ಸಂಗೀತ ನಿರ್ದೇಶಕ ಉತ್ತಮ ಸಿಂಗ್ ಗೆ ಮಹಾರಾಷ್ಟ್ರ ಸರ್ಕಾರ ನೀಡುವ ಲತಾ ಮಂಗೇಶ್ಕರ್ ಪ್ರಶಸ್ತಿ

ಪ್ರಸಿದ್ದ ಸಂಗೀತ ನಿರ್ದೇಶಕ ಹಾಗೂ ಪಿಟೀಲು ವಾದಕ ಉತ್ತಮ್ ಸಿಂಗ್ ಅವರನ್ನು 2016ನೇ ಸಾಲಿನ ಲತಾ ಮಂಗೇಶ್ಕರ್ ಜೀವಮಾನ ಸಾಧನೆ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ. ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಮಹಾರಾಷ್ಟ್ರ ಸರ್ಕಾರ ನೀಡುತ್ತಿದೆ. ಸಂಗೀತ ಕ್ಷೇತ್ರಕ್ಕೆ ಉತ್ತಮ್ ಸಿಂಗ್ ನೀಡಿರುವ ಕೊಡುಗೆಯನ್ನು ಗಮನಿಸಿ ಈ ಪ್ರಶಸ್ತಿಗೆ ಸಿಂಗ್ ಅವರನ್ನು ಆಯ್ಕೆಮಾಡಲಾಗಿದೆ. ಈ ವರ್ಷದ ಕೊನೆಯಲ್ಲಿ ಪ್ರಶಸ್ತಿಯನ್ನು ನೀಡಲಾಗುವುದು.

ಉತ್ತಮ್ ಸಿಂಗ್ ಬಗ್ಗೆ:

  • ಸಿಂಗ್ ತಮ್ಮ ಬಾಲ್ಯದಲ್ಲೆ ಸಂಗೀತದ ಕಡೆಗೆ ಆಕರ್ಷಿತರಾಗಿದ್ದರು. ಸಿತಾರ್ ವಾದಕರಾಗಿದ್ದ ಇವರ ತಂದೆಯಿಂದ ಸಂಗೀತದ ಮೂಲ ತರಭೇತಿಯನ್ನು ಪಡೆದುಕೊಂಡರು.
  • ನಂತರದ ದಿನಗಳಲ್ಲಿ ಪಿಟೀಲು ಹಾಗೂ ತಬಲ ನುಡಿಸುವುದನ್ನು ಕಲಿತ ಸಿಂಗ್ ತಮ್ಮ 15ನೇ ವರ್ಷದಲ್ಲಿ ಪಿಟೀಲು ನುಡಿಸುವ ಮೂಲಕ ಗಮನ ಸೆಳೆದರು.
  • ಸಂಗೀತ ದಿಗ್ಗಜರಾದ ನೌಶದ್, ಸಿ ರಾಮಚಂದ್ರ, ರೋಷನ್, ಎಸ್ ಡಿ ಬರ್ಮನ್ ರವರುಗಳ ಬಳಿ ಪಿಟೀಲು ನುಡಿಸುವ ಮೂಲಕ ಪ್ರಸಿದ್ದಿ ಹೊಂದಿದರು.
  • ಜಗದೀಶ್ ಖನ್ನಾ ರವರೊಂದಿಗೆ ಕೈಜೋಡಿಸುವ ಮೂಲಕ “ಉತ್ತಮ್-ಜಗದೀಶ್” ಜೋಡಿ ಬಾಲಿವುಡ್ ಸಂಗೀತದಲ್ಲಿ ಹೊಸ ಪ್ರಯೋಗ ಮಾಡಿ ಜನರ ಮನಸೆಳೆದಿತ್ತು. ಈ ಜೋಡಿ ಸುಮಾರು 65ಕ್ಕೂ ಹೆಚ್ಚು ಚಿತ್ರಗಳಿಗೆ ಸಂಗೀತ ನೀಡಿದೆ.
  • ದಕ್ಷಿಣ ಭಾರತದ ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ಅವರೊಂದಿಗೆ ಹಲವಾರು ತಮಿಳು ಚಿತ್ರಗಳಿಗೂ ಸಂಗೀತವನ್ನು ಸಿಂಗ್ ನೀಡಿದ್ದಾರೆ. 1999 ರಲ್ಲಿ ತೆರೆಕಂಡ ಮಲೆಯಾಳಂ ಸಿನಿಮಾ “ಪ್ರೇಮ ಪೂಜಾರಿ” ಚಿತ್ರಕ್ಕೆ ಸಿಂಗ್ ಸಂಗೀತ ಸಂಯೋಜನೆ ಮಾಡಿದ್ದಾರೆ.

ಪ್ರಶಸ್ತಿ ಮತ್ತು ಗೌರವಗಳು:

  • ಇಂಟರ್ ನ್ಯಾಷನಲ್ ಇಂಡಿಯನ್ ಫಿಲ್ಮ್ ಅಕಾಡೆಮಿ ಅವಾರ್ಡ್, ಉತ್ತಮ ಸಂಗೀತ ಸಂಯೋಜನೆಗೆ ಫಿಲ್ಮ್ ಫೇರ್ ಪ್ರಶಸ್ತಿ, ಜೀ ಸಿನಿ ಪ್ರಶಸ್ತಿಯನ್ನು ಸಿಂಗ್ ಪಡೆದುಕೊಂಡಿದ್ದಾರೆ.

ಪ್ರಶಸ್ತಿಯ ಬಗ್ಗೆ:

  • ಭಾರತ ರತ್ನ ಲತಾ ಮಂಗೇಶ್ಕರ್ ಅವರ ಗೌರವಾರ್ಥ ಮಹಾರಾಷ್ಟ್ರ ಸರ್ಕಾರ ಈ ಪ್ರಶಸ್ತಿಯನ್ನು 1992 ರಿಂದ ನೀಡುತ್ತಿದೆ.
  • ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಪ್ರಶಸ್ತಿಯು ಟ್ರೋಫಿ, ಫಲಕ ಮತ್ತು ರೂ 5,00,000 ಲಕ್ಷ ನಗದನ್ನು ಒಳಗೊಂಡಿದೆ.

ದೇಶದಲ್ಲಿ ಅತಿ ಹೆಚ್ಚು ಹೂಬಿಡುವ ಸಸ್ಯ ಪ್ರಬೇಧಗಳನ್ನು ಹೊಂದಿರುವ ರಾಜ್ಯ ತಮಿಳುನಾಡು

ಭಾರತೀಯ ಸಸ್ಯಸರ್ವೇಕ್ಷಣಾ ಇಲಾಖೆ (Botanical Survey of India) ಇತ್ತೀಚೆಗೆ ಬಿಡುಗಡೆ ಮಾಡಿರುವ ವರದಿಯ ಪ್ರಕಾರ ತಮಿಳುನಾಡು ದೇಶದಲ್ಲಿ ಅತಿ ಹೆಚ್ಚು ಹೂಬಿಡುವ ಸಸ್ಯ ಪ್ರಬೇಧಗಳನ್ನು ಹೊಂದಿದೆ. “ಎಂಡಮಿಕ್ ವ್ಯಾಸ್ಕುಲರ್ ಪ್ಲಾಂಟ್ಸ್ ಆಫ್ ಇಂಡಿಯಾ (Endemic Vascular Plants of India)” ಎಂಬ ಶೀರ್ಷಿಕೆಯಡಿ ಬಿಡುಗಡೆಗೊಂಡಿರುವ ವರದಿಯ ಪ್ರಕಾರ ದೇಶದಲ್ಲಿ ಕಾಣಸಿಗುವ ಪ್ರತಿ ನಾಲ್ಕು ಹೂಬಿಡುವ ಸಸ್ಯ ಪ್ರಬೇಧಗಳ ಪೈಕಿ ಒಂದು ದೇಶದ ಸ್ಥಳೀಯ ಪ್ರಬೇಧವಾಗಿದೆ.

ಪ್ರಮುಖಾಂಶಗಳು:

  • ಭಾರತದಲ್ಲಿ ಒಟ್ಟು 18,259 ಹೂ ಬಿಡುವ ಸಸ್ಯಗಳು ಕಂಡುಬಂದಿರುವುದಾಗಿ ವರದಿಯಲ್ಲಿ ತಿಳಿಸಲಾಗಿದೆ. ಇವುಗಳ ಪೈಕಿ 4,303 ಸಸ್ಯಗಳು (ಶೇ 23%) ಕೇವಲ ಭಾರತದಲ್ಲಿ ಮಾತ್ರ ಕಾಣಬಹುದಾಗಿದೆ.
  • ಈ 4,303 ಸಸ್ಯಗಳ ಪೈಕಿ ತಮಿಳುನಾಡಿ ಅತಿ ಹೆಚ್ಚು ಅಂದರೆ 410 ಪ್ರಬೇಧಗಳು ವರದಿಯಾಗಿವೆ. ಕೇರಳದಲ್ಲಿ 357 ಪ್ರಬೇಧಗಳು ಮತ್ತು ಮಹಾರಾಷ್ಟ್ರದಲ್ಲಿ 278 ಪ್ರಬೇಧಗಳು ಕಂಡುಬಂದಿವೆ.
  • ಸ್ಥಳೀಯ ಸಸ್ಯ ಪ್ರಭೇದಗಳ ಭೌಗೋಳಿಕ ಹಂಚಿಕೆ ಬಗ್ಗೆ ಹೇಳುವುದಾದರೆ ಪಶ್ಚಿಮ ಘಟ್ಟದಲ್ಲಿ 2,116 ಪ್ರಬೇಧಗಳು ಕಂಡುಬಂದಿವೆ. ಪೂರ್ವ ಹಿಮಾಲಯ ಪ್ರದೇಶದಲ್ಲಿ 466 ಪ್ರಬೇಧಗಳು ಪತ್ತೆಯಾಗಿವೆ. ಈ ಎರಡು ಪ್ರದೇಶಗಳು ದೇಶದ ಬಯೋಡೈವರ್ಸಿಟಿ ಹಾಟ್ ಸ್ಪಾಟ್ ಆಗಿವೆ.
  • ನಾಲ್ಕು ಗುಲಾಬಿ ಗಿಡಗಳ ಪ್ರಬೇಧ, ಎರಡು ಬಗೆಯ ಗಿಡ ಮೂಲಿಕೆ ಮತ್ತು ಎರಡು ಬಳ್ಳಿ ಗಿಡಗಳು ಹಾಗೂ 12 ಬಗೆಯ ಮಲ್ಲಿಗೆ ಗಿಡಗಳು ಕೇವಲ ಭಾರತದಲ್ಲಿ ಮಾತ್ರ ಕಾಣಬಹುದಾಗಿದೆ.
  • 40 ಬಿದಿರು ಪ್ರಬೇಧಗಳು ಭಾರತಕ್ಕೆ ಮಾತ್ರ ಸೀಮಿತವಾಗಿವೆ.
  • ಭಾರತದಲ್ಲಿ ಮಾತ್ರ 45 ಕರಿ ಮೆಣಸು ವರ್ಗಕ್ಕೆ ಸೇರಿದ ಪ್ರಬೇಧಗಳು, 19 ಶುಂಠಿ ಪ್ರಬೇಧಗಳು ಮತ್ತು 13 ದೊಡ್ಡ ಏಲಕ್ಕಿ ಪ್ರಬೇಧಗಳು ಕಂಡುಬರುತ್ತವೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

19ನೇ ಸಾರ್ಕ್ ಶೃಂಗಸಭೆಯನ್ನು ಮುಂದೂಡಿದ ಪಾಕಿಸ್ತಾನ 

ಪಾಕಿಸ್ತಾನದ ಇಸ್ಲಾಮಾಬಾದಿನಲ್ಲಿ ನಡೆಯಬೇಕಿದ್ದ 19ನೇ ಸಾರ್ಕ್ (South Asian Association for Regional Cooperation) ಶೃಂಗಸಭೆಯನ್ನು ಪಾಕಿಸ್ತಾನ ಮುಂದೂಡಿದೆ. ಉರಿ ಉಗ್ರ ದಾಳಿ ಹಿನ್ನಲೆಯಲ್ಲಿ ಪಾಕಿಸ್ತಾನದಲ್ಲಿ ನಡೆಯಬೇಕಿದ್ದ ಸಾರ್ಕ್ ಶೃಂಗಸಭೆಯನ್ನು ಭಾರತ ಬಹಿಷ್ಕರಿಸಿದ ಬೆನ್ನಲ್ಲೇ ಬಾಂಗ್ಲಾದೇಶ, ಆಫ್ಘಾನಿಸ್ತಾನ, ಭೂತಾನ್ ಮತ್ತು ನೇಪಾಳ ರಾಷ್ಟ್ರಗಳು ಕೂಡ ಭಾರತವನ್ನು ಬೆಂಬಲಿಸಿ ಸಾರ್ಕ್ ಶೃಂಗಸಭೆ ಬಹಿಷ್ಕರಿಸಿದ್ದವು. ಈ ಹಿನ್ನಲೆಯಲ್ಲಿ ಸಾರ್ಕ್ ಶೃಂಗಸಭೆಯನ್ನು ಮುಂದೂಡಲಾಗಿದೆ. ಪಾಕಿಸ್ತಾನ ರಾಜಧಾನಿ ಇಸ್ಲಾಮಾಬಾದಿನಲ್ಲಿ ಇದೇ ನವೆಂಬರ್ 9 ಮತ್ತು 10 ರಂದು 19ನೇ ಸಾರ್ಕ್ ಶೃಂಗಸಭೆಯನ್ನು ನಡೆಯಲು ನಿಗದಿಯಾಗಿತ್ತು. ಸಾರ್ಕ್ ಚಾರ್ಟರ್ ಪ್ರಕಾರ ಸಾರ್ಕ್ ಯಾವುದೇ ಒಂದು ಸದಸ್ಯ ರಾಷ್ಟ್ರ ಶೃಂಗಸಭೆಯಲ್ಲಿ ಪಾಲ್ಗೊಳ್ಳದಿದ್ದಾರೆ ಶೃಂಗಸಭೆಯನ್ನು ಮುಂದೂಡಬೇಕಿದೆ.

ದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಒಕ್ಕೂಟ (ಸಾರ್ಕ್):

  • ಸಾರ್ಕ್ ಪ್ರಾದೇಶಿಕ ಆಂತರಿಕ ಸರ್ಕಾರಗಳ ಮತ್ತು ದಕ್ಷಿಣ ಏಷ್ಯಾದ ರಾಜಕೀಯ ಒಕ್ಕೂಟವಾಗಿದೆ.
  • ಭಾರತ, ಭೂತಾನ್, ಶ್ರೀಲಂಕಾ, ಪಾಕಿಸ್ತಾನ, ನೇಪಾಳ, ಭೂತಾನ್, ಮಾಲ್ಡೀವ್ಸ್ ಮತ್ತು ಆಪ್ಘಾನಿಸ್ತಾನ ಸದಸ್ಯ ರಾಷ್ಟ್ರಗಳು.
  • ಆಸ್ಟ್ರೇಲಿಯಾ, ಚೀನಾ, ಯುರೋಪಿಯನ್ ಒಕ್ಕೂಟ, ಜಪಾನ್, ಇರಾನ್, ಮಾರಿಷಸ್, ಮಯನ್ಮಾರ್, ದಕ್ಷಿಣ ಕೊರಿಯಾ ಮತ್ತು ಅಮೆರಿಕಾ ಸಾರ್ಕ್ ಒಕ್ಕೂಟದ ವೀಕ್ಷಣಾ ಸ್ಥಾನಮಾನ ಹೊಂದಿರುವ ರಾಷ್ಟ್ರಗಳು.

ಇತಿಹಾಸ:

 ‘ಸಾರ್ಕ್’ ಒಕ್ಕೂಟದ ಗ್ರಹಿಕೆಯನ್ನು ಮೊದಲ ಬಾರಿಗೆ ಮುಂದಿಟ್ಟವರು ಬಾಂಗ್ಲಾದೇಶದ ಮಾಜಿ ರಾಷ್ಟ್ರಪತಿ ಜಿಯಾಪುರ್ ರೆಹಮಾನ್. 1979ರಲ್ಲಿ ಅಧಿಕೃತವಾಗಿ ಸಾರ್ಕ್ ಶೃಂಗಸಭೆಯನ್ನು ಕರೆದು ದಕ್ಷಿಣ ಏಷ್ಯಾದ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ, ವಾಣಿಜ್ಯ, ಧಾರ್ಮಿಕ ಮತ್ತು ಕೈಗಾರಿಕಾ ಅಭಿವೃದ್ದಿಯನ್ನು ಸಾಧಿಸಲು ಏಳು ಸದಸ್ಯ ರಾಷ್ಟ್ರಗಳೊಂದಿಗೆ ಚರ್ಚಿಸಲಾಯಿತು. ಈ ಹಿನ್ನೆಲೆಯಲ್ಲಿ ನವಂಬರ್ 1980ರಲ್ಲಿ ಭಾರತ, ಬಾಂಗ್ಲಾದೇಶ, ಪಾಕಿಸ್ತಾನ, ಶ್ರೀಲಂಕಾ, ಭೂತಾನ್, ನೇಪಾಳ, ಮಾಲ್ಡೀವ್ಸ್ ಒಟ್ಟಿಗೆ ಸಭೆ ಸೇರಿ ಒಂದು ಶ್ವೇತಪತ್ರವನ್ನು ಹೊರಡಿಸಲಾಯಿತು. ಈ ಪತ್ರದಲ್ಲಿ ಸದಸ್ಯ ರಾಷ್ಟ್ರಗಳ ನಡುವೆ ಪರಸ್ಪರ ಸಹಕಾರ ಮತ್ತು ಪ್ರಯೋಜನವನ್ನು ಎಲ್ಲ ರಂಗದಲ್ಲಿಯೂ ಸಾಧಿಸುವುದರ ಬಗ್ಗೆ ವ್ಯಾಖ್ಯಾನಿಸಲಾಯಿತು. ಇದರಿಂದ ತಮ್ಮ ನಡುವೆ ಇರುವ ಆಂತರಿಕ ವ್ಯಾಜ್ಯಗಳನ್ನು ಅಭಿವೃದ್ದಿ ಪಥದಲ್ಲಿರುವ ಅಡಚಣೆಗಳನ್ನು, ಗಡಿವಿವಾದಗಳನ್ನು, ವರ್ಣ, ಜನಾಂಗೀಯ ಮತ್ತು ಭಾಷಾವಾರು ಸಮಸ್ಯೆಗಳನ್ನು ಮುಕ್ತವಾಗಿ ಚರ್ಚಿಸಲು ಒಂದು ವೇದಿಕೆ ನಿರ್ಮಾಣವಾಯಿತು..

  • ಔಪಚಾರಿಕವಾಗಿ ಢಾಕಾದಲ್ಲಿ 1985ರ ಡಿಸೆಂಬರ್ 8ರ ಶೃಂಗಸಭೆಯಲ್ಲಿ ಸಾರ್ಕ್ ಸ್ಥಾಪನೆಗೊಂಡಿತು. ಇಲ್ಲಿ ಮಂಡಿಸಿದ ದೃಢೀಕರಣ ಪತ್ರ ಮತ್ತು ಶಾಸನದ ಪ್ರಕಾರ ಸಾರ್ಕ್‌ನ ಏಳು ಸದಸ್ಯರಾಷ್ಟ್ರಗಳ ಅಧ್ಯಕ್ಷರು, ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ದಿ ರಾಷ್ಟ್ರೀಯ ಮತ್ತು ಕ್ರೋಡೀಕೃತ ಸ್ವಾವಲಂಬನೆಯನ್ನು ವೃದ್ದಿಸಲು, ಶಾಂತಿಪಾಲನೆ, ಅಭಿವೃದ್ದಿ ಮತ್ತು ಸ್ಥಿರತೆಯನ್ನು ದಕ್ಷಿಣ ಏಷ್ಯಾ ಮತ್ತು ಜಾಗತಿಕ ಮಟ್ಟದಲ್ಲಿ ಕಾಪಾಡಿಕೊಳ್ಳುವುದರ ಬಗ್ಗೆ ನಿರ್ಣಯವನ್ನು ತೆಗೆದುಕೊಳ್ಳಲಾಯಿತು. ಮಾತ್ರವಲ್ಲದೆ ಸದಸ್ಯ ರಾಷ್ಟ್ರಗಳ ಮಧ್ಯೆ ಆರ್ಥಿಕ ಹಾಗೂ ಸಾಂಸ್ಕೃತಿಕ ಸಹಯೋಗಕ್ಕಾಗಿ ಒಂದು ನಿಯೋಗರೂಪದಲ್ಲಿ ಕಾರ್ಯ ನಿರ್ವಹಿಸಲು ಸಾರ್ಕ್‌ನ್ನು ರಚಿಸಲಾಯಿತು.
  • 2007 ರಲ್ಲಿ ಆಪ್ಘಾನಿಸ್ತಾನ ಸಾರ್ಕ್ ನ 8ನೇ ಸದಸ್ಯ ರಾಷ್ಟ್ರವಾಗಿ ಸೇರ್ಪಡೆಗೊಂಡಿದೆ.

ಭಾರತ ನೈರ್ಮಲ್ಯ ಸಮ್ಮೇಳನ (INDOSAN)ಕ್ಕೆ ಪ್ರಧಾನಿ ಮೋದಿ ಚಾಲನೆ

ಸ್ವಚ್ಚ ಭಾರತ ಅಭಿಯಾನ ಎರಡು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ “ಭಾರತ ನೈರ್ಮಲ್ಯ ಸಮ್ಮೇಳನ”ವನ್ನು ಪ್ರಧಾನಿ ಮೋದಿ ಅವರು ಉದ್ಘಾಟಿಸಿದರು. ಸ್ವಚ್ಚ ಭಾರತದ ಕನಸು ನನಸಾಗಲು ವರ್ತನೆಯಲ್ಲಿ ಪ್ರಮುಖವಾಗಿ ಬದಲಾವಣೆಯಾಗಬೇಕಿದೆ ಎಂದು ಮೋದಿ ರವರು ತಮ್ಮ ಉದ್ಘಾಟನ ಭಾಷಣದಲ್ಲಿ ಅಭಿಪ್ರಾಯಪಟ್ಟರು. ಬ್ರಿಟಿಷ್ ಆಳ್ವಿಕೆಯನ್ನು ಕೊನೆಗಾಣಿಸಲು ಮಹಾತ್ಮ ಗಾಂಧಿ ಸತ್ಯಾಗ್ರಹದ ಮೊರೆ ಹೋದಂತೆ ಇಂದು ನಾವು ಭಾರತವನ್ನು ಕಸ ಮುಕ್ತವಾಗಿಸಲು ಪಣತೊಡಬೇಕಿದೆ ಎಂದು ಮೋದಿ ಉಲ್ಲೇಖಿಸಿದರು.

ಸ್ವಚ್ಚತಾ ಪ್ರಶಸ್ತಿ:

  • ಸ್ವಚ್ಚ ಭಾರತ ಅಭಿಯಾನದ ಅನುಷ್ಟಾನದಲ್ಲಿ ಅಪ್ರತಿಮ ಸಾಧನೆ ಮಾಡಿದ ಮಹಾರಾಷ್ಟ್ರದ ಸಿಂಧೂದುರ್ಗ ಜಿಲ್ಲೆ, ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆ, ಪುಣೆ, ಚಂಡಿಘರ್ ಮತ್ತು ಮೈಸೂರು ನಗರ ಪಾಲಿಕೆ, ಸಿಕ್ಕಿಂನ ಗ್ಯಾಂಟಕ್ ನಗರ, ಸೂರತ್ ರೈಲ್ವೆ ನಿಲ್ದಾಣ, ಕೇಂದ್ರಿಯ ವಿದ್ಯಾಲಯ ಡೆಹ್ರಾಡಾನ್ ಗೆ ಸ್ವಚ್ಚತಾ ಪ್ರಶಸ್ತಿಯನ್ನು ಮೋದಿ ರವರು ವಿತರಿಸಿದರು.

ಇಂಡೋಸಾನ್ ಸಮ್ಮೇಳನದ ಬಗ್ಗೆ:

  • ಇಂಡೋಸಾನ್ ಒಂದು ರಾಷ್ಟ್ರಮಟ್ಟದ ವಾರ್ಷಿಕ ಕಾರ್ಯಕ್ರಮವಾಗಿದ್ದು, ನೈರ್ಮಲ್ಯಕ್ಕೆ ಕಾರ್ಯನಿರ್ವಹಿಸುತ್ತಿರುವ ಪ್ರಮುಖರನ್ನು ಒಂದು ವೇದಿಕೆ ಮೇಲೆ ತರುವುದಾಗಿ.
  • ಸರ್ಕಾರ, ಸಂಘಟನೆಗಳು, ಸಂಶೋಧಕರು, NGOಗಳು ಸ್ಚಚ್ಚ ಭಾರತದ ಸಾಧನೆಗಳ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಲು ವೇದಿಕೆಯಾಗಲಿದೆ.
  • ಸಮ್ಮೇಳನದಲ್ಲಿ ಮುಖ್ಯವಾಗಿ ಸ್ವಚ್ಚ ಭಾರತದಡಿ ಇದುವರೆಗೂ ಆಗಿರುವ ಸಾಧನೆ, ತಲುಪಬೇಕಿರುವ ಗುರಿ, ಗುರಿ ತಲುಪುವ ಮೂಲಕ ಭಾರತವನ್ನು ಬಯಲು ಬರ್ಹಿದೆಸೆ ಮುಕ್ತವನ್ನಾಗಿ ಮಾಡಲು ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆ ಚರ್ಚಿಸಲಾಗುವುದು.
  • ಸ್ವಚ್ಚ ಭಾರತ ಅಭಿಯಾನದಡಿ 2019ರ ವೇಳೆಗೆ ಭಾರತವನ್ನು ಬಯಲು ಶೌಚಮುಕ್ತ ರಾಷ್ಟ್ರವನ್ನಾಗಿ ಮಾಡುವು ಮಹತ್ವದ ಗುರಿಯನ್ನು ಹೊಂದಲಾಗಿದೆ.

ಖ್ಯಾತ ಮನೋವೈದ್ಯ ಅಶೋಕ್ ಪೈ ನಿಧನ

ಖ್ಯಾತ ಮನೋವೈದ್ಯ, ಲೇಖಕ ಮತ್ತು ಸಿನಿಮಾ ನಿರ್ಮಾಪಕ  ಡಾ.ಅಶೋಕ್ ಪೈ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 70 ವರ್ಷ ವಯಸ್ಸಾಗಿತ್ತು. ಪೈ ಅವರು ವಿಚಾರ ಸಂಕಿರಣವೊಂದರಲ್ಲಿ ಭಾಗವಹಿಸಲೆಂದು ಪತ್ನಿ ರಜನಿ ಪೈ ಅವರ ಜತೆಗೆ ಸ್ಕಾಟ್ಲೆಂಡ್‍ಗೆ ತೆರಳಿದ್ದ ವೇಳೆ ಅಲ್ಲಿ ಹೃದಯಾಘಾತವಾಗಿತ್ತು. ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದರೂ, ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.

ಪೈ ಬಗ್ಗೆ:

  • ಪೈ ಅವರು ಡಿಸೆಂಬರ್ 30, 1946 ರಲ್ಲಿ ಜನಿಸಿದರು.
  • ಶಿವಮೊಗ್ಗದಲ್ಲಿ ಮಾನಸ ನರ್ಸಿಂಗ್ ಹೋಮ್ ಮತ್ತು ಮಾನಸ ಎಜುಕೇಷನಲ್ ಫೌಂಡೇಷನ್ ಅನ್ನು ಸ್ಥಾಪಿಸಿದ್ದರು.
  • ಕರ್ನಾಟಕ ಮಾನಸಿಕ ಆರೋಗ್ಯ ಕಾರ್ಯಪಡೆಯ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದ ಇವರು ಕರ್ನಾಟಕ ಮಾನಸಿಕ ಪ್ರಾಧಿಕಾರದ ಅಧ್ಯಕ್ಷರಾಗಿದ್ದರು.
  • ಪೈ ಅವರು ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ಬಹಳಷ್ಟು ಪುಸ್ತಕಗಳನ್ನು ಬರೆದಿದ್ದರು.

ನಿರ್ಮಿಸಿದ್ದ ಸಿನಿಮಾಗಳು:

  • ಪೈ ಅವರು ನಾಲ್ಕು ಸಿನಿಮಾಗಳನ್ನು ನಿರ್ಮಿಸಿದ್ದರು. ಈ ನಾಲ್ಕು ಸಿನಿಮಾಗಳನ್ನು ಸುರೇಶ್ ಹೆಬ್ಳಿಕರ್ ಅವರು ನಿರ್ದೇಶಿಸಿದ್ದರು
  • ಕಾಡಿನ ಬೆಂಕಿ (1989) ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿಗೆ ಭಾಜನವಾಗಿತ್ತು.
  • ಪ್ರಥಮ ಉಷಾಕಿರಣ (1990) ರಾಜ್ಯ ಪ್ರಶಸ್ತಿಯನ್ನು ಪಡೆದುಕೊಂಡಿತ್ತು. ಉಳಿದಂತೆ ಆಘಾತ ಮತ್ತು ಮನಮಂಥನ ಸಿನಿಮಾಗಳನ್ನು ನಿರ್ಮಿಸಿದ್ದರು.
  • ಅಂತರಾಳ ಎಂಬ ಧಾರಾವಾಹಿಯನ್ನು ಪೈ ನಿರ್ಮಿಸಿದ್ದರು. ಗಿರೀಶ್ ಕಾಸರವಳ್ಳಿರವರು ಈ ಧಾರಾವಾಹಿಯಲ್ಲಿ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದರು.

ಪ್ರಶಸ್ತಿಗಳು:

  • ಪೈ ಅವರಿಗೆ ರಾಜ್ಯೋತ್ಸವ ಪ್ರಶಸ್ತಿಯೂ ಸೇರಿದಂತೆ ಹಲವು ಗೌರವ ಸಂದಿದೆ.

5 Thoughts to “ಪ್ರಚಲಿತ ವಿದ್ಯಮಾನಗಳು- ಸೆಪ್ಟೆಂಬರ್ 30, 2016”

  1. September month full current affairs upload madi sir

  2. Sharanabasava

    Comment

Leave a Comment

This site uses Akismet to reduce spam. Learn how your comment data is processed.