ಇಸ್ಟೋನಿಯಾದ ಮೊದಲ ಮಹಿಳಾ ರಾಷ್ಟ್ರಧ್ಯಕ್ಷರಾಗಿ ಕೆರ್ಸ್ಟಿ ಕಜುಲೈದ್ ನೇಮಕ

ಇಸ್ಟೋನಿಯಾದ ಸಂಸತ್ತು ಕೆರ್ಸ್ಟಿ ಕಜುಲೈದ್ (Kersti Kaljulaid) ಅವರನ್ನು ಇಸ್ಟೋನಿಯಾದ ಅಧ್ಯಕ್ಷರನ್ನಾಗಿ ಆಯ್ಕೆಮಾಡಿದೆ.  ಕೆರ್ಸ್ಟಿ ಕಜುಲೈದ್ ಅವರು ಇಸ್ಟೋನಿಯಾದ ಮೊದಲ ಮಹಿಳಾ ಅಧ್ಯಕ್ಷರಾಗಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ 20 ಸದಸ್ಯರ ಗೈರು ಹಾಜರಿ ಹೊರತಾಗಿಯೂ ಕೆರ್ಸ್ಟಿ ಅವರ ಪರವಾಗಿ 81-0 ಮತಗಳು ದಾಖಲಾದವು.

  • ಕೆರ್ಸ್ಟಿ ಕಜುಲೈದ್ ಇಸ್ಟೋನಿಯಾದ ಐದನೇ ರಾಷ್ಟ್ರಧ್ಯಕ್ಷರು. ಕೆರ್ಸ್ಟಿ ಅವರು ಅಕ್ಟೋಬರ್ 10, 2016 ರಂದು ಅಧಿಕಾರವಹಿಸಿಕೊಳ್ಳಲಿದ್ದಾರೆ.
  • ಕೆರ್ಸ್ಟಿ ಅವರು ಇಸ್ಟೋನಿಯಾದ ರಾಷ್ಟ್ರಧ್ಯಕ್ಷ ಹುದ್ದೆಯನ್ನು ಅಲಂಕರಿಸಿದ ಕಿರಿಯ ವ್ಯಕ್ತಿ ಸಹ ಆಗಿದ್ದಾರೆ.
  • ಕೆರ್ಸ್ಟಿ ಅವರು ಜೀವಶಾಸ್ತ್ರದಲ್ಲಿ ಪದವಿ ಪಡೆದಿದ್ದು ತಳಿಶಾಸ್ತ್ರದಲ್ಲಿ ಪರಿಣಿತಿಯನ್ನು ಹೊಂದಿದ್ದಾರೆ. ಟರ್ಟು ವಿಶ್ವವಿದ್ಯಾಲಯದಿಂದ ಎಂಬಿಎ ಪದವಿಯನ್ನು ಪಡೆದಿದ್ದಾರೆ.
  • 1999ರಲ್ಲಿ ಇಸ್ಟೋನಿಯಾದ ಪ್ರಧಾನ ಮಂತ್ರಿ ಕಚೇರಿಯಲ್ಲಿ ಆರ್ಥಿಕ ನೀತಿ ಸಲಹೆಗಾರರಾಗಿ ನೇಮಕಗೊಂಡರು.
  • 2011 ರಲ್ಲಿ ಯುರೋಪಿಯನ್ ಆಡಿಟರ್ಸ್ ಕೋರ್ಟ್ ನಲ್ಲಿ ಇಸ್ಟೋನಿಯಾದ ಪ್ರತಿನಿಧಿಯಾಗಿ ಸೇವೆ ಸಲ್ಲಿಸುತ್ತಿದ್ದರು.

ಜಪಾನಿನ ಒಶಿನೋರಿ ಓಹ್ಸುಮಿಗೆ ಒಲಿದ 2016ನೇ ಸಾಲಿನ ವೈದ್ಯಕೀಯ ನೊಬೆಲ್ ಪ್ರಶಸ್ತಿ

2016ನೇ ಸಾಲಿನ ನೊಬೆಲ್ ಪ್ರಶಸ್ತಿ ಪ್ರಕಟಿಸಲಾಗಿದ್ದು, ಜಪಾನಿನ ಒಶಿನೋರಿ ಓಹ್ಸುಮಿ (Yoshinori Ohsumi) ವೈದ್ಯಕೀಯ ವಿಭಾಗದ ನೊಬೆಲ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಆಟೋಫಗಿ (Autophagy) ವಿಧಾನದ ಕುರಿತಾಗಿ ನಡೆಸಿರುವ ಸಂಶೋಧನೆಗಾಗಿ  ಅವರಿಗೆ ಪ್ರಶಸ್ತಿಯನ್ನು ನೀಡಲಾಗಿದೆ. ಇದರೊಂದಿಗೆ ಓಹ್ಸುಮಿ ಅವರು ನೊಬೆಲ್ ಪ್ರಶಸ್ತಿ ಪಡೆದ ಜಪಾನಿನ 23ನೇ ಯವರು ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ನೊಬೆಲ್ ಪ್ರಶಸ್ತಿ ಪಡೆದ ಜಪಾನಿನ ಆರನೇಯವರು. ಓಹ್ಸುಮಿ ಟೋಕಿಯೋ ವಿಶ್ವವಿದ್ಯಾಲಯದಲ್ಲಿ 1974 ರಲ್ಲಿ ಪಿ.ಎಚ್.ಡಿ ಪದವಿಯನ್ನು ಪಡೆದಿದ್ದು, ಪ್ರಸ್ತುತ ಟೋಕಿಯೊ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಪ್ರಾಧ್ಯಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಆಟೋಫಗಿ ಎಂದರೇನು?

  • ಆಟೋಫಗಿ ಎಂದರೆ ಜೀವಕೋಶಗಳು ತಮ್ಮನ್ನು ತಾವೇ ತಿನ್ನುವುದು ಎಂದರ್ಥ. ಇದನ್ನು ಸ್ವಯಂಭಕ್ಷಣ ಎನ್ನಲಾಗುತ್ತದೆ. ಜೀವಕೋಶಗಳು ತಮ್ಮಲ್ಲಿನ ಅಂಶಗಳನ್ನು ಮರುಬಳಕೆ ಮಾಡುವ ಪ್ರಕ್ರಿಯೆ ಇದಾಗಿದೆ.
  • ಹಾನಿಗೊಳಗಾದ ಜೀವಕೋಶಗಳು ಹೇಗೆ ಮರುಬಳಕೆ ಎಂಬುದನ್ನು ತಿಳಿಯಲು ಇದು ಬಹುಮುಖ್ಯವಾಗಿದೆ. ಆಟೋಫಗಿಯ ಉತ್ತಮ ತಿಳುವಳಿಕೆಯಿಂದ ದೇಹದ ಆರೋಗ್ಯ ಮತ್ತು ರೋಗಗಳ ಬಗ್ಗೆ ತಿಳಿದುಕೊಳ್ಳಬಹುದಾಗಿದೆ.
  • ಬೆಲ್ಜಿಯಂ ವಿಜ್ಞಾನಿ ಕ್ರಿಸ್ಚಿಯನ್ ಡೆ ಡುವೆ ಇದರ ಬಗ್ಗೆ ಅಧ್ಯಯನ ನಡೆಸಿ 1974 ರಲ್ಲಿ ನೊಬೆಲ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು. ಆಟೋಫಗಿ ಎಂದು ಮೊದಲು ಕರೆದವರು ಡುವೆ. ಗ್ರೀಕ್ ಭಾಷೆಯಲ್ಲಿ ಆಟೋಫಗಿ ಎಂದರೆ ಸ್ವಯಂಭಕ್ಷಣ ಎಂದರ್ಥ.

ಓಶಿನೋರಿ ಸಂಶೋಧನೆ:

  • ಓಶಿನೋರಿ ಆಟೋಫಗಿ ಮೇಲೆ ನಡೆಸಲಾದ ಸಂಶೋಧನೆಯಲ್ಲಿ ಜೀವಕೋಶಗಳು ಹೇಗೆ ತನ್ನಳೊಗಿರುವುದನ್ನು ಮರುಬಳಕೆ ಮಾಡುತ್ತವೆ ಎನ್ನುವುದನ್ನು ತಿಳಿಸಿಕೊಟ್ಟಿದ್ದಾರೆ.
  • ತನ್ನ ಸಂಶೋಧನೆಯಲ್ಲಿ ಓಶಿನೋರಿಯವರು ಸ್ವಯಂಭಕ್ಷಣಗೆ ಅಗತ್ಯವಾದ ಜೀನ್ ಗಳನ್ನು ಪತ್ತೆ ಮಾಡಲು ಬೇಕರ್ಸ್ ಈಸ್ಟ್ ಬಳಸಿದ್ದಾರೆ.
  • ಈಸ್ಟ್ನಲ್ಲಿ ಇದರ ಪ್ರಕ್ರಿಯೆ ಗಮನಿಸಿ, ನಂತರ ಮನುಷ್ಯರ ಜೀವಕೋಶಗಳಲ್ಲಿ ಆಗುವ ಪ್ರಕ್ರಿಯಾ ಸೂತ್ರವನ್ನು ವಿವರಿಸಿದ್ದಾರೆ.

ಸಂಶೋಧನೆಯ ಮಹತ್ವ:

  • ಈ ಸಂಶೋಧನೆಯಿಂದ ಓಶಿನೋರಿ ರವರು ಆಟೋಫಗಿ ನಿಯಂತ್ರಿಸುವ ಜೀನ್ ಗಳನ್ನು ಪತ್ತೆಹಚ್ಚಿದ್ದಾರೆ. ಜೊತೆಗೆ ಈ ಜೀನ್ ಗಳು ಏರುಪೇರುನಿಂದ ರೋಗಗಳಿಗೆ ಕಾರಣವಾಗುವುದನ್ನು ವಿವರಿಸಿದ್ದಾರೆ.
  • ಸಂಶೋಧನೆಯಿಂದ ಆಟೋಫಗಿಯ ಮಹತ್ವವೇನು ಎಂಬುದು ಅರಿಯಲು ಸಾಧ್ಯವಾಗಿದೆ.
  • ಮುಪ್ಪಿನ ಅವಧಿಯಲ್ಲಿ ಪಾರ್ಕಿನ್ಸನ್, ಟೈಪ್ 2 ಮಧುಮೇಹ ಮತ್ತಿತ್ತರ ಕಾಯಿಲೆಗಳಿಗೆ ಸ್ವಯಂಭಕ್ಷಣ ಕ್ರಿಯೆ ಕಾರಣವೆಂಬುದಕ್ಕೆ ಪುರಾವೆ ಒದಗಿಸಿದೆ.

ಆಂಧ್ರಪ್ರದೇಶ ಮತ್ತು ಗುಜರಾತಿನ ನಗರ ಪ್ರದೇಶಗಳು ಬಯಲು ಬಹಿರ್ದೆಸೆ ಮುಕ್ತ

ಆಂಧ್ರಪ್ರದೇಶ ಮತ್ತು ಗುಜರಾತಿನ ನಗರ ಪ್ರದೇಶಗಳು ಬಯಲು ಬಹಿರ್ದೆಸೆ ಮುಕ್ತವೆಂದು ಕೇಂದ್ರ ನಗರಾಭಿವೃದ್ದಿ ಸಚಿವಾಲಯ ಘೋಷಿಸಿದೆ. ಸ್ವಚ್ಚ ಭಾರತ ಅಭಿಯಾನಕ್ಕೆ ಎರಡು ವರ್ಷ ಪೂರೈಸಿದ ಹಿನ್ನಲೆಯಲ್ಲಿ ಹಾಗೂ ಗಾಂಧಿ ಜಯಂತಿ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಘೋಷಿಸಲಾಯಿತು. ಆಂಧ್ರಪ್ರದೇಶ ಮತ್ತು ಗುಜರಾತ್ ರಾಜ್ಯಗಳು ನಗರ ಪ್ರದೇಶಗಳನ್ನು ಬಯಲು ಬಹಿರ್ದೆಸೆಯಿಂದ ಮುಕ್ತ ಮಾಡಿದ ದೇಶದ ಮೊದಲ ರಾಜ್ಯಗಳೆನಿಸಿವೆ.

ಪ್ರಮುಖಾಂಶಗಳು:

  • ಎರಡು ರಾಜ್ಯಗಳ 180 ನಗರಗಳು ಮತ್ತು 110 ಪಟ್ಟಣಗಳನ್ನು ಬಯಲು ಬಹಿರ್ದೆಸೆ ಮುಕ್ತ ಪ್ರದೇಶಗಳೆಂದು ಎರಡು ರಾಜ್ಯಗಳ ಮುಖ್ಯಮಂತ್ರಿಗಳು ಘೋಷಿಸಿದ್ದಾರೆ.
  • ದೇಶದ 4041 ನಗರ ಪ್ರದೇಶಗಳ ಪೈಕಿ 405 ಪ್ರದೇಶಗಳನ್ನು ಬಯಲು ಬಹಿರ್ದೆಸೆ ಮುಕ್ತ ಪ್ರದೇಶಗಳೆಂದು ಘೋಷಿಸಲಾಗಿದೆ.
  • 2017ರ ವೇಳೆಗೆ 334 ನಗರ ಪ್ರದೇಶಗಳನ್ನು ಬಯಲು ಮಲ ವಿಸರ್ಜನೆ ಮುಕ್ತ ಮಾಡುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ.
  • ಗ್ರಾಮೀಣ ಪ್ರದೇಶಗಳಲ್ಲಿ ಹಿಮಾಚಲ ಪ್ರದೇಶ, ಕೇರಳ ಮತ್ತು ಸಿಕ್ಕಿಂ ರಾಜ್ಯಗಳು ಶೇ 90% ಶೌಚಾಲಯಗಳನ್ನು ಹೊಂದಿವೆ.
  • ಆದರೆ ಬಿಹಾರ, ಓಡಿಶಾ ಮತ್ತು ಜಮ್ಮು ಮತ್ತು ಕಾಶ್ಮೀರದ ಗ್ರಾಮೀಣ ಪ್ರದೇಶದಲ್ಲಿ ಶೇ 30% ಕುಟುಂಬಗಳು ಮಾತ್ರ ಶೌಚಾಲಯ ನಿರ್ಮಿಸಿಕೊಂಡಿವೆ.

ಬಯಲು ಮಲ ವಿಸರ್ಜನೆ ಮುಕ್ತವೆಂದರೇನು?

  • ಯಾವುದೇ ಒಂದು ಪ್ರದೇಶವನ್ನು ಬಯಲು ಮಲ ವಿಸರ್ಜನೆ ಮುಕ್ತ ಎನ್ನಬೇಕಾದರೆ ಆ ಪ್ರದೇಶ ಎಲ್ಲಾ ಕುಟುಂಬಗಳು ಶೇ 100 ರಷ್ಟು ಶೌಚಾಲಯಗಳನ್ನು ಹೊಂದಿರಬೇಕು ಹಾಗೂ ಬಳಸುತ್ತಿರಬೇಕು. ಮುಖ್ಯವಾಗಿ ಬಯಲ ಮೇಲೆ ಮಲ ವಿಸರ್ಜನೆ ಮಾಡುತ್ತಿರಬಾರದು.

ಸೀಮೆಎಣ್ಣೆ ಯೋಜನೆಯಡಿ ನೇರ ನಗದು ವರ್ಗಾವಣೆ ಜಾರಿಗೆ ತಂದ ಮೊದಲ ರಾಜ್ಯ ಜಾರ್ಖಂಡ್

ಸೀಮೆಎಣ್ಣೆ ಯೋಜನೆಯಡಿ ನೇರ ನಗದು ವರ್ಗಾವಣೆಯನ್ನು ಜಾರಿಗೆ ತಂದ ದೇಶದ ಮೊದಲ ರಾಜ್ಯವೆಂಬ ಖ್ಯಾತಿಗೆ ಜಾರ್ಖಂಡ್ ಪಾತ್ರವಾಗಿದೆ. ಜಾರ್ಖಂಡ್ ನ ಛತ್ರ, ಹಜಾರಿಬಾಗ್, ಖುಂತಿ ಮತ್ತು ಜಮ್ತರ ನಾಲ್ಕು ಜಿಲ್ಲೆಗಳಲ್ಲಿ ನೇರ ನಗದು ವರ್ಗಾವಣೆ ಯೋಜನೆಯನ್ನು ಅಕ್ಟೋಬರ್ 1, 2017 ರಿಂದ ಜಾರಿಗೊಳಿಸಲಾಗಿದೆ.

  • ಈ ಯೋಜನೆಯಡಿ ಸೀಮೆಎಣ್ಣೆಯನ್ನು ಸಬ್ಸಿಡಿ ರಹಿತ ದರದಲ್ಲಿ ಮಾರಲಾಗುವುದು. ಸಬ್ಸಿಡಿ ಹಣವನ್ನು ನೇರವಾಗಿ ಗ್ರಾಹಕರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುವುದು.
  • ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ LPG ಸಬ್ಸಿಡಿಗೆ ನೇರ ನಗದು ವರ್ಗಾವಣೆ ಯೋಜನೆ ಜಾರಿಗೆ ತಂದಿರುವ ಮಾದರಿಯಲ್ಲೇ ಇದನ್ನು ಜಾರಿಗೊಳಿಸಲಾಗಿದೆ.
  • ಸಬ್ಸಿಡಿ ಹಣ ಯಾವುದೇ ಸೋರಿಕೆ ಇಲ್ಲದೆ ನೇರವಾಗಿ ಗ್ರಾಹಕರ ಕೈಸೇರುವಂತೆ ಮಾಡುವುದು ಇದರ ಉದ್ದೇಶ.
  • ಅಲ್ಲದೇ ಕಪ್ಪು ಮಾರುಕಟ್ಟೆಯಲ್ಲಿ ಸೀಮೆಎಣ್ಣೆ ಮಾರಾಟ, ಕಲಬೆರಕೆ ಮಾಡುವುದನ್ನು ತಡೆಯಲು ಸಹಕಾರಿಯಾಗಲಿದೆ.

ರಾಜ್ಯದಲ್ಲಿ ಪ್ರತ್ಯೇಕ ಅಡಿಕೆ ಮಂಡಳಿ ರಚನೆಗೆ ಶಿಫಾರಸ್ಸು

ರಾಜ್ಯದ ಅಡಿಕೆ ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸಲು ಪ್ರತ್ಯೇಕ ಅಡಿಕೆ ಮಂಡಳಿಯನ್ನು ರಚಿಸುವಂತೆ ಡಾ.ಡಿ.ಎಲ್ ಮಹೇಶ್ವರ್ ಸಮಿತಿ ಶಿಫಾರಸ್ಸು ಮಾಡಿದೆ.  ಇದರ ಜೊತೆಗೆ ಈರುಳ್ಳಿ ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸಲು ಈರುಳ್ಳಿ ಮಾರುಕಟ್ಟೆ ಸ್ಥಿರೀಕರಣದ ವ್ಯವಸ್ಥೆ ಮಾಡುವಂತೆ ಸಹ ಸಮಿತಿ ಶಿಫಾರಸ್ಸು ಮಾಡಿದೆ.

ಸಮಿತಿಯ ಬಗ್ಗೆ:

  • ರಾಜ್ಯದ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಒಂದಾದ ಅಡಿಕೆಯು ಧಾರಣೆ ಕುಸಿತ, ವಿವಿಧ ರೋಗಗಳಿಗೆ ತುತ್ತಾಗುವುದು ಸೇರಿದಂತೆ ಹಲವಾರು ಸಮಸ್ಯೆಗಳಿಂದ ಬೆಳಗಾರರಿಗೆ ನಷ್ಟ ಉಂಟಾಗುತ್ತಿದ್ದು, ಇದಕ್ಕೆ ಸ್ಪಂದಿಸಲು ಪ್ರತ್ಯೇಕ ಮಂಡಳಿ ರಚನೆ ಮಾಡುವಂತೆ ಪ್ರಕಾಶ್ ಕಮ್ಮರಡಿ ನೇತೃತ್ವದ ರಾಜ್ಯ ಕೃಷಿ ಬೆಲೆ ಆಯೋಗ ಸರ್ಕಾರಕ್ಕೆ ಶಿಫಾರಸ್ಸು ಸಲ್ಲಿಸಿತ್ತು. ಈ ಶಿಫಾರಸ್ಸಿನ ಮೇರೆಗೆ ರಾಜ್ಯ ಸರ್ಕಾರ ತಜ್ಞರ ಸಮಿತಿಯನ್ನು ನೇಮಕ ಮಾಡಿತ್ತು. ಬಾಗಲಕೋಟೆಯಲ್ಲಿನ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಕುಲಪತಿ ಡಾ| ಡಿ.ಎಲ್.ಮಹೇಶ್ವರ್ ಸಮಿತಿಗೆ ಅಧ್ಯಕ್ಷರಾಗಿದ್ದರು.

ಪ್ರಮುಖ ಶಿಫಾರಸ್ಸುಗಳು:

  • ಅಡಕೆ ಬೆಳೆಗಾರರ ಹಿತ ಕಾಪಾಡಲು ಅಡಿಕೆ ಆಮದು ನಿಷೇಧಿಸಬೇಕು.
  • ಅಡಕೆ ಬೆಳೆಗಾರರ ಸಮಸ್ಯೆಗಳಿಗೆ ಸೂಕ್ತವಾಗಿ ಸ್ಪಂದಿಸಲು ರಾಜ್ಯ ಸರಕಾರವು ಪ್ರತ್ಯೇಕ ಮಂಡಳಿಯೊಂದನ್ನು ರಚಿಸುವುದು
  • ಅಡಕೆ ಮತ್ತು ಈರುಳ್ಳಿ ಬೆಳೆಯುವ ರೈತರು ಮಾರುಕಟ್ಟೆಯಲ್ಲಿ ಮಧ್ಯವರ್ತಿಗಳ ಸಮಸ್ಯೆ ಸೇರಿದಂತೆ ನಾನಾ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ರೈತರಿಗೆ ಸೂಕ್ತ ರಕ್ಷಣೆ ನೀಡಬೇಕು ಮತ್ತು ಈರುಳ್ಳಿ ಹಾಗೂ ಅಡಕೆ ಬೆಳೆಯ ಆರ್ಥಿಕ ವ್ಯವಸ್ಥೆಯನ್ನು ಸದೃಢಗೊಳಿಸಬೇಕು.
  • ಈರುಳ್ಳಿ ಮಾರುಕಟ್ಟೆ ಸ್ಥಿರೀಕರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ವರದಿಯಲ್ಲಿ ಹೇಳಲಾಗಿದೆ.

2017 ಗಣರಾಜ್ಯೋತ್ಸವದ ಅತಿಥಿಯಾಗಿ ಅಬುಧಾಬಿಯ ಯುವರಾಜ

ಅಬುಧಾಬಿಯ ಯುವರಾಜ ಶೇಕ್ ಮೊಹಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು ಜನವರಿ 26, 2017 ರಂದು ನಡೆಯಲಿರುವ 68ನೇ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.  ಭಾರತದ ಆಹ್ವಾನವನ್ನು ಅಬುಧಾನಿ ಯುವರಾಜ ಒಪ್ಪಿರುವುದಾಗಿ ವಿದೇಶಾಂಗ ಇಲಾಖೆ ವಕ್ತಾರ ವಿಕಾಸ್ ಸ್ವರೂಪ್ ರವರು  ತಿಳಿಸಿದ್ದಾರೆ.

ಹಿಂದಿನ ಅತಿಥಿಗಳು:

  • 2016: ಫ್ರಾಂಕೋಯಿಸ್ ಹೊಲಂಡೆ (ಫ್ರೆಂಚ್ ಅಧ್ಯಕ್ಷ)
  • 2015: ಬರಾಕ್ ಒಬಮಾ (ಅಮೆರಿಕಾ ಅಧ್ಯಕ್ಷ)
  • 2014: ಶಿಂಜೋ ಅಬೆ (ಜಪಾನ್ ಪ್ರಧಾನಿ)
  • 2013: ಜಿಗ್ಮಿ ಖೇಸರ್ ನಮ್ಗೇಯಲ್ ವಾಂಗ್ ಚುಕ್ (ಭೂತಾನಿನ ರಾಜ)
  • 2012: ಯಿಂಗ್ಲಕ್ ಶಿನವಾತ್ರ (ಥಾಯ್ಲೆಂಡ್ ಪ್ರಧಾನಿ)

ಗಣರಾಜ್ಯೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಫ್ರಾನ್ಸ್ ಐದು ಬಾರಿ ಭಾಗವಹಿಸಿದೆ. ಭೂತಾನ ನಾಲ್ಕು ಬಾರಿ, ಮಾರಿಷಸ್ ಮತ್ತು ರಷ್ಯಾ ಮೂರು ಬಾರಿ ಭಾಗವಹಿಸಿವೆ.

Leave a Comment

This site uses Akismet to reduce spam. Learn how your comment data is processed.