ಮಹಿಳಾ ಸಾಕ್ಷರತೆ: ನೆರೆಯ ರಾಷ್ಟ್ರಗಳಿಗಿಂತ ಕಳಪೆ ಸಾಧನೆ ತೋರಿದ ಭಾರತ

ಹೊಸ ಅಧ್ಯಯನ ಒಂದರ ಪ್ರಕಾರ ಭಾರತದ ಮಹಿಳಾ ಸಾಕ್ಷರತೆ ಗುಣಮಟ್ಟ ನೆರೆಯ ರಾಷ್ಟ್ರಗಳಾದ ಪಾಕಿಸ್ತಾನ, ಬಾಂಗ್ಲದೇಶ ಮತ್ತು ನೇಪಾಳಕ್ಕೆ ಹೋಲಿಸಿದರೆ ಕಳಪೆ ಎಂದು ಹೇಳಲಾಗಿದೆ. ಇಂಟರ್ನ್ಯಾಶಲ್ ಕಮೀಷನ್ ಆನ್ ಫೈನಾನ್ಸಿಂಗ್ ಗ್ಲೋಬಲ್ ಎಜುಕೇಷನ್ ಅಪರ್ಚುನಿಟಿ (International Commission on Financing Global Education Opportunity) ನಡೆಸಿದ ಅಧ್ಯಯನದಲ್ಲಿ ಈ ವಿಷಯ ಬೆಳಕಿಗೆ ಬಂದಿದೆ.

ಪ್ರಮುಖಾಂಶಗಳು:

  • ಭಾರತದಲ್ಲಿ ಐದು ವರ್ಷ ಪ್ರಾಥಮಿಕ ಶಿಕ್ಷಣ ಪೂರ್ಣಗೊಳಿಸಿದ ಮಹಿಳೆಯರ ಪ್ರಮಾಣ ಶೇ 48% ಇದೆ. ಅದೇ ಈ ಪ್ರಮಾಣ ನೇಪಾಳದಲ್ಲಿ ಶೇ 92%, ಪಾಕಿಸ್ತಾನದಲ್ಲಿ ಶೇ 74% ಮತ್ತು ಬಾಂಗ್ಲದೇಶದಲ್ಲಿ ಶೇ 54% ರಷ್ಟಿದೆ.
  • ಭಾರತದಲ್ಲಿ ಮಹಿಳೆಯರ ಸಾಕ್ಷರತೆ ಪ್ರಮಾಣ ಎರಡು ವರ್ಷಗಳ ಶಾಲೆ ಮುಗಿಸಿದ ನಂತರ ಶೇ 1% ರಿಂದ 15% ಏರಿಕೆ ಕಂಡಿದೆ. ನೇಪಾಳ ಮತ್ತು ಪಾಕಿಸ್ತಾನದಲ್ಲಿ ಈ ಪ್ರಮಾಣ ಕ್ರಮವಾಗಿ ಶೇ 3-11% ಮತ್ತು 11-47% ಏರಿಕೆಯಾಗಿದೆ.
  • ಜಾಗತಿಕ ಮಹಿಳಾ ಸಾಕ್ಷರತೆ ಸೂಚ್ಯಂಕದಲ್ಲಿ ಭಾರತ ತೀರಾ ಹಿಂದೆ ಉಳಿದಿದೆ. ಆಫ್ರಿಕಾದ ರಾಷ್ಟ್ರಗಳಾದ ರವಾಂಡ, ಇಥೋಪಿಯಾ ಮತ್ತು ತಾಂಝಾನಿಯಾ ರಾಷ್ಟ್ರಗಳು ಭಾರತಕ್ಕಿಂತ ಉನ್ನತ ಸ್ಥಾನದಲ್ಲಿವೆ.
  • ಅಭಿವೃದ್ದಿ ಹೊಂದುತ್ತಿರುವ 51 ರಾಷ್ಟ್ರಗಳ ಪೈಕಿ ಮಹಿಳಾ ಸಾಕ್ಷರತೆಯಲ್ಲಿ ಭಾರತ 38ನೇ ಸ್ಥಾನ ಪಡೆದಿದೆ.

ವಾರಣಾಸಿಯಲ್ಲಿ “ಉರ್ಜಾ ಗಂಗಾ (Urja Ganga)” ಯೋಜನೆಗೆ ಚಾಲನೆ ನೀಡದ ಮೋದಿ

ಮಹತ್ವಕಾಂಕ್ಷಿ ಕೊಳವೆ ಅನಿಲ ಯೋಜನೆ “ಉರ್ಜಾ ಗಂಗಾ”ಗೆ ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರಪ್ರದೇಶದ ವಾರಣಾಸಿಯಲ್ಲಿ ಶಂಕುಸ್ಥಾಪನೆ ನೆರವೇರಿಸಿದರು. 2018ರ ವೇಳಗೆ ಈ ಯೋಜನೆ ಪೂರ್ಣಗೊಳ್ಳಲಿದ್ದು, ದೇಶದ ಪೂರ್ವಭಾಗದ ನಿವಾಸಿಗಳಿಗೆ ಅಡುಗೆ ಅನಿಲ ಪೂರೈಕೆ ಹಾಗೂ ವಾಹನಗಳಿಗೆ CNG ಅನಿಲ ಸರಬರಾಜು ಮಾಡುವ ಉದ್ದೇಶವನ್ನು ಹೊಂದಿದೆ.

ಪ್ರಮುಖಾಂಶಗಳು:

  • 3,050 ಕಿ.ಮೀ ಉದ್ದದ ಕೊಳವೆ ಅನಿಲ ಮಾರ್ಗವು ಉತ್ತರ ಪ್ರದೇಶದ ಜಗದೀಶ್ಪುರ ಮತ್ತು ಪಶ್ಚಿಮ ಬಂಗಾಳದ ಹಲ್ದೀಯಾ ನಡುವೆ ಸಂಪರ್ಕ ಕಲ್ಪಿಸುತ್ತದೆ.
  • ಸುಮಾರು 50,000 ಕುಟುಂಬಗಳು ಹಾಗೂ 20,000 ವಾಹನಗಳಿಗೆ ಶುದ್ದ ಮತ್ತು ಕಡಿಮೆ ದರದ PNG ಮತ್ತು CNG ಅನಿಲ ದೊರೆಯಲಿದೆ.
  • ಈ ಯೋಜನೆಯು ಭಾರತದ ಪೂರ್ವ ಭಾಗದ ಸಾಮೂಹಿಕ ಬೆಳವಣಿಗೆ ಹಾಗೂ ಅಭಿವೃದ್ದಿ ಕಡೆಗೆ ಪ್ರಮುಖ ಹೆಜ್ಜೆ ಎಂದು ಪರಿಗಣಿಸಲಾಗಿದೆ. ಒಟ್ಟಾರೆಯಾಗಿ 20 ಲಕ್ಷ ಕುಟುಂಬಗಳು ಅಡುಗೆ ಅನಿಲ ಸಂಪರ್ಕವನ್ನು ಪಡೆಯಲಿವೆ.
  • ದೇಶದ ಪೂರ್ವ ಭಾಗದ ಪ್ರಮುಖ ನಗರಗಳಾದ ವಾರಣಾಸಿ, ಜೇಮ್ ಶೆಡ್ಪುರ, ಪಾಟ್ನಾ, ರಾಂಚಿ, ಕೊಲ್ಕತ್ತಾ, ಭುಬನೇಶ್ವರ ಮತ್ತು ಕಟಕ್ ಈ ಯೋಜನೆಯ ಮುಖ್ಯ ಫಲಾನುಭವಿ ನಗರಗಳು.
  • ಈ ಯೋಜನೆಯಡಿ ಅನಿಲ ಬಳಕೆ ಮಾಡಿಕೊಂಡು ಐದು ರಾಜ್ಯಗಳಲ್ಲಿ 25 ಕೈಗಾರಿಕ ಪ್ರದೇಶಗಳನ್ನು ಅಭಿವೃದ್ದಿಪಡಿಸಲಾಗುವುದು. ಅಲ್ಲದೇ 40 ಜಿಲ್ಲೆಗಳು ಮತ್ತು 2600 ಹಳ್ಳಿಗಳೂ ಇದರ ಪ್ರಯೋಜನ ಪಡೆದುಕೊಳ್ಳಲಿವೆ.
  • ಬಿಹಾರದ ಬರೌಣಿ, ಉತ್ತರ ಪ್ರದೇಶದ ಗೋರಖ್ ಪುರ, ಜಾರ್ಖಂಡ್ನ ಸಿಂದ್ರಿ, ಪಶ್ಚಿಮ ಬಂಗಾಳದ ದುರ್ಗಪುರದಲ್ಲಿ ಸ್ಥಗಿತಗೊಂಡಿರುವ ರಸಗೊಬ್ಬರ ಕಾರ್ಖಾನೆಗಳು ಅನಿಲ ಪೊರೈಕೆ ಮಾಡಿ ಮತ್ತೆ ಪುನರ್ ಆರಂಭಿಸಲು ಯೋಜನೆ ಸಹಕಾರಿಯಾಗಲಿದೆ.

ಮೊದಲ ರಾಷ್ಟ್ರೀಯ ಬುಡಕಟ್ಟು ಉತ್ಸವವನ್ನು ಉದ್ಘಾಟಿಸಿದ ಪ್ರಧಾನಿ ಮೋದಿ

ಪ್ರಪ್ರಥಮ ರಾಷ್ಟ್ರೀಯ ಬುಡಕಟ್ಟು ಉತ್ಸವವನ್ನು ಪ್ರಧಾನಿ ನರೇಂದ್ರ ಮೋದಿ ಅವರು ನವದೆಹಲಿಯಲ್ಲಿ ಉದ್ಘಾಟಿಸಿದರು. ನಾಲ್ಕು ದಿನಗಳ ಕಾಲ ಈ ಉತ್ಸವ ನಡೆಯಲಿದೆ. ಬುಡಕಟ್ಟು ಜನಾಂಗಗಳ ನಡುವೆ ಒಳಗೊಳ್ಳುವಿಕೆಯನ್ನು ಉತ್ತೇಜಿಸುವುದು ಮತ್ತು ದೊಡ್ಡ ಮಟ್ಟದಲ್ಲಿ ಬುಡಕಟ್ಟು ಸಂಸ್ಕೃತಿಯ ವಿವಿಧ ಆಯಾಮಗಳನ್ನು ಪ್ರದರ್ಶಿಸುವುದು ಈ ಉತ್ಸವದ ಮುಖ್ಯ ಉದ್ದೇಶ.

  • ಈ ಉತ್ಸವದಲ್ಲಿ 1600 ಬುಡಕಟ್ಟು ಕಲಾವಿದರು ಮತ್ತು 8,000 ಬುಡಕಟ್ಟು ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
  • ಜೊತೆಗೆ ಕಲೆ, ಸಂಸ್ಕೃತಿ, ಕ್ರೀಡೆ, ಶೈಕ್ಷಣಿಕ ಮತ್ತು ವೈದ್ಯಕೀಯ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಪ್ರಖ್ಯಾತ ಬುಡಕಟ್ಟು ವ್ಯಕ್ತಿಗಳು ಪಾಲ್ಗೊಳ್ಳಲಿದ್ದಾರೆ.
  • ಬುಡಕಟ್ಟು ಜನಾಂಗದ ಕಲೆ, ಸಂಸ್ಕೃತಿ, ಸಂಪ್ರದಾಯವನ್ನು ಸಂರಕ್ಷಿಸುವುದು ಮತ್ತು ಉತ್ತೇಜಿಸುವುದು ಈ ಉತ್ಸವ ಆಯೋಜನೆ ಮಾಡಿರುವ ಹಿಂದಿನ ಉದ್ದೇಶವಾಗಿದೆ.
  • ಅರಣ್ಯ ಹಕ್ಕು ಕಾಯಿದೆ-2006, ಬುಡಕಟ್ಟು ಪ್ರದೇಶಕ್ಕೆ ಪಂಚಾಯತ್ ವಿಸ್ತರಣೆ (PESA) ಕಾಯಿದೆ-1996 ಅನುಷ್ಟಾನಗಳ ಬಗ್ಗೆ ಕಾರ್ಯಾಗಾರವನ್ನು ಉತ್ಸವದಲ್ಲಿ ಹಮ್ಮಿಕೊಳ್ಳಲಾಗಿದೆ. ಅಲ್ಲದೇ, ಬುಡಕಟ್ಟು ಜನರ ಕಲೆ/ಕುಶಲ ಕಲೆ, ಸಂಪ್ರದಾಯ, ಕ್ರೀಡೆ, ಸಾಮಾಜಿಕ-ಸಾಂಸ್ಕೃತಿಕ ಆಯಾಮಗಳನ್ನು ಪ್ರದರ್ಶಿಸಲಾಗುವುದು.

ಚುನಾವಣಾ ನಿಯಮಕ್ಕೆ ಬದಲಾವಣೆ ತಂದು ಇ-ಪೋಸ್ಟಲ್ ಬ್ಯಾಲೆಟ್ಗೆ ಅವಕಾಶ ಕಲ್ಪಿಸಿದ ಚುನಾವಣಾ ಆಯೋಗ

ಭಾರತೀಯ ಚುನಾವಣಾ ಆಯೋಗವು ಚುನಾವಣಾ ನಿಯಮ 1961ಕ್ಕೆ ತಿದ್ದುಪಡಿ ತಂದಿದ್ದು, ಇ-ಪೋಸ್ಟಲ್ ಬ್ಯಾಲೆಟ್ಗೆ ಅವಕಾಶ ಕಲ್ಪಿಸಿದೆ. ಹೊಸ ನಿಯಮದ ಪ್ರಕಾರ ಯಾವುದೇ ಕ್ಷೇತ್ರದ ರಿಟರ್ನಿಂಗ್ ಅಧಿಕಾರಿಯು ಚುನಾವಣಾ ಆಯೋಗ ನಿರ್ದಿಷ್ಟಪಡಿಸಿದ ಮಾನದಂಡಗಳಿಗೆ ಒಳಪಟ್ಟು ಅರ್ಹ ಮತದಾರರಿಗೆ ಬ್ಯಾಲೆಟ್ಗಳನ್ನು ವಿದ್ಯುನ್ಮಾನ ವಿಧಾನದ ಮೂಲಕ ಳುಹಿಸಿಕೊಡಬಹುದಾಗಿದೆ. ಭಾರತದ ಚುನಾವಣೆ ಪ್ರಕಿಯೆಯಲ್ಲಿ ಪೋಸ್ಟಲ್ ಬ್ಯಾಲೆಟ್ ತಮ್ಮದೇ ಆದ ಮಹತ್ವದ ಪಾತ್ರವನ್ನು ಹೊಂದಿವೆ. ಬೇರೆ ಬೇರೆ ಕಡೆ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿರುವವರು ಹಾಗೂ ದುರ್ಗಮ ಭೌಗೋಳಿಕ ಪ್ರದೇಶಗಳಲ್ಲಿ ನೆಲಸಿರುವವರಿಗೆ ಮತದಾನದ ಹಕ್ಕನ್ನು ಚಲಾಯಿಸಲು ಪೋಸ್ಟಲ್ ಬ್ಯಾಲೆಟ್ ವ್ಯವಸ್ಥೆ ಅತ್ಯಂತ ಉಪಯೋಗಕಾರಿ ಎನಿಸಿದೆ.

ಇ-ಪೋಸ್ಟಲ್ ಬ್ಯಾಲೆಟ್ ವ್ಯವಸ್ಥೆ ಎಂದರೆ?

ಇದೊಂದು ಅತ್ಯಂತ ಸರಳ ವಿಧಾನವಾಗಿದ್ದು, ರಿಟರ್ನಿಂಗ್ ಅಧಿಕಾರಿಯು ಬ್ಯಾಲೆಟ್ ಗಳನ್ನು ವೆಬ್ ಪೋರ್ಟಲ್ ಮುಖಾಂತರ ಒಂದು ಬಾರಿ ಪಾಸ್ವರ್ಡ್ (OTP) ಸಮೇತ ಕಳುಹಿಸಿಕೊಡುತ್ತಾರೆ. ಮತದಾರರು ಪಾಸ್ವರ್ಡ್ ಬಳಸಿ ಬ್ಯಾಲೆಟ್ಗಳನ್ನು ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ. ಅನಂತರ ಮತದಾರರು ಪೋಸ್ಟ್ ಮೂಲಕ ಮತಪತ್ರವನ್ನು ಕಳುಹಿಸಿಕೊಡಬೇಕು. ಭದ್ರತೆ ಕೊರತೆ ಕಾರಣ ಮತಪತ್ರಗಳನ್ನು ಡೌನ್ ಲೋಡ್ ಮಾಡಿಕೊಳ್ಳಲು ಮಾತ್ರ ಅವಕಾಶ ನೀಡಲಾಗಿದ್ದು, ಮತ ಚಲಾವಣೆ ನಂತರ ಬ್ಯಾಲೆಟ್ ಅನ್ನು ಪೋಸ್ಟ್ ಮುಖಾಂತರ ಮಾತ್ರ ಕಳುಹಿಸಬೇಕಿದೆ.

ಹೊಸ ವ್ಯವಸ್ಥೆಯ ಅನುಕೂಲವೇನು?

ಹೊಸ ವ್ಯವಸ್ಥೆಯಿಂದ ಸಮಯದ ಉಳಿತಾಯವಾಗಲಿದೆ. ಅಲ್ಲದೇ ಕಾಗದದ ಬಳಕೆಯು ಉಳಿತಾಯವಾಗಲಿದೆ.

ವೈಟ್ನರ್ (Whitener) ಮಾರಾಟ ಮೇಲೆ ನಿಷೇಧ ಹೇರಿದ ಉತ್ತರಖಂಡ್ ಹೈಕೋರ್ಟ್

ವೈಟ್ನರ್ ಮೂಸುವ ಮೂಲಕ ಯುವಕನೊಬ್ಬ ಮೃತಪಟ್ಟ ಹಿನ್ನಲೆಯಲ್ಲಿ ವೈಟ್ನರ್ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸುವಂತೆ ಉತ್ತರಖಂಡ್ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ. ಇತ್ತೀಚೆಗೆ 14 ವರ್ಷದ ಯುವಕನೊಬ್ಬ ಮೋಜಿಗಾಗಿ ವೈಟ್ನರ್ ಬಳಸಿ ಸಾವನ್ನಪ್ಪಿದ ಕಾರಣ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡ ಹೈಕೋರ್ಟ್ ಈ ಆದೇಶ ನೀಡಿದೆ. ಅಲ್ಲದೇ, ಫೆವಿಕ್ವಿಕ್, ಐಯೋಡೆಕ್ಸ್ ನಂತಹ ಪದಾರ್ಥಗಳನ್ನು 18 ವರ್ಷಕ್ಕಿಂತ ಕೆಳಗಿನವರಿಗೆ ಮಾರಾಟ ಮಾಡದಂತೆ ಹೈಕೋರ್ಟ್ ಆದೇಶಿಸಿದೆ.

ವೈಟ್ನರ್ ಎಂದರೇನು?

ಕಾಗದದ ಮೇಲೆ ಇಂಕ್ ಅನ್ನು ಅಳಿಸಲು ಬಳಸುವ ಬಿಳಿ ದ್ರವವೇ ವೈಟ್ನರ್. ವೈಟ್ನರ್ ನಲ್ಲಿ ಅಲಿಫಾಟಿಕ್ ಪೆಟ್ರೋಲಿಯಂ ಹೈಡ್ರೋಕಾರ್ಬನ್ ಗಳಾದ ಟಾಲಿನ್ ಮತ್ತು ಟ್ರೈಕ್ಲೊರೋಇಥೇನ್ ನಂತಹ ಅಮಲೇರಿಸುವ ರಾಸಾಯನಿಕಗಳನ್ನು ಬಳಸಲಾಗಿರುತ್ತದೆ

ವೈಟ್ನರ್ ಸೇವಿಸುವ ಚಟ?

  • ವೈಟ್ನರ್ ಸೇವಿಸುವವರು ವೈಟ್ನರ್ ನಲ್ಲಿರುವ ಅಮಲೇರಿಸುವ ರಾಸಾಯನಿಕಗಳನ್ನು ಮೂಸುವ ಮೂಲಕ ಮೋಜಿಗೆ ಮೊರೆ ಹೋಗುತ್ತಾರೆ. ಹೀಗೆ ಸೇವನೆ ಮಾಡಿದಾಗ ಭ್ರಮಾತ್ಮಕ ಪರಿಣಾಮ ಉಂಟಾಗಿ ಸೇವನೆ ಮಾಡಿದ ವ್ಯಕ್ತಿಯ ಮೇಲೆ ಮಾದಕ ಪರಿಣಾಮ ಬೀರುತ್ತದೆ. ಮಧ್ಯ ಸೇವನೆ ಅಥವಾ ಡ್ರಗ್ ಬಳಕೆಯ ಮೊದಲ ಹೆಜ್ಜೆ ಇದಾಗಿದೆ.
  • ಇತ್ತೀಚೆಗೆ ಯುವ ಸಮೂಹದಲ್ಲಿ ವೈಟ್ನರ್ ಬಳಕೆ ತೀವ್ರವಾಗಿ ಹೆಚ್ಚುತ್ತಿದೆ. ಸುಲಭವಾಗಿ ಮತ್ತು ಕಡಿಮೆ ದರದಲ್ಲಿ ದೊರೆಯುವ ಕಾರಣ ಇದರ ಬಳಕೆ ಮಿತಿಮೀರುತ್ತಿದೆ.

ವೈಟ್ನರ್ ಸೇವನೆಯ ಪರಿಣಾಮ:

  • ವೈಟ್ನರ್ ಗಳಲ್ಲಿ ಪ್ರಾಣಾಂತಿಕ ದ್ರಾವಕಗಳಾದ ಹೈಡ್ರೋಕಾರ್ಬನ್ ಇರುವ ಕಾರಣ ಸುಲಭವಾಗಿ ರಕ್ತಕ್ಕೆ ಸೇರ್ಪಡೆಗೊಳ್ಳುವ ಮೂಲಕ ವ್ಯಕ್ತಿಯ ನರಮಂಡಲಕ್ಕೆ ಹಾನಿ ಉಂಟು ಮಾಡುತ್ತವೆ. ಕೆಲವೊಮ್ಮೆ ಆಲಸ್ಯ ಸೇರಿದಂತೆ ಕಿಡ್ನಿ, ಯಕೃತ್ ಮತ್ತು ಶ್ವಾಸಕೋಶದ ನಿಷ್ಕ್ರಿಯತೆಗೆ ಎಡೆಮಾಡುತ್ತದೆ.

 

3 Thoughts to “ಪ್ರಚಲಿತ ವಿದ್ಯಮಾನಗಳು- ಅಕ್ಟೋಬರ್-26, 2016”

  1. siddu

    how can we download

  2. Good information thanks for more information

Leave a Comment

This site uses Akismet to reduce spam. Learn how your comment data is processed.