ಬೇನಾಮಿ ವಹಿವಾಟು ತಡೆ ಮಸೂದೆ-2015 ತಿದ್ದುಪಡಿಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ

ಬೇನಾಮಿ ವಹಿವಾಟು ತಡೆ ಮಸೂದೆ-2015 ತಿದ್ದುಪಡಿಗಳನ್ನು ತರುವ ಪ್ರಸ್ತಾವಕ್ಕೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಈ ತಿದ್ದುಪಡಿಗಳ ಮೂಲಕ ಬೇನಾಮಿ ವಹಿವಾಟು ನಿಷೇಧ ಕಾಯಿದೆ-1988 ಅನ್ನು ಕಾನೂನು ಮತ್ತು ಆಡಳಿತಾತ್ಮಕವಾಗಿ ಬಲಪಡಿಸುವ ಉದ್ದೇಶವನ್ನು ಮಸೂದೆ ಹೊಂದಿದೆ.

  • ಮಸೂದೆಯು ಬೇನಾಮಿ ವಹಿವಾಟು ವ್ಯಾಖ್ಯಾನಕ್ಕೆ ತಿದ್ದುಪಡಿ ತರುವ ಮೂಲಕ ಕಾನೂನು ವ್ಯಾಪ್ತಿಯನ್ನು ವಿಸ್ತಾರಗೊಳಿಸಲಿದೆ.
  • ಬೇನಾಮಿ ವಹಿವಾಟು ನಡೆಸುವವರಿಗೆ ನಿರ್ದಿಷ್ಟ ಶಿಕ್ಷೆಯನ್ನು ವಿಧಿಸುವ ಅವಕಾಶ ಮಸೂದೆಯಲ್ಲಿ ಇರಲಿದೆ.
  • ಬೇನಾಮಿ ವಹಿವಾಟನ್ನು ವಿಚಾರಣೆ ನಡೆಸುವ ಸಲುವಾಗಿ ತೀರ್ಪು ಪ್ರಾಧಿಕಾರ ಮತ್ತು ಮೇಲ್ಮನವಿ ನ್ಯಾಯಮಂಡಳಿ ಸ್ಥಾಪಿಸುವ ಉದ್ದೇಶವನ್ನು ಹೊಂದಿದೆ.
  • ಮಸೂದೆಯಡಿ ಬೇನಾಮಿ ಆಸ್ತಿಗಳನ್ನು ವಿವರಗಳನ್ನು ನೀಡಿದವರಿಗೆ ರಕ್ಷಣೆ ದೊರೆಯಲಿದೆ.

ಏನಿದು ಬೇನಾಮಿ ವಹಿವಾಟು?

ಬೇನಾಮಿ ವಹಿವಾಟು ಎಂದರೆ ನಿಜವಾದ ಫಲಾನುಭವಿ ಬದಲಿಗೆ ಬೇರೊಬ್ಬರ ಹೆಸರಿನಲ್ಲಿ ಆಸ್ತಿಪಾಸ್ತಿ ಖರೀದಿಸುವುದ ಮತ್ತು ವಹಿವಾಟು ನಡೆಸುವುದಕ್ಕೆ ಬೇನಾಮಿ ವಹಿವಾಟು ಎನ್ನಲಾಗುತ್ತದೆ.

ಪುದುಚೇರಿಯಲ್ಲಿ ತಾಯಿ ಹಾಲು ಎಟಿಎಮ್ “ಅಮುಧಮ್ ತಾಯಿಪ್ಪಾಲ್ ಮಲ್ಯಂ”ಗೆ ಚಾಲನೆ

ಪುದುಚೇರಿಯ ಜವಾಹರಲಾಲ್ ಇನ್ಸ್ಟಿಟ್ಯೂಟ್ ಆಫ್ ಪೋಸ್ಟ್ ಗ್ರಾಜ್ಯುಯೇಟ್ ಮೆಡಿಕಲ್ ಎಜ್ಯುಕೇಶನ್ ಆಂಡ್ ರಿಸರ್ಚ್ ಸೆಂಟರ್ (ಜೇಸ್ಮೆರ್)ನಲ್ಲಿ ತಾಯಿ ಹಾಲು ಎಟಿಎಮ್ ಗೆ ಪುದುಚೇರಿಯಲ್ಲಿ ಚಾಲನೆ ನೀಡಲಾಗಿದೆ. ವಿಶಿಷ್ಟವೆನಿಸಿರುವ ಈ ಎಟಿಎಮ್ ಗೆ “ಅಮುಧಮ್ ತಾಯಿಪ್ಪಾಲ್ ಮಲ್ಯಂ” ಎಂದು ಹೆಸರಿಡಲಾಗಿದೆ.

  • ಈ ಸಂಸ್ಥೆಯಲ್ಲಿ ಹುಟ್ಟುವ ಅವಧಿಪೂರ್ವ ಮಕ್ಕಳನ್ನು ರಕ್ಷಿಸುವ ಸಲುವಾಗಿ ಈ ಎಟಿಎಲ್ ಅನ್ನು ಸ್ಥಾಪಿಸಲಾಗಿದೆ.
  • ಕೇವಲ ತಾಯಿ ದೊರೆಕಿಸುವುದಲ್ಲದೇ ಸರಿಯಾದ ರೀತಿಯಲ್ಲಿ ಮೊಲೆಹಾಲುಣಿಸುವ ವಿಧಾನವನ್ನು ತಾಯಂದಿರಿಗೆ ಸಲಹೆ ನೀಡಲಾಗುವುದು.
  • ಜೇಸ್ಮೆರ್ ನಲ್ಲಿ ಪ್ರತಿ ತಿಂಗಳು ಜಿಪ್ಮೇರ್ನಲ್ಲಿ ಹುಟ್ಟುವ 1,500 ಮಕ್ಕಳ ಪೈಕಿ ಕನಿಷ್ಠ ಶೇ. 30ರಷ್ಟು ಶಿಶುಗಳು, ಕಡಿಮೆ ತೂಕ ಹೊಂದಿರುತ್ತವೆ ಅಥವಾ ಅವಧಿಪೂರ್ವವಾಗಿ ಜನಿಸಿರುತ್ತವೆ. ಈ ನವಜಾತ ಶಿಶು ಘಟಕದಲ್ಲಿ ಇಂಥ ಶಿಶುಗಳನ್ನು ಉಳಿಸಬೇಕಾದರೆ ತಾಯಿಯ ಹಾಲು ನೀಡುವುದು ಅತ್ಯಗತ್ಯವಾಗಿರುವುದರಿಂದ ಈ ಎಟಿಎಮ್ ಅನ್ನು ಸ್ಥಾಪಿಸಿರುವುದಾಗಿ ಹೇಳಲಾಗಿದೆ.

‘ಬಾಲ ಕಾರ್ಮಿಕ (ನಿಷೇಧ ಹಾಗೂ ನಿಯಂತ್ರಣ) ತಿದ್ದುಪಡಿ ಮಸೂದೆ, 2012’ಕ್ಕೆ ರಾಜ್ಯಸಭೆ ಅಂಗೀಕಾರ

ಬಾಲ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ತಿದ್ದುಪಡಿ ಮಸೂದೆ, 2012 ಕ್ಕೆ ರಾಜ್ಯಸಭೆಯಲ್ಲಿ ಅಂಗೀಕಾರ ದೊರೆತಿದೆ. ಬಾಲ ಕಾರ್ಮಿಕ (ನಿಷೇಧ ಹಾಗೂ ನಿಯಂತ್ರಣ) ಕಾಯಿದೆ-1986 ತಿದ್ದುಪಡಿ ತಂದು ಬಾಲ ಕಾರ್ಮಿಕ ಪದ್ದತಿಯನ್ನು ಹೋಗಲಾಡಿಸಲು ಕಾನೂನನ್ನು ಮತ್ತಷ್ಟು ಬಲಪಡಿಸುವ ಉದ್ದೇಶವನ್ನು ಈ ಮಸೂದೆಯನ್ನು ಜಾರಿಗೆ ತರಲಾಗಿದೆ. ಈ ಮಸೂದೆ ಅನ್ವಯ ಹದಿನಾಲ್ಕು ವರ್ಷಕ್ಕಿಂತ ಕೆಳಗಿನ ಮಕ್ಕಳನ್ನು ದುಡಿಸಿಕೊಳ್ಳುವುದು ಅಪರಾಧ. ಆದರೆ 14 ವರ್ಷಕ್ಕಿಂತ ಕೆಳಗಿನ ಮಕ್ಕಳು ಶಾಲಾ ಸಮಯದ ನಂತರ ಮತ್ತು ರಜಾ ದಿನಗಳಲ್ಲಿ ಕುಟುಂಬವೇ ನಡೆಸುವ ಉದ್ಯಮಗಳಲ್ಲಿ ಕೆಲಸ ಮಾಡಲು ಈ ಮಸೂದೆ ಅವಕಾಶ ಮಾಡಿಕೊಟ್ಟಿದೆ.

ಮಸೂದೆಯಲ್ಲಿ ಏನಿದೆ?

  • ಮಸೂದೆಯಡಿ 14 ವರ್ಷಕ್ಕಿಂತ ಕೆಳಗಿನ ಮಕ್ಕಳನ್ನು ಕಾರ್ಮಿಕರಾಗಿ ದುಡಿಸುಕೊಳ್ಳುವಂತಿಲ್ಲ, ಆದರೆ ದಿನಗಳಲ್ಲಿ ಕುಟುಂಬವೇ ನಡೆಸುವ ಉದ್ಯಮಗಳಲ್ಲಿ ಕೆಲಸ ಮಾಡಲು ಈ ಮಸೂದೆ ಅವಕಾಶ ಮಾಡಿಕೊಟ್ಟಿದೆ.
  • ಮಸೂದೆಯಲ್ಲಿ ಹೊಸದಾಗಿ ‘ಹದಿಹರೆಯ’ ಎಂಬ ವರ್ಗವನ್ನು ಸೇರಿಸಲಾಗಿದೆ. ಹದಿಹರೆಯ ಎಂದರೆ 14-18 ವರ್ಷ ವಯಸ್ಸಿನವರು ಎಂದರ್ಥ.
  • ನಿರ್ದಿಷ್ಟ ಪಡಿಸಿದ ಅಪಾಯಕಾರಿ ವೃತ್ತಿಗಳಲ್ಲಿ (ಗಣಿಗಾರಿಕೆ, ಅಪಾಯಕಾರಿ ಪ್ರಕ್ರಿಯೆಗಳು ಇತರೆ) ಹದಿಹರೆಯವರನ್ನು ಬಳಸಿಕೊಳ್ಳುವಂತಿಲ್ಲ.
  • ಬಾಲಕಾರ್ಮಿಕರನ್ನು ನಿಯೋಜಿಸುವ ವ್ಯಕ್ತಿಗಳಿಗೆ ಶಿಕ್ಷೆಯನ್ನು ಹೆಚ್ಚಿಸಲಾಗಿದೆ. ತಿದ್ದುಪಡಿ ಮಸೂದೆಯ ಪ್ರಕಾರ ಕನಿಷ್ಠ 6 ತಿಂಗಳು ಗರಿಷ್ಠ 2 ವರ್ಷ ಜೈಲು ವಿಧಿಸಬಹುದಾಗಿದೆ (ಹಿಂದೆ ಕನಿಷ್ಠ ಮೂರು ತಿಂಗಳು ಹಾಗೂ ಗರಿಷ್ಠ 1 ವರ್ಷ) ಅಥವಾ ರೂ 20,000 ದಿಂದ 50,000 ವರೆಗೂ ದಂಡ (ಹಿಂದೆ ರೂ 10,000 ದಿಂದ 20,000) ಅಥವಾ ಎರಡನ್ನು ವಿಧಿಸಬಹುದಾಗಿದೆ.
  • ಅಪಾಯಕಾರಿ ಪ್ರಕ್ರಿಯೆಗಳಲ್ಲಿ ಹದಿಹರೆಯದವರನ್ನು ದುಡಿಸಿಕೊಂಡರೆ 6 ತಿಂಗಳು ಗರಿಷ್ಠ 2 ವರ್ಷ ಜೈಲು ವಿಧಿಸಬಹುದಾಗಿದೆ (ಹಿಂದೆ ಕನಿಷ್ಠ ಮೂರು ತಿಂಗಳು ಹಾಗೂ ಗರಿಷ್ಠ 1 ವರ್ಷ) ಅಥವಾ ರೂ 20,000 ದಿಂದ 50,000 ವರೆಗೂ ದಂಡ (ಹಿಂದೆ ರೂ 10,000 ದಿಂದ 20,000) ಅಥವಾ ಎರಡನ್ನು ವಿಧಿಸಬಹುದಾಗಿದೆ. ರೂ 20,000 ದಿಂದ 50,000 ವರೆಗೂ ದಂಡ ಅಥವಾ ಎರಡನ್ನು ವಿಧಿಸುವ ಅವಕಾಶ.
  • ಗ್ಯಾರೇಜು ಕೆಲಸ, ಬೀಡಿ ಕಟ್ಟುವುದು, ಕಾರ್ಪೆಟ್ ಹೆಣಿಗೆ, ಕೈಮಗ್ಗ ಮತ್ತು ವಿದ್ಯುತ್ ಮಗ್ಗ, ಗಣಿ ಮುಂತಾದ ಆರೋಗ್ಯಕ್ಕೆ ಹಾನಿ ಮಾಡುವ ಕೆಲಸಕ್ಕೆ 14ರೊಳಗಿನ ಮಕ್ಕಳನ್ನು ನಿಯೋಜಿಸುವಂತಿಲ್ಲ.
  • ಕಾನೂನು ರೂಪುಗೊಂಡರೆ ಅದರ ಅನುಷ್ಠಾನದ ಹೊಣೆಯನ್ನು ಜಿಲ್ಲಾಧಿಕಾರಿಗೆ ವಹಿಸುವ ಸಾಧ್ಯತೆ ಇದೆ ಮತ್ತು ಮಕ್ಕಳನ್ನು ಕೆಲಸಕ್ಕೆ ನಿಯೋಜಿಸಲಾಗಿದೆಯೇ ಎಂಬುದನ್ನು ಆಗಾಗ ತಪಾಸಣೆ ನಡೆಸುವುದಕ್ಕೂ ಅವಕಾಶ ಕಲ್ಪಿಸಲಾಗಿದೆ.

ಕರ್ನಾಟಕ ಬ್ಯಾಂಕ್ ಗೆ ಬ್ಯಾಂಕಿಂಗ್‌ ತಂತ್ರಜ್ಞಾನದ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆ (IDBRT) ಪ್ರಶಸ್ತಿ

ಹೈದ್ರಾಬಾದ್ ನ ಬ್ಯಾಂಕಿಂಗ್ ತಂತ್ರಜ್ಞಾನದ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆ (ಐಡಿಆರ್‌ಬಿಟಿ) ನೀಡುವ “ಸರ್ಟಿಫಿಕೆಟ್ ಆಫ್ ಸ್ಪೆಷಲ್ ಮೆನ್ಷನ್” 2015-16 ನೇ ಸಾಲಿನ ಪ್ರಶಸ್ತಿಗೆ ಕರ್ಣಾಟಕ ಬ್ಯಾಂಕ್‌ ಪಾತ್ರವಾಗಿದೆ. ಸಣ್ಣ ಪ್ರಮಾಣದ ಬ್ಯಾಂಕ್‌ಗಳಲ್ಲಿ ಹಣಕಾಸು ಸೇರ್ಪಡೆಗಾಗಿ ತಂತ್ರಜ್ಞಾನದ ಸಮರ್ಪಕ ಬಳಕೆಗಾಗಿ ಬ್ಯಾಂಕಿಂಗ್‌ ತಂತ್ರಜ್ಞಾನದ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆ ಈ ಪ್ರಶಸ್ತಿಯನ್ನು ನೀಡುತ್ತಿದೆ.

  • ಭಾರತೀಯ ರಿಸರ್ವ್‌ ಬ್ಯಾಂಕ್‌ ಗವರ್ನರ್‌ ರಘುರಾಂ ರಾಜನ್‌ ಅವರು ಹೈದ್ರಾಬಾದ್ ನಲ್ಲಿ ನಡೆದ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಪಿ.ಜಯರಾಂ ಭಟ್‌ ಮತ್ತು ಮಹಾಪ್ರಬಂಧಕ ರಾಘವೇಂದ್ರ ಭಟ್‌ ಎಂ. ಗೆ ನೀಡಿದರು.
  • ‘ತಂತ್ರಜ್ಞಾನ ಅಳವಡಿಕೆಗಾಗಿ ಬ್ಯಾಂಕ್‌ ಇದಕ್ಕೂ ಮೊದಲು ನಾಲ್ಕು ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದಿದೆ’.

ಕರ್ನಾಟಕ ಬ್ಯಾಂಕ್ ಬಗ್ಗೆ:

1924ರಂದು ಮಂಗಳೂರಿನಲ್ಲಿ ಜನ್ಮತಳೆದ ಕರ್ಣಾಟಕ ಬ್ಯಾಂಕ್ ಲಿಮಿಟೆಡ್, ಇಂದು ದೇಶದಲ್ಲೇ ಮುಂಚೂಣಿಯಲ್ಲಿರುವ ಅಭಿವೃದ್ಧಿಶೀಲ ಬ್ಯಾಂಕುಗಳಲ್ಲಿ ಒಂದಾಗಿದೆ. 93 ವರ್ಷ ಹಳೆಯ ಈ ಬ್ಯಾಂಕ್‌ ವಾರ್ಷಿಕ ₹ 1 ಲಕ್ಷ ಕೋಟಿ ವಹಿವಾಟು ನಡೆಸುವ ಹಂತಕ್ಕೆ ಬೆಳೆದಿದ್ದು, ಈ ಹಣಕಾಸು ವರ್ಷದ ಅಂತ್ಯದ ವೇಳೆಗೆ 765 ಶಾಖೆಗಳು, 1,500 ಎಟಿಎಂಗಳು ಹಾಗೂ 100 ಇ–ಲಾಬಿ, ಮಿನಿ ಲಾಬಿಗಳನ್ನು ಹೊಂದುವ ಗುರಿ
ಹಾಕಿಕೊಂಡಿದೆ.

ಬ್ಯಾಂಕಿಂಗ್‌ ತಂತ್ರಜ್ಞಾನದ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆ

ಬ್ಯಾಂಕಿಂಗ್ ತಂತ್ರಜ್ಞಾನದ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆ (ಐಡಿಆರ್‌ಬಿಟಿ) ಅನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 1996 ರಲ್ಲಿ ಸ್ಥಾಪಿಸಿತು. ಇದರ ಕೇಂದ್ರ ಕಚೇರಿ ಹೈದ್ರಾಬಾದ್ ನಲ್ಲಿದೆ. ಪಾವತಿ ವ್ಯವಸ್ಥೆಯಲ್ಲಿ ತಂತ್ರಜ್ಞಾನ ಅಭಿವೃದ್ದಿ ಕುರಿತಾಗಿ RBI ರಚಿಸಿದ್ದ ಸಮಿತಿಯ ಶಿಫಾರಸ್ಸಿನ ಮೇರೆಗೆ ಈ ಸಂಸ್ಥೆಯನ್ನು ಸ್ಥಾಪಿಸಲಾಗಿದೆ.

ರೈಲು ಅಪಘಾತ ತಡೆಗೆ: ತ್ರಿ-ನೇತ್ರ (TRI-NETHRA) ಅಳವಡಿಕೆಗೆ ರೈಲ್ವೆ ಇಲಾಖೆ ಕ್ರಮ

ರೈಲು ಅಪಘಾತಗಳನ್ನು ತಗ್ಗಿಸುವ ಸಲುವಾಗಿ ಭಾರತೀಯ ರೈಲ್ವೇ TRI-NETHRA ತಂತ್ರಜ್ಞಾನವನ್ನು ಅಳವಡಿಸಲು ಮುಂದಾಗಿದೆ. ತ್ರಿ-ನೇತ್ರ ಎಂದರೆ ಟೇರೆನ್ ಇಮೇಜಿಂಗ್ ಫಾರ್ ಡೀಸೆಲ್ ಡ್ರೈವರ್ಸ್-ಇನ್ಪ್ರಾರೆಡ್ ಎನ್ಹೆಸ್ಡ್ ಆಫ್ಟಿಕಲ್ ಅಂಡ್ ರಾಡಾರ್ ಅಸಿಸ್ಟೆಡ್ (Terrain Imaging for Diesel Drivers- Infrared Enhanced Optical and Radar Assisted (Tri-NETRA) system) ಎಂದರ್ಥ. ಈ ವ್ಯವಸ್ಥೆಯನ್ನು ರೈಲು ಇಂಜಿನ್ಗಳ ಮೇಲೆ ಅಳವಡಿಸಲ್ಲಿದ್ದು, ಕ್ಲಿಷ್ಟ ವಾತಾವರಣದಲ್ಲಿ ಲೋಕೊಮೊಟಿವ್ ಪೈಲಟ್ ಗಳ ದೃಷ್ಟಿ ಸಾಮರ್ಥ್ಯವನ್ನು ಹೆಚ್ಚಿಸಲಿದೆ.

ಏನಿದು ವ್ಯವಸ್ಥೆ?

  • ತ್ರಿ-ನೇತ್ರ ಸಾಧನದಲ್ಲಿ ಅತಿಗೆಂಪು ಮತ್ತು ರಾಡಾರ್ ತಂತ್ರಜ್ಞಾನದ ಬಳಕೆ ಮೂಲಕ ಸುಮಾರು 2-3 ಕಿ.ಮೀ ದೂರದಿಂದಲೇ ಸಂಕೇತಗಳನ್ನು ಸಂಗ್ರಹಿಸಿ, ಇಂಜಿನ್ ಒಳಗೆ ಅಳವಡಿಸಲಾದ ಪರದೆಯ ಮೇಲೆ ಭಿತ್ತರಿಸುತ್ತದೆ. ಆ ಮೂಲಕ ರೈಲ್ವೆ ಹಳಿಯ ಮೇಲೆ ಏನಾದರೂ ಭೌತಿಕ ಅಡಚಣೆ ಇದ್ದಲ್ಲಿ ಚಾಲಕನಿಗೆ ಎಚ್ಚರಿಸುವ ಮೂಲಕ ಚಾಲನಿಕನಿಗೆ ಬ್ರೇಕ್ ಹಾಕಲು ಸಾಕಷ್ಟು ಸಮಯ ನೀಡಿ ಅಪಘಾತವಾಗುವುದನ್ನು ತಡೆಯುತ್ತದೆ. ದಟ್ಟ ಮಂಜು ಕವಿದ ವಾತಾವರಣ, ಭಾರಿ ಮಳೆಯಂತಹ ಸಂದರ್ಭದಲ್ಲಿ ಈ ವ್ಯವಸ್ಥೆ ಅತ್ಯಂತ ಉಪಯುಕ್ತವಾಗಲಿದೆ.
  • ತ್ರಿ-ನೇತ್ರ ವ್ಯವಸ್ಥೆಯು ಅಧಿಕ ಸಂವೇದನೆಯ ಅತಿಗೆಂಪು ವಿಡಿಯೋ ಕ್ಯಾಮರಾ, ಹೈ ರೆಸಲ್ಯೂಶನ್ ಆಪ್ಟಿಕಲ್ ವೀಡಿಯೊ ಕ್ಯಾಮರಾ ಮತ್ತು ರೇಡಾರ್ ಆಧಾರಿತ ಭೂಪ್ರದೇಶ ಮ್ಯಾಪಿಂಗ್ ವ್ಯವಸ್ಥೆಯನ್ನು ಒಳಗೊಂಡಿರುತ್ತದೆ. ಯುದ್ದ ವಿಮಾನ ಹಾಗೂ ನೌಕೆಯಲ್ಲಿ ಈಗಾಗಲೇ ಈ ತಂತ್ರಜ್ಞಾನವನ್ನು ಅಳವಡಿಸಲಾಗಿದ್ದು, ಆ ತಂತ್ರಜ್ಞಾನದ ಆಧಾರದ ಮೇಲೆಯೇ ಈ ವ್ಯವಸ್ಥೆಯನ್ನು ಅಭಿವೃದ್ದಿಪಡಿಸಲಾಗಿದೆ.