ಕರ್ನಾಟಕದ ಬೇಜ್ವಾಡ ವಿಲ್ಸನ್ ಮತ್ತು ಚೆನ್ನೈನ ಕೃಷ್ಣ ರವರಿಗೆ 2016 ರೇಮನ್ ಮ್ಯಾಗ್ಸೆಸೆ ಪ್ರಶಸ್ತಿ

ಮಾನವ ಹಕ್ಕು ಹೋರಾಟಗಾರ ಬೇಜ್ವಾಡ ವಿಲ್ಸನ್ ಹಾಗೂ ಪ್ರಸಿದ್ದ ಕರ್ನಾಟಕ ಶಾಸ್ತ್ರೀಯ ಸಂಗೀತಗಾರ ಟಿ.ಎಂ.ಕೃಷ್ಣ ರವರನ್ನು ಪ್ರತಿಷ್ಠಿತ ರೇಮನ್ ಮ್ಯಾಗ್ಸೆಸೆ-2016 ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ. ಏಷ್ಯಾದ ನೊಬೆಲ್ ಎಂದೇ ಪ್ರಸಿದ್ದಿ ಹೊಂದಿರುವ ರೇಮನ್ ಮ್ಯಾಗ್ಸೆಸೆ ಪ್ರಶಸ್ತಿಗೆ ಈ ಬಾರಿ ಆರು ಜನರನ್ನು ಆಯ್ಕೆಮಾಡಲಾಗಿದ್ದು, ಭಾರತದಿಂದ ಈ ಇಬ್ಬರನ್ನು ಪ್ರಶಸ್ತಿಗೆ ಪರಿಗಣಿಸಲಾಗಿದೆ.

ಪ್ರಶಸ್ತಿಗೆ ಆಯ್ಕೆಯಾದವರ ಬಗ್ಗೆ:

ಬೇಜ್ವಾಡ ವಿಲ್ಸನ್: ಮೂಲತಃ ಕರ್ನಾಟಕದ ಕೆಜಿಎಪ್ ನವರಾದ ಬೇಜ್ವಾಡ ವಿಲ್ಸನ್ ರವರು ಪ್ರಮುಖ ಮಾನವ ಹಕ್ಕು ಹೋರಾಟಗಾರರು. ಮಾನವೀಯ ಘನತೆಯ ಪರಭಾರೆ ಮಾಡಲಾಗದ ಹಕ್ಕು ಸ್ಥಾಪಿಸಲು ಬೇಜ್ವಾಡ ರವರ ಕೊಡುಗೆಯನ್ನು ಪರಿಗಣಿಸಿ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ. ಸಫಾಯಿ ಕರ್ಮಚಾರಿಗಳ ಪರವಾಗಿ ಆಂದೋಲನದಲ್ಲಿ ತೊಡಗಿಕೊಂಡು ಅವರ ಹಕ್ಕುಗಳಿಗೆ ಹೋರಾಟ ಮಾಡುತ್ತ ಬಂದಿದ್ದಾರೆ. ದೇಶದಾದ್ಯಂತ ಮಲ ಹೊರುವ ಅನಿಷ್ಠ ಪದ್ದತಿಯನ್ನು ನಿರ್ಮೂಲನೆ ಮಾಡುವಲ್ಲಿ ಇವರು ಪ್ರಮುಖ ಪಾತ್ರವಹಿಸಿದ್ದಾರೆ.

ತೊಡುರ್ ಮದಬುಸಿ ಕೃಷ್ಣ: ಟಿ.ಎಂ.ಕೃಷ್ಣ ರವರು ಖ್ಯಾತ ಕರ್ನಾಟಕ ಶಾಸ್ತ್ರೀಯ ಸಂಗೀತಗಾರರು. ಸಂಸ್ಕೃತಿಯಲ್ಲಿ ಸಾಮಾಜಿಕ ಒಳಗೊಳ್ಳುವಿಕೆಗೆ ಅವರ ಕೊಡುಗೆಯನ್ನು ಗಮನಿಸಿ ಪ್ರಶಸ್ತಿಗೆ ಆರಿಸಲಾಗಿದೆ.

ಕೊಂಚಿಟಾ ಕಾರ್ಪಿಯೊ ಮೊರಾಲಿಸ್ (ಫಿಲಿಫೈನ್ಸ್): ಫಿಲಿಫೈನ್ಸ್ ರವರಾದ ಮೊರಾಲಿಸ್ ಅವರನ್ನು ಕಾನೂನಿನಲ್ಲಿ ನಂಬಿಕೆ ಉಳಿಸುವ ಸಲುವಾಗಿ ಮಹತ್ವದ ಪಾತ್ರವಹಿಸಿದ್ದ ಸಲುವಾಗಿ ಪುರಸ್ಕಾರಕ್ಕೆ ಆಯ್ಕೆಮಾಡಲಾಗಿದೆ.

ದೋಪೆಟ್ ಧುವಾಪಾ (ಇಂಡೋನೇಷಿಯಾ): ಇಂಡೋನೇಷಿಯಾದ ಝಕತ್ ನಲ್ಲಿ ಪರಿವರ್ತನೆಯ ಪರಿಣಾಮವನ್ನು ವಿಸ್ತರಿಸಿದಕ್ಕಾಗಿ ಪರಿಗಣಿಸಲಾಗಿದೆ.

ವೈಂಟಿಯೀನ್ ರೆಸ್ಕ್ಯೂ ಸಂಸ್ಥೆ(ಲಾವೋಸ್): ಸ್ವಯಂ ಪ್ರೇರೆಪಣೆಯಿಂದ ಅಪಾಯದಲ್ಲಿರುವ ಜೀವಗಳ ರಕ್ಷಣೆ ಮಾಡಿದ ಶ್ಲಾಘನೀಯ ಸೇವೆಗಾಗಿ ಈ ಸಂಸ್ಥೆಯನ್ನು ಆಯ್ಕೆಮಾಡಲಾಗಿದೆ.

ಓವರ್ಸೀಸ್ ಕೋ ಆಪರೇಷನ್ ಸ್ವಯಂ ಸೇವಾ ತಂಡ (ಜಪಾನ್): ವಿಶ್ವ ನಿರ್ಮಾಣಕ್ಕಾಗಿ ಸಂಸ್ಥೆ ನೀಡಿರುವ ಗಣನೀಯ ಸೇವೆಯನ್ನು ಗುರುತಿಸಿ ಪ್ರಶಸ್ತಿಗೆ ಗುರುತಿಸಲಾಗಿದೆ.

ರೇಮನ್ ಮ್ಯಾಗ್ಸೆಸೆ ಪ್ರಶಸ್ತಿಯ ಬಗ್ಗೆ:

  • ರೇಮನ್ ಮ್ಯಾಗ್ಸೆಸ್ಸೆ ಪ್ರಶಸ್ತಿಯನ್ನು 1957 ರಲ್ಲಿ ಸ್ಥಾಪನೆ ಮಾಡಲಾಯಿತು. ಇದನ್ನು ಏಷ್ಯಾ ಖಂಡದ ನೊಬೆಲ್ ಪ್ರಶಸ್ತಿಯೆಂದು ಪರಿಗಣಿಸಲಾಗುತ್ತದೆ.
  • ಫಿಲಿಪ್ಪೀನ್ಸ್ನ ಮೂರನೇ ಅಧ್ಯಕ್ಷರಾದ ರೇಮನ್ ಮ್ಯಾಗ್ಸೆಸೆ ರವರು ವಾಯು ದುರಂತದಲ್ಲಿ ಮರಣ ಹೊಂದಿದರ ಸ್ಮರಣಾರ್ಥ ಈ ಪ್ರಶಸ್ತಿಯನ್ನು ಸ್ಥಾಪಿಸಲಾಗಿದೆ.
  • ಪ್ರಶಸ್ತಿಯನ್ನು ವಾರ್ಷಿಕವಾಗಿ ಏಷ್ಯಾ ಪ್ರದೇಶದಲ್ಲಿ ಪರಹಿತ ಚಿಂತನೆ ಮತ್ತು ಪರೋಪಕಾರಿ ಸೇವೆ ಮಾಡಿದ ವ್ಯಕ್ತಿಗಳು ಅಥವಾ ಸಂಸ್ಥೆಗೆ ನೀಡಲಾಗುತ್ತಿದೆ.

ಮ್ಯಾಗ್ಸೆಸೆ ಪಡೆದ ಇತರ ಕನ್ನಡಿಗರು : ಕರ್ನಾಟಕದ ಹರೀಶ್ ಹಂದೆ (2011), ಆರ್ ಕೆ ಲಕ್ಷ್ಮಣ (1984), ಕೆ ವಿ ಸುಬ್ಬಣ್ಣ (1991) ಅವರಿಗೂ ಮ್ಯಾಗ್ಸೆಸೆ ಪ್ರಶಸ್ತಿ ಸಂದಿದೆ.

ಯಶಸ್ವಿಯಾಗಿ ವಿಶ್ವ ಪರ್ಯಟನೆ ಮುಗಿಸಿದ “ಸೋಲಾರ್ ಇಂಪಲ್ಸ್-2” ಸೌರಚಾಲಿತ ವಿಮಾನ

ವಿಶ್ವದ ಮೊದಲ ಸೌರಚಾಲಿತ ವಿಮಾನ ಸೋಲಾರ್ ಇಂಪಲ್ಸ್-2 ಅಬುದಾಬಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯುವ ಮೂಲಕ ವಿಶ್ವಪರ್ಯಟನೆಯನ್ನು ಯಶಸ್ವಿಯಾಗಿ ಮುಗಿಸಿದೆ. 2015ರ ಮಾರ್ಚ್ ತಿಂಗಳಲ್ಲಿ ಪ್ರಯಾಣ ಆರಂಭಿಸಿದ ವಿಮಾನ ಒಂದು ವರ್ಷಕ್ಕೂ ಅಧಿಕ ಕಾಲ ನಾಲ್ಕು ಖಂಡಗಳು, ಮೂರು ಸಮುದ್ರಗಳು ಹಾಗೂ ಎರಡು ಸಾಗರಗಳನ್ನು ದಾಟಿ ಸುಮಾರು 26744 ಕಿ.ಮೀ ಯಶಸ್ವಿ ಹಾರಾಟ ನಡೆಸಿದೆ.

ಸೋಲಾರ್ ಇಂಪಲ್ಸ್-2 ಬಗ್ಗೆ:

  • ಸೋಲಾರ್ ಇಂಪಲ್ಸ್-2 ಸ್ವಿಸ್ ನ ಸೌರಚಾಲಿತ ವಿಮಾನ ಯೋಜನೆ. ಸಾಂಪ್ರದಾಯಿಕ ಇಂಧನ ಬಳಸದೇ ಕೇವಲ ಸೌರಶಕ್ತಿಯನ್ನು ಬಳಸಿ ಹಗಲು ರಾತ್ರಿ ಚಾಲನೆ ಮಾಡಬಹುದಾದ ವಿಶ್ವದ ಮೊದಲ ವಿಮಾನ. ನವೀಕರಿಸಬಹುದಾದ ಇಂಧನಗಳ ಬಳಕೆಯನ್ನು ಪ್ರೋತ್ಸಾಹಿಸುವುದು ಇದರ ಉದ್ದೇಶ.
  • 2011 ರಲ್ಲಿ ಈ ವಿಮಾನದ ನಿರ್ಮಾಣ ಆರಂಭಗೊಂಡಿತ್ತು. 2013 ರಲ್ಲಿ ಅಮೆರಿಕಾದಲ್ಲಿ ಮೊದಲ ಬಾರಿಗೆ ಪರೀಕ್ಷಾರ್ಥ ಪ್ರಯೋಗವನ್ನು ಯಶಸ್ವಿಯಾಗಿ ಕೈಗೊಂಡಿತ್ತು.
  • ಏಕ ಆಸನದ ವ್ಯವಸ್ಥೆಯಿರುವ ಈ ವಿಮಾನವನ್ನು ಕಾರ್ಬನ್ ಫೈಬರ್ ನಿಂದ ಅಭಿವೃದ್ದಿಪಡಿಸಲಾಗಿದೆ. ಇದರ ರೆಕ್ಕೆಯ ವಿಸ್ತೀರ್ಣ 72 ಮೀಟರ್ ಇದ್ದು, 2300 ಕೆ.ಜಿ ತೂಕವಿದೆ. ಕೇವಲ ಸೌರಶಕ್ತಿಯನ್ನು ಬಳಸಿ ಹಾರಾಟ ಮಾಡುವುದರಿಂದ ಯಾವುದೇ ಪರಿಸರ ಮಾಲಿನ್ಯಕಾರಗಳನ್ನು ಹೊರಹಾಕುವುದಿಲ್ಲ. ಸೌರಶಕ್ತಿಯ ಸೃಜನೆಗಾಗಿ ವಿಮಾನದ ರೆಕ್ಕೆಯಲ್ಲಿ 17,248 ಸೌರ ಕೋಶಗಳನ್ನು ಅಳವಡಿಸಲಾಗಿದ್ದು, ಈ ಕೋಶಗಳು ವಿಮಾನ ಕಾರ್ಯನಿರ್ವಹಿಸಲು ಬೇಕಾಗುವ ಸೌರಶಕ್ತಿಯನ್ನು ಒದಗಿಸಲಿದೆ.
  • 17 ಹಂತಗಳಲ್ಲಿ ಸೋಲಾರ್‌ ಇಂಪಲ್ಸ್‌ ಪ್ರಪಂಚ ಪರ್ಯಟನೆ ಮಾಡಿರುವ ಸೋಲಾರ್ ಇಂಪಲ್ಸ್ 558 ಗಂಟೆಗಳ ಕಾಲ ಹಾರಾಟ ಮಾಡಿದೆ.
  • ಬರ್ಟ್ರಾಂಡ್‌ ಪಿಕಾರ್ಡ್‌್ (58) ಮತ್ತು ಆಂಡ್ರೆ ಬೋರ್ಶ್‌ಬಗ್‌ (63) ಅವರು ಸರದಿಯ ಮೇಲೆ ಸೋಲಾರ್‌ ಇಂಪಲ್ಸ್‌ ಚಲಾಯಿಸಿದ ಇಬ್ಬರು ಪೈಲಟ್‌ಗಳು
  • ಬೋರ್ಶ್‌ಬರ್ಗ್ ಅವರು ಒಂದೇ ಬಾರಿಗೆ ಅತೀ ಹೆಚ್ಚು ಅಂದರೆ, 118 ಗಂಟೆ ಸೌರ ವಿಮಾನ ಚಲಾಯಿಸಿದ್ದಾರೆ (ಜಪಾನ್‌ನ ನಗೊಯಾದಿಂದ ಅಮೆರಿಕದ ಹವಾಯಿ ಮಾರ್ಗ) ಈ ಅವಧಿಯಲ್ಲಿ ಅವರು 8,924 ಕಿ.ಮೀ ಕ್ರಮಿಸಿದ್ದಾರೆ.

ಪೆಲೆಟ್ ಗನ್ ಬಳಕೆ: ಟಿ ವಿ ಎಸ್ ಎನ್ ಪ್ರಸಾದ್ ಸಮಿತಿ ರಚಿಸಿದ ಕೇಂದ್ರ ಸರ್ಕಾರ

ಪೆಲೆಟ್ ಗನ್ ಗಳ ಬದಲಾಗಿ ಅಪಾಯಕಾರಿ ಅಲ್ಲದ ಪರ್ಯಾಯ ಗನ್ ಗಳ ಬಳಕೆ ಸಾದ್ಯತೆಯನ್ನು ಕಂಡುಕೊಳ್ಳುವ ಸಲುವಾಗಿ ಕೇಂದ್ರ ಗೃಹ ಸಚಿವಾಲಯ ಏಳು ಜನ ತಜ್ಞರ ಸಮಿತಿಯನ್ನು ರಚಿಸಿದೆ.  ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿ ಟಿ.ವಿ.ಎಸ್‌.ಎನ್‌. ಪ್ರಸಾದ್‌ ಅವರು ತಂಡದ ಮುಖ್ಯಸ್ಥರಾಗಿದ್ದಾರೆ. ಸಮಿತಿಯು ಎರಡು ತಿಂಗಳೊಳಗೆ ತನ್ನ ವರದಿಯನ್ನು ಸಲ್ಲಿಸಲಿದೆ.

ಸಮಿತಿಯಲ್ಲಿರುವ ಇತರೆ ಸದಸ್ಯರು:

  • ಶ್ರೀನಗರ ಸಿಆರ್‌ಪಿಎಫ್‌ನ ಇನ್‌ಸ್ಪೆಕ್ಟರ್‌ ಜನರಲ್‌ ಅತುಲ್‌ ಕಾರ್ವಾಲ್‌, ಜಮ್ಮು ಮತ್ತು ಕಾಶ್ಮೀರದ ಬಿಎಸ್‌ಎಫ್ ಇನ್‌ಸ್ಪೆಕ್ಟರ್‌ ಜನರಲ್‌ ರಾಜೀವ್‌ ಕೃಷ್ಣ, ಭಾರತೀಯ ಶಸ್ತ್ರಾಸ್ತ್ರ ಕಾರ್ಖಾನೆ ಮಂಡಳಿಯ ತುಷಾರ್ ತ್ರಿಪಾಠಿ, ಚಂಡಿಗಡದ ಮದ್ದುಗುಂಡು ಸಂಶೋಧನಾ ಪ್ರಯೋಗಾಲಯದ ಮಂಜೀತ್ ಸಿಂಗ್‌ ಮತ್ತು ದೆಹಲಿ ಐಐಟಿಯ ನರೇಶ್‌ ಭಟ್ನಾಗರ್‌ ತಂಡದಲ್ಲಿರುವ ಇತರ ಸದಸ್ಯರು.

ಹಿನ್ನೆಲೆ:

  • ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಉದ್ಬಸಿರುವ ಹಿಂಸಾಚಾರದಲ್ಲಿ ಜನರನ್ನು ನಿಯಂತ್ರಿಸಲು ಪೆಲೆಟ್ ಗನ್ ಬಳಕೆ ತೀವ್ರ ವಿವಾದಕ್ಕೆ ಎಡೆಮಾಡಿಕೊಟ್ಟಿತ್ತು. ಈ ಹಿನ್ನಲೆಯಲ್ಲಿ ಪೆಲೆಟ್ ಗನ್ ಗಳ ಬದಲಾಗಿ ಪರ್ಯಾಯ ವ್ಯವಸ್ಥೆ ಕಂಡುಕೊಳ್ಳುವ ಸಲುವಾಗಿ ತಜ್ಞರ ಸಮಿತಿಯನ್ನು ರಚಿಸುವುದಾಗಿ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ರವರು ಲೋಕಸಭೆಗೆ ತಿಳಿಸಿದ್ದರು.

ಪೆಲೆಟ್ ಗನ್ ಬಗ್ಗೆ (Pellet Guns):

  • ಪೆಲೆಟ್ ಗನ್ ಗಳನ್ನು ಮಾರಕವಲ್ಲದ ಆಯುಧಗಳೆಂದ ವರ್ಗೀಕರಸಲಾಗಿದೆ. ಪೆಲೆಟ್ ಗನ್ ಗಳಲ್ಲಿ ಸೀಸದ ಬಾಲ್ಸ್ ಗಳನ್ನು ಬಳಸಲಾಗುತ್ತದೆ. ಒಮ್ಮೆ ಇವುಗಳನ್ನು ಬಳಸಿದಾಗ ಭಾರಿ ಸಂಖ್ಯೆಯಲ್ಲಿ ಹರಡಿಕೊಳ್ಳುತ್ತವೆ.
  • ಪೆಲೆಟ್ ಗನ್ ಬಳಕೆಯಿಂದ ವ್ಯಕ್ತಿಯ ಮೇಲೆ ಮಾರಣಾಂತಿಕ ಪರಿಣಾಮ ಬೀರುವುದಿಲ್ಲ. ಆದರೆ ಚರ್ಮದ ಅಂಗಾಶವನ್ನು ಭೇದಿಸುವುದರಿಂದ ಗಂಭೀರವಾಗಿ ಗಾಯಗಳಾಗಬಹುದು.
  • ಈ ಗನ್ ಗಳನ್ನು ಮೊದಲ ಬಾರಿಗೆ 2010 ರಲ್ಲಿ ಕಾಶ್ಮೀರದಲ್ಲಿ ಹಿಂಸೆಯನ್ನು ಹತ್ತಿಕ್ಕುವ ಸಲುವಾಗಿ ಬಳಸಲಾಗಿತ್ತು. ಇದರ ಬಳಕೆಯಿಂದ ಕೆಲವರು ದೃಷ್ಟಿಹೀನರಾಗಿದ್ದರು, ಅಲ್ಲದೇ ಗಂಭೀರವಾಗಿ ಗಾಯಗೊಂಡದ ಹಿನ್ನಲೆಯಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು.

ಜಮ್ಮು ಮತ್ತು ಕಾಶ್ಮೀರದಲ್ಲಿ ರೂ 1601 ಕೋಟಿ “ಹಿಮಾಯತ್” ಯೋಜನೆಗೆ ಕೇಂದ್ರ ಒಪ್ಪಿಗೆ

ಕೇಂದ್ರ ಸರ್ಕಾರ ಜಮ್ಮು ಮತ್ತು ಕಾಶ್ಮೀರದಲ್ಲಿ ಸುಮಾರು 1600 ಕೋಟಿಯ “ಹಿಮಾಯತ್” ಯೋಜನೆಯಡಿ ಕೌಶಲ್ಯ ಅಭಿವೃದ್ದಿ ಕಾರ್ಯಕ್ರಮಕ್ಕೆ ಒಪ್ಪಿಗೆ ನೀಡಿದೆ. ಈ ಕಾರ್ಯಕ್ರಮದಡಿ ಜಮ್ಮು ಮತ್ತು ಕಾಶ್ಮೀರದ ಗ್ರಾಮೀಣ ಹಾಗೂ ನಗರ ಯುವಕರಿಗೆ ಮುಂದಿನ ಮೂರು ವರ್ಷಗಳ ಕಾಲ ಕೌಶಲ್ಯ ಮತ್ತು ವೃತ್ತಿಪರ ಶಿಕ್ಷಣ ತರಭೇತಿಯನ್ನು ನೀಡಲಾಗುವುದು. ಈ ಯೋಜನೆಯಡಿ ನೋಂದಾಯಿಸುವ ಕೊಳ್ಳುವ ಯುವಕರಿಗೆ ಆರು ತಿಂಗಳು, ಒಂಬತ್ತು ತಿಂಗಳು ಮತ್ತು ಒಂದು ವರ್ಷದ ಉದ್ಯೋಗ ಆಧಾರಿತ ಕೋರ್ಸಗಳ ತರಬೇತಿಯನ್ನು ನೀಡಲಾಗುವುದು. ತರಭೇತಿಯನ್ನು ರಾಜ್ಯದ ಒಳಗೆ ಮತ್ತು ಹೊರರಾಜ್ಯದಲ್ಲೂ ನೀಡಲಾಗುವುದು.

  • ಹಿಮಾಯತ್ ಯೋಜನೆಯು ಕೌಶಲ್ಯ ಅಭಿವೃದ್ದಿ ಮೂಲಕ ಉದ್ಯೋಗ ಕಲ್ಪಿಸು ಕಾರ್ಯಕ್ರಮ. ಈ ಯೋಜನೆಯಡಿ ಮುಂದಿನ ಐದು ವರ್ಷಗಳಲ್ಲಿ ಜಮ್ಮು ಮತ್ತು ಕಾಶ್ಮೀರದ ಒಂದು ಲಕ್ಷ ಯುವಕರಿಗೆ ಉದ್ಯೋಗ ಕಲ್ಪಿಸುವ ಉದ್ದೇಶವನ್ನು ಹೊಂದಲಾಗಿದೆ.
  • ಈ ಯೋಜನೆಯು ಪ್ರಧಾನ ಮಂತ್ರಿ ಕಚೇರಿಯ ಕೌಶಲ್ಯ ಅಭಿವೃದ್ದಿ ಮತ್ತು ಉದ್ಯೋಗ ಯೋಜನೆಯ ಅಂಗವಾಗಿದೆ.
  • ಜಮ್ಮು ಮತ್ತು ಕಾಶ್ಮೀರದ ಯುವ ಜನತೆಗೆ ಕೌಶಲ್ಯ ಅಭಿವೃದ್ದಿ ಶಿಕ್ಷಣ ನೀಡುವ ಮೂಲಕ ಐಟಿ, ಮಾರಾಟ ಮತ್ತು ಗ್ರಾಹಕರ ಸೇವೆ ಕ್ಷೇತ್ರಗಳಲ್ಲಿ ಉದ್ಯೋಗ ಒದಗಿಸುವುದಾಗಿದೆ.

ಬ್ರೆಜಿಲ್ ಅನ್ನು ದಡಾರ ಮುಕ್ತವೆಂದು ಘೋಷಿಸಿದ ವಿಶ್ವ ಆರೋಗ್ಯ ಸಂಸ್ಥೆ

ವಿಶ್ವ ಆರೋಗ್ಯ ಸಂಸ್ಥೆ ಬ್ರೆಜಿಲ್ ದೇಶವನ್ನು ದಡಾರ (Measles) ಮುಕ್ತ ರಾಷ್ಟ್ರವೆಂದು ಅಧಿಕೃತವಾಗಿ ಘೋಷಿಸಿದೆ. ಕಳೆದ ವರ್ಷ ಅಂದರೆ 2015 ರಲ್ಲಿ ಬ್ರೆಜಿಲ್ ನಲ್ಲಿ ಯಾವುದೇ ದಡಾರ ಪ್ರಕರಣ ಕಂಡು ಬಂದಿರದ ಕಾರಣ ದಡಾರ ಮುಕ್ತವೆಂದು ಘೋಷಿಸಿದೆ. ದಡಾರವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಸಲುವಾಗಿ ಬ್ರೆಜಿಲ್ ನಲ್ಲಿ ಅನೇಕ ವರ್ಷಗಳಿಂದ ಹಲವು ಕಾರ್ಯಕ್ರಮಗಳನ್ನು ರೂಪಿಸಲಾಗಿತ್ತು. ಬ್ರೆಜಿಲ್ ನಲ್ಲಿ ದಡಾರ ನಿವಾರಣೆಗೆ ವಿಶ್ವ ಆರೋಗ್ಯ ಸಂಸ್ಥೆಯೂ ಪಾನ್-ಅಮೆರಿಕಾ ಆರೋಗ್ಯ ಸಂಸ್ಥೆಯೊಂದಿಗೆ ಕೈಜೋಡಿಸಿತ್ತು.

  • ವಿಶ್ವ ಆರೋಗ್ಯ ಸಂಸ್ಥೆ ಮತ್ತು ಪಾನ್-ಅಮೆರಿಕಾ ಆರೋಗ್ಯ ಸಂಸ್ಥೆಯ ಜಂಟಿ ಪ್ರಯತ್ನದಿಂದ ಬ್ರೆಜಿಲ್ ನಲ್ಲಿ 1985 ರಿಂದ 2000 ವರೆಗೆ ಯಾವುದೇ ದಡಾರ ಪ್ರಕರಣಗಳು ಕಂಡುಬಂದಿರಲಿಲ್ಲ. ಆದರೆ 2013 ಬ್ರೆಜಿಲ್ ನ ಈಶಾನ್ಯ ರಾಜ್ಯಗಳಾದ ಪೆರ್ನಂಬುಕೋ ಮತ್ತು ಕೆರಾ ಗಳಲ್ಲಿ ದಡಾರ ಪ್ರಕರಣ ಮರುಕಳಿಸಿತ್ತು.

ದಡಾರ ರೋಗದ ಬಗ್ಗೆ:

  • ದಡಾರ ಕಾಯಿಲೆಯು ಒಂದು ಸಾಂಕ್ರಮಿಕ ರೋಗವಾಗಿದ್ದು, ಗಾಳಿ ಮೂಲಕ ಮೌಖಿಕವಾಗಿ ಅಥವಾ ಜೊಲ್ಲು ಮೂಲಕ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ.
  • ಮಕ್ಕಳಲ್ಲಿ ಹೆಚ್ಚಾಗಿ ಕಂಡು ಬರುವ ದಡಾರ ಕಾಯಿಲೆಯು ಸೀನುವಿಕೆ ಅಥವಾ ಕೆಮ್ಮುವಿಕೆಯಿಂದ ಗಾಳಿ ಮೂಲಕ ಹರಡುತ್ತದೆ.
  • ರೋಗದ ಲಕ್ಷಣಗಳು ಸೋಂಕು ತಗುಲಿದ ಹತ್ತು ದಿನಗಳ ನಂತರ ಚರ್ಮದ ಮೇಲೆ ಕೆಂಪು ಕಲೆಗಳಾಗುವ ಮೂಲಕ ಕಾಣಿಸಿಕೊಳ್ಳುತ್ತವೆ. ರೋಗದ ತೀವ್ರತೆ ಹೆಚ್ಚಾದಗ ನ್ಯೂಮೋನಿಯ, ದೃಷ್ಟಿಹೀನತೆ ಅಥವಾ ಅಪೌಷ್ಠಿಕತೆಯಿಂದ ಸಾವು ಸಹ ಸಂಭವಿಸಬಹುದು. ಸಾಮಾನ್ಯವಾಗಿ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಸಾವಿನ ಪ್ರಮಾಣ ಅತಿ ಹೆಚ್ಚು.
  • ಪ್ರತಿ ವರ್ಷ ಸುಮಾರು 20 ಮಿಲಿಯನ್ ಜನರು ದಡಾರ ರೋಗಕ್ಕೆ ವಿಶ್ವದಾದ್ಯಂತ ತುತ್ತಾಗುತ್ತಿದ್ದಾರೆ. ಅದರಲ್ಲೂ ಏಷ್ಯಾ ಮತ್ತು ಆಫ್ರಿಕಾ ಖಂಡಗಳಲ್ಲಿ ಸಾವು ಪ್ರಕರಣಗಳು ಅತಿ ಹೆಚ್ಚು.