ತಾಯಿಯಿಂದ ಮಗುವಿಗೆ ಏಡ್ಸ್ ಬಾರದಂತೆ ನಿಯಂತ್ರಿಸಿದ ಏಷ್ಯಾದ ಮೊದಲ ರಾಷ್ಟ್ರ ಥಾಯ್ಲೆಂಡ್

ತಾಯಿಯಿಂದ ಮಗುವಿಗೆ ಎಚ್​ಐವಿ ಸೋಂಕು ಹರಡುವುದನ್ನು ತಡೆಗಟ್ಟುವ ಏಷ್ಯಾದ ಮೊದಲ ರಾಷ್ಟ್ರವಾಗಿ ಥಾಯ್ಲೆಂಡ್ ಹೊರಹೊಮ್ಮಿದೆ. ಥಾಯ್ಲೆಂಡ್ ನ ಈ ಸಾಧನೆಯನ್ನು ವಿಶ್ವ ಆರೋಗ್ಯ ಸಂಸ್ಥೆ ಖಚಿತಪಡಿಸಿದೆ. ಈ ಸಂಬಂಧ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಥಾಯ್ಲೆಂಡ್ ನ ಆರೋಗ್ಯ ಸಚಿಚರಿಗೆ ಪ್ರಮಾಣಪತ್ರ ನೀಡಿ ಗೌರವಿಸಲಾಯಿತು.

  • ಒಟ್ಟಾರೆ ಥಾಯ್ಲೆಂಡ್​ನಲ್ಲಿ 2000 ದಿಂದ ಈಚೆಗೆ ಗರ್ಭಿಣಿ ಸ್ತ್ರೀಯರಿಗೆ ಎಚ್​ಐವಿ ಸೋಂಕು ಬರದಂತೆ ತಡೆಗಟ್ಟುವಲ್ಲಿ ನಿರಂತರವಾಗಿ ಶ್ರಮಿಸುತ್ತಿತ್ತು, ಈಗ ತಾಯಿಯಿಂದ ಮಗುವಿಗೆ ಸೋಂಕು ಹರಡುವ ಪ್ರಕರಣಗಳು ಶೇ 2 ಕ್ಕಿಂತಲೂ ಕಡಿಮೆ ಇದೆ. ಗರ್ಭೀಣಿ ಸ್ತ್ರೀಯರಿಗೆ ಆ್ಯಂಟಿ ರೆಟ್ರೋವೈರಲ್ ಲಸಿಕೆ ನೀಡುವ ಮೂಲಕ ತಾಯಿಯಿಂದ ಮಗುವಿಗೆ ಸೋಂಕು ಹರಡುವಿಕೆಯನ್ನು ಇಳಿಮುಖಗೊಳಿಸಲಾಗಿದೆ.
  • ತಾಯಿಯಿಂದ ಮಗುವಿಗೆ ಎಚ್​ಐವಿ ಸೋಂಕು ಹರಡುವುದನ್ನು ಈ ಮೊದಲು ಕ್ಯೂಬಾ ದೇಶ 2015 ರ ಜುಲೈನಲ್ಲಿ ತಡೆಗಟ್ಟುವಲ್ಲಿ ಯಶಸ್ವಿಯಾಗಿತ್ತು. ಆ ಮೂಲಕ ಈ ಸಾಧನೆ ಮಾಡಿದ ವಿಶ್ವದ ಮೊದಲ ರಾಷ್ಟ್ರ ಕ್ಯೂಬಾ.

ಆಸಿಡ್ ದಾಳಿ ಮತ್ತು ದೌರ್ಜನ್ಯಕ್ಕೊಳಗಾದ ಮಹಿಳೆರಿಗೆ “ಸ್ಥೈರ್ಯ” ಯೋಜನೆ ಜಾರಿಗೊಳಿಸಿದ ರಾಜ್ಯ ಸರ್ಕಾರ

ಆಸಿಡ್ ದಾಳಿ ಸೇರಿದಂತೆ ವಿವಿಧ ರೀತಿಯ ದೌರ್ಜನ್ಯಕ್ಕೆ ಒಳಗಾಗುವ ಸ್ತ್ರೀಯರಿಗೆ ಆರ್ಥಿಕವಾಗಿ ನೆರವಾಗಲು ರಾಜ್ಯ ಸರ್ಕಾರ “ಸ್ಥೈರ್ಯ” ಎಂಬ ಯೋಜನೆಯನ್ನ ಜಾರಿಗೊಳಿಸಿದೆ. ಈ ಯೋಜನೆಯನ್ನು ರಾಜ್ಯದ ಎಲ್ಲ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯು ಅನುಷ್ಟಾನಗೊಳಿಸುತ್ತಿದೆ.

  • ಯೋಜನೆಯಡಿ ಸಂತ್ರಸ್ತ ಮಹಿಳೆಯರಿಗೆ ತುರ್ತು ಅಗತ್ಯಗಳಿಗಾಗಿ ಹಾಗೂ ಹೆಚ್ಚಿನ ವೈದ್ಯಕೀಯ ಚಿಕಿತ್ಸೆಗಾಗಿ ಅರ್ಜಿ ಸಲ್ಲಿಕೆಯಾದ 24 ಗಂಟೆಯಲ್ಲೇ ಆರ್ಥಿಕ ಪರಿಹಾರ ಸಿಗಲಿದೆ
  • ಈ ಯೋಜನೆಯು ಜ.1ರಿಂದ ದಾಖಲಾದ ಪ್ರಕರಣಗಳಿಗೆ ಮಾತ್ರ ಅನ್ವಯವಾಗಲಿದೆ. ಆಸಿಡ್ ದಾಳಿಗೊಳಗಾದವರಿಗೆ ಗರಿಷ್ಠ ಪರಿಹಾರ ಮೊತ್ತವಾಗಿ 3 ಲಕ್ಷ ರೂ., ಅತ್ಯಾಚಾರ ಮತ್ತು ತೀವ್ರ ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ 2 ಲಕ್ಷ ರೂ. ಹಾಗೂ ಅಂಗವಿಕಲ ಹಾಗೂ ದುಡಿಯಲು ಅಶಕ್ತರಾದವರಿಗೆ ಪ್ರಕರಣದ ಗಂಭೀರತೆಗೆ ಅನುಗುಣವಾಗಿ ಜಿಲ್ಲಾಮಟ್ಟದ ಸಮಿತಿ ಶಿಫಾರಸಿನೊಂದಿಗೆ ಆರ್ಥಿಕ ಪರಿಹಾರ ನೀಡುವ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು.

ಪರಿಹಾರ ಹೇಗೆ?

ದೌರ್ಜನ್ಯಕ್ಕೊಳಗಾದ ಮಹಿಳೆಯರು ಪುರಾವೆಗಳೊಂದಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಿಗೆ ಅರ್ಜಿ ಸಲ್ಲಿಸಬೇಕು. ಉಪನಿರ್ದೇಶಕರು ಪ್ರಥಮ ಮಾಹಿತಿ ವರದಿ, ವೈದ್ಯಕೀಯ ಪ್ರಮಾಣಪತ್ರ ಆಧರಿಸಿ ಜಿಲ್ಲಾಧಿಕಾರಿ ಅನುಮೋದನೆ ಪಡೆದು, ಸಂತ್ರಸ್ತ ಮಹಿಳೆಗೆ ಮೊದಲ ಹಂತವಾಗಿ ತುರ್ತು ಚಿಕಿತ್ಸೆಗೆ ಅರ್ಜಿ ಸಲ್ಲಿಸಿದ 24 ಗಂಟೆಯೊಳಗೆ 25 ಸಾವಿರ ರೂ. ಪರಿಹಾರ ವಿತರಿಸಲಾಗುವುದು.

ಟೆನ್ನಿಸ್ ತಾರೆ ಮರಿಯಾ ಶರಪೋವಾಗೆ ಎರಡು ವರ್ಷ ನಿಷೇಧ

tenis_upರಷ್ಯಾದ ಖ್ಯಾತ ಟೆನ್ನಿಸ್ ಆಟಗಾರ್ತಿ ಮರಿಯಾ ಶರಪೋವಾಗೆ ಅಂತಾರಾಷ್ಟ್ರೀಯ ಟೆನಿಸ್ ಫೆಡರೇಶನ್(ಐಟಿಎಫ್)ಎರಡು ವರ್ಷಗಳ ಕಾಲ ನಿಷೇಧ ಹೇರಿದೆ. ಶರಪೋವಾ ರವರು ಆಸ್ಟ್ರೇಲಿಯನ್ ಓಪನ್ ಟೂರ್ನಿಯಲ್ಲಿ ನಿಷೇಧಿತ ದ್ರವ್ಯ ಮೆಲ್ಡೋನಿಯಮ್ ಸೇವಿಸಿ ಸಿಕ್ಕಿಬಿದ್ದಿದ್ದರು. ಈ ಕಾರಣದಿಂದ ಅವರಿಗೆ ಎರಡು ವರ್ಷಗಳ ಕಾಲ ನಿಷೇಧ ವಿಧಿಸಿದೆ.

  • ಶರಪೋವಾ ವಿರುದ್ಧದ ನಿಷೇಧ ಅವಧಿ ಈ ವರ್ಷದ ಜ. 26ರಿಂದ ಅನ್ವಯವಾಗಲಿದ್ದು, 2 ವರ್ಷಗಳ ಕಾಲ ಜಾರಿಯಲ್ಲಿರಲಿದೆ. ಅಲ್ಲದೇ ಆಸ್ಟ್ರೇಲಿಯನ್ ಓಪನ್ನಲ್ಲಿ ಕ್ವಾರ್ಟರ್ಫೈನಲ್ ತಲುಪಿರುವ ಸಾಧನೆಯನ್ನು ಅನರ್ಹಗೊಳಿಸಲಾಗಿದೆ.
  • ಶರಪೋವಾ 35 ಡಬ್ಲುಟಿಎ ಸಿಂಗಲ್ಸ್ ಪ್ರಶಸಿಗಳನ್ನು ಜಯಿಸಿದ್ದು, ಕ್ರೀಡೆಯ ಎಲ್ಲ ನಾಲ್ಕೂ ಗ್ರಾನ್ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದಾರೆ.

ಮೆಲ್ಡ್ಬೋನಿಯಂ ದ್ರವ್ಯ:

  • ಮೆಲ್ಡ್ಬೋನಿಯಂ ಒಂದು ಔಷಧಿಯ ದ್ರವ್ಯ. ಹೃದಯ ಮತ್ತು ರಕ್ತ ಪರಿಚಲನೆ ರೋಗಗಳಿಂದ ಬಳಲುತ್ತಿರುವವರಿಗೆ ಈ ಔಷಧವನ್ನು ನೀಡಲಾಗುತ್ತಿದೆ. ರೋಗಿಗಳ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಈ ದ್ರವ್ಯದ ಬಳಕೆಯಿಂದ ದೇಹದಲ್ಲಿ ಕೆಂಪು ರಕ್ತ ಕಣಗಳ ಉತ್ಪತ್ತಿ ಹೆಚ್ಚಾಗಿ ಆಮ್ಲಜನಕದ ಪೂರೈಕೆ ಹೆಚ್ಚಾಗುವುದರಿಂದ ದೇಹದ ಸಾಮರ್ಥ್ಯ ಹೆಚ್ಚುತ್ತದೆ.