ಏರ್-ಟು-ಏರ್ ಬಿಯಾಂಡ್ ವಿಷುಯಲ್ ರೇಂಜ್ ಕ್ಷಿಪಣಿಯನ್ನು ಯಶಸ್ವಿಯಾಗಿ ಉಡಾಯಿಸಿದ ತೇಜಸ್
ತೇಜಸ್, ಲಘು ಯುದ್ದ ವಿಮಾನ ಯಶಸ್ವಿಯಾಗಿ ಡಾರ್ಬಿ ಏರ್-ಟು-ಏರ್ ಬಿಯಾಂಡ್ ವಿಷುಯಲ್ ರೇಂಜ್ (Air-to-Air Beyond Visual Range Missiles) ಕ್ಷಿಪಣಿಗಳನ್ನು ರಾಡಾರ್ ಮಾರ್ಗದರ್ಶಿ ವಿಧಾನದಲ್ಲಿ ಯಶಸ್ವಿಯಾಗಿ ಉಡಾಯಿಸಿದೆ. ಈ ಪರೀಕ್ಷೆಯನ್ನು ಚಂಡಿಪುರದ ಇಂಟರಿಂ ಟೆಸ್ಟ್ ರೇಂಜ್ (ಐಟಿಆರ್) ನಲ್ಲಿರುವ ಮನಯೋವರೇಬಲ್ ಏರಿಯಲ್ ಟಾರ್ಗೆಟ್ನಲ್ಲಿ ನಡೆಸಲಾಯಿತು. ಏರ್ ಕ್ರಾಫ್ಟ್ ಏವಿಯನಿಕ್ಸ್, ಫೈರ್ ಕಂಟ್ರೋಲ್ ರಾಡಾರ್, ಲಾಂಚರ್ಸ್ ಮತ್ತು ಮಿಸೈಲ್ ವೆಪನ್ ಡೆಲಿವರಿ ಸಿಸ್ಟಮ್ ಅನ್ನು ತೇಜಸ್ ಯುದ್ದ ವಿಮಾನದಲ್ಲಿ ನಿರ್ಣಯಿಸುವುದು ಮತ್ತು ಅದರ ಕಾರ್ಯಕ್ಷಮತೆಯನ್ನು ಮೌಲ್ಯಮಾಪನ ಮಾಡುವುದು ಪರೀಕ್ಷೆಯ ಹಿಂದಿನ ಉದ್ದೇಶ.
ಪರೀಕ್ಷಾರ್ಥ ಪ್ರಯೋಗದಲ್ಲಿ ಯೋಜಿತ ಗುರಿಗಳನ್ನು ಸಾಧಿಸುವ ಮೂಲಕ ಕ್ಷಿಪಣಿ ಗುರಿಯನ್ನು ನೇರವಾಗಿ ನಾಶಗೊಳಿಸಿದೆ.
ತೇಜಸ್:
ತೇಜಸ್ ಲಘು ಯುದ್ದ ವಿಮಾನವು ಪ್ರಪಂಚದ ಅತಿ ಚಿಕ್ಕ, ಹಗುರವಾದ ತೂಕ, ಬಹು-ಕಾರ್ಯಾಚರಣೆ ಯುದ್ಧ ವಿಮಾನವಾಗಿದೆ. ಇದು ಭಾರತೀಯ ನೌಕಾಪಡೆ ಮತ್ತು ವಾಯುಪಡೆಗೆ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಅಭಿವೃದ್ಧಿಪಡಿಸಿದ ಏಕೈಕ ಆಸನ ಮತ್ತು ಸಿಂಗಲ್ ಜೆಟ್ ಎಂಜಿನ್ ಹೊಂದಿರುವ ಯುದ್ದ ವಿಮಾನ. ಲಘು ಯುದ್ದ ವಿಮಾನವನ್ನು ಅಲ್ಯುಮಿನಿಯಮ್-ಲಿಥಿಯಂ ಮಿಶ್ರಲೋಹಗಳು, ಕಾರ್ಬನ್-ಫೈಬರ್ ಸಂಯೋಜನೆಗಳು, ಮತ್ತು ಟೈಟಾನಿಯಂನಿಂದ ನಿರ್ಮಿಸಲಾಗುತ್ತದೆ. ಲಘು ಯುದ್ದ ವಿಮಾನಗಳು ಆಧುನಿಕ ವಿನ್ಯಾಸ ಪರಿಕಲ್ಪನೆಗಳು ಮತ್ತು ಅತ್ಯಾಧುನಿಕ ತಂತ್ರಜ್ಞಾನಗಳಾದ ಫ್ಲೈಬೈ-ವೈರ್, ಫ್ಲೈಟ್ ಕಂಟ್ರೋಲ್ ಸಿಸ್ಟಮ್, ಅಡ್ವಾನ್ಸ್ಡ್ ಡಿಜಿಟಲ್ ಕಾಕ್ಪಿಟ್, ಮಲ್ಟಿ-ಮೋಡ್ ರಾಡಾರ್, ಇಂಟಿಗ್ರೇಟೆಡ್ ಡಿಜಿಟಲ್ ಏವಿಯೋನಿಕ್ಸ್ ಸಿಸ್ಟಮ್, ಅಡ್ವಾನ್ಸ್ಡ್ ಕಾಂಪೊಸಿಟ್ ಮೆಟೀರಿಯಲ್ ಸ್ಟ್ರಕ್ಚರ್ಸ್ ಮತ್ತು ಫ್ಲ್ಯಾಟ್ ರೇಟೆಡ್ ಇಂಜಿನ್ ಮುಂತಾದ ತಂತ್ರಜ್ಞಾನಗಳನ್ನು ಒಳಗೊಂಡಿದೆ.
ಹೆಪಟೈಟಿಸ್ ಬಗ್ಗೆ ಜಾಗೃತಿ ಮೂಡಿಸಲು ಅಮಿತಾಬ್ ಬಚ್ಚನ್ ರಾಯಭಾರಿ
ವಿಶ್ವ ಆರೋಗ್ಯ ಸಂಸ್ಥೆ (WHO) ಆಗ್ನೇಯ ಏಷ್ಯಾ ಪ್ರದೇಶದಲ್ಲಿನ ಹೆಪಟೈಟಿಸ್ ಬಗ್ಗೆ ಜಾಗೃತಿ ಮೂಡಿಸಲು ಅಮಿತಾಬ್ ಬಚ್ಚನ್ ಅವರನ್ನು ರಾಯಭಾರಿಯನ್ನಾಗಿ ನೇಮಕ ಮಾಡಿದೆ. ಯಕೃತ್ತಿನ ಕ್ಯಾನ್ಸರ್ ಮತ್ತು ಸಿರೋಸಿಸ್ಗೆ ಪ್ರಮುಖ ಕಾರಣಗಳಲ್ಲಿ ಒಂದಾದ ಹೆಪಟೈಟಿಸ್ ಹರಡುವುದನ್ನು ತಡೆಯಲು ಜಾಗೃತಿ ಮೂಡಿಸಲು ಅವರನ್ನು ನೇಮಕ ಮಾಡಲಾಗಿದೆ. ರಾಯಭಾರಿಯಾಗಿ, ಅಮಿತಾಭ್ ಬಚ್ಚನ್ ಅವರು ಹೆಪಟೈಟಿಸ್ ತಡೆಗಟ್ಟುವ ಕ್ರಮಗಳು, ರೋಗ ನಿಯಂತ್ರಣ ಮತ್ತು ಚಿಕಿತ್ಸೆ ಬಗ್ಗೆ ಸಾರ್ವಜನಿಕ ಜಾಗೃತಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ.
ಪ್ರಪಂಚದಾದ್ಯಂತ ಸುಮಾರು 325 ಮಿಲಿಯನ್ ಜನರು ಹೆಪಟೈಟಿಸ್ ಬಳಲುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ. ಹೆಪಟೈಟಿಸ್ ಯಕೃತ್ತಿನ ಉರಿಯೂತವಾಗಿದ್ದು, ಯಕೃತ್ತಿನ ಕ್ಯಾನ್ಸರ್ಗೆ ದಾರಿ ಮಾಡಿಕೊಡುತ್ತದೆ. ಚಿಕಿತ್ಸೆ ಪಡೆಯದಿದ್ದರೆ ಸಾವು ಖಚಿತ.
ಹೆಪಟೈಟಿಸ್:
ಯಕೃತ್ತಿನಲ್ಲಿ ಉರಿಯೂತವನ್ನುಂಟು ಮಾಡುವ ಲಕ್ಷಣಗಳು ಅಥವಾ ರೋಗಗಳಿಗೆ ಹೆಪಟೈಟಿಸ್ ಎಂದು ಹೇಳಲಾಗುತ್ತದೆ. ಹೆಪಟೈಟಿಸ್ ರೋಗ ವೈರಸ್ ಅಲ್ಲದೆ ಸತತ ಮದ್ಯಪಾನ ಸೇವನೆ, ಕಲುಷಿತ ಆಹಾರ ಸೇವನೆ, ಕೆಟ್ಟ ಜೀವನ ಶೈಲಿಯಿಂದಲೂ ಉಂಟಾಗಬಹುದು. ಹೈಪಟೈಟಿಸ್ ವೈರಸ್ ಗಳನ್ನು ಎ, ಬಿ. ಸಿ, ಡಿ ಮತ್ತು ಇ ಎಂದು ಗುರುತಿಸಲಾಗಿದ್ದು, ಬಿ ಮತ್ತು ಇ ವೈರಸ್ ಅತ್ಯಂತ ಅಪಾಯಕಾರಿ. ಹೆಪಟೈಟಿಸ್ ಬಿ, ಸಿ ಮತ್ತು ಡಿ ರಕ್ತ ಅಥವಾ ದೇಹದ ಸ್ರವದಿಂದ ಹರಡಬಲ್ಲದಾಗಿದೆ. ಹೆಪಟೈಟಿಸ್ ಇ ಮತ್ತು ಎ ಕಲುಷಿತ ಆಹಾರ ಮತ್ತು ನೀರಿನ ಸೇವನೆಯಿಂದ ಉಂಟಾಗುತ್ತದೆ. ಹೆಪಾಟೈಟಿಸ್ ಬಿ ಲಸಿಕೆಯನ್ನು ರೋಗದ ವಿರುದ್ಧ ರಕ್ಷಿಸಲು 0, 1, 2, ಮತ್ತು 6 ತಿಂಗಳುಗಳಲ್ಲಿ ಮಗುವಿಗೆ ನೀಡಲಾಗುತ್ತದೆ ಮತ್ತು ತಾಯಿಯಿಂದ ಮಗುವಿಗೆ ರೋಗದ ಹರಡುವಿಕೆ ತಡೆಗಟ್ಟಲು ಬಳಸಲಾಗುತ್ತದೆ.
ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆ ಭಾಗವಾಗಿ “CASO” ಮರು ಪರಿಚಯಿಸಲಿರುವ ಸೇನೆ
ಭಾರತೀಯ ಸೇನೆ 15 ವರ್ಷಗಳ ನಂತರ ತನ್ನ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳ ಅಂಗವಾಗಿ ಕಾರ್ಡನ್ ಮತ್ತು ಸರ್ಚ್ ಕಾರ್ಯಾಚರಣೆಗಳನ್ನು (Cordon And Search Operation) ಮರು-ಪರಿಚಯಿಸಲು ಯೋಜಿಸಿದೆ. ಕಾಶ್ಮೀರ ಕಣಿವೆಯಲ್ಲಿ ಪರಿಸ್ಥಿತಿಯನ್ನು ನಿಯಂತ್ರಿಸುವುದು CASO ಕಾರ್ಯಾಚರಣೆಯನ್ನು ಮರು-ಪರಿಚಯಿಸುವುದುರ ಹಿಂದಿನ ಪ್ರಮುಖ ಉದ್ದೇಶವಾಗಿದೆ. ಇದಾದ ನಂತರ, ದಕ್ಷಿಣ ಕಾಶ್ಮೀರದಲ್ಲಿನ ಕುಲ್ಗಮ್, ಪುಲ್ವಾಮಾ, ಟ್ರಾಲ್, ಬಡ್ಗಮ್ ಮತ್ತು ಸ್ಯಾಪಿಯಾನ್ಗಳ ಉಗ್ರಗಾಮಿ ಹಿಂಸಾತ್ಮಕ ಪ್ರದೇಶಗಳಲ್ಲಿ ಉಗ್ರಗಾಮಿಗಳನ್ನು ಸೆದೆಬಡಿಯಲು CASOವನ್ನು ಪ್ರಮುಖ ರೀತಿಯಲ್ಲಿ ಸೇನೆ ಕೈಗೊಳ್ಳಲಿದೆ.
ಹಿನ್ನಲೆ:
CASO 1990ರ ದಶಕದಲ್ಲಿ ಸೈನ್ಯದ ಭಯೋತ್ಪಾದನಾ ಕಾರ್ಯಾಚರಣೆಗಳ ಸಾಮಾನ್ಯ ವಿಧಾನವಾಗಿತ್ತು. ಭದ್ರತಾ ಪಡೆಗಳು 1990ರ ದಶಕದಲ್ಲಿ “ಪ್ರದೇಶ ಪ್ರಾಬಲ್ಯ ಮತ್ತು ಸ್ವೀಪ್” ಕಾರ್ಯಾಚರಣೆಗಳನ್ನು ಪ್ರಬಲವಾಗಿ ಬಳಸುತ್ತಿದ್ದವು. ಆ ಕಾಲದಲ್ಲಿ, ಅಂತಹ ಕಾರ್ಯಾಚರಣೆಗಳನ್ನು ಭಾರತೀಯ ಸೇನೆಯು ಸಾಮಾನ್ಯವಾಗಿ ನಡೆಸಿತು. ನಂತರ, ಸ್ಥಳೀಯ ಜನರಿಂದ ದೂರುಗಳು ಬರಲು ಆರಂಭಿಸದ ವೇಳೆ, ಸೈನ್ಯವು ಸಣ್ಣ ತಂಡಗಳನ್ನು ಒಳಗೊಂಡ ನಿರ್ದಿಷ್ಟ ಗುಪ್ತಚರ-ಆಧಾರಿತ ಕಾರ್ಯಾಚರಣೆಗಳಿಗೆ ಒತ್ತು ನೀಡುವ ಮೂಲಕ CASO ಅನ್ನು ನಿಲ್ಲಿಸಲಾಯಿತು.
ಇತ್ತೀಚೆಗೆ ಉಗ್ರಗಾಮಿಗಳಿಂದ ಕಾಶ್ಮೀರಿ ಸೇನಾಧಿಕಾರಿ ಲೆಫ್ಟಿನೆಂಟ್ ಉಮ್ಮರ್ ಫಯಾಜ್ನಕೊಲೆಯಾದ ಹಿನ್ನಲೆಯಲ್ಲಿ CASO ಅನ್ನು ಮರು-ಪರಿಚಯಿಸುವ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಇತ್ತೀಚೆಗೆ ಪೊಲೀಸರು ಮತ್ತು ಬ್ಯಾಂಕಿಂಗ್ ಸೌಲಭ್ಯಗಳ ಮೇಲೆ ಉಗ್ರಗಾಮಿಗಳ ದಾಳಿಯ ನಂತರ ಸೇನಾ ಭದ್ರತಾ ಪಡೆಗಳು ಮತ್ತು ಪೊಲೀಸರು ದಕ್ಷಿಣ ಕಾಶ್ಮೀರದ ಸ್ಯಾಪಿಯಾನ್ ಜಿಲ್ಲೆಯಲ್ಲಿ ಬೃಹತ್ ಕಾರ್ಡನ್ ಮತ್ತು ಸೈನಿಕ ಕಾರ್ಯಾಚರಣೆ ನಡೆಸಿದ್ದರು. 15 ವರ್ಷಗಳಲ್ಲಿ ಮೊದಲ ಬಾರಿಗೆ 4,000 ಪಡೆಗಳನ್ನು ಒಳಗೊಂಡ ಈ ಪ್ರಮಾಣದ ಕಾರ್ಯಾಚರಣೆಯನ್ನು ಭದ್ರತಾ ಪಡೆಗಳು ನಡೆಸಿದವು.
ಸೈನ್ಸ್ ಎಕ್ಸ್ ಪ್ರೆಸ್: ಒಂದು ವರದಿ
“ಸೈನ್ಸ್ ಎಕ್ಸ್ ಪ್ರೆಸ್” ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಿಂದ ವಿಜ್ಞಾನ ಪ್ರದರ್ಶನಕ್ಕೆ ಮೀಸಲಿಡಲಾದ 16 ಬೋಗಿಗಳನ್ನು ಒಳಗೊಂಡ ಎಸಿ ರೈಲು. ವಿಜ್ಞಾನ ಮತ್ತು ತಂತ್ರಜ್ಞಾನದ ಕ್ಷೇತ್ರದಲ್ಲಿ ಯುವಜನರ ಆಸಕ್ತಿಯನ್ನು ಹೆಚ್ಚಿಸುವುದು ಎಕ್ಸ್ಪ್ರೆಸ್ನ ಗುರಿಯಾಗಿದೆ. ಈ ರೈಲಿಗೆ ಚಾಲನೆ ನೀಡಿದಾಗಿಂದಲೂ ಇದರ ಕಾರ್ಯಾಚರಣೆಯನ್ನು ವಿಕ್ರಮ್ ಎ ಸಾರಾಭಾಯ್ ಸಮುದಾಯ ವಿಜ್ಞಾನ ಕೇಂದ್ರ (VASCSC) ನಿರ್ವಹಿಸುತ್ತದೆ. ಸೈನ್ಸ್ ಎಕ್ಸಪ್ರೆಸ್ ಗೆ ಅಕ್ಟೋಬರ್ 30, 2007 ರಂದು ದೆಹಲಿ ಸಫ್ದರ್ಜಂಗ್ ರೈಲ್ವೆ ನಿಲ್ದಾಣದಲ್ಲಿ ಚಾಲನೆ ನೀಡಲಾಯಿತು. ಈ ರೈಲು ಇದುವರೆಗೂ 8 ಹಂತಗಳಲ್ಲಿ 1,41,800 ಕಿಮೀ ಪ್ರಯಾಣಿಸಿ, 455 ಹಾಲ್ಟ್ಸ್ ಮತ್ತು 1602 ಪ್ರದರ್ಶನ ದಿನಗಳನ್ನು ಪೂರ್ಣಗೊಳಿಸಿದೆ. ಹೀಗಾಗಿ ಅತಿ ದೊಡ್ಡ, ದೀರ್ಘಕಾಲ ಸಂಚರಿಸಿದ ಹಾಗೂ ಹೆಚ್ಚು ವಿಜ್ಞಾನ ಪ್ರದರ್ಶನ ಮೊಬೈಲ್ ರೈಲು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಆರು ಭಾರಿ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ಸೇರ್ಪಡೆಗೊಂಡಿದೆ. ಆರಂಭದಿಂದಲೂ ಸುಮಾರು 1.61 ಕೋಟಿ ಜನರು ಸೈನ್ಸ್ ಎಕ್ಸ್ಪ್ರೆಸ್ಗೆ ಭೇಟಿ ನೀಡಿದ್ದಾರೆ.
ಸೈನ್ಸ್ ಎಕ್ಸಪ್ರೆಸ್ ಪೂರ್ಣಗೊಳಿಸಿರುವ 8 ಹಂತಗಳಲ್ಲಿ 4 ಹಂತಗಳು ‘ಸೈನ್ಸ್ ಎಕ್ಸ್ಪ್ರೆಸ್’ ಸೇರಿವೆ, ಇದರಲ್ಲಿ ವಿಶ್ವದಾದ್ಯಂತ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಕೈಗೊಳ್ಳಲಾದ ಸಂಶೋಧನೆಗಳ ಬಗ್ಗೆ ಪ್ರದರ್ಶಿಸಲಾಗಿದೆ. 3 ಹಂತಗಳಲ್ಲಿ ಭಾರತದಲ್ಲಿನ ಶ್ರೀಮಂತ ಜೀವವೈವಿಧ್ಯತೆಯನ್ನು ಪ್ರದರ್ಶಿಸಿವು ‘ಜೀವವೈವಿಧ್ಯ ವಿಶೇಷ’ (SEBS) ಹಾಗೂ ಹವಾಮಾನ ಬದಲಾವಣೆಯ ಜಾಗತಿಕ ಸವಾಲನ್ನು ಪ್ರದರ್ಶಿಸುವ ‘ಕ್ಲೈಮೇಟ್ ಆಕ್ಷನ್ ಸ್ಪೆಶಲ್’ (ಎಸ್ಇಸಿಎಎಸ್) ಒಂದು ಹಂತವನ್ನು ಒಳಗೊಂಡಿದೆ.
SECAS-II:
ಸೈನ್ಸ್ ಎಕ್ಸಪ್ರೆಸ್ 9ನೇ ಹಂತದಲ್ಲಿ ಸೈನ್ಸ್ ಎಕ್ಸ್ಪ್ರೆಸ್ ಕ್ಲೈಮೇಟ್ ಆಕ್ಷನ್ ಸ್ಪೆಶಲ್ (ಎಸ್ಇಸಿಎಎಸ್ 2) -II ಚಾಲನೆ ನೀಡಲಾಗಿದೆ. ಈ ರೈಲು ಸೆಪ್ಟೆಂಬರ್ವರೆಗೆ ದೇಶಾದ್ಯಂತ 68 ನಿಲ್ದಾಣ ಕೇಂದ್ರಗಳಲ್ಲಿ ಚಲಿಸಲಿದೆ. ಒಟ್ಟಾರೆ 19,000 ಕಿಮೀ ದೂರವನ್ನು ಕ್ರಮಿಸಲಿದೆ. ಈ ವರ್ಷದ ಫೆಬ್ರುವರಿ 17 ರಂದು ಸೈನ್ಸ್ ಎಕ್ಸ್ಪ್ರೆಸ್ನ ಪ್ರಸ್ತುತ ಒಂಭತ್ತನೇ ಹಂತಕ್ಕೆ ಚಾಲನೆ ನೀಡಲಾಯಿತು. ಸೈನ್ಸ್ ಎಕ್ಸ್ಪ್ರೆಸ್ ಕ್ಲೈಮೇಟ್ ಆಕ್ಷನ್ ಸ್ಪೆಶಲ್ ಪರಿಸರ ಸಚಿವಾಲಯ, ಅರಣ್ಯ ಮತ್ತು ಹವಾಮಾನ ಬದಲಾವಣೆ, ಬಯೋಟೆಕ್ನಾಲಜಿ ಇಲಾಖೆ (ಡಿಬಿಟಿ), ರೈಲ್ವೆ ಸಚಿವಾಲಯ, ಭಾರತದ ವನ್ಯಜೀವಿ ಸಂಸ್ಥೆ (ವೈಐ) ಮತ್ತು ವಿಕ್ರಮ್ ಎ ಸಾರಾಭಾಯ್ ಸಮುದಾಯ ವಿಜ್ಞಾನ ಕೇಂದ್ರ (ವಿಎಎಸ್ಸಿಎಸ್ಸಿ) ಗಳ ಸಹಭಾಗಿತ್ವದಲ್ಲಿ ಕಾರ್ಯಾಚರಣೆ ಮಾಡಲಿದೆ.