ಅಕ್ಟೋಬರ್ 11: ಅಂತಾರಾಷ್ಟ್ರೀಯ ಹೆಣ್ಣು ಮಗು ದಿನ

ಅಂತಾರಾಷ್ಟ್ರೀಯ ಹೆಣ್ಣು ಮಗು ದಿನವನ್ನು ಪ್ರತಿ ವರ್ಷ ಅಕ್ಟೋಬರ್ 11 ರಂದು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಹೆಣ್ಣು ಮಕ್ಕಳ ಹಕ್ಕುಗಳು ಮತ್ತು ಹೆಣ್ಣು ಮಕ್ಕಳು ಎದುರಿಸುತ್ತಿರುವ ಸವಾಲುಗಳನ್ನು ಗುರುತಿಸಲು ಈ ದಿನವನ್ನು ಆಚರಿಸಲಾಗುತ್ತಿದೆ.

ಈ ದಿನದ ಮಹತ್ವ:

  • ಜಾಗತಿಕ ಮಟ್ಟದಲ್ಲಿ ಹೆಣ್ಣು ಮಕ್ಕಳು ಎದುರಿಸುತ್ತಿರುವ ಲಿಂಗ ತಾರತಮ್ಯ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸುವುದು ಮತ್ತು ಹೆಣ್ಣು ಮಕ್ಕಳಿಗೆ ಹೆಚ್ಚಿನ ಅವಕಾಶಗಳನ್ನು ಸೃಷ್ಟಿಸುವುದು.
  • 2012 ರಲ್ಲಿ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಹೆಣ್ಣು ಮಗು ದಿನವನ್ನು ಆಚರಿಸಲಾಗಿತ್ತು. ಐದನೇ ಅಂತಾರಾಷ್ಟ್ರೀಯ ಹೆಣ್ಣು ಮಗು ದಿನವನ್ನು ಈ ವರ್ಷ ಆಚರಿಸಲಾಗುತ್ತಿದೆ.
  • ಈ ವರ್ಷದ ಥೀಮ್ Girls’ Progress = Goals’ Progress: What Counts for Girls”.

ಹಿನ್ನಲೆ:

  • ಅಂತಾರಾಷ್ಟ್ರೀಯ ಹೆಣ್ಣು ಮಗು ದಿನವನ್ನು ವಿಶ್ವಸಂಸ್ಥೆಯ ಸಾಮಾನ್ಯ ಸಭೆ 2011 ರಲ್ಲಿ ಕೈಗೊಂಡ ನಿರ್ಣಯದ ಮೇರೆಗೆ 2012 ರಿಂದ ಆಚರಿಸಲಾಗುತ್ತಿದೆ.
  • ಹೆಣ್ಣು ಮಕ್ಕಳ ಹಕ್ಕುಗಳು ಮತ್ತು ಹೆಣ್ಣು ಮಕ್ಕಳು ಎದುರಿಸುತ್ತಿರುವ ಸವಾಲುಗಳ ಬಗ್ಗೆ ಅರಿವು ಮೂಡಿಸುವುದು ಈ ದಿನದ ಮಹತ್ವವಾಗಿದೆ. ಅಲ್ಲದೇ ಹೆಣ್ಣು ಮಕ್ಕಳಿಗೆ ಶೈಕ್ಷಣಿಕ ಹಕ್ಕು, ಆರೋಗ್ಯ ಸೇವೆ, ಕಾನೂನು ಹಕ್ಕು ಒದಗಿಸುವುದು ಮತ್ತು ಲಿಂಗ ತಾರತಮ್ಯ, ಬಾಲ್ಯ ವಿವಾಹ ಮತ್ತು ಹೆಣ್ಣು ಮಕ್ಕಳ ಮೇಲೆ ಶೋಷಣೆಯನ್ನು ನಿಲ್ಲಿಸಲು ವಿಶ್ವಕ್ಕೆ ಕರೆ ನೀಡುವುದು.

ಆಲಿವರ್ ಹಾರ್ಟ್ ಮತ್ತು ಬೆಂಗ್ಟ್ ಹೋಲ್ಮಸ್ಟ್ರಾಮ್ ಗೆ ಅರ್ಥಶಾಸ್ತ್ರ ನೊಬೆಲ್ ಪ್ರಶಸ್ತಿ

ಬ್ರಿಟನ್‌ – ಅಮೆರಿಕದ ಅರ್ಥಶಾಸ್ತ್ರಜ್ಞರಾದ ಆಲಿವರ್‌ ಹಾರ್ಟ್‌ ಮತ್ತು ಫಿನ್ಲೆಂಡ್‌ನ ಬೆಂಗ್ಟ್‌ ಹೋಲ್ಮಸ್ಟ್ರಾಮ್‌ ಅವರಿಗೆ 2016ನೇ ಸಾಲಿನ ಅರ್ಥಶಾಸ್ತ್ರ ನೊಬೆಲ್ ಪ್ರಶಸ್ತಿ ದೊರೆತಿದೆ. ಇವರು ಅಭಿವೃದ್ಧಿಪಡಿಸಿರುವ ‘ಗುತ್ತಿಗೆ ಸಿದ್ಧಾಂತ (Contract Theory)’ಕ್ಕೆ ನೊಬೆಲ್ ಅರ್ಥಶಾಸ್ತ್ರ ಪ್ರಶಸ್ತಿಯನ್ನು ಜಂಟಿಯಾಗಿ ಘೋಷಿಸಲಾಗಿದೆ. ಇವರಿಬ್ಬರೂ ಪ್ರಶಸ್ತಿಯ ಮೊತ್ತವಾದ ₹ 6.19 ಕೋಟಿಗಳನ್ನು ಸಮನಾಗಿ ಹಂಚಿಕೊಳ್ಳಲಿದ್ದಾರೆ. ಅರ್ಥಶಾಸ್ತ್ರಕ್ಕೆ ನೀಡಲಾಗುವ ನೊಬೆಲ್‌ ಪ್ರಶಸ್ತಿಯನ್ನು ಸ್ವೀಡನ್ನಿನ ಕೇಂದ್ರೀಯ ಬ್ಯಾಂಕ್‌ 1968ರಲ್ಲಿ ಸ್ಥಾಪಿಸಿದೆ.

  • ಉನ್ನತ ಹುದ್ದೆಗಳಲ್ಲಿ ಇರುವವರ ಕಾರ್ಯದಕ್ಷತೆ ಆಧರಿಸಿದ ವೇತನ, ವಿಮೆ ಹಣ ಪಾವತಿ, ಕಡಿತ ಮತ್ತು ಸರ್ಕಾರಿ ವಲಯದ ಉತ್ಪಾದನಾ ಚಟುವಟಿಕೆಗಳ ಖಾಸಗೀಕರಣ ಸೇರಿದಂತೆ ವೈವಿಧ್ಯಮಯ ವಿಷಯಗಳನ್ನು ವಿಶ್ಲೇಷಿಸುವ ಸಮಗ್ರ ವಿಧಾನವನ್ನು ಈ ಇಬ್ಬರೂ ಅರ್ಥಶಾಸ್ತ್ರಜ್ಞರು ಈ ಗುತ್ತಿಗೆ ಸಿದ್ಧಾಂತದಲ್ಲಿ ಅಭಿವೃದ್ಧಿಪಡಿಸಿದ್ದಾರೆ ಎಂದು ಪ್ರಶಸ್ತಿ ಆಯ್ಕೆ ಸಮಿತಿಯು ತಿಳಿಸಿದೆ.
  • ನಿತ್ಯ ಜೀವನದಲ್ಲಿ ಗುತ್ತಿಗೆ ವಿಷಯ ಮತ್ತು ಉದ್ದಿಮೆ ಸಂಸ್ಥೆಗಳ ಕಾರ್ಯವೈಖರಿ ಅರ್ಥೈಸಿಕೊಳ್ಳಲು ಮತ್ತು ಗುತ್ತಿಗೆ ನಿಯಮಾವಳಿಗಳಲ್ಲಿನ ಲೋಪದೋಷಗಳನ್ನು ತಿಳಿದುಕೊಳ್ಳಲು ಇವರಿಬ್ಬರೂ ಅಭಿವೃದ್ಧಿಪಡಿಸಿದ ಸೈದ್ಧಾಂತಿಕ ನಿಯಮಗಳು ನೆರವಾಗಲಿವೆ.
  • ದಿವಾಳಿಗೆ ಸಂಬಂಧಿಸಿದ ಕಾನೂನುಗಳಿಂದ ಹಿಡಿದು ರಾಜಕೀಯ ಸಂವಿಧಾನ ರೂಪಿಸುವಲ್ಲಿ ಇವರಿಬ್ಬರೂ ತಮ್ಮ ಈ ‘ಗುತ್ತಿಗೆ ಸಿದ್ಧಾಂತ’ದ ಮೂಲಕ ‘ಬೌದ್ಧಿಕ ತಳಪಾಯ’ ಹಾಕಿದ್ದಾರೆ ಎಂದೂ ಸಮಿತಿ ಅಭಿಪ್ರಾಯಪಟ್ಟಿದೆ.

ಆಲಿವರ್ ಹಾರ್ಟ್: 1948 ಲಂಡನ್, ಯುಕೆ ಯಲ್ಲಿ ಜನನ. ಅಮೆರಿಕಾದ ಪ್ರಿನ್ಸೆಟನ್ ವಿಶ್ವವಿದ್ಯಾಲಯದಿಂದ ಪಿಹೆಚ್.ಡಿ ಪದವಿಯನ್ನು ಪಡೆದಿದ್ದಾರೆ. ಪ್ರಸ್ತುತ ಇವರು ಅಮೆರಿಕಾದ ಹಾರ್ವಡ್ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ಪ್ರಾಧ್ಯಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಬೆಂಗ್ಟ್ ಹೋಲ್ಮಸ್ಟ್ರಾಮ್: 1949 ರಲ್ಲಿ ಫಿನ್ಲ್ಯಾಂಡ್ನ ಹೆಲ್ಸಿಂಕಿಯಲ್ಲಿ ಜನಿಸಿರುವ ಇವರು ಅಮೆರಿಕಾದ ಸ್ಟಾನ್ ಫೋರ್ಡ್ ವಿಶ್ವವಿದ್ಯಾಲಯದಿಂದ ಪಿಎಚ್.ಡಿ ಪದವಿಯನ್ನು ಪಡೆದಿದ್ದಾರೆ. ಮಸ್ಸಚುಸೆಟ್ಸ್ ತಾಂತ್ರಿಕ ಸಂಸ್ಥೆಯಲ್ಲಿ ಅರ್ಥಶಾಸ್ತ್ರ ಮತ್ತು ನಿರ್ವಹಣೆ ವಿಷಯದ ಪ್ರಾಧ್ಯಪಕರಾಗಿದ್ದಾರೆ.

ಅರ್ಥಶಾಸ್ತ್ರ ನೊಬೆಲ್ ಬಗ್ಗೆ:

  • ಅರ್ಥಶಾಸ್ತ್ರ ನೊಬೆಲ್ ಪ್ರಶಸ್ತಿಯನ್ನ 1968ರಿಂದ ಸ್ವೀಡನ್ ಕೇಂದ್ರಿಯ ಬ್ಯಾಂಕ್ ನೀಡುತ್ತಿದೆ. 1895 ರಲ್ಲಿ ಆಲ್ಫ್ರೆಡ್ ನೊಬೆಲ್ ರವರು ಸ್ಥಾಪಿಸಿದ ನೊಬೆಲ್ ಪ್ರಶಸ್ತಿಗಳಲ್ಲಿ ಇದು ಒಳಗೊಂಡಿರಲಿಲ್ಲ.

ಪಾಣಿಪತ್ ತೈಲ ಸಂಸ್ಕರಣಗಾರ ಸಾಮರ್ಥ್ಯ ಹೆಚ್ಚಿಸಲು ರೂ 15000 ಕೋಟಿ ಹೂಡಲಿರುವ ಕೇಂದ್ರ ಸರ್ಕಾರ

ಹರಿಯಾಣದ ಪಾಣಿಪತ್ ತೈಲ ಸಂಸ್ಕರಣಗಾರ ಸಾಮರ್ಥ್ಯವನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಇದಕ್ಕಾಗಿ ರೂ 15000 ಕೋಟಿ ಹೂಡಿಕೆಗೆ ಸಮ್ಮತಿಸಿದೆ. ಪ್ರಸ್ತುತ ಈ ಸಂಸ್ಕರಣಗಾರ 15 ಮಿಲಿಯನ್ ಟನ್ ಸಾಮರ್ಥ್ಯ ಹೊಂದಿದ್ದು, 25 ಮಿಲಿಯನ್ ಟನ್ಗೆ ಏರಿಕೆಯಾಗಲಿದೆ. ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ರಾಜ್ಯ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಪಾಣಿಪತ್ ನಲ್ಲಿ ನಡೆದ ಸಭೆಯಲ್ಲಿ ವಿಷಯವನ್ನು ಬಹಿರಂಗಪಡಿಸಿದ್ದಾರೆ.

ಪ್ರಮುಖಾಂಶಗಳು:

  • ಸಂಸ್ಕರಣಗಾರದ ವಿಸ್ತರಣೆಯಿಂದ ಭವಿಷ್ಯದ ಬೇಡಿಕೆಯಂತೆ ಇಂಧನದ ಗುಣಮಟ್ಟವನ್ನು BS IV-BS VI ಗೆ ಹೆಚ್ಚಿಸಲು ಸಹಾಯವಾಗಲಿದೆ.
  • ಇಂಧನ ಗುಣಮಟ್ಟವನ್ನು ಹೆಚ್ಚಿಸುವುದಲ್ಲದೇ, ಅನೇಕ ಜನರಿಗೆ ಉದ್ಯೋಗ ಅವಕಾಶ ಸೃಷ್ಟಿಯಾಗಲಿದೆ.
  • ಇದರ ಜೊತೆಗೆ “ಇಂಡಿಯನ್ ಆಯಿಲ್ ಕಾರ್ಪೋರೇಷನ್ (IOC)” ಕೃಷಿ ತ್ಯಾಜ್ಯ ಬಳಸಿ ಬಯೋಎಥೆನಾಲ್ ಉತ್ಪಾದನ ಘಟಕವನ್ನು ಪಾಣಿಪತ್ ನಲ್ಲಿ ಸ್ಥಾಪಿಸಲಿದೆ. ಇದರಿಂದ ಕೃಷಿ ವಲಯಕ್ಕೂ ಅನುಕೂಲವಾಗಲಿದೆ.

ಬಯೋಎಥೆನಾಲ್ ಎಂದರೇನು?

  • ಬಯೋಎಥೆನಾಲ್ ಎಂದರೆ ಕೃಷಿ ತ್ಯಾಜ್ಯ ಮತ್ತು ಪೂರಕ ವಸ್ತುಗಳಲ್ಲಿರುವ ಕಾರ್ಬೋಹೈಡ್ರೇಟಗಳನ್ನು ಹುದುಗವ ಕ್ರಿಯೆಗೆ ಒಳಪಡಿಸಿ ಪಡೆದ ಅಲ್ಕೋಹಾಲ್.
  • ಬಯೋಎಥೆನಾಲ್ ಅನ್ನು ಡಿಸೇಲ್ ಅಥವಾ ಪೆಟ್ರೋಲ್ ನೊಂದಿಗೆ ಬಳಸಿ ಸಾರಿಗೆ ಇಂಧನವಾಗಿ ಬಳಸಬಹುದಾಗಿದೆ. ಬಯೋಎಥೆನಾಲ್ ಬಳಕೆಯಿಂದ ಇಂಧನ ಹೊರಸೂಸುವಿಕೆ ತಗ್ಗುವುದಲ್ಲದೇ, ತೈಲ ಆಮದಿನ ಮೇಲೆ ಅವಲಂಬನೆ ಆಗುವುದು ತಪ್ಪಲಿದೆ.

ಎಲ್ಇಡಿ ಕಾರ್ಯಕ್ರಮ ಅನುಷ್ಟಾನಕ್ಕೆ ಭಾರತದೊಂದಗಿ ಕೈಜೋಡಿಸಿದ ಅಂತಾರಾಷ್ಟ್ರೀಯ

ಭಾರತ ಸರ್ಕಾರದ ಪ್ರಮುಖ ಯೋಜನೆಗಳಲ್ಲಿ ಒಂದಾದ ಉನ್ನತ್ ಜ್ಯೋತಿ (UJALA)ಯಡಿ ಕೈಗೆಟುಕುವ ದರದಲ್ಲಿ ಎಲ್ಇಡಿ ಬಲ್ಬಗಳನ್ನು ವಿತರಿಸುವ ಕಾರ್ಯಕ್ರಮವನ್ನು ಅನುಷ್ಟಾನಗೊಳಿಸಲು ಅಂತಾರಾಷ್ಟ್ರೀಯ ಇಂಧನ ಸಂಸ್ಥೆ (International Energy Agency) ಭಾರತದೊಂದಿಗೆ ಕೈಜೋಡಿಸಿದೆ. ಎಲ್ಇಡಿ ಬಲ್ಬಗಳನ್ನು ಕೈಗೆಟುಕುವ ದರದಲ್ಲಿ ವಿತರಿಸುವ ಮೂಲಕ ಇಂಧನ ಉಳಿಸುವ ಯೋಜನೆಯಿಂದ ಅಂತಾರಾಷ್ಟ್ರೀಯ ಇಂಧನ ಸಂಸ್ಥೆ ಪ್ರಭಾವಿತಗೊಂಡಿರುವ ಕಾರಣ ಭಾರತದೊಂದಿಗೆ ಕೈಜೋಡಿಸಲು ಮುಂದೆ ಬಂದಿದೆ.

ಪ್ರಮುಖಾಂಶಗಳು:

  • ಉಜಾಲ ಯೋಜನೆಯನ್ನು ಕೇಂದ್ರ ಇಂಧನ ಸಚಿವಾಲಯದಡಿ ಕಾರ್ಯನಿರ್ವಹಿಸುವ “ಎನರ್ಜಿ ಎಫಿಶಿಯೆನ್ಸಿ ಸರ್ವೀಸ್ ಲಿಮಿಟೆಡ್ (EESL)” ಅನುಷ್ಟಾನಗೊಳಿಸುತ್ತಿದೆ.
  • ಈ ಯೋಜನೆಯಡಿ EESL ಎಲ್ಇಡಿ ಬಲ್ಬ್ ಗಳನ್ನು ಖರೀದಿಸುತ್ತಿರುವ ದರವು ಕಳೆದೆರಡು ವರ್ಷಗಳಿಂದ ಗಣನೀಯವಾಗಿ ಕಡಿಮೆಯಾಗುತ್ತಿದೆ. ಅಲ್ಲದೇ ಬಲ್ಬ್ ಗಳ ಉತ್ಪಾದನೆ ಕೂಡ ಗಮನಾರ್ಹವಾಗಿ ಏರಿಕೆಯಾಗಿದೆ. 2014ರಲ್ಲಿ ಪ್ರತಿ ತಿಂಗಳಿಗೆ 10 ಲಕ್ಷ ಬಲ್ಬ್ ಗಳನ್ನು ಉತ್ಪಾದಿಸಲಾಗುತ್ತಿತ್ತು, ಈಗ 4 ಕೋಟಿ ಬಲ್ಬ್ ಗಳನ್ನು ಪ್ರತಿ ತಿಂಗಳು ಉತ್ಪಾದಿಸಲಾಗುತ್ತಿದೆ.

ಉಜಾಲಾ ಯೋಜನೆ ಬಗ್ಗೆ:

  • ಉಜಾಲಾ (Unnat Jyoti by Affordable LEDs for All (UJALA)) ಎಲ್ಇಡಿ ಆಧರಿತ ದೇಶಿಯ ಪರಿಣಾಮಕಾರಿ ಬೆಳಕಿನ ಕಾರ್ಯಕ್ರಮ. ವಿದ್ಯುತ್ ಶಕ್ತಿಯ ಸದ್ಬಳಕೆ ಮತ್ತು ಉಳಿತಾಯ ಮಾಡುವುದು ಈ ಯೋಜನೆಯ ಮುಖ್ಯ ಗುರಿ.
  • ಜನವರಿ 2015 ರಲ್ಲಿ ರಾಷ್ಟ್ರೀಯ ಎಲ್ಇಡಿ ಕಾರ್ಯಕ್ರಮವಾಗಿ ಪ್ರಧಾನಿ ಮೋದಿ ರವರು ಇದಕ್ಕೆ ಚಾಲನೆ ನೀಡಿದರು. ಆನಂತರ ಮಾರ್ಚ್ 2016ರಲ್ಲಿ ಉಜಾಲಾ ಎಂದು ಹೆಸರಿಡಲಾಯಿತು.
  • ಈ ಯೋಜನೆಯಡಿ ಸಂಬಂಧಿಸಿದ ವಿದ್ಯುತ್ ಪ್ರಸರಣ ಕಂಪನಿ ಮೂಲಕ ಮೀಟರ್ ಹೊಂದಿರುವ ಮನೆಗಳಿಗೆ ಕಡಿಮೆ ದರದಲ್ಲಿ ಎಲ್ಇಡಿ ಬಲ್ಬ್ ಗಳನ್ನು ವಿತರಿಸಲಾಗುವುದು.

ಉಪಯೋಗಗಳು:

  • ವಿದ್ಯುತ್ ಶಕ್ತಿ ಉಳಿತಾಯ, ಗ್ರಾಹಕರಿಗೆ ಕಡಿಮೆ ವಿದ್ಯುತ್ ಬಿಲ್ ಹೊರೆ ಮತ್ತು ಹಸಿರು ಮನೆ ಅನಿಲ ಹೊರಸೂಸುವಿಕೆ ಪ್ರಮಾಣ ತಗ್ಗಲಿದೆ.
  • ಎಲ್ಇಡಿ ಬಲ್ಬ್ ಗಳು ಸಾಮಾನ್ಯ ಬಲ್ಬಗಳಿಗಿಂತ ಐವತ್ತು ಪಟ್ಟು ಹೆಚ್ಚು ಪಟ್ಟು ಬಾಳಿಕೆ ಬರಲಿವೆ. ಸಿಎಫ್ಎಲ್ ಬಲ್ಬಗಳಿಗಿಂತ 8-10 ಪಟ್ಟು ಹೆಚ್ಚು ಕಾಲ ಬಾಳಿಕ ಬರಲಿವೆ.

ಅಕ್ಟೋಬರ್ 10: ವಿಶ್ವ ಮಾನಸಿಕ ಆರೋಗ್ಯ ದಿನ (World Mental Health Day)

ವಿಶ್ವ ಮಾನಸಿಕ ಆರೋಗ್ಯ ದಿನವನ್ನು ಪ್ರತಿ ವರ್ಷ ಅಕ್ಟೋಬರ್ 10 ರಂದು ಆಚರಿಸಲಾಗುತ್ತದೆ. ಮಾನಸಿಕ ಆರೋಗ್ಯ ಸಮಸ್ಯೆಗಳು ಮತ್ತು ಮಾನಸಿಕ ಆರೋಗ್ಯ ಬೆಂಬಲಪಡಿಸಲು ವಿಶ್ವದಾದ್ಯಂತ ಅರಿವು ಮೂಡಿಸಲು ಈ ದಿನವನ್ನು ಆಚರಿಸಲಾಗುತ್ತದೆ.

2016 ವಿಶ್ವ ಮಾನಸಿಕ ಆರೋಗ್ಯ ದಿನದ ಥೀಮ್: Psychological First Aid

ಹಿನ್ನಲೆ:

  • ವರ್ಲ್ಡ್ ಫಡರೇಶನ್ ಫಾರ್ ಮೆಂಟಲ್ ಹೆಲ್ತ್ ವಿಶ್ವ ಮಾನಸಿಕ ಆರೋಗ್ಯ ದಿನವನ್ನು ಆಚರಿಸುವ ಪ್ರಸ್ತಾವನೆಯನ್ನು ಮೊದಲು ತಂದಿತ್ತು. ತದನಂತರ ವಿಶ್ವ ಆರೋಗ್ಯ ಸಂಸ್ಥೆ ಈ ಪ್ರಸ್ತಾವನೆಯನ್ನು ಅನುಮೋದನೆ ನೀಡಿತು.
  • 1992 ರಿಂದ ವಿಶ್ವ ಮಾನಸಿಕ ಆರೋಗ್ಯ ದಿನವನ್ನು ಆಚರಿಸಲಾಗುತ್ತಿದೆ.

Leave a Comment

This site uses Akismet to reduce spam. Learn how your comment data is processed.