ಬಿಸಿಸಿಐ ಸಂಬಂಧಿಸಿದ ಲೋಧಾ ಸಮಿತಿ ಶಿಫಾರಸ್ಸುಎತ್ತಿಡಿದ ಸುಪ್ರೀಂ ಕೋರ್ಟ್

ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಮಂಡಳಿ ಎನಿಸಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಯ ಆಡಳಿತ ಸುಧಾರಣೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ರಚಿಸಿದ್ದ ಲೋಧಾ ಸಮಿತಿಯ ಶಿಫಾರಸ್ಸುಗಳನ್ನು ಸುಪ್ರೀಂಕೋರ್ಟ್ ಒಪ್ಪಿಕೊಂಡಿದ್ದು, ಶಿಫಾರಸ್ಸುಗಳನ್ನು ಅಳವಡಿಸಿಕೊಳ್ಳುವಂತೆ ಬಿಸಿಸಿಐ ಗೆ ಸೂಚಿಸಿದೆ. ಈ ಶಿಫಾರಸ್ಸುಗಳನ್ನು ಬಿಸಿಸಿಐಗೆ ಜಾರಿಗೆ ತರಲು ಆರು ತಿಂಗಳ ಕಾಲವಕಾಶ ನೀಡಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಯ ಆಡಳಿತ ಸುಧಾರಣೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎಂ.ಆರ್.ಲೋಧಾ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿತ್ತು, ಸಮಿತಿಯು ತನ್ನ ಶಿಫಾರಸ್ಸನ್ನು ಜನವರಿ 2016 ರಲ್ಲಿ ಸಲ್ಲಿಸಿತ್ತು.

ಲೋಧಾ ಸಮಿತಿಯ ಕೆಲವು ಪ್ರಮುಖ ಶಿಫಾರಸುಗಳು

  • ಯಾವುದೇ ಸಚಿವ ಅಥವಾ ಸರ್ಕಾರಿ ಅಧಿಕಾರಿಗಳು ಬಿಸಿಸಿಐ ಹುದ್ದೆ ವಹಿಸಿಕೊಳ್ಳುವಂತಿಲ್ಲ. 70 ವರ್ಷ ಮೇಲ್ಪಟ್ಟವರಿಗೆ ಬಿಸಿಸಿಐ ಹುದ್ದೆ ಇಲ್ಲ
  • ಬಿಸಿಸಿಐಯನ್ನು ಮಾಹಿತಿ ಹಕ್ಕು ಕಾಯ್ದೆಯಡಿ ತರಬೇಕೆ ಬೇಡವೆ ಎಂಬುದನ್ನು ಸಂಸತ್ತು ನಿರ್ಣಯಿಸಬೇಕು.
  • ಒಂದು ರಾಜ್ಯಕ್ಕೆ ಒಂದೇ ಮತ ಕಡ್ಡಾಯ
  • ಮಂಡಳಿಯ ಚುನಾವಣೆಯಲ್ಲಿ ಒಂದು ರಾಜ್ಯಕ್ಕೆ ಒಂದೇ ಮತ ಚಲಾಯಿಸುವ ಅಧಿಕಾರ
  • ಒಬ್ಬ ವ್ಯಕ್ತಿ ಕ್ರಿಕೆಟ್ ಆಡಳಿತದಲ್ಲಿ ಒಂದೇ ಹುದ್ದೆ ವಹಿಸಿಕೊಳ್ಳಬೇಕು
  • 9 ವರ್ಷಕ್ಕಿಂತ ಹೆಚ್ಚಿನ ಅವಧಿಗೆ ಯಾರೂ ಪದಾಧಿಕಾರಿಗಳಾಗುವಂತಿಲ್ಲ
  • ರಾಜ್ಯ ಕ್ರಿಕೆಟ್ ಅಸೋಸಿಯೇಷನ್ನವರು ಬಿಸಿಸಿಐನಲ್ಲಿ ಇರುವಂತಿಲ್ಲ ಮತ್ತು ಐಪಿಎಲ್ಗೆ ಪ್ರತ್ಯೇಕ ಆಡಳಿತ ಮಂಡಳಿ ರಚಿಸಬೇಕು
  • ಬೆಟ್ಟಿಗ್ ನಿಷೇಧಕ್ಕೆ ಕಾಯ್ದೆ ತರಬೇಕು ಮತ್ತು ಒಬ್ಬರಿಗೆ ಒಂದೇ ಹುದ್ದೆ ನೀಡಬೇಕು

ಯುನೆಸ್ಕೊ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಭಾರತದ ಮೂರು ಸ್ಥಾನಗಳು

ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳ ನೂತನ ಪಟ್ಟಿಯನ್ನು ಬಿಡುಗಡೆಗೊಂಡಿದ್ದು, ಭಾರತದ ಮೂರು ಸ್ಥಳಗಳು ಈ ಬಾರಿ ಪಟ್ಟಿಯಲ್ಲಿ ಸ್ಥಾನಗಿಟ್ಟಿಸಿಕೊಂಡಿವೆ. ಇಸ್ತಾಂಬುಲ್ ನಲ್ಲಿ ನಡೆದ 40ನೇ ವಿಶ್ವ ಪಾರಂಪರಿಕ ಸಮಿತಿಯ ಅಧಿವೇಶನದಲ್ಲಿ ನೂತನ ತಾಣಗಳ ಹೆಸರನ್ನು ಘೋಷಿಸಲಾಗಿದೆ. ಒಂದೇ ದೇಶದ ಮೂರು ತಾಣಗಳು ಒಂದೇ ಅಧಿವೇಶನದಲ್ಲಿ ಯುನೆಸ್ಕೊ ಪಟ್ಟಿಯನ್ನು ಸೇರ್ಪಡೆಗೊಂಡಿರುವುದು ಇದೇ ಮೊದಲು ಆಗಿದೆ.

ಯಾವ ಯಾವ ಸ್ಥಳಗಳು:

ಚಂಡೀಗಡದ ಕ್ಯಾಪಿಟಲ್ ಕಾಂಪ್ಲೆಕ್ಸ್: ಸ್ವಿಸ್-ಫ್ರೆಂಚ್ ವಾಸ್ತುಶಿಲ್ಪಿ ಲೆ ಕೊರ್ಬುಸಿರ್ (Le Corbusier) ವಿನ್ಯಾಸಗೊಳಿಸಿದ ಕಟ್ಟಡಗಳ ಸಮೂಹ ಇದರ ವಿಶೇಷತೆ. ಪರಿವರ್ತನಗೊಳ್ಳುತ್ತಿರುವ ತಾಣಗಳ ವಿಭಾಗದಲ್ಲಿ (Transnational category) ಇದನ್ನು ಆಯ್ಕೆಮಾಡಲಾಗಿದೆ.  ಚಂಡೀಗಡ ಕ್ಯಾಪಿಟಲ್ ಕಾಂಪ್ಲೆಕ್ಸ್ ಪಂಜಾಬ್ ಮತ್ತು ಹರಿಯಾಣದ ಹೈಕೋರ್ಟ್, ಅಸೆಂಬ್ಲಿ ಹಾಲ್ ಮತ್ತು ಸೆಕ್ರೆಟಿಯೆಟ್ ಅನ್ನು ಒಳಗೊಂಡಿದೆ.

ಸಿಕ್ಕಿಂನ ಖಂಗ್ಚೆಂನ್ದಝೊಂಗ (Khangchendzonga) ರಾಷ್ಟ್ರೀಯ ಉದ್ಯಾನವನ : ವಿಶ್ವದ ಮೂರನೇ ಅತೀ ಎತ್ತರದ ಶಿಖರ ಕಾಂಚನಜುಂಗಾದ ನೆಲೆಯಾಗಿರುವ ಖಂಗ್ಚೆಂನ್ದಝೊಂಗ ರಾಷ್ಟ್ರೀಯ ಉದ್ಯಾನವನವನ್ನು “ಮಿಶ್ರ ಪಾರಂಪರಿಕ ತಾಣ (Mixed heritage site)” ಪಟ್ಟಿಗೆ ಸೇರ್ಪಡೆಗೊಂಡಿದೆ. ಅಂದರೆ ಈ ಉದ್ಯಾನವನವು ನೈಸರ್ಗಿಕ ಮತ್ತು ಸಾಂಸ್ಕೃತಿಕ ವೈಷಿಸ್ಠತೆಯಿಂದ ಕೂಡಿದೆ. ಸಿಕ್ಕಿಂ ನ ಶೇ 25% ಭಾಗವನ್ನು ಆವರಿಸಿಕೊಂಡಿರುವ ಉದ್ಯಾನವನದಲ್ಲಿ ಅಳಿವಿನಂಚಿನಲ್ಲಿರುವ ಅನೇಕ ಪ್ರಾಣಿ, ಪಕ್ಷಿ ಹಾಗೂ ಸಸ್ಯ ಸಂಕುಲಗಳನ್ನು ನೋಡಬಹುದಾಗಿದೆ.

ನಳಂದಾ ವಿಶ್ವವಿದ್ಯಾಲಯ: ಪಟನಾದಿಂದ ೯೫ ಕಿ.ಮೀ ಅಂತರದಲ್ಲಿದೆ.ಪುರಾತನ ನಳಂದಾ ವಿಶ್ವವಿದ್ಯಾಲಯವನ್ನು ೫ರಿಂದ ೧೨೦೦ ಕ್ರಿ.ಪೂದಲ್ಲಿ ಕಲಿಕೆಯ ಪ್ರಮುಖ ತಾಣವನ್ನಾಗಿ ಮಾಡುವಲ್ಲಿ ಮಹಾವೀರ ಹಾಗೂ ಬೌದ್ಧ ಧರ್ಮಗುರುಗಳು ಪ್ರಮುಖ ಪಾತ್ರ ವಹಿಸಿದ್ದರು.

ಈ ಮೂರು ತಾಣಗಳ ಸೇರ್ಪಡೆಯಿಂದ ಭಾರತದಲ್ಲಿರುವ ಯುನೆಸ್ಕೊ ವಿಶ್ವಪಾರಂಪರಿಕ ತಾಣಗಳ ಸಂಖ್ಯೆ ಈಗ 35 ಆಗಿದ್ದು, ಇವುಗಳಲ್ಲಿ 27 ಸಾಂಸ್ಕೃತಿಕ, 7 ಸ್ವಾಭಾವಿಕ ಹಾಗೂ 1 ಮಿಶ್ರ ತಾಣ ಆಗಿವೆ.        `

ಭಾರತೀಯ ವಿಮಾನನಿಲ್ದಾಣ ಪ್ರಾಧಿಕಾರದ ಮುಖ್ಯಸ್ಥರಾಗಿ ಗುರುಪ್ರಸಾದ್ ಮೊಹಪಾತ್ರ ನೇಮಕ

ಹಿರಿಯ ಐಎಎಸ್ ಅಧಿಕಾರಿ ಗುರುಪ್ರಸಾದ್ ಮೊಹಪಾತ್ರರವರನ್ನು ಭಾರತೀಯ ವಿಮಾನನಿಲ್ದಾಣ ಪ್ರಾಧಿಕಾರ (Airports Authority of India) ದ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದೆ. ನೇಮಕಾತಿಗೆ ಮುನ್ನ ಮೊಹಪಾತ್ರ ರವರು ಕೇಂದ್ರ ವಾಣಿಜ್ಯ ಸಚಿವಾಲಯದ ಜಂಟಿ ನಿರ್ದೇಶಕರಾಗಿ ಎರಡು ವರ್ಷಗಳ ಕಾಲ ಸೇವೆಸಲ್ಲಿಸಿದ್ದರು.

ಗುರುಪ್ರಸಾದ್ ಮೊಹಪಾತ್ರ ಬಗ್ಗೆ:

  • ಮೊಹಪಾತ್ರ ರವರು ಓಡಿಶಾದ ಖ್ಯಾತ ಸಾಹಿತಿ ಮೊಹಪಾತ್ರ ನಿಲಮಣಿ ಶಾಹೂ ರವರ ಕಿರಿಯ ಮಗ. ಇವರು 1986 ರ ಬ್ಯಾಚ್ ನ ಗುಜರಾತ್ ರಾಜ್ಯದ ಐಎಎಸ್ ಅಧಿಕಾರಿ.
  • ಗುಜರಾತ್ ಮಾರಾಟ ತೆರಿಗೆ ಇಲಾಖೆಯಲ್ಲಿ ವಿಶೇಷ ಕಮೀನಷರ್ ಹಾಗೂ ಗುಜರಾತ್ ಕೈಗಾರಿಕ ಅಭಿವೃದ್ದಿ ಕಾರ್ಪೋರೇಷನ್ ನ ಜಂಟಿ ಮ್ಯಾನೇಜಿಂಗ್ ಡೈರೆಕ್ಟರ್ ಆಗಿ ಸೇವೆ ಸಲ್ಲಿಸಿದ್ದಾರೆ.
  • ಇದಲ್ಲದೇ ಗುಜರಾತ್ ನ ವಾಣಿಜ್ಯ ತೆರಿಗೆ ಕಮೀಷನರ್ ಹಾಗೂ ಗುಜರಾತ್ ಸಾರಿಗೆ ಸಂಸ್ಥೆಯ ಕಮೀಷನರ್ ಆಗಿಯೂ ಕಾರ್ಯನಿರ್ವಹಿಸಿದ್ದಾರೆ.

ಭಾರತೀಯ ವಿಮಾನನಿಲ್ದಾಣ ಪ್ರಾಧಿಕಾರದ ಬಗ್ಗೆ:

  • ಭಾರತೀಯ ವಿಮಾನನಿಲ್ದಾಣ ಪ್ರಾಧಿಕಾರ ಒಂದು ಶಾಸನಬದ್ದ ಸಂಸ್ಥೆಯಾಗಿದ್ದು, ಕೇಂದ್ರ ನಾಗರೀಕ ವಿಮಾನಯಾನದಡಿ ಕಾರ್ಯನಿರ್ವಹಿಸುತ್ತಿದೆ. ನಾಗರೀಕ ವಿಮಾನಯಾನಕ್ಕೆ ಸಂಬಂಧಿಸಿದ ಮೂಲಭೂತ ಸೌಕರ್ಯಗಳನ್ನು ಸೃಜಿಸುವುದು, ಅಭಿವೃದ್ದಿಪಡಿಸುವುದು ಹಾಗೂ ನಿರ್ವಹಣೆ ಮಾಡುವುದು ಇದರ ಪ್ರಮುಖ ಕಾರ್ಯ.
  • ಭಾರತೀಯ ವಿಮಾನನಿಲ್ದಾಣ ಪ್ರಾಧಿಕಾರವೂ ದೇಶದ 125 ವಿಮಾನನಿಲ್ದಾಣಗಳನ್ನು ನಿಯಂತ್ರಿಸುತ್ತಿದೆ. ಇದರಲ್ಲಿ 18 ಅಂತರರಾಷ್ಟ್ರೀಯ, 7 ಕಸ್ಟಮ್, 78 ರಾಷ್ಟ್ರೀಯ ಹಾಗೂ 26 ರಕ್ಷಣಾ ಸಂಬಂಧಿಸಿದ ವಿಮಾನ ನಿಲ್ದಾಣಗಳು ಸೇರಿವೆ.

ಪ್ರಸಿದ್ದ ಹಿನ್ನಲೆ ಗಾಯಕಿ ಮುಬಾರಕ್ ಬೇಗಂ ವಿಧಿವಶ

ಬಾಲಿವುಡ್ ನ ಪ್ರಸಿದ್ದ ಹಿನ್ನಲೆ ಗಾಯಕಿ ಮುಬಾರಕ್ ಬೇಗಂ ರವರು ದೀರ್ಘಕಾಲದ ಅನಾರೋಗ್ಯದ ಹಿನ್ನೆಲೆಯಲ್ಲಿ ವಿಧಿವಶರಾದರು.

  • ರಾಜಸ್ತಾನದ ಸುಜನ್ ಗರ್ ನಲ್ಲಿ ಜನನಿಸಿದ ಬೇಗಂ ರವರು ಹತ್ತು ವರ್ಷ ವಯಸ್ಸಿನವರಿದ್ದಾಗಲೇ ಮುಂಬೈಗೆ ಬಂದು ನೆಲೆಸಿದರು.
  • ಆಲ್ ಇಂಡಿಯಾ ರೇಡಿಯೋದಲ್ಲಿ ಹಾಡುವ ಮೂಲಕ ತಮ್ಮ ಗಾಯಕಿ ವೃತ್ತಿಯನ್ನು ಆರಂಭಿಸಿದ ಅವರು, 1949 ರಲ್ಲಿ ತೆರೆಕಂಡ ಹಿಂದಿ ಚಿತ್ರ “ಆಯೇ” ಚಿತ್ರದಲ್ಲಿ ಮೊಟ್ಟಮೊದಲ ಬಾರಿಗೆ ಹಿನ್ನಲೆ ಗಾಯಕಿ ಆಗಿ ಪರಿಚಿತಗೊಂಡರು.
  • ತದ ನಂತರ 1950 ಹಾಗೂ 1960ರ ದಶಕದ ಉದ್ದಕ್ಕೂ ಮುಬಾರಕ್ ಬೇಗಮ್ ಅವರು ಸುನೀಲ್ ದತ್, ನರ್ಗೀಸ್ ಮತ್ತು ರಾಜೇಂದ್ರ ಕುಮಾರ್ ನಟನೆಯ ಚಿತ್ರಗಳಿಗೆ ಸಂಗೀತ ನಿರ್ದೇಶಕರಾಗಿದ್ದ ಎಸ್ ಡಿ ಬರ್ಮನ್, ಶಂಕರ್ ಜೈಕಿಶನ್ ಮತ್ತು ಖಯ್ನಾಮ್ ಅವರೊಂದಿಗೆ ಕೆಲಸ ಮಾಡಿದ್ದರು.
  • 1961ರಲ್ಲಿ ತೆರೆಕಂಡ ಹಮಾರೀ ಯಾದ್ ಆಯೇಗೀ ಚಿತ್ರಕ್ಕಾಗಿ ಮುಬಾರಕ್ ಬೇಗಂ ಅವರು ಹಾಡಿದ್ದ “ಕಭೀ ತನ್ಹಾಯಿಯೋಂ ಮೇ ಹಮಾರೀ ಯಾದ್ ಆಯೇಗೀ’ ಎಂಬ ಹಾಡು ಅತ್ಯಂತ ಪ್ರಸಿದ್ಧವಾಗಿತ್ತು. “ಹಮ್ ಹಾಲ್-ಈ-ದಿಲ್ ಸುನೆಂಗ” ಮತ್ತು “ಓ ಮೇರೆ ಹಮ್ ರಹೀ” ಅವರ ಹಾಡಿದ್ದ ಹಾಡುಗಳಲ್ಲಿ ಪ್ರಸಿದ್ದವಾದವು.

ಜುಲೈ 18: ನೆಲ್ಸನ್ ಮಂಡೇಲಾ ಅಂತರರಾಷ್ಟ್ರೀಯ ದಿನ

ಪ್ರತಿ ವರ್ಷ ಜುಲೈ 18 ಅನ್ನು ನೆಲ್ಸನ್ ಮಂಡೇಲಾ ಅಂತರರಾಷ್ಟ್ರೀಯ ದಿನ ಅಥವಾ ಮಂಡೇಲಾ ದಿನವೆಂದು ವಿಶ್ವದಾದ್ಯಂತ ಆಚರಣೆ ಮಾಡಲಾಗುತ್ತದೆ. ಜುಲೈ 18 ನೆಲ್ಸನ್ ಮಂಡೇಲಾ ರವರ ಜನ್ಮದಿನ. ಮಂಡೇಲಾ ರವರು ನೋಬೆಲ್ ಶಾಂತಿ ಪ್ರಶಸ್ತಿ ಪುರಸ್ಕತರು ಹಾಗೂ ದಕ್ಷಿಣಾ ಆಫ್ರಿಕಾದ ಮಾಜಿ ಅಧ್ಯಕ್ಷರಾಗಿದ್ದವರು.

  • ಒಳಿತಿಗಾಗಿ ಜಗತ್ತಿನ್ನು ಬದಲಾಯಿಸಲು ಪ್ರತಿಯೊಬ್ಬರು ಕಾರ್ಯಪ್ರವತರಾಗಬೇಕೆಂಬ ಸಂದೇಶವನ್ನು ಸಾರುವ ಸಲುವಾಗಿ ಈ ದಿನವನ್ನು ಆಚರಿಸಲಾಗುತ್ತಿದೆ.
  • ಶಾಂತಿ ಮತ್ತು ಸ್ವಾತಂತ್ರ್ಯ ಸ್ಥಾಪಿಸುವುದಕ್ಕಾಗಿ ಮಂಡೇಲಾ ರವರು ನೀಡಿರುವ ಕೊಡುಗೆಯನ್ನು ಗಮನಿಸಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು 2009 ರಲ್ಲಿ ಜುಲೈ 18 ಅನ್ನು ನೆಲ್ಸನ್ ಮಂಡೇಲಾ ಅಂತರರಾಷ್ಟ್ರೀಯ ದಿನವೆಂದು ಘೋಷಿಸಿತು.
  • ಅಷ್ಟೇ ಅಲ್ಲದೇ, ವರ್ಣಭೇದ ವಿರುದ್ದ ಹೋರಾಡಿದ ಮಂಡೇಲಾರ ಪ್ರಜಾಪ್ರಭುತ್ವ, ಜನಾಂಗೀಯ ನ್ಯಾಯ ಮತ್ತು ಪ್ರಚಾರ ಮತ್ತು ರಕ್ಷಣೆ ಮಾನವ ಹಕ್ಕುಗಳ ಸಂರಕ್ಷಣೆಗೆಯಿದ್ದ ಬದ್ಧತೆಯನ್ನು ಮತ್ತು ಮಾನವರ ಸೇವೆಗಾಗಿ ತನ್ನ ಸಮರ್ಪಣೆಯನ್ನು ಸಾರುವ ಸಲುವಾಗಿ ಆಚರಿಸಲಾಗುತ್ತದೆ.