ಇ-ಪ್ರವಾಸಿ ವೀಸಾ ಸೇವೆಯನ್ನು 161 ರಾಷ್ಟ್ರಗಳಿಗೆ ವಿಸ್ತರಿಸಿದ ಕೇಂದ್ರ ಸರ್ಕಾರ
ಕೇಂದ್ರ ಸರ್ಕಾರ ಇ-ಪ್ರವಾಸಿ ವೀಸಾ ಸೇವೆಯನ್ನು 161 ರಾಷ್ಟ್ರಗಳ ನಾಗರಿಕರಿಗೆ ವಿಸ್ತರಿಸಿದೆ. ಪ್ರವಾಸೋದ್ಯಮ ಸಚಿವ ಮಹೇಶ್ ಶರ್ಮಾ ರವರು ರಾಜ್ಯಸಭೆಗೆ ಈ ವಿಷಯವನ್ನು ತಿಳಿಸಿದ್ದಾರೆ. ಇ-ಪ್ರವಾಸಿ ವೀಸಾ ಬಳಸಿ ಭಾರತಕ್ಕೆ ಭೇಟಿ ನೀಡಿರುವ ವಿದೇಶಿ ಪ್ರವಾಸಿಗರ ಸಂಖ್ಯೆ ಜನವರಿ ಮತ್ತು ನವೆಂಬರ್ ಅವಧಿಯಲ್ಲಿ 9,17,446 ರಷ್ಟಿದೆ. ಕಳೆದ ವರ್ಷ ಇದೇ ಅವಧಿಗಿಂತ 168.5% ಹೆಚ್ಚಳವಾಗಿದೆ ಎಂದು ಸಚಿವರು ತಿಳಿಸಿದ್ದಾರೆ. ಆ ಮೂಲಕ ಇ-ಪ್ರವಾಸಿ ವೀಸಾ ಅದ್ಭುತ ಯಶಸ್ಸನ್ನುಗಳಿಸಿದೆ.
ಇ- ಪ್ರವಾಸಿ ವೀಸಾ:
- ಇ-ಪ್ರವಾಸಿ ವೀಸಾ ಸೌಲಭ್ಯವನ್ನು ಕೇಂದ್ರ ಸರ್ಕಾರ ನವೆಂಬರ್ 27, 2014 ರಲ್ಲಿ ಜಾರಿಗೆ ತಂದಿದೆ.
- ಈ ಯೋಜನೆಯಡಿ ವೀಸಾಗಾಗಿ ಆನ್ ಲೈನ್ ನೋಂದಣೆ ಮಾಡಿಕೊಂಡ ನಂತರ ವಿದ್ಯುನ್ಮಾನ ಮೂಲಕ ಪ್ರಯಾಣ ಅಧಿಕಾರವನ್ನು ನೀಡಲಾಗುವುದು.
- ನೋಂದಣಿ ಮಾಡಿಕೊಂಡು ವೀಸಾ ಅನುಮೋದನೆಗೊಂಡ ನಂತರ ಅರ್ಜಿದಾರರ ಇ-ಮೇಲ್ ವಿಳಾಸಕ್ಕೆ ವೀಸಾ ಅನುಮೋದನೆಯಾಗಿರುವುದನ್ನು ತಿಳಿಸಲಾಗುವುದು. ಅನುಮೋದನೆ ಸಿಕ್ಕಿರುವ ಪ್ರತಿಯನ್ನು ಪ್ರಿಂಟ್ ತೆಗೆದುಕೊಂಡು ಭಾರತಕ್ಕೆ ಪ್ರಯಾಣ ಬಳಸಬಹುದು.
- ದೇಶದ ಅಗಾಧವಾದ ಪ್ರವಾಸೋದ್ಯಮ ಕ್ಷೇತ್ರವನ್ನು ಸಮರ್ಥವಾಗಿ ಸದ್ಬಳಕೆ ಮಾಡುವ ಸಲುವಾಗಿ ಈ ಯೋಜನೆಯನ್ನು ಜಾರಿಗೆ ತರಲಾಗಿದೆ.
ಡಿಜಿಟಲ್ ಪಾವತಿ ಪ್ರೋತ್ಸಾಹಿಸಲು ಡಿಜಿ ಧನ್ ವ್ಯಾಪಾರ, ಲಕ್ಕಿ ಗ್ರಾಹಕ ಯೋಜನೆ
ನಗದುರಹಿತ ವಹಿವಾಟು ಉತ್ತೇಜನಕ್ಕೆ ಸರ್ಕಾರ ಕ್ರಮ ಕೈಗೊಂಡಿದ್ದು, ಅದೃಷ್ಟವಂತ ಗ್ರಾಹಕ ಯೋಜನೆ(ಲಕ್ಕಿ ಗ್ರಾಹಕ ಯೋಜನೆ) ಹಾಗೂ ‘ಡಿಜಿ ಧನ್ ಯೋಜನೆ’ಗಳನ್ನು ನೀತಿ ಆಯೋಗ ಪ್ರಕಟಿಸಿದೆ. ಜತೆಗೆ, ಆಯ್ಕೆಯಾಗುವ ಅದೃಷ್ಟವಂತರಿಗೆ ₹ 1 ಕೋಟಿ ಬಹುಮಾನ ಘೋಷಿಸಿದೆ.
- ಡಿಜಿಟಲ್ ವ್ಯವಸ್ಥೆ ಮೂಲಕ ವಹಿವಾಟು ನಡೆಸುವ ಗ್ರಾಹಕರು ಮತ್ತು ವ್ಯಾಪಾರಸ್ಥರಿಗೆ ನಗದು ಬಹುಮಾನ ನೀಡುವುದು ಯೋಜನೆಯ ಉದ್ದೇಶ.
- ಸಣ್ಣ, ಮಧ್ಯಮ ಹಾಗೂ ಬಡ ಜನರನ್ನು ನಗದು ರಹಿತ ವ್ಯವಸ್ಥೆಗೆ ಸೆಳೆಯುವ ಸಲುವಾಗಿ ಯೋಜನೆಯನ್ನು ಜಾರಿಗೆ ತರಲಾಗಿದೆ.
- ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (NPCI) ಈ ಯೋಜನೆಗಳನ್ನು ಅನುಷ್ಟಾನಗೊಳಿಸುವ ಜವಬ್ದಾರಿಯನ್ನು ಹೊಂದಿದೆ.
- ಯುಎಸ್ಎಸ್ ಡಿ, ರುಪೇ, ಆಧಾರ್ ಆಧರಿತ ಪಾವತಿ, ಯುಪಿಐ ಮೂಲಕ ನಡೆಸಲಾಗುವ ವ್ಯವಹಾರಗಳು ಮಾತ್ರ ಯೋಜನೆಯ ವ್ಯಾಪ್ತಿಯಡಿ ಇರಲಿವೆ. ಕ್ರೆಡಿಟ್ ಕಾರ್ಡ್ ಮತ್ತು ಇ-ವ್ಯಾಲೆಟ್ ಬಳಸಿ ನಡೆಸಲಾಗುವ ವ್ಯವಹಾರಗಳನ್ನು ಯೋಜನೆಯಿಂದ ಹೊರಗಿಡಲಾಗಿದೆ.
- ವ್ಯವಹಾರ ನಡೆಸಿರುವ ಗುರುತಿನ ಸಂಖ್ಯೆಯನ್ನು ಬಳಸಿ ಲಕ್ಕಿ ಡ್ರಾ ಮೂಲಕ ವಿಜೇತರನ್ನು ಆಯ್ಕೆಮಾಡಲಾಗುವುದು.
ಲಕ್ಕಿ ಗ್ರಾಹಕ ಯೋಜನೆ:
- ಲಕ್ಕಿ ಗ್ರಾಹಕ ಯೋಜನೆಯಡಿ ಡಿಜಿಟಲ್ ವ್ಯವಸ್ಥೆ ಮೂಲಕ ವಹಿವಾಟು ನಡೆಸುವ ಗ್ರಾಹಕರು ಪ್ರತಿ ದಿನ ರೂ 1000 ಹಾಗೂ ವಾರಕ್ಕೆ ರೂ 100000 ನಗದನ್ನುಗೆಲ್ಲುವ ಅವಕಾಶವನ್ನು ಹೊಂದಿದ್ದಾರೆ.
- ಡಿಸೆಂಬರ್ 25, 2016 ರಿಂದ ಏಪ್ರಿಲ್ 14,2017 ರವರೆಗೆ ಪ್ರತಿ ದಿನ 15000 ಗ್ರಾಹಕರು ರೂ 1000 ವನ್ನು ನಗದು ಬಹುಮಾನ ಪಡೆಯಲಿದ್ದಾರೆ.
- ಇದರ ಜೊತೆಗೆ ವಾರಕ್ಕೊಮ್ಮೆ 7000 ಗ್ರಾಹಕರು ರೂ 1 ಲಕ್ಷ, ರೂ 10,000 ಹಾಗೂ ರೂ 5000 ಬಹುಮಾನವನ್ನು ಇದರಡಿ ಗೆಲ್ಲಬಹುದಾಗಿದೆ. ಯೋಜನೆಯ ಕೊನೆಯ ದಿವಸ್ ಮೆಗಾ ಬಹುಮಾನವನ್ನು ಘೋಷಿಸಲಾಗಿದ್ದು, ರೂ 1 ಕೋಟಿಯನ್ನು ಬಹುಮಾನವಾಗಿ ಒಬ್ಬರಿಗೆ ನೀಡಲಾಗುವುದು.
ಡಿಜಿ ಧನ್ ವ್ಯಾಪಾರ್ ಯೋಜನಾ:
- ಈ ಯೋಜನೆ ದೇಶವ್ಯಾಪ್ತಿ ಇರುವ ವ್ಯಾಪಾರಿಗಳಿಗೆ ಮೀಸಲಾಗಿದೆ. ಆದರೆ ನಗದು ರಹಿತ ವ್ಯವಹಾರ ನಡೆಸಲು ವ್ಯಾಪಾರಿಗಳು ಕಡ್ಡಾಯವಾಗಿ ಪಾಯಿಂಟ್ ಆಫ್ ಸೇಲ್ (POS) ಮೆಷಿನ್ ಹೊಂದಿರಬೇಕು.
- POS ಮೆಷಿನ್ ಬಳಸಿ ವಹಿವಾಟು ನಡೆಸುವ ವ್ಯಾಪಾರಿಗಳು ಡಿಸೆಂಬರ್ 25, 2016 ರಿಂದ ಏಪ್ರಿಲ್ 14,2017 ರವರೆಗೆ ಪ್ರತಿ ವಾರ ರೂ 50,000 ನಗದು ಗೆಲ್ಲುವ ಅವಕಾಶವನ್ನು ಹೊಂದಿರಲಿದ್ದಾರೆ.
- ನವೆಂಬರ್ 8 ರಿಂದ ಏಪ್ರಿಲ್ 13, 2017 ರವರೆಗೆ ಡಿಜಿಟಲ್ ವಹಿವಾಟು ನಡೆಸಿರುವ ವ್ಯಾಪಾರಸ್ಥರಿಗೆ ಮೂರು ಮೆಗಾ ಪ್ರಶಸ್ತಿಗಳನ್ನು ಅಂದರೆ ರೂ 50 ಲಕ್ಷ, ರೂ 25 ಲಕ್ಷ ಹಾಗೂ ರೂ 12 ಲಕ್ಷವನ್ನು ಏಪ್ರಿಲ್ 13, 2017 ರಂದು ಘೋಷಿಸಲಾಗುವುದು.
ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ಮದ್ಯ ಮಾರಾಟ ನಿಷೇಧ
ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳ ಎರಡೂ ಬದಿಗಳಲ್ಲಿ 500 ಮೀಟರ್ ವ್ಯಾಪ್ತಿಯೊಳಗಿನ ಎಲ್ಲ ಮದ್ಯದಂಗಡಿಗಳನ್ನು ಮುಚ್ಚುವಂತೆ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದೆ. ಕುಡಿದು ಚಾಲನೆ ಮಾಡುವುದು ಮತ್ತು ಅದರಿಂದ ಆಗುವ ಅಪಘಾತಗಳಿಂದ ವರ್ಷದಲ್ಲಿ ದೇಶದಾದ್ಯಂತ ಸಾವಿರಾರು ಜನರು ಸಾವನ್ನಪ್ಪುತ್ತಿರುವ ಕಾರಣ ಸುಪ್ರೀಂ ಕೋರ್ಟ್ ಈ ತೀರ್ಪನ್ನು ಕೈಗೊಂಡಿದೆ. ಸುಪ್ರೀಂಕೋರ್ಟ್ ಮುಖ್ಯನ್ಯಾಯಾಧೀಶರಾದ ಟಿ.ಎಸ್.ಠಾಕೂರ್ ರವರನ್ನು ಒಳಗೊಂಡ ಮೂರು ಜನರನ್ನು ಒಳಗೊಂಡ ಪೀಠ “ಅರೈವ್ ಸೇಫ್” ಎಂಬ ಎನ್ಜಿಒ ಸಲ್ಲಿಸಿದ ಪಿಐಎಲ್ ತೀರ್ಪಿನ ವೇಳೆ ಈ ತೀರ್ಪನ್ನು ನೀಡಿದೆ. ರಸ್ತೆ ಬದಿಯಲ್ಲಿ ಮದ್ಯ ಮಾರಾಟ ಮಾಡುವುದರಿಂದ ಕುಡಿದು ಚಾಲನೆ ಮಾಡುವುದು ಸಾಮಾನ್ಯವಾಗಿದ್ದು, ಇದರಿಂದ ವರ್ಷದಲ್ಲಿ 1.42 ಲಕ್ಷ ಜನರು ಅಪಘಾತದಿಂದ ಮರಣ ಹೊಂದುತ್ತಿರುವುದಾಗಿ ಅರ್ಜಿದಾರರು ತಿಳಿಸಿದ್ದರು.
ಸುಪ್ರೀಂಕೋರ್ಟ್ ಆದೇಶವೇನು?
- ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳ ಬದಿಗಳಲ್ಲಿ ಇರುವ ಮದ್ಯದಂಗಡಿಗಳನ್ನು ಸಂಪೂರ್ಣವಾಗಿ ನಿಷೇಧಿಸುವುದು.
- ಈಗಾಗಲೇ ಇರುವ ಮದ್ಯದಂಗಡಿಗಳ ಪರವಾನಗಿಗಳನ್ನು ಮುಂದಿನ ಮಾರ್ಚ್ 31ರ ನಂತರ ನವೀಕರಿಸಬಾರದು.
- ಮದ್ಯದಂಗಡಿ ಇದೆ ಎಂಬ ಸೂಚನಾ ಫಲಕಗಳನ್ನೂ ತೆಗೆದು ಹಾಕಬೇಕು.
- ಹೆದ್ದಾರಿಗಳ ಅಂಚಿನಿಂದ 500ಮೀ ದೂರದಲ್ಲಿ ಮದ್ಯದಂಗಡಿಗಳರಬೇಕು.
- ಮುನಿಸಿಪಾಲ್ ಕಾರ್ಪೋರೇಶನ್, ನಗರ, ಪಟ್ಟಣ, ಸ್ಥಳೀಯ ಸರ್ಕಾರಗಳ ಹೆದ್ದಾರಿಗಳಿಗೂ ಈ ಆದೇಶ ಅನ್ವಯಿಸುತ್ತದೆ.