ಅಕ್ಟೋಬರ್ 9: ವಿಶ್ವ ಅಂಚೆ ದಿನ (World Post Day)

ವಿಶ್ವ ಅಂಚೆ ದಿನವನ್ನು ಅಕ್ಟೋಬರ್ 9 ರಂದು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಅಂಚೆ ಸೇವೆಯ ಮಹತ್ವ ಮತ್ತು ಜನರ ದೈನಂದಿನ ಜೀವನ ಮತ್ತು ವ್ಯವಹಾರಗಳಲ್ಲಿ ಅಂಚೆ ಸೇವೆಯ ಪಾತ್ರವನ್ನು ಸ್ಮರಿಸುವ ಸಲುವಾಗಿ ಅಂಚೆ ದಿನವನ್ನು ಆಚರಿಸಲಾಗುವುದು.

2016 ವಿಶ್ವ ಅಂಚೆ ದಿನದ ಥೀಮ್: Innovation, Integration and Inclusion”.

ಭಾರತೀಯ ಅಂಚೆ ಇಲಾಖೆಯು ದೇಶದಲ್ಲಿ ವಿಶ್ವ ಅಂಚೆ ಇಲಾಖೆಯನ್ನು ಆಚರಿಸುತ್ತದೆ. ಸುಮಾರು 150 ವರ್ಷಗಳಿಂದ ಅಂಚೆ ಇಲಾಖೆ ಸಂಪರ್ಕ ಸಮೂಹದ ಬೆನ್ನಲುಬು ಆಗಿದೆ. ಭಾರತೀಯ ಅಂಚೆಯು ವಿಶ್ವದ ಅತಿ ದೊಡ್ಡ ಅಂಚೆ ಸಮೂಹವಾಗಿದ್ದು, ಬ್ಯಾಂಕಿಂಗ್, ಹಣ ರವಾನೆ, ವಿಮೆ ಮತ್ತು ರಿಟೈಲ್ ಸೇವೆಗಳನ್ನು ನೀಡುತ್ತಿದೆ.

ಹಿನ್ನಲೆ:

  • 1969 ರಲ್ಲಿ ಟೋಕಿಯೊ, ಜಪಾನ್ನಲ್ಲಿ ನಡೆದ ಯೂನಿವರ್ಸಲ್ ಪೋಸ್ಟಲ್ ಯುನಿಯನ್ ಕಾಂಗ್ರೆಸ್ ನಲ್ಲಿ ವಿಶ್ವ ಅಂಚೆ ದಿನವನ್ನು ಆಚರಿಸಲು ನಿರ್ಧರಿಸಲಾಯಿತು.
  • ಯೂನಿವರ್ಸಲ್ ಪೋಸ್ಟಲ್ ಯೂನಿಯನ್ ಸ್ಥಾಪನೆಯ ವಾರ್ಷಿಕೋತ್ಸವ ಸ್ಮರಣಾರ್ಥ ವಿಶ್ವ ಅಂಚೆ ದಿನವನ್ನು ಆಚರಿಸಲಾಗುವುದು. ಯೂನಿವರ್ಸಲ್ ಪೋಸ್ಟಲ್ ಯೂನಿಯನ್ ಅನ್ನು 1874ರಲ್ಲಿ ಸ್ವಿಸ್ ರಾಜಧಾನಿ ಬರ್ನ್ ನಲ್ಲಿ ಸ್ಥಾಪಿಸಲಾಯಿತು.

ಮುಂಬೈನಲ್ಲಿ ದೇಶದ ಮೊದಲ “ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರ (International Arbitration Centre)”

ದೇಶದ ಮೊದಲ ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರವನ್ನು ಮುಂಬೈ, ಮಹಾರಾಷ್ಟ್ರದಲ್ಲಿ ಆರಂಭಗೊಂಡಿತು. ಮುಂಬೈ ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರವನ್ನು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ರವರು ಉದ್ಘಾಟಿಸಿದರು. ವಾಣಿಜ್ಯ ವಿವಾದಗಳನ್ನು ಬಗೆಹರಿಸಿಕೊಳ್ಳಲು ಈ ಕೇಂದ್ರ ಸಹಕಾರಿಯಾಗಲಿದೆ.

ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರದ ಬಗ್ಗೆ:

  • ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರ ಸ್ವತಂತ್ರ ಮತ್ತು ಲಾಭದಾಯಕವಲ್ಲದ ಸಂಸ್ಥೆಯಾಗಿದ್ದು, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕಾನೂನು ತಜ್ಞರನ್ನು ಒಳಗೊಂಡಿರಲಿದೆ.
  • ವಿಶ್ವದರ್ಜೆಯ ಮೂಲಸೌಕರ್ಯ, 24 X 7 ಕಾರ್ಯಾಚರಣೆ ಮತ್ತು ಮಧ್ಯಸ್ಥಿಕೆ ವಿಚಾರಣೆ ಪ್ರಕ್ರಿಯೆಯನ್ನು ನೇರವಾಗಿ ದಾಖಲಿಸುವ ಮೂಲಕ ಪಾರದರ್ಶಕತೆಯನ್ನು ತೋರುವ ವ್ಯವಸ್ಥೆಯನ್ನು ಈ ಕೇಂದ್ರ ಹೊಂದಿದೆ.
  • ನಿಗದಿತ ಸಮಯದೊಳಗೆ ಮತ್ತು ಮಿತ ವ್ಯಯದಲ್ಲಿ ವಿವಾದಗಳನ್ನು ಬಗೆಹರಿಸಿ, ಹೂಡಿಕೆದಾರರಲ್ಲಿ ವಿಶ್ವಾಸ ಮೂಡಿಸಲು ನೇರವಾಗಲಿದೆ.

ಹಿನ್ನಲೆ:

  • ಪ್ರಸ್ತುತ ದೇಶದಲ್ಲಿ ಮಧ್ಯಸ್ಥಿಕೆ ಕೇಂದ್ರವಿಲ್ಲದ ಕಾರಣ ವಾಣಿಜ್ಯ ವಿವಾದಗಳನ್ನು ಸಿಂಗಾಪುರ ಅಥವಾ ಲಂಡನ್ ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರಗಳಲ್ಲಿ ಬಗೆಹರಿಸಿಕೊಳ್ಳಲಾಗುತ್ತಿದೆ. ಇದಕ್ಕಾಗಿ ಸುಮಾರು $ ಬಿಲಿಯನ್ ಡಾಲರ್ ಅನ್ನು ಭರಿಸಲಾಗುತ್ತಿದೆ. ಮುಂಬೈನಲ್ಲಿ ಸ್ಥಾಪನೆಗೊಂಡಿರುವ ಮಧ್ಯಸ್ಥಿಕೆ ಕೇಂದ್ರದಿಂದ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ದೊರಕಲಿದೆ.

ತಮಿಳುನಾಡಿನಲ್ಲಿ ಸ್ಥಾಪನೆಯಾಗಲಿದೆ ದೇಶದ ಮೊದಲ ಮೆಡಿಕಲ್ ಪಾರ್ಕ್

ದೇಶದ ಮೊದಲ ಮೆಡಿಕಲ್ ಪಾರ್ಕ್ ಚನ್ನೈ ಸಮೀಪದ ಚೆಂಗಲ್ಪಟ್ಟು ಎಂಬಲ್ಲಿ ಸ್ಥಾಪನೆಯಾಗಲಿದೆ. ಇದಕ್ಕಾಗಿ 330.10 ಎಕರೆ ಭೂಮಿಯನ್ನು ಉಪಗುತ್ತಿಗೆ ಆಧಾರದಲ್ಲಿ ನೀಡಲು ಆರೋಗ್ಯ ಸಚಿವಾಲಯದ ಅಧೀನದಲ್ಲಿರುವ ಸಾರ್ವಜನಿಕ ಕ್ಷೇತ್ರದ ಉದ್ಯಮ ಎಚ್‌ಎಲ್‌ಎಲ್ ಲೈಫ್ಕೇರ್ಗೆ ಸರಕಾರವು ಬುಧವಾರ ಹಸಿರು ನಿಶಾನೆಯನ್ನು ತೋರಿಸಿದೆ.

  • ಎಚ್‌ಎಲ್‌ಎಲ್ನ ಶೇ.50ರಷ್ಟು ಪಾಲು ಬಂಡವಾಳದೊಂದಿಗೆ ಅಸ್ತಿತ್ವಕ್ಕೆ ಬರಲಿರುವ ಹೊಸ ಕಂಪನಿಯೊಂದರ ಮೂಲಕ ಮೆಡಿಕಲ್ ಪಾರ್ಕ್ ತಲೆಯೆತ್ತಲಿದೆ.
  • ಈ ಮೆಡಿಪಾರ್ಕ್ ಹಂತಹಂತವಾಗಿ ಮುಂದಿನ ಏಳು ವರ್ಷಗಳಲ್ಲಿ ಪೂರ್ಣ ಗೊಳ್ಳಲಿದೆ. ಮೊದಲ ಹಂತದಲ್ಲಿ ಮೂಲಸೌಕರ್ಯಗಳನ್ನು ಅಭಿವೃದ್ಧಿಗೊಳಿಸಲಾಗುವುದು ಮತ್ತು ಮೂರನೇ ವರ್ಷದಿಂದ ಹೂಡಿಕೆದಾರರಿಗೆ ಭೂಮಿಯನ್ನು ಉಪಗುತ್ತಿಗೆಯ ಆಧಾರದಲ್ಲಿ ಮಂಜೂರು ಮಾಡಲಾಗುವುದು.

ಮಹತ್ವ:

  • ಈ ಯೋಜನೆಯು ದೇಶದ ವೈದ್ಯಕೀಯ ಉಪಕರಣಗಳು ಮತ್ತು ಸಾಧನಗಳ ಆವಲಂಬನೆಯನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರವಹಿಸಲಿದೆ.
  • ಅತ್ಯಾಧುನಿಕ ವೈದ್ಯಕೀಯ ಉಪಕರಣಗಳ ತಯಾರಿಕೆ ಕ್ಲಸ್ಟರ್ ನಿರ್ಮಾಣಗೊಳ್ಳಲು ಇದು ವೇದಿಕೆಯಾಗಲಿದೆ.

ನಯನ್ಜೋತ್ ಲಹಿರಿ ರವರಿಗೆ 2016 ಜಾನ್ ಎಫ್ ರಿಚರ್ಡ್ ಪ್ರಶಸ್ತಿ

ಅಶೋಕ ವಿಶ್ವವಿದ್ಯಾಲಯದಲ್ಲಿ ಇತಿಹಾಸ ಪ್ರಾಧ್ಯಪಕರಾಗಿರುವ ನಯನ್ಜೋತ್ ಲಹಿರಿ ಅವರಿಗೆ 2016 ಜಾನ್ ಎಫ್ ರಿಚರ್ಡ್ ಪ್ರಶಸ್ತಿ ಲಭಿಸಿದೆ. ಲಹಿರಿ ರವರ “ಅಶೋಕ ಇನ್ ಎನಿಷಿಯೆಂಟ್ ಇಂಡಿಯಾ (Ashoka in Ancient India)” ಪುಸ್ತಕಕ್ಕಾಗಿ ಈ ಪ್ರಶಸ್ತಿಯನ್ನು ನೀಡಲಾಗಿದೆ. ತನ್ನ ಶಾಸನಗಳ  ಸಾಮ್ರಾಜ್ಯವನ್ನು ಬಣ್ಣಿಸಿರುವ ಅಶೋಕ ಮಹಾರಾಜನ ಕುರಿತಾಗಿರುವ ಈ ಪುಸ್ತಕ ವಿಮರ್ಶಕರ ಪ್ರಶಂಸೆಗೆ ಒಳಗಾಗಿದೆ.

ಪ್ರಶಸ್ತಿಯ ಬಗ್ಗೆ:

  • ಜಾನ್ ಎಫ್ ರಿಚರ್ಡ್ ಪ್ರಶಸ್ತಿಯನ್ನ ಅಮೆರಿಕನ್ ಹಿಸ್ಟರಿಕಲ್ ಅಸೋಸಿಯೇಷನ್ ನೀಡುತ್ತಿದೆ.
  • ದಕ್ಷಿಣ ಏಷ್ಯಾ ಇತಿಹಾಸ ಮೇಲೆ ಬೆಳಕು ಚೆಲ್ಲುವ ಅತ್ಯುತ್ತಮ ಪುಸ್ತಕಗಳಿಗೆ ಈ ಪ್ರಶಸ್ತಿಯನ್ನು ನೀಡಲಾಗುವುದು.
  • ಪ್ರಶಸ್ತಿಯನ್ನು ಜನವರಿ 2017 ರಂದು ವಿತರಿಸಲಾಗುವುದು.

ಚೀನಾ ಓಪನ್: ರಾಂಡ್ವಾಂಸ್ಕಾ, ಆಯಂಡಿ ಮರ್ರೆಗೆ ಪ್ರಶಸ್ತಿ

ಮಹಿಳೆಯ ಸಿಂಗಲ್ಸ್: ಪೊಲೆಂಡ್ನ ಅಗ್ನೆಸ್ಕಾ ರಾಂಡ್ವಾಂಸ್ಕಾ ಚೀನಾ ಓಪನ್ನಲ್ಲಿ ಮಹಿಳೆಯರ ಸಿಂಗಲ್ಸ್ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಫೈನಲ್ ಪಂದ್ಯದಲ್ಲಿ ರಾಂಡ್ವಾಂಸ್ಕಾ ಅವರು ಅಮೆರಿಕದ ಜೊಹನ್ನಾ ಕಾಂಟಾರನ್ನು 6-4, 6-2 ನೇರ ಸೆಟ್ಗಳಿಂದ ಮಣಿಸಿದರು. ಈ ಮೂಲಕ ವೃತ್ತಿಜೀವನದಲ್ಲಿ 20ನೆ ಹಾಗೂ ಬೀಜಿಂಗ್ನಲ್ಲಿ 2ನೆ ಪ್ರಶಸ್ತಿ ಮುಡಿಗೇರಿಸಿಕೊಂಡರು.

ಪುರುಷರ ಸಿಂಗಲ್ಸ್: ಬ್ರಿಟನ್ನ ಆಯಂಡಿ ಮರ್ರೆ ಚೀನಾ ಓಪನ್ ಪುರುಷರ ಸಿಂಗಲ್ಸ್ ಪ್ರಶಸ್ತಿ ಜಯಿಸಿದರು.  ಫೈನಲ್ನಲ್ಲಿ ಅವರು ಗ್ರಿಗೊರ್ ಡಿಮಿಟ್ರಿ ಅವರನ್ನು 6-4, 7-6(7-2) ನೇರ ಸೆಟ್ಗಳ ಅಂತರದಿಂದ ಮಣಿಸಿದರು. ಈ ಗೆಲುವಿನೊಂದಿಗೆ ಒಟ್ಟು 1000 ಅಂಕ ಗಳಿಸಿರುವ ವಿಶ್ವ ರ್ಯಾಂಕಿಂಗ್ನಲ್ಲಿ ನಂ.2ನೆ ಸ್ಥಾನದಲ್ಲಿರುವ ಮರ್ರೆ ಅಗ್ರ ಸ್ಥಾನದತ್ತ ಹೆಜ್ಜೆ ಇಟ್ಟಿದ್ದಾರೆ.

 ರಾಷ್ಟ್ರೀಯಭದ್ರತಾ ಸಲಹಾ ಮಂಡಳಿಯ ಮುಖ್ಯಸ್ಥರಾಗಿ ಪಿ ಎಸ್ ರಾಘವನ್ ನೇಮಕ

ರಾಷ್ಟ್ರೀಯ ಭದ್ರತಾ ಸಲಹಾ ಮಂಡಳಿಯನ್ನ (ಎನ್‌ಎಸ್‌ಎಬಿ) ಪುನರ್ ಸ್ಥಾಪಿಸಲಾಗಿದ್ದು, ಇದರ ಮುಖ್ಯಸ್ಥರಾಗಿ ಪಿ.ಎಸ್. ರಾಘವನ್ ಅವರನ್ನು ನೇಮಿಸಲಾಗಿದೆ. ಪಿ ಎಸ್ ರಾಘವನ್ ಹಿಂದೆ ರಷ್ಯಾದಲ್ಲಿ ಭಾರತದ ರಾಯಭಾರಿಯಾಗಿದ್ದರು. ಪುನರ್ ಸ್ಥಾಪಿಸಲಾಗಿರುವ ರಾಷ್ಟ್ರೀಯ ಭದ್ರತಾ ಸಲಹಾ ಮಂಡಳಿಯು ಮುಖ್ಯಸ್ಥರು ಸೇರಿದಂತೆ ನಾಲ್ಕು ಜನರನ್ನು ಒಳಗೊಂಡಿದೆ.

ರಾಷ್ಟ್ರೀಯ ಭದ್ರತಾ ಸಲಹಾ ಮಂಡಳಿಯ ಬಗ್ಗೆ:

  • ರಾಷ್ಟ್ರೀಯ ಭದ್ರತಾ ಸಲಹಾ ಮಂಡಳಿಯನ್ನ ಮೊದಲ ಬಾರಿಗೆ 1998 ರಲ್ಲಿ ಸ್ಥಾಪಿಸಲಾಯಿತು. ಕೆ ಸುಬ್ರಮಣ್ಯಂರವರು ಮೊದಲ ಭದ್ರತಾ ಸಲಹಾ ಮಂಡಳಿಯ ಮುಖ್ಯಸ್ಥರಾಗಿದ್ದರು.
  • ಕೊನೆಯ ಬಾರಿಗೆ ರಚಿಸಲಾಗಿದ್ದ ರಾಷ್ಟ್ರೀಯ ಭದ್ರತಾ ಸಲಹಾ ಮಂಡಳಿ ಅಧ್ಯಕ್ಷರಾಗಿದ್ದ ಮಾಜಿ ವಿದೇಶಾಂಗ ಕಾರ್ಯದರ್ಶಿ ಶ್ಯಾಮ್ ಶರಣ್ ನೇಮಕಗೊಂಡಿದ್ದರು. ಅವರ ಅವಧಿ 2015ರ ಜನವರಿಗೆ ಕೊನೆಗೊಂಡಿತ್ತು. ಈ ಮಂಡಳಿಯು ಒಟ್ಟು 14 ಸದಸ್ಯರನ್ನು ಒಳಗೊಂಡಿತ್ತು. ಆದರೆ ಹೊಸದಾಗಿ ರಚಿಸಲಾಗಿರುವ ಮಂಡಳಿಯಲ್ಲಿ ಸದಸ್ಯರ ಸಂಖ್ಯೆಯನ್ನು ಅಧ್ಯಕ್ಷರು ಸೇರಿದಂತೆ ನಾಲ್ಕಕ್ಕೆ ಇಳಿಸಲಾಗಿದೆ.
  • ಗುಪ್ತಚರ ಸಂಸ್ಥೆ ‘ರಾ’ದ ಮಾಜಿ ಅಧಿಕಾರಿ ಎ.ಬಿ. ಮಾಥೂರ್, ಲೆ.ಜ.(ನಿವೃತ್ತ) ಎಸ್.ಎಲ್. ನರಸಿಂಹನ್ ಮತ್ತು ಗುಜರಾತ್ ನ್ಯಾಷನಲ್ ಲಾ ಯುನಿವರ್ಸಿಟಿಯ ಪ್ರೊ. ವಿಮಲ್ ಎನ್. ಪಟೇಲ್ ಅವರನ್ನು ಮಂಡಳಿಯ ಸದಸ್ಯರನ್ನಾಗಿ ನೇಮಿಸಲಾಗಿದೆ.

ಮಂಡಳಿಯ ಕರ್ತವ್ಯ:

  • ಆಂತರಿಕ ಮತ್ತು ಬಾಹ್ಯ ಭದ್ರತೆ, ವಿದೇಶಾಂಗ ವ್ಯವಹಾರ, ರಕ್ಷಣೆ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಆರ್ಥಿಕ ವ್ಯವಹಾರಗಳ ಬಗ್ಗೆ ಈ ಮಂಡಳಿಯು ಸಲಹೆ ನೀಡುತ್ತದೆ.ಇದು ಉನ್ನತ ಮಟ್ಟದ ಸಮಿತಿಯಾಗಿದ್ದು ತಿಂಗಳಿಗೆ ಒಮ್ಮೆ ಸಭೆ ನಡೆಸುತ್ತದೆ.

Leave a Comment

This site uses Akismet to reduce spam. Learn how your comment data is processed.