ನಿರಾಶ್ರಿತರು ಮತ್ತು ವಲಸಿತರ ಹಕ್ಕು ರಕ್ಷಣೆಗೆ “ನ್ಯೂಯಾರ್ಕ್ ಘೋಷಣೆ (New York Declaration)”

ವಿಶ್ವಸಂಸ್ಥೆಯ 71ನೇ ಸಾಮಾನ್ಯ ಅಧಿವೇಶನದಲ್ಲಿ ವಿಶ್ವದ ನಾಯಕರು ನಿರಾಶ್ರಿತರು ಮತ್ತು ವಲಸಿತರ ಹಕ್ಕು ರಕ್ಷಣೆ ಕಾಪಾಡುವ ಮಹತ್ವದ “ನ್ಯೂಯಾರ್ಕ್ ಘೋಷಣೆ”ಗೆ ಸಹಿ ಹಾಕಿದ್ದಾರೆ. ನಿರಾಶ್ರಿತರ ಮತ್ತು ವಲಸಿತರ ಹಕ್ಕು ಕಾಪಾಡಲು ಹಾಗೂ ಜೀವ ರಕ್ಷಿಸಲು ವಿಶ್ವದ ನಾಯಕರು ಒಮ್ಮತದಿಂದ ಹೊಣೆಗಾರಿಕೆಯನ್ನು ಹಂಚಿಕೊಳ್ಳಬೇಕು ಎಂಬುದು ಘೋಷಣೆಯ ಮೂಲ ತಿರುಳಾಗಿದೆ.

ಘೋಷಣೆಯ ಪ್ರಮುಖಾಂಶಗಳು:

  • ದುರ್ಬಲ ಸಂದರ್ಭಗಳಲ್ಲಿ ವಲಸಿಗರನ್ನು ರಕ್ಷಿಸಲು ಮಾರ್ಗಸೂಚಿಗಳನ್ನು ರಚಿಸುವುದು.
  • ನಿರಾಶ್ರಿತರು ಮತ್ತು ವಲಸಿಗರಿಗೆ ಸಂಬಂಧಿಸದಂತೆ ಅಂತಾರಾಷ್ಟ್ರೀಯ ಸಮ್ಮೇಳನ ಆಯೋಜಿಸಲು ಮಾತುಕತೆ ಆರಂಭಿಸುವುದು ಮತ್ತು 2018ರೊಳಗೆ ಸುರಕ್ಷಿತ ಮತ್ತು ಕ್ರಮಬದ್ದವಾದ ವಲಸೆಗೆ ಜಾಗತಿಕ ಮಟ್ಟದಲ್ಲಿ ರೂಪುರೇಷೆಗಳನ್ನು ರಚಿಸುವುದು.

ಘೋಷಣೆಯಲ್ಲಿ ಏನಿದೆ?

  • ನಿರಾಶ್ರಿತರು ಮತ್ತು ವಲಸಿತರ ಮಾನವ ಹಕ್ಕುಗಳನ್ನು ಕಾಪಾಡುವುದು. ಅದರಲ್ಲೂ ಮುಖ್ಯವಾಗಿ ಹೆಣ್ಣುಮಕ್ಕಳು ಮತ್ತು ಮಹಿಳೆಯರ ಹಕ್ಕುಗಳನ್ನು ರಕ್ಷಿಸುವುದು.
  • ನಿರಾಶ್ರಿತರು ಮತ್ತು ವಲಸೆ ಬಂದವರ ಮಕ್ಕಳಿಗೆ ನಿಗದಿತ ಅವಧಿಯೊಳಗೆ ಸೂಕ್ತ ಶಿಕ್ಷಣ ದೊರೆಯುವಂತೆ ನೋಡಿಕೊಳ್ಳುವುದು.
  • ಲಿಂಗ ತಾರತಮ್ಯ ಮತ್ತು ಲೈಂಗಿಕ ಕಿರುಕುಳಗನ್ನು ತಡೆಯುವುದು.
  • ನಿರಾಶ್ರಿತರಿಗೆ ಮತ್ತು ವಲಸಿಗರಿಗೆ ಆಶ್ರಯ ನೀಡುವ ರಾಷ್ಟ್ರಗಳಿಗೆ ಬೆಂಬಲ ನೀಡುವುದು.
  • ನಿರಾಶ್ರಿತರು ಮತ್ತು ವಲಸೆಗಾರರ ವಿರುದ್ಧ ಬಲವಾಗಿ ಅನ್ಯದ್ವೇಷ ಬಾವವನ್ನು ಖಂಡಿಸುವುದು ಮತ್ತು ಅದನ್ನು ಎದುರಿಸಲು ಜಾಗತಿಕ ಅಭಿಯಾನವನ್ನು ಬೆಂಬಲಿಸುವುದು.

ನವದೆಹಲಿಯಲ್ಲಿ “ಇನ್ಕ್ರೆಡಿಬಲ್ ಇಂಡಿಯಾ ಪ್ರವಾಸೋದ್ಯಮ ಹೂಡಿಕೆದಾರರ ಶೃಂಗಸಭೆ-2016” ಗೆ ಚಾಲನೆ

ನವದೆಹಲಿಯಲ್ಲಿ ಆಯೋಜಿಸಲಾಗಿರುವ “ಇನ್ಕ್ರೆಡಿಬಲ್ ಇಂಡಿಯಾ ಪ್ರವಾಸೋದ್ಯಮ ಹೂಡಿಕೆದಾರರ ಶೃಂಗಸಭೆ-2016”ಗೆ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ರವರು ಚಾಲನೆ ನೀಡಿದರು. ಮೂರು ದಿನಗಳ ಈ ಶೃಂಗಸಭೆಯನ್ನು ಕೇಂದ್ರ ಪ್ರವಾಸೋದ್ಯಮ ಸಚಿವಾಲಯವು ಟೂರಿಸಂ ಫೈನಾನ್ಸ್ ಕಾರ್ಪೋರೇಷನ್ ಆಫ್ ಇಂಡಿಯಾ ಮತ್ತು ಭಾರತೀಯ ಕೈಗಾರಿಕಾ ಒಕ್ಕೂಟ (ಸಿಐಐ) ಸಹಯೋಗದೊಂದಿಗೆ ಆಯೋಜಿಸಿದೆ.

ಪ್ರಮುಖಾಂಶಗಳು:

  • ಈ ಶೃಂಗಸಭೆಯು ಸ್ಥಳೀಯ ಮತ್ತು ವಿದೇಶಿ ಹೂಡಿಕೆದಾರರಿಗೆ ಯೋಜನೆ ಬಗ್ಗೆ ಮಾಹಿತಿ ವಿನಿಮಯ ಮಾಡಿಕೊಳ್ಳಲು ವೇದಿಕೆಯಾಗಲಿದೆ.
  • ಈ ಶೃಂಗಸಭೆಯಲ್ಲಿ ಪ್ರವಾಸೋದ್ಯಮ ಮೂಲಸೌಕರ್ಯ ಅಭಿವೃದ್ದಿ, ಸ್ಟಾರ್ಟ್ ಆಫ್, ಡಿಜಿಟಲ್ ಇಂಡಿಯಾ, ಸ್ವದೇಶಿ ದರ್ಶನ್, ಪ್ರಸಾದ್ (PRASAD) ಮತ್ತು ಪ್ರವಾಸೋದ್ಯಮ ಉತ್ಪನ್ನಗಳ ಬಗ್ಗೆ ಚರ್ಚೆ ನಡೆಯಲಿವೆ.
  • ಇದಲ್ಲದೇ, ಶೃಂಗಸಭೆಯಲ್ಲಿ ಪ್ರವಾಸೋದ್ಯಮ ಸಂಬಂಧಿತ ಸೆಮಿನಾರ್ ಗಳು, ಬ್ಯುಸಿನೆಸ್-2-ಬ್ಯುಸಿನೆಸ್ ಸಭೆಗಳು ನಡೆಯಲಿವೆ.
  • ವಿವಿಧ ಬ್ಯಾಂಕುಗಳು/ಹಣಕಾಸು ಸಂಸ್ಥೆಗಳು, ವ್ಯವಹಾರ ಅಭಿವರ್ಧಕರು ಸೇರಿದಂತೆ ಅನೇಕ ಬಂಡವಾಳ ಹೂಡಿಕೆದಾರರು ಶೃಂಗಸಭೆಯಲ್ಲಿ ಪಾಲ್ಗೊಳ್ಳಲ್ಲಿದ್ದಾರೆ.

ಸಿರಿಯಾ ನಾಗರೀಕ ರಕ್ಷಣಾ ಪಡೆ “ವೈಟ್ ಹೆಲ್ಮೆಟ್”ಗೆ 2016 ರೈಟ್ ಲೈವ್ಲಿಹುಡ್ ಪ್ರಶಸ್ತಿ

ಪರ್ಯಾಯ ನೊಬೆಲ್ ಎಂದೇ ಖ್ಯಾತಿ ಹೊಂದಿರುವ ರೈಟ್ ಲೈವ್ಲಿಹುಡ್ ಪ್ರಶಸ್ತಿಯನ್ನು ಪ್ರಕಟಿಸಲಾಗಿದ್ದು, 2016ನೇ ಸಾಲಿನ ಪ್ರಶಸ್ತಿಯನ್ನು ಸಿರಿಯಾದ ನಾಗರೀಕ ರಕ್ಷಣಾ ಪಡೆ “ದಿ ವೈಟ್ ಹೆಲ್ಮೆಟ್” ಪ್ರಶಸ್ತಿಗೆ ಆಯ್ಕೆಯಾಗಿದೆ. “ದಿ ವೈಟ್ ಹೆಲ್ಮೆಟ್” ಅಥವಾ “ಸಿರಿಯಾ ಸಿವಿಲ್ ಡಿಫೆನ್ಸ್” ಇದು ಸಿರಿಯಾದ ನಾಗರೀಕ ಒಕ್ಕೂಟವಾಗಿದ್ದು ಬಂಡುಕೋರರು ಸಕ್ರಿಯವಾಗಿರುವ ಪ್ರದೇಶದಲ್ಲಿ ತುರ್ತು ರಕ್ಷಣೆಗೆ ಧಾವಿಸುವ ಮಹತ್ವದ ಕಾರ್ಯವನ್ನು ಮಾಡುತ್ತಿದೆ. ಯುದ್ದ ಪೀಡಿತ ಸಿರಿಯಾದಲ್ಲಿ ನಾಗರೀಕರನ್ನು ರಕ್ಷಿಸಲು ವೈಟ್ ಹೆಲ್ಮೆಟ್ ತೋರಿರುವ ಅಪಾರ ಶೌರ್ಯ, ಕರುಣೆ ಮತ್ತು ಮಾನವೀಯತೆಯನ್ನು ಗಮನಿಸಿ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ.

  • “ದಿ ವೈಟ್ ಹೆಲ್ಮೆಟ್” ಈ ಪ್ರಶಸ್ತಿಯನ್ನು ರಷ್ಯಾದ ಮಾನವಹಕ್ಕು ಹೋರಾಟಗಾರ್ತಿ “ಸ್ವೆಟ್ಲಾನ ಗನ್ನುಶ್ಕಿನ”, ಈಜಿಪ್ಟ್ ಮಹಿಳ ಪರ ಹೋರಾಟಗಾರ್ತಿ “ಮೊಝ್ನ ಹಸ್ಸನ್” ಮತ್ತು ಟರ್ಕಿಯ ಪ್ರತಿಷ್ಠಿತ ಸುದ್ದಿಪತ್ರಿಕ “ಕುಮ್ಹುರಿಯೆತ್” ಜೊತೆ ಹಂಚಿಕೊಳ್ಳಲಿದೆ.

ರೈಟ್ ಲೈವ್ಲಿಹುಡ್ ಪ್ರಶಸ್ತಿ ಬಗ್ಗೆ:

  • ರೈಟ್ ಲೈವ್ಲಿಹುಡ್ ಒಂದು ಅಂತಾರಾಷ್ಟ್ರೀಯ ಪ್ರಶಸ್ತಿಯಾಗಿದ್ದು, ಪ್ರಸ್ತುತ ಜಗತ್ತು ಎದುರಿಸುತ್ತಿರುವ ತುರ್ತು ಸವಾಲುಗಳಿಗೆ ಪರಿಹಾರ ಕಂಡುಕೊಳ್ಳಲು ಶ್ರಮಿಸುತ್ತಿರುವವರಿಗೆ ನೀಡಲಾಗುತ್ತಿದೆ. ಇದನ್ನು ಪರ್ಯಾಯ ನೊಬೆಲ್ ಎಂದೇ ಬಣ್ಣಿಸಲಾಗಿದೆ.
  • ಜರ್ಮನ್ –ಸ್ವೀಡಿಷ್ ಜನೋಪಕಾರಿ “ಜಾಕೋಬ್ ವಾನ್ ಎಕ್ಸ್ಕುಲ್” ಅವರು ಈ ಪ್ರಶಸ್ತಿಯನ್ನು 1980 ರಲ್ಲಿ ಸ್ಥಾಪಿಸಿದ್ದು, ಪ್ರತಿವರ್ಷ ಡಿಸೆಂಬರ್ ತಿಂಗಳಲ್ಲಿ ನೀಡಲಾಗುತ್ತದೆ.
  • ಪರಿಸರ ಸಂರಕ್ಷಣೆ, ಮಾನವ ಹಕ್ಕು, ಸುಸ್ಥಿರ ಅಭಿವೃದ್ದಿ, ಆರೋಗ್ಯ, ಶಿಕ್ಷಣ ಮತ್ತು ಶಾಂತಿ ಕ್ಷೇತ್ರಕ್ಕೆ ಮಹತ್ತರ ಕೊಡುಗೆ ನೀಡಿದವರನ್ನು ಅಂತಾರಾಷ್ಟ್ರೀಯ ತೀರ್ಪುಗಾರರ ಸಮಿತಿ ನೇಮಕ ಮಾಡಿ ಪ್ರಶಸ್ತಿಯನ್ನು ನೀಡಲಾಗುವುದು.

ಅಮೆರಿಕಕ್ಕೆ ಭಾರತದ ನೂತನ ರಾಯಭಾರಿಯಾಗಿ ನವತೇಜ್ ಸರನಾ ನೇಮಕ

ಕೇಂದ್ರ ಸರ್ಕಾರ ನವತೇಜ್ ಸರನಾ ಅವರನ್ನು ಅಮೆರಿಕಕ್ಕೆ ಭಾರತದ ನೂತನ ರಾಯಭಾರಿಯನ್ನಾಗಿ ನೇಮಕಮಾಡಿದೆ. ಸರನಾ ಅವರು ಇತ್ತೀಚೆಗೆ ಸೇವೆಯಿಂದ ನಿವೃತ್ತಿ ಹೊಂದಿದೆ ಅರುಣ್ ಕುಮಾರ್ ಸಿಂಗ್ ಅವರಿಂದ ಹುದ್ದೆಯನ್ನು ವಹಿಸಿಕೊಳ್ಳಲ್ಲಿದ್ದಾರೆ. ನವೆಂಬರ್ 2016ರಲ್ಲಿ ಅಮೆರಿಕಾದಲ್ಲಿ ಹೊಸ ಆಡಳಿತ ಶುರುವಾಗಲಿದ್ದು, ಹೊಸ ಸರ್ಕಾರದೊಂದಿಗೆ ಕೆಲಸ ನಿರ್ವಹಿಸುವ ಗುರಿ ಇವರ ಮುಂದಿದೆ.

ನವತೇಜ್ ಸರನಾ:

  • ಸರನಾ ಅವರು ಭಾರತೀಯ ವಿದೇಶಾಂಗ ಸೇವೆಯ 1980ನೇ ತಂಡದ ಅಧಿಕಾರಿ. ತಮ್ಮ 35ವರ್ಷದ ಸೇವೆಯಲ್ಲಿ ವಿದೇಶಾಂಗ ಸಚಿವಾಲಯಕ್ಕೆ ಸಂಬಂಧಿಸಿದ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ.
  • ನೇಮಕಾತಿಗೆ ಮುನ್ನ ಇವರು ಯು.ಕೆಯಲ್ಲಿ ಭಾರತದ ಹೈಕಮಿನಷರ್ ಆಗಿದ್ದರು.
  • ಸರನಾ ಅವರು 2002ರಿಂದ 2008ರವರೆಗೆ ವಿದೇಶಾಂಗ ಇಲಾಖೆ ವಕ್ತಾರರಾಗಿದ್ದರು. ನಂತರದ 4 ವರ್ಷ ಇಸ್ರೇಲ್‌ಗೆ ಭಾರತದ ರಾಯಭಾರಿಯಾಗಿದ್ದರು. ವಿದೇಶಾಂಗ ಸಚಿವಾಲಯದಲ್ಲಿ ಅಂತರರಾಷ್ಟ್ರೀಯ ಸಂಘಟನೆಯ ಹೆಚ್ಚುವರಿ ಕಾರ್ಯದರ್ಶಿ, ವಿಶೇಷ ಕಾರ್ಯದರ್ಶಿ, ಪಶ್ಚಿಮ ವಿಭಾಗದ ಕಾರ್ಯದರ್ಶಿಯಾಗಿದ್ದರು.

One Thought to “ಪ್ರಚಲಿತ ವಿದ್ಯಮಾನಗಳು- ಸೆಪ್ಟೆಂಬರ್ 23, 2016”

  1. paramanand

    g00d w0rk sir

Leave a Comment

This site uses Akismet to reduce spam. Learn how your comment data is processed.