ಸೆಪ್ಟೆಂಬರ್ 8: ಅಂತಾರಾಷ್ಟ್ರೀಯ ಸಾಕ್ಷರತಾ ದಿನ

ಅಂತಾರಾಷ್ಟ್ರೀಯ ಸಾಕ್ಷರತಾ ದಿನವನ್ನು ಪ್ರತಿ ವರ್ಷ ಸೆಪ್ಟೆಂಬರ್ 8 ರಂದು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಸಮಾಜ ಮತ್ತು ಸಮುದಾಯಕ್ಕೆ ಸಾಕ್ಷರತೆಯ ಮಹತ್ವವನ್ನು ಒತ್ತಿಹೇಳುವುದು ಈ ದಿನದ ಮುಖ್ಯ ಉದ್ದೇಶ. ಅಂತಾರಾಷ್ಟ್ರೀಯ ಸಾಕ್ಷರತಾ ದಿನವನ್ನು ಯುನೆಸ್ಕೋ 1966 ರಿಂದ ಆಚರಿಸುತ್ತಿದ್ದು, ಈ ವರ್ಷ 50ನೇ ಸಾಕ್ಷರತಾ ದಿನವನ್ನ ಆಚರಿಸಲಾಗುತ್ತಿದೆ.

  • ರಾಷ್ಟ್ರೀಯ ಸಾಕ್ಷರತಾ ಮಿಷನ್ ಪ್ರಾಧಿಕಾರ ಈ ದಿನದಂದು ಭಾರತದಾದ್ಯಂತ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಸಾಕ್ಷರತಾ ದಿನವನ್ನು ಆಚರಿಸಲಾಗುತ್ತದೆ. ದೇಶದಲ್ಲಿ ಅನಕ್ಷರತೆಯನ್ನು ತೊಲಗಿಸುವ ಸಲುವಾಗಿ ರಾಷ್ಟ್ರೀಯ ಸಾಕ್ಷರತಾ ಮಿಷನ್ ಅನ್ನು 1988 ರಲ್ಲಿ ಸ್ಥಾಪಿಸಲಾಗಿದೆ.
  • ಸ್ವಾತಂತ್ರ ಭಾರತದಲ್ಲಿ 1951 ರಲ್ಲಿ ನಡೆಸಲಾದ ಮೊದಲ ಜನಗಣತಿಯಲ್ಲಿ ಭಾರತದ ಸಾಕ್ಷರತಾ ಪ್ರಮಾಣ ಶೇ 18% ಕ್ಕಿಂತ ಕಡಿಮೆ ದಾಖಲಾಗಿತ್ತು. 2011ರ ಜನಗಣತಿ ಅಂಕಿ ಅಂಶಗಳ ಪ್ರಕಾರ ದೇಶದ ಸಾಕ್ಷರತೆ ಶೇ 73% ರಷ್ಟಿದೆ. 12ನೇ ಪಂಚವಾರ್ಷಿಕ ಯೋಜನೆಯ ಅಂತ್ಯಕ್ಕೆ ಶೇ 80% ಸಾಕ್ಷರತೆ ಪ್ರಮಾಣ ಸಾಧಿಸುವ ಗುರಿಯನ್ನು ಹೊಂದಲಾಗಿದೆ.

2016 ಅಂತಾರಾಷ್ಟ್ರೀಯ ಸಾಕ್ಷರತಾ ದಿನ ಧ್ಯೇಯ ವಾಕ್ಯ

  • Reading the Past, Writing the Future

ಹಿನ್ನಲೆ:

  • ಸೆಪ್ಟೆಂಬರ್ 8 ಅನ್ನು ಅಂತಾರಾಷ್ಟ್ರೀಯ ಸಾಕ್ಷರತಾ ದಿನವನ್ನಾಗಿ ಯುನೆಸ್ಕೋ 1964ರಲ್ಲಿ ಘೋಷಿಸಿತು. 1965 ರಿಂದ ಆಚರಣೆ ಮಾಡಲಾಗುತ್ತಿದೆ.
  • ಸಮಾಜ ಮತ್ತು ಸಮುದಾಯಕ್ಕೆ ಸಾಕ್ಷರತೆ ಮಹತ್ವವನ್ನು ಸಾರುವುದು ಈ ದಿನದ ಉದ್ದೇಶ.
  • ಯುನೆಸ್ಕೋ ಈ ದಿನದಂದು ವಿಶ್ವದಾದ್ಯಂತ ಸಾಕ್ಷರತೆ ಮತ್ತು ವಯಸ್ಕ ಕಲಿಕಾ ಸ್ಥಿತಿಯನ್ನು ಅಂತಾರಾಷ್ಟ್ರೀಯ ಸಮುದಾಯಕ್ಕೆ ತಿಳಿಸುವ ಪ್ರಯತ್ನ ಮಾಡುತ್ತದೆ.

ವಾಹನ ಪರವಾನಗಿ ಮತ್ತು ನೋಂದಣಿ ಪ್ರಮಾಣಪ್ರತಗಳನ್ನು ಡಿಜಿ ಲಾಕರ್ಗೆ ಸೇರಿಸುವ ವ್ಯವಸ್ಥೆಗೆ ಚಾಲನೆ

ವಾಹನ ಪರವಾನಗಿ ಮತ್ತು ವಾಹನ ನೋಂದಣಿ ಪ್ರಮಾಣಪತ್ರಗಳನ್ನು ಡಿಜಿ ಲಾಕರ್ಗೆ ಅಳವಡಿಸುವ ವ್ಯವಸ್ಥೆಗೆ ಚಾಲನೆ ನೀಡಲಾಯಿತು. ಕೇಂದ್ರ ಸಚಿವರುಗಳಾದ ನಿತಿನ್ ಗಡ್ಕಾರಿ ಮತ್ತು ರವಿ ಪ್ರಸಾದ್ ಅವರು ಜಂಟಿಯಾಗಿ ಈ ವ್ಯವಸ್ಥೆಗೆ ನವದೆಹಲಿಯಲ್ಲಿ ಚಾಲನೆ ನೀಡಿದರು.

ಪ್ರಮುಖಾಂಶಗಳು:

  • ಈ ವಿಧಾನದಿಂದ ಜನರು ತಮ್ಮ ವಾಹನ ಪರವಾನಗಿ ಮತ್ತು ವಾಹನ ನೋಂದಣಿ ಪ್ರಮಾಣಪತ್ರಗಳನ್ನು ಕೊಂಡೊಯ್ಯುವ ಅಗತ್ಯತೆ ಇರುವುದಿಲ್ಲ.
  • ಡಿಜಿಟಲ್ ಲಾಕರ್ ಮೊಬೈಲ್ ಅಪ್ಲೀಕೇಷನ್ ಬಳಸಿ ತಾವು ಇದಲ್ಲಿಯೇ ದಾಖಲೆಗಳನ್ನು ಮೊಬೈಲ್ ಪೋನ್ ನಲ್ಲಿ ಪಡೆಯಬಹುದಾಗಿದೆ.
  • ಇನ್ನು ಮುಂದೆ ವಾಹನ ಪರವಾನಗಿ ಮತ್ತು ವಾಹನ ನೋಂದಣಿ ಪ್ರಮಾಣಪತ್ರಗಳನ್ನು ಬಳಕೆದಾರರ ಡಿಜಿ ಲಾಕರ್ ಗೆ ನೇರವಾಗಿ ನೀಡಲಾಗುವುದು. ಇತರೆ ಸರ್ಕಾರಿ ಇಲಾಖೆಗಳಲ್ಲಿ ಇದನ್ನು ಗುರುತಿನ ಚೀಟಿ ಮತ್ತು ವಿಳಾಸ ಪುರಾವೆಯಾಗಿ ಬಳಸಬಹುದಾಗಿದೆ.
  • ಎಲ್ಲದಕ್ಕಿಂತ ಮುಖ್ಯವಾಗಿ ಕಾಗದ ಬಳಕೆಯನ್ನು ತಗ್ಗಿಸುವ ಮೂಲಕ ಸರ್ಕಾರಿ ಸಚಿವಾಲಯಗಳಲ್ಲಿ ಆಡಳಿತದ ಒತ್ತಡವನ್ನು ಕಡಿಮೆ ಮಾಡುವುದು ಇದರ ಉದ್ದೇಶ. ಈಗಾಗಲೇ ವಿತರಿಸಿರುವ ಪ್ರಮಾಣೀಕೃತ ದಾಖಲೆಪತ್ರಗಳ ಮೌಲ್ಯಮಾಪನವನ್ನು ಸರಳಗೊಳಿಸುವುದೂ ಮತ್ತೊಂದು ಉದ್ದೇಶ ಎಂದು ಸಚಿವಾಲಯ ಹೇಳಿದೆ.

 ಭಾರತ ಮತ್ತು ಗ್ರೀಸ್ ನಡುವೆ ವಾಯುಯಾನ ಕುರಿತಾದ ಒಡಂಬಡಿಕಿಗೆ ಸಹಿ

ಗ್ರೀಸ್ ಮತ್ತು ಭಾರತ ನಡುವೆ ಅಪರಿಮಿತಿ ವಿಮಾನ ಹಾರಾಟ ನಡೆಸುವ ಸಲುವಾಗಿ ಭಾರತ ಸರ್ಕಾರ ಗ್ರೀಸ್ ದೇಶದೊಂದಿಗೆ ಒಡಂಬಡಿಕೆಗೆ ಸಹಿಹಾಕಿದೆ. ಜೊತೆಗೆ ಮುಕ್ತ ಆಕಾಶ (Open Skies)ಕ್ಕೆ ಸಂಬಂಧಿಸಿದಂತೆ ಉಭಯ ದೇಶಗಳ ನಡುವೆ ವಾಯು ಸೇವೆ ಒಪ್ಪಂದಕ್ಕೂ ಸಹಿ ಮಾಡಿವೆ. ಆ ಮೂಲಕ ಭಾರತದ ಹೊಸ ನಾಗರಿಕ ವಿಮಾನಯಾನ ನೀತಿಯಡಿ ಒಪನ್ ಸ್ಕೈ ಒಪ್ಪಂದಕ್ಕೆ ಸಹಿ ಮಾಡಿದ ಮೊದಲ ದೇಶ ಗ್ರೀಸ್ ಆಗಿದೆ.

ಪ್ರಮುಖಾಂಶಗಳು:

  • ಪ್ರಸ್ತುತ ಭಾರತ ಮತ್ತು ಗ್ರೀಸ್ ನಡುವೆ ನೇರ ವಿಮಾನ ಸೌಕರ್ಯವಿಲ್ಲ. ಗ್ರೀಸ್ ದೇಶಕ್ಕೆ ಹೋಗಬಯಸುವ ಪ್ರಯಾಣಿಕರು ಟರ್ಕಿ ಅಥವಾ ಗಲ್ಫ್ ರಾಷ್ಟ್ರಗಳನ್ನು ಬಳಸಿ ಹೋಗಬೇಕಿದೆ.
  • ಭಾರತ ಮತ್ತು ಗ್ರೀಸ್ ನಡುವೆ ಇದುವರೆಗೂ ಯಾವುದೇ ವಾಯು ಸೇನೆ ಒಪ್ಪಂದವಿರಲಿಲ್ಲ. ಆ ಕಾರಣ ಉಭಯ ದೇಶಗಳ ನಡುವೆ ವಿಮಾನಯಾನಕ್ಕೆ ಅಡ್ಡಿಯಾಗಿತ್ತು.
  • ಒಪನ್ ಸ್ಕೈ ಒಪ್ಪಂದದಡಿ ಭಾರತದ ಏರ್ಲೈನ್ಸ್ ಗಳು ಗ್ರೀಸ್ ದೇಶಕ್ಕೆ ಅಪರಿಮಿತ ವಿಮಾನ ಸೇವೆಯನ್ನು ಕಲ್ಪಿಸುವ ಅವಕಾಶ ದೊರೆತಿದೆ. ಅದೇ ರೀತಿ ಗ್ರೀಸ್ ಏರ್ಲೈನ್ಸ್ ಗಳು ಭಾರತದ ಆರು ಮೆಟ್ರೋ ನಗರಗಳಿಗೆ ಅಪರಿಮಿತ ವಿಮಾನ ಸೇವೆಯನ್ನು ಕಲ್ಪಿಸಬಹುದಾಗಿದೆ.

ಹಿನ್ನಲೆ:

  • ಹೊಸ ನಾಗರಿಕ ವಿಮಾನಯಾನ ನೀತಿಯಡಿ ಸಾರ್ಕ್ ಮತ್ತು ದೆಹಲಿಯಿಂದ 5000ಕಿ.ಮೀ ವ್ಯಾಪ್ತಿಯಲ್ಲಿರುವ ದೇಶಗಳೊಂದಿಗೆ “ಒಪನ್ ಸ್ಕೈ” ವಾಯು ಸೇವೆ ಒಪ್ಪಂದವನ್ನು ಮಾಡಿಕೊಳ್ಳುವ ಉದ್ದೇಶವನ್ನು ಭಾರತ ಹೊಂದಿದೆ.
  • ಇದರಡಿ ಒಪ್ಪಂದ ಬಯಸುವ ದೇಶದೊಂದಿದೆ ಮಾತುಕತೆ ನಡೆದ ಬಳಿಕ ಒಪ್ಪಂದಕ್ಕೆ ಸಹಿಹಾಕಬಹುದಾಗಿದೆ. ಆ ಮೂಲಕ ಉಭಯ ದೇಶಗಳ ನಡುವೆ ಹಾರಾಡುವ ವಿಮಾನಗಳ ಸಂಖ್ಯೆಯನ್ನು ನಿರ್ಧರಿಸಬಹುದು.

ಭಾರತ-ಕಝಾಕಿಸ್ತಾನ ಜಂಟಿ ದ್ವಿಪಕ್ಷೀಯ ಸಮರಾಭ್ಯಾಸ PRABAL DOSTYLK-16 ಆರಂಭ

ಭಾರತ ಮತ್ತು ಕಝಾಕಿಸ್ತಾನ ನಡುವಿನ ಜಂಟಿ ದ್ವಿಪಕ್ಷೀಯ ಮಿಲಿಟರಿ ಅಭ್ಯಾಸ “PRABAL DOSTYLK-16” ಕಝಾಕಿಸ್ತಾನದ ಕರಗಂದ ಪ್ರದೇಶದಲ್ಲಿ ಆರಂಭಗೊಂಡಿತು. ಹದಿನಾಲ್ಕು ದಿನಗಳ ಕಾಲ ನಡೆಯಲಿರುವ ಈ ಅಭ್ಯಾಸ ಸೆಪ್ಟೆಂಬರ್ 17 ರಂದು ಕೊನೆಗೊಳ್ಳಲಿದೆ. ಉಭಯ ದೇಶಗಳ ನಡುವೆ ಮಿಲಿಟರಿ ಮತ್ತು ರಾಜತಾಂತ್ರಿಕ ಸಂಬಂಧವನ್ನು ಬೆಸೆಯುವಲ್ಲಿ ಇದೊಂದು ಮಹತ್ವದ ಹೆಜ್ಜೆಯಾಗಿದೆ. “ಪ್ರಬಲ್ ದೋಸ್ತಿಕ್” ಎಂದರೆ ಬಲವಾದ ಸ್ನೇಹ ಎಂದರ್ಥ.

  • ಈ ಸಮರಾಭ್ಯಾಸದಲ್ಲಿ ಭಾರತ ಸೇನೆಯ ಮಿಲಿಟರಿ ಪಡೆ ಮತ್ತು ಕಝಾಕಿಸ್ತಾನದ ವಿಶೇಷ ಕಾರ್ಯಾಚರಣೆ ಪಡೆ ಜಂಟಿಯಾಗಿ ತರಭೇತಿ ನಡೆಸಲಿವೆ.
  • ಭಯೋತ್ಪಾದನೆ ನಿಗ್ರಹ ಮತ್ತು ಒಳನುಸುಳುವಿಕೆ ತಡೆ ಕಾರ್ಯಾಚರಣೆ ಅಭ್ಯಾಸವನ್ನು ನಡೆಸಲಿವೆ.
  • ಸಮರಾಭ್ಯಾಸ ಎರಡು ಹಂತದಲ್ಲಿ ನಡೆಯಲಿದೆ. ಮೊದಲ ಹಂತದಲ್ಲಿ ಪರಸ್ಪರ ತಂತ್ರಜ್ಞಾನ, ಕೌಶಲ್ಯ, ಶಸ್ತಾಸ್ತ್ರಗಳ ಪರಿಚಯ ಕಾರ್ಯ ನಡೆಯಲಿದೆ.
  • ಎರಡನೇ ಹಂತದಲ್ಲಿ ಉಭಯ ದೇಶಗಳ ಸೇನೆ ಪಡೆಗಳು ಹೆಲಿಕಾಪ್ಟರ್ ಮೂಲಕ ನಡೆಸುವ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳಲಿವೆ.
  • ಯುದ್ದ ಅಭ್ಯಾಸ ಮತ್ತು ದೈಹಿಕ ಸಾಮರ್ಥ್ಯದ ಕಡೆಗೂ ಈ ಸಮರಾಭ್ಯಾಸದಲ್ಲಿ ಗಮನಹರಿಸಲಾಗುವುದು.

ಯುರೇನಿಯಂ ಕಾರ್ಪೋರೇಷನ್ ಆಫ್ ಇಂಡಿಯಾದ (UCI) ನೂತನ CMD ಆಗಿ ಸಿ.ಕೆ.ಅಸ್ನಾನಿ ನೇಮಕ

ಸಿ.ಕೆ.ಅಸ್ನಾನಿ ಅವರು ಸರ್ಕಾರ ಸ್ವಾಮ್ಯದ ಸಂಸ್ಥೆ ಯುರೇನಿಯಂ ಕಾರ್ಪೋರೇಷನ್ ಆಫ್ ಇಂಡಿಯಾದ ಚೇರಮನ್ ಮತ್ತು ಮ್ಯಾನೇಜಿಂಗ್ ಡೈರೆಕ್ಟರ್ ಆಗಿ ನೇಮಕಗೊಂಡಿದ್ದಾರೆ. ಈ ಮುಂಚೆ ಇವರು ಮುಂಬೈನಲ್ಲಿರುವ ಇಂಡಿಯನ್ ರೇರ್ ಅರ್ಥ್ಸ್ ಲಿಮಿಟೆಡ್ ನ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದರು.

ಯುರೇನಿಯಂ ಕಾರ್ಪೋರೇಷನ್ ಆಫ್ ಇಂಡಿಯಾ:

  • ಯುರೇನಿಯಂ ಕಾರ್ಪೋರೇಷನ್ ಆಫ್ ಇಂಡಿಯಾ ಕೇಂದ್ರ ಸರ್ಕಾರ ಸ್ವಾಮ್ಯದ ಸಂಸ್ಥೆಯಾಗಿದ್ದು, ಪರಮಾಣು ಇಂಧನ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿದೆ.
  • ದೇಶದಲ್ಲಿ ಯುರೇನಿಯಂ ಗಣಿಗಾರಿಕೆ ಮತ್ತು ಯುರೇನಿಯಂ ಸಂಸ್ಕರಣ ಮಾಡುವುದು ಇದರ ಪ್ರಮುಖ ಕೆಲಸ.
  • ಯುಸಿಐಯನ್ನು 1967 ರಲ್ಲಿ ಸ್ಥಾಪಿಸಲಾಗಿದೆ.

ರೂ 450 ಕೋಟಿ “ಸ್ವದೇಶಿ ದರ್ಶನ” ಯೋಜನೆಗೆ ಕೇಂದ್ರ ಸರ್ಕಾರ ಒಪ್ಪಿಗೆ

ದೇಶದ ಐದು ರಾಜ್ಯಗಳಾದ ಮಧ್ಯ ಪ್ರದೇಶ, ಉತ್ತರಖಂಡ್, ತಮಿಳುನಾಡು, ಉತ್ತರ ಪ್ರದೇಶ ಮತ್ತು ಸಿಕ್ಕಿಂ ರಾಜ್ಯಗಳಲ್ಲಿ “ಸ್ವದೇಶಿ ದರ್ಶನ” ಯೋಜನೆಯಡಿ ಪ್ರವಾಸೋದ್ಯಮವನ್ನು ಅಭಿವೃದ್ದಿಪಡಿಸುವ ಸಲುವಾಗಿ ಕೇಂದ್ರ ಸರ್ಕಾರ ರೂ 450 ಕೋಟಿಯನ್ನು ಬಿಡುಗಡೆಗೊಳಿಸಲು ಒಪ್ಪಿಗೆ ಸೂಚಿಸಿದೆ. ಅದರಂತೆ ಮಧ್ಯ ಪ್ರದೇಶ ಮತ್ತು ಉತ್ತರ ಪ್ರದೇಶದಲ್ಲಿ ಪರಂಪರಿಕ ವರ್ತುಲ (Heritage Circuit), ಉತ್ತರ ಪ್ರದೇಶದಲ್ಲಿ ರಾಮಾಯಣ ವರ್ತುಲ, ಸಿಕ್ಕಿಂನಲ್ಲಿ ಈಶಾನ್ಯ ವರ್ತುಲ ಮತ್ತು ತಮಿಳುನಾಡಿನಲ್ಲಿ ಕರಾವಳಿ ವರ್ತುಲ ಅಭಿವೃದ್ದಿಪಡಿಸಲು ಕೇಂದ್ರ ಪ್ರವಾಸೋದ್ಯಮ ಸಚಿವಾಲಯ ಸಮ್ಮತಿಸಿದೆ.

ಪ್ರಮುಖಾಂಶಗಳು:

  • ಉತ್ತರಖಂಡದಲ್ಲಿ ಪರಂಪರಿಕ ವರ್ತುಲ: ಈ ಯೋಜನೆಯಡಿ ಜಗೆಶ್ವರ್-ದೇವಿಧುರ-ಕತರ್ಮಾಲ್-ಬೈಜ್ನಾತ್ ಪ್ರದೇಶಗಳನ್ನು ಅಭಿವೃದ್ದಿಪಡಿಸಲಾಗುವುದು. ಇದಕ್ಕಾಗಿ ರೂ 83 ಕೋಟಿ ಮೀಸಲಿಡಲಾಗಿದೆ.
  • ತಮಿಳುನಾಡಿನಲ್ಲಿ ಕರಾವಳಿ ವರ್ತುಲ: ಇದರಡಿ ಚೆನ್ನೈ-ಮಮಮಲ್ಲಾಪುರಂ-ರಾಮೇಶ್ವರಂ-ಮನ್ಪಡು-ಕನ್ಯಾಕುಮಾರಿ ಪ್ರದೇಶವನ್ನು ಅಭಿವೃದ್ದಿಪಡಿಸಲಾಗುವುದು. ಸುಮಾರು ರೂ 100 ಕೋಟಿಯನ್ನು ಇದಕ್ಕಾಗಿ ವ್ಯಯಿಸಲಿದೆ.
  • ಉತ್ತರಪ್ರದೇಶದಲ್ಲಿ ರಾಮಾಯಣ ವರ್ತುಲ: ಉತ್ತರ ಪ್ರದೇಶ ಪ್ರಮುಖ ಪ್ರವಾಸಿ ತಾಣಗಳಾದ ಚಿತ್ರಕೂಟ್ ಮತ್ತು ಶ್ರಿಂಗವರ್ಪುರವನ್ನು ಅಭಿವೃದ್ದಿಪಡಿಸಲಾಗುವುದು.
  • ಸಿಕ್ಕಿಂನಲ್ಲಿ ಈಶಾನ್ಯ ವರ್ತುಲ: ರೂ 95.5 ಕೋಟಿಯಲ್ಲಿ ಈ ಭಾಗದಲ್ಲಿ ಸಾಂಸ್ಕೃತಿಕ ಕೇಂದ್ರ, ಪ್ಯಾರಾಗ್ಲೈಡಿಂಗ್ ಕೇಂದ್ರ, ಕರಕುಶಲ ಬಜಾರು, ಪರ್ವತರೋಹಣ ಮತ್ತು ಧ್ಯಾನ ಮಂದಿರ ಕೇಂದ್ರವನ್ನು ಸ್ಥಾಪಿಸಲಾಗುವುದು.
  • ಮಧ್ಯಪ್ರದೇಶದಲ್ಲಿ ಪರಂಪರಿಕ ವರ್ತುಲ: ಗ್ವಾಲಿಯರ್-ಒರ್ಚ್ಚ-ಖಜುರಾಹೋ-ಚಾಂದೇರಿ-ಭಿಮ್ ಬೆಟ್ಕ-ಮಂಡು ಪ್ರದೇಶದಲ್ಲಿ ರೂ 100 ಕೋಟಿ ವೆಚ್ಚದಲ್ಲಿ ಪ್ರವಾಸೋದ್ಯಮ ಮೂಲಸೌಕರ್ಯವನ್ನು ಅಭಿವೃದ್ದಿಪಡಿಸಲಾಗುವುದು.

ಸ್ವದೇಶ ದರ್ಶನ ಯೋಜನೆ:

  • ವಿಷಯಾಧಾರಿತ ಪ್ರವಾಸೋದ್ಯಮ ವರ್ತುಲಗಳನ್ನು ಅಭಿವೃದ್ದಿಪಡಿಸುವ ಸಲುವಾಗಿ ಕೇಂದ್ರ ಪ್ರವಾಸೋದ್ಯಮ ಸಚಿವಾಲಯ ಸ್ವದೇಶ ದರ್ಶನ ಯೋಜನೆಯನ್ನು ಜಾರಿಗೆ ತಂದಿದೆ.
  • ಇದರಡಿ ಉನ್ನತ ಪ್ರವಾಸಿ ಮೌಲ್ಯ, ಸ್ಪರ್ಧಾತ್ಮಕತೆ ಮತ್ತು ಸುಸ್ಥಿರತೆ ತತ್ವಗಳ ಆಧಾರದ ಮೇಲೆ ಪ್ರವಾಸಿ ವರ್ತುಲಗಳನ್ನು ಅಭಿವೃದ್ದಿಪಡಿಸುವ ಗುರಿ ಹೊಂದಲಾಗಿದೆ.
  • ಒಟ್ಟು 13 ಪ್ರವಾಸಿ ವರ್ತುಲಗಳನ್ನು ಅಭಿವೃದ್ದಿಪಡಿಸಲು ಗುರಿತಿಸಲಾಗಿದೆ ಅವುಗಳೆಂದರೆ ಬುದ್ದ ವರ್ತುಲ, ಈಶಾನ್ಯ ಭಾರತ ವರ್ತುಲ, ಕರಾವಳಿ ವರ್ತುಲ, ಹಿಮಾಲಯ ವರ್ತುಲ, ಕೃಷ್ಣ ವರ್ತುಲ, ಮರುಭೂಮಿ ವರ್ತುಲ, ಎಕೊ ವರ್ತುಲ, ವನ್ಯಜೀವಿ ವರ್ತುಲ, ಬುಡಕಟ್ಟು ವರ್ತುಲ, ಗ್ರಾಮೀಣ ವರ್ತುಲ, ಆಧ್ಯಾತ್ಮಕ ವರ್ತುಲ, ರಾಮಾಯಣ ವರ್ತುಲ ಮತ್ತು ಪರಂಪರಿಕ ವರ್ತುಲ.

ಮೊದಲ ಹಂತದ ESICS ಟೆಲಿಮೆಡಿಸಿನ್ ಸೇವೆ ಪ್ರಾಯೋಗಿಕ ಯೋಜನೆಗೆ ಚಾಲನೆ

ದೂರದಿಂದಲೇ ತಜ್ಞ ವೈದ್ಯಕೀಯ ಸೇವೆಗಳನ್ನು ಒದಗಿಸುವ ನೌಕರರ ವಿಮಾ ನಿಗಮ ಕಾರ್ಪೋರೇಷನ್ (ESICS)ನ ಟೆಲಿಮೆಡಿಸಿನ್ ಸೇವೆಯ ಪ್ರಾಯೋಗಿಕ ಯೋಜನೆಗೆ ಚಾಲನೆ ನೀಡಲಾಯಿತು. ಕೇಂದ್ರ ರಾಜ್ಯ ಖಾತೆ ಸಚಿವ ಬಂಡರು ದತ್ತಾತ್ರೇಯರವರು ದೆಹಲಿಯಲ್ಲಿ ಈ ಸೇವೆಗೆ ಚಾಲನೆ ನೀಡಿದರು.

  • ಮೊದಲ ಹಂತದಲ್ಲಿ ಬಸೈದರ್ಪುರದಲ್ಲಿರುವ ESIC ಮಾದರಿ ಆಸ್ಪತ್ರೆಯನ್ನು ಬಿಹಾರದ ಕತಿಹಾರ್, ಉತ್ತರಪ್ರದೇಶ ಉನ್ನೋ ಮತ್ತು ಉತ್ತರಖಂಡದ ರುದರ್ಪುರ ESIC ಆಸ್ಪತ್ರೆಗಳೊಂದಿಗೆ ಸಂಪರ್ಕ ಮಾಡಲಾಗಿದೆ.
  • ನೌಕರರ ವಿಮಾ ನಿಗಮ ಕಾರ್ಪೋರೇಷನ್ ಟೆಲಿಮೆಡಿಸಿನ್ ಮೊದಲ ಹಂತದ ಯೋಜನೆಯನ್ನು 11 ನೌಕರರ ವಿಮಾ ನಿಗಮದಲ್ಲಿ C-DAC ನೆರವಿನೊಂದಿಗೆ ಆರಂಭಿಸಿದೆ.
  • ಕೇಂದ್ರ ಸರ್ಕಾರದ ಮಹತ್ವದ ಯೋಜನೆಯಾದ ಡಿಜಿಟಲ್ ಇಂಡಿಯಾದ “ಡಿಜಿಟಲ್ ಇನ್ಕ್ಲೂಸೀವ್ ಅಂಡ್ ಸ್ಮಾರ್ಟ್ ಕಮ್ಯೂನಿಟಿ” ಕಾರ್ಯಕ್ರಮದಡಿ ಇದಕ್ಕೆ ಚಾಲನೆ ನೀಡಲಾಗಿದೆ.
  • ಇದರಡಿ ಮೂರು ವಿಶೇಷ ಸೌಲಭ್ಯ ಹೊಂದಿರುವ ESIC ಆಸ್ಪತ್ರೆಗಳನ್ನು ದೇಶದ ದೂರ ಪ್ರದೇಶದಲ್ಲಿರುವ ಎಂಟು ESI ಆಸ್ಪತ್ರೆಗಳೊಂದಿಗೆ ಸಂಪರ್ಕ ಕಲ್ಪಿಸಲಾಗಿದೆ.

ಆದ್ಯತಾ ವ್ಯಾಪಾರ ಒಪ್ಪಂದ (Preferential Trade Agreement) ವಿಸ್ತರಣೆಗೆ ಭಾರತ-ಚಿಲಿ ಒಪ್ಪಿಗೆ  

ಭಾರತ ಮತ್ತು ಚಿಲಿ ನಡುವೆ ಪ್ರಸ್ತುತ ಚಾಲ್ತಿಯಲ್ಲಿರುವ ಆದ್ಯತಾ ವ್ಯಾಪಾರ ಒಪ್ಪಂದವನ್ನು ವಿಸ್ತರಿಸುವ ಒಡಂಬಡಿಕೆಗೆ ಭಾರತ-ಚಿಲಿ ಸಹಿ ಹಾಕಿದವು. ಆ ಮೂಲಕ ಮತ್ತಷ್ಟು ವಸ್ತುಗಳನ್ನು ಒಪ್ಪಂದಡಿ ಸೇರ್ಪಡೆಗೊಳಿಸಲಾಗಿದೆ. ಭಾರತ ಮತ್ತು ಚಿಲಿ ನಡುವೆ ಆದ್ಯತಾ ವ್ಯಾಪಾರ ಒಪ್ಪಂದಕ್ಕೆ ಮಾರ್ಚ್ 2006 ರಲ್ಲಿ ಸಹಿ ಮಾಡಲಾಗಿದ್ದು, ಆಗಸ್ಟ್ 2007 ರಿಂದ ಜಾರಿಗೆ ಬಂದಿದೆ.

ಭಾರತ-ಚಿಲಿ ಸಂಬಂಧ:

  • ಲ್ಯಾಟಿನ್ ಅಮೆರಿಕಾದ ರಾಷ್ಟ್ರಗಳ ಪೈಕಿ ಚಿಲಿ ಭಾರತದ ಮೂರನೇ ಅತಿದೊಡ್ಡ ಪಾಲುಗಾರಿಕ ದೇಶವಾಗಿ 2015-16 ರಲ್ಲಿ ಗುರುತಿಸಿಕೊಂಡಿದೆ.
  • 2015-16ರಲ್ಲಿ ಭಾರತವು ಚಿಲಿಯೊಂದಿಗೆ 2.64 ಶತಕೋಟಿ ಡಾಲರ್ ಮೌಲ್ಯದ ದ್ವಿಪಕ್ಷೀಯ ವ್ಯಾಪಾರವನ್ನು ಹೊಂದಿದೆ. 0.68 ಡಾಲರ್ ಮೊತ್ತದ ರಫ್ತು ಮತ್ತು 1.96 ಶತಕೋಟಿ ಡಾಲರ್ ಮೌಲ್ಯದ ಆಮದನ್ನು 2015-16 ರಲ್ಲಿ ನಡೆಸಿದೆ.
  • ಭಾರತ ಮತ್ತು ಚಿಲಿ ಅತ್ಯುತ್ತಮ ಸ್ನೇಹ ಸಂಬಂಧವನ್ನು ಹೊಂದಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿಲಿ ಭಾರತವನ್ನು ಬೆಂಬಲಿಸುತ್ತಾ ಬಂದಿದೆ.
  • ಈ ಒಪ್ಪಂದದಿಂದ ಭಾರತ ಮತ್ತು ಚಿಲಿ ನಡುವೆ ವ್ಯಾಪಾರ ಮತ್ತು ಆರ್ಥಿಕ ಸಂಬಂಧ ಮತ್ತಷ್ಟು ಗಟ್ಟಿಯಾಗಲಿದೆ. ಆ ಮೂಲಕ ಭಾರತ ಮತ್ತು ಲ್ಯಾಟಿನ್ ಅಮೆರಿಕಾ ದೇಶಗಳ ನಡುವೆ ಹಿಂದಿನಿಂದಲೂ ಇರುವ ಸಂಬಂಧವನ್ನು ಕ್ರೋಢಿಕರಿಸಲು ಸಹಾಯವಾಗಲಿದೆ.

3 Thoughts to “ಪ್ರಚಲಿತ ವಿದ್ಯಮಾನಗಳು- ಸೆಪ್ಟೆಂಬರ್ 8, 2016”

  1. ambaresh a

    awesome sir ….no need of refer any magzines

  2. krishna

    Thanks..sir plz give more gk information’s…

  3. Dayananda

    Sir pls provide the link to download Jan to July current events.

Leave a Comment

This site uses Akismet to reduce spam. Learn how your comment data is processed.