ಭಾರತೀಯ ರಿಸರ್ವ್ ಬ್ಯಾಂಕ್ ನ 24ನೇ ಗವರ್ನರ್ ಆಗಿ ಉರ್ಜಿತ್ ಪಟೇಲ್ ನೇಮಕ

ಭಾರತೀಯ ರಿಸರ್ವ್ ಬ್ಯಾಂಕ್ ನ ನೂತನ ಗರ್ವನರ್ ಆಗಿ ಉರ್ಜಿತ್ ಪಟೇಲ್ ಅವರನ್ನು ಕೇಂದ್ರ ಸರ್ಕಾರ ನೇಮಕ ಮಾಡಿದೆ. ಪಟೇಲ್ ಭಾರತೀಯ ರಿಸರ್ವ್ ಬ್ಯಾಂಕ್ ನ 24ನೇ ಗವರ್ನರ್. ರಘುರಾಮ್ ರಾಜನ್ ಅವರ ಉತ್ತರಾಧಿಕಾರಿಯಾಗಿರುವ ಪಟೇಲ್ ಮೂರು ವರ್ಷಗಳ ಕಾಲ ಗವರ್ನರ್ ಹುದ್ದೆಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಪಟೇಲ್ ಪ್ರಸ್ತುತ ಭಾರತೀಯ ರಿಸರ್ವ್ ಬ್ಯಾಂಕ್ ನಲ್ಲಿ ಡೆಪ್ಯೂಟಿ ಗವರ್ನರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಆಗಿ ನೇಮಕಗೊಂಡ 8ನೇ ಡೆಪ್ಯೂಟಿ ಗವರ್ನರ್.

ಹಿನ್ನಲೆ:

ಸಂಸದೀಯ ಕಾರ್ಯದರ್ಶಿಯ ನೇತೃತ್ವದ ಎಫ್​ಎಸ್​ಆರ್​ಎಎಸ್​ಸಿ (Sector Regulatory Appointments Search Committee)ಸಮಿತಿಯ ಶಿಫಾರಸ್ಸಿನ ಮೇರೆಗೆ ಸಂಪುಟ ನೇಮಕಾರಿ ಸಮಿತಿ ಉರ್ಜಿತ್ ಪಟೇಲ್ ಅವರ ಹೆಸರನ್ನು ಅಂತಿಮಗೊಳಿಸಿದೆ.

ಉರ್ಜಿತ್ ಪಟೇಲ್ ಬಗ್ಗೆ:

  • ಅಕ್ಟೋಬರ್ 28, 2963 ರಲ್ಲಿ ಜನನ. ಲಂಡನ್ ಸ್ಕೂಲ್ ಆಫ್ ಇಕಾನಮಿಕ್ಸ್ ನಲ್ಲಿ ನಂತರ ಆಕ್ಸ್’ಫರ್ಡ್ ವಿವಿಯಲ್ಲಿ 1986 ರಲ್ಲಿ ಎಂ.ಫಿಲ್ ಪದವಿ.
  • 1990 ರಲ್ಲಿ ಯಾಲೆ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರದಲ್ಲಿ ಪಿ.ಎಚ್’ಡಿ.
  • 1990-1995 ಅವಧಿಯಲ್ಲಿ ಇಂಟರ್’ನೇಶನಲ್ ಮಾನಿಟರಿ ಫಂಡ್’ನಲ್ಲಿ ಸೇವೆ. 1998-2001 ಹಣಕಾಸು ಸಚಿವಾಲಯದಲ್ಲಿ ಸಲಹೆಗಾರರಾಗಿ ಸೇವೆ.
  • ಮೊದಲ ಬಾರಿಗೆ 2013ರಲ್ಲಿ ರಿಸರ್ವ್ ಬ್ಯಾಂಕ್ ಡೆಪ್ಯೂಟಿ ಗವರ್ನರ್ ಆಗಿ ನೇಮಕ. 2016ರಲ್ಲಿ ರಿಸರ್ವ್ ಬ್ಯಾಂಕ್ ಡೆಪ್ಯೂಟಿ ಗವರ್ನರ್ ಆಗಿ ಪುನರ್’ನೇಮಕ.
  • ಭಾರತೀಯ ರಿಸರ್ವ್ ಬ್ಯಾಂಕ್ ರಚಿಸಿದ್ದ ಹಣಕಾಸು ಪರಾಮರ್ಶೆ ನೀತಿ ಸಮಿತಿಗೆ ಉರ್ಜಿತ್ ಪಟೇಲ್ ನೇತೃತ್ವವಹಿಸಿದ್ದರು. ಬಡ್ಡಿದರ ನಿಗದಿ ಪಡಿಸಲು ಹಣಕಾಸು ಪರಾಮರ್ಶೆ ಸಮಿತಿಯನ್ನು ರಚಿಸುವಂತೆ ಈ ಸಮಿತಿ ಶಿಫಾರಸ್ಸು ಮಾಡಿತ್ತು. ಇದಲ್ಲದೇ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವಿವಿಧ ಉನ್ನತ ಮಟ್ಟದ ಸಮಿತಿಗಳ ಸದಸ್ಯರಾಗಿ ಸೇವೆಸಲ್ಲಿಸಿದ್ದಾರೆ.

ರಿಯೋ ಒಲಂಪಿಕ್ಸ್: ಬೆಳ್ಳಿ ಗೆದ್ದು ಐತಿಹಾಸಿಕ ದಾಖಲೆ ಬರೆದ ಪಿ.ವಿ.ಸಿಂಧು

ಭಾರತದ ಉದಯೋನ್ಮುಖ ಬ್ಯಾಡ್ಮಿಂಟನ್ ತಾರೆ ಪುಸರ್ಲ ವೆಂಕಟ ಸಿಂಧು (P V ಸಿಂಧು) ರಿಯೋ ಒಲಂಪಿಕ್ಸ್ ಮಹಿಳೆಯರ ಸಿಂಗಲ್ಸ್ ಬ್ಯಾಡ್ಮಿಂಟನ್ ಪಂದ್ಯದಲ್ಲಿ ಬೆಳ್ಳಿ ಪದಕ ಗೆದ್ದು ದಾಖಲೆ ಬರೆದರು. ಫೈನಲ್ ಪಂದ್ಯದಲ್ಲಿ ಸಿಂಧು ಸ್ಪೇನ್ ನ ಕರೊಲಿನ ಮರಿನ್ ಅವರಿಂದ 21-19, 12-21, 15-21 ರಿಂದ ಪರಾಭವಗೊಂಡು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡರು. ಆ ಮೂಲಕ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗೆದ್ದ ಭಾರತದ ಮೊದಲ ಮಹಿಳಾ ಕ್ರೀಡಾಪಟು ಎಂಬ ದಾಖಲೆಯನ್ನು ತಮ್ಮದಾಗಿಸಿಕೊಂಡರು. ಅಲ್ಲದೇ ಒಲಂಪಿಕ್ಸ್ ನಲ್ಲಿ ಬೆಳ್ಳಿ ಗೆದ್ದ ಭಾರತದ ನಾಲ್ಕನೇ ಕ್ರೀಡಾಪಟು ಎನಿಸಿದರು. ಈ ಹಿಂದೆ ಕುಸ್ತಿಪಟು ಸುಶೀಲ್ ಕುಮಾರ್ (2012 ಲಂಡನ್ ಒಲಂಪಿಕ್ಸ್), ಶೂಟರ್ ರಾಜ್ಯವರ್ಧನ್ ರಾಥೋಡ್ (2004 ಅಥೆನ್ಸ್ ಒಲಂಪಿಕ್ಸ್) ಮತ್ತು ವಿಜಯ ಕುಮಾರ್ (2012 ಲಂಡನ್ ಒಲಂಪಿಕ್ಸ್) ಬೆಳ್ಳಿ ಪದಕ ಗೆದ್ದಿದ್ದರು. ಸೈನಾ ನೆಹ್ವಾಲ್ ನಂತರ ಬ್ಯಾಡ್ಮಿಂಟನ್ ನಲ್ಲಿ ಪದಕ ಗೆದ್ದ ಭಾರತದ ಎರಡನೇ ಮಹಿಳಾ ಷಟ್ಲರ್ ಸಹ ಆಗಿದ್ದಾರೆ.

ಪಿ.ವಿ.ಸಿಂಧು ಬಗ್ಗೆ:

  • ಸಿಂಧು 5 ಜುಲೈ 1995 ರಲ್ಲಿ ಹೈದ್ರಾಬಾದ್ ನಲ್ಲಿ ಜನಿಸಿದರು. 2012 ರಲ್ಲಿ ಬ್ಯಾಡ್ಮಿಂಟನ್ ವಿಶ್ವ ಫೆಡರೇಷನ್ ಬಿಡುಗಡೆಗೊಳಿಸಿದ ವಿಶ್ವದ ಟಾಪ್ ಬ್ಯಾಡ್ಮಿಂಟನ್ ಆಟಗಾರರ ಪಟ್ಟಿಯಲ್ಲಿ ಸ್ಥಾನಗಳಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದರು.
  • 2013 ವಿಶ್ವ ಚಾಂಪಿಯನ್ ಷಿಪ್ ನಲ್ಲಿ ಕಂಚು ಗೆಲ್ಲುವ ಮೂಲಕ ಈ ಸಾಧನೆ ಮಾಡಿದ ಭಾರತದ ಪ್ರಥಮ ಮಹಿಳಾ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.
  • ಭಾರತದ ನಾಲ್ಕನೇ ಅತ್ಯುನ್ನತ ನಾಗರೀಕ ಪ್ರಶಸ್ತಿಯಾದ ಪದ್ಮಶ್ರೀ ಪ್ರಶಸ್ತಿಯನ್ನು 2015 ರಲ್ಲಿ ಸಿಂಧು ಅವರಿಗೆ ನೀಡಲಾಗಿದೆ.

ಜಿಕಾ ವೈರಸ್ ನಿಂದ ವಯಸ್ಕರಲ್ಲಿ ಮಿದುಳಿನ ಜೀವಕೋಶಗಳಿಗೆ ಹಾನಿ

ಜಿಕಾ ವೈರಸ್ ನಿಂದ ಕೇವಲ ನವಜಾತ ಶಿಶುಗಳಲ್ಲಿ ಅಲ್ಲದೇ ವಯಸ್ಕರ ಮಿದುಳಿನ ಜೀವಕೋಶಗಳಿಗೂ ಹಾನಿಯಾಗಬಹುದೆಂದು ಅಮೆರಿಕಾದಲ್ಲಿ ನಡೆಸಲಾದ ಸಂಶೋಧನೆಯಿಂದ ತಿಳಿದು ಬಂದಿದೆ. ಆದರೆ ಈ ಸಂಶೋಧನೆ ಪ್ರಾಥಮಿಕ ಹಂತದಲ್ಲಿದ್ದು, ಇನ್ನು ಅಧ್ಯಯನ ನಡೆಸಬೇಕಿದೆ. ಈ ಸಂಶೋಧನೆಯಲ್ಲಿ ಮಿದುಳಿನ ನ್ಯೂರನ್ ಪ್ರೊಗೆನಿಟರ್ (Progenitor) ಜೀವಕೋಶಗಳ ಹೆಚ್ಚು ಒತ್ತು ನೀಡಲಾಗಿದೆ. ಈ ಕೋಶಗಳನ್ನು ಮಿದುಳಿನ ಸ್ಟೆಮ್ ಸೆಲ್ ಎನ್ನಲಾಗುತ್ತದೆ. ಭ್ರೂಣದ ಬೆಳವಣಿಗೆ ಹಂತದಲ್ಲಿ ಈ ಜೀವಕೋಶಗಳು ವಿಭಜನೆಗೊಂಡು ನ್ಯೂರನ್ ಆಗಿ ರಚನೆಯಾಗುತ್ತವೆ. ಮಿದುಳಿನಲ್ಲಿ ಮಾಹಿತಿಯನ್ನು ಒತ್ತೊಯ್ಯಲು ನ್ಯೂರನ್ ಪ್ರಮುಖ ಪಾತ್ರವಹಿಸುತ್ತದೆ.

  • ಸಂಶೋಧನೆಯ ಪ್ರಕಾರ ವಯಸ್ಕರಲ್ಲೂ ಕಡಿಮೆ ಸಂಖ್ಯೆಯಲ್ಲಿ ಪ್ರೊಗೆನಿಟರ್ ಜೀವಕೋಶಗಳು ಇರುವುದರಿಂದ ಜಿಕಾ ವೈರಸ್ ಗೆ ಸಂಪೂರ್ಣವಾಗಿ ಪ್ರತಿರೋಧಕವನ್ನು ಹೊಂದಿರುತ್ತಾರೆ ಎನ್ನುವುದು ಕಷ್ಟ ಎನ್ನಲಾಗಿದೆ. ಪ್ರೊಗೆನಿಟರ್ ಜೀವಕೋಶಗಳು ವಯಸ್ಕರಲ್ಲಿ ಕಲಿಯಲು ಮತ್ತು ನೆನಪಿನ ಶಕ್ತಿಯನ್ನು ಕಾಪಾಡಲು ಪಾತ್ರವಹಿಸುತ್ತವೆ. ಪ್ರೊಗೆನಿಟರ್ ಜೀವಕೋಶಗಳು ಜಿಕಾ ವೈರಸ್ ಸೋಂಕಿಗೆ ಒಳಗಾಗುವಬಹುದರಿಂದ ವಯಸ್ಕರಲ್ಲಿ ಕಲಿಕೆ ಮತ್ತು ನೆನಪಿನ ಶಕ್ತಿ ಮೇಲೆ ಪರಿಣಾಮ ಬೀರಲಿದೆ.

ಜಿಕಾ ವೈರಸ್ ಬಗ್ಗೆ:

  • ಜಿಕಾ ವೈರಸ್ ಏಡಿಸ್ ಈಜಿಪ್ಟಿ ಸೊಳ್ಳೆಗಳ ಮೂಲಕ ಹರಡಬಲ್ಲ ರೋಗವಾಗಿದೆ.
  • ಈ ವೈರಸ್ ನಿಂದ ಹುಟ್ಟುವ ಮಕ್ಕಳ ಮೆದುಳು ನಿಷ್ಕ್ರೀಯಗೊಳ್ಳುತ್ತದೆ. ಮಕ್ಕಳು ಹುಟ್ಟುವಾಗಲೇ ಚಿಕ್ಕ ತಲೆ ಹೊಂದಿರುತ್ತಾರೆ. ಇದನ್ನು Microcephaly ಎನ್ನಲಾಗುತ್ತದೆ.
  • ಜ್ವರ, ಕೆಂಪು ಕಣ್ಣು, ಮೂಳೆ ನೋವು ಈ ಸೋಂಕಿನ ಲಕ್ಷಣವಾಗಿದೆ. ಇದು ಅತಿ ಹೆಚ್ಚಾಗಿ ಗರ್ಭಿಣಿ ಸ್ತ್ರೀಯರಿಗೆ ಅತಿ ಹೆಚ್ಚು ಹರಡವುದರಿಂದ ಈ ಬಗ್ಗೆ ಹೆಚ್ಚಿನ ಮನ್ನೆಚ್ಚರಿಕ ಕ್ರಮ ಕೈಗೊಳ್ಳಬೇಕಿದೆ. ಈ ಸೋಂಕಿಗೆ ಯಾವುದೇ ಔಷಧಿಗಳಿಲ್ಲ ಎಂದು ವೈದ್ಯಕೀಯ ಜಗತ್ತು ಹೇಳುತ್ತಿದೆ.

ಸ್ಥಿರ ಬ್ರಾಡ್ ಬ್ಯಾಂಡ್ ಸಂಪರ್ಕ: ಏಷ್ಯಾ-ಫೆಸಿಫಿಕ್ ದೇಶಗಳ ಪೈಕಿ ಭಾರತಕ್ಕೆ 39ನೇ ಸ್ಥಾನ

ಸ್ಥಿರ ಬ್ರಾಡ್ ಬ್ಯಾಂಡ್ (Fixed Broadband) ಸಂಪರ್ಕ ಹೊಂದಿರುವ ಏಷ್ಯಾ-ಫೆಸಿಫಿಕ್ ನ 53 ರಾಷ್ಟ್ರಗಳ ಪೈಕಿ ಭಾರತ ಅತಿ ಕಡಿಮೆ ಅಂದರೆ 39ನೇ ಸ್ಥಾನವನ್ನು ಪಡೆದುಕೊಂಡಿದೆ. ಏಷ್ಯಾ-ಫೆಸಿಫಿಕ್ ನ ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಆಯೋಗ (United Nations Economic and Social Commission for Asia and the Pacific (ESCAP)) ಇತ್ತೀಚೆಗೆ ಹೊರ ತಂದಿರುವ “State of ICT in Asia and the Pacific 2016: Uncovering the Widening Broadband Divide” ವರದಿಯಲ್ಲಿ ಈ ವಿಷಯ ಬಹಿರಂಗಗೊಂಡಿದೆ.

ವರದಿಯ ಪ್ರಮುಖಾಂಶಗಳು:

  • ಸ್ಥಿರ ಬ್ರಾಡ್ ಬ್ಯಾಂಡ್ ಅಳವಡಿಸಿಕೊಂಡಿರುವ ವಿಷಯದಲ್ಲಿ ಭಾರತ ತನ್ನ ನೆರ ಹೊರೆಯ ರಾಷ್ಟ್ರಗಳಾದ ಶ್ರೀಲಂಕಾ, ಭೂತಾನ್ ಮತ್ತು ಬಾಂಗ್ಲದೇಶಕ್ಕಿಂತಲೂ ಹಿಂದೆ ಬಿದ್ದಿದೆ.
  • ಹಾಂಗ್ ಕಾಂಗ್, ನ್ಯೂಜಿಲ್ಯಾಂಡ್, ಜಪಾನ್, ಮಾಕೊ, ಆಸ್ಟ್ರೇಲಿಯಾ ಮತ್ತು ಸಿಂಗಾಪುರ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಪಡೆದುಕೊಂಡಿವೆ.
  • 2015 ರಲ್ಲಿ ಭಾರತದಲ್ಲಿ ಕೇವಲ 1.35 ರಷ್ಟು ಜನಸಂಖ್ಯೆ ಮಾತ್ರ ಸ್ಥಿರ ಬ್ರಾಡ್ ಬ್ಯಾಂಡ್ ಸಂಪರ್ಕವನ್ನು ಪಡೆದುಕೊಂಡಿದ್ದಾರೆ.
  • ಪ್ರತಿ 100 ಜನರಿಗೆ ಸ್ಥಿರ ಬ್ರಾಡ್ ಬ್ಯಾಂಡ್ ಹೊಂದಿರುವ ವಿಷಯದಲ್ಲಿ ಏಷ್ಯಾ-ಫೆಸಿಫಿಕ್ ವಲಯವು ಲ್ಯಾಟಿನ್ ಅಮೆರಿಕಾ ಮತ್ತು ಕೆರೆಬಿಯನ್ ರಾಷ್ಟ್ರಗಳಿಗಿಂತಲೂ ಹಿಂದೆ ಬಿದ್ದಿದೆ. ಯುರೋಪ್ ಮತ್ತು ಉತ್ತರ ಅಮೆರಿಕಾಗಿಂತಲೂ ತೀರಾ ಹಿಂದುಳಿದಿದೆ.
  • ಏಪ್ಯಾ-ಫೆಸಿಫಿಕ್ ವಲಯದಲ್ಲಿ ಬ್ರಾಡ್ ಬ್ಯಾಂಡ್ ಸಂಪರ್ಕ ವಿಶ್ವದ ಸರಾಸರಿ 11.5/100 ಗಿಂತಲೂ ಕಡಿಮೆ ಇದೆ. ಆದರೆ 2005 ರಿಂದ ಈಚೆಗೆ ಸ್ಥಿರ ಬ್ರಾಡ್ ಬ್ಯಾಂಡ್ ಸಂಪರ್ಕದಲ್ಲಿ ಗಣನೀಯವಾಗಿ ಏರಿಕೆಯಾಗಿದೆ.

4 Thoughts to “ಪ್ರಚಲಿತ ವಿದ್ಯಮಾನಗಳು-ಆಗಸ್ಟ್ 21, 2016”

  1. Anonymous

    Want more informastion about present politics,economy science sports technology society and culture ,national and international relationships.

  2. ಸಂತೋಷ್ ಗೌಡರ

    ಧನ್ಯವಾದಗಳು ಸರ್

Leave a Comment

This site uses Akismet to reduce spam. Learn how your comment data is processed.