ಸುಭಾಷ್ ಚಂದ್ರ ಕುಂಟಿಯಾ ರಾಜ್ಯದ ನೂತನ ಮುಖ್ಯಕಾರ್ಯದರ್ಶಿ

ಹಿರಿಯ ಐಎಎಸ್ ಅಧಿಕಾರಿ ಸುಭಾಷ್ ಚಂದ್ರ ಕುಂಟಿಯಾ ಅವರು ರಾಜ್ಯದ ನೂತನ ಮುಖ್ಯಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ. ಕುಂಟಿಯಾ ಅವರು ನವೆಂಬರ್ 2017ರಲ್ಲಿ ನಿವೃತ್ತಿಯಾಗಲಿದ್ದು, ಒಟ್ಟು 13 ತಿಂಗಳ ಅವಧಿಗೆ ರಾಜ್ಯದ ಮುಖ್ಯಕಾರ್ಯದರ್ಶಿ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಹಾಲಿ ಮುಖ್ಯಕಾರ್ಯದರ್ಶಿ ಅರವಿಂದ್ ಜಾಧವ್ ಅವರು ಸೆಪ್ಟೆಂಬರ್ 30ರಂದು ನಿವೃತ್ತಿ ಹೊಂದಲಿದ್ದಾರೆ.

ಸುಭಾಷ್ ಚಂದ್ರ ಕುಂಟಿಯಾ ಬಗ್ಗೆ:

  • ಮೂಲತಃ ಒಡಿಶಾದ ಜಗತ್ ಸಿಂಗ್ ಪುರದವರಾದ ಕುಂಟಿಯಾ 1981ರ ತಂಡದ ಐಎಎಸ್ ಅಧಿಕಾರಿ
  • ಪ್ರಾಥಮಿಕ ಶಿಕ್ಷಣ, ಲೋಕೋಪಯೋಗಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ.
  • ಉಪೇಂದ್ರ ತ್ರಿಪಾಠಿ ನಂತರ ಕರ್ನಾಟಕ ಕೇಡರ್ ನ ಹಿರಿಯ ಐಎಎಸ್ ಅಧಿಕಾರಿ ಇವರು.
  • ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯದ ಶಾಲಾ ಶಿಕ್ಷಣ ಮತ್ತು ಸಾಕ್ಷರ ಇಲಾಖೆ ಕಾರ್ಯದರ್ಶೊ ಹುದ್ದೆಗೆ ಇವರು ನಿಯೋಜನೆ ಮೇಲೆ ತೆರಳಿದ್ದರು. ಇತ್ತೀಚೆಗಷ್ಟೇ ಕೇಂದ್ರ ಸರ್ಕಾರ ಸೇವೆಯಿಂದ ಬಿಡುಗಡೆ ಮಾಡಿತ್ತು.

“ಮುರುಘಾ ಶ್ರೀ” ಪ್ರಶಸ್ತಿ ಪ್ರಕಟ: ನಾಲ್ವರಿಗೆ ಒಲಿದ ಪ್ರಸ್ತಕ ಸಾಲಿನ ಪ್ರಶಸ್ತಿ

ಚಿತ್ರದುರ್ಗ ಜಿಲ್ಲೆಯ ಮುರುಘಾ ಮಠ ಸಂಸ್ಥಾನ ನೀಡುವ “ಮುರುಘಾ ಶ್ರೀ” ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ. ಶಿವಮೊಗ್ಗ ಜಿಎಲೆ ಭೀಮನಕೋಣೆಯ ಚರಕ ಮಹಿಳಾ ವಿವಿಧೋದ್ದೇಶ ಕೈಗಾರಿಕಾ ಸಹಕಾರ ಸಂಘ ಮತ್ತು ನಾಲ್ವರನ್ನು ಈ ಬಾರಿ ಪ್ರಶಸ್ತಿ ಆಯ್ಕೆಮಾಡಲಾಗಿದೆ.

ಪ್ರಶಸ್ತಿಗೆ ಆಯ್ಕೆಯಾದವರು:

  • ಖ್ಯಾತ ಇತಿಹಾಸ ಖ್ಯಾತ ಇತಿಹಾಸ ಸಂಶೋಧಕ ಡಾ.ಬಿ.ರಾಜಶೇಖರಪ್ಪ
  • ಹಿರಿಯ ಸಾಹಿತಿ ಗೀತಾ ನಾಗಭೂಷಣ
  • ಮದಕರಿನಾಯಕ ವಿದ್ಯಾಸಂಸ್ಥೆಯ ಸಂಸ್ಥಾಪಕ ಡಿ.ಬೋರಪ್ಪ
  • ಮಹಾದಾಯಿ ಹೋರಾಟ ಸಮಿತಿ ಅಧ್ಯಕ್ಷ ವೀರೇಶ್ ಸೊಬರದಮಠ
  • “ಚರಕ ಮಹಿಳಾ ವಿವಿಧೋದ್ದೇಶ ಕೈಗಾರಿಕಾ ಸಹಕಾರ ಸಂಘ”.

ಅಕ್ಟೋಬರ್ 8ರಂದು ಮುರುಘಾ ಮಠದಲ್ಲಿ ನಡೆಯಲಿರುವ ಶರಣ ಸಂಸ್ಕೃತಿ ಉತ್ಸವದ ಪರಿವರ್ತನಾ ಸಮಾವೇಶದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ’. ಎಂದು ತಿಳಿಸಿದರು. ಈ ಪ್ರಶಸ್ತಿ ತಲಾ ₹ 25 ಸಾವಿರ ನಗದು ಬಹುಮಾನ ಹೊಂದಿದೆ.

ಜಾಗತಿಕ ಸ್ಪರ್ಧಾತ್ಮಕ ಸೂಚ್ಯಂಕ: ಭಾರತಕ್ಕೆ 39ನೇ ಸ್ಥಾನ

ವಿಶ್ವ ಆರ್ಥಿಕ ವೇದಿಕೆ (WEF) ಬಿಡುಗಡೆಗೊಳಿಸಿರುವ 2016-17ರ “ಜಾಗತಿಕ ಸ್ಪರ್ಧಾತ್ಮಕ ಸೂಚ್ಯಂಕ”ದಲ್ಲಿ 138 ದೇಶಗಳ ಪೈಕಿ ಭಾರತ 39ನೇ ಸ್ಥಾನಗಳಿಸಿದೆ. ಕಳೆದ ವರ್ಷ ಭಾರತ ಈ ಸೂಚ್ಯಂಕದಲ್ಲಿ 55ನೇ ಸ್ಥಾನಗಳಿಸಿತ್ತು. ಈ ಬಾರಿ 16 ಸ್ಥಾನಗಳ ಏರಿಕೆ ಕಂಡಿದೆ.

ಪ್ರಮುಖಾಂಶಗಳು:

  • ಸ್ವಿಟ್ಜರ್ಲ್ಯಾಂಡ್ ಮೊದಲ ಸ್ಥಾನದಲ್ಲಿದೆ. ಸಿಂಗಾಪುರ, ಅಮೆರಿಕಾ, ನೆದರಲ್ಯಾಂಡ್ಸ್, ಜರ್ಮನಿ ಕ್ರಮವಾಗಿ ಎರಡು, ಮೂರು, ನಾಲ್ಕು ಮತ್ತು ಐದನೇ ಸ್ಥಾನದಲ್ಲಿವೆ.
  • ಬ್ರಿಕ್ಸ್ ರಾಷ್ಟ್ರಗಳ ಪೈಕಿ ಚೀನಾ (29ನೇ ಸ್ಥಾನ), ರಷ್ಯಾ (43ನೇ ಸ್ಥಾನ), ದಕ್ಷಿಣ ಆಫ್ರಿಕಾ (47ನೇ ಸ್ಥಾನ) ಮತ್ತು ಬ್ರೆಜಿಲ್ 81ನೇ ಸ್ಥಾನದಲ್ಲಿದೆ.

ದಕ್ಷಿಣ ಏಷ್ಯಾ ರಾಷ್ಟ್ರಗಳ ಪೈಕಿ ಭಾರತದ ನಂತರದ ಸ್ಥಾನದಲ್ಲಿ ಶ್ರೀಲಂಕಾ (71), ಭೂತಾನ್ (97) ಮತ್ತು ನೇಪಾಳ (98) ಇವೆ. ಪಾಕಿಸ್ತಾನ 122ನೇ ಸ್ಥಾನದಲ್ಲಿದೆ.

ಸ್ಯೂಚಂಕಕ್ಕೆ ಸಂಬಂಧಿಸಿದಂತೆ ಭಾರತದ ಪ್ರಗತಿ:

  • ವ್ಯಾಪಾರ-ವಹಿವಾಟು ಕ್ಷೇತ್ರದಲ್ಲಿ ಸುಧಾರಣೆ, ಸರಕು ಮಾರುಕಟ್ಟೆ ಸ್ಥಿತಿ ಸುಧಾರಣೆಯಾಗಿರುವುದು ಭಾರತ ಸೂಚ್ಯಂಕದಲ್ಲಿ ಮೇಲೆರಲು ಕಾರಣವಾಗಿದೆ.
  • ಆರ್ಥಿಕ ವ್ಯವಸ್ಥೆಯಲ್ಲಿ ಪಾರದರ್ಶಕತೆ, ಸರ್ಕಾರಿ ಸಂಸ್ಥೆಗಳಲ್ಲಿ ಸುಧಾರಣೆಗೆ ಕ್ರಮ, ವಿದೇಶಿ ಹೂಡಿಕೆ ಮತ್ತು ಅಂತಾರಾಷ್ಟ್ರೀಯ ವ್ಯಾಪಾರಕ್ಕೆ ತೆಗೆದುಕೊಂಡಿರುವ ಕ್ರಮಗಳಿಂದ ಭಾರತ ಒಟ್ಟಾರೆಯಾಗಿ ಗಮನೀಯ ಸಾಧನೆ ಮಾಡಿದೆ.
  • ಭಾರತದ ಆರ್ಥಿಕತೆಯು ಜಿ20 ರಾಷ್ಟ್ರಗಳ ಪೈಕಿ ಅತಿ ಹೆಚ್ಚಿನ ಪ್ರಗತಿ ಸಾಧಿಸಿದೆ. ಆರ್ಥಿಕ ಮತ್ತು ವಿತ್ತೀಯ ಸುಧಾರಣೆಯಿಂದ ಹಾಗೂ ತೈಲ ಬೆಲೆ ಇಳಿಕೆಯು ಭಾರತದ ಅರ್ಥವ್ಯವಸ್ಥೆಯನ್ನು ಸ್ಥಿರತೆಯತ್ತ ಕೊಂಡೊಯುವತ್ತ ಸಹಕಾರಿಯಾಗಿದೆ ಎಂದು ಸಮೀಕ್ಷೆಯಲ್ಲಿ ತಿಳಿಸಲಾಗಿದೆ.
  • ನಾವೀನ್ಯತೆಯಲ್ಲಿ ಭಾರತ 29ನೇ ಸ್ಥಾನಮಾನ, ಸರಕು ಮಾರುಕಟ್ಟೆ ಸುಧಾರಣೆಯಲ್ಲಿ 60ನೇ ಸ್ಥಾನದಲ್ಲಿದೆ.
  • ಭಾರತದ ಕಾರ್ಮಿಕ ಮಾರುಕಟ್ಟೆಯಲ್ಲಿರುವ ಇನ್ನು ಅಸ್ಥಿತ್ವದಲ್ಲಿರುವ ಕೆಲವು ಕಠಿಣ ನಿಯಂತ್ರಣ ಕ್ರಮಗಳು ವ್ಯವಸ್ಥೆಯೂ ಪ್ರಗತಿಗೆ ಅಡ್ಡಿಯಾಗಿದೆ ಎಂದು ವರದಿ ವಿಶ್ಲೇಷಣೆ ಮಾಡಿದೆ.

ಜಾಗತಿಕ ಸ್ಪರ್ಧಾತ್ಮಕ ಸೂಚ್ಯಂಕದ ಬಗ್ಗೆ:

  • ಜಾಗತಿಕ ಸ್ಪರ್ಧಾತ್ಮಕ ಸೂಚ್ಯಂಕವನ್ನು ವಿಶ್ವ ಆರ್ಥಿಕ ಸಂಸ್ಥೆ ಹೊರತರುತ್ತಿದೆ.
  • ಜಾಗತಿಕ ಮಟ್ಟದಲ್ಲಿ 12 ಮಾನದಂಡಗಳನ್ನು ಪರಿಗಣನೆಗೆ ತೆಗೆದುಕೊಂಡು ಈ ಸೂಚ್ಯಂಕವನ್ನು ಸಿದ್ದಪಡಿಸಲಾಗುವುದು. ಈ 12 ಮಾನದಂಡಗಳು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಜಾಗತಿಕ ಮಟ್ಟದಲ್ಲಿ ದೇಶದವೊಂದರ ಸ್ಪರ್ಧಾತ್ಮಕತೆ ಮೇಲೆ ಪರಿಣಾಮ ಬೀರುವಂತವಾಗಿವೆ.
  • ಸಂಘ–ಸಂಸ್ಥೆಗಳು, ಮೂಲಸೌಕರ್ಯ, ಆರ್ಥಿಕ ಸ್ಥಿತಿ, ಆರೋಗ್ಯ, ಪ್ರಾಥಮಿಕ ಶಿಕ್ಷಣ, ಹಣಕಾಸು ಮಾರುಕಟ್ಟೆ ಅಭಿವೃದ್ಧಿ, ತಂತ್ರಜ್ಞಾನ, ಮಾರುಕಟ್ಟೆ ಗಾತ್ರ, ವ್ಯಾಪಾರ, ಹೊಸತನ ಸೇರಿದಂತೆ ಒಟ್ಟು 12 ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಜಾಗತಿಕ ಸ್ಪರ್ಧಾತ್ಮಕ ಸೂಚ್ಯಂಕ (ಜಿಸಿಐ) ನಿರ್ಧರಿಸಲಾಗುತ್ತದೆ.

ವರಕವಿ ದ.ರಾ.ಬೇಂದ್ರೆ ರವರ ಪುತ್ರ ಡಾ.ವಾಮನದತ್ತಾತ್ರೇಯ ಬೇಂದ್ರೆ ವಿಧಿವಶ

ವರಕವಿ ದ. ರಾ. ಬೇಂದ್ರೆ ಅವರ ಪುತ್ರ ಡಾ. ವಾಮನದತ್ತಾತ್ರೇಯ ಬೇಂದ್ರೆ ನಿಧನರಾದರು. ಅವರಿಗೆ 81 ವರ್ಷ ವಯಸ್ಸಾಗಿತ್ತು. ವಾಮನದತ್ತಾತ್ರೇಯ ಬೇಂದ್ರೆ ಅವರು ಅತ್ಯುತ್ತಮ ಪ್ರಾಧ್ಯಾಪಕರೂ ಮತ್ತು ಸಾಹಿತಿಗಳಾಗಿದ್ದರು.

ಡಾ.ವಾಮನದತ್ತಾತ್ರೇಯ ಬೇಂದ್ರೆ:

  • ಹಿರಿಯ ಸಾಹಿತಿ ಡಾ. ವಾಮನ ಬೇಂದ್ರೆ ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನಲ್ಲಿ ಜುಲೈ 28, 1935ರಲ್ಲಿ ಜನಿಸಿದ್ದರು.
  • ತಂದೆ ವರಕವಿ ದ.ರಾ.ಬೇಂದ್ರೆ, ತಾಯಿ ಲಕ್ಷ್ಮೀಬಾಯಿ.
  • ಕರ್ನಾಟಕ ವಿಶ್ವ ವಿದ್ಯಾನಿಲಯದಲ್ಲಿ ಬಿ.ಎ. ಮತ್ತು ಎಂ.ಎ. ಪದವಿ ಪಡೆದಿದ್ದ ಬೇಂದ್ರೆ ಪುಣೆ ವಿಶ್ವವಿದ್ಯಾಲಯಕ್ಕೆ ‘ಲಕ್ಷ್ಮೀಶನ ಜೈಮಿನಿ ಭಾರತ – ಒಂದು ಅಧ್ಯಯನ’ ಮಹಾಪ್ರಬಂಧ ಮಂಡಿಸಿ ಪಿಎಚ್.ಡಿ. ಪದವಿ ಪಡೆದಿದ್ದರು.
  • ಧಾರವಾಡದ ವಿದ್ಯಾರಣ್ಯ ಕಿರಿಯ ಕಾಲೇಜಿನಲ್ಲಿ ಉಪನ್ಯಾಸಕರಾಗಿ, ಕಿಟಲ್ ಕಲಾ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ, ಕನ್ನಡ ವಿಭಾಗದ ಮುಖ್ಯಸ್ಥರಾಗಿ ನಿವೃತ್ತಿ ಹೊಂದಿದ್ದರು.
  • ಕನ್ನಡ, ಮರಾಠಿ, ಇಂಗ್ಲಿಷ್, ಹಿಂದಿಭಾಷೆಗಳನ್ನು ಕರಗತ ಮಾಡಿಕೊಂಡಿದ್ದ ಇವರು ಸಂಗೀತ, ನಾಟಕ, ಭಾಷಣ ಮುಂತಾದ ಕಲೆಗಳನ್ನು ಸಹ ತಮ್ಮ ಹವ್ಯಾಸವಾಗಿರಿಸಿಕೊಂಡಿದ್ದರು.
  • “ತೊದಲು” ಇದು ಇವರ ಮೊದಲ ಕವನ ಸಂಕಲನ, ನಂತರ ಅನಂತಧಾರೆ, ಸ್ಪಂದನ ಮೊದಲಾದವುಗಳನ್ನು ರಚಿಸಿದರು.
  • ಸೊಂಡಿಲ ಗಣಪ್ಪ ಬಂದ, ಸ್ಪರ್ಶ ಹಾಗೂ ಇತರ ನಾಟಕಗಳೂ ಸೇರಿ ಮೂವತ್ತಕ್ಕೂ ಹೆಚ್ಚು ರೇಡಿಯೋ ನಾಟಕಗಳ ರಚನೆ ಮಾಡಿದ್ದರು.

ಪ್ರಶಸ್ತಿಗಳು:

  • ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಶ್ರೀವರದರಾಜ ಆದ್ಯ ಸಾಹಿತ್ಯ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಧಾರವಾಡ ಜಿಲ್ಲಾ ಸಾಹಿತ್ಯ ಸಮ್ಮೇಳನ ಪ್ರಶಸ್ತಿ, ವಿದ್ಯಾರಣ್ಯ ಪ್ರಶಸ್ತಿ, , ಪರಶುರಾಮ ಪ್ರಶಸ್ತಿ, ಕನ್ನಡ-ಮರಾಠಿ ಭಾಷಾ ಬಾಂಧವ್ಯ ಪ್ರಶಸ್ತಿ, ಮುಂತಾದ ಹಲವಾರು ಪ್ರಶಸ್ತಿ ಗೌರವಗಳು ವಾಮನ ಬೇಂದ್ರೆಯವರಿಗೆ ಲಭಿಸಿವೆ.

36 ರಫೇಲ್ ಯುದ್ದ ವಿಮಾನ ಖರೀದಿಗೆ ಭಾರತ-ಫ್ರಾನ್ಸ್ ಒಪ್ಪಂದ

36 ರಫೇಲ್‌ ಯುದ್ಧ ವಿಮಾನಗಳನ್ನು ಫ್ರಾನ್ಸ್‌ನಿಂದ ಖರೀದಿಸುವ ಒಪ್ಪಂದಕ್ಕೆ ಭಾರತ ಸರ್ಕಾರ ಸೋಮವಾರ ಸಹಿ ಹಾಕಿದೆ. ಸುಮಾರು 60 ಸಾವಿರ ಕೋಟಿ ರೂ (7.87 ಬಿಲಿಯನ್ ಯೂರೋ) ಮೌಲ್ಯದ ಖರೀದಿ ಒಪ್ಪಂದ ಇದಾಗಿದೆ ಎಂದು ಹೇಳಲಾಗಿದೆ. ಭಾರತದ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಮತ್ತು ಫ್ರಾನ್ಸ್ ನ ಜೀನ್ ಯ್ವೆಸ್ ಲೆ ಡ್ರಿಯಾನ್ (Jean Yves Le Drian) ಈ ಒಪ್ಪಂದಕ್ಕೆ ಸಹಿಹಾಕಿದರು. 1990 ರಲ್ಲಿ ರಷ್ಯಾದಿಂದ ಸುಖೋಯ್ ಯುದ್ದ ವಿಮಾನ ಖರೀದಿಗೆ ಸಹಿ ಹಾಕಿದ ನಂತರ ಇದೇ ಮೊದಲ ಬಾರಿಗೆ ಬೇರೆ ದೇಶದೊಂದಿಗೆ ಯುದ್ದ ವಿಮಾನ ಖರೀದಿಸಲು ಭಾರತ ಸಹಿ ಮಾಡಿದೆ.

ರಫೇಲ್‌ ಯುದ್ಧವಿಮಾನದ ವಿಶೇಷ:

  • ಫ್ರಾನ್ಸ್‌ನ ಡಸ್ಸಾಲ್ಟ್ ಕಂಪನಿಯ ತಯಾರಿಕೆಯ ಅಧಿಕ ಸಾಮರ್ಥ್ಯದ ಅತ್ಯಾಧುನಿಕ ಯುದ್ಧವಿಮಾನವಿದು.
  • “ಬಹುವಿಧ’ದ (ಏಕಕಾಲಕ್ಕೆ ಆಗಸದಲ್ಲಿ ದಾಳಿ, ಆಗಸದಿಂದ ಭೂಮಿಗೆ ದಾಳಿ) ಯುದ್ಧಗಳಲ್ಲಿ ಬಳಸಬಹುದಾದ ಯುದ್ಧವಿಮಾನ.
  • ಈ ಯುದ್ಧ ವಿಮಾನ ಎರಡು ಎಂಜಿನ್‌ ಹೊಂದಿದ್ದು, 1986ರಲ್ಲಿ ಮೊದಲ ಆವಿಷ್ಕಾರವಾಗಿತ್ತು. 2001ರಿಂದ ಇದರ ತಯಾರಿಕೆಯಲ್ಲಿ ಡಸ್ಸಾಲ್ಟ್ ತೊಡಗಿದೆ. ಒಟ್ಟು 9 ಮಾದರಿಗಳಲ್ಲಿರುವ ಮಧ್ಯಮಗಾತ್ರದ ಯುದ್ಧವಿಮಾನ ಇದಾಗಿದೆ.
  • ಗರಿಷ್ಠ 24,500 ಕಿ.ಗ್ರಾಂ. ಭಾರದಷ್ಟು ಶಸ್ತ್ರಾಸ್ತ್ರಗಳನ್ನು ಹೊತ್ತು ಗಂಟೆಗೆ 1,912 ಕಿ.ಮೀ.ವೇಗದಲ್ಲಿ ಸಂಚರಿಸಬಲ್ಲದು. ವಿವಿಧ ಮಾದರಿ ಶಸ್ತ್ರಾಸ್ತ್ರ ಪ್ರಯೋಗಿಸುವ ಸಾಮರ್ಥ್ಯ ಹೊಂದಿದೆ.
  • ರಾಡಾರ್‌ಗಳ ಕಣ್ತಪ್ಪಿಸಿ ಅತ್ಯಂತ ಗುಪ್ತ ದಾಳಿಗೆ ಬಳಸಬಹುದಾದ ಯುದ್ಧವಿಮಾನವಿದು. ಭಾರತದ ಮಿಗ್‌-21 ಯುದ್ಧ ವಿಮಾನಗಳು ತೀರ ಹಳತಾಗಿದ್ದು, ಮಧ್ಯಮಗಾತ್ರದ ದಾಳಿ ವಿಮಾನಗಳ ತೀವ್ರ ಕೊರತೆಯಿದೆ. ಮಿಗ್‌ ಬದಲಿಗೆ ಇದನ್ನು ನಿಯೋಜಿಸುವ ಇರಾದೆ ಇದೆ.

Leave a Comment

This site uses Akismet to reduce spam. Learn how your comment data is processed.