ಝಿಕಾ ವೈರಸ್ ಉಲ್ಬಣ: ತುರ್ತು ಆರೋಗ್ಯ ಪರಿಸ್ಥಿತಿ ಘೋಷಿಸಿದ ಪೆರು

ಪೆರು ದೇಶದಲ್ಲಿ ಝಿಕಾ ವೈರಸ್ ಕಾಯಿಲೆ ಉಲ್ಬಣಗೊಂಡಿರುವ ಹಿನ್ನಲೆಯಲ್ಲಿ ದೇಶದ ಉತ್ತರ ಭಾಗದಲ್ಲಿ ತುರ್ತು ಆರೋಗ್ಯ ಪರಿಸ್ಥಿತಿಯನ್ನು ಘೋಷಿಸಲಾಗಿದೆ. ಇದುವರೆಗೂ ಸುಮಾರು 100 ಕ್ಕೂ ಹೆಚ್ಚು ಝಿಕಾ ವೈರಸ್ ಸೋಂಕಿನ ಪ್ರಕರಣಗಳು ಪೆರುವಿನಲ್ಲಿ ಪತ್ತೆಯಾಗಿವೆ.

  • ರೋಗ ಹರಡದಂತೆ ನಿಯಂತ್ರಿಸುವ ಸಲುವಾಗಿ 90 ದಿನಗಳ ತುರ್ತು ಆರೋಗ್ಯ ಪರಿಸ್ಥಿತಿಯನ್ನು ಘೋಷಿಸಲಾಗಿದೆ. 34ಕ್ಕೂ ಹೆಚ್ಚು ಗರ್ಭೀಣಿ ಸ್ತ್ರೀಯರಲ್ಲಿ ಝಿಕಾ ವೈರಸ್ ಪತ್ತೆಯಾಗಿದೆ.
  • ಪೆರುವಿನ ನೆರೆ ದೇಶವಾದ ಬ್ರೆಜಿಲ್ ನಲ್ಲಿ ಮೊದಲು ಬೆಳಕಿಗೆ ಬಂದ ಝಿಕಾ ವೈರಸ್ ಬ್ರೆಜಿಲ್ ನಲ್ಲಿ ಸುಮಾರು 1600 ಕ್ಕೂ ಹೆಚ್ಚು ಮಕ್ಕಳಲ್ಲಿ ಮೈಕ್ರೊಸಿಫಾಲಿ ಎಂಬ ನ್ಯೂನತೆಗೆ ಕಾರಣವಾಗಿತ್ತು. ಮೈಕ್ರೊಸಿಫಾಲಿ ಸಣ್ಣ ತಲೆ ಮತ್ತು ಮೆದುಳು ಹೊಂದಿರುವ ಮಕ್ಕಳ ಜನನ.

ಝಿಕಾ ವೈರಸ್ ಬಗ್ಗೆ:

  • ಝಿಕಾ ವೈರಸ್ ಸೊಳ್ಳೆಯಿಂದ ಹರಡಬಲ್ಲ ವೈರಸ್ ಆಗಿದ್ದು, ಈಡೀಸ್ ಏಜಿಪ್ಟಿ ಸೊಳ್ಳೆ ಕಚ್ಚುವ ಮೂಲಕ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಈಡೀಸ್ ಏಜಿಪ್ಟಿ ಸೊಳ್ಳೆ ಡೆಂಗ್ಯೂ, ಚಿಕನ್ ಗೂನ್ಯ, ಹಳದಿ ಜ್ವರ ಕಾಯಿಲೆಯನ್ನು ತಂದೊಡ್ಡುತ್ತದೆ.
  • ಪ್ಲಾವಿವೈರಿಡೆ (Flaviviridae) ಜಾತಿಗೆ ಸೇರಿದ ವೈರಸ್ ಇದಾಗಿದ್ದು, ಪ್ರಥಮ ಬಾರಿಗೆ 1947 ರಲ್ಲಿ ಉಗಾಂಡದಲ್ಲಿ ಪತ್ತೆಹಚ್ಚಲಾಗಿತ್ತು. ಉಗಾಂಡದ ಝಿಕಾ ಅರಣ್ಯದಲ್ಲಿ ಪತ್ತೆ ಆದ ಕಾರಣ ಝಿಕಾ ಹೆಸರು ಬಂದಿದೆ.
  • ಸದ್ಯ ಈ ಕಾಯಿಲೆ ಯಾವುದೇ ಸೂಕ್ತ ಚಿಕಿತ್ಸೆ ಇಲ್ಲ ಆದರೆ ಸೊಳ್ಳೆಗಳ ಕಚ್ಚದಂತೆ ಸುರಕ್ಷತೆ ಕ್ರಮವನ್ನು ವಹಿಸುವ ಮೂಲಕ ಕಾಯಿಲೆ ಹರಡುವಿಕೆಯನ್ನು ತಡೆಯಬಹುದಾಗಿದೆ.

ದಕ್ಷಿಣಾ ಚೀನಾ ಸಮುದ್ರದ ಮೇಲೆ ಚೀನಾಗೆ ನೈತಿಕ ಹಕ್ಕಿಲ್ಲ: ಹೇಗ್ ನ್ಯಾಯಾಲಯ

ದಕ್ಷಿಣ ಚೀನಾ ಸಮುದ್ರ ವ್ಯಾಪ್ತಿಯ ಭೂಪ್ರದೇಶದ ಮೇಲೆ ಸಾರ್ವಭೌಮತ್ವ ಸಾಧಿಸಲು ಪ್ರಯತ್ನಿಸುತ್ತಿದ್ದ ಚೀನಾಗೆ ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ ತೀವ್ರ ಮುಖಭಂಗವಾಗಿದೆ.  ಹೇಗ್ನಲ್ಲಿರುವ ಅಂತಾರಾಷ್ಟ್ರೀಯ ನ್ಯಾಯಾಧಿಕರಣವು ನೇಮಿಸಿದ್ದ ಐದು ಸದಸ್ಯರ ಪ್ರಾಧಿಕಾರ ದಕ್ಷಿಣಾ ಚೀನಾ ಸಮುದ್ರದ ಮೇಲೆ ಚೀನಾಗೆ ಯಾವುದೇ ನೈತಿಕ ಹಕ್ಕಿಲ್ಲ ಎಂದು ತೀರ್ಪು ನೀಡಿದೆ.

  • ‘ನೈನ್-ಡ್ಯಾಶ್ ಲೈನ್’ ವ್ಯಾಪ್ತಿಯೊಳಗೆ ಬರುವ ಪ್ರದೇಶವನ್ನು ತನ್ನದೆಂದು ಸಾಬೀತುಪಡಿಸಿಕೊಳ್ಳಲು ಚೀನಾಗೆ ಯಾವುದೇ ಕಾನೂನಾತ್ಮಕ ಪುರಾವೆಯಿಲ್ಲ ನ್ಯಾಯಾಲಯ ತಿಳಿಸಿದೆ.
  • ದಕ್ಷಿಣಾ ಚೀನಾ ಸಮುದ್ರದ ಮೇಲೆ ಫಿಲಿಫೈನ್ಸ್ ಗಿರುವ ಹಕ್ಕನ್ನು ಚೀನಾ ಉಲ್ಲಂಘಿಸಿದೆ ಅಲ್ಲದೇ, ಈ ಸಮುದ್ರದಲ್ಲಿ ಕೃತಕ ದ್ವೀಪ ಪ್ರದೇಶವನ್ನು ನಿರ್ಮಿಸುವ ಮೂಲಕ ಹವಳಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ ಎಂದು ಕೋರ್ಟ್ ಹೇಳಿದೆ.

ಹಿನ್ನಲೆ:

  • ದಕ್ಷಿಣಾ ಚೀನಾ ಸಮುದ್ರದ ಮೇಲಿನ ಹಕ್ಕಿಗೆ ಸಂಬಂಧಿಸಿದಂತೆ ಚೀನಾ ಮತ್ತು ಫಿಲಿಫೈನ್ಸ್ ನಡುವಿನ ತಿಕ್ಕಾಟ 2009 ರಿಂದ ನಡೆಯುತ್ತಿದೆ. ದಕ್ಷಿಣ ಚೀನಾ ಸಮುದ್ರಾದ್ಯಂತದ ನೈಸರ್ಗಿಕ ಸಂಪನ್ಮೂಲಗಳ ಮೇಲಿನ ಚೀನಾದ ಪಾರಮ್ಯವನ್ನು ಫಿಲಿಪ್ಪೀನ್ಸ್ ಸರಕಾರ 2013 ರಲ್ಲಿ ಅಂತರರಾಷ್ಟ್ರೀಯ ಕೋರ್ಟಿನಲ್ಲಿ ಪ್ರಶ್ನಿಸಿತ್ತು. ಆದರೆ ಇದನ್ನು ಚೀನಾ ವಿರೋಧಿಸುತ್ತಲೇ ಬಂದಿದೆ.

ದಕ್ಷಿಣಾ ಚೀನಾ ಸಮುದ್ರ ವಿವಾದ ಮತ್ತು ಪ್ರಾಮುಖ್ಯತೆ:

  • ದಕ್ಷಿಣಾ ಚೀನಾ ಸಮುದ್ರದ ಮೇಲೆ ಸಾರ್ವಭೌಮತ್ವ ಸಾಧಿಸಲು ಕೇವಲ ಚೀನಾ ಮತ್ತು ಫಿಲಿಫೈನ್ಸ್ ಸೆಣಸುತ್ತಿಲ್ಲ. ಬ್ರೂನಿ, ವಿಯೆಟ್ನಾಂ, ಮಲೇಷಿಯಾ ಹಾಗೂ ತೈವಾನ್ ದೇಶಗಳು ಸಹ ದಕ್ಷಿಣ ಚೀನಾ ಸಮುದ್ರಾದ್ಯಂತದ ನೈಸರ್ಗಿಕ ಸಂಪನ್ಮೂಲಗಳ ಮೇಲಿನ ಹಕ್ಕನ್ನು ಚಲಾಯಿಸುತ್ತ ಹಾಗೂ ಚೀನಾದ ಕ್ರಮವನ್ನು ಖಂಡಿಸುತ್ತಿವೆ.
  • ದಕ್ಷಿಣಾ ಚೀನಾ ಸಮುದ್ರ ನೈಸರ್ಗಿಕ ಸಂಪನ್ಮೂಲಗಳ ಭಂಡಾರವಾಗಿದೆ ಹಾಗೂ ಅಪಾರ ಮೀನು ಸಂಕುಲ ಹೊಂದಿದೆ. ಪ್ರಮುಖ ಆಯಾಕಟ್ಟಿನ ಜಾಗದಲ್ಲಿರುವ ಈ ಸಮುದ್ರದ ಮೂಲಕ ವಿಶ್ವದ ಅರ್ಧದಷ್ಟು ವ್ಯಾಪಾರಿ ಹಡಗಗಳು ಈ ಸಮುದ್ರದ ಮೂಲಕ ಹಾದು ಹೋಗುತ್ತವೆ.

ಅರುಣಾಚಲ ಪ್ರದೇಶದಲ್ಲಿ ಮತ್ತೆ ನಬಮ್ ಟುಕಿ ಸರ್ಕಾರ: ಸುಪ್ರೀಂ ಆದೇಶ

ಅರುಣಾಚಲ ಪ್ರದೇಶದಲ್ಲಿ ಹೇರಲಾಗಿದ್ದ ರಾಷ್ಟ್ರಪತಿ ಆಡಳಿತವನ್ನು ಅಸಿಂಧು ಎಂದಿರುವ ಸುಪ್ರೀಂಕೋರ್ಟ್ ರಾಷ್ಟ್ರಪತಿ ಆಡಳಿತವನ್ನು ತೆರವುಗೊಳಿಸಿದೆ. ಆ ಮೂಲಕ ನಬಮ್ ಟುಕಿ ನೇತೃತ್ವದ ಸರ್ಕಾರವನ್ನು ಮತ್ತೆ ಅಧಿಕಾರಕ್ಕೆ ಬರಲಿದೆ.

ಸುಪ್ರೀಂ ತೀರ್ಪು ಏನು?

  • ಅರುಣಾಚಲ ಪ್ರದೇಶದ ರಾಜ್ಯಪಾಲ ಜ್ಯೋತಿ ಪ್ರಸಾದ್ ರಾಜ್ಖೋವಾ ರವರು ಟುಕಿ ನೇತೃತ್ವದ ಸರ್ಕಾರವನ್ನು ವಜಾಗೊಳಿಸಿ ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸು ಮಾಡಿದ್ದರು. ಕಾಂಗ್ರೆಸ್ನ 21 ಶಾಸಕರು ಮುಖ್ಯಮಂತ್ರಿ ನಬಮ್ ಟುಕಿ ಅವರ ವಿರುದ್ಧ ಬಂಡಾಯ ಎದ್ದಿದ್ದರಿಂದ ರಾಜ್ಯಪಾಲ 2015ರ ಡಿ.16 ರಂದು ವಿಧಾನಸಭೆ ಅಧಿವೇಶನ ನಡೆಸಲು ನಿರ್ಧರಿಸಲಾಗಿತ್ತು. ಆದರೆ ಸ್ಪೀಕರ್ ಅವರನ್ನು ವಾಗ್ದಂಡನೆಗೆ ಗುರಿಪಡಿಸುವ ಸಲುವಾಗಿ ರಾಜ್ಯಪಾಲರು ಇದಕ್ಕೂ ಮುಂಚಿತವಾಗಿಯೇ ಅಧಿವೇಶನ ಕರೆದಿದ್ದರು. ಇದು ಸಂವಿಧಾನದ ಪ್ರಕಾರ ಅಸಿಂಧು ಎಂದು ಸುಪ್ರಿಂಕೋರ್ಟ್ ಹೇಳಿದೆ.

ಹಿನ್ನೆಲೆ:

  • ಈಶಾನ್ಯ ರಾಜ್ಯ ಅರುಣಾಚಲ ಪ್ರದೇಶದಲ್ಲಿ ಕಾಂಗ್ರೆಸ್ ನ 21 ಶಾಸಕರು ನಬಮ್ ಟುಕಿ ವಿರುದ್ದ ಬಂಡಾಯವೆದ್ದ ಕಾರಣ 47 ಜನ ಬೆಂಬಲಿತ ಸರ್ಕಾರ 27ಕ್ಕೆ ಕುಸಿದಿ ಕಾರಣ ನಬಮ್ ಟುಕಿ ನೇತೃತ್ವದ ಸರ್ಕಾರ ನವೆಂಬರ್ 2015 ರಂದು ಪತನವಾಗಿತ್ತು. ಈ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಸಂವಿಧಾನದ ಪರಿಚ್ಛೇದ 356 ರಂತೆ ರಾಷ್ಟ್ರಪತಿ ಆಡಳಿತವನ್ನು ಹೇರಿತ್ತು. ಈ ಬೆಳವಣಿಗೆಯನ್ನು ಸಕರಾತ್ಮಕವಾಗಿ ಬಳಸಿಕೊಂಡ ವಿರೋಧ ಪಕ್ಷದ ನಾಯಕ ಕಲಿಕೊ ಪುಲ್ ರವರು ಬಂಡಾಯ ತೋರಿದ 21 ಶಾಸಕರು ಮತ್ತು 11 ಬಿಜೆಪಿ ಶಾಸಕರ ಜೊತೆಗೂಡಿ ಫೆಬ್ರವರಿ 2016 ರಂದು ಅರುಣಾಚಲ ಪ್ರದೇಶದ 9 ನೇ ಮುಖ್ಯಮಂತ್ರಿಯಾಗಿ ನೇಮಕಗೊಂಡಿದ್ದರು.