ಕಬ್ಬಿಣ ಭರಿತ ಕ್ಷುದ್ರಗ್ರಹ “16 ಸೈಕ್” ಅಧ್ಯಯನಕ್ಕೆ ಮಿಷನ್ ಆರಂಭಿಸಲಿರುವ ನಾಸಾ

ನ್ಯಾಷನಲ್ ಏರೋನಾಟಿಕ್ಸ್ ಅಂಡ್ ಸ್ಪೇಸ್ ಅಡ್ಮಿನಿಸ್ಟ್ರೇಷನ್ (ನಾಸಾ) ಕಬ್ಬಿಣ ಭರಿತ ಕ್ಷುದ್ರಗ್ರಹ “16 ಸೈಕ್ (16 Psyche)” ಬಗ್ಗೆ ಅಧ್ಯಯನ ನಡೆಸಲು ಮಿಷನ್ ಆರಂಭಿಸಲಿದೆ. ಈ ಮಿಷನ್ ನ ಅಂಗವಾಗಿ ನಾಸಾ 2023ರ ವೇಳಗೆ ನೌಕೆಯೊಂದನ್ನು ಉಡಾಯಿಸಲಿದ್ದು, 2030ರ ವೇಳೆಗೆ ಸೈಕ್ ಕ್ಷುದ್ರಗ್ರಹವನ್ನು ಈ ನೌಕೆ ತಲುಪಲಿದೆ. ಈ ಕ್ಷುದ್ರಗ್ರಹದಲ್ಲಿರುವ ಖನಿಜ ಸಂಪತ್ತು ವಿಶ್ವದ ಆರ್ಥಿಕತೆ ಮೌಲ್ಯಗಿಂತ 100 ಸಾವಿರ ಪಟ್ಟು ಹೆಚ್ಚು ಎನ್ನಲಾಗಿದೆ.

ಪ್ರಮುಖಾಂಶಗಳು:

  • ಸೈಕ್ ಕ್ಷುದ್ರಗ್ರಹ ಸುಮಾರು 125 ಮೈಲಿಯಷ್ಟು ವ್ಯಾಸವನ್ನು ಹೊಂದಿದ್ದು, ಕಬ್ಬಿಣ ಮತ್ತು ನಿಕ್ಕಲ್ ಲೋಹಗಳಿಂದ ಹೇರಳವಾಗಿದೆ.
  • ನಾಸಾ ಕಳುಹಿಸಲಿರುವ ಬಾಹ್ಯಕಾಶ ನೌಕೆಯು ಕ್ಷುದ್ರಗ್ರಹದ ಮೇಲೆ 16 ಪರೀಕ್ಷಾರ್ಥ ಪ್ರಯೋಗಗಳನ್ನು ನಡೆಸಲಿದೆ. ಆ ಮೂಲಕ ಕ್ಷುದ್ರಗ್ರಹದ ಇತಿಹಾಸ ಮತ್ತು ಸಂಯೋಜನೆಯ ಬಗ್ಗೆ ಸಂಪೂರ್ಣವಾಗಿ ಅಧ್ಯಯನ ನಡೆಸಲಿದೆ.
  • ಇದರಿಂದ ದೊರೆಯಲಿರುವ ಮಾಹಿತಿಯಿಂದ ಖಗೋಳಶಾಸ್ತ್ರ್ಞರಿಗೆ ಗ್ರಹಗಳ ರಚನೆ ಹಾಗೂ ಗ್ರಹಗಳ ಆರಂಭಿಕ ಕಾಲದ ಬಗ್ಗೆ ಮತ್ತಷ್ಟು ಅಧ್ಯಯನ ನಡೆಸಲು ಸಾಧ್ಯವಾಗಲಿದೆ.
  • ವಿಜ್ಞಾನಿಗಳ ಪ್ರಕಾರ ಸೈಕ್ ಕ್ಷುದ್ರಗ್ರಹ ಒಂದು “ಪ್ರೊಟೊಪ್ಲಾನೆಟ್” ಎಂದು ಭಾವಿಸಲಾಗಿದ್ದು, ಮುಂದೊಂದು ದಿನ ಹೊಸ ಗ್ರಹವೆಂದು ಪರಿಗಣಿಸಬಹುದು ಎನ್ನಲಾಗಿದೆ.

ಭೂಸ್ವಾಧೀನ ಪ್ರಕರಣ ಇತ್ಯಾರ್ಥಗೊಳಿಸಲು ಪ್ರತ್ಯೇಕ ಪ್ರಾಧಿಕಾರ ರಚನೆ

ಭೂಸ್ವಾಧೀನ ಕಾಯ್ದೆಯನ್ವಯ ಭೂಸ್ವಾಧೀನ ಕುರಿತ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಗೊಳಿಸಲು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಭೂಸ್ವಾಧೀನ, ಪುನಶ್ಚೇತನ ಮತ್ತು ಪುನರ್ವಸತಿ ಪ್ರಾಧಿಕಾರವನ್ನು ರಾಜ್ಯ ಸರ್ಕಾರ ರಚಿಸಿದೆ. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನ್ಯಾಯಯುತ ಪರಿಹಾರ ಮತ್ತು ಪಾರದರ್ಶಕ ಭೂಸ್ವಾಧೀನ, ಪುನಶ್ಚೇತನ ಮತ್ತು ಪುನರ್ವಸತಿ ಕಾಯ್ದೆ-2013ರ ಅನ್ವಯ ಪ್ರಾಧಿಕಾರಗಳನ್ನು ರಚಿಸಲಾಗಿದೆ. ಆ ಮೂಲಕ ಇನ್ನು ಮುಂದೆ ಭೂಸ್ವಾಧೀನ ಪ್ರಕರಣಗಳನ್ನು ಈ ಪ್ರಾಧಿಕಾರಗಳು ಇತ್ಯರ್ಥಗೊಳಿಸಲಿವೆ. ರಾಜ್ಯದಲ್ಲಿ ಭೂಸ್ವಾಧೀನ ಪ್ರಕ್ರಿಯೆ ಕೈಗೊಳ್ಳಲು ಪೂರ್ವಸಿದ್ಧತೆಗಳನ್ನು ಸರ್ಕಾರ ಬಹುತೇಕ ಪೂರ್ಣಗೊಳಿಸಿದಂತಾಗಿದೆ. ಆಯಾ ಜಿಲ್ಲೆಯ ಒಂದನೇ ಹೆಚ್ಚುವರಿ ಮತ್ತು ಜಿಲ್ಲಾ ನ್ಯಾಯಾಧೀಶರನ್ನು ಪೀಠಾಸೀನ ಅಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದ್ದು, ಈ ಹುದ್ದೆ ಲಭ್ಯವಿಲ್ಲದ ಕಡೆ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಪ್ರಾಧಿಕಾರದ ಪೀಠಾಸೀನ ಅಧಿಕಾರಿಗಳಾಗಿರುತ್ತಾರೆ ಎಂದು ಕಂದಾಯ ಇಲಾಖೆ ಹೊರಡಿಸಿರುವ ಆದೇಶದಲ್ಲಿ ತಿಳಿಸಲಾಗಿದೆ.

ಇದರೊಂದಿಗೆ

ಇನ್ನು ಮುಂದೆ ಹೊಸ ಭೂಸ್ವಾಧೀನ ಕಾಯ್ದೆ ಪ್ರಕಾರವೇ ಪರಿಹಾರ ಮತ್ತು ಪುನರ್ವಸತಿ ಕಲ್ಪಿಸುವ ಕಾರ್ಯವನ್ನು ಹೊಸದಾಗಿ ರಚಿಸಿರುವ ಪ್ರಾಧಿಕಾರಗಳು ಮಾಡಲಿವೆ.

ಏನಿದು ಪ್ರಾಧಿಕಾರ?

ಯಾವುದೇ ಯೋಜನೆಗಳಿಗೆ ಸರ್ಕಾರ ಭೂಮಿ ಸ್ವಾಧೀನಪಡಿಸಿಕೊಳ್ಳುವ ಸಂದರ್ಭದಲ್ಲಿ ಭೂಮಿಯ ಮಾಲಿಕರಿಗೆ ಸೂಕ್ತ ಪರಿಹಾರ ಒದಗಿಸಬೇಕು ಅನೇಕ ಸಂದರ್ಭದಲ್ಲಿ ಭೂಸ್ವಾಧೀನ ಕುರಿತಾಗಿ ಉಂಟಾಗುವ ವಿವಾದಗಳಿಂದ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರುವುದರಿಂದ ಭೂಸ್ವಾಧೀನ ವಿಳಂಬವಾಗಿ ಯೋಜನೆಗಳ ಅನುಷ್ಟಾನದಲ್ಲಿ ಹಿನ್ನಡೆಯಾಗುತ್ತದೆ. ಇಂತಹ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಗೊಳಿಸಲು ಭೂಸ್ವಾಧೀನ, ಪುನಶ್ಚೇತನ ಮತ್ತು ಪುನರ್ವಸತಿ ಪ್ರಾಧಿಕಾರ ರಚಿಸುವ ಬಗ್ಗೆ 2013ರ ಕಾಯ್ದೆಯಲ್ಲಿ ಕೇಂದ್ರ ಪ್ರಸ್ತಾಪಿಸಿತ್ತು. ಈ ಕಾಯ್ದೆಯನ್ನು ರಾಜ್ಯದಲ್ಲೂ ಅನುಷ್ಠಾನಗೊಳಿಸಲು ನಿರ್ಧರಿಸಿದ್ದ ರಾಜ್ಯ ಸರ್ಕಾರ, 2015ರಲ್ಲಿ ನಿಯಮಾವಳಿಗಳನ್ನು ರೂಪಿಸಿತ್ತು. ಅದರಂತೆ ಈಗ ರಾಜ್ಯದ ಪ್ರತಿ ಜಿಲ್ಲೆಗಳಲ್ಲಿ ಪ್ರಾಧಿಕಾರಗಳನ್ನು ರಚಿಸಲಾಗಿದೆ.

ಪ್ರಾಧಿಕಾರದ ರಚನೆ:

  • ಪ್ರತಿ ಪ್ರಾಧಿಕಾರ ಒಬ್ಬ ಮುಖ್ಯಸ್ಥ ಅಥವಾ ಪೀಠಾಸೀನ ಅಧಿಕಾರಿಯನ್ನು ಒಳಗೊಂಡಿರಲಿದೆ. ಜಿಲ್ಲಾ ನ್ಯಾಯಾಧೀಶರಾಗಿರಬೇಕು ಅಥವಾ ಕನಿಷ್ಠ ಏಳು ವರ್ಷ ಕಾನೂನು ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದವರಾಗಿರಬೇಕು.
  • ಅವರನ್ನು ನೇಮಕ ಮಾಡುವಾಗ ರಾಜ್ಯ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಬೇಕು ಎಂದು ಕಾಯ್ದೆಯಲ್ಲಿ ಹೇಳಲಾಗಿತ್ತು. ಇದೀಗ ರಾಜ್ಯ ಸರ್ಕಾರ ಹೆಚ್ಚುವರಿ ಮತ್ತು ಜಿಲ್ಲಾ ನ್ಯಾಯಾಧೀಶರು ಅಥವಾ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರನ್ನು ಪೀಠಾಸೀನ ಅಧಿಕಾರಿಗಳಾಗಿ ನೇಮಕ ಮಾಡಿದೆ.
  • ಪ್ರಾಧಿಕಾರವು ಪೀಠಾಸೀನ ಅಧಿಕಾರಿ ಜತೆಗೆ ಒಬ್ಬ ರಿಜಿಸ್ಟ್ರಾರ್ ಅವರನ್ನು ಒಳಗೊಂಡಿರಲಿದೆ. ಅಲ್ಲದೇ ಪ್ರಾಧಿಕಾರಗಳ ಕಾರ್ಯಕಲಾಪಕ್ಕೆ ಅಗತ್ಯ ಸಿಬ್ಬಂದಿಗಳನ್ನು ಹೊಂದಿರಲಿದೆ.
  • ಪ್ರಾಧಿಕಾರ ರಚನೆ ಮತ್ತು ಅದಕ್ಕೆ ಪೀಠಾಸೀನ ಅಧಿಕಾರಿಗಳ ನೇಮಕ ವಿಚಾರದಲ್ಲಿ ಸರ್ಕಾರದ ತೀರ್ಮಾನವೇ ಅಂತಿಮವಾಗಿರಲಿದೆ.

ಪ್ರಾಧಿಕಾರದ ಅಧಿಕಾರ ವ್ಯಾಪ್ತಿ:

ಭೂಸ್ವಾಧೀನ ಸಂಬಂಧಿ ಅರ್ಜಿಗಳ ಸಂಪೂರ್ಣ ವಿಚಾರಣೆಯನ್ನು ಈ ಪ್ರಾಧಿಕಾರಗಳು ನಡೆಸಲಿವೆ. ಪ್ರಾಧಿಕಾರದ ತೀರ್ಪನ್ನು ಹೈಕೋರ್ಟನಲ್ಲಿ ಮಾತ್ರ ಪ್ರಶ್ನಿಸಬಹುದಾಗಿದೆ. ಈ ಪ್ರಾಧಿಕಾರಗಳನ್ನು ಹೊರತುಪಡಿಸಿ ಸುಪ್ರೀಂಕೋರ್ಟ್, ಹೈಕೋರ್ಟ್ ಅಲ್ಲದೇ ಇತರ ಯಾವುದೇ ನ್ಯಾಯಾಲಯಗಳು ಭೂಸ್ವಾಧೀನ ಸಂಬಂಧಿ ಅರ್ಜಿಗಳ ವಿಚಾರಣೆ ನಡೆಸುವಂತಿಲ್ಲ. ಹೈಕೋರ್ಟ್ ಕೆಳಹಂತದಲ್ಲಿ ಕೇವಲ ಪ್ರಾಧಿಕಾರ ಮಾತ್ರ ಇವುಗಳ ವಿಚಾರಣೆ ನಡೆಸಬೇಕಿದ್ದು, ಅದಕ್ಕಾಗಿ ಪ್ರಾಧಿಕಾರಕ್ಕೆ ನ್ಯಾಯಾಂಗದ ಅಧಿಕಾರವನ್ನೇ ಕಾಯ್ದೆಯಲ್ಲಿ ನೀಡಲಾಗಿದೆ.

ನವದೆಹಲಿಯಲ್ಲಿ ಎರಡನೇ ರೈಸಿನಾ ಡೈಲಾಗ್ ಸಮಾವೇಶ

ಕೇಂದ್ರ ವಿದೇಶಾಂಗ ವ್ಯವಹಾರ ಸಚಿವಾಲಯ ಆಯೋಜಿಸುವ ವಾರ್ಷಿಕ ರೈಸಿನಾ ಡೈಲಾಗ್ ನ ಎರಡನೇ ಆವೃತ್ತಿಗೆ ನವದೆಹಲಿಯಲ್ಲಿ ಚಾಲನೆ ನೀಡಲಾಯಿತು. “ದಿ ನ್ಯೂ ನಾರ್ಮಲ್: ಮಲ್ಟಿಲ್ಯಾಟರಲಿಸಂ ಇನ್ ಎ ಮಲ್ಟಿಪೊಲರ್ ವರ್ಲ್ಡ್” ಇದು ಈ ವರ್ಷದ ಧ್ಯೇಯವಾಕ್ಯ. ಈ ಮಹತ್ವಕಾಂಕ್ಷಿ ಭೌಗೋಳಿಕ ರಾಜಕೀಯ ಸಮಾವೇಶಕ್ಕೆ ಪ್ರಧಾನಿ ನರೇಂದ್ರ ಮೋದಿರವರು ಚಾಲನೆ ನೀಡಿದರು. 65 ದೇಶಗಳ ಪ್ರತಿನಿಧಿಗಳು ಸಮಾವೇಶದಲ್ಲಿ ಭಾಗವಹಿಸಿದ್ದರು.

ಪ್ರಧಾನಿ ಮೋದಿ ಭಾಷಣದ ಪ್ರಮುಖಾಂಶಗಳು:

  • ಪಾಕಿಸ್ತಾನ ಮತ್ತು ಭಯೋತ್ಪಾದನೆ: ಭಾರತದ ಜತೆಗೆ ಮಾತುಕತೆ ನಡೆಸಬೇಕು ಅಂದರೆ ಪಾಕಿಸ್ತಾನವು ಭಯೋತ್ಪಾದನೆಯಿಂದ ದೂರವಾಗಲೇಬೇಕು. ಭಾರತವೊಂದೇ ಶಾಂತಿಯ ಪಥದಲ್ಲಿ ನಡೆಯಲು ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಸಮಾವೇಶದಲ್ಲಿ ಹೇಳಿದರು.
  • ಶಾಂತಿಯುತ ದಕ್ಷಿಣ ಏಷ್ಯಾ: ದಕ್ಷಿಣ ಏಷ್ಯಾ ಹಾಗೂ ನೆರೆಯ ರಾಷ್ಟ್ರಗಳೊಂದಿಗೆ “ಶಾಂತಿ ಹಾಗೂ ಸೌಹಾರ್ದತೆ” ಕಾಪಾಡಲು ಭಾರತ ಸದಾ ಬದ್ದ.
  • ಚೀನಾ: ಭಾರತ: ಚೀನಾ ಎರಡೂ ರಾಷ್ಟ್ರಗಳು ಪರಸ್ಪರ ಹಿತಾಸಕ್ತಿಗಳನ್ನು ಗೌರವಿಸಬೇಕು. ವ್ಯಾಪಾರ ಮತ್ತು ವಾಣಿಜ್ಯ ಕ್ಷೇತ್ರದಲ್ಲಿ ಚೀನಾಗೆ ಭಾರತದಲ್ಲಿ ಸಾಕಷ್ಟು ಅವಕಾಶವಿದೆ ಆದರೆ ದಕ್ಷಿಣ ಚೀನಾ ಸಮುದ್ರದ ಮೇಲೆ ಸಾರ್ವಭೌಮತ್ವ ಸಾಧಿಸಲು ಚೀನಾ ಒತ್ತಡ ಹೇರುತ್ತಿರುವುದು ಸಾಧುವಲ್ಲ.
  • ಸಿಪಿಇಸಿ: ಮಹತ್ವಕಾಂಕ್ಷಿ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ ಪಾಕ್ ಆಕ್ರಮಿತ ಕಾಶ್ಮೀರದ ಮೂಲಕ ಹಾದು ಹೋಗುವುದರಿಂದ ಸಾರ್ವಭೌಮತ್ವ ಅತಿಕ್ರಮಣವಾಗುವುದಿಲ್ಲ.
  • ಅಮೆರಿಕ: ಡೋನಾಲ್ಡ್ ಟ್ರಂಪ್ ನೇತೃತ್ವದಲ್ಲಿ ಭಾರತ ಮತ್ತು ಅಮೆರಿಕ ನಡುವಿನ ದ್ವಿಪಕ್ಷೀಯ ಸಂಬಂಧ ಮತ್ತಷ್ಟು ಸುಧಾರಿಸಲು ಶ್ರಮಿಸಲಾಗುವುದು.

ರೈಸಿನಾ ಡೈಲಾಗ್:

  • ರೈಸಿನಾ ಡೈಲಾಗ್ ಸಮಾವೇಶ ನವದೆಹಲಿಯಲ್ಲಿ ನಡೆಯುವ ವಾರ್ಷಿಕ ಸಮಾವೇಶ. ಭೌಗೋಳಿಕ ರಾಜಕೀಯ ಮತ್ತು ಭೌಗೋಳಿಕ ಆರ್ಥಿಕತೆಗೆ ಸಂಬಂಧಿಸಿದಂತೆ ಭಾರತ ನಡೆಸುವ ಪ್ರಮುಖ ಸಮಾವೇಶ ಇದಾಗಿದೆ.
  • ಕೇಂದ್ರ ವಿದೇಶಾಂಗ ಸಚಿವಾಲಯ ಹಾಗೂ ಅಬ್ಸರ್ವರ್ ರಿಸರ್ಚ್ ಫೌಂಡೇಷನ್ ಎಂಬ ಸ್ವತಂತ್ರ ಚಿಂತಕರ ಚಾವಡಿ ಈ ಸಮಾವೇಶವನ್ನು ಆಯೋಜಿಸುತ್ತಿವೆ.
  • ನವದೆಹಲಿಯಲ್ಲಿರುವ ರೈಸಿನಾ ಹಿಲ್ ನಲ್ಲಿ ಈ ಸಮಾವೇಶ ನಡೆಯುವ ಕಾರಣ ಇದಕ್ಕೆ ರೈಸಿನಾ ಡೈಲಾಗ್ ಎಂದು ಹೆಸರಿಡಲಾಗಿದೆ.
  • ಈ ಸಮಾವೇಶದ ಮೊದಲ ಆವೃತಿ ಮಾರ್ಚ್ 2016ರಲ್ಲಿ ನಡೆದಿತ್ತು. “ಏಷ್ಯಾ: ರಿಜನಲ್ ಅಂಡ್ ಗ್ಲೋಬಲ್ ಕಮ್ಯೂನಿಟಿ” ಮೊದಲ ಸಮಾವೇಶದ ಧ್ಯೇಯವಾಕ್ಯವಾಗಿತ್ತು. ಸಿಂಗಾಪುರದ “ಶಾಂಗ್ರಿ ಲಾ ಡೈಲಾಗ್” ಮಾದರಿಯಲ್ಲೆ ಈ ಸಮಾವೇಶವನ್ನು ಆಯೋಜಿಸಲಾಗುತ್ತಿದೆ.

ಅಂತಾರಾಷ್ಟ್ರೀಯ ಲಸಿಕೆ ಸಂಸ್ಥೆಯಲ್ಲಿ ಭಾರತದ ಸದಸ್ಯತ್ವಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ

ಅಂತಾರಾಷ್ಟ್ರೀಯ ಲಸಿಕೆ ಸಂಸ್ಥೆ(International Vaccine Institute)ಯ ಆಡಳಿತ ಮಂಡಳಿಯಲ್ಲಿ ಪೂರ್ಣ ಸದಸ್ಯತ್ವ ಪಡೆದುಕೊಳ್ಳುವ ಭಾರತದ ಪ್ರಸ್ತಾವನೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಈ ನಿರ್ಣಯದ ಮೂಲಕ ಭಾರತ ಪ್ರತಿ ವರ್ಷ 50,000 ಅಮೆರಿಕನ್ ಡಾಲರ್ ಅನ್ನು ಸಂಸ್ಥೆಗೆ ದೇಣಿಗೆಯಾಗಿ ನೀಡಲಿದೆ. ಅಂತಾರಾಷ್ಟ್ರೀಯ ಲಸಿಕೆ ಸಂಸ್ಥೆಯ ಕೇಂದ್ರ ಕಚೇರಿ ಸಿಯೊಲ್, ದಕ್ಷಿಣ ಕೊರಿಯಾದಲ್ಲಿದೆ.

ಹಿನ್ನಲೆ:

ಕೇಂದ್ರ ಸಚಿವ ಸಂಪುಟದ ಅನುಮೋದನೆಯ ಮೇರೆಗೆ ಭಾರತ 2007ರಲ್ಲಿ ಐವಿಐಗೆ ಸೇರ್ಪಡೆಗೊಂಡಿತು. ಅಂದಿನಿಂದ ಭಾರತ ಐವಿಐನ ಪ್ರಮುಖ ಪಾಲುದಾರಿಕೆ ದೇಶವಾಗಿದೆ. 2012 ರಲ್ಲಿ ಐವಿಐನ “ಬೋರ್ಡ್ ಆಫ್ ಟ್ರಸ್ಟಿ” ಹೊಸ ಆಡಳಿತ ಮಂಡಳಿ ರಚನೆಗೆ ಅಂಗೀಕರಿಸಿತ್ತು. ಹೊಸ ಆಡಳಿತ ಮಂಡಳಿಯ ನಿಯಮದಂತೆ ಸದಸ್ಯ ರಾಷ್ಟ್ರವು ಸಂಸ್ಥೆಯ ವಾರ್ಷಿಕ ಬಜೆಟ್ ಸ್ವಲ್ಪ ಭಾಗವನ್ನು ಭರಿಸಬೇಕು. ಅದರಂತೆ ಭಾರತ ಗ್ರೂಪ್-1 ಸದಸ್ಯ ರಾಷ್ಟ್ರವಾಗಿರುವ ಕಾರಣ ವಾರ್ಷಿಕ 50,000 ಅಮೆರಿಕನ್ ಡಾಲರ್ ಅನ್ನು ನೀಡಬೇಕಿದೆ.

ಅಂತಾರಾಷ್ಟ್ರೀಯ ಲಸಿಕೆ ಸಂಸ್ಥೆ:

  • ಅಂತಾರಾಷ್ಟ್ರೀಯ ಲಸಿಕೆ ಸಂಸ್ಥೆ ಒಂದು ಅಂತಾರಾಷ್ಟ್ರೀಯ ಲಾಭದಾಯಕವಲ್ಲದ ಸಂಸ್ಥೆಯಾಗಿದ್ದು, ಹೊಸ ಹಾಗೂ ಸುಧಾರಿತ ಲಸಿಕೆಗಳನ್ನು ಸಂಶೋಧಿಸುವ ಮೂಲಕ ಜನರನ್ನು ರಕ್ಷಿಸುವುದು ಅದರಲ್ಲೂ ಮಕ್ಕಳನ್ನು ಮಾರಕ ರೋಗಗಳಿಂದ ರಕ್ಷಿಸುವುದು ಇದರ ಉದ್ದೇಶ.
  • ವಿಶ್ವಸಂಸ್ಥೆಯ ಅಭಿವೃದ್ದಿ ಕಾರ್ಯಕ್ರಮದ ಅಂಗವಾಗಿ 1997ರಲ್ಲಿ ಐವಿಐ ಅನ್ನು ಸ್ಥಾಪಿಸಲಾಗಿದೆ.
  • ಪ್ರಸ್ತುತ ಅಂತಾರಾಷ್ಟ್ರೀಯ ಲಸಿಕೆ ಸಂಸ್ಥೆ 40 ಸದಸ್ಯ ರಾಷ್ಟ್ರಗಳನ್ನು ಒಳಗೊಂಡಿದೆ.

“ಜಾಗತಿಕ ಪ್ರತಿಭೆ ಸೂಚ್ಯಂಕ (Global Talent Index)” ಭಾರತಕ್ಕೆ 92ನೇ ಸ್ಥಾನ

ಜಾಗತಿಕ ಪ್ರತಿಭೆ ಸ್ಪರ್ಧಾತ್ಮಕ ಸೂಚ್ಯಂಕ-2017ರಲ್ಲಿ 118 ರಾಷ್ಟ್ರಗಳ ಪೈಕಿ 92ನೇ ಸ್ಥಾನವನ್ನು ಪಡೆದುಕೊಂಡಿದೆ. ಈ ಸೂಚ್ಯಂಕದಡಿ ಪ್ರತಿಭೆಗಾಗಿ ರಾಷ್ಟ್ರಗಳ ಸ್ಪರ್ಧಾತ್ಮಕ ಸಾಮರ್ಥ್ಯವನ್ನು ಅಳೆಯಲಾಗುತ್ತದೆ. ಗ್ಲೋಬಲ್ ಬ್ಯುಸಿನೆಸ್ ಸ್ಕೂಲ್ INSEAD ಈ ಸೂಚ್ಯಂಕವನ್ನು, ಅಡೆಕ್ಕೊ ಗ್ರೂಪ್ ಮತ್ತು ಸಿಂಗಪುರದ ಹ್ಯೂಮನ್ ಕ್ಯಾಪಿಟಲ್ ಲೀಡರ್ಶಿಪ್ ಇನ್ಸ್ಟಿಟ್ಯೂಟ್ ಪಾಲುದಾರಿಕೆಯೊಂದಿಗೆ ಹೊರತರುತ್ತಿದೆ.

ಪ್ರಮುಖಾಂಶಗಳು:

  • ಟಾಪ್ 10 ರಾಷ್ಟ್ರಗಳು: ಸ್ವಿಟ್ಜರ್ಲ್ಯಾಂಡ್ (1), ಸಿಂಗಾಪುರ (2), ಯುಕೆ (3), ಯುಎಸ್ (4), ಸ್ವೀಡನ್ (5), ಆಸ್ಟ್ರೇಲಿಯಾ (6), ಲಕ್ಸಂಬರ್ಗ್ (7), ಡೆನ್ಮಾರ್ಕ್ (8), ಫಿನ್ಲ್ಯಾಂಡ್ (9) ಮತ್ತು ನಾರ್ವೆ (10).
  • ಬ್ರಿಕ್ಸ್ ರಾಷ್ಟ್ರಗಳು: ಬ್ರಿಕ್ಸ್ ರಾಷ್ಟ್ರಗಳ ಪೈಕಿ ಭಾರತ ಅತ್ಯಂತ ಕಳಪೆ ಸಾಧನೆ ಮಾಡಿದೆ. ಚೀನಾ (54), ರಷ್ಯಾ (56), ದಕ್ಷಿಣ ಆಫ್ರಿಕಾ (67) ಮತ್ತು ಬ್ರೆಜಿಲ್ (81) ನೇ ಸ್ಥಾನದಲ್ಲಿವೆ.
  • ಪ್ರಸ್ತಕ ಸಾಲಿನ ಸೂಚ್ಯಂಕದಲ್ಲಿ ಭಾರತ ಕಳೆದ ಸೂಚ್ಯಂಕಕ್ಕಿಂದ 3 ಸ್ಥಾನ ಕುಸಿತ ಕಂಡಿದೆ. 2016 ರಲ್ಲಿ ಭಾರತ 89ನೇ ಸ್ಥಾನದಲ್ಲಿತ್ತು.
  • ವಿದೇಶಿ ಪ್ರತಿಭೆಯನ್ನು ಆಕರ್ಷಿಸುವುದು ಭಾರತದ ಮುಂದಿರುವ ಬಹು ದೊಡ್ಡ ಸವಾಲು. ನುರಿತ ಜನರು ದೊಡ್ಡ ಪ್ರಮಾಣದಲ್ಲಿ ವಲಸೆ ಹೋಗುತ್ತಿರುವುದು ಸಹ ಆತಂಕಕಾರಿ ವಿಷಯವಾಗಿದೆ.

4 Thoughts to “ಪ್ರಚಲಿತ ವಿದ್ಯಮಾನಗಳು-ಜನವರಿ-16,2017”

  1. ಧನ್ಯವಾದಗಳು ಸರ್

Leave a Comment

This site uses Akismet to reduce spam. Learn how your comment data is processed.