ದೇಶದ ಮೊದಲ ಇ-ಕೋರ್ಟ್ ಹೈದ್ರಾಬಾದ್ ನಲ್ಲಿ ಉದ್ಘಾಟನೆ

ದೇಶದ ಪ್ರಪ್ರಥಮ ಇ-ಕೋರ್ಟ್ ಗೆ ಹೈದ್ರಾಬಾದ್ ಹೈಕೋರ್ಟ್ನಲ್ಲಿ ಆರಂಭಿಸಲಾಗಿದೆ. ಹೈದ್ರಾಬಾದ್ ಹೈಕೋರ್ಟ್ ತೆಲಂಗಣ ಮತ್ತು ಆಂಧ್ರಪ್ರದೇಶ ಎರಡು ರಾಜ್ಯಗಳಿಗೂ ತನ್ನ ವ್ಯಾಪ್ತಿಯನ್ನು ಹೊಂದಿದೆ. ಮೂಲಕ ಏಕೀಕೃತ ಅಪರಾಧ ನ್ಯಾಯವ್ಯವಸ್ಥೆ (ಐಸಿಜೆಎಸ್) ಜಾರಿಗೊಳಿಸಿದ ಮೊದಲ ನ್ಯಾಯಾಲಯ ಎಂಬ ಕೀರ್ತಿಗೆ ತೆಲಂಗಾಣ ಮತ್ತು ಆಂಧ್ರಪ್ರದೇಶಗಳು ಪಾತ್ರವಾಗಿವೆ. ಈ ಕೋರ್ಟನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಹಾಗೂ ಇ-ಕೋರ್ಟ್ ಸಮಿತಿಯ ಮುಖ್ಯಸ್ಥರೂ ಆದ ನ್ಯಾ.ಮದನ್ ಬಿ ಲೋಕ್ ರವರು ಉದ್ಘಾಟಿಸಿದರು.

  • ಇ-ಕೋರ್ಟ್ ನಿಂದ ಪ್ರಕರಣಗಳ ತ್ವರಿತ ಗತಿಯಲ್ಲಿ ಬಗೆಹರಿಸಲು ಸಾಧ್ಯವಾಗಲಿದೆ. ಆಗಾಗಿ ದೇಶದಲ್ಲಿ ಬಾಕಿ ಇರುವ ಬಹುಸಂಖ್ಯೆ ಪ್ರಕರಣಗಳನ್ನು ಶೀಘ್ರವಾಗಿ ಇತ್ಯರ್ಥಗೊಳಿಸಬಹುದಾಗಿದೆ.
  • ಕಾಗದ ಮುಕ್ತ ನ್ಯಾಯಾಲಯವಾದ ಇ-ಕೋರ್ಟ್ ನಿಂದ ಸಾರ್ವಜನಿಕರಿಗೆ ಸುಲಭವಾಗಿ ಮತ್ತು ಉತ್ತಮವಾದ ನ್ಯಾಯಾಂಗ ವ್ಯವಸ್ಥೆ ದೊರೆಯಲಿದೆ.
  • ಇದೇ ವೇಳೆ ದೇಶದ ಮೊದಲ ಏಕೀಕೃತ ಅಪರಾಧ ನ್ಯಾಯವ್ಯವಸ್ಥೆ (ಐಸಿಜೆಎಸ್) ಅನ್ನು ಹೈದ್ರಾಬಾದ್ ನ್ಯಾಯಾಲಯ ಸಂಕೀರ್ಣದಲ್ಲಿ ಆರಂಭಿಸಲಾಯಿತು. ಏಕೀಕೃತ ಅಪರಾಧ ನ್ಯಾಯವ್ಯವಸ್ಥೆಯಲ್ಲಿ ಪೊಲೀಸ್ ಠಾಣೆಗಳು, ಜೈಲುಗಳು, ಕಾನೂನು ಕ್ರಮ, ವಿಧಿ ವಿಜ್ಞಾನ ಪ್ರಯೋಗಾಲಯಗಳು ನ್ಯಾಯಾಲಯದ ಜತೆ ಸಂಯೋಜನೆಯೊಂದಿಗೆ ಕಾರ್ಯನಿರ್ವಹಿಸಲಿವೆ.

ಯುನೆಸ್ಕೊ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ 9 ಹೊಸ ತಾಣಗಳ ಸೇರ್ಪಡೆ

ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ (ಯುನೆಸ್ಕೊ) ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ 9 ಹೊಸ ತಾಣಗಳನ್ನು ಸೇರ್ಪಡೆಗೊಳಿಸಿದೆ. ಟರ್ಕಿಯ ಇಸ್ತಾಂಬುಲ್ ನಲ್ಲಿ ನಡೆದ ವಿಶ್ವ ಪಾರಂಪರಿಕ ಸಮಿತಿಯ 40ನೇ ಸಮಾವೇಶದಲ್ಲಿ ಈ ತೀರ್ಮಾನವನ್ನು ಕೈಗೊಳ್ಳಲಾಗಿದೆ. ಆ ಮೂಲಕ ವಿಶ್ವದಾದ್ಯಂತ ಯುನೆಸ್ಕೊ ವಿಶ್ವ ಪಾರಂಪರಿಕ ತಾಣಗಳ ಸಂಖ್ಯೆ 981 ಕ್ಕೇರಿದೆ.

ಯಾವುವು 9 ಹೊಸ ತಾಣಗಳು?

  • ಓಲ್ಡ್ ಸಿಟಿ ಆಫ್ ಅನಿ (Old City of Ani): ಇದು ಟರ್ಕಿಯ ಕಾರ್ಸ್ ಪ್ರಾಂತ್ಯದಲ್ಲಿದ್ದು, 10 ನೇ ಶತಮಾನದಲ್ಲಿ ಅರ್ಮೇನಿಯನ್ ಸಾಮ್ರಾಜ್ಯದ ರಾಜಧಾನಿಯಾಗಿ ಕಾರ್ಯನಿರ್ವಹಿಸಿತ್ತು.
  • ಝೊಜಿಯಾಂಗ್ ಹುಷಾನ್ ಶಿಲಾಕಲೆ ಸಾಂಸ್ಕೃತಿಕ ಭೂದೃಶ್ಯ(Zuojiang Huashan rock art cultural landscape (China): ನೈಋತ್ಯ ಚೀನಾದಲ್ಲಿರುವ ಈ ತಾಣವು 5 ನೇ ಶತಮಾನದಲ್ಲಿ ನಿರ್ಮಿಸಲ್ಪಟ್ಟಿದ್ದು, ಚೀನಾದ ಲುವೋ ಜನರಿಗೆ ಸಂಬಂಧಿಸಿದ ಕೆಲವು ಕುರುಹುಗಳಲ್ಲಿ ಇದು ಒಂದಾಗಿದೆ.
  • ಕ್ವಾನತ್ (Qanat) ಇರಾನ್: ಕ್ವಾನತ್ ಪ್ರದೇಶ ಪುರಾತನ ಕಾಲದ ನೀರಿನ ಕಾಲುವೆಗಳನ್ನು ಹೊಂದಿದ್ದು, ಕಣಿವೆಗಳ ಮಾರ್ಗದಲ್ಲಿ ನೀರನ್ನು ಸಾಗಿಸುವ ಸಲುವಾಗಿ ನಿರ್ಮಿಸಲಾಗಿದೆ. ಆ ಮೂಲಕ ಶುಷ್ಕ ಭೂಮಿಯಲ್ಲಿ ಕೃಷಿ ಜೀವನ ಮತ್ತು ವಸಾಹತುಗಳನ್ನು ಸ್ಥಾಪಿಸಲು ಇದು ಸಹಾಯವಾಗಿದೆ.
  • ನನ್ ಮಡೊಲ್ ನ ಕೃತಕ ದ್ವೀಪಗಳು (Artificial islets of Nan Madol (Micronesia)): ನನ್ ಮಡೊಲ್ ನ ಕೃತಕ ದ್ವೀಪಗಳು ಬಸಾಲ್ಟ್ ಮತ್ತು ಹವಳದಿಂದ ಮಾಡಲಾದ 99 ಕೃತಕ ದ್ವೀಪಗಳಾಗಿವೆ. ಪ್ರಸ್ತುತ ಇಲ್ಲಿ ಕ್ರಿ.ಶ 1200-1500 ಅವಧಿಗೆ ಸೇರಿದ ದೇವಸ್ಥಾನ ಸೇರಿದಂತೆ ಗೋರಿಗಳ ಅವಶೇಷಗಳನ್ನು ಕಾಣಬಹುದಾಗಿದೆ.
  • ಸ್ಟೆಕ್ಕಿ ಸೈಟುಗಳು (Stecci Sites): ಬೋಸ್ನಿಯಾ, ಕೇಂದ್ರ ಮತ್ತು ಪಶ್ಚಿಮ ಮಾಂಟೆನೆಗ್ರೊ, ದಕ್ಷಿಣ ಕ್ರೊಯೇಷಿಯಾ ಮತ್ತು ಪಶ್ಚಿಮ ಸರ್ಬೀಯಾದಲ್ಲಿ ಕಂಡು ಬರುವ ಸ್ಟೆಕ್ಕಿ ಸೈಟುಗಳು ಮಧ್ಯಯುಗಕ್ಕೆ ಸೇರಿದ ಸಮಾಧಿ ಶಿಲೆಗಳಾಗಿದ್ದು, ಇವುಗಳನ್ನು ಸುಣ್ಣದ ಕಲ್ಲುಗಳಿಂದ ಕೆತ್ತಲಾಗಿದೆ. ಅಲಂಕಾರಿಕ ಉದ್ದೇಶಗಳಿಂದ ಇವುಗಳನ್ನು ನಿರ್ಮಿಸಲಾಗಿದೆ.
  • ಪ್ರಾಚೀನ ಫಿಲಿಪ್ಪಿ (ಸ್ಪೇನ್): ಇದು ಗ್ರೀಕ್ ನ ಪುರಾತತ್ವ ತಾಣವಾಗಿದ್ದು, 356 BC ಯಲ್ಲಿ ಮೆಸಿಡೋನಿಯನ್ ಕಿಂಗ್ ಫಿಲಿಪ್ II ಇದನ್ನು ಸ್ಥಾಪಿಸಿದ್ದರು. ಪ್ರಸ್ತುತ ಇದು ಇಂದಿನ ಪೂರ್ವ ಮ್ಯಾಸೆಡೊನಿಯ ಮತ್ತು ಟ್ರೇಸ್ ಪ್ರದೇಶದಲ್ಲಿದೆ.
  • ಅಂಟೆಕ್ವೆರ ಡೊಲ್ಮೆನ್ಸ್ (Antequera Dolmens): ಸ್ಪೇನ್ ನಲ್ಲಿರುವ ಅಂಟೆಕ್ವೆರ ಡೊಲ್ಮೆನ್ಸ್ ಮೂರು ಶಿಲಾಯುಗದ ಸ್ಮಾರಕಗಳನ್ನು ಹಾಗೂ ಎರಡು ನೈಸರ್ಗಿಕ ಪರ್ವತ ರಚನೆಗಳನ್ನು ಒಳಗೊಂಡಿದೆ.
  • ಗೊರ್ಹಮ್ಸ್ ಗುಹೆಗಳ ಸಂಕೀರ್ಣ (Gorhams Cave Complex): ಬ್ರಿಟನ್ ನ ಸಾಗೋರತ್ತರ ಪ್ರದೇಶವಾದ ಗಿಬ್ರಾಲ್ಟರ್ ನಲ್ಲಿ ಕಂಡುಬರುವ ನೈಸರ್ಗಿಕ ಸಮುದ್ರ ಗುಹೆಗಳಾಗಿದ್ದು, ಸಮಾರು 125000 ವರ್ಷಗಳ ಹಿಂದೆ ನಿಯಾಂಡರ್ತಾಲ್ ಇಲ್ಲಿ ಜೀವಿಸಿದ್ದ ಪುರಾವೆ ಇದಾಗಿದೆ.

ನೈಜೀರಿಯಾದ ಪತ್ರಕರ್ತೆ ದಿದಿ ಅಕಿನ್ಯೆಲುರೆಗೆ ಬಿಬಿಸಿ ವರ್ಲ್ಡ್ ನ್ಯೂಸ್ ಕೊಮ್ಲ ಡ್ಯುಮರ್ ಪ್ರಶಸ್ತಿ   

ನೈಜೀರಿಯಾದ ಪತ್ರಕರ್ತೆ ದಿದಿ ಅಕಿನ್ಯೆಲುರೆ (Didi Akinyelure) ರವರನ್ನು ಬಿಬಿಸಿ ಸುದ್ದಿ ಸಂಸ್ಥೆ ಕೊಡಲಾಗುವ ವರ್ಲ್ಡ್ ನ್ಯೂಸ್ ಕೊಮ್ಲ ಡ್ಯುಮರ್ (Komla Dumer) ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ. ದಿದಿ ಅಕಿನ್ಯೆಲುರೆ ರವರು ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಪಡೆಯುತ್ತಿರುವ ಎರಡನೇಯವರು ಆಗಿದ್ದಾರೆ. ಈ ಪ್ರಶಸ್ತಿಯ ಭಾಗವಾಗಿ ಅಕಿನ್ಯೆಲುರೆ ರವರು ಬಿಬಿಸಿ ಯಲ್ಲಿ ಮೂರು ತಿಂಗಳ ಕಾಲ ಉದ್ಯೋಗವನ್ನು ಆರಂಭಿಸಲಿದ್ದಾರೆ, ಆ ಮೂಲಕ ಬಿಬಿಸಿಯಲ್ಲಿ ಕೌಶಲ್ಯ ಮತ್ತು ಅನುಭವವನ್ನು ಪಡೆಯಲು ಅವಕಾಶ ಒದಗಲಿದೆ.

  • ಪ್ರಸ್ತುತ ದಿದಿ ಅಕಿನ್ಯೆಲುರೆ ರವರು ನೈಜೀರಿಯಾದ ಸುದ್ದಿ ಚಾನೆಲ್ ಆದ CNBC ಯಲ್ಲಿ ವ್ಯವಹಾರ ಸಂಬಂಧಿಸಿದ ಸುದ್ದಿ ಬಿತ್ತರಣೆಯ ಪ್ರಮುಖ ಸುದ್ದಿಗಾರ್ತಿ ಆಗಿದ್ದಾರೆ.

ಕೊಮ್ಲ ಡ್ಯುಮರ್ ಪ್ರಶಸ್ತಿ

  • ಈ ಪ್ರಶಸ್ತಿಯನ್ನು ಘಾನದ ಪತ್ರಕರ್ತ ಕೊಮ್ಲ ಡ್ಯುಮರ್ ರವರ ಸ್ಮರಣಾರ್ಥ ಸ್ಥಾಪಿಸಲಾಗಿದೆ. ಬಿಬಿಸಿ ಸುದ್ದಿ ಸಂಸ್ಥೆಯಲ್ಲಿ ನಿರೂಪಕನಾಗಿದ್ದ ಕೊಮ್ಲ ಡ್ಯುಮರ್ ರವರು ಆಕಸ್ಮಿಕವಾಗಿ 41ನೇ ವಯಸ್ಸಿನಲ್ಲಿ ಮರಣ ಹೊಂದಿದ್ದರು.
  • ಉಗಾಂಡದ ಸುದ್ದಿ ನಿರೂಪಕ ನ್ಯಾನ್ಸಿ ಕಕುಂಗಿರ (Nancy Kacungira) ರವರು ಈ ಪ್ರಶಸ್ತಿಯನ್ನು ಪಡೆದ ಮೊದಲಿಗರು.