ಆಗಸ್ಟ್ 7 ರಾಷ್ಟ್ರೀಯ ಕೈಮಗ್ಗ ದಿನ (National Handloom Day)

ಎರಡನೇ ರಾಷ್ಟ್ರೀಯ ಕೈಮಗ್ಗ ದಿನವನ್ನು ಆಗಸ್ಟ್ 7 ರಂದು ದೇಶವ್ಯಾಪ್ತಿ ಆಚರಿಸಲಾಯಿತು. ಉತ್ತರಪ್ರದೇಶದ ವಾರಣಾಸಿಯಲ್ಲಿ ಕೈಮಗ್ಗ ದಿನ ಆಚರಣೆ ಪ್ರಯುಕ್ತ ಏರ್ಪಡಿಸಿದ್ದ ಸಮಾರಂಭದಲ್ಲಿ ಪ್ರಧಾನಿ ಮೋದಿ ಸೇರಿದಂತೆ ವಿವಿಧ ರಾಜಕೀಯ ಗಣ್ಯರು ಪಾಲ್ಗೊಂಡಿದ್ದರು. ಕೈಮಗ್ಗ ದಿನದ ಅಂಗವಾಗಿ ಸಂತ ಕಬೀರ ಮತ್ತು ರಾಷ್ಟ್ರೀಯ ಕೈಮಗ್ಗ ಪ್ರಶಸ್ತಿಗಳ ವಿತರಣೆ ಸಹ ನಡೆಯಿತು.

  • ರಾಷ್ಟ್ರೀಯ ಕೈಮಗ್ಗ ದಿನವನ್ನು ಕಳೆದ ವರ್ಷದಿಂದ ಆಗಸ್ಟ್ 7 ರಂದು ಆಚರಿಸಲಾಗುತ್ತಿದೆ. ಮೊದಲನೆ ರಾಷ್ಟ್ರೀಯ ಕೈಮಗ್ಗ ದಿನವನ್ನು ಪ್ರಧಾನಿ ಮೋದಿ ರವರು ಚೆನ್ನೈನ ಮದ್ರಾಸ್ ವಿಶ್ವವಿದ್ಯಾಲಯದಲ್ಲಿ ಆಗಸ್ಟ್ 7, 2015 ರಂದು ಉದ್ಘಾಟಿಸಿದ್ದರು.

ಹಿನ್ನಲೆ:

  • ಕೈಮಗ್ಗ ಉದ್ಯಮದ ಮಹತ್ವವನ್ನು ಸಾರುವ ಹಿನ್ನಲೆಯಲ್ಲಿ ಆಗಸ್ಟ್ 7ನ್ನು ರಾಷ್ಟ್ರೀಯ ಕೈಮಗ್ಗ ದಿನವೆಂದು ಕೇಂದ್ರ ಸರ್ಕಾರ ಕಳೆದ ವರ್ಷ ಘೋಷಿಸಿದೆ.
  • ಸಾಮಾಜಿಕ ಆರ್ಥಿಕ ಅಭಿವೃದ್ದಿಗೆ ಕೈಮಗ್ಗ ಉದ್ಯಮದ ಕೊಡುಗೆಯನ್ನು ತೋರ್ಪಡಿಸುವುದರ ಜೊತೆಗೆ ಕೈಮಗ್ಗ ಉದ್ಯಮವನ್ನು ಪ್ರೋತ್ಸಾಹಿಸಿ, ನೇಕಾರರ ಜೀವನ ಮಟ್ಟವನ್ನು ಉತ್ತಮಪಡಿಸುವ ಸಲುವಾಗಿ ಆಚರಿಸಲಾಗುತ್ತಿದೆ.
  • ಆಗಸ್ಟ್ 7, 1905 ರಂದು ಕೊಲ್ಕತ್ತ ಟೌನ ಹಾಲ್ ಬಳಿ ರಾಷ್ಟ್ರವ್ಯಾಪ್ತಿ ಸ್ವದೇಶಿ ಚಳುವಳಿಗೆ ಕರೆನೀಡಲಾಗಿತ್ತು. ಇದರ ಸ್ಮರಣಾರ್ಥ ಆಗಸ್ಟ್ 7 ಅನ್ನು ರಾಷ್ಟ್ರೀಯ ಕೈಮಗ್ಗ ದಿನವನ್ನಾಗಿ ಘೋಷಿಸಲಾಗಿದೆ.

ಒಲಂಪಿಕ್ಸ್ ನಲ್ಲಿ ಇತಿಹಾಸ ಬರೆದ ಜಿಮ್ನಾಸ್ಟಿಕ್ ದೀಪಾ ಕರ್ಮಾಕರ್

ಜಿಮ್ನಾಸ್ಟಿಕ್ ದೀಪಾ ಕರ್ಮಾಕರ್ ಒಲಿಂಪಿಕ್ಸ್ ಕ್ರೀಡಾಕೂಟದ ವಾಲ್ಟ್ ನಲ್ಲಿ ಫೈನಲ್‍ಗೆ ಅರ್ಹತೆ ಪಡೆಯುವ ಮೂಲಕ ಭಾರತೀಯ ಕ್ರೀಡಾ ಇತಿಹಾಸದಲ್ಲಿ ದಾಖಲೆ ಬರೆದರು.

  • ಅರ್ಹತಾ ಸುತ್ತಿನಲ್ಲಿ 8ನೇ ಸ್ಥಾನ ಪಡೆದ ದೀಪಾ ವೈಯಕ್ತಿಕ ವಾಲ್ಟ್ ಫೈನಲ್‍ಗೆ ಅರ್ಹತೆ ಪಡೆದ ಭಾರತದ ಮೊಟ್ಟ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
  • ಪ್ರೋಡುನೊವಾ ವಾಲ್ಟ್ ನಲ್ಲಿ ಎರಡು ಪ್ರಯತ್ನಗಳ ನಂತರ 14.850 ಪಾಯಿಂಟ್‍ಗಳೊಂದಿಗೆ ಫೈನಲ್‍ಗೆ ಅರ್ಹತೆ ಪಡೆಯುವಲ್ಲಿ ಸಫಲರಾದರು.
  • ಐದು ಉಪವಿಭಾಗಗಳ ಮೂರನೇ ಸುತ್ತಿನ ನಂತರ ದೀಪಾ ಆರನೇ ಸ್ಥಾನ ಗಳಿಸಿದರು. ಆದರೆ ಕೆನಡಾದ ಜಿಮ್ನಾಸ್ಟ್ ಪಟು ಶಾಲೋನ್ ಓಲ್ಸೆನ್ ಅವರು ಉತ್ತಮ ಸಾಧನೆಯೊಂದಿಗೆ 14.950 ಪಾಯಿಂಟ್‍ಗಳಿಂದ ಸಮಗ್ರ ಶ್ರೇಣಿ ಪಡೆದ ನಂತರ ದೀಪಾ 8ನೇ ಸ್ಥಾನಕ್ಕೆ ಇಳಿದರು.

ದೀಪಾ ಕರ್ಮಾಕರ್ ಬಗ್ಗೆ:

  • ತ್ರಿಪುರ ಮೂಲದ ದೀಪಾ ಕರ್ಮಾಕರ್ ಸದ್ಯ ಭಾರತದ ಭರವಸೆಯ ಜಿಮ್ನಾಸ್ಟಿಕ್ ಎನಿಸಿದ್ದಾರೆ. 22 ವರ್ಷದ ಕರ್ಮಾಕರ್ 2014ರಲ್ಲಿ ಗ್ಲಾಸ್ಗೊದಲ್ಲಿ ನಡೆದ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಈ ಸಾಧನೆ ಮಾಡಿದ ಭಾರತದ ಮೊದಲ ಮಹಿಳಾ ಜಿಮ್ನಾಸ್ಟಿಕ್ ಎನಿಸಿದ್ದರು.
  • ಏಪ್ರಿಲ್ 2016 ರಲ್ಲಿ ಒಲಂಪಿಕ್ಸ್ ನಲ್ಲಿ ಭಾಗವಹಿಸಲು ಅರ್ಹತೆ ಪಡೆಯುವ ಮೂಲಕ ಈ ಸಾಧನೆ ಮಾಡಿದ ಭಾರತದ ಮೊದಲ ಮಹಿಳಾ ಜಿಮ್ನಾಸ್ಟಿಕ್ ಆಗಿ ಇತಿಹಾಸ ಬರೆದರು.

ಬಂಡವಾಳ ಹೂಡಿಕೆ ಆಕರ್ಷಣೆಯಲ್ಲಿ ನಂ.1 ಸ್ಥಾನ ಪಡೆದ ಕರ್ನಾಟಕ

ಬಂಡವಾಳ ಹೂಡಿಕೆ ಆಕರ್ಷಣೆಯಲ್ಲಿ ಕರ್ನಾಟಕ ಈಗ ದೇಶದಲ್ಲಿ ನಂ.1 ಸ್ಥಾನವನ್ನು ಪಡೆದುಕೊಂಡಿದೆ. ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ 2016ನೇ ಸಾಲಿನ “ಉದ್ಯಮ ಸುಧಾರಣಾ ಕ್ರಿಯಾ ಯೋಜನೆ’ ಸೂಚ್ಯಂಕದ ಪ್ರಕಾರ, 2016ರ ಜನವರಿಯಿಂದ-ಜೂನ್ ವರೆಗಿನ ಅವಧಿಯಲ್ಲಿ ಕರ್ನಾಟಕ 67,757 ಕೋಟಿ ರೂ. ಬಂಡವಾಳ ಆಕರ್ಷಿಸುವ ಮೂಲಕ ಗುಜರಾತ್ ಅನ್ನು ಹಿಂದಿಕ್ಕಿದೆ.

  • ಈ ಅವಧಿಯಲ್ಲಿ ಗುಜರಾತ್ ಸರ್ಕಾರ 21,309 ಕೋಟಿ ರೂ. ಬಂಡವಾಳ ಆಕರ್ಷಣೆ ಮಾಡಿದೆ. ಇನ್ನೂ ಒಂದು ಅಚ್ಚರಿಯ ಸಂಗತಿ ಎಂದರೆ 2015ರ ಇಡೀ ಅವಧಿಯಲ್ಲಿ ಗುಜರಾತ್ 64,733 ಕೋಟಿ ರೂ. ಬಂಡವಾಳ ಆಕರ್ಷಿಸಿದ್ದರೆ, ಅದನ್ನು ಈ ವರ್ಷ ಕರ್ನಾಟಕ ಕೇವಲ ಅರ್ಧ ತಿಂಗಳಲ್ಲಿ ಇದನ್ನು ಮೀರಿಸಿದೆ. ಈ ಮೂಲಕ ದೇಶದಲ್ಲೇ ಬಂಡವಾಳ ಆಕರ್ಷಣೆಯ ಅಗ್ರಸ್ಥಾನಿಯಾಗಿದೆ.
  • 2015ರಲ್ಲಿ ಅತಿ ಹೆಚ್ಚು ಹೂಡಿಕೆ ಆಕರ್ಷಿಸಿದ ರಾಜ್ಯಗಳ ಪೈಕಿ ಕರ್ನಾಟಕ ನಾಲ್ಕನೇ ಸ್ಥಾನ(31,668 ಕೋಟಿ ರೂ.) ಗಳಿಸಿತ್ತು. ಮಹಾರಾಷ್ಟ್ರ ಎರಡನೇ(33,277 ಕೋಟಿ ರೂ.) ಹಾಗೂ ಒಡಿಶಾ ಐದನೇ(24,524 ಕೋಟಿ ರೂ.) ಸ್ಥಾನ ಗಳಿಸಿದ್ದವು.
  • ಉಳಿದಂತೆ ಅತ್ಯಧಿಕ ಬಂಡವಾಳ ಆಕರ್ಷಿಸಿದ ಪಟ್ಟಿಯಲ್ಲಿ ಮಹಾರಾಷ್ಟ್ರ (15,688 ಕೋಟಿ ರೂ.), ತೆಲಂಗಾಣ (13,600 ಕೋಟಿ ರೂ.), ಛತ್ತೀಸ್ಗಢ (8,514 ಕೋಟಿ ರೂ.) ಇವೆ.

ಖ್ಯಾತ ತುಳು, ಕನ್ನಡ ಸಾಹಿತಿ ಬೋಲ ಚಿತ್ತರಂಜನ್ ಶೆಟ್ಟಿ ವಿಧಿವಶ

ಪ್ರಸಿದ್ದ ತುಳು, ಕನ್ನಡ ಸಾಹಿತಿ ಬೋಲ ಚಿತ್ತರಂಜನ್ ಶೆಟ್ಟಿ ಅವರು ಕೊನೆಯುಸಿರೆಳೆದರು. 72 ವರ್ಷ ವಯಸ್ಸಿನ ಚಿತ್ತರಂಜನ್ ಶೆಟ್ಟಿ ಹೃದಯಾಘಾತದಿಂದ ನಿಧನರಾದರು. ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಅವರು, 2013ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪಡೆದಿದ್ದರು.

  • 1944ರ ಆಗಸ್ಟ್ 30ರಂದು ಉಡುಪಿ ಜಿಲ್ಲೆಯ ಕಾರ್ಕಳದ ಬೋಳ ಗ್ರಾಮದಲ್ಲಿ ಅವರು ಜನಿಸಿದ್ದರು.
  • 1973 ರಲ್ಲಿ ‘ಪೊಣ್ಣು ಮಣ್ಣ್‍ದ ಬೊಂಬೆ’ ಎಂಬ ತುಳು ನಾಟಕವನ್ನು ರಚಿಸಿದ್ದ ಅವರು, 1983ರಲ್ಲಿ ಕಂಬುಲ ಎಂಬ ಪ್ರಬಂಧ ಬರೆದಿದ್ದರು. ಇದು ತುಳುನಾಡಿನ ಕ್ರೀಡೆಯಾದ ಕಂಬಳದ ಬಗೆಗಿನ ಪ್ರಥಮ ದಾಖಲೆ ಬರಹ ಆಗಿತ್ತು.
  • 1990ರಲ್ಲಿ ಅಳಿಯ ಸಂತಾನ ಕಟ್ಟಿಗೆ ಸಂಬಂಧಿಸಿದಂತೆ ‘ಅಳಿದುಳಿದವರು’ ಎಂಬ ಕನ್ನಡ ಕಾದಂಬರಿಯನ್ನು ಬರೆದಿದ್ದರು. ಇದು ಇವರಿಗೆ ಪ್ರಖ್ಯಾತಿಯನ್ನು ತಂದು ಕೊಟ್ಟಿತು.
  • 2005ರಲ್ಲಿ ‘ಕುಡಿ ಕನ್ನಡ’ ಕಾದಂಬರಿ 2006 ರಲ್ಲಿ ‘ನೀರ್’ ಎಂಬ ತುಳು ನಾಟಕವನ್ನು ಮಕ್ಕಳಿಗಾಗಿ ಬರೆದಿದ್ದರು.
  • ‘ಬಿನ್ನೆದಿ ತುಳು ಪಾಡ್ದನ’, ‘ಅಮರ ಬೀರೆರ ಮಾಮಣ್ಣೆ’, ‘ಒಂಟಿ ಒಬ್ಬಂಟಿ’, ‘ತಮ್ಮಲೆ ಅರುವತ್ತ ಕಟ್ಟ್’ ಮುಂತಾದ ಕವನ ಸಂಕಲನ, ‘ಶ್ರೀ ಮದ್ವ ಭಾರತ ತುಳು ಪಾಡ್ದನ’, ‘ಅನ್ನಾರ್ಥಿ’ ಇವರ ಪ್ರಸಿದ್ದ ಕನ್ನಡ ಕವನ ಸಂಕಲನ ಆಗಿವೆ.

ಪ್ರಶಸ್ತಿಗಳು:

  • 2012ರಲ್ಲಿ ತುಳು ಗೌರವ ಪ್ರಶಸ್ತಿ, ಶ್ರೀಕೃಷ್ಣ ವಾದಿರಾಜ ಪ್ರಶಸ್ತಿ ಮತ್ತು 2013ರಲ್ಲಿ ರಾಜ್ಯೋತ್ಸವ ಪ್ರಶಸ್ತಿಯನ್ನು ಚಿತ್ತರಂಜನ್ ಶೆಟ್ಟಿ ಪಡೆದಿದ್ದರು. ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿಯೂ ಆಯ್ಕೆಯಾಗಿದ್ದರು.

Leave a Comment

This site uses Akismet to reduce spam. Learn how your comment data is processed.