ಬೇಳೆಕಾಳು ಕೊರತೆ ನೀಗಿಸಲು ಸಮಿತಿ ರಚಿಸಿದ ಕೇಂದ್ರ ಸರ್ಕಾರ

ದೇಶದಲ್ಲಿ ಎದುರಾಗಿರುವ ಬೇಳೆಕಾಳುಗಳ ಕೊರತೆಯನ್ನು ನಿಯಂತ್ರಿಸುವ ಸಲುವಾಗಿ ಕೇಂದ್ರ ಸರ್ಕಾರ ಉನ್ನತಮಟ್ಟದ ಸಮಿತಿಯನ್ನು ರಚಿಸಿದೆ. ವಿತ್ತ ಸಚಿವ ಅರುಣ್ ಜೆಟ್ಲಿ ಅಧ್ಯಕ್ಷತೆ ವಹಿಸಿದ್ದ ಸಭೆಯಲ್ಲಿ ಈ ನಿರ್ಣಯವನ್ನು ಕೈಗೊಳ್ಳಲಾಗಿದೆ. ಕೇಂದ್ರ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರರಾದ ಅರವಿಂದ್ ಸುಬ್ರಮಣ್ಯನ್ ರವರು ಈ ಉನ್ನತ ಮಟ್ಟದ ಸಮಿತಿಯ ಅಧ್ಯಕ್ಷರಾಗಿದ್ದಾರೆ.

  • ಹಿಡಿತಕ್ಕೆ ಸಿಗದೆ ಏರುತ್ತಿರುವ ಬೇಳೆಕಾಳುಗಳ ಬೆಲೆಯನ್ನು ನಿಯಂತ್ರಿಸಲು ಅಧ್ಯಯನ ನಡೆಸಿ, ಸಲಹೆಗಳನ್ನು ಸಮಿತಿ ಶಿಫಾರಸ್ಸು ಮಾಡಲಿದೆ.
  • ಬೇಳೆಕಾಳುಗಳನ್ನು ಬೆಳೆಯುವಂತೆ ರೈತರನ್ನು ಪ್ರೋತ್ಸಾಹಿಸುವುದು, ಅದಕ್ಕೆಂದೆ ರೈತರಿಗೆ ಬೋನಸ್ ನೀಡುವುದು ಮತ್ತು ಕನಿಷ್ಠ ಬೆಂಬಲ ಬೆಲೆಯನ್ನು ಹೆಚ್ಚಿಸುವುದನ್ನು ಸಮಿತಿ ಅಧ್ಯಯನ ನಡೆಸಲಿದೆ.
  • ದೇಶದಲ್ಲಿ ಬೇಳೆಕಾಳುಗಳನ್ನು ಬೆಳೆಯಲು ರೈತರಿಗೆ ಸಬ್ಸಿಡಿ ನೀಡುವುದು ಹಾಗೂ ಬೇಳೆಕಾಳುಗಳ ಕೊರತೆಯನ್ನು ನೀಗಿಸಲು ದೀರ್ಘ ಅವಧಿಯ ನಿಯಮಗಳನ್ನು ರೂಪಿಸುವ ಸಲುವಾಗಿ ಸಮಿತಿ ಅಧ್ಯಯನ ನಡೆಸಿ ಶಿಫಾರಸ್ಸು ಮಾಡಲಿದೆ.

VRL ಲಾಜಿಸ್ಟಿಕ್ಸ್ ಗೆ ಸೌತ್ ಇಂಡಿಯನ್ ಬಿಜಿನಸ್ ಪ್ರಶಸ್ತಿ

ಏಷ್ಯಾದ ನಂ.1 ಸರಕು ಸಾರಿಗೆ ಸಂಸ್ಥೆ ಎನಿಸಿರುವ ವಿಆರ್​ಎಲ್ ಲಾಜಿಸ್ಟಿಕ್ಸ್​ಗೆ ಸಿಬಾ (ಸೌತ್ ಇಂಡಿಯನ್ ಬಿಜಿನೆಸ್ ಅಚೀವರ್ಸ್) ಪ್ರಶಸ್ತಿ ಪ್ರಾಪ್ತವಾಗಿದೆ. ಸಿಂಗಾಪುರದಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ವಿಆರ್​ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಆನಂದ ಸಂಕೇಶ್ವರ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.

  • ಕರ್ನಾಟಕ, ಆಂಧ್ರ, ತಮಿಳುನಾಡು, ಕೇರಳದ ಉದ್ಯಮ ನೇತಾರರು ಮತ್ತು ಸಾಧಕರಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ವಿವಿಧ ಕ್ಷೇತ್ರದಲ್ಲಿ ವಿಭಿನ್ನ ಸಾಧನೆಯಮೈಲಿಗಲ್ಲು ಸ್ಥಾಪಿಸುವ ಮೂಲಕ ಗುರುತಿಸಿಕೊಂಡಿರುವ ದಕ್ಷಿಣ ಭಾರತದ ಸಂಸ್ಥೆ, ಕಂಪನಿಗಳನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗುತ್ತದೆ.
  • ಸೆಲೆಬ್ರಿಟಿ ಕ್ರಿಕೆಟ್ ಲೀಗ್, ದಕ್ಷಿಣ ಭಾರತ ಮಟ್ಟದ ಸಿನಿಮಾ ಪ್ರಶಸ್ತಿ ಸ್ಥಾಪಿಸಿ ನಡೆಸಿಕೊಂಡು ಬರುತ್ತಿರುವ ಮಾಧ್ಯಮ ಮತ್ತು ಮನರಂಜನಾ ಉದ್ಯಮ ಸಂಸ್ಥೆ ವಿಬ್ರಿ ಮೀಡಿಯಾ ಪ್ರತಿವರ್ಷವೂ ಅರ್ಹರಿಗೆ ಪ್ರತಿಷ್ಠಿತ ಸಿಬಾ ಪ್ರಶಸ್ತಿ ನೀಡುತ್ತ ಬಂದಿದೆ.