ನಾನಜಿ ದೇಶಮುಖ್ ಜನ್ಮ ಶತಮಾನೋತ್ಸವ ಆಚರಿಸಲು ಕೇಂದ್ರ ಸರ್ಕಾರ ನಿರ್ಧಾರ

ಕೇಂದ್ರ ಸರ್ಕಾರ ಅಕ್ಟೋಬರ್ 11, 2016 ರಿಂದ ಅಕ್ಟೋಬರ್ 11, 2017 ರವರೆಗೆ ಸಾಮಾಜಿಕ ಕಾರ್ಯಕರ್ತ ಮತ್ತು ಮಾಜಿ ಆರೆಸ್ಸೆಸ್ ನಾಯಕ ನಾನಜಿ ದೇಶಮುಖ್ ಅವರ ಜನ್ಮಶತಮಾನೋತ್ಸವವನ್ನು ಆಚರಿಸಲು ನಿರ್ಧರಿಸಿದೆ. ಕೇಂದ್ರ ಸಂಸ್ಕೃತ ಸಚಿವ ಮಹೇಶ್ ಶರ್ಮಾ ಅವರು ಈ ವಿಷಯವನ್ನು ಖಚಿತಪಡಿಸಿದ್ದಾರೆ.

ನಾನಜಿ ದೇಶಮುಖ್:

  • ನಾನಜಿ ದೇಶಮುಖ್ ಅವರು ಸಾಮಾಜಿಕ ಕಾರ್ಯಕರ್ತರಾಗಿ ಶಿಕ್ಷಣ, ಆರೋಗ್ಯ ಮತ್ತು ಗ್ರಾಮೀಣ ಸ್ವಾಲಂಭನೆ ಕ್ಷೇತ್ರದಲ್ಲಿ ಪ್ರಮುಖವಾಗಿ ತೊಡಗಿಸಿಕೊಂಡಿದ್ದರು.
  • ಭಾರತೀಯ ಜನ ಸಂಘ ಮತ್ತು ರೆಸ್ಸೆಸ್ ನಾಯಕರಾಗಿ ಸಹ ಸೇವೆ ಸಲ್ಲಿಸಿದ್ದರು.
  • ಅಕ್ಟೋಬರ್ 11, 1916 ರಲ್ಲಿ ಮಹಾರಾಷ್ಟ್ರದ ಹಿಂಗೋಲಿ ಜಿಲ್ಲೆಯಲ್ಲಿ ಜನಿಸಿದರು. ಚಾಂದಿಕದಾಸ್ ಅಮೃತರಾವ್ ದೇಶಮುಖ್ ಇವರ ಮೂಲ ಹೆಸರು.
  • ದೇಶಮುಖ್ ರವರು ಲೋಕಮಾನ್ಯ ತಿಲಕ್ ಮತ್ತು ತಿಲಕರ ರಾಷ್ಟ್ರೀಯತವಾದದಿಂದ ಪ್ರೇರೇಪಣೆಗೊಂಡಿದ್ದರು. ಅಲ್ಲದೇ ಆರೆಸ್ಸೆಸ್ ಸಂಸ್ಥಾಪಕ ಸರ್ಸಂಗಚಾಲಕರಾಗಿದ್ದ ಡಾ.ಕೇಶವ್ ಬಲಿರಾಮ್ ಹೆಗ್ಡೆವಾರ್ ರವರೊಂದಿಗೆ ಒಡನಾಟವನ್ನು ಹೊಂದಿದ್ದರು.
  • ವಿನೋದ ಭಾವೆ ಅವರ ಭೂದಾನ ಚಳುವಳಿ ಹಾಗೂ ಜೆ ಪಿ ನಾರಾಯಣ್ ರವರ ಸಂಪೂರ್ಣ ಕ್ರಾಂತಿ ಚಳುವಳಿಯನ್ನು ಬೆಂಬಲಿಸಿ ಸಕ್ರಿಯವಾಗಿ ಭಾಗವಹಿಸಿದ್ದರು.
  • ಜನತಾ ಪಕ್ಷದ ಪ್ರಮುಖ ರೂವಾರಿಯು ಆಗಿದ್ದ ದೇಶಮುಖ್ ರವರು 1977 ರಲ್ಲಿ ಉತ್ತರಪ್ರದೇಶದ ಬಲರಾಮ್ಪರ ಲೋಕಸಭಾ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿದ್ದರು.
  • ಭಾರತದ ಮೊದಲ ಗ್ರಾಮೀಣ ವಿಶ್ವವಿದ್ಯಾಲಯವಾದ ಚಿತ್ರಕೂಟ ಗ್ರಾಮೋದಯ ವಿಶ್ವವಿದ್ಯಾಲಯವನ್ನು ಚಿತ್ರಕೂಟದಲ್ಲಿ ಸ್ಥಾಪಿಸಿದರು ಹಾಗೂ ಈ ವಿವಿಯ ಪ್ರಥಮ ಕುಲಪತಿಯಾಗಿಯು ಸೇವೆ ಸಲ್ಲಿಸಿದ್ದರು.
  • ಗ್ರಾಮೀಣ ಭಾಗದಲ್ಲಿ ಬಡತನ ತೊಳೆಯಲು ಶ್ರಮಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ರಾಷ್ಟ್ರಕ್ಕೆ ಇವರು ನೀಡಿದ್ದ ಕೊಡುಗೆಯನ್ನು ಗಮನಿಸಿ 1999 ರಲ್ಲಿ ಇವರನ್ನು ರಾಜ್ಯಸಭೆಗೆ ನೇಮಕ ಮಾಡಲಾಗಿತ್ತು.
  • 1999 ರಲ್ಲಿ ಪದ್ಮವಿಭೂಷಣ ಪ್ರಶಸ್ತಿಯನ್ನು ಇವರಿಗೆ ನೀಡಲಾಗಿದೆ.

ಹಿಮಾಂಶು: ದೇಶದ ಅತಿ ಎತ್ತರದ ಹಿಮನದಿ ಸಂಶೋಧನಾ ಕೇಂದ್ರ ಆರಂಭ

ಹಿಮಾಲಯದಲ್ಲಿ ಸ್ಥಾಪಿಸಲಾಗಿರುವ ದೇಶದ ಅತಿ ಎತ್ತರದ ಹಿಮನದಿ ಸಂಶೋಧನಾ ಕೇಂದ್ರ ಹಿಮಾಂಶು (Himamshu) ತನ್ನ ಕೆಲಸವನ್ನು ಆರಂಭಿಸಿತು. 13,500 ಮೀಟರ್ ಎತ್ತರವಿರುವ ಹಿಮಾಚಲ ಪ್ರದೇಶದ ಸ್ಪಿತಿಯಲ್ಲಿ ಈ ಕೇಂದ್ರವನ್ನು ಸ್ಥಾಪಿಸಲಾಗಿದೆ. ಸಂಶೋಧಕರಿಗೆ ಹಿಮನದಿ ಚಲನೆ ಮತ್ತು ಹಿಮ ಹೊದಿಕೆ ವ್ಯತ್ಯಾಸವನ್ನು ಸೂಕ್ಷ್ಮವಾಗಿ ಅಧ್ಯಯನ ನಡೆಸಲು ಈ ಕೇಂದ್ರ ಸಹಕಾರಿಯಾಗಲಿದೆ.

ಪ್ರಮುಖಾಂಶಗಳು:

  • ಹಿಮನದಿ ಮತ್ತು ಅವುಗಳ ಕೊಡುಗೆ ಬಗ್ಗೆ ವೈಜ್ಞಾನಿಕವಾಗಿ ಸಂಶೋಧನೆ ನಡೆಸಲು ಮಹತ್ವದ ಕೊಡುಗೆಯನ್ನು ಈ ಸಂಶೋಧನಾ ಕೇಂದ್ರ ನೀಡಲಿದೆ.
  • ಈ ಸಂಶೋಧನಾ ಕೇಂದ್ರವನ್ನು ನ್ಯಾಷನಲ್ ಸೆಂಟರ್ ಫಾರ್ ಅಂಟಾರ್ಟಿಕ್ ಅಂಡ್ ಓಷನ್ ರೀಸರ್ಚ್ (ಎನ್‍ಸಿಎಓಆರ್) ಸ್ಪಿತಿ ಕಣಿವೆಯಲ್ಲಿ ಸ್ಥಾಪಿಸಿದೆ. ಸ್ಪಿತಿ ಕಣಿವೆ ದೇಶದ ಅತ್ಯಂತ ನಿರ್ಜನ ಪ್ರದೇಶಗಳಲ್ಲಿ ಒಂದಾಗಿದೆ.
  • ಹಿಮನದಿ ಕರಗುವಿಕೆ ಮತ್ತು ಹವಾಮಾನ ಬದಲಾವಣೆಗೆ ಇರುವ ಸಂಬಂಧವನ್ನು ಅಧ್ಯಯನ ನಡೆಸಲು ಉಪಕರಣಗಳನ್ನು ಈ ಕೇಂದ್ರದಲ್ಲಿ ಅಳವಡಿಸಲಾಗಿದೆ.
  • ಸ್ವಯಂಚಾಲಿತ ಹವಾಮಾನ ಕೇಂದ್ರಗಳು, ಗ್ರೌಂಡ್ ಪೆನೆಟ್ರೇಟಿಂಗ್ ರಾಡಾರ್‍ಗಳು, ಜಿಯೊಡೆಟಿಕ್ ಜಿಪಿಎಸ್ ವ್ಯವಸ್ಥೆ ಹಾಗೂ ಇತರ ಅತ್ಯಾಧುನಿಕ ಸೌಲಭ್ಯಗಳನ್ನು ಈ ಸಂಶೋಧನಾ ಕೇಂದ್ರ ಒಳಗೊಂಡಿದೆ.

ಈ ಕೇಂದ್ರದ ಮಹತ್ವ:

  • ಹಿಮಾಲಯ ಭಾಗವು ಧ್ರುವ ಪ್ರದೇಶಗಳನ್ನು ಹೊರತುಪಡಿಸಿದರೆ ಅತಿ ಹೆಚ್ಚು ಹಿಮದಟ್ಟಣೆಯನ್ನು ಹೊಂದಿರುವ ಪ್ರದೇಶವಾಗಿದೆ. ಅದಕ್ಕಾಗಿ ಈ ಭಾಗವನ್ನು “ಏಷ್ಯಾದ ವಾಟರ್ ಟವರ್” ಎಂದು ಕರೆಯಲಾಗುತ್ತದೆ.
  • ಹತ್ತು ಪ್ರಮುಖ ನದಿಗಳಿಗೆ ಈ ಭಾಗ ಮೂಲ ಸ್ಥಳವಾಗಿದೆ. ಈ ನದಿಗಳು ಭಾರತ, ಪಾಕಿಸ್ತಾನ ಮತ್ತು ಬಾಂಗ್ಲದೇಶದ ಸುಮಾರು 70 ಕೋಟಿ ಜನರಿಗೆ ಕುಡಿಯುವ ನೀರು, ನೀರಾವರಿ ವ್ಯವಸ್ಥೆ ಮತ್ತು ವಿದ್ಯುತ್ ವ್ಯವಸ್ಥೆಯನ್ನು ಕಲ್ಪಿಸಿವೆ.
  • ಆದ್ದರಿಂದ ಈ ಹಿಮನದಿಗಳ ಬಗ್ಗೆ ಅಧ್ಯಯನ ಮಾಡುವುದು ಅತ್ಯಂತ ಪ್ರಮುಖವಾಗಿದೆ.

ಜೈಪುರದಲ್ಲಿ 4ನೇ ಬ್ರಿಕ್ಸ್ ವಿಜ್ಞಾನ, ತಂತ್ರಜ್ಞಾನ ಮತ್ತು ಅನುಶೋಧನಾ ಅಧಿಕಾರಿಗಳ ಸಭೆ

ಬ್ರಿಕ್ಸ್ ರಾಷ್ಟ್ರಗಳ 4ನೇ ವಿಜ್ಞಾನ, ತಂತ್ರಜ್ಞಾನ ಮತ್ತು ಅನುಶೋಧನಾ ಕುರಿತಾದ ಅಧಿಕಾರಿಗಳ ಸಭೆ ರಾಜಸ್ತಾನದ ಜೈಪುರದಲ್ಲಿ ನಡೆಯಿತು. ವಿಜ್ಞಾನ, ತಂತ್ರಜ್ಞಾನ ಮತ್ತು ಅನುಶೋಧನಾ ಕ್ಷೇತ್ರಗಳಲ್ಲಿ ಬ್ರಿಕ್ಸ್ ರಾಷ್ಟ್ರಗಳ ನಡುವೆ ಸಹಕಾರವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಈ ಸಭೆಯನ್ನು ಆಯೋಜಿಸಲಾಗಿತ್ತು.

  • ಭವಿಷ್ಯದಲ್ಲಿ ತಂತ್ರಜ್ಞಾನದ ಪ್ರಗತಿ ಮತ್ತು ಸಹಕಾರದ ಬಗ್ಗೆ ಚರ್ಚಿಸಲು ಹಾಗೂ ಆದ್ಯತೆಗಳನ್ನು ನಿಗದಿಪಡಿಸುವ ಬಗ್ಗೆ ಇದರಲ್ಲಿ ಚರ್ಚಿಸಲಾಯಿತು.
  • ವಿಜ್ಞಾನ, ತಂತ್ರಜ್ಞಾನ ಹಾಗೂ ಅನುಶೋಧನಾ ಕ್ಷೇತ್ರದಲ್ಲಿ ಪರಸ್ಪರ ಸಹಕಾರ ಹಾಗೂ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಸಲುವಾಗಿ ಎಲ್ಲ ದೇಶಗಳು ಜಂಟಿ ಕ್ರಿಯಾಯೋಜನೆಯನ್ನು ತಯಾರಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.
  • ಭಾರತ ಪ್ರಸ್ತಾಪಿಸಿರುವ ಬ್ರಿಕ್ಸ್ ವಿಜ್ಞಾನ ಮತ್ತು ತಂತ್ರಜ್ಞಾನ ಉದ್ದಿಮೆ ಮತ್ತು ಪಾಲುಗಾರಿಕೆ ಕಾರ್ಯಕ್ರಮದ ಮೂಲಕ ಯುವ ವಿಜ್ಞಾನಿಗಳ ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಪ್ರಸ್ತಾವನೆಗೆ ಸಭೆಯಲ್ಲಿ ಸಮ್ಮತಿ ನೀಡಲಾಯಿತು.

Leave a Comment

This site uses Akismet to reduce spam. Learn how your comment data is processed.