ಜಾಗತಿಕ ಹಸಿವು ಸೂಚ್ಯಂಕ: ಭಾರತಕ್ಕೆ 97ನೇ ಸ್ಥಾನ

ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತ 118 ದೇಶಗಳ ಪೈಕಿ 97ನೇ ಸ್ಥಾನವನ್ನು ಪಡೆದುಕೊಂಡಿದೆ. 2016ನೇ ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತ 100 ಅಂಕಗಳಿಗೆ ಕೇವಲ 28.5 ಅಂಕಗಳನ್ನು ಮಾತ್ರ ಭಾರತ ಪಡೆದುಕೊಂಡಿದೆ. ಆ ಮೂಲಕ ಭಾರತದಲ್ಲಿ ಇನ್ನೂ ವ್ಯಾಪಕ ಪ್ರಮಾಣದಲ್ಲಿ ಹಸಿವಿನ ಸಮಸ್ಯೆ ತಾಂಡವಾಡುತ್ತಿರುವುದಕ್ಕೆ ಸಾಕ್ಷಿಯಾಗಿದೆ.  ಇಂಟರ್ ನ್ಯಾಷನಲ್ ಫುಡ್ ಪಾಲಿಸಿ ರಿಸರ್ಚ್ ಇನ್ಸ್ಟಿಟ್ಯೂಟ್ (IFPRI) ಈ ಸೂಚ್ಯಂಕವನ್ನು ಬಿಡುಗಡೆಗೊಳಿಸಿದೆ.

ಜಾಗತಿಕ ಹಸಿವು ಸೂಚ್ಯಂಕ:

  • ಜಾಗತಿಕ ಹಸಿವು ಸೂಚ್ಯಂಕವನ್ನ ಇಂಟರ್ ನ್ಯಾಷನಲ್ ಫುಡ್ ಪಾಲಿಸಿ ರಿಸರ್ಚ್ ಇನ್ಸ್ಟಿಟ್ಯೂಟ್ 2006 ರಿಂದ ಹೊರತರುತ್ತಿದೆ. ವಿವಿಧ ಆಯಾಮಗಳನ್ನು ಪರಿಗಣಿಸಿ ತಯಾರಿಸಲಾಗುವ ಸೂಚ್ಯಂಕದಲ್ಲಿ ವಿವಿಧ ದೇಶಗಳಲ್ಲಿ ಹಸಿವಿನ ಪರಿಸ್ಥಿತಿಯನ್ನು ತೋರಿಸುತ್ತದೆ.
  • 100 ಅಂಕಗಳ ಪ್ರಮಾಣದಲ್ಲಿ ದೇಶಗಳ ಶ್ರೇಣಿಯನ್ನ ಅಳೆಯಲಾಗುವುದು. 0 ಅಂಕಗಳಿಸಿದರೆ ಹಸಿವು ಮುಕ್ತ ರಾಷ್ಟ್ರವೆಂದು ಹಾಗೂ 100 ಅಂಕಗಳಿಸಿದರೆ ಅತ್ಯಂತ ಹಸಿವು ಭಾದಿತ ದೇಶವೆಂದು ಪರಿಗಣಿಸಲಾಗುವುದು.
  • ಜಾಗತಿಕ ಹಸಿವು ಸೂಚ್ಯಂಕವನ್ನು ಮುಖ್ಯವಾಗಿ ನಾಲ್ಕು ಮಾನದಂಡಗಳನ್ನು ಆಧಾರವಾಗಿಟ್ಟುಕೊಂಡು ತಯಾರಿಸಲಾಗುವುದು ಅವುಗಳೆಂದರೆ, ಪೌಷ್ಠಿಕತೆಯ ಕೊರತೆ ಜನಸಂಖ್ಯೆ, ಮಕ್ಕಳ ವ್ಯರ್ಥ (ಕಡಿಮೆ ತೂಕ), ಮಕ್ಕಳ ಕುಂಠಿತ ಬೆಳವಣಿಗೆ ಮತ್ತು ಶಿಶು ಮರಣ ಪ್ರಮಾಣ.

ಭಾರತ ನೆರೆಹೊರೆ ರಾಷ್ಟ್ರಗಳ ಸ್ಥಾನಮಾನ:

  • ಚೀನಾ 29, ನೇಪಾಳ 72, ಮ್ಯಾನ್ಮಾರ್ 75, ಶ್ರೀಲಂಕಾ 84, ಬಾಂಗ್ಲದೇಶ 90 ಮತ್ತು ಪಾಕಿಸ್ತಾನ 107 ನೇ ಸ್ಥಾನದಲ್ಲಿದೆ.

ಬಾಬ್ ಡೊಲೈನ್ ಗೆ ಪ್ರತಿಷ್ಠಿತ 2016 ನೊಬೆಲ್ ಸಾಹಿತ್ಯ ಪ್ರಶಸ್ತಿ

ಅಮೆರಿಕದ ಖ್ಯಾತ ಗೀತ ರಚನಕಾರ, ಕಲಾಕಾರ ಮತ್ತು ಸಂಗೀತ ಕ್ಷೇತ್ರದ ದಂತಕತೆ ಎನಿಸಿರುವ ಬಾಬ್ ಡೊಲೈನ್ ಅವರಿಗೆ 2016ನೇ ಸಾಲಿನ ಸಾಹಿತ್ಯ ನೊಬೆಲ್ ಪ್ರಶಸ್ತಿಯನ್ನು ನೀಡಲಾಗಿದೆ. ಮಹಾನ್ ಅಮೆರಿಕದ ಹಾಡುಗಳ ಪರಂಪರೆಗೆ ಹೊಸ ಕಾವ್ಯ ಅಭಿವ್ಯಕ್ತಿಗಳನ್ನು ಸೃಷ್ಟಿಸಿದ್ದಕ್ಕಾಗಿ ಡೈಲಾನ್ ಅವರಿಗೆ 80 ಲಕ್ಷ ಸ್ವೀಡಿಷ್ ಕ್ರೌನ್ (927,740 ಡಾಲರ್) ಮೊತ್ತದ ಪ್ರಶಸ್ತಿ ಸಂದಿದೆ.

ಬಾಬ್ ಡೊಲೈನ್ ಬಗ್ಗೆ:

  • ರಾಬರ್ಟ್ ಅಲ್ಲೆನ್ ಜಿಮ್ಮರ್ಮನ್ ಹುಟ್ಟಿದ್ದು ಮೇ 24, 1941 ರಲ್ಲಿ ದುಲುತ್, ಮಿನ್ನೆಸೊಟದಲ್ಲಿ.
  • ಅವರ ಮೊದಲ ಅಲ್ಬಂ “ಬಾಬ್ ಡೊಲೈನ್” 1962 ರಲ್ಲಿ ಬಿಡುಗಡೆಗೊಂಡಿತು. ಕವಿ ಡೊಲೈನ್ ಥಾಮಸ್ ಅವರ ಹೆಸರನ್ನ ಇಟ್ಟುಕೊಂಡ ನಂತರ ಬಾಬ್ ಡೊಲೈನ್ ಎಂದೇ ಪ್ರಸಿದ್ದರಾದರು.
  • ಸಾರ್ವಕಾಲಿಕ ಸಂಗೀತಗಾರ ಎನಿಸಿರುವ ಇವರ 100 ದಶಲಕ್ಷ ಧ್ವನಿಮುದ್ರಣಗಳು ಮಾರಾಟಗೊಂಡಿವೆ.
  • ಕಲೆ ಮತ್ತು ಚಿತ್ರಕಲೆ ಸಂಬಂಧಿಸಿದ ಆರು ಪುಸ್ತಕಗಳನ್ನು ಬಾಬ್ ಪ್ರಕಟಿಸಿದ್ದಾರೆ.
  • ಇವರ ಅಂದಿನ ಗೀತೆಗಳಾದ ದಿ ಟೈಮ್ಸ್ ದೆ ಆರ್ ಎ ಚಾಂಗಿನ್ ಮತ್ತು ಬ್ಲೋವಿಂಗ್ ಇನ್ ದಿ ವಿಂಡ್ ಗೀತೆಗಳು ಅಮೆರಿಕ ನಾಗರೀಕ ಹಕ್ಕು ಮತ್ತು ಯುದ್ದ ವಿರೋಧಿ ಚಳುವಳಿ ಗೀತೆಗಳಾಗಿ ಅಳವಡಿಸಿಕೊಳ್ಳಲಾಗಿತ್ತು.

ಪ್ರಶಸ್ತಿಗಳು:

  • 11 ಗ್ರಾಮಿ ಪ್ರಶಸ್ತಿ, ಗೋಲ್ಡನ್ ಗ್ಲೋಬ್ ಪ್ರಶಸ್ತಿ ಮತ್ತು ಅಕಾಡೆಮಿ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.

ತೆಲಂಗಣದ “ಬತುಕಮ್ಮ” ಹಬ್ಬ ಗಿನ್ನಿಸ್ ದಾಖಲೆ ಸೇರ್ಪಡೆ

ತೆಲಂಗಣದ ಪ್ರಮುಖ ಹಬ್ಬಗಳಲ್ಲಿ ಒಂದಾದ “ಬಕುತಮ್ಮ” ಹಬ್ಬ ಗಿನ್ನಿಸ್ ದಾಖಲೆಗೆ ಸೇರ್ಪಡೆಗೊಂಡಿದೆ. ಹೈದಾರಾಬಾದಿನ ಲಾಲ್ ಬಹಾದ್ದೂರ್ ಶಾಸ್ತ್ರಿ ಕ್ರೀಡಾಂಗಣದಲ್ಲಿ 9,292 ಮಹಿಳೆಯರು ಈ ಹಬ್ಬದಲ್ಲಿ ಭಾಗವಹಿಸಿ ಹೊಸ ದಾಖಲೆ ಬರೆದಿದ್ದಾರೆ. ಕಳೆದ ವರ್ಷ ಕೇರಳದಲ್ಲಿ ಏರ್ಪಡಿಸಲಾಗಿದ್ದ ಓಣಂ ನೃತ್ಯ ಕಾರ್ಯಕ್ರಮದಲ್ಲಿ ಐದು ಸಾವಿರಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಿದ್ದರು. ಈಗ ಬತುಕಮ್ಮ ಹಬ್ಬ ಈ ದಾಖಲೆಯನ್ನು ಮುರಿದು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡಿಗೆ ಸೇರ್ಪಡೆಯಾಗಿದೆ.

ಬತುಕಮ್ಮ ಹಬ್ಬದ ಬಗ್ಗೆ:

ಬತುಕಮ್ಮ ಹಬ್ಬಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಸರ್ವಪಿತೃ ಅಮವಾಸ್ಯೆಯ ನಂತರ ಆಚರಿಸಲಾಗುವ ಈ ಹಬ್ಬದಲ್ಲಿ, ಮಣ್ಣಿನಿಂದ ಮಾಡಿದ ದುರ್ಗೆಯನ್ನು ಪೂಜಿಸಿ, ಹೂಗಳಿಂದ ಅಲಂಕಾರ ಮಾಡಿ ನಂತರ ವಿಸರ್ಜಿಸಲಾಗುತ್ತದೆ. ಇತಿಹಾಸ ತಜ್ಞರ ಪ್ರಕಾರ ಚೋಳ ಸಾಮ್ರಾಜ್ಯದ ದೊರೆ ಧರ್ಮಾಂಗಧ ಮತ್ತು ಸತ್ಯವತಿ ದಂಪತಿಗಳು ಹಲವು ವರ್ಷಗಳ ಪೂಜೆ, ಪುನಸ್ಕಾರದ ನಂತರ ಹೆಣ್ಣು ಮಗು ಜನಿಸುತ್ತದೆ. ಈ ಹೆಣ್ಣು ಮಗು ದೊಡ್ಡವಳಾಗುವ ತನಕ ಹಲವು ಕಷ್ಟಕರ್ಪಾಣ್ಯವನ್ನು ಎದುರಿಸುತ್ತಿರುತ್ತಾರೆ. ಕೆಲ ಕಾಲದ ನಂತರ ಮಗುವಿಗೆ ಇಟ್ಟಿದ್ದ ಲಕ್ಷ್ಮಿ ಎನ್ನುವ ಹೆಸರನ್ನು ಬತುಕಮ್ಮ ಎಂದು ಮರುನಾಮಕರಣ ಮಾಡುತ್ತಾರೆ. ಅಂದಿನಿಂದ ಈ ಬತುಕಮ್ಮ ಹಬ್ಬವನ್ನು ಆಚರಿಸಲಾಗುತ್ತದೆ. ಮಹಿಳೆಯರೇ ಆಚರಿಸುವ ಈ ಹಬ್ಬದಲ್ಲಿ ಮದುವೆಯ ಹೊಸ್ತಿಲಲ್ಲಿರುವ ಹೆಣ್ಣು ಮಕ್ಕಳು ಮತ್ತು ಹೆಂಗಸರು ಈ ಹಬ್ಬದಲ್ಲಿ ಭಾಗವಹಿಸುವುದು ವಾಡಿಕೆ. ಇನ್ನೊಂದು ಮೂಲಗಳ ಪ್ರಕಾರ ಮಹಿಷಾಸುರ ಎನ್ನುವ ರಾಕ್ಷಸನನ್ನು ದೇವಿ ಸಂಹಾರ ಮಾಡಿದ ನಂತರ ದೀರ್ಘ ನಿದ್ದೆಗೆ ಶರಣಾಗುತ್ತಾಳೆ. ದೇವತೆಗಳ, ಮುನಿಗಳ ಪ್ರಾರ್ಥನೆಯ ನಂತರ ದಶಮಿಯ ದಿನದಂದು ದೇವಿ ನಿದ್ದೆಯಿಂದ ಏಳುತ್ತಾಳೆ. ಅದಕ್ಕಾಗಿ ಈ ಬತುಕಮ್ಮ ಹಬ್ಬವನ್ನು ಆಚರಿಸಲಾಗುತ್ತದೆ.

21 ಹೊಸಜಿಲ್ಲೆಗಳನ್ನು ರಚಿಸಿದ ತೆಲಂಗಣ ರಾಜ್ಯ

ಆಡಳಿತದಲ್ಲಿ ಬಾರಿ ಬದಲಾವಣೆ ತರಲು ಮುಂದಾಗಿರುವ ತೆಲಂಗಣ ರಾಜ್ಯ ಸರ್ಕಾರ ಹೊಸದಾಗಿ 21 ಜಿಲ್ಲೆಗಳನ್ನು ರಚಿಸಿದೆ. ರಾಜ್ಯ ರಚನೆಯಾದ ಎರಡು ವರ್ಷಗಳ ಬಳಿಕ ಹೊಸದಾಗಿ 21 ಜಿಲ್ಲೆಗಳನ್ನು ರಚಿಸಿದ್ದು, ರಾಜ್ಯದ ಒಟ್ಟು ಜಿಲ್ಲೆಗಳ ಸಂಖ್ಯೆ 31ಕ್ಕೆ ಏರಿದೆ.

ಹೊಸದಾಗಿ ರಚನೆಯಾಗಿರುವ ಜಿಲ್ಲೆಗಳು:

ಸಿದ್ದಿಪೇಟ, ಜನಗಾಮ, ಜಯಶಂಕರ್, ಜಗಿತ್ಯಾಲ, ವಾರಂಗಲ್ ಗ್ರಾಮಾಂತರ, ಯದಾದ್ರಿ, ಪೆದ್ದಪಲ್ಲಿ, ಕಾಮಾರೆಡ್ಡಿ, ಮೆದಕ್, ಮಂಚಿರ್ಯಾಲ, ವಿಕಾರಾಬಾದ್, ರಾಜನ್ನ, ಆಸಿಫಾಬಾದ್, ಸೂರ್ಯಾಪೇಟ, ಕೊತ್ತಗೂಡೆಂ, ನಿರ್ಮಲ್, ವನಪರ್ತಿ, ನಾಗರ್ ಕರ್ನೂಲು, ಮಹಬೂಬಾಬಾದ್ ಜೋಗುಲಾಂಬ ಮತ್ತು ಮಲ್ಕಾಜ್‌ಗಿರಿ.

ಹಿನ್ನಲೆ:

  • ಜೂನ್ 4, 2014 ರಂದು ತೆಲಂಗಣ ರಾಜ್ಯ ಭಾರತದ 29ನೇ ರಾಜ್ಯವಾಗಿ ಉದಯಿಸಿತು. ಆಂಧ್ರಪ್ರದೇಶವನ್ನು ವಿಭಜನೆಗೊಳಿಸಿ ತೆಲಂಗಣ ಹೊಸ ರಾಜ್ಯವಾಗಿ ಸ್ಥಾಪನೆಯಾಯಿತು. ತೆಲಂಗಣ ರಾಜ್ಯ ಸ್ಥಾಪನೆಯಾದಾಗ 10 ಜಿಲ್ಲೆಗಳನ್ನು ಒಳಗೊಂಡಿತ್ತು.
  • ಆಡಳಿತ ಸುಧಾರಣೆ ತರಲು ಹೊಸ ಜಿಲ್ಲೆಗಳನ್ನು ರಚಿಸಲಾಗಿದ್ದು, ಎರಡ ರಿಂದ ನಾಲ್ಕು ಲಕ್ಷ ಜನಸಂಖ್ಯೆಗೆ ಒಂದು ಹೊಸ ಜಿಲ್ಲೆಯನ್ನು ರಚಿಸಲಾಗಿದೆ.
  • ರಾಜ್ಯಗಳನ್ನು ಸಣ್ಣ ಜಿಲ್ಲೆಗಳಾಗಿ ವಿಂಗಡಿಸುವ ಮೂಲಕ ಜನ ಕೇಂದ್ರೀಕೃತ ಕಲ್ಯಾಣ ಯೋಜನೆಗಳನ್ನು ಮತ್ತು ಆಡಳಿತವನ್ನು ಜಾರಿಗೆ ತರಲು ಈ ಕ್ರಮಕೈಗೊಳ್ಳಲಾಗಿದೆ. ಸ್ಕಾಂಡಿನೇವಿಯಾ ರಾಷ್ಟ್ರಗಳ ಮಾದರಿಯಲ್ಲಿ ಹೊಸ ಆಡಳಿತ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಾಗುತ್ತಿದೆ.

ಶೂಟರ್ ಜಿತು ರಾಯ್ಗೆ “ಚಾಂಪಿಯನ್ ಆಫ್ ಚಾಂಪಿಯನ್ಸ್” ಪ್ರಶಸ್ತಿ

ಭಾರತದ ಖ್ಯಾತ ಶೂಟರ್ ಜಿತು ರಾಯ್ ಅವರು 2016 ಅಂತಾರಾಷ್ಟ್ರೀಯ ಶೂಟಿಂಗ್ ಸ್ಪೋರ್ಟ್ಸ್ ಫೆಡರೇಶನ್(ISSF)ನ ಚಾಂಪಿಯನ್ ಆಫ್ ಚಾಂಪಿಯನ್ಸ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇಟಲಿಯ ಬೊಲೊಗ್ನಾದಲ್ಲಿ ನಡೆದ 10 ಮೀಟರ್ ಏರ್ ಪಿಸ್ತೂಲ್ ಫೈನಲ್ನಲ್ಲಿ ಜಿತು ರಾಯ್ ಅವರು ಸರ್ಬಿಯಾದ ಡಾಮಿರ್ ಮಿಕೆಕ್ ಅವರನ್ನು ಹಿಂದಿಕ್ಕಿ 5,587 ಡಾಲರ್(5,000 ಯುರೋಸ್) ಮೊತ್ತದ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ. ಒಲಿಂಪಿಕ್ ವಿಜೇತ “ಅನ್ನಾ ಕೊರಕಕಿ” ರವರು ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡರು.

ರೈಫಲ್ ವಿಭಾಗದಲ್ಲಿ:

  • ರೈಫಲ್ ವಿಭಾಗದಲ್ಲಿ ಈ ಪ್ರಶಸ್ತಿಯನ್ನು ರಷ್ಯಾದ ಸೆರ್ಗೆ ಕಮೆನ್ಸಿಕಿ ರವರು ತಮ್ಮದಾಗಿಸಿಕೊಂಡರು. ಎರಡು ಬಾರಿ ಒಲಂಪಿಕ್ ಚಾಂಪಿಯನ್ ಚೀನಾದ ದು ಲೀ ಅವರನ್ನು ಸೋಲಿಸಿ ಕಮೆನ್ಸಿಕಿ ಪ್ರಶಸ್ತಿಯನ್ನು ಗೆದ್ದುಕೊಂಡರು.
  • ಲಂಡನ್ ಒಲಂಪಿಕ್ ವಿಜೇತ ಚೀನಾದ ಯಿ ಸಿಲಿಂಗ್ ಮೂರನೇ ಸ್ಥಾನವನ್ನು ಪಡೆದುಕೊಂಡರು.

ಮೊರಾಕೊದ ಪ್ರಧಾನ ಮಂತ್ರಿಯಾಗಿ “ಅಬ್ದೆಲಿಲಹ್ ಬೆಕಿರನೆ (Abdelilah Bekirane)” ನೇಮಕ

ಅಬ್ದೆಲಿಲಹ್ ಬೆಕಿರನೆ ರವರು ಮೊರಾಕಾದ ಪ್ರಧಾನಿಯಾಗಿ ಎರಡನೇ ಅವಧಿಗೆ ನೇಮಕಗೊಂಡಿದ್ದಾರೆ. ನವೆಂಬರ್ 2011ರಿಂದ ಬೆಕಿರನೆ ಅವರು ಮೊರಾಕೊದ ಪ್ರಧಾನಿ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇತ್ತೀಚೆಗೆ ನಡೆದ ಸಾರ್ವತಿಕ ಚುನಾವಣೆಯಲ್ಲಿ ಬೆಕಿರನೆ ನೇತೃತ್ವದ “ಇಸ್ಲಾಮಿಕ್ ಜಸ್ಟೀಸ್ ಅಂಡ್ ಡೆವೆಲಪ್ಮೆಂಟ್” ಪಕ್ಷ ಜಯಭೇರಿಯಾದ ಹಿನ್ನಲೆಯಲ್ಲಿ ಮೊರಾಕೊದ ಅಧ್ಯಕ್ಷ ಮೊಹಮ್ಮದ್ V ರವರು ಬೆಕಿರನೆ ಅವರನ್ನು ಪ್ರಧಾನಿಯೆಂದು ಅಧಿಕೃತವಾಗಿ ಘೋಷಿಸಿದರು.

ಹಿನ್ನಲೆ:

  • ಇತ್ತೀಚೆಗೆ ನಡೆದ ಮೊರಾಕೊದ ಸಾರ್ವತಿಕ ಚುನಾವಣೆಯಲ್ಲಿ ಬೆಕರನೆ ಅವರ “ಇಸ್ಲಾಮಿಕ್ ಜಸ್ಟೀಸ್ ಅಂಡ್ ಡೆವೆಲಪ್ಮೆಂಟ್” ಪಕ್ಷ 125 ಸ್ಥಾನಗಳನ್ನು ಗೆಲ್ಲುವ ಮೂಲಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.
  • ಮೊರಾಕೊದ ವಿರೋಧ ಪಕ್ಷವಾದ “ಅಥೆಂಟಿಸಿಟಿ ಮತ್ತು ಮಾಡರ್ನಿಟಿ” ಪಕ್ಷ 102 ಸ್ಥಾನಗಳನ್ನು ಗೆದ್ದು ಎರಡನೇ ಸ್ಥಾನವನ್ನು ಪಡೆದುಕೊಂಡರೆ, ದೇಶದ ಅತ್ಯಂತ ಹಳೆಯ ಪಕ್ಷವಾದ ಇಂಡಿಪೆಂಡೆನ್ಸ್ ಪಕ್ಷ ಕೇವಲ 46 ಸ್ಥಾನಗಳನ್ನು ಗೆದ್ದಿತು.
  • ಮೊರಾಕೊ ಬಹು ಪಕ್ಷೀಯ ವ್ಯವಸ್ಥೆಯನ್ನು ಹೊಂದಿದ್ದು, 395 ಸ್ಥಾನಗಳನ್ನು ಹೊಂದಿರುವ ಕೆಳಮನೆಯಲ್ಲಿ ಯಾವುದೇ ಒಂದು ಪಕ್ಷಕ್ಕೆ ಸ್ಪಷ್ಟ ಬಹುಮತ ಪಡೆಯುವುದು ಅಸಾಧ್ಯವಾಗಿತ್ತು.

One Thought to “ಪ್ರಚಲಿತ ವಿದ್ಯಮಾನಗಳು- ಅಕ್ಟೋಬರ್-13, 2016”

Leave a Comment

This site uses Akismet to reduce spam. Learn how your comment data is processed.