2016 ಗೂಗಲ್ ಸೈನ್ಸ್ ಫೇರ್ ಪ್ರಶಸ್ತಿ ಗೆದ್ದ ಭಾರತೀಯ ಮೂಲದ ಕೈರಾ ನಿರ್ಗಿನ್ (Kiara Nirghin)

ಭಾರತೀಯ ಮೂಲದ ದಕ್ಷಿಣ ಆಫ್ರಿಕಾದ ಕೈರಾ ನಿರ್ಗಿನ್ ಅವರು ಅಮೆರಿಕಾದಲ್ಲಿ ನಡೆದ ಗೂಗಲ್ ಸೈನ್ಸ್ ಫೇರ್ ನಲ್ಲಿ $50,000 ವಿದ್ಯಾರ್ಥಿ ವೇತನವನ್ನು ಗೆದ್ದಿದ್ದಾರೆ. ಕಿತ್ತಳೆ ಸಿಪ್ಪೆಯನ್ನು ಬಳಸಿ ಮಣ್ಣಿನ ತೇವಾಂಶವನ್ನು ಹಿಡಿದಿಡುವ ಅಗ್ಗದ ಪದಾರ್ಥವನ್ನು ಅನ್ವೇಷಣೆ ಮಾಡಿರುವುದಕ್ಕಾಗಿ ಕೈರಾ ಅವರಿಗೆ ಪ್ರಶಸ್ತಿಯನ್ನು ನೀಡಲಾಗಿದೆ. ಕೈರಾ ಅವರು ಸೇಂಟ್ ಮಾರ್ಟಿನ್ ಖಾಸಗಿ ಶಾಲೆಯಲ್ಲಿ 11ನೇ ತರಗತಿಯ ವಿದ್ಯಾರ್ಥಿ.

ಕೈರಾ ಅವರ ಪ್ರಾಜೆಕ್ಟ್ ಬಗ್ಗೆ:

  • ಕೈರಾ ಅವರು “ನೋ ಮೋರ್ ಥರ್ಸ್ಟಿ ಕ್ರಾಪ್ಸ್ (No More Thirsty Crops’)” ಹೆಸರಿನಡಿ ತಮ್ಮ ಪ್ರಾಜೆಕ್ಟ್ ಅನ್ನು ಸಲ್ಲಿಸಿದ್ದರು. ದಕ್ಷಿಣ ಆಫ್ರಿಕಾವನ್ನು ಕಾಡುತ್ತಿರುವ ತೀವ್ರ ಬರಕ್ಕೆ ಪರಿಹಾರ ಸೂಚಿಸುವುದು ಈ ಪ್ರಾಜೆಕ್ಟ್ ತಿರುಳಾಗಿತ್ತು.
  • ಬಳಸಿ ಬಿಸಡುವ ಕಿತ್ತಳೆ ಮತ್ತು ಅವೊಕಡೊ ಹಣ್ಣಿನ ಸಿಪ್ಪೆಗಳನ್ನು ಬಳಸಿ ಬರ ನಿವಾರಣೆಗೆ ಸರಳ ಪರಿಹಾರವನ್ನು ಕೈರಾ ತಮ್ಮ ಪ್ರಾಜೆಕ್ಟ್ ನಲ್ಲಿ ವಿವರಿಸಿದ್ದರು.
  • ಈ ಹಣ್ಣಿನ ಸಿಪ್ಪೆಗಳನ್ನು ಬಳಸಿ “ಸೂಪರ್ ಅಬ್ಸರ್ಬೆಂಡ್ ಪಾಲಿಮರ್ಸ್ (SAPs) ಅನ್ನು ಕೈರಾ ಅಭಿವೃದ್ದಿಪಡಿಸಿದ್ದರು. ಈ ಸೂಪರ್ ಅಬ್ಸರ್ಬೆಂಡ್ ಪಾಲಿಮರ್ಸ್ ಪದಾರ್ಥವು ತನ್ನ ತೂಕಕ್ಕಿಂತ 300 ಪಟ್ಟು ಹೆಚ್ಚು ತೇವಾಂಶವನ್ನು ಹಿಡಿದಿಡುವ ಸಾಮರ್ಥ್ಯವನ್ನು ಹೊಂದಿದೆ. ಅಲ್ಲದೇ ಈ ಪದಾರ್ಥ ಸುಲಭವಾಗಿ ಕೊಳೆಯಬಲ್ಲದಾಗಿದ್ದು, ಯಾವುದೇ ಹಾನಿಕಾರಕ ರಾಸಾಯನಿಕಗಳನ್ನು ಒಳಗೊಂಡಿಲ್ಲ.
  • ಈ ಪದಾರ್ಥವು ದೀರ್ಘಕಾಲದವರೆಗೆ ತೇವಾಂಶವನ್ನು ಹಿಡಿದಿಡುವ ಕಾರಣ ಮಣ್ಣನ್ನು ತೇವಭರಿತವಾಗಿ ಇಡುತ್ತದೆ. ಜೊತೆಗೆ ಕಡಿಮೆ ನೀರಿನ್ನು ಬಳಕೆ ಮಾಡಿ ಬೆಳೆ ಬೆಳೆಯಬಹುದಾಗಿದೆ.

ಗೂಗಲ್ ಸೈನ್ಸ್ ಫೇರ್:

  • ಗೂಗಲ್ ಸೈನ್ಸ್ ಫೇರ್ ಅನ್ನು ಗೂಗಲ್ ಸಂಸ್ಥೆ ಪ್ರತಿ ವರ್ಷ ಆಯೋಜಿಸುತ್ತದೆ. 13 ರಿಂದ 18 ವರ್ಷದೊಳಗಿನವರು ಇದರಲ್ಲಿ ಭಾಗವಹಿಸಬಹುದು. ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡ ವಿಶ್ವದ ದೊಡ್ಡ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳುವುದಕ್ಕೆ ಯುವ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಲು ಇದು ಸಹಕಾರಿಯಾಗಿದೆ.

ಅಕ್ಟೋಬರ್ 3: ವಿಶ್ವ ಆವಾಸ ದಿನ (World Habitat Day)

ವಿಶ್ವ ಆವಾಸ ದಿನವನ್ನು ಪ್ರತಿ ವರ್ಷ ಅಕ್ಟೋಬರ್ ತಿಂಗಳ ಮೊದಲ ಸೋಮವಾರದಂದು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಈ ವರ್ಷ ಅಕ್ಟೋಬರ್ 3 ರಂದು ವಿಶ್ವ ಆವಾಸ ದಿನವನ್ನು ಆಚರಿಸಲಾಯಿತು. ನಗರ ಪ್ರದೇಶಗಳು, ನಗರ ಮತ್ತು ಪಟ್ಟಣಗಳಲ್ಲಿ ಕೈಗೆಟುವ ವಸತಿ ಅಗತ್ಯದ ಬಗ್ಗೆ ಅರಿವು ಮೂಡಿಸುವುದು ವಿಶ್ವ ಆವಾಸ ದಿನದ ಉದ್ದೇಶ.

  • “Housing at the Cetre” ಇದು ಈ ವರ್ಷದ ವಿಶ್ವ ಆವಾಸ ದಿನದ ಥೀಮ್

ಹಿನ್ನಲೆ:

  • ವಿಶ್ವ ಸಂಸ್ಥೆಯ ಸಾಮಾನ್ಯ ಸಭೆ 1986ರಲ್ಲಿ ನಿರ್ಣಯವನ್ನು ಕೈಗೊಳ್ಳುವ ಮೂಲಕ ಪ್ರತಿ ವರ್ಷ ಅಕ್ಟೋಬರ್ ಮೊದಲ ಸೋವಾವರವನ್ನು ವಿಶ್ವ ಆವಾಸ ದಿನವನ್ನಾಗಿ ಆಚರಿಸಲು ತೀರ್ಮಾನಿಸಲಾಯಿತು.
  • ಮುಂದಿನ ಪೀಳಿಗೆಗೆ ನೆಲೆಯನ್ನು ಕಲ್ಪಿಸುವುದು ನಮ್ಮೆಲ್ಲರ ಹೊಣೆ ಎಂಬುದನ್ನು ವಿಶ್ವಕ್ಕೆ ಎಚ್ಚರಿಸಲು ಈ ದಿನವನ್ನು ಆಚರಿಸಲಾಗುತ್ತದೆ.

ಪ್ಯಾರಿಸ್ ಹವಾಮಾನ ಒಪ್ಪಂದವನ್ನು ಅನುಮೋದಿಸಿದ ಭಾರತ

ಜಾಗತಿಕ ತಾಪಮಾನ ತಗ್ಗಿಸುವ ಐತಿಹಾಸಿಕ ಪ್ಯಾರಿಸ್ ಹವಾಮಾನ ಒಪ್ಪಂದವನ್ನು ಭಾರತ ಅಂಗೀಕರಿಸಿತು. ಮಹಾತ್ಮ ಗಾಂಧಿ ಅವರ 147ನೇ ಜನ್ಮದಿನದಂದು ಈ ಮಹತ್ವದ ನಿರ್ಣಯಕ್ಕೆ ಭಾರತ ಕೈಜೋಡಿಸಿತು. ನಿರ್ಣಯವನ್ನು ಭಾರತ ಅಂಗೀಕರಿಸಿದ್ದರ ಕುರಿತಾಗಿ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಅವರ ಸಹಿ ಇರುವ ಅಂಗೀಕಾರದ ಪತ್ರವನ್ನು ವಿಶ್ವಸಂಸ್ಥೆಯಲ್ಲಿನ ಭಾರತದ ರಾಯಭಾರಿ ಸಯ್ಯದ್‌ ಅಕರುದ್ದೀನ್‌ ಅವರು ವಿಶ್ವಸಂಸ್ಥೆಗೆ ಹಸ್ತಾಂತರಿಸಿದರು. ಆ ಮೂಲಕ ಪ್ಯಾರಿಸ್ ಒಪ್ಪಂದವನ್ನು ಅನುಮೋದಿಸಿದ 62ನೇ ರಾಷ್ಟ್ರ ಭಾರತ ಆಗಿದೆ. ಈ 62 ರಾಷ್ಟ್ರಗಳು ಒಟ್ಟಾರೆಯಾಗಿ ಜಾಗತಿಕ ಮಟ್ಟದಲ್ಲಿ ಶೇ 52% ಹಸಿರು ಮನೆ ಅನಿಲವನ್ನು ಹೊರಸೂಸುತ್ತಿವೆ.

  • ಪ್ಯಾರಿಸ್ ಒಪ್ಪಂದ ಜಾರಿಗೆ ಬರಲು ಹಸಿರು ಮನೆ ಅನಿಲವನ್ನು ಹೊರಸೂಸುತ್ತಿರುವ ರಾಷ್ಟ್ರಗಳ ಕೊಡುಗೆಯ ಮಿತಿ ಶೇ 55% ರಷ್ಟಿರಬೇಕು.
  • ಇಂಗಾಲ ಹೊರಸೂಸುವಿಕೆಯ ಒಟ್ಟು ಪ್ರಮಾಣದಲ್ಲಿ ಭಾರತದ ಪಾಲು ಶೇ 4.1% ರಷ್ಟಿದೆ. ಯುರೋಪಿನ್ ಒಕ್ಕೂಟ ಸಹ ಒಪ್ಪಂದವನ್ನು ಅನುಮೋದಿಸಲು ನಿರ್ಣಯಿಸಿದ್ದು ಒಂದು ವೇಳೆ ಅನುಮೋದಿಸಿದರೆ ಒಪ್ಪಂದ ಜಾರಿ ಹಾದಿ ಸುಗಮವಾಗಲಿದೆ.
  • ಪ್ಯಾರಿಸ್‌ ಸಮ್ಮೇಳನದ ಒಪ್ಪಂದದಲ್ಲಿ 2020ರ ಒಳಗಾಗಿ ಹಸಿರು ಮನೆ ಅನಿಲ ಪರಿಣಾಮ ತಗ್ಗಿಸುವುದು, ಭೂಮಿಯ ಒಟ್ಟಾರೆ ಶಾಖವನ್ನು 2 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆ ಇಡುವುದು. ಮರುಬಳಕೆಯ ಇಂಧನ ಇತ್ಯಾದಿಗಳ ಕುರಿತಾಗಿದೆ.

ರಫೆಲ್ ಜೆಟ್ ತಯಾರಿಕೆಗೆ ಡಸಾಲ್ಟ್-ರಿಲಯನ್ಸ್ ಒಪ್ಪಂದ

ಅನಿಲ್ ಅಂಬಾನಿ ನೇತೃತ್ವದ ರಿಲಯನ್ಸ್ ಮತ್ತು ಫ್ರಾನ್ಸ್ ನ ಡಸಾಲ್ಟ್ ಏವೀಯೇಷನ್ ನಡುವೆ ರಫೆಲ್ ಯುದ್ದ ವಿಮಾನ ತಯಾರಿಕೆ ಸಂಬಂಧ ಒಪ್ಪಂದ ಏರ್ಪಟ್ಟಿದೆ. ಈ ಜಂಟಿ ಉದ್ದಿಮೆಯನ್ನು ಇನ್ನು ಮುಂದೆ ಡಸಾಲ್ಟ್ ರಿಲಯನ್ಸ್ ಏರೋಸ್ಪೇಸ್ ಎನ್ನಲಾಗುವುದು. ಫ್ರಾನ್ಸ್ ನಿಂದ ಭಾರತ ಖರೀದಿಸಲಿರುವ 36 ರಫೆಲ್ ಜೆಟ್ಗಳ ತಯಾರಿಕೆಗೆ ಡಸಾಲ್ಟ್ ರಿಲಯನ್ಸ್ ಏರೋಸ್ಪೇಸ್ ಅಗತ್ಯ ಸೇವೆಯನ್ನು ಒದಗಿಸಲಿದೆ. ಸುಮಾರು ರೂ 30,000 ಕೋಟಿ ಒಪ್ಪಂದ ಇದಾಗಿದ್ದು, ಭಾರತದ ರಕ್ಷಣಾ ತಯಾರಿಕ ಸಂಸ್ಥೆಯೊಂದು ಇಷ್ಟು ದೊಡ್ಡ ಮೊತ್ತದ ಒಪ್ಪಂದಕ್ಕೆ ಸಹಿಹಾಕಿರುವುದು ಇದೇ ಮೊದಲು.

ಪ್ರಮುಖಾಂಶಗಳು:

  • ರಿಲಯನ್ಸ್ ಮತ್ತು ಡಸಾಲ್ಟ್ ಏರೋಸ್ಪೇಸ್ ನಡುವೆ ಏರ್ಪಟ್ಟಿರುವ ಈ ಒಪ್ಪಂದದಡಿ ಐಐಡಿಎಂ ಯೋಜನೆಯಡಿ ಸಂಶೋಧನೆ ಮತ್ತು ಅಭಿವೃದ್ದಿ (ಆರ್ & ಡಿ)ಗು ಒತ್ತು ನೀಡಲಾಗುವುದು.
  • ಐಐಡಿಎಂ ಎಂದರೆ ಸ್ಥಳೀಯವಾಗಿ ವಿನ್ಯಾಸ, ನಿರ್ಮಾಣ ಮತ್ತು ತಯಾರಿಸಲ್ಪಟ್ಟ (Indigenously Designed, Developed and Manufactured) ಎಂದರ್ಥ. ಇದನ್ನು ರಕ್ಷಣಾ ಇಲಾಖೆಯ ಖರೀದಿ ಪ್ರಕ್ರಿಯೆ (DPP)2016 ರಡಿ ಹೊಸದಾಗಿ ಕಲ್ಪಿಸಲಾಗಿದೆ.

ಹಿನ್ನಲೆ:

ಸೆಪ್ಟೆಂಬರ್ 2016 ರಲ್ಲಿ ಭಾರತ ಮತ್ತು ಫ್ರಾನ್ಸ್ ನಡುವೆ 36 ಅತ್ಯಾಧುನಿಕ ರಫೆಲ್ ಯುದ್ದ ವಿಮಾನ ಖರೀದಿ ಸಂಬಂಧ ಒಪ್ಪಂದಕ್ಕೆ ಸಹಿಹಾಕಲಾಗಿತ್ತು. ಸುಮಾರು 59 ಸಾವಿರ ಕೋಟಿ ಒಪ್ಪಂದ ಇದಾಗಿದೆ. ಒಪ್ಪಂದದ ಪ್ರಕಾರ ಭಾರತೀಯ ಕಂಪನಿಯೊಂದಿಗೆ ಶೇ.50 ರಷ್ಟು ಪಾಲುದಾರಿಕೆಯೊಂದಿಗೆ ಯುದ್ದ ವಿಮಾನವನ್ನು ತಯಾರಿಸಬೇಕಿದೆ.

ಆನೆಗಳ ಸಂಶೋಧಕಿ ಪ್ರಜ್ಞಾ ಚೌತಗೆ ಫ್ರಾನ್ಸ್ ನೈಟ್ ಹುಡ್ ಗೌರವ

ಸಿನಿಮಾ ನಿರ್ಮಾಪಕಿ ಮತ್ತು ಆನೆಗಳ ಸಂಶೋಧಕಿ ಪ್ರಜ್ಞಾ ಚೌತಗೆ ಫ್ರಾನ್ಸ್ ಸರ್ಕಾರದ ಅತ್ಯುತ್ತಮ ನಾಗರೀಕ ಪ್ರಶಸ್ತಿಗಳಲ್ಲಿ ಒಂದಾದ “ನೈಟ್ ಇನ್ ದಿ ನ್ಯಾಷನಲ್ ಆರ್ಡರ್ ಆಫ್ ಮೆರಿಟ್” ಗೌರವ ಸಂದಿದೆ. ಏಷ್ಯಾ ಆನೆಗಳ ಕುರಿತಾಗಿ ಇವರು ನಡೆಸುತ್ತಿರುವ ಸಂಶೋಧನೆಗಾಗಿ ಈ ಗೌರವಕ್ಕೆ ಆಯ್ಕೆಮಾಡಲಾಗಿದೆ. ಇತ್ತೀಚೆಗಷ್ಟೇ ಫ್ರಾನ್ಸ್ ಸರ್ಕಾರ ನೈಟ್ ಹುಡ್ ಗೌರವವನ್ನು ಕಿರಣ್ ಮಜುಂಧರ್ ಷಾ ಮತ್ತು ತಮಿಳು ನಟ ಕಮಲ್ ಹಾಸನ್ ಅವರಿಗೆ ನೀಡಿತ್ತು. ಈ ಸಾಲಿಗೆ ಚೌತ ರವರು ಈಗ ಸೇರ್ಪಡೆಗೊಂಡಿದ್ದಾರೆ.

ಪ್ರಜ್ಞಾ ಚೌತ ಬಗ್ಗೆ:

  • ಪ್ರಜ್ಞಾ ಅವರು ಆನೆ ಮನೆ ಫೌಂಡೇಷನ್ ಸಂಸ್ಥಾಪಕಿ. ಸುಮಾರು 16 ವರ್ಷಗಳಿಂದ ಈ ಫೌಂಡೇಷನ್ ಆನೆಗಳ ಕುರಿತಾಗಿ ಸಂರಕ್ಷಣೆ ಮತ್ತು ಸಂಶೋಧನೆ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಿದೆ.
  • ಆನೆಗಳ ಸಂಶೋಧನೆ ನಡೆಸುವ ಸಲುವಾಗಿ ಜಿಪಿಎಸ್ ಕಾಲರ್ ಮತ್ತು ಆನ್ ಲೈನ್ ಮಾನಿಟರಿಂಗ್ ವ್ಯವಸ್ಥೆಯನ್ನು ಅಭಿವೃದ್ದಿಪಡಿಸಿದ ಕೀರ್ತಿ ಇವರದು.
  • ಸೆರೆಹಿಡಿಯಲಾದ ಆನೆಗಳ ನಿರ್ವಹಣೆ ಹೇಗೆ ಎಂಬುದರ ಕುರಿತಾಗಿ ಚೌತ ಅವರು “ಎಲಿಫಂಟ್ ಕೋಡ್” ಪುಸ್ತಕವನ್ನು ಬರೆದಿದ್ದಾರೆ.

Leave a Comment

This site uses Akismet to reduce spam. Learn how your comment data is processed.