ಆಂಧ್ರಪ್ರದೇಶದಲ್ಲಿ ಹೊಸ NIT ಸ್ಥಾಪನೆ ಮಸೂದೆಗೆ ಲೋಕಸಭೆಯಲ್ಲಿ ಅಂಗೀಕಾರ

ರಾಷ್ಟ್ರೀಯ ತಾಂತ್ರಿಕ, ವೈಜ್ಞಾನಿಕ, ಶೈಕ್ಷಣಿಕ ಮತ್ತು ಸಂಶೋಧನಾ ಸಂಸ್ಥೆ (ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಸೈನ್ಸ್, ಎಜುಕೇಷನ್ ಮತ್ತು ರಿಸರ್ಚ್) (NITSER) ಮಸೂದೆ-2016 ತಿದ್ದುಪಡಿಗೆ ಗೆ ಲೋಕ ಸಭೆಯಲ್ಲಿ ಅಂಗೀಕಾರ ನೀಡಲಾಗಿದೆ. ಈ ಮಸೂದೆಯನ್ನು ಆಂಧ್ರಪ್ರದೇಶದಲ್ಲಿ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯನ್ನು NITSER ಕಾಯಿದೆ, 2007ರ ಅಡಿಯಲ್ಲಿ ರಾಷ್ಟ್ರೀಯ ಪ್ರಾಮುಖ್ಯತ ಸಂಸ್ಥೆಯನ್ನಾಗಿ ಸ್ಥಾಪಿಸುವ ಉದ್ದೇಶದೊಂದಿಗೆ ತರಲಾಗಿದೆ.

  • ಕೇಂದ್ರ ಸರ್ಕಾರ ಪ್ರಸ್ತಕ ಸಾಲಿನಲ್ಲಿ ರೂ 40 ಕೋಟಿಯನ್ನು ಈ NITಯನ್ನು ಸ್ಥಾಪಿಸುವ ಉದ್ದೇಶಕ್ಕಾಗಿ ನೀಡಲಿದೆ
  • ಆಂಧ್ರಪ್ರದೇಶ ಮರುವಿಂಗಡಣಾ ಕಾಯಿದೆ-2014 ರ ನಿಬಂಧನೆಗಳಂತೆ ಸ್ಥಾಪಿಸಲಾಗುವುದು.
  • ಪ್ರಸ್ತುತ ಕಾರ್ಯನಿರ್ವಹಿಸುತ್ತಿದ್ದ NIT ಆಂಧ್ರಪ್ರದೇಶ ವಿಭಜನೆಗೊಂಡ ನಂತರ ತೆಲಂಗಣಕ್ಕೆ ಸೇರ್ಪಡೆಗೊಂಡ ಕಾರಣ ಆಂಧ್ರಪ್ರದೇಶ ಮರುವಿಂಗಡಣಾ ಕಾಯಿದೆ-2014ರಡಿ ಆಂಧ್ರಪ್ರದೇಶಕ್ಕೆ ಹೊಸ NITಯನ್ನು ಕಲ್ಪಿಸಲಾಗಿತ್ತು.

ಸೇನಾ ಕ್ರಾಂತಿ ಹಿನ್ನೆಲೆ: ಟರ್ಕಿಯಲ್ಲಿ ಮೂರು ತಿಂಗಳ ಕಾಲ ತುರ್ತು ಪರಿಸ್ಥಿತಿ

ಟರ್ಕಿಯಲ್ಲಿ ಕಳೆದ ವಾರ ನಡೆದ ಸೇನಾ ದಾಳಿಯ ಹಿನ್ನಲೆಯಲ್ಲಿ ಮೂರು ತಿಂಗಳ ಕಾಲ ತುರ್ತು ಪರಿಸ್ಥಿತಿಯನ್ನು ಟರ್ಕಿ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ಡೊಗನ್ ಘೋಷಿಸಿದ್ದಾರೆ. ಹಠತ್ತಾಗಿ ನಡೆದ ಸೇನಾ ದಾಳಿಯನ್ನು ಹತ್ತಿಕ್ಕಿ, ಮತ್ತೆ ಮರುಕಳಿಸಿದಂತೆ ನಿಗಾ ವಹಿಸುವ ಸಲುವಾಗಿ ತುರ್ತು ಪರಿಸ್ಥಿತಿಯನ್ನು ಜಾರಿಗೆ ತರಲಾಗಿದೆ. ತುರ್ತು ಪರಿಸ್ಥಿತಿಯ ಸಲುವಾಗಿ ದೇಶದ ಭದ್ರತಾ ವ್ಯವಸ್ಥೆಯನ್ನು ಹೆಚ್ಚಿಸಲಾಗಿದ್ದು, ಕರ್ಪ್ಯೂ ಮತ್ತು ಬಂಧನ ವಾರೆಂಟ್ ಜಾರಿ ಮಾಡುವ ಅಧಿಕಾರವನ್ನು ಭದ್ರತಾ ಅಧಿಕಾರಿಗಳಿಗೆ ನೀಡಲಾಗಿದೆ.

ಹಿನ್ನೆಲೆ:

  • ಟರ್ಕಿ ಅಧ್ಯಕ್ಷ ರಿಸೆಪ್ ತಯ್ಯಿಪ್ ನೇತೃತ್ವದ ಜಸ್ಟೀಸ್ ಅಂಡ್ ಡೆವೆಲಪ್ ಮೆಂಟ್ ಪಕ್ಷದ ಸರ್ಕಾರವನ್ನು ಕಿತ್ತೊಗೆದು ಸೇನಾಡಳಿತ ಸ್ಥಾಪಿಸುವ ಸಲುವಾಗಿ ಟರ್ಕಿ ಸೇನೆ ಇತ್ತೀಚೆಗೆ ದಾಳಿ ನಡೆಸಿತ್ತು. ಆದರೆ ಸೇನೆಯ ಈ ಪ್ರಯತ್ನ ಯಶಸ್ಸು ಕಾಣದೆ ವಿಫಲವಾಗಿತ್ತು.
  • ಟರ್ಕಿ ಸೇನೆಪಡೆಯ ಗುಂಪೊಂದು “ಪೀಸ್ ಅಟ್ ಹೋಮ್ ಕೌನ್ಸಿಲ್” ಎಂಬ ಹೆಸರಿನಡಿ ಟರ್ಕಿಯ ಪ್ರಮುಖ ನಗರಗಳಾದ ಇಸ್ತಾಂಬುಲ್, ಅಂಕಾರ ಮುಂತಾದ ನಗರಗಳಲ್ಲಿ ದಾಳಿ ಪ್ರಯತ್ನ ನಡೆಸಿತ್ತು.
  • ಪ್ರಸ್ತುತ ಸರ್ಕಾರದಲ್ಲಿ ಜ್ಯಾತ್ಯತೀತತೆ, ಮಾನವ ಹಕ್ಕುಗಳ, ಪ್ರಜಾಪ್ರಭುತ್ವ ಮತ್ತು ಟರ್ಕಿ ಅಂತರರಾಷ್ಟ್ರೀಯ ಖ್ಯಾತಿ ಕುಗ್ಗುತಿದೆ ಎಂಬ ಕಾರಣದ ಹಿನ್ನಲೆಯಲ್ಲಿ ದಾಳಿಯನ್ನು ನಡೆಸಲಾಗಿತ್ತು. ಆದರೆ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ಡೊಗನ್ ಬೆಂಬಲಕ್ಕೆ ನಿಂತ ಸಾರ್ವಜನಿಕರು ಬೀದಿಗಿಳಿದು ಸೇನಾದಂಗೆಯನ್ನು ಹತ್ತಿಕ್ಕುವಲ್ಲಿ ಯಶಸ್ವಿಯಾಗಿದ್ದರು.
  • ಅಮೆರಿಕದಲ್ಲಿ ನೆಲೆಸಿರುವ ಧರ್ಮಗುರು ಫೆತುಲ್ಲಾ ಗುಲೆನ್ ಅವರ ಬೆಂಬಲಿಗರು ಈ ದಂಗೆಯ ಹಿಂದಿದ್ದಾರೆ ಎಂದು ಎರ್ಡೊಗನ್ ಆರೋಪಿಸಿದ್ದಾರೆ. ಆದರೆ ಫೆತುಲ್ಲಾ ಗುಲೆನ್ ಈ ಹೇಳಿಕೆಯನ್ನು ಅಲ್ಲಗೆಳೆದಿದ್ದಾರೆ.
  • 1987ರಲ್ಲಿ ಕುರ್ದಿಶ್‌ ಉಗ್ರರ ವಿರುದ್ಧದ ಹೋರಾಟಕ್ಕಾಗಿ ದೇಶದ ಆಗ್ನೇಯ ಪ್ರಾಂತ್ಯಗಳಲ್ಲಿ ಟರ್ಕಿ ತುರ್ತು ಪರಿಸ್ಥಿತಿ ಘೋಷಿಸಿತ್ತು. 2002ರಲ್ಲಿ ಅದನ್ನು ತೆರವುಗೊಳಿಸಲಾಗಿತ್ತು.

ಫಾರ್ಚೂನ್ ವಿಶ್ವದ ಅಗ್ರ 500 ಕಂಪನಿಗಳ ಪಟ್ಟಿಯಲ್ಲಿ ಭಾರತದ ಏಳು ಕಂಪನಿಗಳು

ಫಾರ್ಚೂನ್‌ ನಿಯತಕಾಲಿಕೆ ಇತ್ತೀಚೆಗೆ ಬಿಡುಗಡೆಗೊಳಿಸಿರುವ 500 ಗರಿಷ್ಠ ವರಮಾನ ಹೊಂದಿರುವ ಕಂಪನಿಗಳ  ಪಟ್ಟಿಯಲ್ಲಿ ಭಾರತದ ಏಳು ಸಂಸ್ಥೆ ಸ್ಥಾನ ಪಡೆದುಕೊಂಡಿವೆ. ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ ಸಂಸ್ಥೆ 161ನೇ ಸ್ಥಾನದಲ್ಲಿದ್ದು, ಪಟ್ಟಿಯಲ್ಲಿರುವ ಭಾರತದ ಸಂಸ್ಥೆಗಳ ಅಗ್ರಸ್ಥಾನದಲ್ಲಿದೆ.

  • ಅಮೆರಿಕಾ ಮೂಲದ ಚಿಲ್ಲರೆ ವಹಿವಾಟು ಸಂಸ್ಥೆ ವಾಲ್ ಮಾರ್ಟ್ ವಾರ್ಷಿಕ 32.29 ಲಕ್ಷ ಕೋಟಿಗಳಷ್ಟು ವರಮಾನದೊಂದಿಗೆ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಕಾಯ್ದುಕೊಂಡಿದೆ.
  • ಚೀನಾದ ಸ್ಟೇಟ್‌ ಗ್ರಿಡ್‌ (₹22.11 ಲಕ್ಷ ಕೋಟಿ) ಮತ್ತು ಚೀನಾ ನ್ಯಾಷನಲ್‌ ಪೆಟ್ರೋಲಿಯಂ (₹20.03 ಲಕ್ಷ ಕೋಟಿ) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿವೆ.
  • ಸಿಂಗಪುರದ ರಾಯಲ್‌ ಡಚ್‌ ಷೆಲ್‌, ಎಕ್ಸಾನ್‌ ಮೊಬಿಲ್‌, ಫೋಕ್ಸ್‌ವ್ಯಾಗನ್‌, ಟೊಯೊಟಾ ಮೋಟಾರ್ಸ್‌, ಆ್ಯಪಲ್‌ ಮತ್ತು ಬಿಪಿ ಸಂಸ್ಥೆಗಳು ಮೊದಲ 10 ಸ್ಥಾನಗಳಲ್ಲಿರುವ ಕಂಪೆನಿಗಳಾಗಿವೆ.
  • ಭಾರತದಿಂದ ಈ ಬಾರಿ ಒಟ್ಟು ಏಳು ಸಂಸ್ಥೆಗಳಲ್ಲಿದ್ದು, ಇದರಲ್ಲಿ ನಾಲ್ಕು ಸರ್ಕಾರಿ ಒಡೆತನಕ್ಕೆ ಸೇರಿದ್ದರೆ, ಇನ್ನುಳಿದ ಮೂರು ಸಂಸ್ಥೆಗಳು ಖಾಸಗಿ ವಲಯದಲ್ಲಿವೆ. ಇಂಡಿಯನ್ ಆಯಿಲ್ ಕಾರ್ಪೋರೇಷನ್ ನಂತರದ ಸ್ಥಾನದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಹಿಂದೂಸ್ತಾನ್ ಪೆಟ್ರೋಲಿಯಂ,ರಿಲಾಯನ್ಸ್ ಇಂಡಸ್ಟ್ರೀಸ್ ಲಿಮೆಟೆಡ್, ಟಾಟಾ ಮೋಟಾರ್ಸ್ ಮತ್ತು ರಾಕೇಶ್ ಎಕ್ಸ್ ಪೋರ್ಟ್ಸ್ ಇವೆ.
  • ‘ನವರತ್ನ’ ಸ್ಥಾನ ಪಡೆದಿರುವ ತೈಲ ಮತ್ತು ನೈಸರ್ಗಿಕ ಅನಿಲ ನಿಗಮವು (ಒಎನ್‌ಜಿಸಿ) ಕಂಪೆನಿಯು ಈ ಬಾರಿ ಫಾರ್ಚೂನ್‌ ಪಟ್ಟಿಯಿಂದ ಹೊರಬಿದ್ದಿದೆ. ಅದರ ಜಾಗವನ್ನು (423ನೇ ಸ್ಥಾನ) ಖಾಸಗಿ ವಲಯದ ಹರಳು ಮತ್ತು ಚಿನ್ನಾಭರಣ ಕಂಪೆನಿ ರಾಜೇಶ್‌ ಎಕ್ಸ್‌ಪೋರ್ಟ್ಸ್‌ ಪಡೆದುಕೊಂಡಿದೆ.

ಭಾರತದ ಮೊದಲ ಮಲ್ಟಿ ಸಿಟಿ ಮ್ಯಾರಥಾನ್ ಗೆ ದೆಹಲಿಯಲ್ಲಿ ಚಾಲನೆ

ದೇಶದ ಮೊದಲ ಮಲ್ಟಿ ಸಿಟಿ ಮ್ಯಾರಥಾನ್ ಓಟಕ್ಕೆ ದೆಹಲಿಯ ಇಂಡಿಯಾ ಗೇಟ್ ಬಳಿ ಚಾಲನೆ ನೀಡಲಾಯಿತು. ಇದೇ ಮೊದಲ ಬಾರಿಗೆ ಮಲ್ಟಿ ಸಿಟಿ ಮ್ಯಾರಥಾನ್ ಅನ್ನು ದೇಶದಲ್ಲಿ ಹಮ್ಮಿಕೊಳ್ಳಲಾಗಿದ್ದು, ಜಗತ್ತಿನ ಪ್ರಮುಖ ಆಟಗಾರರು ಈ ಓಟದಲ್ಲಿ ಪಾಲ್ಗೊಳ್ಳಲಿದ್ದಾರೆ.

  • ಜುಲೈ17 ರಂದು ದೆಹಲಿಯ ಇಂಡಿಯಾ ಗೇಟ್ ಬಳಿ ಚಾಲನೆಗೊಂಡ ಈ ಓಟ ಆಗಸ್ಟ್ 7 ರಂದು ಮುಂಬೈನ ಗೇಟ್ ಆಫ್ ಇಂಡಿಯಾದ ಬಳಿ ಕೊನೆಗೊಳ್ಳಲಿದೆ.
  • ಈ ಓಟದ ಒಟ್ಟು ಉದ್ದ 1480 ಕಿ.ಮೀ ಆಗಿದ್ದು, 6 ರಾಜ್ಯಗಳ ಮೂಲಕ 18 ದಿನ ನಡೆಯಲಿದೆ. ಜಗತ್ತಿನ ಪ್ರಮುಖ ಓಟಗಾರರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ.

ಘಟಂಪುರ ಉಷ್ಣ ವಿದ್ಯುತ್ ಘಟಕ ಸ್ಥಾಪನೆಗೆ ಆರ್ಥಿಕ ವ್ಯವಹಾರಗಳ ಸಚಿವ ಸಂಪುಟ ಒಪ್ಪಿಗೆ

ಉತ್ತರಪ್ರದೇಶದ ಘಟಂಪುರದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಉಷ್ಣ ವಿದ್ಯುತ್ ಘಟಕ ಸ್ಥಾಪನೆಗೆ ಆರ್ಥಿಕ ವ್ಯವಹಾರಗಳ ಸಚಿವ ಸಂಪುಟ ಒಪ್ಪಿಗೆ ನೀಡಿದೆ. 1980 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಹೊಂದಿರುವ ಘಟಕ ಇದಾಗಿದ್ದು, ನೈವೇಲಿ ಉತ್ತರ ಪ್ರದೇಶ ಪವರ್ ಲಿಮಿಟೆಡ್ ಸಹಭಾಗಿತ್ವದಲ್ಲಿ ಈ ಘಟಕವನ್ನು ಸ್ಥಾಪಿಸಲಾಗುವುದು.

  • ಈ ಉದ್ದೇಶಿತ ವಿದ್ಯುತ್ ಘಟಕದ ಅಂದಾಜು ವೆಚ್ಚ ಸುಮಾರು 17,238 ಕೋಟಿ
  • ಈ ಘಟಕದಲ್ಲಿ ಉತ್ಪಾದನೆ ಆಗುವ ವಿದ್ಯುತ್ ಅನ್ನು ಪೂರ್ಣವಾಗಿ ಉತ್ತರಪ್ರದೇಶ ಬಳಸಿಕೊಳ್ಳಲಿದೆ
  • ಈ ಘಟಕಕ್ಕೆ ಬೇಕಾಗುವ ಕಲ್ಲಿದ್ದನ್ನು ಜಾರ್ಖಂಡ್ ನ ಪಚ್ವರ ಕಲ್ಲಿದ್ದಲು ಗಣಿಯಿಂದ ಸರಬರಾಜು ಮಾಡಲಾಗುವುದು.

“ಗೋರಖ್ ಪುರ”ದಲ್ಲಿ ನೂತನ AIIMS ಸ್ಥಾಪನೆಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ

ಉತ್ತರ ಪ್ರದೇಶದ ಗೋರಖ್ ಪುರದಲ್ಲಿ ನೂತನ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (AIIMS) ಸ್ಥಾಪನೆಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಪ್ರಧಾನ ಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆಯಡಿ ಈ ನೂತನ ಸಂಸ್ಥೆಯನ್ನು ಸ್ಥಾಪಿಸಲಿದ್ದು, ದೇಶದಲ್ಲಿರುವ ಆರೋಗ್ಯ ಸೇವೆ ಸೌಲಭ್ಯದಲ್ಲಿ ಅಸಮತೋಲನೆಯನ್ನು ಹೋಗಲಾಡಿಸುವುದರ ಜೊತೆಗೆ ಉತ್ತಮ ಗುಣಮಟ್ಟದ ವೈದ್ಯಕೀಯ ಶಿಕ್ಷಣವನ್ನು ನೀಡುವ ಗುರಿಯನ್ನು ಹೊಂದಲಾಗಿದೆ.

  • ಈ ಉದ್ದೇಶಿತ ಆಸ್ಪತ್ರೆಯು 750 ಹಾಸಿಗೆ ಸಾಮರ್ಥ್ಯವನ್ನು ಹೊಂದಲಿದ್ದು, ತುರ್ತು ಸೇವೆ, AYUSH ಚಿಕಿತ್ಸೆ, ಸೂಪರ್ ಸ್ಪೆಷಾಲಿಟ್ ಬೆಡ್ಸ್ ಅಂತಹ ಸೇವೆಗಳನ್ನು ನೀಡಲಿದೆ. ಇದರ ಜೊತೆಗೆ ಸಭಾಂಗಣ, ವಸತಿ ಸೌಲಭ್ಯ ಹಾಗೂ ಹಾಸ್ಟೆಲ್ ಅನ್ನು ಹೊಂದಿರಲಿದೆ.
  • ಈ ಉದ್ದೇಶಿತ ಆಸ್ಪತ್ರೆಯ ಅಂದಾಜು ವೆಚ್ಚ 1011 ಕೋಟಿ.
  • ಪ್ರಧಾನ ಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆಯಡಿ ಈಗಾಗಲೇ ಭೂಪಾಲ್, ಭುಬನೇಶ್ವರ, ಜೋದ್ ಪುರ, ರಾಯ್ ಪುರ, ಪಾಟ್ನ ಮತ್ತು ರಿಷಿಕೇಶ್ ನಲ್ಲಿ ಸ್ಥಾಪಿಸಲಾಗಿದೆ. ರಾಯ್ ಬರೇಲಿಯಲ್ಲಿ ನಿರ್ಮಾಣ ಹಂತದಲ್ಲಿದೆ. ಇದಲ್ಲದೆ ಮಹರಾಷ್ಡ್ರದ ನಾಗಪುರ, ಪಶ್ಚಿಮ ಬಂಗಾಳದ ಕಲ್ಯಾಣಿ ಹಾಗೂ ಆಂಧ್ರಪ್ರದೇಶದ ಗುಂಟೂರು ಬಳಿಯ ಮಂಗಳಗಿರಿಯಲ್ಲಿ ನೂತನ AIIMS ಗಳನ್ನು 2015 ರಲ್ಲಿ ಮಂಜೂರು ಮಾಡಲಾಗಿದೆ.

ಬೆಂಗಳೂರಿನಲ್ಲಿ ಡಾ. ಅಂಬೇಡ್ಕರ್ ಸ್ಕೂಲ್ ಆಫ್ ಎಕಾನಮಿಕ್ಸ್ ಶಿಕ್ಷಣ ಸಂಸ್ಥೆ ಸ್ಥಾಪನೆಗೆ ರಾಒಪ್ಪಿಗೆ

ಬೆಂಗಳೂರಿನಲ್ಲಿ ಡಾ. ಅಂಬೇಡ್ಕರ್ ಸ್ಕೂಲ್ ಆಫ್ ಎಕಾನಮಿಕ್ಸ್ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಲು ರಾಜ್ಯ ಸರ್ಕಾರ ಒಪ್ಪಿಗೆ ನೀಡಿದ್ದು, ಮುಂದಿನ ಶೈಕ್ಷಣಿಕ ವರ್ಷದಲ್ಲಿ ಸ್ಥಾಪನೆಯಾಗಲಿದೆ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಹೇಳಿದ್ದಾರೆ. ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ನ ಉಪಾಧ್ಯಕ್ಷರಾದ ಎಸ್.ವಿ.ರಂಗನಾಥ್ ನೇತೃತ್ವದ 8 ಮಂದಿ ಸದಸ್ಯರ ಸಮಿತಿಯನ್ನು ಈಗಾಗಲೇ ಈ ಸಂಬಂಧ ರಚಿಸಿದ್ದು, ಸಮಿತಿಯು 15 ದಿನದೊಳಗೆ ಶಿಫಾರಸ್ಸು ಮಾಡಲಿದೆ. ಶಿಫಾರಸ್ಸಿನ ಆಧಾರದ ಮೇರೆಗೆ ಯೋಜನೆಯನ್ನು ರೂಪಿಸಲಾಗುವುದು.

  • ಡಾ.ಬಿ.ಆರ್.ಅಂಬೇಡ್ಕರ್ ಸ್ಕೂಲ್ ಆಫ್ ಇಕನಾಮಿಕ್ಸ್‌ನ್ನು ವಿಶ್ವದಲ್ಲಿಯೇ ಉತ್ಕೃಷ್ಟ ಗುಣಮಟ್ಟದ ಶಿಕ್ಷಣ ಸಂಸ್ಥೆಯಾಗಿ ರೂಪಿಸಲಾಗುವುದು.
  • ಇದೊಂದು ಸ್ವಾಯತ್ತ ಸಂಸ್ಥೆಯಾಗಿ ಕಾರ್ಯನಿರ್ವಹಿಸಲಿದೆ.
  • ಈ ಸಂಸ್ಥೆಗೆ ಬೇಕಾಗುವ ಆರ್ಥಿಕ ಸಹಕಾರವನ್ನು ಸಮಾಜ ಕಲ್ಯಾಣ ಇಲಾಖೆ, ಬೆಂಗಳೂರು ವಿಶ್ವವಿದ್ಯಾನಿಲಯ ಸೇರಿದಂತೆ ವಿವಿಧ ಇಲಾಖೆಗಳಿಂದ ಪಡೆಯಲಾಗುವುದು.