ಲೀಥಿಯಂ ಐಯಾನ್ ಬ್ಯಾಟರಿಗಳ ತಯಾರಿಕೆಗೆ ಇಸ್ರೋ ತಂತ್ರಜ್ಞಾನ
ಎಲೆಕ್ಟ್ರಾನಿಕ್ ವಾಹನಗಳಲ್ಲಿ ಬಳುಸವ ಲೀಥಿಯಂ ಐಯಾನ್ ಬ್ಯಾಟರಿಗಳನ್ನು ದೊಡ್ಡ ಪ್ರಮಾಣದಲ್ಲಿ ಉತ್ಪಾದಿಸಲು ತಂತ್ರಜ್ಞಾನ ಒದಗಿಸುವಂತೆ ಇಸ್ರೋಗೆ ಕೇಂದ್ರ ಸರ್ಕಾರ ಸೂಚಿಸಿದೆ. ಇಸ್ರೋದ ವಿಕ್ರಮ್ ಸಾರಭಾಯಿ ಬಾಹ್ಯಕಾಶ ಕೇಂದ್ರ ತ್ರಿಚಕ್ರ ಹಾಗೂ ದ್ವಿಚಕ್ರ ವಾಹನಗಳಲ್ಲಿ ಬಳಸುವ ಲೀಥಿಯಂ ಐಯಾನ್ ಬ್ಯಾಟರಿಗಳನ್ನು ಅಭಿವೃದ್ದಿಪಡಿಸಿದೆ. ಆಟೋಮೋಟಿವ್ ರಿಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾ ಈ ಬ್ಯಾಟರಿಗಳ ಪರೀಕ್ಷಾರ್ಥ ಪ್ರಯೋಗ ನಡೆಸಿದ್ದು, ತಂತ್ರಜ್ಞಾನ ಉತ್ತಮವಾಗಿದೆ ಎನ್ನಲಾಗಿದೆ. ದೇಶದ ಆಟೋಮೊಬೈಲ್ ಕ್ಷೇತ್ರಕ್ಕೆ ಇದೊಂದು ಮಹತ್ವದ ಬೆಳವಣಿಗೆಯಾಗಿದೆ. ಈಗಾಗಲೇ ಹುಂಡೈ, ನಿಸಾನ್, ಟಾಟಾ ಮೋಟಾರ್ಸ್ ಸೇರಿದಂತೆ ದೇಶದ ಪ್ರಮುಖ ಸಂಸ್ಥೆಗಳು ಸ್ಥಳೀಯವಾಗಿ ಲೀಥಿಯ ಐಯಾನ್ ಬ್ಯಾಟರಿಗಳನ್ನು ಅಭಿವೃದ್ದಿಪಡಿಸುವ ತಂತ್ರಜ್ಞಾನ ವಿನಿಮಯ ಮಾಡಿಕೊಳ್ಳುವಂತೆ ಇಸ್ರೋದ ಮೊರೆ ಹೋಗಿವೆ ಎನ್ನಲಾಗಿದೆ.
ಅವಶ್ಯಕತೆ:
ಬ್ಯಾಟರಿ ಎಲೆಕ್ಟ್ರಾನಿಕ್ ವಾಹನಗಳ ಪ್ರಮುಖ ಭಾಗ. ಪ್ರಸ್ತುತ ಲೀಥಿಯಾಂ ಐಯಾನ್ ಬ್ಯಾಟರಿಗಳನ್ನು ಭಾರತ ವಿದೇಶದಿಂದ ಆಮದು ಮಾಡಿಕೊಳ್ಳುತ್ತಿದ್ದು, ದುಬಾರಿ ಎನಿಸಿದೆ. ಸಾಂಪ್ರದಾಯಿಕ ಬ್ಯಾಟರಿಗಳಿಗೆ ಹೋಲಿಸಿದರೆ ಲೀಥಿಯಂ ಬ್ಯಾಟರಿಗಳು ಕಡಿಮೆ ತೂಕ, ಅತಿ ಹೆಚ್ಚು ಸಾಮರ್ಥ್ಯ ಹಾಗೂ ಕಡಿಮೆ ಗಾತ್ರವನ್ನು ಹೊಂದಿವೆ. ಆದ್ದುದರಿಂದ ಈ ಬ್ಯಾಟರಿಗಳಿಗೆ ಬಹು ಬೇಡಿಕೆ. ದೊಡ್ಡ ಪ್ರಮಾಣದಲ್ಲಿ ಬ್ಯಾಟರಿಗಳನ್ನು ಉತ್ಪಾದಿಸುವುದರಿಂದ ಶೇ 80% ಉತ್ಪಾದನ ವೆಚ್ಚ ಕಡಿಮೆಯಾಗಲಿದೆ ಎಂದು ಸರ್ಕಾರ ಅಂದಾಜಿಸಿದೆ.
ಡಾ.ಬಿ.ಆರ್. ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್’ ಸಂಸ್ಥೆಗೆ ಶಿಲಾನ್ಯಾಸ
ಪ್ರತಿಷ್ಠಿತ ‘ಡಾ.ಬಿ.ಆರ್. ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್’ ಸಂಸ್ಥೆಗೆ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಶಿಲಾನ್ಯಾಸ ನೆರವೇರಿಸಿದರು. ಬೆಂಗಳೂರಿನ ವಿಶ್ವವಿದ್ಯಾಲಯದ ಆವರಣದಲ್ಲಿ ಈ ಸಂಸ್ಥೆ ತಲೆಯತ್ತಲಿದೆ.
ಡಾ.ಬಿ.ಆರ್. ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್’ ಸಂಸ್ಥೆ:
- ಅಂಬೇಡ್ಕರ್ ಅವರು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ಓದಿದ ಮೊದಲ ಭಾರತೀಯ. ಆ ಕಾರಣಕ್ಕೆ ಅವರ ಹೆಸರನ್ನೇ ಸಂಸ್ಥೆಗೆ ಇಡಲಾಗಿದೆ.
- ಬೆಂಗಳೂರು ವಿಶ್ವವಿದ್ಯಾಲಯದ 35 ಎಕರೆ ಪ್ರದೇಶದಲ್ಲಿ ಈ ಸ್ವಾಯತ್ತ ಸಂಸ್ಥೆ ತಲೆ ಎತ್ತಲಿದೆ.
- ಮುಂದಿನ ಶೈಕ್ಷಣಿಕ ವರ್ಷದಿಂದಲೇ ತರಗತಿ ಆರಂಭವಾಗಲಿದ್ದು, ವಿಶ್ವವಿದ್ಯಾಲಯದ ಹಳೇ ಕಟ್ಟಡವನ್ನು ತಾತ್ಕಾಲಿಕವಾಗಿ ಒದಗಿಸಲಾಗಿದೆ.
- ಸ್ಕೂಲ್ ಆಫ್ ಎಕನಾಮಿಕ್ಸ್ ಸ್ಥಾಪನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉನ್ನತ ಶಿಕ್ಷಣ ಇಲಾಖೆಗೆ ₹ 107 ಕೋಟಿ ಬಿಡುಗಡೆ ಮಾಡಿದ್ದಾರೆ. ಇದರಲ್ಲಿ ₹ 17 ಕೋಟಿ ಸಂಸ್ಥೆಯ ಆರಂಭಿಕ ವೆಚ್ಚವಾಗಿ ಬಳಸಿಕೊಳ್ಳಲಾಗುತ್ತದೆ. ಉಳಿದ ₹ 90 ಕೋಟಿ ಹಣವನ್ನು ಕಟ್ಟಡ ನಿರ್ಮಾಣಕ್ಕೆ ಬಳಸಿಕೊಳ್ಳಲು ಉದ್ದೇಶಿಸಲಾಗಿದೆ.
ಮುಸ್ಲಿಂ/ಎಸ್.ಟಿ ಮೀಸಲಾತಿ ಹೆಚ್ಚಳಕ್ಕೆ ತೆಲಂಗಣ ಸರ್ಕಾರದಿಂದ ಮಸೂದೆ ಅಂಗೀಕಾರ
ಮುಸ್ಲಿಮರು ಮತ್ತು ಎಸ್.ಸಿ/ಎಸ್.ಟಿ ಜನಾಂಗಕ್ಕೆ ಶೈಕ್ಷಣಿಕ ಸಂಸ್ಥೆ ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿ ಹೆಚ್ಚಿಸುವ “ತೆಲಂಗಣ ಹಿಂದುಳಿದ ವರ್ಗ, ಪರಿಶಿಷ್ಠ ಜಾತಿ, ಪರಿಶಿಷ್ಠ ಪಂಗಡ (ಶೈಕ್ಷಣಿಕ ಸಂಸ್ಥೆಗಳು ಮತ್ತು ರಾಜ್ಯ ಸರ್ಕಾರಿ ಹುದ್ದೆಯಲ್ಲಿ ಸೀಟುಗಳ ಮೀಸಲಾತಿ)-2017 ಮಸೂದೆ ತೆಲಂಗಣ ವಿಧಾನಸಭೆಯಲ್ಲಿ ಅಂಗೀಕಾರಕೊಂಡಿದೆ.
- ಹೊಸ ಮಸೂದೆಯಡಿ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವ ಮುಸ್ಲಿಂ ಸಮುದಾಯಕ್ಕೆ ಮೀಸಲಾತಿಯನ್ನು ಪ್ರಸ್ತುತ ಶೇ 4% ರಿಂದ ಶೇ 12% ಹೆಚ್ಚಿಸಲಾಗುವುದು.
- ಪರಿಶಿಷ್ಠ ಪಂಗಡಕ್ಕೆ ಮೀಸಲಾತಿಯನ್ನು ಶೇ 6% ರಿಂದ ಶೇ 10%ಕ್ಕೆ ಹೆಚ್ಚಿಸಲಾಗುವುದು.
- ಹೊಸ ಮಸೂದೆಯಿಂದ ಒಟ್ಟಾರೆ ಮೀಸಲಾತಿ ಸುಪ್ರೀಂ ಕೋರ್ಟ್ ವಿಧಿಸಿರುವ ಪ್ರಮಾಣ ಶೇ 50% ಮಿತಿಯನ್ನು ಮೀರಲಿದ್ದು, ಶೇ 62% ಇರಲಿದೆ.
- ಹೊಸ ಮಸೂದೆಯು ರಾಷ್ಟ್ರಪತಿಗಳ ಅನುಮೋದನೆ ಪಡೆದ ನಂತರ ಕಾನೂನು ಆಗಿ ಜಾರಿಗೆ ಬರಲಿದೆ. ಆದರೆ ಮೀಸಲಾತಿ ಪ್ರಮಾಣ ಶೇ 50% ಮೀರಿರುವ ಕಾರಣ ಮಸೂದೆಯನ್ನು ನ್ಯಾಯಾಂಗ ಪರಾಮರ್ಶೆಯಿಂದ ರಕ್ಷಿಸುವ ಸಲುವಾಗಿ ಸಂವಿಧಾನದ 9ನೇ ಭಾಗದಡಿ ಸೇರಿಸಲು ತೆಲಂಗಣ ಸರ್ಕಾರ ಕೇಂದ್ರ ಸರ್ಕಾರದ ಮೊರೆ ಹೋಗಿದೆ.
- ತಮಿಳುನಾಡು ಹಾಗೂ ಜಾರ್ಖಂಡ್ ರಾಜ್ಯಗಳಲ್ಲಿ ಈಗಾಗಲೇ ಮೀಸಲಾತಿ ಪ್ರಮಾಣ ಶೇ 50% ಮೀರಿರುವುದು ಕಾಣಬಹುದಾಗಿದೆ.