ಇಬ್ಬರು ಭಾರತೀಯರಿಗೆ “2016 ಕ್ಲಾರ್ಕ್ ಆರ್ ಭಾವಿನ್ ವೈಲ್ಡ್ ಲೈಫ್ ಲಾ ಎನ್ಪೋರ್ಸ್ಮೆಂಟ್ ಪ್ರಶಸ್ತಿ”

ಭಾರತದ ಇಬ್ಬರು ಅರಣ್ಯಾಧಿಕಾರಿಗಳನ್ನು “2016 ಕ್ಲಾರ್ಕ್ ಆರ್ ಭಾವಿನ್ ವೈಲ್ಡ್ ಲೈಫ್ ಲಾ ಎನ್ಪೋರ್ಸ್ಮೆಂಟ್ ಪ್ರಶಸ್ತಿ” ಆಯ್ಕೆಮಾಡಲಾಗಿದೆ. ಮಧ್ಯಪ್ರದೇಶ ಅರಣ್ಯ ಇಲಾಖೆಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯಾದ “ರಿತೇಶ್ ಸರೋಥಿಯ” ಮತ್ತು ಪಶ್ಚಿಮ ಬಂಗಾಳದ ಬೆಲಕೊಬಾ ಅರಣ್ಯದಲ್ಲಿ ರೇಂಜ್ ಆಫೀಸರ್ ಆಗಿರುವ ಸಂಜಯ್ ದತ್ತಾ ಅವರನ್ನು ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ. ಸಮರ್ಪಕವಾಗಿ ಕಾನೂನು ಜಾರಿಗೊಳಿಸಿ ವನ್ಯಜೀವಿ ಸಂರಕ್ಷಿಸಲು ದಿಟ್ಟ ಧೈರ್ಯ ತೋರಿರುವುದಕ್ಕೆ ಇವರನ್ನು ಪ್ರಶಸ್ತಿಗೆ ಪರಿಗಣಿಸಲಾಗಿದೆ. ದಕ್ಷಿಣ ಆಫ್ರಿಕಾದ ಜೊಹೆನ್ಸಬರ್ಗ್ ನಲ್ಲಿ ಅಕ್ಟೋಬರ್ 16ರಂದು ನಡೆಯಲಿರುವ “ಕನ್ವೆನ್ಷನ್ ಆನ್ ಇಂಟರ್ ನ್ಯಾಷನಲ್ ಟ್ರೇಡ್ ಇನ್ ಎಂಡೇಂಜರ್ಡ್ ಸ್ಪೀಸಿಸ್ ಆಫ್ ವೈಲ್ಡ್ ಫೌನ ಅಂಡ್ ಪ್ಲೋರ (CITES”)ದ 17ನೇ ಸಮ್ಮೇಳನದಲ್ಲಿ ಪ್ರಶಸ್ತಿಯನ್ನು ವಿತರಿಸಲಾಗುವುದು.

ಪ್ರಶಸ್ತಿಯ ಬಗ್ಗೆ:

  • ಅಮೆರಿಕ ಮೂಲದ ಸ್ಫೀಸಿಸ್ ಸರ್ವೇವಲ್ ನೆಟವರ್ಕ್ (Species Survival Netw) ಮತ್ತು ಅನಿಮಲ್ ವೆಲ್ಫೇರ್ ಇನ್ಸ್ ಟಿಟ್ಯೂಟ್ (Animal Welfare Institute) ಸಹಯೋಗದಡಿ ಪ್ರಶಸ್ತಿಯನ್ನು ನೀಡಲಾಗುತ್ತಿದೆ.
  • ಅಮೆರಿಕಾದ ಖ್ಯಾತ ವನ್ಯಜೀವಿ ಸಂರಕ್ಷಣೆಗಾರ “ಕ್ಲಾರ್ಕ್ ಆರ್ ಭಾವಿನ್” ಅವರ ಸ್ಮರಣಾರ್ಥ ಪ್ರಶಸ್ತಿಯನ್ನು ನೀಡಲಾಗುತ್ತಿದೆ.
  • ಸೂಕ್ತ ಕಾನೂನು ಜಾರಿಗೊಳಿಸಿ ವನ್ಯಜೀವಿ ಸಂರಕ್ಷಣೆಗಾಗಿ ಶ್ರಮಿಸುವ ಅಧಿಕಾರಿಗಳಿಗೆ ಈ ಪ್ರಶಸ್ತಿಯನ್ನು ನೀಡಲಾಗುವುದು.

ಹಣಕಾಸು ನೀತಿ ಸಮಿತಿ (Monetary Policy Committee)ಗೆ ಮೂರು ಸದಸ್ಯರ ನೇಮಕ

ಭಾರತೀಯ ರಿಸರ್ವ್ ಬ್ಯಾಂಕ್ ಅಲ್ಪಾವಧಿ ಬಡ್ಡಿದರ ನಿಗಧಿಪಡಿಸಲು ಸ್ಥಾಪಿಸಲಾಗಿರುವ ಹಣಕಾಸು ನೀತಿ ಸಮಿತಿಗೆ ಮೂವರು ಸದಸ್ಯರನ್ನು ಕ್ಯಾಬಿನೆಟ್ ನೇಮಕಾತಿ ಸಮಿತಿ ನೇಮಕ ಮಾಡಿದೆ. ಆರ್ಥಿಕ ತಜ್ಞರಾದ ಚೇತನ್ ಘಾಟೆ, ಪಮಿ ದುವಾ ಮತ್ತು ರವೀಂದ್ರ ಎಚ್ ಧೋಲಕಿಯಾ ಅವರೇ ನೇಮಕಗೊಂಡಿರುವ ಸದಸ್ಯರು. ಇವರ ಅಧಿಕಾರ ಅವಧಿ ನಾಲ್ಕು ವರ್ಷಗಳ ಇರಲಿದ್ದು, ಪುನರ್ ನೇಮಕಕ್ಕೆ ಅರ್ಹರಾಗಿರುವುದಿಲ್ಲ.

ಸದಸ್ಯರ ಪರಿಚಯ:        

ಪಮಿ ದುವಾ: ದೆಹಲಿ ಸ್ಕೂಲ್ ಆಫ್ ಎಕಾನಮಿಕ್ಸ್ ನ ನಿರ್ದೇಶಕಿ. ದುವಾ ಅವರು ಲಂಡನ್ ಸ್ಕೂಲ್ ಆಫ್ ಎಕಾನಮಿಕ್ಸ್ ನಲ್ಲಿ ಪಿ.ಎಚ್.ಡಿ ಪದವಿಯನ್ನು ಪಡೆದಿದ್ದಾರೆ. ದುವಾ ಅವರು ಪ್ರಸ್ತುತ ದೆಹಲಿಯ ಕೃಷಿ ಅರ್ಥಶಾಸ್ತ್ರ ಸಂಶೋಧನಾ ಕೇಂದ್ರದ ಅಧ್ಯಕ್ಷರು ಸಹ ಆಗಿದ್ದಾರೆ.

ಚೇತನ್ ಘಾಟೆ: ಇಂಡಿಯನ್ ಸ್ಟಾಟಿಸ್ಟಿಕಲ್ ಇನ್ಸ್ಟಿಟ್ಯೂಟ್ ನಲ್ಲಿ ಇವರು ಪ್ರೋಫೆಸರ್ ಆಗಿ ಸೇವೆಸಲ್ಲಿಸುತ್ತಿದ್ದಾರೆ. ಘಾಟೆ ಅವರು ಹಣಕಾಸು ನೀತಿ ಸಮಿತಿಯ ತಾಂತ್ರಿಕ ಸಲಹೆ ಸಮಿತಿಯಲ್ಲಿ ಸದಸ್ಯರಾಗಿದ್ದರು.

ರವೀಂದ್ರ ಧೋಲಕಿಯಾ: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್, ಅಹಮದಾಬಾದ್ ನಲ್ಲಿ ಭೋದನಾ ವಿಭಾಗದ ಸದಸ್ಯರಾಗಿದ್ದಾರೆ. ಧೋಲಕಿಯಾ ಅವರು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಏರ್ ಇಂಡಿಯಾ, ಗುಜರಾತ್ ಪೆಟ್ರೋಲಿಯಂ ಕಾರ್ಪೋರೇಷನ್ ಅಲ್ಲಿ ಸ್ವತಂತ್ರ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ.

ಹಣಕಾಸು ನೀತಿ ಸಮಿತಿ:

  • ಹಣಕಾಸು ನೀತಿ ಸಮಿತಿಯು ಒಟ್ಟು ಆರು ಜನ ಸದಸ್ಯರನ್ನು ಒಳಗೊಂಡಿರಲಿದೆ. ಭಾರತೀಯ ರಿಸರ್ವ್ ಬ್ಯಾಂಕ್ನ ಗವರ್ನರ್, ಡೆಪ್ಯೂಟಿ ಗವರ್ನರ್ ಮತ್ತು ಕಾರ್ಯನಿರ್ವಾಹಕ ನಿರ್ದೇಶಕರು ಆರ್ಬಿಐನಿಂದ ಪ್ರತಿನಿಧಿಸಲಿದ್ದಾರೆ. ಇನ್ನು ಉಳಿದ ಮೂವರು ಸದಸ್ಯರನ್ನು ಕೇಂದ್ರ ಸರ್ಕಾರ ಈಗ ನೇಮಕಮಾಡಿದೆ.
  • ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಹಣಕಾಸು ನೀತಿ ಸಮಿತಿಯ ಅಧ್ಯಕ್ಷರಾಗಿರುತ್ತಾರೆ.

ಹಣಕಾಸು ನೀತಿ ಸಮಿತಿ ಕಾರ್ಯಗಳು:

  • ಇದುವರೆಗೂ ಅಲ್ಪಾವಧಿಯ ಬಡ್ಡಿದರವನ್ನು ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಅವರು ನಿಗಧಿಪಡಿಸುತ್ತಿದ್ದರು. ಇವರಿಗೆ ತಾಂತ್ರಿಕ ಸಲಹಾ ಸಮಿತಿ ಬಡ್ಡಿದರವನ್ನು ನಿಗದಿಪಡಿಸಲು ಸಹಕರಿಸುತ್ತಿತ್ತು. ಇನ್ನುಮುಂದೆ ಹಣಕಾಸು ನೀತಿ ಸಮಿತಿಯ ಸದಸ್ಯರ ನಿರ್ಣಯದಂತೆ ಬಡ್ಡಿದರ ನಿಗದಿಪಡಿಸಲಾಗುತ್ತದೆ.
  • ಹಣದುಬ್ಬರ ಕೊರತೆಯನ್ನು ತಗ್ಗಿಸುವ ಸಲುವಾಗಿ ಸಮಿತಿ ಕೆಲಸ ನಿರ್ವಹಿಸಲಿದೆ.
  • ವರ್ಷದಲ್ಲಿ ನಾಲ್ಕು ಬಾರಿ ಸಮಿತಿ ಸಭೆ ಸೇರಲಿದ್ದು, ಪ್ರತಿ ಸಭೆಯ ನಿರ್ಣಯವನ್ನು ಸಾರ್ವಜನಿಕರಿಗೆ ಮುಕ್ತವಾಗಿ ಇಡಲಿದೆ.

ಕಬ್ಬಿನ ತ್ಯಾಜ್ಯದಿಂದ ಉತ್ತಮಗುಣಮಟ್ಟದ ಇಂಗಾಲ ತಯಾರಿಸಿದ ಸಂಶೋಧಕರು  

ಕೇವಲ ನಿಮಿಷಗಳ ಅವಧಿಯಲ್ಲಿ ಕಬ್ಬಿನ ತ್ಯಾಜ್ಯದಿಂದ ಉತ್ತಮ ಗುಣಮಟ್ಟದ ಇಂಗಾಲವನ್ನು ತಯಾರಿಸುವ ವಿಧಾನವನ್ನು ಪುಣೆ ಮೂಲದ ಸಂಶೋಧಕರು ಕಂಡುಹಿಡಿದಿದ್ದಾರೆ. ಕಡಿಮೆ ಶಕ್ತಿಯುಳ್ಳ ಮೈಕ್ರೋವೇವ್ ವ್ಯವಸ್ಥೆ ಬಳಸಿ ಇಂಗಾಲವನ್ನು ತಯಾರಿಸಲಾಗಿದೆ. ಸರಳ, ಮಿತವ್ಯಯಕಾರಿ ಮತ್ತು ಕ್ಷಿಪ್ರ ಪ್ರಕ್ರಿಯೆ ಇದಾಗಿದ್ದು, ಇದರಿಂದ ತಯಾರಿಸಲಾಗುವ ಇಂಗಾಲವನ್ನು ಲಿ-ಐಯಾನ್ ಬ್ಯಾಟರಿಗಳಲ್ಲಿ ಬಳಸಬಲ್ಲದಾಗಿದೆ.

ಹೇಗೆ ತಯಾರಿಸಲಾಗಿದೆ?

  • ಕಬ್ಬಿನ ತ್ಯಾಜ್ಯವನ್ನು ಗಂಧಕಾಮ್ಲ ಜೊತೆ ಬೆರೆಸಿ ಇಡೀ ರಾತ್ರಿ ಕೊಠಡಿ ತಾಪಮಾನದಲ್ಲಿ ಇಂಗಾಲೀಕರಣ ಪ್ರಕ್ರಿಯೆಯನ್ನು ಆರಂಭಿಸಲಾಗಿದೆ.
  • ಗಂಧಕಾಮ್ಲವು ಕಬ್ಬಿನ ತ್ಯಾಜ್ಯದಲ್ಲಿರುವ ಸಿಲಿಕಾವನ್ನು ಹೊರತುಪಡಿಸಿ ಇತರೆ ಅಜೈವಿಕ ಕಲ್ಮಶಗಳನ್ನು ಕರಗಿಸಿದೆ. ಇದರಿಂದ ಬಲಿಷ್ಠವಾದ ಕಾರ್ಬನ್ ರಚನೆಯಾಗಲು ಸಾಧ್ಯವಾಗಿದೆ.
  • ನಂತರ ಈ ಘನ ಉತ್ಪನ್ನವನ್ನ ತೊಳೆದು ಸುಮಾರು 70C ವರೆಗೆ ಒಣಗಿಸಲಾಗಿದೆ. ಆನಂತರ ಪೊಟಾಸಿಯಂ ಹೈಡ್ರಾಕ್ಸೈಡ್ ನೊಂದಿಗೆ ಬೆರಸಿ ಸ್ಲರಿಯನ್ನಾಗಿ ಪರಿವರ್ತಿಸಲಾಗಿದೆ.
  • ಸ್ಲರಿಯನ್ನು ಮೈಕ್ರೋವೇವ್ ಓವನ್ ನಲ್ಲಿ ಕೆಲವು ನಿಮಿಷಗಳ ಕಾಲ ಕಾಯಿಸಿಲಾಗಿದೆ. ಕಾಯಿಸುವ ಪ್ರಕ್ರಿಯೆಯಿಂದ ಪೊಟಾಸಿಯಂ ಹೈಡ್ರಾಕ್ಸೈಡ್ ಇಂಗಾಲದೊಂದಿಗೆ ವರ್ತಿಸಿ ರಂಧ್ರಗಳು ರೂಪುಗೊಂಡಿವೆ.

ಸಂಶೋಧನೆಯ ಮಹತ್ವ:

  • ಅತಿ ಕಡಿಮೆ ಅವಧಿಯಲ್ಲಿ ಬ್ಯಾಟರಿಗಳಲ್ಲಿ ಬಳಸಬಹುದಾದ ಇಂಗಾಲವನ್ನು ತಯಾರಿಸಬಹುದಾಗಿದೆ. ಇದರಿಂದ ವಿದ್ಯುತ್ ಶಕ್ತಿ ಬಳಕೆಯಲ್ಲಿ ಭಾರಿ ಉಳಿತಾಯವಾಗಲಿದೆ.
  • ಬೇರೆ ವಿಧಾನಗಳನ್ನು ಬಳಸಿ ತಯಾರಿಸಲಾಗುವ ಇಂಗಾಲಕ್ಕೆ ಹೋಲಿಸಿದರೆ ಈ ವಿಧಾನದಲ್ಲಿ ತಯಾರಿಸಿದ ಇಂಗಾಲವು ಉತ್ತಮ ಗುಣಮಟ್ಟದಾಗಿದೆ.
  • ಅಡುಗೆ ಮನೆಯಲ್ಲಿ ಬಳಸುವ ಮೈಕ್ರೋವೆವ್ ಒಲೆಯನ್ನು ಬಳಸಿ ಕೆಲವೇ ನಿಮಿಷಗಳಲ್ಲಿ ಇಂಗಾಲ ತಯಾರಿಸುವ ಸರಳ ವಿಧಾನ ಇದಾಗಿದೆ.

ಹಿಂದಿ ಮತ್ತು ಉರ್ದು ಲೇಖಕ ರೆಹೊತಿ ಸರಣ್ ಶರ್ಮಾ ನಿಧನ

ಖ್ಯಾತ ಹಿಂದಿ ಮತ್ತು ಉರ್ದು ಲೇಖಕ ರೆಹೊತಿ ಸರಣ್ ಶರ್ಮಾ ನಿಧನರಾದರು. ಅವರಿಗೆ 92 ವರ್ಷ ವಯಸ್ಸಾಗಿತ್ತು. ಶರ್ಮಾ ಅವರು ಆಲ್ ಇಂಡಿಯಾ ರೇಡಿಯೋದಲ್ಲಿ ರೇಡಿಯೋ ನಾಟಕಗಳ ಪ್ರವರ್ತಕರಾಗಿದ್ದರು. ರಂಗಭೂಮಿಗೆ ಅಪಾರ ಕೊಡುಗೆ ನೀಡಿದ್ದ ಇವರಿಗೆ 2007ರಲ್ಲಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಯನ್ನು ನೀಡಲಾಗಿತ್ತು.

ಸರಣ್ ಶರ್ಮಾ:

  • ಶರ್ಮಾ ಅವರು ಆಲ್ ಇಂಡಿಯಾ ರೇಡಿಯೋಗಾಗಿ ಸುಮಾರು 150ಕ್ಕೂ ಹೆಚ್ಚು ನಾಟಕಗಳನ್ನು ಬರೆದಿದ್ದರು. ಇವರ ಹಲವು ನಾಟಕಗಳು ಅನೇಕ ಭಾಷೆಗಳಿಗೆ ಭಾಷಾಂತರಗೊಂಡಿವೆ.
  • ನಾ ದರಂ ನಾ ಇಮಾನ್, ದೀಪ್ಷಿಕ, ಅಂದೆಹೆರೆ ಕ ಬೇಟ ಇವರು ರಚಿಸಿದ ನಾಟಕಗಳಲ್ಲಿ ಪ್ರಮುಖವೆನಿಸಿವೆ.
  • ಕೇವಲ ನಾಟಕಗಳಲ್ಲದೇ ಸದಾ ಕಾಲ ನೆನಪಿನಲ್ಲಿರುವ ಕಿರುತೆರೆ ಧಾರಾವಾಹಿಗಳಾದ ಅಧಿಕಾರ್, ಪಿರ್ ವಾಹಿ ತಲಾಷ್, ಲೆನಾ-ದೆನಾ ಮತ್ತು ದಿ ಗ್ರೇಟ್ ಮರಾಠದಂತಹ ಧಾರಾವಾಹಿಗಳನ್ನು ಬರೆದಿದ್ದರು.

ವಿಶ್ವದ ಅತಿ ದೊಡ್ಡ ಸೌರ ವಿದ್ಯುತ್ ಘಟಕಕ್ಕೆ ತಮಿಳುನಾಡಿನಲ್ಲಿ ಚಾಲನೆ

ವಿಶ್ವದ ಅತಿ ದೊಡ್ಡ ಸೌರ ವಿದ್ಯುತ್ ಘಟಕಕ್ಕೆ ತಮಿಳುನಾಡಿನ ರಾಮನಾಥಪುರಂ ಜಿಲ್ಲೆಯ ಕಮುಥಿಯಲ್ಲಿ ಆರಂಭಿಸಲಾಗಿದೆ. 648 ಮೆಗಾ ವ್ಯಾಟ್ ಸಾಮರ್ಥ್ಯದ ಸೌರ ವಿದ್ಯುತ್ ಘಟಕವನ್ನು ಆದಾನಿ ಗ್ರೂಫ್ ಸ್ಥಾಪಿಸಿದೆ.

  • ಸುಮಾರು 5000 ಎಕರೆ ಪ್ರದೇಶದಲ್ಲಿ ಈ ಸೌರಘಟಕವನ್ನು ಸ್ಥಾಪಿಸಲಾಗಿದೆ. ಇದರ ವೆಚ್ಚ ರೂ 4,550 ಕೋಟಿ.
  • ಕೇವಲ ಎಂಟು ತಿಂಗಳಲ್ಲಿ ಘಟಕವನ್ನು ಸ್ಥಾಪಿಸಲಾಗಿದೆ. ಇದಕ್ಕೆ ಅಗತ್ಯವಿರುವ ಉಪಕರಣ ಮತ್ತು ಯಂತ್ರಗಳನ್ನು ಜಗತ್ತಿನ ನಾನಾ ಕಡೆಯಿಂದ ತರೆಸಿಕೊಳ್ಳಲಾಗಿದೆ.
  • ಘಟಕಕ್ಕಾಗಿ 3.8 ಲಕ್ಷ ನೆಲಗಟ್ಟುಗಳು, 25 ಲಕ್ಷ ಸೌರ ಫಲಕ, 27,000 ಮೀಟರ್ ಸವಿಸ್ತಾರವಾದ ರಚನೆ, 154 ಟ್ರಾನ್ಸಫಾರ್ಮಗಳು, 6000ಕಿ.ಮೀ ಉದ್ದದ ಕೇಬಲ್ ವೈರ್ ಬಳಸಲಾಗಿದೆ.
  • ಈ ಘಟಕದ ಸ್ಥಾಪನೆಗೆ ಒಟ್ಟು 8500 ಜನರು ಶ್ರಮಿಸಿದ್ದಾರೆ.

2 Thoughts to “ಪ್ರಚಲಿತ ವಿದ್ಯಮಾನಗಳು- ಸೆಪ್ಟೆಂಬರ್ 24, 2016”

  1. Exallent ur’s sending information

Leave a Comment

This site uses Akismet to reduce spam. Learn how your comment data is processed.