UIDAI ನೂತನ ಸಿಇಓ ಆಗಿ ಅಜಯ್ ನಾಗಭೂಷಣ್ ನೇಮಕ

ಹಿರಿಯ ಐಎಎಸ್ ಅಧಿಕಾರಿ ಅಜಯ್ ನಾಗಭೂಷಣ್ ರವರನ್ನು ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ (Unique Identification Authority of India)ದ ನೂತನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯಾಗಿ ನೇಮಕ ಮಾಡಲಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ನೇಮಕಾತಿ ಸಮಿತಿ ಇವರ ನೇಮಕಾತಿಯನ್ನು ಅನುಮೋದಿಸಿದೆ.

  • ಅಜಯ್ ನಾಗಭೂಷಣ್ ರವರು 1984 ಬ್ಯಾಚ್ ನ ಮಹಾರಾಷ್ಟ್ರ ಕ್ಯಾಡ್ರೆಯ ಐಎಎಸ್ ಅಧಿಕಾರಿ. ಈ ಹಿಂದೆ ಇವರು ವಿಶಿಷ್ಟ ಗುರುತಿನ ಪ್ರಾಧಿಕಾರದ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು.

ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರದ ಬಗ್ಗೆ:

  • ಇದೊಂದು ಶಾಸನಬದ್ದ ಸಂಸ್ಥೆಯಾಗಿದ್ದು, 12 ಅಂಕಿಯ ಆಧಾರ್ ಗುರುತಿನ ಚೀಟಿ ನೀಡುವ ನೊಡಲ್ ಸಂಸ್ಥೆಯಾಗಿದೆ.
  • ಈ ಪ್ರಾಧಿಕಾರವನ್ನು ಹಿಂದಿನ ಯುಪಿಎ ಸರ್ಕಾರ 2009 ರಲ್ಲಿ ಸ್ಥಾಪಿಸಿದ್ದು, ಸಾಪ್ಟ್ವೇರ್ ಸಂಸ್ಥೆ ಇನ್ಪೋಸಿಸ್ ನ ಮಾಜಿ ಸಿಇಓ ಆದ ನಂದನ್ ನೀಲಖೇಣಿ ರವರು ಈ ಪ್ರಾಧಿಕಾರದ ಮೊದಲ ಸಿಇಓ ಆಗಿ 2009 ರಿಂದ 2014 ರವರೆಗೆ ಕಾರ್ಯನಿರ್ವಹಿಸಿದ್ದರು.
  • ಆಧಾರ್ ಕಾಯಿದೆ-(ಹಣಕಾಸು ಮತ್ತು ಇತರೆ ಅನುದಾನಗಳು, ಲಾಭಗಳು ಮತ್ತು ಸೇವೆಗಳು ನಿರ್ದೇಶಿತ ರವಾನೆ)2016 ರಡಿಯಲ್ಲಿ ಈ ಪ್ರಾಧಿಕಾರಕ್ಕೆ ಶಾಸನ ಬದ್ದ ಸ್ಥಾನಮಾನವನ್ನು ನೀಡಲಾಗಿದೆ.

ಭಾರತ-ಬಾಂಗ್ಲ ನಡುವಿನ ಪೆಟ್ರೊಪೋಲ್ ಚೆಕ್ ಪೋಸ್ಟ್ ಉದ್ಘಾಟನೆ

ಭಾರತ ಮತ್ತು ಬಾಂಗ್ಲದೇಶ ನಡುವೆ ಸಂಪರ್ಕ ಕಲ್ಪಿಸುವ ಮಹತ್ವದ ಪೆಟ್ರೊಪೊಲ್ ಚೆಕ್ ಪೋಸ್ಟ್ ಅನ್ನು ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಬಾಂಗ್ಲ ಪ್ರಧಾನಿ ಶೇಖ್ ಹಸೀನಾ ರವರು ವಿಡಿಯೋ ಕಾನ್ಪರೆನ್ಸ್ ಮೂಲಕ ಉದ್ಘಾಟಿಸಿದರು. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರವರು ಸಹ ಈ ವೇಳೆ ಹಾಜರಿದ್ದರು.

  • ಪೆಟ್ರೊಪೊಲ್ ಚೆಕ್ ಪೋಸ್ಟ್ ಪಶ್ಚಿಮ ಬಂಗಾಳದ 24 ಪರ್ಗಣ ಜಿಲ್ಲೆಯಲ್ಲಿದೆ. ಭಾರತ ಮತ್ತು ಬಾಂಗ್ಲದೇಶದ ನಡುವೆ ಸಂಪರ್ಕ ಕಲ್ಪಿಸುವ ಮೂಲಕ ಉಭಯ ದೇಶಗಳ ನಡುವೆ ವ್ಯಾಪಾರ ವ್ಯವಹಾರಗಳಿಂದ ಪ್ರಮುಖ ಸ್ಥಳ ಎನಿಸಿದೆ. ಈ ಚೆಕ್ ಪೋಸ್ಟ್ ಉದ್ಘಾಟನೆಯಿಂದಾಗಿ ಎರಡು ದೇಶಗಳ ಮದ್ಯೆ ಆರ್ಥಿಕ ಬಾಂದ್ಯವದ ಜೊತೆಗೆ ಸ್ನೇಹ ಸೌಹರ್ದತೆಯು ವೃದ್ದಿಸಲಿದೆ.
  • ಅಗರ್ತಲಾ-ಅಖಾರ ಚೆಕ್ ಪೋಸ್ಟ್ ನಂತರ ಭಾರತ-ಬಾಂಗ್ಲ ನಡುವಿನ ಎರಡನೇ ಚೆಕ್ ಪೋಸ್ಟ್ ಇದಾಗಿದೆ.
  • ಭಾರತ ಹಾಗೂ ಬಾಂಗ್ಲಾದೇಶದ ಪಾಲಿಗೆ ಪೆಟ್ರೊಪೊಲ್ ಅತ್ಯಂತ ಮಹತ್ವದ ಸ್ಥಳವಾಗಿದೆ. ಸುಮಾರು 50ರಷ್ಟು ವ್ಯಾಪಾರ-ವ್ಯವಹಾರಗಳು ಈ ಭಾಗದಲ್ಲೇ ನಡೆಯುತ್ತವೆ.
  • ಪೆಟ್ರೊಪೊಲ್ ಚೆಕ್ ಪೋಸ್ಟ್ ದಕ್ಷಿಣಾ ಏಷ್ಯಾದಲ್ಲೇ ಅತ್ಯಂತ ದೊಡ್ಡ ಭೂ ಬಂದರು, ಅಲ್ಲದೇ ಏಷ್ಯಾದಲ್ಲೇ ಅತಿ ದೊಡ್ಡ ಲ್ಯಾಂಡ್ ಕಸ್ಟಮ್ ಸ್ಟೇಷನ್ ಆಗಿದೆ. ಸುಮಾರು ರೂ 15000 ಕೋಟಿಕ್ಕಿಂತಲೂ ಹೆಚ್ಚಿನ ವ್ಯಾಪಾರ ವಹಿವಾಟು ಈ ಚೆಕ್ ಪೋಸ್ಟ್ ಮೂಲಕವೇ ನಡೆಯುತ್ತಿದೆ.
  • ಮುಂದಿನ ದಿನಗಳಲ್ಲೀ ಭಾರತ ಹಾಗೂ ಬಾಂಗ್ಲಾ ಗಡಿಯಲ್ಲಿ ಇದೇ ರೀತಿ ಎಂಟು ಚೆಕ್ ಪೋಸ್ಟ್ ನಿರ್ಮಾಣ ಮಾಡಲಾಗುವುದು.

ಸುಸ್ಥಿರ ಅಭಿವೃದ್ದಿ ಸೂಚ್ಯಂಕ(Sustainability Development Index): ಭಾರತಕ್ಕೆ 110 ಸ್ಥಾನ

ಇತ್ತೀಚೆಗೆ ಬಿಡುಗಡೆಗೊಳಿಸಲಾದ ಸುಸ್ಥಿರ ಅಭಿವೃದ್ದಿ ಸೂಚ್ಯಂಕದಲ್ಲಿ 149 ರಾಷ್ಟ್ರಗಳ ಪೈಕಿ ಭಾರತ 110ನೇ ಸ್ಥಾನಗೊಳಿಸಿದೆ. ಈ ಮೂಲಕ ಸುಸ್ಥಿರ ಅಭಿವೃದ್ದಿ ಭಾರತ ತೀರಾ ಹಿಂದಿ ಬಿದ್ದಿದ್ದು, ಸಾಕಷ್ಟು ಪ್ರಗತಿಯನ್ನು ಸಾಗಿಸಬೇಕಿದೆ.

ಸೂಚ್ಯಂಕದಲ್ಲಿರುವ ಟಾಪ್ ಹತ್ತು ರಾಷ್ಟ್ರಗಳು:

  • ಸೂಚ್ಯಂಕದಲ್ಲಿ ಸ್ವೀಡನ್ ಮೊದಲ ಸ್ಥಾನವನ್ನು ಗಿಟ್ಟಿಸಿಕೊಂಡಿದೆ. ಟಾಪ್ ಹತ್ತರಲ್ಲಿರುವ ಇತರೆ ದೇಶಗಳೆಂದರೆ ಡೆನ್ಮಾರ್ಕ್, ನಾರ್ವೆ, ಫಿನ್ ಲ್ಯಾಂಡ್, ಸ್ವಿಟ್ಜರ್ಲ್ಯಾಂಡ್, ಜರ್ಮನಿ, ಆಸ್ಟ್ರೀಯಾ, ನೆದರ್ಲ್ಯಾಂಡ್ಸ್, ಐಸ್ ಲ್ಯಾಂಡ್ ಮತ್ತು ಯು.ಕೆ. ಟಾಪ್ ಟೆನ್ ದೇಶಗಳಲ್ಲಿ ಜಿ-7 ರಾಷ್ಟ್ರಗಳು ಮಾತ್ರವೇ ಕಾಣಿಸಿಕೊಂಡಿವೆ.

ಸೂಚ್ಯಂಕದಲ್ಲಿರುವ ಕೆಳಮಟ್ಟದ ಐದು ರಾಷ್ಟ್ರಗಳು:

  • ಚದ್ ದೇಶ (145), ನೈಜರ್ (146), ಕಾಂಗೋ (147), ಲೈಬೀರಿಯಾ (148) ಮತ್ತು ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್

ಬ್ರಿಕ್ಸ್ ದೇಶಗಳ ಪೈಕಿ:

  • ರಷ್ಯಾ (47), ಚೀನಾ (76) ಮತ್ತು ಭಾರತ (110)

ಭಾರತದ ನೆರೆ ರಾಷ್ಟ್ರಗಳ ಸ್ಥಾನಮಾನ:

  • ಬಾಂಗ್ಲದೇಶ (118), ಮಯನ್ಮಾರ್ (117), ಪಾಕಿಸ್ತಾನ (115) ಮತ್ತು ಆಫ್ಘಾನಿಸ್ತಾನ (139).

ಸುಸ್ಥಿರ ಅಭಿವೃದ್ದಿ ಸೂಚ್ಯಂಕದ ಬಗ್ಗೆ:

  • ಸಸ್ಟೈನೆಬಲ್ ಡೆವೆಲಪ್ಮೆಂಟ್ ಸಲೂಷನ್ಸ್ ನೆಟವರ್ಕ್ ಮತ್ತು ಬರ್ಟೆಲ್ಸಮನ್ ಸ್ಟಿಪ್ ಟಂಗ್ ಸುಸ್ಥಿರ ಅಭಿವೃದ್ದಿ ಸೂಚ್ಯಂಕವನ್ನು ಅಭಿವೃದ್ದಿಪಡಿಸಿದ್ದು, ಸುಸ್ಥಿರ ಅಭಿವೃದ್ದಿ ಗುರಿಗಳನ್ನು ಮುಟ್ಟವಲ್ಲಿ ಯಾವ ರಾಷ್ಟ್ರಗಳು ಎಷ್ಟರೇ ಮಟ್ಟಿಗೆ ಸಫಲವಾಗಿವೆ ಎಂಬ ಫಲಿತಾಂಶವನ್ನು ಹೊರತರುವ ಸಲುವಾಗಿ ಈ ಸೂಚ್ಯಂಕವನ್ನು ಅಭಿವೃದ್ದಿಪಡಿಸಲಾಗಿದೆ.
  • ಜಾಗತಿಕವಾಗಿ ಗುರುತಿಸಲಾಗಿರುವ 17 ಅಂಶಗಳನ್ನು ಆಧರಿಸಿ ಈ ಸೂಚ್ಯಂಕವನ್ನು ತಯಾರಿಸಲಾಗಿದೆ ಅವುಗಳಲ್ಲಿ ಪ್ರಮುಖವುಗಳೆಂದರೆ ಸುಸ್ಥಿರ ಅಭಿವೃದ್ದಿಯಲ್ಲಿ ಆರ್ಥಿಕ ಅಭಿವೃದ್ದಿ, ಸಾಮಾಜಿಕ ಸೇರ್ಪಡೆ, ಪರಿಸರ ಸಂಬಂಧಿ ಸುಸ್ಥಿರತೆ ಹಾಗೂ ಒಳ್ಳೆಯ ಆಡಳಿತ ಸೇರಿವೆ.

ಮೂವರು ಗಣ್ಯರಿಗೆ “ಭಾರತರತ್ನ ಮೈಸೂರು ವಿಶ್ವವಿದ್ಯಾಲಯ ಪ್ರಶಸ್ತಿ

ಮೈಸೂರು ವಿಶ್ವವಿದ್ಯಾನಿಲಯದ ಶತಮಾನೋತ್ಸವ ಸಮಾರಂಭದ ಸಲುವಾಗಿ ಮೂವರು ಗಣ್ಯರಿಗೆ ಭಾರತರತ್ನ ಮೈಸೂರು ವಿಶ್ವವಿದ್ಯಾಲಯ ಪ್ರಶಸ್ತಿಯನ್ನು ನೀಡಲಾಗಿದೆ. 2015ರ ಜುಲೈ 27ರಂದು ಆರಂಭವಾದ ಶತಮಾನೋತ್ಸವ ವರ್ಷಾಚರಣೆಯು ಜುಲೈ 22, 2016 ರಂದು ಮುಗಿದಿದ್ದು, ಈ ಸಮಾರಂಭದಲ್ಲಿ ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು.

ಶತಮಾನೋತ್ಸವ ಪ್ರಶಸ್ತಿ:

  • ‘ಭಾರತರತ್ನ ಪ್ರಶಸ್ತಿ’ ಪುರಸ್ಕ್ರುತರಾದ ಎಂ.ವಿಶ್ವೇಶ್ವರಯ್ಯ, ಡಾ.ಎಸ್. ರಾಧಾಕೃಷ್ಣನ್, ಪ್ರೊ.ಸಿ.ಎನ್.ಆರ್.ರಾವ್ ಹೆಸರಿನಲ್ಲಿ ಅವರ ಹೆಸರಿನಲ್ಲಿ ‘ಭಾರತರತ್ನ ಮೈಸೂರು ವಿಶ್ವವಿದ್ಯಾನಿಲಯ ಶತಮಾನೋತ್ಸವ ಪ್ರಶಸ್ತಿ’ ಸ್ಥಾಪಿಸಲಾಗಿದ್ದು, ಪ್ರಶಸ್ತಿಗಳನ್ನು ಕ್ರಮವಾಗಿ ತಂತ್ರಜ್ಞಾನ, ಸಮಾಜ ವಿಜ್ಞಾನ ಹಾಗೂ ವಿಜ್ಞಾನ ಕ್ಷೇತ್ರದಲ್ಲಿ ಮೂವರಿಗೆ ನೀಡಲಾಗುತ್ತಿದೆ.
  • ಪ್ರಶಸ್ತಿ ತಲಾ ರೂ 5 ಲಕ್ಷ ನಗದು, ಚಿನ್ನದ ಪದಕ, ಪ್ರಶಸ್ತಿಪತ್ರವನ್ನು ಒಳಗೊಂಡಿದೆ.

ಪ್ರಶಸ್ತಿ ಪಡೆದವರು:

  • ಭಾರತರತ್ನ ಸರ್.ಎಂ.ವಿಶ್ವೇಶ್ವರಯ್ಯ ಶತಮಾನೋತ್ಸವ ತಂತ್ರಜ್ಞಾನ ಆವಿಷ್ಕಾರ ಪ್ರಶಸ್ತಿ: ಇಸ್ರೋ ಅಧ್ಯಕ್ಷ ಎಸ್. ಕಿರಣ್ ಕುಮಾರ್ ರವರಿಗೆ ನೀಡಲಾಯಿತು.
  • ಭಾರತರತ್ನ ಡಾ.ಎಸ್.ರಾಧಾಕೃಷ್ಣನ್ ಶತಮಾನೋತ್ಸವ ಸಮಾಜ ವಿಜ್ಞಾನಗಳ ಪ್ರಶಸ್ತಿ: ಪಶ್ಚಿಮ ಬಂಗಾಳದ ಮಾಜಿ ರಾಜ್ಯಪಾಲ ಗೋಪಾಲಕೃಷ್ಣ ಗಾಂಧಿ ರವರಿಗೆ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
  • ಭಾರತರತ್ನ ಪ್ರೊ.ಸಿ.ಎನ್.ಆರ್.ರಾವ್ ಶತಮಾನೋತ್ಸವ ವಿಜ್ಞಾನ ಪ್ರಶಸ್ತಿ: ಪ್ರೊ.ಎಚ್.ಶರತ್ಚಂದ್ರ, ಸೆಂಟರ್ ಫಾರ್ ಹ್ಯೂಮನ್ ಜೆನೆಟಿಕ್ಸ್ನ ಗೌರವ ನಿರ್ದೇಶಕರು ಇವರಿಗೆ ನೀಡಲಾಯಿತು.

ಮೈಸೂರು ವಿವಿ ಬಗ್ಗೆ:

  • ಮೈಸೂರು ವಿಶ್ವವಿದ್ಯಾಲಯ ಕರ್ನಾಟಕದಲ್ಲಿ ಸ್ಥಾಪನೆಯಾದ ಮೊದಲ ವಿಶ್ವವಿದ್ಯಾಲಯ. ಕೃಷ್ಣರಾಜ ಓಡೆಯರ್ ಆಳ್ವಿಕೆಯಲ್ಲಿ ಸ್ಥಾಪಿಸಲಾದ ಈ ವಿವಿಯನ್ನು ಜುಲೈ 27, 1916 ರಲ್ಲಿ ಆರಂಭಿಸಲಾಯಿತು.
  • ಹೆಚ್, ವಿ, ನಂಜುಂಡಯ್ಯ ಇದರ ಮೊದಲ ಉಪ ಕುಲಪತಿ.