ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿದ ಸುಮಿತ್ ಭೋಸ್ ಸಮಿತಿ

ಸಾಮಾಜಿಕ ಆರ್ಥಿಕ ಮತ್ತು ಜಾತಿ ಜನಗಣತಿ ಸಿದ್ದಪಡಿಸಲು ರಚಿಸಲಾಗಿದ್ದ ಸುಮಿತ್ ಭೋಸ್ ನೇತೃತ್ವದ ತಜ್ಞರ ಸಮಿತಿ ತನ್ನ ವರದಿಯನ್ನು ಕೇಂದ್ರ ಗ್ರಾಮೀಣಭಿವೃದ್ದಿ ಸಚಿವಾಲಯಕ್ಕೆ ಸಲ್ಲಿಸಿದೆ.  ಸಮಿತ್ ಭೋಸ್ ರವರು ಮಾಜಿ ಹಣಕಾಸು ಕಾರ್ಯದರ್ಶಿ. ರಾಜ್ಯಗಳಿಗೆ ಸಂಪನ್ಮೂಲಗಳ ಹಂಚಿಕೆ ಮಾಡುವುದು ಹಾಗೂ ಸಾಮಾಜಿಕ ಆರ್ಥಿಕ ಮತ್ತು ಜಾತಿ ಜನಗಣತಿ ದತ್ತಾಂಶವನ್ನು ಆಧರಿಸಿ ವಿವಿಧ ಯೋಜನೆಗಳಿಗೆ ಫಲಾನುಭವಿಗಳನ್ನು ಗುರುತಿಸಲು ಸಮಿತಿಯನ್ನು ರಚಿಸಲಾಗಿತ್ತು. ಕೇಂದ್ರ ಗ್ರಾಮೀಣಭಿವೃದ್ದಿ ಸಚಿವಾಲಯ ಇನ್ನು ಮುಂದೆ ವಿವಿಧ ಯೋಜನೆಗಳಡಿ ಫಲಾನುಭವಿಗಳನ್ನು ಆಯ್ಕೆಮಾಡಲು ಸಾಮಾಜಿಕ ಆರ್ಥಿಕ ಮತ್ತು ಜಾತಿ ಜನಗಣತಿ ದತ್ತಾಂಶವನ್ನು ಬಳಸಿಕೊಳ್ಳಲಿದೆ. ಪ್ರಮುಖವಾಗಿ ಪ್ರಧಾನ ಮಂತ್ರಿ ಆವಾಸ್ ಯೋಜನೆ ಹಾಗೂ ದೀನ್ ದಯಾಳ್ ಅಂತ್ಯೋದಯ ಯೋಜನೆ (ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಯೋಜನೆ) ಫಲಾನುಭವಿಗಳ ಆಯ್ಕೆಗೆ ಮಾನದಂಡವಾಗಲಿದೆ.

ಸಮಿತಿಯ ಪ್ರಮುಖ ವೀಕ್ಷಣೆ:

  • ಸಾಮಾಜಿಕ ಆರ್ಥಿಕ ಮತ್ತು ಜಾತಿ ಜನಗಣತಿ ದತ್ತಾಂಶ ಹಾಗೂ ಟಿಐಎನ್ (TIN) ನಂಬರ್ ಬಳಕೆ ಸರ್ಕಾರದ ಪಾಲ್ಗೊಳ್ಳುವಿಕೆಯನ್ನು ಸುಧಾರಿಸಲಿದೆ ಹಾಗೂ ಇದರಿಂದ ಉತ್ತಮ ಫಲಿತಾಂಶ ಹೊರಬರಲಿದೆ.
  • ಆದಾಗ್ಯೂ ದೀರ್ಘಾವದಿಯಲ್ಲಿ ಸಾಮಾಜಿಕ ಆರ್ಥಿಕ ಮತ್ತು ಜಾತಿ ಜನಗಣತಿ ಒಂದನ್ನೆ ಅವಲಂಭಿಸಿವುದರಿಂದ ಸಾರ್ವಜನಿಕ ಸಂಪನ್ಮೂಲದ ಮೇಲೆ ಒತ್ತಡ ಬೀರುವ ಕಾರಣ ದತ್ತಾಂಶದ ಮೇಲೆ ನಿಯಮಿತವಾಗಿ ನಿಗಾವಹಿಸಬೇಕು.
  • ಸಾಮಾಜಿಕ ವಲಯ ಯೋಜನೆಗಳ ಅನುಷ್ಟಾನಕ್ಕೆ ಸಾಮಾಜಿಕ ಆರ್ಥಿಕ ಮತ್ತು ಜಾತಿ ಜನಗಣತಿ ದತ್ತಾಂಶ ತುಂಬಾ ಸಹಕಾರಿಯಾಗಲಿದೆ.
  • ಈ ದತ್ತಾಂಶದ ಬಳಕೆಯಿಂದ ಉತ್ತಮವಾದ ಬಜೆಟ್ ಯೋಜನೆ ಹಾಗೂ ವಿವಿಧ ಯೋಜನೆಗಳಿಗೆ ಸಮರ್ಪಕವಾಗಿ ಸಂಪನ್ಮೂಲಗಳ ಬಳಕೆ ಸಾಧ್ಯವಾಗಲಿದೆ.

62ನೇ ಫಿಲ್ಮ್ ಫೇರ್ ಪ್ರಶಸ್ತಿ: ಅಮೀರ್ ಖಾನ್ಗೆ ಉತ್ತಮ ನಟ ಪ್ರಶಸ್ತಿ

ಫಿಲ್ಮ್ ಫೇರ್ ನಿಯತಕಾಲಿಕೆಯ 62ನೇ ಜಿಯೋ ಫಿಲ್ಮ್ ಫೇರ್ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಮುಂಬೈನಲ್ಲಿ ವಿಜೃಂಭಣೆಯಿಂದ ನಡೆಯಿತು. 2016ರಲ್ಲಿ ತೆರೆಕಂಡ ಅತ್ಯುತ್ತಮ ಸಿನಿಮಾಗಳನ್ನು ಗುರುತಿಸುವ ಮೂಲಕ ಪ್ರಶಸ್ತಿಯನ್ನು ನೀಡಲಾಯಿತು. ಅಮೀರ್ ಖಾನ್ ಅಭಿನಯದ ದಂಗಲ್ ಚಿತ್ರ ವರ್ಷದ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಭಾಜನವಾಯಿತು. ನೀರ್ಜಾ ಮತ್ತು ಕಪೂರ್ ಅಂಡ್ ಸನ್ಸ್ ಚಿತ್ರಗಳು ತಲಾ ಐದು ಪ್ರಶಸ್ತಿಗಳನ್ನು ಗೆದ್ದುಕೊಳ್ಳುವ ಮೂಲಕ ಅತಿ ಹೆಚ್ಚು ಪ್ರಶಸ್ತಿಗಳನ್ನು ಗೆದ್ದ ಚಿತ್ರಗಳಾಗಿ ಹೊರಹೊಮ್ಮಿದವು.

ವಿವಿಧ ವಿಭಾಗದಲ್ಲಿ ಪ್ರಶಸ್ತಿ ಗೆದ್ದವರು:

  • ಅತ್ಯುತ್ತಮ ನಟ: ಅಮೀರ್ ಖಾನ್ (ದಂಗಲ್)
  • ಅತ್ಯುತ್ತಮ ನಟಿ: ಅಲಿಯಾ ಭಟ್ (ಉಡ್ತ ಪಂಜಾಬ್)
  • ಅತ್ಯುತ್ತಮ ಚಿತ್ರ: ದಂಗಲ್
  • ಅತ್ಯುತ್ತಮ ನಿರ್ದೇಶಕ: ನಿತೇಶ್ ತಿವಾರಿ (ದಂಗಲ್)
  • ಜೀವಮಾನ ಸಾಧನೆ ಪ್ರಶಸ್ತಿ: ಶತ್ರುಜ್ಞ ಸಿನ್ಹಾ
  • ಉದಯೋನ್ಮುಖ ನಿರ್ದೇಶಕ: ಅಶ್ವಿನಿ ಅಯ್ಯರ್ ತಿವಾರಿ

ತೀರ್ಪುಗಾರರ ಪ್ರಶಸ್ತಿ:

  • ಅತ್ಯುತ್ತಮ ಪೋಷಕ ನಟ: ರಿಷಿ ಕಪೂರ್ (ಕಪೂರ್ & ಸನ್ಸ್)
  • ಅತ್ಯುತ್ತಮ ಪೋಷಕ ನಟಿ: ಶಬಾನ ಅಜ್ಮೀ (ನೀರ್ಜಾ)
  • ಉದಯೋನ್ಮುಖ ನಟ: ದಿಲ್ಜಿತ್ ದೊಸನ್ಜ (ಉಡ್ತ ಪಂಜಾಬ್)
  • ಉದಯೋನ್ಮುಖ ನಟಿ: ರಿತಿಕಾ ಸಿಂಗ್ (ಸಾಲ ಖದೂಸ್)
  • ಅತ್ಯುತ್ತಮ ಗಾಯಕ: ಅರ್ಜಿತ್ ಸಿಂಗ್ (ಏ ದಿಲ್ ಹೈ ಮುಷ್ಕಿಲ್)
  • ಅತ್ಯುತ್ತಮ ಗಾಯಕಿ: ನೇಹಾ ಬಾಸಿನ್ (ಸುಲ್ತಾನ್)
  • ಅತ್ಯುತ್ತಮ ಸಂಗೀತಾ ನಿರ್ದೇಶಕ: ಪ್ರೀತಮ್ (ಏ ದಿಲ್ ಹೈ ಮುಷ್ಕಿಲ್)

10 ಉಪಗ್ರಹಗಳನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದ ಸ್ಪೇಸ್ ಎಕ್ಸ್ ಫಾಲ್ಕನ್ ರಾಕೆಟ್-9

ಅಮೆರಿಕ ಮೂಲದ ರಾಕೆಟ್ ತಯಾರಿಕೆ ಸಂಸ್ಥೆ ಸ್ಪೇಸ್ ಎಕ್ಸ್ (SpaceX) ತನ್ನ ಫಾಲ್ಕನ್ ರಾಕೆಟ್-9 ಮೂಲಕ 10 ಉಪಗ್ರಹಗಳ ಸಮೂಹವನ್ನು ಕಕ್ಷೆಗೆ ಯಶಸ್ವಿಯಾಗಿ ಸೇರ್ಪಡೆಗೊಳಿಸಿದೆ. ಈ ಉಪಗ್ರಹಗಳನ್ನು ಎರಡು ಹಂತದ ಫಾಲ್ಕನ್ ರಾಕೆಟ್-9 ಮೂಲಕ ಕ್ಯಾಲಿಪೋರ್ನಿಯಾದ ವಂಡೆನ್ಬರ್ಗ್ ಏರ್ ಫೋರ್ಸ್ ಬೇಸ್ ನಿಂದ ಯಶಸ್ವಿಯಾಗಿ ಉಡಾಯಿಸಲಾಗಿದೆ. ರಾಕೆಟ್ ಹಾರಿಬಿಟ್ಟ ಅರ್ಧ ಗಂಟೆ ಅವಧಿಯಲ್ಲಿ ಉಪಗ್ರಹಗಳನ್ನು ನಿಗಧಿತ ಕಕ್ಷೆಗೆ ಸೇರಿಸಲಾಯಿತು.

ಪ್ರಮುಖಾಂಶಗಳು:

  • ಈ ಉಪಗ್ರಹಗಳ ಸಮೂಹವನ್ನು ಮ್ಯಾಕ್ ಲೀನ್ (McLean), ವರ್ಜೀನಿಯಾ ಮೂಲದ ಇರಿಡಿಯಂ ಯೋಜನೆಯ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಉಪಗ್ರಹಗಳ ಸಮೂಹದ ಬದಲಾಗಿ ಹಾರಿಸಲಾಗಿದೆ. ಜಾಗತಿಕವಾಗಿ ವಾಯ್ಸ್ ಮತ್ತು ಡಾಟಾ ಸಂಪರ್ಕವನ್ನು ಇದು ಒದಗಿಸಲಿದೆ.
  • ಸೆಪ್ಟೆಂಬರ್ 2016ರಲ್ಲಿ ಫ್ಲೋರಿಡಾ ಉಡಾವಣಾ ಕೇಂದ್ರದಿಂದ ಉಡಾಯಿಸಿದ ರಾಕೆಟ್ ವಿಫಲವಾದ ನಂತರ ಸ್ಪೇಸ್ ಎಕ್ಸ್ ಯಶಸ್ವಿಯಾಗಿ ನಿರ್ವಹಿಸಿದ ಮೊದಲ ಯೋಜನೆ ಇದಾಗಿದೆ.

ಸ್ಪೇಸ್ ಎಕ್ಸ್:

  • ಸ್ಪೇಸ್ ಎಕ್ಸ್ (Space Exploration Technologies Corporation) ಒಂದು ಏರೋಸ್ಪೆಸ್ ಉತ್ಪಾದನೆ ಹಾಗೂ ಸ್ಪೆಸ್ ಟ್ರಾನ್ಸ್ ಪೋರ್ಟ್ ಸರ್ವೀಸ್ ಸಂಸ್ಥೆಯಾಗಿದೆ. ಇದರ ಕೇಂದ್ರ ಕಚೇರಿ ಹಥೋರ್ನೆ, ಕ್ಯಾಲಿಫೋರ್ನಿಯಾದಲ್ಲಿದೆ.
  • ಸ್ಪೇಸ್ ಎಕ್ಸ್ ಅನ್ನು 2002ರಲ್ಲಿ ಟೆಲ್ಸ ಮೋಟಾರ್ ಸಿಇಓ ಹಾಗೂ ಮಾಜಿ ಪೇಪಾಲ್ ಉದ್ಯಮಿ ಎಲೊನ್ ಮಸ್ಕ್ ರವರು ಸ್ಥಾಪಿಸಿದರು. ಬಾಹ್ಯಕಾಶ ಯಾನ ವೆಚ್ಚವನ್ನು ಕಡಿಮೆಗೊಳಿಸುವುದು ಹಾಗೂ ಮಂಗಳಗ್ರಹದ ಮೇಲೆ ವಸಾಹತುಗಾರಿಕೆಯನ್ನು ಶಕ್ತಗೊಳಿಸುವ ಉದ್ದೇಶದೊಂದಿಗೆ ಸಂಸ್ಥೆಯನ್ನು ಸ್ಥಾಪಿಸಲಾಗಿದೆ.
  • ಸ್ಪೇಸ್ ಎಕ್ಸ್ ಸಂಸ್ಥೆ ಫಾಲ್ಕಾನ್ ರಾಕೆಟ್-1 ಹಾಗೂ ಫಾಲ್ಕಾನ್ ರಾಕೆಟ್-9 ಅನ್ನು ಅಭಿವೃದ್ದಿಪಡಿಸಿದ್ದು, ಈ ಎರಡು ರಾಕೆಟ್ ಗಳು ಮರುಬಳಕೆ ಮಾಡಬಹುದಾಗಿದೆ. ಅಲ್ಲದೇ ಅಂತಾರಾಷ್ಟ್ರೀಯ ಬಾಹ್ಯಕಾಶ ಕೇಂದ್ರಕ್ಕೆ ಸರಕು ಪೂರೈಕೆ ಮಾಡಲು ಡ್ರಾಗನ್ ಬಾಹ್ಯಕಾಶ ನೌಕೆಯನ್ನು ಸಹ ಇದು ಅಭಿವೃದ್ದಿಪಡಿಸಿದೆ.

ಭಾರತ ಮತ್ತು ಪೋರ್ಚುಗಲ್ ಮಧ್ಯೆ ಆರು ಒಪ್ಪಂದಕ್ಕೆ ಸಹಿ

ಭಾರತ ಮತ್ತು ಪೋರ್ಚುಗಲ್ ಆರು ಪ್ರಮುಖ ಒಪ್ಪಂದಗಳಿಗೆ ಸಹಿ ಮಾಡಿವೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಪೋರ್ಚುಗಲ್ ಪ್ರಧಾನಿ ಆಂಟೊನಿಯೊ ಕೋಸ್ಟ ಅವರ ನಡುವೆ ನಡೆದ ದ್ವಿಪಕ್ಷೀಯ ಮಾತುಕತೆಯ ನಂತರ ಈ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ.

ಸಹಿ ಹಾಕಲಾದ ಒಪ್ಪಂದಗಳು:

  • ರಕ್ಷಣಾ ಸಹಕಾರ ಕುರಿತಾಗಿ ಉಭಯ ದೇಶಗಳ ನಡುವೆ ಒಪ್ಪಂದಕ್ಕೆ ಸಹಿಹಾಕಲಾಗಿದೆ.
  • ಸಹಕಾರ, ವಾಣಿಜ್ಯ, ಬಂಡವಾಳ ಹೂಡಿಕೆ, ವ್ಯಾವಹಾರಿಕ ಸಹಭಾಗಿತ್ವ, ಮಾಹಿತಿ ತಂತ್ರಜ್ಞಾನ ಮತ್ತು ನವೀಕರಿಸಬಹುದಾದ ಶಕ್ತಿ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರಕ್ಕಾಗಿ ಎರಡೂ ದೇಶಗಳು ಒಪ್ಪಂದಕ್ಕೆ ಸಹಿ ಮಾಡಿವೆ. ಭಯೋತ್ಪಾದನೆ ನಿಗ್ರಹ, ಮಸೂದ್ ಅಜರ್ನನ್ನು ಉಗ್ರರ ಪಟ್ಟಿಗೆ ಸೇರಿಸುವಲ್ಲಿ ಚೀನಾ ಅಡ್ಡಗಾಲು ಹಾಕುತ್ತಿರುವ ಬಗ್ಗೆ ಮಾತುಕತೆ ವೇಳೆ ಚರ್ಚಿಸಲಾಗಿದೆ ಎಂದು ಅವರು ತಿಳಿಸಿದರು. ‘ಭಯೋತ್ಪಾದನೆಯನ್ನು ನಿಗ್ರಹಿಸಲು ಜಾಗತಿಕ ಸಮುದಾಯವು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ‘1267 ಸಮಿತಿ’ಯ ನಿಯಮಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರಬೇಕು’ ಎಂದು ಮೋದಿ ಮತ್ತು ಕೋಸ್ಟಾ ಅವರು ಹೊರಡಿಸಿದ ಜಂಟಿ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.

‘ಭಾರತವು ಕ್ಷಿಪಣಿ ತಂತ್ರಜ್ಞಾನ ನಿಯಂತ್ರಣ ವ್ಯವಸ್ಥೆಗೆ ಸೇರಲು ಬೆಂಬಲ ನೀಡಿದ್ದಕ್ಕಾಗಿ ಹಾಗೂ ಭಾರತ ಪರಮಾಣು ಪೂರೈಕೆದಾರರ ಗುಂಪನ್ನು ಸೇರಲು ಬೆಂಬಲ ನೀಡುತ್ತಿರುವುದಕ್ಕಾಗಿ ಪೋರ್ಚುಗಲ್ಗೆ ಧನ್ಯವಾದಗಳು’ ಎಂದು ಪ್ರಧಾನಿ ಮೋದಿ ಹೇಳಿದರು.

“ SEZ India” ಮೊಬೈಲ್ ಆ್ಯಪ್ ಬಿಡುಗಡೆಗೊಳಿಸಿದ ವಾಣಿಜ್ಯ ಸಚಿವಾಲಯ

ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ ಸಚಿವಾಲಯ “SEZ India” ಮೊಬೈಲ್ ಆ್ಯಪ್ ಅನ್ನು ಬಿಡುಗಡೆಗೊಳಿಸಿದೆ. ಸಚಿವಾಲಯದ ಇ-ಆಡಳಿತ ಅಭಿಯಾನದ ಅಂಗವಾಗಿ ಈ ಆ್ಯಪ್ ಅನ್ನು ಬಿಡುಗಡೆಗೊಳಿಸಲಾಗಿದ್ದು, ವಿಶೇಷ ಆರ್ಥಿಕ ವಲಯ ಘಟಕ ಹಾಗೂ ಅಭಿವೃದ್ದಿದಾರರಿಗೆ ನೆರವಾಗಲು ಈ ಆ್ಯಪ್ ಸಹಾಯವಾಗಲಿದೆ. ಈ ಆ್ಯಪ್ ಬಳಸಿ ಎಸ್ಇಝೆಡ್ ಘಟಕಗಳ ಅಭಿವೃದ್ದಿದಾರರು ಮಾಹಿತಿ ಹಾಗೂ ತಮ್ಮ ವಹಿವಾಟನ್ನು ಸುಲಭವಾಗಿ ಆನ್ ಲೈನ್ ಮೂಲಕ ಗುರುತಿಸಬಹುದಾಗಿದೆ.

ಈ ಆ್ಯಪ್ ನಲ್ಲಿ ನಾಲ್ಕು ವಿಭಾಗಗಳಿವೆ:

  • ಎಸ್ಇಝೆಡ್ ಮಾಹಿತಿ: ಇದರಡಿ ವಿಶೇಷ ಆರ್ಥಿಕ ವಲಯ-2005 ಕಾಯಿದೆಯ ಸಂಪೂರ್ಣ ಮಾಹಿತಿ, ಎಸ್ಇಝೆಡ್ ನಿಯಮ-2006, ಎಸ್ಇಝೆಡ್ ಸಂಬಂಧಿಸಿದ ಸಂಪೂರ್ಣ ಮಾಹಿತಿ ಹಾಗೂ ಸಚಿವಾಲಯದ ಸುತ್ತೋಲೆಗಳನ್ನು ನೋಡಬಹುದು.
  • ವ್ಯಾಪಾರ ಮಾಹಿತಿ: ಈ ವಿಭಾಗದಲ್ಲಿ ಫಾರಿಸ್ ಟ್ರೇಡ್ ಪಾಲಿಸಿ, ಕಸ್ಟಮ್ & ಎಕ್ಸೈಸ್ ಅಧಿಸೂಚನೆ ಸಂಬಂಧಿಸಿದ ಮಾಹಿತಿ ಇದರಲ್ಲಿ ಲಭ್ಯವಿರಲಿದೆ.
  • ಸಂಪರ್ಕ ಮಾಹಿತಿ: ಎಸ್ಇಝೆಡ್ ಗೆ ಸಂಬಂಧಿಸಿದ ಆಯುಕ್ತರ ಕಚೇರಿ ಸಂಪರ್ಕ ಮಾಹಿತಿ, ಡೈರೆಕ್ಟರ್ ಜನರಲ್ ರವರ ಸಂಪರ್ಕ ಮಾಹಿತಿ ಸೇರಿದಂತೆ ಸಂಬಂಧಿಸಿದವರ ಮಾಹಿತಿ ದೊರೆಯಲಿದೆ.
  • ಎಸ್ಇಝೆಡ್ ಆನ್ ಲೈನ್ ವಹಿವಾಟು: ಆಮದು/ರಫ್ತುದಾರರ ಬಿಲ್ ಸೇರಿದಂತೆ ವಹಿವಾಟಿಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ಆನ್ ಲೈನ್ ನಲ್ಲಿ ಸಿಗಲಿದೆ.

ಕರ್ನಾಟಕದ ಮೂಲದ ಕಿರಣ್ ಭಟ್ ಗೆ  ತಾಂತ್ರಿಕ ಆಸ್ಕರ್ ಪ್ರಶಸ್ತಿ

ಕರ್ನಾಟಕದ ಮೂಡಬಿದಿರೆ ಮೂಲದ ಕಿರಣ್ ಭಟ್ ಹಾಲಿವುಡ್ ಜಗತ್ತಿನ ಸಿನಿಮಾ ಕ್ಷೇತ್ರದಲ್ಲಿನ ವಿಶಿಷ್ಟ ತಾಂತ್ರಿಕ ಸಾಧನೆ ಗಾಗಿ ಪ್ರತಿಷ್ಠಿತ ತಾಂತ್ರಿಕ ಆಸ್ಕರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕಿರಣ್ ಭಟ್ ರವರು ಅಭಿವೃದ್ಧಿಗೊಳಿಸಿರುವ “ಐಎಲ್‌ಎಂ ಫೇಸಿಯಲ್ ಪರ್ ಫಾರ್ಮೆನ್ಸ್-ಕ್ಯಾಪcರ್ ಸಾಲ್ವಿಂಗ್ ಸಿಸ್ಟಮ್’ಗಾಗಿ ಈ ಪ್ರಶಸ್ತಿ ಲಭಿಸಿದೆ. ಫೆ.11ರಂದು ಅಮೆರಿಕದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು.

ಪ್ರಮುಖಾಂಶಗಳು:

  • ಕಿರಣ್ ಭಟ್ ಅಭಿವೃದ್ಧಿಗೊಳಿಸಿದ “ಐಎಲ್‌ಎಂ ಫೇಸಿಯಲ್ ಪರ್ಫಾರ್ಮೆನ್ಸ್-ಕ್ಯಾಪರ್ ಸಾಲ್ವಿಂಗ್ ಸಿಸ್ಟಮ್’ಗಾಗಿ ಆಸ್ಕರ್ ಲಭಿಸಿದೆ.
  • ಇವರ ತಂತ್ರಜ್ಞಾನವನ್ನು ಸ್ಟಾರ್ವಾರ್-7, ವಾರ್ಕ್ರಾಫ್ಟ್, ಎವೆಂಜರ್, ಸ್ಟಾರ್ವಾರ್ ರೋಗ್-1 ಮುಂತಾದ ಹಾಲಿವುಡ್ ಚಿತ್ರಗಳಲ್ಲಿ ಬಳಸಲಾಗಿದೆ.
  • ಈ ಸಾಧನೆಯನ್ನು ಗುರುತಿಸಿರುವ ಅಕಾಡೆಮಿ ಆಫ್ ಮೋಶನ್ ಪಿಕ್ಚರ್ ಆರ್ಟ್ಸ್ ಆಯಂಡ್ ಸೈನ್ಸ್, ಫೆ. 11ರಂದು ಬೆವೆರ್ಲಿ ವಿಲ್ಶೈರ್ನಲ್ಲಿ ಆಸ್ಕರ್ ಪ್ರಶಸ್ತಿ ಪ್ರಧಾನ ಮಾಡುತ್ತಿದೆ. ಈವರೆಗೆ 7
    ಮಂದಿ ಭಾರತೀಯರು ಮಾತ್ರ ಆಸ್ಕರ್ಗೆ ಪಾತ್ರರಾಗಿದ್ದಾರೆ.

ಕಿರಣ್ ಭಟ್ ಬಗ್ಗೆ:

  • ಕಿರಣ್ ಭಟ್ ಅವರು ಮೂಲತಃ ಕರ್ನಾಟಕದವರು. ಅವರ ತಂದೆ ಮೂಡಬಿದಿರೆ ಸಮೀಪದ ಕಡಂದಲೆ ಶ್ರೀನಿವಾಸ ಭಟ್. ತಾಯಿ ಕಲ್ಯಾಣಪುರ ಮೂಲದ ಜಯಶ್ರೀ. ಭಟ್ ಅವರ ಮೂಲ ಕುಟುಂಬ ಕಡಂದಲೆಯ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಪೂಜಾ ಕೈಂಕರ್ಯ ನಿರ್ವಹಿಸುತ್ತಿತ್ತು. ಭಟ್ ಅವರು 15 ವರ್ಷ ವಿಪ್ರೋದಲ್ಲಿದ್ದರು.
  • ಪ್ರಸ್ತುತ ತಮಿಳುನಾಡಿನ ಕೊಯಮುತ್ತೂರಿನಲ್ಲಿ ಕೈಗಾರಿಕಾ ಉದ್ಯಮಿಯಾಗಿರುವ ಕಿರಣ್ ಭಟ್, ಡಿಜಿಟಲ್ ಕ್ಯಾಮೆರಾ ಮೂಲಕವೇ ಮುಖ ಭಾವಗಳನ್ನು ಪರಿಷ್ಕರಿಸುವ ತಂತ್ರಜ್ಞಾನವನ್ನು ಹಾಲಿವುಡ್ ಜಗತ್ತಿಗೆ ನೀಡಿದ್ದಾರೆ.
  • ಪಿಲಾನಿಯ ಬಿರ್ಲಾ ತಾಂತ್ರಿಕ ಸಂಸ್ಥೆಯಲ್ಲಿ ಮೆಕ್ಯಾನಿಕಲ್ ಮತ್ತು ಎಲೆಕ್ಟ್ರಿಕಲ್ ಆಯಂಡ್ ಎಂಜಿನಿಯರಿಂಗ್ ಪದವಿ ಪಡೆದು, ಅಮೆರಿಕದ ಕಾರ್ನೆಗಿ ಮೆಲನ್ ವಿ.ವಿ.ಯಲ್ಲಿ ಕಂಪ್ಯೂಟರ್ ಸೈನ್ ನಲ್ಲಿ ಡಾಕ್ಟರೇಟ್ ಪಡೆದರು. ಪ್ರತಿಷ್ಠಿತ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿ, ಬಳಿಕ ಸ್ಯಾನ್ಫ್ರಾನ್ಸಿಸ್ಕೋದಲ್ಲಿ ತನ್ನದೇ ಆದ ತಾಂತ್ರಿಕ ಸಂಸ್ಥೆ ಸ್ಥಾಪಿಸಿದರು. ಆರು ವರ್ಷಗಳ ಹಿಂದೆ, ತನ್ನ ಸಹೋದ್ಯೋಗಿಗಳ ಜತೆ ಐಎಲ್‌ಎಂ ತಂತ್ರಜ್ಞಾನ ನಿರ್ಮಿಸಿದ್ದು, ಇದು ಹಾಲಿವುಡ್ ಚಿತ್ರರಂಗದಲ್ಲಿ ಕ್ರಾಂತಿ ಮೂಡಿಸಿತು. ಭಟ್ ಅವರ ಪತ್ನಿ ಮುಂಬಯಿಯ ಪಾಯಲ್ ಅವರು ಕೂಡ ಡಾಕ್ಟರೇಟ್ ಪಡೆದವರು.

ಚೀನಾದಿಂದ ಪಾಕಿಸ್ತಾನಕ್ಕೆ ಎರಡು ಗಸ್ತು ನೌಕೆಗಳ ಹಸ್ತಾಂತರ

ಮಹತ್ವಕಾಂಕ್ಷಿ ಚೀನಾ-ಪಾಕಿಸ್ತಾನ ಎಕಾನಮಿಕ್ ಕಾರಿಡಾರ್ ಮಾರ್ಗದಲ್ಲಿ ಗಸ್ತು ಕಾಯಲು ಮತ್ತು ಪಾಕಿಸ್ತಾನದ ಗ್ವದಾರ್ ಬಂದರಿಗೆ ಭದ್ರತೆ ಒದಗಿಸಲು ಚೀನಾ ಎರಡು ನೌಕೆಗಳನ್ನು ಪಾಕಿಸ್ತಾನಕ್ಕೆ ಹಸ್ತಾಂತರಿಸಿದೆ. ಈ ಎರಡು ನೌಕೆಗಳಿಗೆ ಗ್ವದಾರ್ ಬಂದರಿನ ಬಳಿ ಇರುವ ಎರಡು ನದಿಗಳಾದ ಹಿಂಗೋಲ್ ಮತ್ತು ಬಾಸೋಲ್ ಹೆಸರನ್ನು ಇಡಲಾಗಿದೆ. ಈ ನೌಕೆಗಳು ಪಾಕಿಸ್ತಾನದ ನೌಕಪಡೆಯ ಭಾಗವಾಗಿ ಕಾರ್ಯನಿರ್ವಹಿಸಲಿದ್ದು, ಅತ್ಯಾಧುನಿಕ ತಂತ್ರಜ್ಞಾನದ ಗನ್ ಗಳನ್ನು ಅಳವಡಿಸಲಾಗಿದೆ. ಇದಲ್ಲದೇ ಇನ್ನೆರಡು ನೌಕೆಗಳನ್ನು ಚೀನಾ ಪಾಕಿಸ್ತಾನಕ್ಕೆ ಹಸ್ತಾಂತರಿಸಲಿದೆ. ಬಲೋಚಿಸ್ತಾನದ ಎರಡು ಜಿಲ್ಲೆಗಳ ಹೆಸರಾದ Zhob ಮತ್ತು Dasht ಎಂದು ಹೆಸರಿಡಲಾಗಿದೆ.

ಹಿನ್ನಲೆ:

ಇತ್ತೀಚೆಗೆ ಚೀನಾ ದೇಶ ಪಾಕಿಸ್ತಾನಕ್ಕೆ ಚೀನಾ-ಪಾಕಿಸ್ತಾನ ಎಕಾನಮಿಕ್ ಕಾರಿಡಾರ್ ಮಾರ್ಗದಲ್ಲಿ ಸೂಕ್ತ ಭದ್ರತೆ ಒದಗಿಸಲು ಸಕ್ರಿಯವಾಗಿ ತನ್ನ ಸಹಕಾರ ಮತ್ತು ಸಹಾಯ ನೀಡಲು ಮುಂಚೂಣಿಯಲ್ಲಿದೆ. ಗ್ವದಾರ್ ಬಂದರು ಮತ್ತು ಸಿಪಿಇಸಿ ಉದ್ದಗಲ ಭದ್ರತೆ ಒದಗಿಸಲು ಈಗಾಗಲೇ ಪಾಕಿಸ್ತಾನ ಪ್ರತ್ಯೇಕ ಸೇನಾ ವಿಭಾಗವನ್ನು ತೆರೆದಿದೆ. ಗ್ವದಾರ್ ನಗರಕ್ಕೆ ರಕ್ಷಣೆಯನ್ನು ಸಹ ಈ ಸೇನಾ ವಿಭಾಗವೇ ನೋಡಿಕೊಳ್ಳಲಿದೆ.

ಗ್ವದಾರ್ ಬಂದರು:

ಗ್ವದಾರ್ ಬಂದರು ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ರದಲ್ಲಿದೆ. ಈ ಬಂದರನ್ನು ಸಿಪಿಇಸಿಯಡಿ ಅಭಿವೃದ್ದಿಪಡಿಸಲಾಗುತ್ತಿದ್ದು, ಪಶ್ಚಿಮ ಚೀನಾವನ್ನು ಪಾಕಿಸ್ತಾನ ಮೂಲಕ ಮಧ್ಯ ಪ್ರಾಚ್ಯ, ಆಫ್ರಿಕಾ ಮತ್ತು ಯುರೋಪ್ ನೊಂದಿಗೆ ಸಂಪರ್ಕ ಕಲ್ಪಿಸಲಿದೆ. 2016 ನವೆಂಬರ್ ನಲ್ಲಿ ಈ ಬಂದರು ಅಧಿಕೃತವಾಗಿ ಕಾರ್ಯರಂಭ ಮಾಡಿತು.

Leave a Comment

This site uses Akismet to reduce spam. Learn how your comment data is processed.