ಭಾರತದಲ್ಲಿ ಹೊಸದಾಗಿ 499 ಪ್ರಭೇದಗಳು ಪತ್ತೆ

ಝೂಲಾಜಿಕಲ್ ಸರ್ವೇ ಆಫ್ ಇಂಡಿಯಾದ “ಅನಿಮಲ್ ಡಿಸ್ಕವರೀಸ್ 2016, ನ್ಯೂ ಸ್ಪೀಸೀಸ್ ಅಂಡ್ ರೆಕಾರ್ಡ್ಸ್” ಮತ್ತು ಬಟಾನಿಕಲ್ ಸರ್ವೇ ಆಫ್ ಇಂಡಿಯಾದ ಪ್ಲಾಂಟ್ ಡಿಸ್ಕವರೀಸ್ 2016, ವರದಿ ಪ್ರಕಾರ ಕಳೆದ ವರ್ಷ 499 ಹೊಸ ಪ್ರಭೇದಗಳನ್ನು ದೇಶದ ವಿವಿಧ ಭಾಗಗಳಲ್ಲಿ ಪತ್ತೆ ಮಾಡಲಾಗಿದೆ.

ಪ್ರಾಣಿಗಳು:

ಹೊಸ ಆವಿಷ್ಕಾರಗಳ ಪೈಕಿ 258 ಅಕಶೇರುಕಗಳು ಮತ್ತು 55 ಕಶೇರುಕಗಳಾಗಿವೆ. ಸುಮಾರು 97 ಕೀಟಗಳು, 27 ಮೀನುಗಳು, 12 ಉಭಯಚರಗಳು, 10 ಪ್ಲ್ಯಾಟಿಹೆಲ್ಮಿಂಟ್ಸ್, ಒಂಬತ್ತು ಕ್ರುಸ್ಟಾಸಿಯ, ಆರು ಜಾತಿಯ ಸರೀಸೃಪಗಳು, 61 ಜಾತಿಯ ಪತಂಗಗಳು ಮತ್ತು ಚಿಟ್ಟೆಗಳು ಮತ್ತು 38 ಜೀರುಂಡೆಗಳು ಸೇರಿವೆ.

            ಹೊಸ ಪ್ರಭೇದಗಳನ್ನು ದೇಶದ ನಾಲ್ಕು ಜೈವಿಕ ಹಾಟ್ ಸ್ಪಾಟ್ ಗಳಾದ ಹಿಮಾಲಯ, ಈಶಾನ್ಯ, ಪಶ್ಚಿಮ ಘಟ್ಟಗಳು ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಕಂಡುಬರಲಿವೆ.

            ಅನಿಮಲ್ ಡಿಸ್ಕವರೀಸ್ 2016ರ ಪ್ರಕಾರ, ದೇಶದಲ್ಲಿ ಮೊಟ್ಟಮೊದಲ ಬಾರಿಗೆ ಪ್ರಾಣಿ ಪ್ರಭೇದಗಳ ಸಂಖ್ಯೆಯು 1,00,693ರಷ್ಟಿದ್ದು, ಒಂದು ಲಕ್ಷವನ್ನು ಮೀರಿದೆ. ಕಳೆದ ವರ್ಷ ತನಕ ಭಾರತದಲ್ಲಿ ಪ್ರಾಣಿ ಪ್ರಭೇದಗಳ ಸಂಖ್ಯೆ 97,514 ಆಗಿತ್ತು. ಭಾರತವು ವಿಶ್ವದ 17 ಮೆಗಾಡೈವರ್ಸಿಟಿ ದೇಶಗಳಲ್ಲಿ ಒಂದಾಗಿದೆ ಮತ್ತು ಜಾಗತಿಕ ಪ್ರಾಣಿ ಪ್ರಭೇದಗಳ ಶೇ 6.42% ರಷ್ಟು ಹೊಂದಿದೆ.

ಸಸ್ಯಗಳು:

ಪ್ಲಾಂಟ್ ಡಿಸ್ಕವರೀಸ್ 2016ರ ಪ್ರಕಾರ 186 ಹೊಸ ಜಾತಿಯ ಸಸ್ಯಗಳನ್ನು ಪತ್ತೆಹಚ್ಚಲಾಗಿದೆ. ಇವುಗಳಲ್ಲಿ ಏಳು ಹೊಸ ಕುಲಗಳು, ನಾಲ್ಕು ಉಪವರ್ಗಗಳು ಮತ್ತು ಒಂಬತ್ತು ಹೊಸ ಪ್ರಭೇದಗಳು ಸೇರಿದಂತೆ ಒಟ್ಟು ಜಾತಿಗಳು 206. ಪೂರ್ವ ಹಿಮಾಲಯಗಳು (15%), ಪಶ್ಚಿಮ ಹಿಮಾಲಯಗಳು (13%), ಪೂರ್ವ ಘಟ್ಟಗಳು (12%) ಮತ್ತು ಪಶ್ಚಿಮ ಕರಾವಳಿ (8%) ಮತ್ತು ಪಶ್ಚಿಮ ಘಟ್ಟಗಳಲ್ಲಿ (17%) ಈ ಸಸ್ಯದ ಹೊಸ ಜಾತಿಗಳು ಕಂಡು ಬಂದಿವೆ.

ಬಟಾನಿಕಲ್ ಸರ್ವೇ ಆಫ್ ಇಂಡಿಯಾ:

ಬಟಾನಿಕಲ್ ಸರ್ವೆ ಆಫ್ ಇಂಡಿಯಾ(ಬಿಎಸ್ಐ) ವನ್ನು ದೇಶದ ಅರಣ್ಯ ಸಸ್ಯ ಸಂಪನ್ಮೂಲಗಳ ಜೀವಿವರ್ಗೀಕರಣ ಮತ್ತು ಅಧ್ಯಯನಗಳನ್ನು ನಡೆಸಲು ಪರಿಸರ ಮತ್ತು ಅರಣ್ಯ ಸಚಿವಾಲಯದ ಅಡಿಯಲ್ಲಿ ಅತ್ಯುನ್ನತ ಸಂಶೋಧನಾ ಸಂಸ್ಥೆಯಾಗಿದೆ. ಬಿಎಸ್ಐ 1890ರ ಫೆಬ್ರುವರಿ 13 ರಂದು ದೇಶದ ಸಸ್ಯ ಸಂಪನ್ಮೂಲಗಳನ್ನು ಅನ್ವೇಷಿಸಲು ಮತ್ತು ಆರ್ಥಿಕ ಮೌಲ್ಯವುಳ್ಳ ಸಸ್ಯ ಜಾತಿಗಳನ್ನು ಗುರುತಿಸುವ ಮೂಲ ಉದ್ದೇಶದೊಂದಿಗೆ ಸ್ಥಾಪಿಸಲ್ಪಟ್ಟಿತು.

ಝೂಲಾಜಿಕಲ್ ಸರ್ವೇ ಆಫ್ ಇಂಡಿಯಾ:

ಝೂಲಾಜಿಕಲ್ ಸರ್ವೆ ಆಫ್ ಇಂಡಿಯಾ(ಜಿಎಸ್ಐ) ಅನ್ನು 1916 ರಲ್ಲಿ ಪ್ರಾರಂಭಿಸಲಾಯಿತು. ಇದು ಪ್ರಾಣಿಗಳ ಟ್ಯಾಕ್ಸಾನಮಿ ಕುರಿತಾದ ಭಾರತದ ಅತ್ಯುನ್ನತ ಸಂಸ್ಥೆಯಾಗಿದೆ. ಭಾರತೀಯ ಉಪಖಂಡದಲ್ಲಿ ಪ್ರಾಣಿಗಳ ಟ್ಯಾಕ್ಸಾನಮಿ ವಿವಿಧ ಅಂಶಗಳ ಮೇಲೆ ಸಮೀಕ್ಷೆ, ಪರಿಶೋಧನೆ, ಸಂಶೋಧನೆ ಮತ್ತು ದಾಖಲಾತಿಯನ್ನು ಉತ್ತೇಜಿಸುವುದು ಇದರ ಗುರಿಯಾಗಿದೆ. ಜಿಎಸ್ಐ ಅನ್ನು ನ್ಯಾಷನಲ್ ಜೀವವೈವಿಧ್ಯ ಕಾಯಿದೆ, 2002ರ ವಿಭಾಗ 39ರ ಪ್ರಕಾರ ರಾಷ್ಟ್ರೀಯ ಪ್ರಾಣಿ ಸಂಗ್ರಹಾಲಯಕ್ಕೆ ಗೊತ್ತುಪಡಿಸಿದ ರೆಪೊಸಿಟರಿಯಾಗಿ ಘೋಷಿಸಲಾಗಿದೆ.

ಪರಿಸರ ಸ್ನೇಹಿ ಮದುವೆಗಳಿಗೆ ಮುಂದಾದ ಕೇರಳ ಸರ್ಕಾರ

ಕೇರಳ ರಾಜ್ಯ ಸರ್ಕಾರವು ರಾಜ್ಯದಲ್ಲಿ ನಡೆಯುವ ಮದುವೆಗಳನ್ನು ಹೆಚ್ಚು ಪರಿಸರ-ಸ್ನೇಹಿಯನ್ನಾಗಿಸಲು ಹಸಿರು ಶಿಷ್ಟಾಚಾರವನ್ನು ಹೊರತಂದಿದೆ.

ಪ್ರಮುಖಾಂಶಗಳು:

ಶಿಷ್ಟಚಾರದ ಪ್ರಕಾರ, ಪ್ಲಾಸ್ಟಿಕ್ ಮತ್ತು ಇತರೆ ಜೈವಿಕವಾಗಿ ವಿಘಟನೆಯಾಗದೆ ಬಳಸಿ ಬಿಸಾಡುವ  ವಸ್ತುಗಳಾದ ಗ್ಲಾಸ್ಗಳು, ತಟ್ಟೆಗಳು ಮತ್ತು ಥರ್ಮೋಕೋಲ್ ಅಲಂಕಾರಗಳನ್ನು ಮದುವೆಯ ಸಮಾರಂಭಗಳಲ್ಲಿ ಬಳಸುವುದನ್ನು ನಿಷೇಧಿಸಲಾಗಿದೆ. ಈ ಜೈವಿಕ ಕೊಳೆಯದ ವಸ್ತುಗಳ ಬದಲಾಗಿ ಗಾಜಿನ ಮತ್ತು ಪರಿಸರ-ಸ್ನೇಹಿ ಲೋಹಗಳಿಂದ ಮಾಡಿದ ಲೋಟಗಳು, ತಟ್ಟೆಗಳು ಮತ್ತು ಇತರ ಪಾತ್ರೆಗಳನ್ನು ಮದುವೆ ಸಮಾರಂಭಗಳಲ್ಲಿ ಬಳಸುವಂತೆ ಮನವೊಲಿಸಲಾಗುವುದು. ಸರ್ಕಾರದ ಪ್ಲ್ಯಾಸ್ಟಿಕ್ ವಿರೋಧಿ ಅಭಿಯಾನ ಮತ್ತು ಹಸಿರು-ಕೇರಳ ಅಭಿಯಾನದ ಭಾಗವಾಗಿ ಈ ಶಿಷ್ಟಾಚಾರವನ್ನು ಹೊರತರಲಾಗಿದೆ.

ನೈರ್ಮಲ್ಯದ ರಾಜ್ಯ ನೋಡಲ್ ಸಂಸ್ಥೆಯಾದ ಸುಚಿತ್ವಾ ಮಿಷನ್ ಈಗಾಗಲೇ ಕಣ್ಣೂರು, ಎರ್ನಾಕುಲಂ, ಕೊಲ್ಲಂ ಮತ್ತು ಅಲಪ್ಪುಳದಲ್ಲಿ ಪ್ರಾಯೋಗಿಕವಾಗಿ ಶಿಷ್ಟಾಚಾರವನ್ನು ಪ್ರಾರಂಭಿಸಿದೆ. ಶೀಘ್ರದಲ್ಲೇ ಉಳಿದ ಜಿಲ್ಲೆಗಳಲ್ಲಿ ಜಾರಿಗೆ ಬರಲಿದೆ ಎಂದು ನಿರೀಕ್ಷಿಸಲಾಗಿದೆ. ಹಸಿರು ಶಿಷ್ಟಾಚಾರ ಉಪಕ್ರಮವನ್ನು ಜಾರಿಗೆ ತರಲು ಜಿಲ್ಲಾ ಆಡಳಿತ, ಪಂಚಾಯತ್ ಅಧಿಕಾರಿಗಳು ಮತ್ತು ಸಾಮಾಜಿಕ-ಸಾಂಸ್ಕೃತಿಕ ಮತ್ತು ಧಾರ್ಮಿಕ ಸಮ್ಮೇಳನಗಳೊಂದಿಗೆ ಕೈಜೋಡಿಸಲಾಗಿದೆ.

ಮದುವೆ ಸಭಾಂಗಣ, ಸಮಾವೇಶ ಕೇಂದ್ರಗಳು, ಹೋಟೆಲ್ಗಳು ಮತ್ತು ವಿವಾಹ ಸಮಾರಂಭ ನಡೆಯುವ ಇತರ ಸ್ಥಳಗಳಲ್ಲಿ ಪರಿಶೀಲನೆ ನಡೆಸಲು ಸುಚಿತ್ವಾ ಮಿಷನ್ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳನ್ನು ಒಳಗೊಂಡಿರುವ ವಿಶೇಷ ತಂಡಗಳು ರಚಿಸಲಾಗುವುದು. ಶಿಷ್ಟಾಚಾರ ಉಲ್ಲಂಘನೆಯ ಸಂದರ್ಭಗಳಲ್ಲಿ, ಸಮಾರಂಭದಲ್ಲಿ ಬಳಸಲಾಗುವ ಪಾತ್ರೆಗಳ ಮತ್ತು ವಸ್ತುಗಳ ಸ್ವರೂಪವನ್ನು ಅವಲಂಬಿಸಿ ಕ್ರಮವನ್ನು ತೆಗೆದುಕೊಳ್ಳಲಾಗುತ್ತದೆ.

ಕತಾರ್ ದೇಶಕ್ಕೆ ಅರಬ್ ದೇಶಗಳ ಬಹಿಷ್ಕಾರ

ಈಜಿಪ್ಟ್, ಬಹರೇನ್, ಸೌದಿ ಅರೇಬಿಯಾ, ಸಂಯುಕ್ತ ಅರಬ್ ಒಕ್ಕೂಟ (ಯುಎಇ), ಯೆಮನ್‌ ಹಾಗೂ ಮಾಲ್ಡೀವ್ಸ್‌  ದೇಶಗಳು ಕತಾರ್‌ ಜತೆ ರಾಜತಾಂತ್ರಿಕ ಸಂಬಂಧವನ್ನು ಬಹಿಷ್ಕರಿಸುವುದಾಗಿ ಘೋಷಿಸಿವೆ. ಕತಾರ್ ನಲ್ಲಿರುವ ತಮ್ಮ ದೇಶದ ರಾಯಭಾರಿಗಳನ್ನು ಹಿಂದಕ್ಕೆ ಕರೆಸಿ ಕತಾರ್ ರಾಯಭಾರಿಗಳನ್ನು ದೇಶದಿಂದ ಹೊರ ಕಳುಹಿಸುವುದಾಗಿ ಈ ದೇಶಗಳು ಹೇಳಿವೆ. ಅಲ್ಲದೇ ಕತಾರ್ ನೊಂದಿಗೆ ವೈಮಾನಿಕ ಹಾಗೂ ಸಮುದ್ರ ಮಾರ್ಗದ ಸಂಚಾರವನ್ನು ಕಡಿತಗೊಳಿಸಲು ನಿರ್ಧರಿಸಲಾಗಿದೆ. ಯುದ್ಧಪೀಡಿತ ಯೆಮನ್‌ನಲ್ಲಿರುವ ಕತಾರ್ ಸೇನೆಯನ್ನು ವಾಪಸ್ ಕಳುಹಿಸುವುದಾಗಿ ಸೌದಿ ಹೇಳಿದೆ.

ಕಾರಣ:

ಮುಸ್ಲಿಂ ಬ್ರದರ್ಹುಡ್, ಅಲ್-ಖೈದಾ, ಇಸ್ಲಾಮಿಕ್ ಸ್ಟೇಟ್ ಗ್ರೂಪ್ ಮತ್ತು ಇರಾನ್ ಬೆಂಬಲಿತ ಇತರ ಭಯೋತ್ಪಾದಕ ಗುಂಪುಗಳನ್ನು ಕತಾರ್ ಪ್ರೋತ್ಸಾಹಿಸುವ ಮೂಲಕ ಈ  ಪ್ರದೇಶವನ್ನು ಅಸ್ಥಿರಗೊಳಿಸುವ ಗುರಿ ಹೊಂದಿದೆ ಎಂದು ಸೌದಿ ಅರೇಬಿಯಾ ಆರೋಪಿಸಿದೆ. ಇದೇ ರೀತಿಯ ಆರೋಪವನ್ನು ಈಜಿಪ್ಟ್ ಸಹ ಮಂಡಿಸಿದೆ.

            ಮಾಧ್ಯಮ ಪ್ರಚೋದನೆ, ಸಶಸ್ತ್ರ ಭಯೋತ್ಪಾದಕ ಚಟುವಟಿಕೆಗಳಿಗೆ ಬೆಂಬಲ ಮತ್ತು ಪ್ರಮುಖ ತೀರ್ಮಾನಗಳಿಗೆ ಇರಾನಿನ ಭಯೋತ್ಪಾದಕ ಗುಂಪುಗಳಿಂದ ಕತಾರ್ ಹಣ ಪಡೆಯುತ್ತಿದೆ ಎಂದು ಬಹ್ರೇನ್ ದೂಷಿಸಿದೆ.

            ಇಸ್ಲಾಮಿಸ್ಟ್ಗಳನ್ನು ಬೆಂಬಲಸುತ್ತಿರುವುದಾಗಿ ಅರಬ್ ದೇಶಗಳು ಕತಾರ್ ದೇಶವನ್ನು  ದೀರ್ಘಕಾಲದಿಂದ ಆರೋಪಿಸುತ್ತಿವೆ. ಸೌದಿ ಅರೇಬಿಯಾ ಮತ್ತು ಯುಎಇ ದೇಶದಲ್ಲಿ ನಿಷೇಧಕ್ಕೆ ಒಳಗಾಗಿರುವ ಸುನ್ನಿ ಇಸ್ಲಾಮಿಕ್ ರಾಜಕೀಯ ಗುಂಪಾದ ಮುಸ್ಲಿಂ ಬ್ರದರ್ಹುಡ್ ಅನ್ನು ಕತಾರ್ ಬೆಂಬಲಿಸುತ್ತಿರುವುದನ್ನು ಖಂಡಿಸಿ ಸೌದಿ ಅರೇಬಿಯ, ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಬಹ್ರೇನ್ 2014ರಲ್ಲಿ ಕತಾರ್ನಿಂದ ತಮ್ಮ ರಾಯಭಾರಿಗಳನ್ನು ಹಿಂದಕ್ಕೆ ಕರೆಸಿಕೊಂಡಿದ್ದವು. ಎಂಟು ತಿಂಗಳುಗಳ ನಂತರ, ಕೆಲವು ಬ್ರದರ್ಹುಡ್ ಸದಸ್ಯರನ್ನು ದೇಶದಿಂದ ಹೊರ ಹೋಗುವಂತೆ ಕತಾರ್ ಒತ್ತಾಯಿಸಿದ ನಂತರ ಸಂಬಂಧಗಳು ಸಾಮಾನ್ಯ ಸ್ಥಿತಿಗೆ ತಲುಪಿತು.

ಪರಿಣಾಮ:

ಕತಾರ್ ಜೊತೆಗಿನ ರಾಜತಾಂತ್ರಿಕ ಸಂಬಂಧಗಳನ್ನು ಆರು ದೇಶಗಳು ಅಮಾನತುಗೊಳಿಸಿದ ನಂತರ ತೈಲ ಬೆಲೆಯಲ್ಲಿ ಏರಿಕೆ ಕಂಡಿದೆ. ಕತಾರ್ ವಿಶ್ವದ ಅತಿದೊಡ್ಡ ತೈಲ ಮತ್ತು ಅನಿಲ ರಫ್ತುದಾರರ ದೇಶವಾಗಿರುವುದು ಇದಕ್ಕೆ ಕಾರಣ. ಅಲ್ಲದೇ ಕತಾರ್ ವಿಶ್ವದ ಅನಿಲ ಶ್ರೀಮಂತ ಹಾಗೂ ದ್ರವೀಕೃತ ನೈಸರ್ಗಿಕ ಅನಿಲ (ಎಲ್ಎನ್ಜಿ) ಪೂರೈಸುವ ದೇಶವಾಗಿದೆ.

            ಕತಾರ್ 2022 ಫಿಫಾ ವಿಶ್ವಕಪ್ಗೆ ಆತಿಥ್ಯ ವಹಿಸಲಿದೆ. ಸೌದಿ ಅರೇಬಿಯವು ತನ್ನ ಕರಾವಳಿ ಗಡಿಯನ್ನು ಕತಾರ್ ನೊಂದಿಗೆ ಕಡಿತಗೊಳಿಸುವುದಾಗಿ ಹೇಳಿದೆ. ಆ ಮೂಲಕ ಅರಬ್ಬಿನ್ ಪೆನಿನ್ಸುಲಾದ ಇತರೆ ರಾಷ್ಟ್ರಗಳಿಂದ ಕತಾರ್ ಸಂಪರ್ಕವನ್ನು ಕಳೆದುಕೊಳ್ಳಲಿದೆ.

Leave a Comment

This site uses Akismet to reduce spam. Learn how your comment data is processed.