ಪ್ಯಾರಿಸ್ ಹವಾಮಾನ ಒಪ್ಪಂದ ಅನುಮೋದನೆಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ

ಜಾಗತಿಕ ತಾಪಮಾನ ತಗ್ಗಿಸುವ ಮಹತ್ವದ ಪ್ಯಾರಿಸ್ ಒಪ್ಪಂದಕ್ಕೆ ಅನುಮೋದನೆ ನೀಡಲು ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಅಕ್ಟೋಬರ್ 2 ರಂದು ಗಾಂಧಿ ಜಯಂತಿ ದಿವಸ ಭಾರತ ಅಧಿಕೃತವಾಗಿ ಈ ಒಪ್ಪಂದಕ್ಕೆ ಅನುಮೋದನೆ ನೀಡಲಿದೆ. ವಿಶ್ವದ 185 ರಾಷ್ಟ್ರಗಳು ಪ್ಯಾರಿಸ್ ಒಪ್ಪಂದವನ್ನು ಡಿಸೆಂಬರ್ 2015 ರಲ್ಲಿ ಅಳವಡಿಸಿಕೊಂಡಿದ್ದವು. ಭಾರತ ಏಪ್ರಿಲ್ 2016 ರಂದು ನ್ಯೂಯಾರ್ಕ್ ನಲ್ಲಿ ಈ ಒಪ್ಪಂದಕ್ಕೆ ಸಹಿ ಮಾಡಿತ್ತು. ಇಲ್ಲಿಯವರೆಗೆ 191 ರಾಷ್ಟ್ರಗಳು ಈ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿವೆ.

ಒಪ್ಪಂದ ಯಾವಾಗ ಜಾರಿಗೆ ಬರಲಿದೆ?

  • ಪ್ಯಾರಿಸ್ ಹವಾಮಾನ ಒಪ್ಪಂದವು ಕನಿಷ್ಟ ಪಕ್ಷ 55 ರಾಷ್ಟ್ರಗಳು ಅನುಮೋದಿಸಿ ಹಸಿರುಮನೆ ಅನಿಲ ಹೊರಸೂಸಿವಿಕೆ ಪ್ರಮಾಣವನ್ನು ಶೇ55% ಕುಗ್ಗಿಸಿದಾಗ ಒಪ್ಪಂದ ಜಾರಿಗೆ ಬರಲಿದೆ.
  • ಸದ್ಯ 61 ರಾಷ್ಟ್ರಗಳು ಈ ಒಪ್ಪಂದವನ್ನು ಅನುಮೋದಿಸಿದ್ದು, ಒಟ್ಟಾರೆಯಾಗಿ ಈ ರಾಷ್ಟ್ರಗಳು ಶೇ 47.79% ಹಸಿರು ಮನೆ ಅನಿಲವನ್ನು ಹೊರಸೂಸುತ್ತಿವೆ.
  • ಭಾರತ ಸೇರಿದಂತೆ ಇತರೆ ವಿಶ್ವದ ಪ್ರಮುಖ ರಾಷ್ಟ್ರಗಳು ಒಪ್ಪಂದವನ್ನು ಅನುಮೋದಿಸಲು ಮುಂದೆ ಬಂದಿರುವ ಕಾರಣ ಬಹುಬೇಗ ಈ ಒಪ್ಪಂದ ಜಾರಿಬರಲಿದೆ ಎನ್ನಲಾಗಿದೆ.

ಒಪ್ಪಂದಕ್ಕೆ ಭಾರತದ ಮಹತ್ವ:

  • ಭಾರತ ಈ ಒಪ್ಪಂದಕ್ಕೆ ಸಹಿಹಾಕಿದರೆ ಒಪ್ಪಂದವನ್ನು ಅನುಮೋದಿಸಿರುವ ದೇಶಗಳ ಒಟ್ಟಾರೆ ಜಾಗತಿಕ ಹೊರಸೂಸುವಿಕೆ ಪ್ರಮಾಣ ಶೇ 51.89%ಗೆ ಏರಿಕೆಯಾಗಲಿದೆ.
  • ಅಲ್ಲದೇ ಒಪ್ಪಂದವನ್ನು ಅನುಮೋದಿಸುವ ಮೂಲಕ ಮಹತ್ವದ ಒಪ್ಪಂದ ಜಾರಿಗೆ ಬರುವಲ್ಲಿ ಭಾರತ ಬಹು ಮುಖ್ಯ ಪಾತ್ರವಹಿಸಲಿದೆ.
  • ಪ್ಯಾರಿಸ್ ಒಪ್ಪಂದವನ್ನು ಅನುಮೋದಿಸುವ ಮೂಲಕ ಜಾಗತಿಕ ತಾಪಮಾನ ಕುಗ್ಗಿಸಿ ಪರಿಸರ ಸಮತೋಲನ ಕಾಪಾಡಲು ಭಾರತ ಬದ್ಧತೆಯನ್ನು ತೋರಿಸಲಿದೆ.

ವಿಶ್ವದ ಮೊದಲ ಥ್ರೀ-ಪೇರೆಂಟ್ ಮಗು (Three Parent Baby) ಮೆಕ್ಸಿಕೊದಲ್ಲಿ ಜನನ

ಮೆಕ್ಸಿಕೊದಲ್ಲಿ ವಿಶ್ವದ ಮೊದಲ ಥ್ರೀ-ಪೇರೆಂಟ್ ಮಗುವಿಗೆ ಜನ್ಮ ನೀಡಲಾಗಿದೆ. ಮೂವರು ಜನ್ಮದಾತರ ಡಿಎನ್ಎ ಬಳಸಿ ಮಗು ಪಡಡೆಯುವ ಈ ವಿವಾದತ್ಮಕ ತಂತ್ರಜ್ಞಾನದ ಮೂಲಕ ಜೋರ್ಡಾನ್ ಮೂಲದ ದಂಪತಿಗಳಿಗೆ ಮಗು ಜನಿಸಿದೆ. ಥ್ರೀ-ಪೇರೆಂಟ್ ತಂತ್ರಜ್ಞಾನವನ್ನು “ಮೈಟ್ರೋಕಾಂಡ್ರಿಯಲ್ ಡೊನೇಶನ್ (Mitochondrial Donation)” ಎಂತಲೂ ಕರೆಯುತ್ತಾರೆ. ಈ ವಿಧಾನದಿಂದ ಅಪರೂಪದ ತಳಿ ರೂಪಾಂತರಗೊಂಡಿರುವ ಪೋಷಕರು ಸಹ ಆರೋಗ್ಯವಂತ ಮಗುವನ್ನು ಪಡೆಯಬಹುದಾಗಿದೆ.

ಹಿನ್ನಲೆ:

  • ಮಗುವಿನ ತಾಯಿಯು ಲೀಗ್ ಸಿಂಡ್ರೋಮ್‌ (Leigh Syndrome) ಎಂಬ ಮಾರಣಾಂತಿಕ ವಂಶವಾಹಿಯನ್ನು ಹೊಂದಿದ್ದರು. ಇದರಿಂದ ಭ್ರೂಣ ಅವಸ್ಥೆಯಲ್ಲಿರುವ ಮಗುವಿನ ಮೆದುಳು ಮತ್ತು ನರಗಳು ಹಾನಿಗೆ ಒಳಗಾಗಿ ಸಾವನ್ನಪ್ಪುತ್ತದೆ.
  • ಈ ರೋಗಕ್ಕೆ ಕಾರಣವಾಗುವ ವಂಶವಾಹಿ ಮಾನವನ ಶರೀರದ ಜೀವಕೋಶಗಳಿಗೆ ಶಕ್ತಿಯನ್ನು ಒದಗಿಸುವ ‘ಮೈಟೋಕಾಂಡ್ರಿಯಾ ’ದಲ್ಲಿನ ಡಿಎನ್‌ಎದಲ್ಲಿರುತ್ತದೆ.
  • ಈ ಪ್ರಕರಣದಲ್ಲಿ ನ್ಯೂಕ್ಲಿಯರ್ ಸ್ಪಿಂಡಲ್ ಟ್ರಾನ್ಸಫಾರ್ (Spindle Nuclear transfer) ತಂತ್ರಜ್ಞಾನ ಬಳಸಲಾಗಿದೆ. ಇಲ್ಲಿ ತಾಯಿಯಿ ಅಂಡ ಮತ್ತು ದಾನಿಯ ಅಂಡವನ್ನು ತಂದೆಯ ವೀರ್ಯಾಣುವಿನೊಂದಿಗೆ ಫಲದಾಯಕಗೊಳಿಸಲಾಗುತ್ತದೆ. ಫಲದಾಯಕಗೊಂಡ ಅಂಡಗಳು ಭ್ರೂಣದ ಆರಂಭದ ಹಂತಗಳಾಗಿ ವಿಭಜನೆಗೊಳ್ಳುವ ಮುನ್ನ ಪ್ರತಿ ಬೀಜಾಣುವನ್ನು ಹೊರತೆಗೆಯಲಾಗುತ್ತದೆ. ದಾನಿಯ ಫಲವತ್ತುಗೊಂಡ ಅಂಡವನ್ನು ತ್ಯಜಿಸಿ ಅದರ ಜಾಗದಲ್ಲಿ ತಾಯಿಯ ಫಲವತ್ತುಗೊಂಡ ಅಂಡವನ್ನು ಪ್ರತಿಷ್ಠಾಪಿ ಸಲಾಗುತ್ತದೆ.
  • ಹೀಗೆ ಬೆಳವಣಿಗೆಯಾದ ಭ್ರೂಣವನ್ನು ತಾಯಿಯ ಗರ್ಭಕ್ಕೆ ಸೇರಿಸಲಾಗಿದ್ದು, ಒಂಬತ್ತು ತಿಂಗಳ ನಂತರ ಆರೋಗ್ಯವಂತ ಮಗು ಜನಿಸಿದೆ.

ಮೈಟೊಕಾಂಡ್ರಿಯ ರಿಪ್ಲೇಸ್ಮೆಂಟ್ ಥೆರಪಿ:

  • ಇದೊಂದ ವೈದ್ಯಕೀಯ ತಂತ್ರಜ್ಞಾನವಾಗಿದ್ದು, ನ್ಯೂನತೆ ಇರುವ ಮಹಿಳೆ ಮೈಟೋಕಾಂಡ್ರಿಯವನ್ನು ದಾನಿಯ ಆರೋಗ್ಯವಂತ ಮೈಟೋಕಾಂಡ್ರಿಯ ಬದಲಾಯಿಸಲಾಗುವುದು.
  • ಅನಂತರ ಪ್ರನಾಳಿಕೆ ಫಲೀಕರಣ ತಂತ್ರ (IVF)ದ ಮೂಲಕ ಅಂಡವನ್ನು ಸಂಗಾತಿಯ ವೀರ್ಯದೊಂದಿಗೆ ಫಲದಾಯಕಗೊಳಿಸಲಾಗುವುದು. ಆಗಾಗಿ ಭ್ರೂಣದಲ್ಲಿ ಯಾವುದೇ ನ್ಯೂನತೆ ಕಂಡುಬರುವುದಿಲ್ಲ.
  • ಆದ್ದರಿಂದ ಈ ತಂತ್ರಜ್ಞಾನದಿಂದ ಮೈಟೋಕಾಂಡ್ರಿಯಲ್ ನ್ಯೂನತೆ ಕಾಯಿಲೆಯು ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಗೆ ಪ್ರಸರಣವಾಗುವುದನ್ನು ಸಂಪೂರ್ಣವಾಗಿ ತಡೆಯಬಹುದಾಗಿದೆ.
  • ಮೈಟೊಕಾಂಡ್ರಿಯ ರಿಪ್ಲೇಸ್ಮೆಂಟ್ ಥೆರಪಿಯಲ್ಲಿ ಮುಖ್ಯವಾಗಿ ಎರಡು ವಿಧಗಳಿವೆ ಅವುಗಳೆಂದರೆ “ಮೆಟರನಲ್ ಸ್ಪಿಂಡಲ್ ಟ್ರಾನ್ಸಫರ್” ಮತ್ತು “ಪ್ರೊನ್ಯೂಕ್ಲಿಯರ್ ಟ್ರಾನ್ಸಫರ್”.

“ಜಿಮ್ ಯಾಂಗ್ ಕಿಮ್” ವಿಶ್ವಬ್ಯಾಂಕ್ ನ ಅಧ್ಯಕ್ಷ ರಾಗಿ ಎರಡನೇ ಅವಧಿಗೆ ನೇಮಕ

ವಿಶ್ವ ಬ್ಯಾಂಕ್ ನ ಹಾಲಿ ಅಧ್ಯಕ್ಷ ಜಿಮ್ ಯಾಂಗ್ ಕಿಮ್ ರವರು ಎರಡನೇ ಅವಧಿಗೆ ಬ್ಯಾಂಕಿನ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಕಿಮ್ ರವರು ಜುಲೈ 1, 2017 ರಿಂದ ಎರಡನೇ ಅವಧಿಗೆ ಅಧ್ಯಕ್ಷರಾಗಿ ಕಾರ್ಯಭಾರ ಮಾಡಲಿದ್ದು, ಮುಂದಿನ ಐದು ವರ್ಷಗಳ ಕಾಲ ಹುದ್ದೆಯಲ್ಲಿರಲಿದ್ದಾರೆ.

ಜಿಮ್ ಯಾಂಗ್ ಕಿಮ್ ಬಗ್ಗೆ:

  • ಜಿಮ್ ಯಾಂಗ್ ಜಿಮ್ ರವರು ದಕ್ಷಿಣ ಕೊರಿಯಾ ಮೂಲದ ಅಮೆರಿಕ ವೈದ್ಯ ಮತ್ತು ಮಾನವಶಾಸ್ತ್ರಜ್ಞ.
  • ಕಿಮ್ ಅವರು ವಿಶ್ವಬ್ಯಾಂಕ್ ನ 12ನೇ ಅಧ್ಯಕ್ಷರು. 2012 ರಲ್ಲಿ ಮೊದಲ ಅವಧಿಗೆ ಅಧ್ಯಕ್ಷರಾಗಿ ನೇಮಕಗೊಂಡಿದ್ದರು.
  • ಫೋರ್ಬ್ಸ್ ನಿಯತಕಾಲಿಕೆ 2013 ರಲ್ಲಿ ಬಿಡುಗಡೆಗೊಳಿಸಿದ ವಿಶ್ವದ 50 ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಕಿಮ್ ಅವರು ಸ್ಥಾನ ಪಡೆದಿದ್ದರು.

ವಿಶ್ವಬ್ಯಾಂಕ್:

  • ವಿಶ್ವಬ್ಯಾಂಕ್ ಒಂದು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಯಾಗಿದ್ದು, ವಿಶ್ವದ ಮುಂದುವರೆಯಿತ್ತಿರುವ ರಾಷ್ಟ್ರಗಳಲ್ಲಿ ಕೈಗೊಳ್ಳುವ ಪ್ರಮುಖ ಯೋಜನೆಗಳಿಗೆ ಸಾಲದ ನೆರವನ್ನು ನೀಡುತ್ತಿದೆ.
  • ವಿಶ್ವಬ್ಯಾಂಕ್ 1944 ರಲ್ಲಿ ಸ್ಥಾಪನೆಗೊಂಡಿದೆ.
  • ಇದರ ಕೇಂದ್ರ ಕಚೇರಿ ವಾಷಿಂಗ್ಟನ್, ಅಮೆರಿಕಾದಲ್ಲಿದೆ

ಮಹಾರಾಷ್ಟ್ರದಲ್ಲಿ ಹೊಸ ಹಲ್ಲಿ ಪ್ರಬೇಧ ಪತ್ತೆ

ನೆಲದಲ್ಲಿ ವಾಸಿಸುವ ಹಲ್ಲಿಗಳ ವಿಶಿಷ್ಟ ಹೊಸ ಪ್ರಭೇದಗಳನ್ನು ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ. ಮಹಾರಾಷ್ಟ್ರದ ಬದಲ್ಪುರ್ ಮತ್ತು ಗೊರೆಗಾನ್ ಅರೆ ಕಾಲೋನಿ ಅರಣ್ಯ ವ್ಯಾಪ್ತಿಯಲ್ಲಿ ಈ ಹೊಸ ಹಲ್ಲಿ ಪ್ರಭೇಧಗಳು ಕಂಡುಬಂದಿವೆ. ಈ  ಹಲ್ಲಿಗಳಿಗೆ ಬೆಂಗಳೂರಿನ ರಾಷ್ಟ್ರೀಯ ಜೈವಿಕ ವಿಜ್ಞಾನಗಳ ಕೇಂದ್ರದ ಹಿರಿಯ ಸರೀಸೃಪತಜ್ಞ ಡಾ. ವರದಗಿರಿ ಅವರ ಸ್ಮರಣಾರ್ಥ ಸಿರ್ಟೊಡಾಕ್ಟಿಲಸ್‌ ವರದಗಿರಿ (Cyrtodactylus Varadgirii or Giri’s Geckoella) ಎಂದು ನಾಮಕರಣ ಮಾಡಲಾಗಿದೆ.

  • ಈ ನೂತನ ಪ್ರಭೇದಗಳು ಎಲೆ ಉದುರುವ ಕಾಡುಗಳು ಯಥೇಚ್ಛವಾಗಿ ಕಾಣಿಸುವ ನೆಲವಾಸಿ ಹಲ್ಲಿಗಳಾದ ಗೆಕ್ಕೊಯೆಲ್ಲಾದ ಉಪಕುಲಕ್ಕೆ ಸೇರಿವೆ.
  • ಈ ಜಾತಿಯ ಹಲ್ಲಿಗಳು ಆಗ್ನೇಯ ಏಷ್ಯಾ, ಭಾರತ ಮತ್ತು ಶ್ರೀಲಂಕಾಗಳಲ್ಲಿ ಕಂಡುಬರುತ್ತವೆ. ಸಿರ್ಟೊಡಾಕ್ಟಿಲಸ್‌ ವರದಗಿರಿ ಹಲ್ಲಿಗಳು, ಗೆಕ್ಕೊಯೆಲ್ಲಾದ ಇತರೆ ಜಾತಿಯ ಹಲ್ಲಿಗಳಿಗಿಂತ ಅನೇಕ ಗುಣಗಳಲ್ಲಿ ವಿಭಿನ್ನವಾಗಿವೆ.
  • ಅಮೆರಿಕ ವಿಲ್ಲನೊವಾ ವಿಶ್ವವಿದ್ಯಾಲಯದ ಡಾ.ಇಶಾನ್‌ ಅಗರ್‌ವಾಲ್‌ ನೇತೃತ್ವದ ತಂಡವು ಹಲವು ವರ್ಷ ಕಾಲ ನಡೆಸಿದ ಸೂಕ್ಷ್ಮ ಅಧ್ಯಯನದಿಂದ ಈ ಫಲಿತಾಂಶ ದೊರೆತಿದೆ.ಬೆಂಗಳೂರಿನ ಜೈವಿಕ ವಿಜ್ಞಾನಗಳ ರಾಷ್ಟ್ರೀಯ ಕೇಂದ್ರದ ಜೀಶಾನ್‌ ಮಿರ್ಜಾ ಮತ್ತು ಅನುರಾಗ್‌ ಮಿಶ್ರಾ, ಮುಂಬೈನ ಬಾಂಬೆ ನೈಸರ್ಗಿಕ ಇತಿಹಾಸ ಸಮಾಜದ ಸೌನಾಕ್‌ ಪಾಲ್‌ ಮತ್ತು ವಿಲ್ಲನೊವಾ ವಿಶ್ವವಿದ್ಯಾಲಯದ ಡಾ. ಆರೋನ್‌ ಬಾಯೆರ್‌ ಅವರು ಈ ಸಂಶೋಧನಾ ತಂಡದಲ್ಲಿದ್ದಾರೆ.
  • ಈ ಹಲ್ಲಿಗಳನ್ನು ಗೆಕ್ಕೊಯೆಲ್ಲಾ ಕಾಲೆಜಲೆನ್ಸಿಸ್‌ ಜಾತಿಗೆ ಸೇರಿವೆ ಎಂದು ಪರಿಗಣಿಸಲಾಗಿತ್ತು. ಆದರೆ ಅವುಗಳ ಅಂಗಗಳು ಬೆಳವಣಿಗೆಯಾಗುವ ರೀತಿ ಮತ್ತು ಡಿಎನ್‌ಎ ಮಾಹಿತಿಗಳ ಆಧಾರದಲ್ಲಿ ಇವು ಹೊಸ ಪ್ರಭೇದಗಳೆಂದು ಗುರುತಿಸಲಾಯಿತು.
  • ಈ ಅಪರೂಪದ ಹಲ್ಲಿ ಪ್ರಭೇದಗಳು ರಾತ್ರಿ ವೇಳೆ ಚಟುವಟಿಕೆ ನಡೆಸುತ್ತವೆ. ಹಗಲಿನ ವೇಳೆ ಕಲ್ಲುಬಂಡೆಗಳು ಅಥವಾ ಮರದ ಪೊಟರೆಗಳಲ್ಲಿ ಕಾಣಿಸುತ್ತವೆ.
  • ಸುಮಾರು 6 ಸೆಂ.ಮೀಯಷ್ಟು ಉದ್ದ ಬೆಳೆಯುವ ಈ ಹಲ್ಲಿಗಳು, ಮಹಾರಾಷ್ಟ್ರ ಮತ್ತು ಗುಜರಾತ್‌ಗಳ ಹಲವೆಡೆ ಹಾಗೂ ಮಧ್ಯಪ್ರದೇಶದ ಒಂದು ಪ್ರದೇಶದಲ್ಲಿ ಕಂಡುಬಂದಿವೆ. ಈ ವಂಶದ ಹೆಚ್ಚಿನ ಪ್ರಭೇದದ ಹಲ್ಲಿಗಳು ಅರಣ್ಯದಲ್ಲಿ ಇರುತ್ತವೆ. ಆದರೆ ಈ ಹೊಸ ಪ್ರಭೇದದ ಹಲ್ಲಿಗಳು ಮಾನವ ವಸತಿ ಹೆಚ್ಚಿರುವ ಪ್ರದೇಶಗಳಲ್ಲಿಯೂ ಪತ್ತೆಯಾಗಿವೆ.

ಹರಿಯಾಣದ ಗುರಗಾಂ ಈಗ ಗುರುಗ್ರಾಮವೆಂದು ಅಧಿಕೃತ ಘೋಷಣೆ

ಕೇಂದ್ರ ಸರ್ಕಾರ ಗುರಗಾಂ ಅನ್ನು ಗುರುಗ್ರಾಮವೆಂದ ಮರುನಾಮಕರಣ ಮಾಡಲು ಒಪ್ಪಿಗೆ ಸೂಚಿಸಿದೆ. ಆ ಮೂಲಕ ಗುರಗಾಂ ನಗರ ಮತ್ತು ಜಿಲ್ಲೆಯನ್ನು ಇನ್ನು ಮುಂದೆ ಗುರುಗ್ರಾಮವೆಂದು ಕರೆಯಲಾಗುವುದು. ಈ ವಿಷಯವನ್ನು ಹರಿಯಾಣದ ಮುಖ್ಯಮಂತ್ರಿ ಮನೋಹರ್ ಲಾಲ್ ಖತ್ತರ್ ಅವರು ಅಧಿಕೃತವಾಗಿ ಘೋಷಿಸಿದರು.

ಪ್ರಮುಖಾಂಶಗಳು:

  • ಗುರುಗಾಂ ಎಂಬುದು ಪೌರಾಣಿಕೆ ಹೆಸರಾಗಿದ್ದು, ಗುರು ದ್ರೋಣಾಚಾರ್ಯರಿಂದ ಬಂದಿದೆ ಎಂದು ನಂಬಲಾಗಿದೆ. ಗುರು ದ್ರೋಣಚಾರ್ಯರು ಮಹಾಭಾರತ ಕಾಲದಲ್ಲಿ ಬಿಲ್ಲು ವಿದ್ಯೆ ಪರಿಣಿತರು.
  • ಈ ಗ್ರಾಮವನ್ನು ಪಾಂಡವರು ಗುರುದಕ್ಷಿಣೆಯಾಗಿ ಗುರು-ದ್ರೋಣಾಚಾರ್ಯರಿಗೆ ನೀಡಿದರು ಎಂಬ ಪ್ರತೀತಿ ಇದೆ. ಆಗಾಗಿ ಇದನ್ನು ಗುರುಗ್ರಾಮ ಎನ್ನಲಾಗುತ್ತಿತ್ತು. ಆದರೆ ಕಾಲ ಕಳೆದಂತೆ ಗುರುಗ್ರಾಮ ಗುರುಗಾಂ ಎಂದೇ ಕರೆಯಲ್ಪಿಟ್ಟಿತು.
  • ಪ್ರಸ್ತುತ ಗುರುಗ್ರಾಮ ಹರಿಯಾಣದ ಕಾರ್ಪೂರೇಟ್ ತಾಣವಾಗಿ ರೂಪುಗೊಂಡಿದೆ. ರಾಷ್ಟ್ರಮಟ್ಟದಲ್ಲಿ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೈಗಾರಿಕೆ, ಸಾಫ್ಟವೇರ್ ಮತ್ತು ಮಾಹಿತಿ ತಂತ್ರಜ್ಞಾನದ ಕ್ಷೇತ್ರವಾಗಿ ಗುರುತಿಸಿಕೊಂಡಿದೆ.
  • ಹಲವಾರು ಪ್ರಸಿದ್ದ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳ ಕ್ರೇಂದ್ರ ಕಚೇರಿ ಗುರಗಾಂನಲ್ಲಿರುವುದು ಈ ನಗರಕ್ಕೆ ಮತ್ತಷ್ಟು ಮೆರಗು ತಂದಿದೆ.

6 Thoughts to “ಪ್ರಚಲಿತ ವಿದ್ಯಮಾನಗಳು- ಸೆಪ್ಟೆಂಬರ್ 29, 2016”

  1. ಸಂತೋಷ್ ಗೌಡರ

    ಧನ್ಯವಾದಗಳು ಸರ್

  2. bheemaraya 9900701697

    good infrmtn sir……thanks sir

  3. mahesha r

    sir sep 30 and oct 1 updates daily news yak update aagilla

Leave a Comment

This site uses Akismet to reduce spam. Learn how your comment data is processed.