ವಿಶ್ವದ ಮೊದಲ ವಿದ್ಯುತ್ ಚಾಲಿತ ಟ್ರಕ್ ರಸ್ತೆ “ಸ್ವೀಡನ್” ಅಲ್ಲಿ ಆರಂಭ

ವಿಶ್ವದ ಮೊದಲ ವಿದ್ಯುತ್ ಚಾಲಿತ ಟ್ರಕ್ ರಸ್ತೆ ಸ್ವೀಡನ್ ಅಲ್ಲಿ ಆರಂಭಗೊಂಡಿದೆ. ಸ್ವೀಡನ್ ಸರ್ಕಾರದ ಈ ಕ್ರಮ ವಾಯು ಮಾಲಿನ್ಯ ತಪ್ಪಿಸುವ ಮಹತ್ವದ ಗುರಿ ಹೊಂದಿದೆ. ವಿದ್ಯುತ್ ಚಾಲಿತ ಟ್ರಕ್ ರಸ್ತೆಯ ಪ್ರಯೋಗಾರ್ಥ ಪರೀಕ್ಷೆಯನ್ನು ಸ್ವೀಡನ್ ನ ಗಾವ್ಲೆ ನಗರದಲ್ಲಿ ನಡೆಸಲಾಗಿದ್ದು, ಈ ಪರೀಕ್ಷೆಯಲ್ಲಿ ಭಾರಿ ಗಾತ್ರದ ವಿದ್ಯುತ್ ಚಾಲಿತ ಟ್ರಕ್ ಗಳು ಸುಗಮವಾಗಿ ಚಲಿಸುವ ಮೂಲಕ ಯಶಸ್ವಿಯಾಗಿವೆ.

ಕಾರ್ಯನಿರ್ವಹಣೆ ಹೇಗೆ?

ಈ ವಿದ್ಯುತ್ ಚಾಲಿತ ಟ್ರಕ್ ಗಳಿಗಾಗಿಯೇ ಇ16 ಎಂಬ ವಿಶೇಷ ರಸ್ತೆ ವ್ಯವಸ್ಥೆಯನ್ನು ಅಭಿವೃದ್ದಿಪಡಿಸಲಾಗಿದೆ. ಸ್ವೀಡನ್ ನ ಖ್ಯಾತ ಟ್ರಕ್ ಹಾಗೂ ಲಾರಿ ತಯಾರಿಕಾ ಸಂಸ್ಥೆ ಸ್ಕಾನಿಯಾ, ಈ ವಿಶೇಷ ಟ್ರಕ್ ಗಳನ್ನು ತಯಾರಿಸಿದೆ. ರಸ್ತೆಯ ಮೇಲ್ಬದಿಯಲ್ಲಿ ಹೈವೋಲ್ಟೇಜ್ ವಿದ್ಯುತ್ ಪ್ರವಹಿಸುವ ತಂತಿಗಳನ್ನು ಅಳವಡಿಸಿ ಅವುಗಳ ಮೂಲಕ ವಿದ್ಯುತ್ ಚಾಲಿತ ಟ್ರಕ್ ಗಳನ್ನು ಚಲಾಯಿಸಲಾಗಿದೆ. ವಿದ್ಯುತ್ ಚಾಲಿತ ರೈಲುಗಳ ತರಹವೇ ಈ ಟ್ರಕ್ ಗಳು ಚಲಿಸಲಿವೆ.