ವಿಶ್ವ ಆರ್ಥಿಕ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ಭಾರತಕ್ಕೆ 112 ನೇ ಸ್ಥಾನ

2016 ವಿಶ್ವ ಆರ್ಥಿಕ ಸ್ವಾತಂತ್ರ್ಯ ಸೂಚ್ಯಂಕ ಬಿಡುಗಡೆಗೊಂಡಿದ್ದು, 159 ದೇಶಗಳ ಪೈಕಿ ಭಾರತ 112ನೇ ಸ್ಥಾನವನ್ನು ಪಡೆದುಕೊಂಡಿದೆ. ಕಳೆದ ಸೂಚ್ಯಂಕಕ್ಕೆ ಹೋಲಿಸಿದರೆ ಭಾರತ 10 ಸ್ಥಾನಗಳ ಕುಸಿತಕಂಡಿದ್ದು, ಕಳಪೆ ಸಾಧನೆ ತೋರಿದೆ.

ಟಾಪ್ ಹತ್ತು ರಾಷ್ಟ್ರಗಳು: ಸೂಚ್ಯಂಕದಲ್ಲಿ ಹಾಂಕಾಂಗ್‌ ಮೊದಲ ಸ್ಥಾನ ಪಡೆದುಕೊಂಡಿದೆ. ಸಿಂಗಪುರ, ನ್ಯೂಜಿಲೆಂಡ್‌, ಸ್ವಿಟ್ಜರ್ಲೆಂಡ್‌, ಕೆನಡಾ, ಮಾರಿಷಸ್‌, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ ನಂತರದ ಸ್ಥಾನದಲ್ಲಿ ಇವೆ.

ದಕ್ಷಿಣ ಏಷ್ಯಾ ರಾಷ್ಟ್ರಗಳ ಪೈಕಿ:

  • ಚೀನಾ (113), ಬಾಂಗ್ಲದೇಶ (121) ಪಾಕಿಸ್ತಾನ (133) ಭಾರತಕ್ಕಿಂತ ಪಟ್ಟಿಯಲ್ಲಿ ಹಿಂದೆ ಬಿದ್ದಿವೆ. ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ ಭೂತಾನ್ 78ನೇ ಸ್ಥಾನಗಳಿಸುವ ಮೂಲಕ ಮುಂಚೂಣಿಯಲ್ಲಿದೆ. ನೇಪಾಳ 108 ನೇ ಸ್ಥಾನ ಮತ್ತು ಶ್ರೀಲಂಕಾ 111 ನೇ ಸ್ಥಾನಗಳಿಸುವ ಮೂಲಕ ಭಾರತಕ್ಕಿಂತ ಮುಂದಿವೆ.

ವಿವಿಧ ವಿಭಾಗದಲ್ಲಿ ಭಾರತದ ಸಾಧನೆ:

  • ಕಾನೂನು ವ್ಯವಸ್ಥೆ ಮತ್ತು ಆಸ್ಥಿ ಹಕ್ಕು 86ನೇ ಸ್ಥಾನ, ಕರೆನ್ಸಿ ಸ್ಥಿರ ಮೌಲ್ಯ 130ನೇ ಸ್ಥಾನ, ಅಂತರರಾಷ್ಟ್ರೀಯ ವ್ಯಾಪಾರದ ಸ್ವಾತಂತ್ರ್ಯಮತ್ತು ನಿರ್ವಹಣೆಯಲ್ಲಿ 144ನೇ ಸ್ಥಾನ ಪಡೆದುಕೊಂಡಿದೆ.

ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಹತ್ತು ರಾಷ್ಟ್ರಗಳು:

  • ಇರಾನ್, ಅಲ್ಜೀರಿಯಾ, ಚದ್, ಗ್ಯುನಿಯಾ, ಅಂಗೋಲ, ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್, ಅರ್ಜೀಂಟಿನಾ, ರಿಪಬ್ಲಿಕ್ ಆಫ್ ಕಾಂಗೋ, ಲಿಬಿಯಾ ಮತ್ತು ವೆನೆಜುವೆಲ.

ವಿಶ್ವ ಆರ್ಥಿಕ ಸ್ವಾತಂತ್ರ್ಯ ಸೂಚ್ಯಂಕ:

  • ವಿಶ್ವ ಆರ್ಥಿಕ ಸ್ವಾತಂತ್ರ್ಯ ಸೂಚ್ಯಂಕವನ್ನು ಭಾರತದ ಸೆಂಟರ್ ಫಾರ್ ಸಿವಿಲ್ ಸೊಸೈಟಿ ಮತ್ತು ಕೆನಡಾದ ಫ್ರೆಸರ್ ಸಂಸ್ಥೆ ಜಂಟಿಯಾಗಿ ಸಿದ್ದಪಡಿಸಿ ಬಿಡುಗಡೆಗೊಳಿಸುತ್ತಿವೆ.

“2016-ಏಷ್ಯಾ ಟ್ರಾಕ್ ಸೈಕ್ಲಿಂಗ್ ಕಪ್” ಭಾರತಕ್ಕೆ ಎರಡನೇ ಸ್ಥಾನ

2016 ಏಷ್ಯಾ ಟ್ರಾಕ್ ಸೈಕ್ಲಿಂಗ್ ಕಪ್ ಮುಕ್ತಾಯಗೊಂಡಿದ್ದು, ಪದಕ ಪಟ್ಟಿಯಲ್ಲಿ ಭಾರತ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. 2016 ಏಷ್ಯಾ ಟ್ರಾಕ್ ಸೈಕ್ಲಿಂಗ್ ಕಪ್ ಆತಿಥ್ಯವನ್ನ ಭಾರತವಹಿಸಿದ್ದು ನವದೆಹಲಿಯ ಇಂದಿರಾಗಾಂಧಿ ಕ್ರೀಡಾಂಗಣದಲ್ಲಿ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.

  • ಹಾಂಕ್ ಕಾಂಗ್ 18 ಪದಕ(11 ಚಿನ್ನ, 4 ಬೆಳ್ಳಿ, 3 ಕಂಚು)ಗಳನ್ನು ಗೆಲ್ಲುವ ಮೂಲಕ ಪ್ರಥಮ ಸ್ಥಾನವನ್ನು ಪಡೆದುಕೊಂಡಿತು.
  • ಭಾರತ ಐದು ಚಿನ್ನ, ನಾಲ್ಕು ಬೆಳ್ಳಿ ಮತ್ತು ಮೂರು ಕಂಚು ಗೆಲ್ಲುವ ಮೂಲಕ ಒಟ್ಟು 16 ಪದಕಗಳನ್ನು ಗೆದ್ದು ಎರಡನೇ ಸ್ಥಾನವನ್ನು ಪಡೆದುಕೊಂಡಿತು.
  • ಅಮೋಘ ಸಾಮರ್ಥ್ಯ ತೋರಿದ ದೆಬೊರಾ ಹೆರಾಲ್ಡ್‌ ಮತ್ತು ನಯನಾ ರಾಜೇಶ್‌ ಕ್ರಮವಾಗಿ ಮಹಿಳೆಯರ ಮತ್ತು ಜೂನಿಯರ್‌ ಬಾಲಕಿಯರ ಸ್ಪ್ರಿಂಟ್‌ ವಿಭಾಗಗಳಲ್ಲಿ ಚಿನ್ನ ಗೆದ್ದರು.
  • ಕೀರಿನ್‌ ವಿಭಾಗದಲ್ಲಿ ಬೆಳ್ಳಿ: ಕೀರಿನ್‌ ವಿಭಾಗದಲ್ಲಿ ಭಾರತದ ಸವಾಲು ಎತ್ತಿಹಿಡಿದಿದ್ದ ದೆಬೊರಾ ಅವರು ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದರು. ಇದರೊಂದಿಗೆ ಅವರು ಚಾಂಪಿಯನ್‌ಷಿಪ್‌ನಲ್ಲಿ ಮೂರು ಚಿನ್ನ ಮತ್ತು ಒಂದು ಬೆಳ್ಳಿ ಗೆದ್ದ ಸಾಧನೆ ಮಾಡಿದರು. ಕೇಜಿ ವರ್ಗೀಸ್‌ ಈ ವಿಭಾಗದಲ್ಲಿ ಕಂಚಿಗೆ ತೃಪ್ತಿಪಟ್ಟರು.
  • ಜೂನಿಯರ್‌ ಬಾಲಕಿ ಯರ ಸ್ಪ್ರಿಂಟ್‌ ವಿಭಾಗದಲ್ಲಿ ನಯನಾ ರಾಜೇಶ್‌ ಚಿನ್ನ ಗೆದ್ದರೆ, ಅನು ಚುಟಿಯಾ ಬೆಳ್ಳಿಯ ಸಾಧನೆ ಮಾಡಿದರು.

ಭಾರತೀಯ ಪ್ರಾಣಿ ದಯಾ ಮಂಡಳಿಯ ರಾಯಭಾರಿಯಾಗಿ ಸೌಂದರ್ಯ ರಜನಿಕಾಂತ್

ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಅವರ ಪುತ್ರಿ ಅವರು ಸೌಂದರ್ಯ ರಜನಿಕಾಂತ್ ಅವರನ್ನು ಭಾರತೀಯ ಪ್ರಾಣಿ ದಯಾ ಮಂಡಳಿಯ ರಾಯಭಾರಿಯನ್ನಾಗಿ ನೇಮಕಮಾಡಲಾಗಿದೆ. ಅಲ್ಲದೇ ಸೌಂದರ್ಯ ಅವರು ಮಂಡಳಿಯ ಸಹ ಸದಸ್ಯರಾಗಿ ನೇಮಕಗೊಂಡಿದ್ದಾರೆ.ಚಿತ್ರೋದ್ಯಮದಲ್ಲಿ ತೊಡಗಿಕೊಂಡಿರುವ ಸೌಂದರ್ಯ ಅವರು ಕಂಪ್ಯೂಟರ್ ಗ್ರಾಫಿಕ್ಸ್ ಮತ್ತು ಆನಿಮೇಷನ್ ನಲ್ಲಿ ವಿಶೇಷ ಆಸಕ್ತಿ ಹೊಂದಿದ್ದು, ಅವರಿಂದ ಪ್ರಾಣಿ ದಯಾ ಮಂಡಳಿಗೆ ಸಾಕಷ್ಟು ಸಹಾಯವಾಗಲಿದೆ ಎಂದು ಮಂಡಳಿ ತಿಳಿಸಿದೆ. ಸೌಂದರ್ಯ ಅವರು ಭಾರತೀಯ ಪ್ರಾಣಿ ದಯಾ ಮಂಡಳಿಯ ರಾಯಭಾರಿಯಾಗಿ ಸಿನಿಮಾಗಳಲ್ಲಿ ಬಳಸುವ ಪ್ರಾಣಿಗಳ ರಕ್ಷಣೆ ಬಗ್ಗೆ ಕಾಳಜಿ ವಹಿಸಲಿದ್ದಾರೆ.

ಭಾರತೀಯ ಪ್ರಾಣಿ ದಯಾ ಮಂಡಳಿ:

  • ಭಾರತೀಯ ಪ್ರಾಣಿ ದಯಾ ಮಂಡಳಿಯ ಕಚೇರಿ ಚೆನ್ನೈನ ತಿರುವನ್ಮಿಯೂರ್ ನಲ್ಲಿದೆ. ಈ ಮಂಡಳಿಯನ್ನು ಪ್ರಾಣಿ ಕ್ರೌರ್ಯ ತಡೆ ಕಾಯಿದೆ-1960 ರ ಸೆಕ್ಷನ್ 4 ರಡಿ 1960ರಲ್ಲಿ ಸ್ಥಾಪಿಸಲಾಗಿದೆ.
  • ಭಾರತೀಯ ಪ್ರಾಣಿ ದಯಾ ಮಂಡಳಿ ಒಂದು ಶಾಸನಬದ್ದ ಸಂಸ್ಥೆಯಾಗಿದ್ದು, ಪ್ರಾಣಿಗಳ ಒಳಿತಿಗೆ ಅಗತ್ಯವಿರುವ ಕಾನೂನು ರೂಪಿಸಲು ಸರ್ಕಾರಕ್ಕೆ ಸಲಹೆ ನೀಡುವುದು ಹಾಗೂ ಪ್ರಾಣಿಗಳ ಕಲ್ಯಾಣವನ್ನು ಪ್ರೋತ್ಸಾಹಿಸುವುದು ಇದರ ಮುಖ್ಯ ಕಾರ್ಯವಾಗಿದೆ.
  • ಮಾನವಹಿತಕಾರಿ ಶ್ರೀಮತಿ ರುಕ್ಮಿಣಿ ದೇವಿ ಅರುಣ್ದಳೆ ರವರು ಈ ಮಂಡಳಿ ಸ್ಥಾಪನೆಯ ರೂವಾರಿಯಾಗಿದ್ದು, ಇದರ ಮೊದಲ ಅಧ್ಯಕ್ಷರು ಸಹ ಆಗಿದ್ದರು.
  • ಮಂಡಳಿಯು 28 ಸದಸ್ಯರನ್ನು ಹೊಂದಿದ್ದು, ಮೂರು ವರ್ಷಗಳ ಕಾಲ ಅವಧಿಗೆ ನೇಮಕಗೊಳ್ಳುತ್ತಾರೆ.

ಬೇಳೆಕಾಳು ಉತ್ಪಾದನೆ ಮತ್ತು ಬೆಲೆ ಏರಿಕೆ ತಡೆಯಲು ಅರವಿಂದ್ ಸುಬ್ರಮಣಿಯನ್ ಸಮಿತಿ ವರದಿ ಸಲ್ಲಿಕೆ

ದೇಶದಲ್ಲಿ ಬೇಳೆಕಾಳುಗಳ ಕೊರತೆ ನೀಗಿಸುವ ಸಲುವಾಗಿ ಉತ್ಪಾದನೆ ಹೆಚ್ಚಿಸಿ ಮತ್ತು ಬೆಲೆ ಏರಿಕೆ ತಡೆಯಲು ಕೇಂದ್ರ ಸರ್ಕಾರ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಮಣಿಯನ್ ನೇತೃತ್ವದಲ್ಲಿ ರಚಿಸಿದ್ದ ಸಮಿತಿ ತನ್ನ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದೆ.  ಉತ್ಪಾದನೆಯನ್ನು ಹೆಚ್ಚಿಸುವುದು ಮತ್ತು ಬೆಲೆ ಏರಿಕೆ ತಡೆಯಲು ಕನಿಷ್ಠ ಬೆಂಬಲ ಬೆಲೆಯನ್ನು(ಎಂಎಸ್‌ಪಿ) ಪ್ರತಿಕ್ವಿಂಟಲ್‌ಗೆ ₹1 ಸಾವಿರದವರೆಗೆ ಹೆಚ್ಚಿಸುವುದೂ ಸೇರಿದಂತೆ ವ್ಯಾಪಕ ಸುಧಾರಣಾ ಕ್ರಮಗಳನ್ನು ಸಮಿತಿಯು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಉತ್ಪಾದನೆ ಹೆಚ್ಚಿಸಲು ರೈತರಿಗೆ ಉತ್ತೇಜನ ನೀಡಬೇಕು. ಇದಕ್ಕಾಗಿ ಕನಿಷ್ಠ ಬೆಂಬಲ ಬೆಲೆ ಏರಿಕೆ ಮಾಡಬೇಕಿದೆ. ಜತೆಗೆ ರಫ್ತು ನಿಷೇಧ ಮತ್ತು ದಾಸ್ತಾನು ಮಿತಿಯನ್ನು ಹಿಂದಕ್ಕೆ ಪಡೆಯಬೇಕು ಎಂದೂ ಸಮಿತಿಯು ತನ್ನ ಶಿಫಾರಸಿನಲ್ಲಿ ತಿಳಿಸಿದೆ.ತ್ವರಿತವಾಗಿ ಬೇಳೆಕಾಳುಗಳನ್ನು ಸಂಗ್ರಹಿಸಲು ಮತ್ತು ರೈತರಿಗೆ ಉತ್ಪಾದನಾ ಸಬ್ಸಿಡಿ ನೀಡಲು ಅನುಕೂಲವಾಗುವಂತೆ ಆಹಾರಧಾನ್ಯಗಳನ್ನು ಸಂಗ್ರಹಿಸುವ ಸಂಸ್ಥೆಗಳಿಗೆ ಹೆಚ್ಚುವರಿಯಾಗಿ ₹10 ಸಾವಿರ ಕೋಟಿ ನೀಡುವಂತೆಯೂ ಸಮಿತಿ ಸಲಹೆ ನೀಡಿದೆ.

ಸಮಿತಿಯ ಪ್ರಮುಖ ಶಿಫಾರಸ್ಸುಗಳು:

  • ಮುಂಗಾರು ಹಂಗಾಮು ಅವಧಿಯಲ್ಲಿ ಬೇಳೆಕಾಳು ಬೆಳೆಯುವಂತೆ ಉತ್ತೇಜಿಸಲು, ಕಡಲೆಗೆ ನೀಡುವ ಬೆಂಬಲ ಬೆಲೆಯನ್ನು ಪ್ರತಿ ಕ್ವಿಂಟಲ್ ಗೆ ರೂ 500 ರಿಂದ ರೂ 4000ಕ್ಕೆ ಹೆಚ್ಚಿಸಬೇಕು.
  • ಉದ್ದು ಮತ್ತು ತೊಗರಿಗೆ ಬೆಂಬಲ ಬೆಲೆಯನ್ನು 2017ರ ಮುಂಗಾರು ಅವಧಿಗೆ ಪ್ರತಿ ಕ್ವಿಂಟಾಲ್ ಗೆ ರೂ 6000ಕ್ಕೆ ಏರಿಕೆ ಮಾಡುವುದು.
  • ಮುಂಗಾರಿನ ಅವಧಿಯಲ್ಲಿ ಬೆಳೆದಿರುವ ಬೇಳೆಕಾಳು ಸಂಗ್ರಹಿಸುವ ಪ್ರಕ್ರಿಯೆನ್ನು ಚುರುಕುಗೊಳಿಸುವುದು.
  • 2018ರಲ್ಲಿ ತೊಗರೆಗೆ ನೀಡುವ ಬೆಂಬಲ ಬೆಲೆಯನ್ನು ಪ್ರತಿ ಕ್ವಿಂಟಾಲ್ ಗೆ ರೂ 7000ಕ್ಕೆ ಏರಿಸಬೇಕು.
  • ತೊಗರಿ, ಉದ್ದು, ಕಡಲೆಗೆ ನೀಡಿರುವ ಪ್ರಮಾಣದಲ್ಲಿಯೇ ಇತರೆ ಬೇಳೆಕಾಳುಗಳಿಗೂ ಕನಿಷ್ಟ ಬೆಂಬಲ ಬೆಲೆ ನೀಡಬೇಕು.
  • ವಿವಿಧ ಬೇಳೆಕಾಳುಗಳಿಗೆ ಕನಿಷ್ಟ ಬೆಂಬಲ ಬೆಲೆ ನಿಗಧಿ ಮಾಡುವ ವಿಧಾನವನ್ನು ಪರಿಶೀಲಿಸುವುದು.
  • ನೀರಾವರಿ ಪ್ರದೇಶದಲ್ಲಿ ಬೇಳೆಕಾಳು ಬೆಳೆಯಲು ರೈತರಿಗೆ ನೇರ ನಗದು ವರ್ಗಾವಣೆ ಮೂಲಕ ರೈತರಿಗೆ ಪ್ರತಿ ಕೆ.ಜಿಗೆ ರೂ 10 ರಿಂದ ರೂ 15ರಷ್ಟು ಉತ್ಪಾದನ ಸಬ್ಸಿಡಿ ನೀಡುವಂತೆ ಸಮಿತಿ ಶಿಫಾರಸ್ಸು ಮಾಡಿದೆ.

ಸ್ವದೇಶಿ ನಿರ್ಮಿತ “ಮರ್ಮಗೋವಾ ಯುದ್ದನೌಕೆ” ಗೆ ಚಾಲನೆ

ಸ್ವದೇಶಿ ತಂತ್ರಜ್ಞಾನ ನಿರ್ಮಿತ ಮರ್ಮಗೋವಾ ಯುದ್ದನೌಕೆ ಭಾರತೀಯ ನೌಕಪಡೆಗೆ ಸೇರ್ಪಡೆಯಾಗಿದೆ. ಅತ್ಯಾಧುನಿಕ ತಂತ್ರಜ್ಞಾನ ಮತ್ತು ಕ್ಷಿಪಣಿ ನಾಶಕ ಸಾಮರ್ಥ್ಯ ಹೊಂದಿರುವ ಈ ಹೊಸ ಯುದ್ಧನೌಕೆ ಮುಂಬೈನ ಮಝ್ ಗಾಂವ್ ಬಂದರಿನಲ್ಲಿ ಚಾಲನೆ ನೀಡಲಾಗಿದೆ.

  • ಸಂಪೂರ್ಣವಾಗಿ ಸ್ವದೇಶಿಯಾಗಿ ನಿರ್ಮಾಣವಾಗುತ್ತಿರುವ ಈ ಯುದ್ಧನೌಕೆ ಅತ್ಯಂತ ಹೊಸ ತಂತ್ರಜ್ಞಾನವನ್ನು ಹೊಂದಿದೆ. 2015ರಲ್ಲಿ ಭಾರತೀಯ ನೌಕಪಡೆಗೆ ಐಎನ್ ಎಸ್ ವಿಶಾಖಪಟ್ಟಣಂ ಎಂಬ ಶತ್ರುಸಂಹಾರಕ ಯುದ್ಧನೌಕೆ ಸೇರ್ಪಡೆಯಾಗಿದ್ದರೆ, ಮರ್ಮಗೋವಾ ಭಾರತದಲ್ಲಿ ನಿರ್ಮಾಣವಾದ 2ನೇ ಕ್ಷಿಪಣಿ ನಾಶಕ ಯುದ್ಧನೌಕೆಯಾಗಿದೆ.
  • ಒಟ್ಟು 29,700 ಕೋಟಿ ರೂಪಾಯಿ ವೆಚ್ಚದಲ್ಲಿ ನಾಲ್ಕು ನೂತನ ಯುದ್ಧನೌಕೆ ತಯಾರಾಗಲಿದೆ. ಮರ್ಮಗೋವಾ ಯುದ್ಧನೌಕೆ 7,300 ಟನ್ಸ್ ತೂಕ ಇದೆ.
  • ಗಂಟೆಗೆ ಸುಮಾರು 56 ಕಿಲೋ ಮೀಟರ್ ವೇಗದಲ್ಲಿ ಚಲಿಸಲಿದ್ದು, ಕ್ಷಿಪಣಿ ನಾಶಕ ಸಾಮರ್ಥ್ಯ ಹೊಂದಿದೆ.
  • ಮಝ್ ಗಾಂವ್ ಡಾಕ್ ಶಿಪ್ ಬಿಲ್ಡರ್ಸ್ಸ್ ಲಿಮಿಟೆಡ್(ಎಂಡಿಎಲ್) 15ಬಿ ಪ್ರಾಜೆಕ್ಟ್ ಅಡಿಯಲ್ಲಿ ಈ ನೌಕೆಯನ್ನು ನಿರ್ಮಿಸಿದೆ.
  • ಸ್ವಯಂಚಾಲಿತ ಕ್ಷಿಪಣಿ, ಆಕಾಶದಲ್ಲಿನ ಗುರಿಯನ್ನು ಹೊಡೆದುರುಳಿಸುವ ಕ್ಷಿಪಣಿಗಳು ಈ ಯುದ್ಧನೌಕೆಯಲ್ಲಿರಲಿವೆ. ಈ ಯುದ್ಧನೌಕೆಯನ್ನು ನೌಕಾಪಡೆಯಲ್ಲಿ 2020ಕ್ಕೆ ಮುನ್ನ ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳಲಾಗುವುದು ಎಂದು ಮೂಲಗಳು ತಿಳಿಸಿವೆ.
  • ಮರ್ಮಗೋವಾ ಯುದ್ಧನೌಕೆಯಲ್ಲಿ 50ಮಂದಿ ಅಧಿಕಾರಿಗಳು ಹಾಗೂ 250 ಮಂದಿ ನೌಕಾ ಸಿಬ್ಬಂದಿಗಳಿರುತ್ತಾರೆ. ಇದು ಸಮುದ್ರದಲ್ಲಿ ಸುಮಾರು ಸಾವಿರ ನಾಟಿಕಲ್ ಮೈಲ್ ದೂರದಲ್ಲಿ ಕಾರ್ಯಾಚರಿಸಲಿದೆಯಂತೆ. ಅತ್ಯಾಧುನಿಕ ತಂತ್ರಜ್ಞಾನದ ಮರ್ಮಗೋವಾ ಯುದ್ಧನೌಕೆಯಲ್ಲಿ ಇಸ್ರೇಲ್ ತಂತ್ರಜ್ಞಾನದ ಸೂಕ್ಷ್ಮ ನಿಗಾ ಕಾರ್ಯಾಚರಣೆ ವ್ಯವಸ್ಥೆ ಇದೆ, ಅಪಾಯಕಾರಿ ಮುನ್ಸೂಚನೆ ನೀಡುವ ರಾಡಾರ್(ಎಂಎಫ್ ಸ್ಟಾರ್. ಅಷ್ಟೇ ಅಲ್ಲ ಸುಮಾರು 100 ಕಿಲೋ ಮೀಟರ್ ದೂರದವರೆಗೆ ಗುರಿ ಇಟ್ಟು ನಾಶ ಮಾಡುವ ಸಾಮರ್ಥ್ಯ ಹೊಂದಿದೆ.

Leave a Comment

This site uses Akismet to reduce spam. Learn how your comment data is processed.