ಮಹದಾಯಿ ಮದ್ಯಂತರ ತೀರ್ಪು: ಕರ್ನಾಟಕದ ಅರ್ಜಿ ತಿರಸ್ಕೃತ

ಮಹದಾಯಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸಲ್ಲಿಸಿದ್ದ ಮದ್ಯಂತರ ಅರ್ಜಿಯನ್ನು ಮಹದಾಯಿ ನ್ಯಾಯಮಂಡಳಿ ತಿರಸ್ಕರಿಸಿದ್ದು, ನ್ಯಾಯಾಲಯದ ತೀರ್ಪಿನಿಂದ ಕರ್ನಾಟಕಕ್ಕೆ ತೀವ್ರ ಹಿನ್ನಡೆಯಾಗಿದೆ. ಕರ್ನಾಟಕ ನಾಲ್ಕು ಜಿಲ್ಲೆಗಳಾದ ಬೆಳಗಾವಿ, ಹುಬ್ಬಳಿ-ಧಾರವಾಡ, ಗದಗ ಮತ್ತು ಬಾಗಲಕೋಟೆ ಜನರಿಗೆ ಕುಡಿಯುವ ನೀರಿನ ದಾಹ ನೀಗಿಸುವ ನಿಟ್ಟಿನಲ್ಲಿ 7.5 ಟಿಎಂಸಿ ನೀರು ನೀಡುವಂತೆ ಮಧ್ಯಂತರ ಆದೇಶ ನೀಡಬೇಕೆಂದು ಸಲ್ಲಿಸಿದ್ದ ರಾಜ್ಯ ಸರ್ಕಾರದ ಅರ್ಜಿಯನ್ನು ಆಲಿಸಿದ ನ್ಯಾ. ಜೆ.ಎಂ.ಪಾಂಚಾಲ್ ನೇತೃತ್ವದ ನ್ಯಾಯಮಂಡಳಿ 7.56 ಟಿಎಂಸಿ ನೀರನ್ನು ನೀಡಲು ಸಾಧ್ಯವಿಲ್ಲವೆಂದು ಹೇಳಿದೆ.

ಏನಿದು ಯೋಜನೆ:

ಮಹದಾಯಿ ನದಿಯಿಂದ 7 ಟಿಎಂಸಿ ನೀರನ್ನು ಏತ ನೀರಾವರಿ ಮೂಲಕ ಕಳಸಾ-ಬಂಡೂರಿ ನಾಲದ ಮುಖಾಂತರ ಮಲಪ್ರಭಾಕ್ಕೆ ಹರಿಸಿ, ರಾಜ್ಯದ ನಾಲ್ಕು ಜಿಲ್ಲೆಗಳ ಜನತೆಗೆ ಕುಡಿಯುವ ನೀರು ಪೂರೈಸುವುದು ಈ ಯೋಜನೆಯ ಪ್ರಮುಖ ಉದ್ದೇಶ. ನೀರನ್ನು ಕಳಸಾ-ಬಂಡೂರಿ ಎಂಬ ಎರಡು ನಾಲೆಗಳ ಮೂಲಕ ಜಲಾಶಯಕ್ಕೆ ಹರಿಸಲು ಯೋಜನೆ ರೂಪಿಸಲಾಗಿದೆ. ಆದ್ದರಿಂದ, ಕಳಸಾ-ಬಂಡೂರಿ ಎಂಬ ಹೆಸರೂ ಇದೆ. ಆದರೆ ಕರ್ನಾಟಕದ ಈ ಯೋಜನೆಗೆ ಗೋವಾ ಸರ್ಕಾರ ವಿರೋಧ ವ್ಯಕ್ತಡಿಸಿ ಕೇಂದ್ರ ಸರ್ಕಾರದ ಮೊರೆ ಹೋಗಿತ್ತು. ಗೋವಾ ಸರ್ಕಾರದ ಆಕ್ಷೇಪಣೆಗೆ ಸ್ಪಂದಿಸಿದ ಕೇಂದ್ರ ಸರ್ಕಾರ ಮಹದಾಯಿ ನ್ಯಾಯಮಂಡಳಿ ರಚಿಸಿತ್ತು.

ಮಹದಾಯಿ ನದಿ:

  • ಮಹದಾಯಿ ನದಿಯು ಬೆಳಗಾವಿ ಜಿಲ್ಲೆ ಭೀಮ್ ಘಡದ ಪಶ್ಚಿಮ ಘಟ್ಟದಲ್ಲಿ ಉಗಮವಾಗುತ್ತದೆ. ಮಹದಾಯಿ ನದಿಯ ಒಟ್ಟು ಉದ್ದ 77 ಕಿ.ಮೀ ಈ ಪೈಕಿ ಕರ್ನಾಟಕದಲ್ಲಿ 29 ಕಿ.ಮೀ ಹಾಗೂ ಗೋವಾದಲ್ಲಿ 52 ಕಿ.ಮೀ ಹರಿಯುತ್ತದೆ. ಕರ್ನಾಟಕದಲ್ಲಿ 2,032 ಚದರ ಕಿ.ಮೀ ಮತ್ತು ಗೋವಾದಲ್ಲಿ 1,580 ಕಿ.ಮೀ ಚದರ ಕಿ.ಮೀ ಮುಖಜಭೂಮಿಯನ್ನು ಹೊಂದಿದೆ. ನಯನ ಮನೋಹರ ದೂದಸಾಗರ ಹಾಗೂ ವರಪೋಹ ಜಲಪಾತ ಮಹದಾಯಿ ನದಿಯಿಂದ ಸೃಷ್ಟಿಯಾಗಿರುವ ಜಲಪಾತಗಳು. ಮಹದಾಯಿ ನದಿಯನ್ನು ಗೋವಾದ ಜೀವನದಿ ಎನ್ನುತ್ತಾರೆ.

ಮಹದಾಯಿ ಯೋಜನೆ ಹಿನ್ನೋಟ:

  • ಮಹದಾಯಿ ಯೋಜನೆಯ ಯೋಚನೆ ಮೊದಲು ಪ್ರಾರಂಭವಾದದ್ದು 1978 ರಲ್ಲಿ. ಅಂದಿನ ಮುಖ್ಯಮಂತ್ರಿಗಳಾಗಿದ್ದ, ಗುಂಡುರಾವ್ ರವರು ಸಮುದ್ರಕ್ಕೆ ಹರಿದು ವ್ಯರ್ಥವಾಗುತ್ತಿರುವ ಮಹದಾಯಿ ನದಿಯ ನೀರನ್ನು ಕುಡಿಯಲು ಬಳಸಲು ಯೋಜನೆ ರೂಪಿಸುವ ಸಲುವಾಗಿ ಎಸ್.ಆರ್.ಬೊಮ್ಮಾಯಿ ರವರ ನೇತ್ರತ್ವದಲ್ಲಿ ಸಮಿತಿ ರಚಿಸಿ ವರದಿ ನೀಡಲು ಸೂಚಿಸಿತ್ತು.
  • ಸಮಿತಿಯು ತನ್ನ ವರದಿಯನ್ನು 1980 ರಲ್ಲಿ ಸಲ್ಲಿಸುವ ಮೂಲಕ ಯೋಜನೆಯನ್ನು ಕೈಗೊಳ್ಳಲು ಸರ್ಕಾರಕ್ಕೆ ಶಿಫಾರಸ್ಸು ಮಾಡಿತ್ತು. ಅದರಂತೆ ಕರ್ನಾಟಕ ಸರ್ಕಾರ 1988 ರಲ್ಲಿ ಯೋಜನೆಗೆ ಹಸಿರು ನಿಶಾನೆ ತೋರಿತ್ತು. ಆದರೆ ಗೋವಾ ಸರ್ಕಾರ ಇದಕ್ಕೆ ವಿರೋಧ ವ್ಯಕ್ತಪಡಿಸಿತ್ತು.
  • ಆದರೆ 1989 ಎಸ್ ಆರ್ ಬೊಮ್ಮಾಯಿ ಮತ್ತು ಅಂದಿನ ಗೋವಾ ಮುಖ್ಯಮಂತ್ರಿ ಪ್ರತಾಪ್ ಸಿಂಗ್ ರಾಣ ಜೊತೆ ನಡೆದ ಮಾತುಕತೆ ಫಲವಾಗಿ ಗೋವಾ ಸರ್ಕಾರ ವಿರೋಧದಿಂದ ಹಿಂದೆ ಸರಿದಿತ್ತು.
  • 2000 ರಲ್ಲಿ ಅರಣ್ಯ ಇಲಾಖೆ ಅನುಮತಿ ಸಿಕ್ಕ ನಂತರ ಕರ್ನಾಟಕ ಸರ್ಕಾರ ಬಂಡೂರಿ ನಾಲಾ ಯೋಜನೆಗೆ 49.20 ಕೋಟಿ ರೂ., ಕಳಸಾ ನಾಲಾ ಯೋಜನೆಗೆ 44.78 ಕೋಟಿ ರೂ. ವೆಚ್ಚ ಮಾಡಲು ಆಡಳಿತಾತ್ಮಕ ಒಪ್ಪಿಗೆ ನೀಡಿತು. 2002 ರಲ್ಲಿ ಕೇಂದ್ರ ಸರ್ಕಾರ ಹಾಗೂ ಕೇಂದ್ರ ಜಲಸಂಪನ್ಮೂಲ ಸಚಿವಾಲಯವು ಅನುಮತಿ ನೀಡಿದವು. ಆದರೆ ಗೋವಾ ಮತ್ತೆ ಯೋಜನೆಗೆ ವಿರೋಧ ವ್ಯಕ್ತಪಡಿಸಿತು.
  • ಗೋವಾ ಸರ್ಕಾರ 2002 ರಲ್ಲಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವ ಮೂಲಕ ಮಹದಾಯಿ ನ್ಯಾಯಮಂಡಳಿ ರಚಿಸುವಂತೆ ಕೇಂದ್ರದ ಮೊರೆ ಹೋಗಿತ್ತು. ಅದರಂತೆ ಕೇಂದ್ರ ಜಲ ಆಯೋಗ ಯೋಜನೆಗೆ ತಡೆ ನೀಡಿತು. ಈ ಮದ್ಯೆ ಉಭಯ ರಾಜ್ಯಗಳ ನಡುವೆ ಮಾತುಕತೆ ನಡೆದರು ಗೋವಾ ತನ್ನ ಪಟ್ಟನ್ನು ಸಡಿಲಿಸಲಿಲ್ಲ.
  • 2006 ರಲ್ಲಿ ಕರ್ನಾಟಕ ಸರ್ಕಾರ ಕಣಕುಂಬಿ ಜಲಾಶಯ ನಿರ್ಮಿಸಲು ಭೂಮಿ ಪೂಜೆಯನ್ನು ನೇರವೆರಿಸಿತು. ಆದರೆ ಇದನ್ನು ಸಹಿಸದ ಗೋವಾ ಸರ್ಕಾರ ಸುಪೀಂ ಕೋರ್ಟ್ ಗೆ ಮೊರೆ ಹೋಗುವ ಮೂಲಕ ತಡೆ ನೀಡಲು ಕೋರಿತು. ಆದರೆ ಸುಪ್ರೀಂ ಕೋರ್ಟ್ ಗೋವಾದ ಮನವಿಯನ್ನು ತಿರಸ್ಕರಿಸಿತು.
  • 2010 ನವೆಂಬರ್ 16 ರಂದು ಮಹದಾಯಿ ನ್ಯಾಯಮಂಡಳಿಯನ್ನು ಕೇಂದ್ರ ಸರ್ಕಾರ ರಚಿಸಿತು. ನ್ಯಾ ಜೆ.ಎಂ.ಪಾಂಚಾಲ್ ನ್ಯಾಯಮಂಡಳಿಯ ಅಧ್ಯಕ್ಷರಾಗಿದ್ದಾರೆ. 2014 ಈ ತಂಡ ಉತ್ತರ ಕರ್ನಾಟಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು. 2016 ಜುಲೈ 27 ರಂದು ತನ್ನ ಮದ್ಯಂತರ ತೀರ್ಪನ್ನು ಪ್ರಕಟಿಸಿದೆ.

ತೀರ್ಪಿನ ಪ್ರಮುಖಾಂಶಗಳನ್ನು ಇಲ್ಲಿ ಓದಬಹುದು

http://m.dailyhunt.in/news/india/kannada/kannada-prabha-epaper-kprabha/mahadaayi-vivaadha-nyaayaadhikaranadha-antima-tirpina-pramukhaamshagalu-newsid-56036484

ಭಾರತದ CSIR ಗೆ ವಿಶ್ವದ 12ನೇ ಅತ್ಯುತ್ತಮ ಸರ್ಕಾರಿ ಸಂಸ್ಥೆ ಸ್ಥಾನ

ಭಾರತದ ವೈಜ್ಞಾನಿಕ ಕೈಗಾರಿಕಾ ಸಂಶೋಧನಾ ಸಂಸ್ಥೆ (Council of Scientific Industrial Research (CSIR)) ವಿಶ್ವದ 12ನೇ ಅತ್ಯುತ್ತಮ ಸರ್ಕಾರಿ ಸಂಸ್ಥೆ ಎಂಬ ಗೌರವಕ್ಕೆ ಪಾತ್ರವಾಗಿದೆ. ಇತ್ತೀಚೆಗೆ ಬಿಡುಗಡೆಗೊಳಿಸಲಾದ ಸಿಮಗೊ (Scimago) ಸಾಂಸ್ಥನಿಕ ಶ್ರೇಣಿಗಳ ವರದಿಯಲ್ಲಿ 746 ಸಂಸ್ಥೆಗಳ ಪೈಕಿ ಸಿಎಸ್ಐಆರ್ 12ನೇ ಸ್ಥಾನವನ್ನು ದಕ್ಕಿಸಿಕೊಂಡಿದೆ. ಸಂಶೋಧನಾ ಕಾರ್ಯಕ್ಷಮತೆ, ನಾವೀನ್ಯತೆ ಹಾಗೂ ಸಾಮಾಜಿಕ ಪರಿಣಾಮ ಸೇರಿದಂತೆ ವಿವಿಧ ಮಾನದಂಡಗಳನ್ನು ಆಧಾರಿಸಿ ವರದಿಯನ್ನು ಸಿದ್ದಪಡಿಸಲಾಗಿದೆ.

  • ಇದೇ ಮೊದಲ ಬಾರಿಗೆ ಸಿಎಸ್ಐಆರ್ 12 ನೇ ಸ್ಥಾನವನ್ನು ಪಡೆದುಕೊಂಡಿದೆ. ಕಳೆದ ಮೂರು ವರ್ಷಗಳಿಂದ ಈ ಸಂಸ್ಥೆ ಸತತವಾಗಿ 14 ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು.
  • ಜಾಗತಿಕ ನೂರು ಸಂಸ್ಥೆಗಳ ಪೈಕಿ ಸ್ಥಾನ ಪಡೆದ ಏಕೈಕ ಭಾರತೀಯ ಸಂಸ್ಥೆ ಸಿಎಸ್ಐಆರ್.

ಪಟ್ಟಿಯಲ್ಲಿರುವ ಟಾಪ್ ಐದು ಸಂಸ್ಥೆಗಳು:

  • ಫ್ರಾನ್ಸ್ ನ ನ್ಯಾಷನಲ್ ಸೆಂಟರ್ ಫಾರ್ ಸೈಂಟಿಫಿಕ್ ರಿಸರ್ಚ್ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದೆ. ಉಳಿದಂತೆ ಚೀನಾದ ಚೀನೀಸ್ ಅಕಾಡೆಮಿ ಆಫ್ ಸೈನ್ಸ್, ಜರ್ಮನಿಯ ಹೆಲ್ಮ್ಹೊಟ್ಜ್ ಅಸೊಸಿಯೇಷನ್ ಅಫ್ ಜರ್ಮನ್ ರಿಸರ್ಚ್ ಸೆಂಟರ್, ಮ್ಯಾಕ್ಸ್ ಪ್ಲಾಂಕ್ ಸೊಸೈಟಿ, ಜರ್ಮನಿ ಮತ್ತು ಸ್ಪೇನ್ ನ ಸ್ಪಾನೀಷ್ ನ್ಯಾಷನಲ್ ರಿಸರ್ಚ್ ಕೌನ್ಸಿಲ್ ಅಗ್ರ ಐದು ಸ್ಥಾನದಲ್ಲಿವೆ.

ಸಿಎಸ್ಐಆರ್ ಬಗ್ಗೆ:

  • ಸಿಎಸ್ಐಆರ್ ಒಂದು ಸ್ವಾಯತ ಸಂಸ್ಥೆಯಾಗಿದ್ದು, ದೇಶದ ಅತಿ ದೊಡ್ಡ ಸಂಶೋಧನಾ ಮತ್ತು ಅಭಿವೃದ್ದಿ ಸಂಸ್ಥೆ. ಇದನ್ನು 1942 ರಲ್ಲಿ ಸ್ಥಾಪಿಸಲಾಗಿದೆ.
  • ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದಡಿ ಆರ್ಥಿಕ ನೆರವಿನಿಂದ ಕಾರ್ಯನಿರ್ವಹಿಸುವ ಸಿಎಸ್ಐಆರ್ ಏರೋಸ್ಪೇಸ್ ಎಂಜನಿಯರಿಂಗ್, ಸ್ಟ್ರಕ್ಚರಲ್ ಎಂಜನಿಯರಿಂಗ್, ಮೆಟಲರ್ಜಿ, ಆಹಾರ, ಪೆಟ್ರೋಲಿಯಂ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಂಶೋಧನೆ ಮತ್ತು ಅಭಿವೃದ್ದಿಯಲ್ಲಿ ತೊಡಗಿಸಿಕೊಂಡಿದೆ.

“ಹೈಬ್ರಿಡ್ ಸೋರ್ಗಮ್ (Hybrid Sorghum)” ನ ಪಿತಾಮಹ ನೀಲಂರಾಜು ಗಂಗಾ ಪ್ರಸಾದ ರಾವ್ ನಿಧನ

ಪ್ರಖ್ಯಾತ ಕೃಷಿ ವಿಜ್ಞಾನಿ ನೀಲಂರಾಜು ಗಂಗಾ ಪ್ರಸಾದ್ ರಾವ್ ರವರು ಹೈದ್ರಾಬಾದ್ ನ ತೆಲಂಗಣದಲ್ಲಿ ನಿಧನರಾದರು. 89 ವರ್ಷ ವಯಸ್ಸಿನ ರಾವ್ ರವರು ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. “ಹೈಬ್ರಿಡ್ ಸೋರ್ಗಮ್” ನ ಪಿತಾಮಹ ಎಂದೇ ಖ್ಯಾತಿ ಹೊಂದಿದ್ದ ಇವರು, ಬೆಳೆಶಾಸ್ತ್ರ (Agronomy) ಮತ್ತು ಒಣ ಭೂಮಿ ಬೇಸಾಯದಲ್ಲೂ ಹಲವಾರು ಸಂಶೋಧನೆ ಮಾಡುವ ಮೂಲಕ ಕೃಷಿ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದರು.

  • ರಾವ್ ರವರು ಮೂಲತಃ ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯವರು. ಬಾಪಟ್ಲ ಕೃಷಿ ಕಾಲೇಜಿನಲ್ಲಿ ಕೃಷಿ ಅಭ್ಯಾಸವನ್ನು ಮಾಡಿದ್ದರು.
  • ದೇಶದಲ್ಲಿ ಸೋರ್ಗಮ್ ಅಭಿವೃದ್ದಿಗೆ ರಾವ್ ಅವರು ನೀಡಿರುವ ಕೊಡುಗೆ ಅಪಾರವಾದದ್ದು, ಆಗಾಗಿ ಅವರನ್ನು “ಹೈಬ್ರಿಡ್ ಸೋರ್ಗಮ್” ನ ಪಿತಾಮಹ ಎನ್ನಲಾಗುತ್ತಿದೆ.
  • ಪ್ರಸಿದ್ದ ಸೋರ್ಗಮ್ ತಳಿಗಳಾದ CSH1, CSH5, CSH9 ರಾವ್ ರವರ ಸಂಶೋಧನೆಯ ಫಲಗಳು. ಅಷ್ಟೇ ಅಲ್ಲದೇ ಒಣ ಭೂಮಿ ಬೆಳಗಳಾದ ಹತ್ತಿ, ತೊಗರಿ ಅಭಿವೃದ್ದಿಯಲ್ಲೂ ಶ್ರಮವಹಿಸಿದ್ದರು.
  • ರಾವ್ ರವರು ಪುಡ್ ಅಂಡ್ ಅಗ್ರಿಕಲ್ಚರಲ್ ಅರ್ಗನೇಷನ್ (FAO) ಸೇರಿದಂತೆ, ಇಂಡಿಯನ್ ಅಗ್ರಿಕಲ್ಚರ್ ರಿಸರ್ಚ್ ಇನ್ಸ್ಟಿಟ್ಯೂಟ್, ICRISAT ಸಂಸ್ಥೆಗಳಲ್ಲಿ ವಿವಿಧ ಹುದ್ದೆಗಳನ್ನು ನಿಭಾಯಿಸಿದ್ದರು.
  • ಸುಮಾರು 200 ಕ್ಕೂ ಹೆಚ್ಚು ರಿಸರ್ಚ್ ಪಬ್ಲಿಕೇಷನ್ ಗಳನ್ನು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಜರ್ನಲ್ ಗಳಲ್ಲಿ ಇವರು ಪ್ರಕಟಿಸಿದ್ದರು.
  • ಕೃಷಿ ಕ್ಷೇತ್ರಕ್ಕೆ ಅಗಾಧ ಸೇವೆ ಸಲ್ಲಿಸಿದ್ದ ರಾವ್ ರವರಿಗೆ ಎಸ್ಎಸ್ ಭಟ್ನಗಾರ್ ಪ್ರಶಸ್ತಿ, ಆತ್ಮ ಗೌರವ ಪ್ರಶಸ್ತಿ, ಆಂದ್ರಪ್ರದೇಶದ ಪ್ರಖ್ಯಾತ ಕೃಷಿ ವಿಜ್ಞಾನಿ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಸಂದಿವೆ.