ಖ್ಯಾತ ಮರಾಠಿ ಸಾಹಿತಿ “ರಾಮಚಂದ್ರ ಧೇರೆ” ನಿಧನ

ಖ್ಯಾತ ಮರಾಠಿ ಸಾಹಿತಿ, ವಿದ್ವಾಂಸ ರಾಮಚಂದ್ರ ಚಿಂತಮನ್ ಧೇರೆ ರವರು ಧೀರ್ಘಕಾಲದ ಅನಾರೋಗ್ಯದ ನಿಮಿತ್ತ ನಿಧನರಾದರು. ಧೇರೆ ರವರು ತಮ್ಮ ಆಳವಾದ ಸಂಶೋಧನೆ ಮೂಲಕ ಮರಾಠಿ ಸಾಹಿತ್ಯದ ಮೇಲೆ ಬೆಳಕು ಚೆಲ್ಲಿದ್ದರು.

ರಾಮಚಂದ್ರ ಧೇರೆ ಬಗ್ಗೆ:

  • ರಾಮಚಂದ್ರ ಧೇರೆ ರವರು ಪುಣೆ ಬಳಿಯ ನಿಗಡೆ ಹಳ್ಳಿಯಲ್ಲಿ ಜುಲೈ 21, 1930 ರಲ್ಲಿ ಜನಿಸಿದರು. 1966 ರಲ್ಲಿ ಪದವಿ ಶಿಕ್ಷಣ ಪೂರ್ಣಗೊಳಿಸಿ, 1975 ರಲ್ಲಿ ಪಿ.ಎಚ್.ಡಿಯನ್ನು ಹಾಗೂ 1980 ರಲ್ಲಿ ಪುಣೆ ವಿವಿಯಿಂದ ಡಿ.ಲಿಟ್ ಪಡೆದುಕೊಂಡಿದ್ದಾರೆ.
  • ತಮ್ಮ ಸಂಶೋಧನೆಯ ಆಧಾರದ ಮೇಲೆ ಸುಮಾರು 105 ಕ್ಕೂ ಹೆಚ್ಚು ಪುಸ್ತಕಗಳನ್ನು ಇವರು ಬರೆದಿದ್ದಾರೆ.
  • “ಹಿಸ್ಟರಿ ಆಫ್ ನಾಥ್ ಕಲ್ಟ್”, “ಹಿಸ್ಟರಿ ಆಫ್ ದತ್ತ ಕಲ್ಟ್”, “ಚಕ್ರಪಾಣಿ”, “ಶ್ರೀ ತುಳಜ ಭವಾನಿ” ಇವು ಇವರು ರಚಿಸಿರುವ ಪ್ರಮುಖ ಪುಸ್ತಕಗಳು.
  • ಮಹಾರಾಷ್ಟ್ರ ಗೌರವ ಪ್ರಶಸ್ತಿ, ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಮಹಾರಾಷ್ಟ್ರ ಸಾಹಿತ್ಯ ಪರಿಷತ್ತ್ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳಿಗೆ ರಾಮಚಂದ್ರ ಧೇರೆ ರವರು ಭಾಜನರಾಗಿದ್ದಾರೆ.

 

ಪಾಕಿಸ್ತಾನದ ಮದರ್ ಥೇರೆಸಾ ಖ್ಯಾತಿ ಅಬ್ದುಲ್ ಸತ್ತಾರ್ ಈದಿ ವಿಧಿವಶ

ಮದರ್ ಥೇರೆಸಾ ಎಂದೇ ಪಾಕಿಸ್ತಾನದಲ್ಲಿ ಪ್ರಸಿದ್ದಿ ಹೊಂದಿದ್ದ ಅಬ್ದುಲ್ ಸತ್ತಾರ್ ರವರು ವಿಧಿವಶರಾದರು. ಅನಾರೋಗ್ಯದಿಂದ ಬಳಲುತ್ತಿದ್ದ ಅವರಿಗೆ 92 ವರ್ಷ ವಯಸ್ಸಾಗಿತ್ತು. ಸತ್ತಾರ್ ರವರು ಭಾರತದಿಂದ ಆಕಸ್ಮಿಕವಾಗಿ ಪಾಕ್ ತೆರಳಿದ್ದ ಮೂಗ ಮತ್ತು ಕಿವುಡ ಬಾಲಕಿ ಗೀತಾ ರವರನ್ನು ರಕ್ಷಿಸಿ, ಪೋಷಿಸಿ ಪುನಃ ಭಾರತಕ್ಕೆ ಕಳುಹಿಸಿಕೊಡುವ ಮೂಲಕ ಮನೆಮಾತಾಗಿದ್ದರು.

  • ಅಬ್ದುಲ್ ಸತ್ತಾರ್ ರವರು ಎಧಿ ಪೌಂಢೇಶನ್ ಸಂಸ್ಥೆಯ ಸ್ಫಾಪಕರು. ಈ ಸಂಸ್ಥೆಯ ಮೂಲಕ ಜನಸೇವೆಗೆ ತಮ್ಮನ್ನೇ ಮೀಸಲಾಗಿಟ್ಟಿದ್ದರು.
  • ಪಾಕಿಸ್ತಾನದಾದ್ಯಂತ ಅನೇಕ ಅನಾಥ ಆಶ್ರಮಗಳನ್ನು ಸ್ಥಾಪಿಸಿ ಅನಾಥ ಮಕ್ಕಳಿಗೆ ನೆರಳಾಗಿದ್ದರು.
  • ಸುಮಾರು 1500 ಆಂಬ್ಯುಲೆನ್ಸ್​ಗಳನ್ನು ಜನರ ಸೇವೆಗಾಗಿ ಮೀಸಲಿಟ್ಟಿದ್ದು, ಜನರಿಗೆ ವಿಶೇಷ ಸೇವೆ ಒದಗಿಸುತ್ತಿದ್ದಾರೆ. ಮುಖ್ಯವಾಗಿ ಉಗ್ರರ ದಾಳಿ ನಡೆದ ಸಂದರ್ಭದಲ್ಲಿ ಎಧಿ ಫೌಂಡೇಶನ್ ಅಲ್ಲಿಗೆ ತಕ್ಷಣ ಆಂಬ್ಯುಲೆನ್ಸ್​ಗಳನ್ನು ಕಳುಹಿಸಿಕೊಡುತ್ತದೆ. ಜತೆಗೆ ಎಧಿ ಫೌಂಡೇಶನ್ ಬಾಂಗ್ಲಾದೇಶ, ಆಫ್ಘಾನಿಸ್ತಾನ, ಇರಾನ್, ಶ್ರೀಲಂಕಾ, ಕ್ರೊಯೇಷಿಯಾ, ಇಂಡೋನೇಷ್ಯಾಗಳಲ್ಲಿ ಸಮಾಜ ಸೇವಾ ಕಾರ್ಯಗಳಲ್ಲಿ ತೊಡಗಿಕೊಂಡಿದೆ.