“ರೋಹಿತ್ ಖಂಡೇಲ್ ವಾಲ್ “ ಮಿಸ್ಟರ್ ವರ್ಲ್ಡ್ ಪ್ರಶಸ್ತಿ ಗೆದ್ದ ಮೊದಲ ಭಾರತೀಯ

ಕಿರುತೆರೆ ನಟ, ರೂಪದರ್ಶಿ ಆಗಿರುವ ರೋಹಿತ್ ಖಂಡೇಲ್ ವಾಲ್ ರವರು ಪ್ರತಿಷ್ಠಿತ ಮಿಸ್ಟರ್ ವರ್ಲ್ಡ್ ಪಟ್ಟ ಪಡೆದು ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಈ ಪ್ರಶಸ್ತಿ ಪಡೆಯುವ ಮೂಲಕ ಇವರು ಈ ಪ್ರಶಸ್ತಿ ಪಡೆದ ಪ್ರಪ್ರಥಮ ಭಾರತೀಯ ಎನಿಸಿದ್ದಾರೆ. ಅಷ್ಟೇ ಅಲ್ಲ ಈ ಪ್ರಶಸ್ತಿ ಪಡೆದ ಮೊಟ್ಟ ಮೊದಲ ಏಷ್ಯನ್ ಸಹ ಎನಿಸಿದ್ದಾರೆ. ಇಂಗ್ಲೆಂಡ್’ನ ಸೌಥ್’ಪೋರ್ಟ್ ನಗರದಲ್ಲಿ ನಡೆದ ಸ್ಪರ್ಧೆಯಲ್ಲಿ ಒಟ್ಟು 48 ದೇಶಗಳ ಸ್ಪರ್ಧಾಳುಗಳ ಪೈಕಿ ಭಾರತದ ರೋಹಿತ್ ದಿ ಬೆಸ್ಟ್ ಎನಿಸಿದ್ದಾರೆ. ಪ್ಯೂರ್ಟೋ ರಿಕೋದ ಫರ್ನಾಡೋ ಅಲ್ಬರ್ಟೋ ಅಲ್ವರೇಝ್ ಸೊಟೊ ಮತ್ತು ಮೆಕ್ಸಿಕೋ ದೇಶದ ಅಲ್ಡೊ ಎಸ್ಪರ ರಮೀರೆಝ್ ಸ್ಪರ್ಧಿಗಳು ಕ್ರಮವಾಗಿ 2 ಮತ್ತು 3ನೇ ಸ್ಥಾನ ಪಡೆದಿದ್ದಾರೆ. ಈ ಪ್ರತಿಷ್ಠಿತ ಪ್ರಶಸ್ತಿ ಪಡೆಯುವ ಮೂಲಕ ರೋಹಿತ್ ರವರು 50,000 ಡಾಲರ್ ಮೊತ್ತವನ್ನು ತಮ್ಮದಾಗಿಸಿಕೊಂಡರು.

  • ರೋಹಿತ್ ಖಂಡೇಲ್ ವಾಲ್ ರವರು ಹೈದ್ರಾಬಾದ್ ನಲ್ಲಿ 1989 ರಂದು ಜನಿಸಿದ್ದಾರೆ.
  • 2015 ರಲ್ಲಿ ಮಿಸ್ಟರ್ ಇಂಡಿಯಾ ಪ್ರಶಸ್ತಿಯನ್ನು ಇವರು ಪಡೆದಿದ್ದರು.
  • ಮಾಡೆಲಿಂಗ್ ಕ್ಷೇತ್ರಕ್ಕೆ ಬರುವ ಮುನ್ನ ಇವರು ಡೆಲ್ ಕಂಪ್ಯೂಟರ್ಸ್ ನಲ್ಲಿ ತಾಂತ್ರಿಕ ಸಹಾಕರಾಗಿ ಸೇವೆ ಸಲ್ಲಿಸಿದ್ದರು.

ಆಸ್ಟ್ರೇಲಿಯಾದ ಪ್ರಧಾನಿಯಾಗಿ ಎರಡನೇ ಬಾರಿಗೆ “ಮಾಲ್ಕಮ್ ಟರ್ನ್ ಬುಲ್” ಅಧಿಕಾರ

ಮಾಲ್ಕಮ್ ಟರ್ನ್ ಬುಲ್ ರವರು ಆಸ್ಟ್ರೇಲಿಯಾದ ಪ್ರಧಾನಿಯಾಗಿ ಎರಡನೇ ಬಾರಿಗೆ ಅಧಿಕಾರ ವಹಿಸಿಕೊಂಡರು. ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಟರ್ನ್ ಬುಲ್ ರವರು ಸರಳ ಮತದಿಂದ ಜಯಶೀಲರಾಗಿದ್ದರು. 150 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಟರ್ನ್ ಬುಲ್ ರವರ ಲಿಬರಲ್/ನ್ಯಾಷನಲ್ ಸಂಯುಕ್ತ ಪಕ್ಷ 76 ಸ್ಥಾನಗಳಿಸಿ ಕೇವಲ ಒಂದು ಸ್ಥಾನದಿಂದ ಮುನ್ನಡೆ ಸಾಧಿಸಿತ್ತು. ಬ್ರಿಟನ್ ರಾಣಿ ಕ್ವೀನ್ ಎಲಿಜಬೆತ್-II ರವರ ಪ್ರತಿನಿಧಿಯಾಗಿರುವ ಗವರ್ನರ್ ಜನರಲ್ ಪೀಟರ್ ಕಸ್ ಗ್ರೋವ್ ಅವರು ಟರ್ನ್ ಬುಲ್ ರವರಿಗೆ ಪ್ರಮಾಣವಚನ ಭೋದಿಸಿದರು.

  • ಮಾಲ್ಕಮ್ ಟರ್ನ್ ಬುಲ್ ರವರು ಆಸ್ಟ್ರೇಲಿಯಾದ 29ನೇ ಪ್ರಧಾನಿ.
  • ರಾಜಕೀಯ ಪ್ರವೇಶಿಸುವ ಮುನ್ನ ಇವರು ವಕೀಲರಾಗಿ,ಪತ್ರಕರ್ತರಾಗಿ ಹಾಗೂ ಹೂಡಿಕೆ ದಾರರಾಗಿದ್ದರು.
  • 2004 ರಲ್ಲಿ ವೆಂಟವರ್ತ್ ನ ಸಂಸತ್ತ್ ಸದಸ್ಯರಾಗಿ ಆಯ್ಕೆಯಾಗುವ ಮೂಲಕ ರಾಜಕೀಯ ಪ್ರವೇಶಿಸಿದರು.
  • ಸೆಪ್ಟೆಂಬರ್ 2015 ರಂದು ಅಂದಿನ ಆಸ್ಟ್ರೇಲಿಯಾದ ಪ್ರಧಾನಿಯಾದ ಟೋನಿ ಅಬ್ಬಾಟ್ ರವರನ್ನು ಸೋಲಿಸುವ ಮೂಲಕ ಮೊದಲ ಬಾರಿಗೆ ಪ್ರಧಾನಿಯಾಗಿ ಆಯ್ಕೆಯಾಗಿದ್ದರು. ಟೋನಿ ಅಬ್ಬಾಟ್ ಸರ್ಕಾರದಲ್ಲಿ ಇವರು ಸಂಪರ್ಕ ಖಾತೆ ಸಚಿವರಾಗಿ ಸೇವೆ ಸಲ್ಲಿಸಿದ್ದರು.

ಸಿನಿಮಾ ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ್ ರವರಿಗೆ ಬಿ. ಸರೋಜದೇವಿ ಪ್ರಶಸ್ತಿ

ಖ್ಯಾತ ಕನ್ನಡ ಸಿನಿಮಾ ನಿರ್ಮಾಪಕಿಯಾದ ಶ್ರೀಮತಿ ಪಾರ್ವತಮ್ಮ ರಾಜ್ ಕುಮಾರ್ ರವರಿಗೆ ಡಾ. ಬಿ. ಸರೋಜದೇವಿ ಪ್ರಶಸ್ತಿಯನ್ನು ನೀಡಲಾಯಿತು.

  • ಭಾರತೀಯ ವಿದ್ಯಾಭವನ ನೀಡುವ ಪದ್ಮಭೂಷಣ ಡಾ.ಬಿ.ಸರೋಜಾದೇವಿ ರಾಷ್ಟ್ರೀಯ ಪ್ರಶಸ್ತಿಯನ್ನು ಶ್ರೀಮತಿ ಪಾರ್ವತಮ್ಮ ರಾಜ್ ಕುಮಾರ್ ಅವರಿಗೆ ಸದಾಶಿವನಗರದ ಅವರ ನಿವಾಸದಲ್ಲಿ ಪ್ರದಾನ ಮಾಡಲಾಯಿತು.
  • ಪ್ರಶಸ್ತಿಯು ಒಂದು ಲಕ್ಷ ರೂ. ನಗದು ಮತ್ತು ಪ್ರಶಸ್ತಿ ಫಲಕ ಒಳಗೊಂಡದೆ.
  • ಈ ಪ್ರಶಸ್ತಿಯನ್ನು ಹಿಂದೆ ಹರಿಣಿದೇವಿ, ವೈಜಯಂತಿ ಮಾಲಾ, ಏಸುದಾಸ್, ಗೀತಪ್ರಿಯ ಕೆ.ಎಸ್.ಎಲ್.ಸ್ವಾಮಿ ಸೇರಿದಂತೆ ಮತ್ತಿತರ ಗಣ್ಯರಿಗೆ ನೀಡಲಾಗಿದೆ.
  • ಪ್ರಶಸ್ತಿ ಪ್ರದಾನ ಸಂದರ್ಭದಲ್ಲಿ ಭಾರತೀಯ ವಿದ್ಯಾಭವನದ ನಿರ್ದೇಶಕ ಎನ್.ಎಚ್.ಸುರೇಶ್, ಅಧ್ಯಕ್ಷ ಎನ್.ರಾಮಾನುಜ, ಬಿ.ಸರೋಜಾದೇವಿ ಮತ್ತಿತರರು ಉಪಸ್ಥಿತರಿದ್ದರು.

ಭಾರತದ ಮಾಜಿ ಚಾಂಪಿಯನ್ ಮೊಹಮ್ಮದ್ ಶಾಹಿದ್ ನಿಧನ

ಭಾರತದ ಖ್ಯಾತ ಹಾಕಿ ಆಟಗಾರರಲ್ಲಿ ಒಬ್ಬರಾದ, ಮಾಜಿ ಒಲಿಂಪಿಯನ್ ಮೊಹಮ್ಮದ್ ಶಾಹಿದ್ ಅವರು ನಿಧನರಾದರು. 56 ವರ್ಷ ವಯಸ್ಸಿನ ಶಾಹಿದ್ ರವರು ಲಿವರ್ ಮತ್ತು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದರು.

  • ಮೊಹಮ್ಮದ್ ಶಾಹಿದ್ ಅವರು 1960, ಏಪ್ರಿಲ್ 14ರಂದು ವಾರಾಣಸಿಯಲ್ಲಿ ಜನಿಸಿದರು. ತಮ್ಮ 19ನೇ ವಯಸ್ಸಿನಲ್ಲಿ ಫ್ರಾನ್ಸ್ ವಿರುದ್ಧ ಕಿರಿಯರ ವಿಶ್ವಕಪ್ (1979)ನಲ್ಲಿ ಆಡಿ ಗಮನ ಸೆಳೆದಿದ್ದರು. ನಂತರದ ದಿನಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿ ಅನೇಕ ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದಾರೆ.
  • 1980ರಲ್ಲಿ ನಡೆದ ಮಾಸ್ಕೊ ಒಲಿಂಪಿಕ್ಸ್​ನಲ್ಲಿ ತಮ್ಮ ಸೊಗಸಾದ ಆಟದಿಂದ ಸ್ವರ್ಣ ಪದಕವನ್ನು ಪಡೆದುಕೊಂಡಿದ್ದರು.
  • 1985-86ನೇ ಸಾಲಿನಲ್ಲಿ ಮೊಹಮ್ಮದ್ ಶಾಹಿದ್ ಭಾರತ ತಂಡದ ನಾಯಕರಾಗಿಯೂ ಯಶಸ್ಸು ಕಂಡಿದ್ದರು.
  • 1981ರಲ್ಲಿ ಅರ್ಜುನ ಪ್ರಶಸ್ತಿ, 1986ರಲ್ಲಿಲ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದರು.
  • ನಿವೃತ್ತಿ ಬಳಿಕ ರೈಲ್ವೇ ಇಲಾಖೆಯಲ್ಲಿ ಕ್ರೀಡಾಧಿಕಾರಿಯಾಗಿ ಅವರು ಕಾರ್ಯನಿರ್ವಹಿಸದ್ದರು.

73ನೇ ಹಿರಿಯರ ರಾಷ್ಟ್ರೀಯ ಸ್ಕ್ವಾಷ್ ದೀಪಿಕಾ ಪಳ್ಳಿಕಲ್ ಕಾರ್ತಿಕ್ ಮತ್ತು ಸೌರವ್ ಘೋಷಲ್ ಗೆ ಪ್ರಶಸ್ತಿ

ದೀಪಿಕಾ ಪಳ್ಳಿಕಲ್ ಕಾರ್ತಿಕ್ ಮತ್ತು ಸೌರವ್ ಘೋಷಲ್ ರವರು 73ನೇ ಹಿರಿಯರ ರಾಷ್ಟ್ರೀಯ ಸ್ಕ್ವಾಷ್ ಚಾಂಪಿಯನ್ ಷಿಪ್ ನ ಮಹಿಳಾ ಮತ್ತು ಪುರುಷರ ವಿಭಾಗದಲ್ಲಿ ಕ್ರಮವಾಗಿ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ. 73ನೇ ಹಿರಿಯರ ರಾಷ್ಟ್ರೀಯ ಸ್ಕ್ವಾಷ್ ಚಾಂಪಿಯನ್ ಷಿಪ್ ಮುಂಬೈ, ಮಹಾರಾಷ್ಟ್ರದಲ್ಲಿ ಜುಲೈ 12 ರಿಂದ 17 ರವರೆಗೆ ನಡೆಯಿತು.

ಮಹಿಳೆಯರ ಸಿಂಗಲ್ಸ್:

  • ಮಹಿಳೆಯರ ಸಿಂಗಲ್ಸ್ ನಲ್ಲಿ 19ನೇ ಶ್ರೇಯಾಂಕದ ದೀಪಿಕಾ ಪಳ್ಳಿಕಲ್ ರವರು ಜೋಶ್ನ ಚಿನ್ನಪ್ಪ ರವರನ್ನು4-11, 11-6, 11-2, 11-8 ರಲ್ಲಿ ಮಣಿಸುವ ಮೂಲಕ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.
  • ದೀಪಿಕಾ ರವರು 2011 ರಲ್ಲಿ ಚಾಂಪಿಯನ್ ಪಟ್ಟವನ್ನು ತಮ್ಮದಾಗಿಸಿಕೊಂಡಿದ್ದರು ಆದರೆ ಕಳೆದ ಐದು ವರ್ಷಗಳಿಂದ ರಾಷ್ಟ್ರೀಯ ಚಾಂಪಿಯನ್ ಷಿಪ್ ನಲ್ಲಿ ಸ್ಪರ್ಧಿಸಿರಲಿಲ್ಲ.

ಪುರುಷರ ಸಿಂಗಲ್ಸ್:

  • ಅಗ್ರ ಶ್ರೇಯಾಂಕಿತ ಸೌರವ್ ಘೋಷಲ್ ರವರು ಪುರುಷರ ಸಿಂಗಲ್ಸ್ ನಲ್ಲಿ ಪ್ರಶಸ್ತಿಯನ್ನು ಪಡೆದುಕೊಂಡರು. ಘೋಷಲ್ ರವರು 11-7, 7-11, 3-11, 11-8, 14-12 ರಲ್ಲಿ ಹರಿಂದರ್ ಪಾಲ್ ಸಿಂಗ್ ರವರನ್ನು ಸೋಲಿಸಿ ವಿಜೇತರಾದರು.
  • ಈ ಪ್ರಶಸ್ತಿಯನ್ನು 11 ನೇ ಬಾರಿ ತಮ್ಮದಾಗಿಸಿಕೊಳ್ಳುವ ಮೂಲಕ ಘೋಷಾಲ್ ರವರು ದಾಖಲೆ ನಿರ್ಮಿಸಿದರು. ಈ ಹಿಂದೆ ಆರ್.ಕೆ.ನರ್ಪತ್ ಸಿಂಗ್ ರವರು 1945-56 ರ ಅವಧಿಯಲ್ಲಿ ಹತ್ತು ಬಾರಿ ಗೆಲ್ಲುವ ಮೂಲಕ ದಾಖಲೆ ನಿರ್ಮಿಸಿದ್ದರು.