ್ರಮ

ದೇಶದ ಅತಿದೊಡ್ಡ ನಾಗರಿಕ ಸಂಶೋಧನಾ ಮತ್ತು ಅಭಿವೃದ್ದಿ ಸಂಸ್ಥೆಯಾಗಿರುವ “ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ (Council of Scientific and Industrial Research)” ವಜ್ರಮಹೋತ್ಸವವನ್ನು ಆಚರಿಸಿಕೊಂಡಿತು. ಸಿಎಸ್ಐಆರ್ ನ ಅಧ್ಯಕ್ಷರೂ ಆಗಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ರವರು ವಜ್ರಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಇದೇ ವೇಳೆ ಸಿಎಸ್ಐಆರ್ ಲ್ಯಾಬೋರೆಟರಿ ಅಭಿವೃದ್ದಿ ಪಡಿಸಿರುವ ಏಳು ಸಸ್ಯಗಳ ಹೊಸ ತಳಿಯನ್ನು ಬಿಡುಗಡೆಗೊಳಿಸಿದರು. ಅಲ್ಲದೇ ವಿವಿಧ ಕ್ಷೇತ್ರಕ್ಕೆ ಗಣನೀಯ ಕೊಡುಗೆ ನೀಡಿರುವ ವಿಜ್ಞಾನಿಗಳಿಗೆ ಶಾಂತಿ ಸ್ವರೂಪ್ ಭಟ್ನಾಗರ್ ಪ್ರಶಸ್ತಿಯನ್ನು ನೀಡಲಾಯಿತು.

  • ಸಿಎಸ್ಐಆರ್ ಒಂದು ಸ್ವಾಯತ್ತ ಸಂಸ್ಥೆ. ಇದು ದೇಶದ ಅತಿ ದೊಡ್ಡ ಸಂಶೋಧನಾ ಮತ್ತು ಅಭಿವೃದ್ದಿ ಸಂಸ್ಥೆಯಾಗಿದೆ.
  • ಸಿಎಸ್ಐಆರ್ ಅನ್ನು ಸೆಪ್ಟೆಂಬರ್ 27, 1942ರಲ್ಲಿ ಸ್ಥಾಪಿಸಲಾಗಿದೆ.
  • ಸೊಸೈಟಿ ನೋಂದಣಿ ಕಾಯಿದೆ-1860ರಡಿ ಈ ಸಂಸ್ಥೆಯನ್ನು ಸ್ಥಾಪಿಸಲಾಗಿದ್ದು, ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ಅನುದಾನಡಿ ಕಾರ್ಯನಿರ್ವಹಿಸುತ್ತಿದೆ.
  • ಭಾರತದ ಪ್ರಧಾನ ಮಂತ್ರಿಗಳ ಸಿಎಸ್ಐಆರ್ ನ ಅಧ್ಯಕ್ಷರಾಗಿರುತ್ತಾರೆ.
  • ಡಾ. ಗಿರೀಶ್ ಸಹ್ನಿ ಪ್ರಸ್ತುತ ಇದರ ಡೈರೆಕ್ಟರ್ ಜನರಲ್ ಆಗಿದ್ದಾರೆ.

Leave a Comment

This site uses Akismet to reduce spam. Learn how your comment data is processed.