ಸಂವಿಧಾನ 123ನೇ ತಿದ್ದುಪಡಿ ಮಸೂದೆ, 2017: ಲೋಕಸಭೆಯಲ್ಲಿ ಅನುಮೋದನೆ

ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗಕ್ಕೆ(ಎನ್​ಸಿಬಿಸಿ) ಸಾಂವಿಧಾನಿಕ ಸ್ಥಾನಮಾನ ನೀಡುವ ಸಂವಿಧಾನದ 123ನೇ ತಿದ್ದುಪಡಿ ಮಸೂದೆ ಲೋಕಸಭೆಯಲ್ಲಿ ಅನುಮೋದನೆಗೊಂಡಿದೆ. ಮಸೂದೆಯ ಪರವಾಗಿ 360 ಮತಗಳ ಬಿದ್ದರೆ, ವಿರುದ್ದವಾಗಿ 2 ಮತಗಳನ್ನು ಚಲಾಯಿಸಲಾಗಿದೆ.

ಮಸೂದೆಯ ಉದ್ದೇಶ:

  • ಸಂವಿಧಾನ(123 ತಿದ್ದುಪಡಿ) ಕಾಯ್ದೆ 2017 ಹಿಂದುಳಿದ ವರ್ಗಗಳ ಆಯೋಗಕ್ಕೆ ವಿಶೇಷ ಸ್ಥಾನಮಾನಗಳನ್ನು ನೀಡಲಿದೆ.
  • ಸಂವಿಧಾನದಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡಗಳಿಗೆ ಅನ್ವಯವಾಗುವ ಪರಿಚ್ಛೇದ 338, 338ಎ ನಂತರ, 338 ಬಿ ಪರಿಚ್ಛೇದವಾಗಿ ಸೇರ್ಪಡೆಗೊಳ್ಳಲಿದೆ.
  • 342-ಎ ಹೊಸ ಪರಿಚ್ಚೇದ ಸಹ ಸೇರ್ಪಡೆಗೊಳ್ಳಲಿದೆ. ಈ ಪರಿಚ್ಛೇದವು ರಾಷ್ಟ್ರಪತಿಗಳಿಗೆ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದಿರುವ ವರ್ಗಗಳೆಂದು ಅಧಿಸೂಚನೆ ಹೊರಡಿಸುವ ಅಧಿಕಾರ ನೀಡಲಿದೆ. ರಾಜ್ಯಗಳಲ್ಲಿ ಗವರ್ನರ್ ರವರ ಸಲಹೆ ಮೇರೆಗೆ ರಾಷ್ಟ್ರಪತಿಗಳು ಅಧಿಸೂಚನೆ ಹೊರಡಿಸಲಿದ್ದಾರೆ. ಇದೇ ಪರಿಚ್ಛೇದ ಸಂಸತ್ತಿಗೆ ಕೇಂದ್ರ ಹಿಂದುಳಿದ ವರ್ಗಗಳ ಪಟ್ಟಿಗೆ ವರ್ಗಗಳ ಸೇರ್ಪಡೆ ಅಥವಾ ಕೈಬಿಡುವ ಅಧಿಕಾರ ಸಹ ನೀಡಲಿದೆ.

ಹಿನ್ನಲೆ:

  • 1993ರ ರಾಷ್ಟ್ರೀಯ ಹಿಂದುಳಿದ ವರ್ಗಗಳು, ಪಂಗಡಗಳ ರಾಷ್ಟ್ರೀಯ ಆಯೋಗ ಕಾಯ್ದೆ ರದ್ದುಗೊಳಿಸಿರುವ ಕೇಂದ್ರ ಸರ್ಕಾರ ಸಂವಿಧಾನ(123ನೇ ತಿದ್ದುಪಡಿ) ಮಸೂದೆ 2017ಯನ್ನು ಲೋಕಸಭೆಯಲ್ಲಿ ಮಂಡಿಸಿದೆ.
  • ಈ ಮಸೂದೆ ಅಂಗೀಕಾರಗೊಂಡಲ್ಲಿ, ಆಯೋಗಕ್ಕೆ ಸಾಂವಿಧಾನಿಕ ಸ್ಥಾನ ದೊರೆಯಲಿದ್ದು, ಸಂವಿಧಾನದಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡಗಳಿಗೆ ಅನ್ವಯವಾಗುವ ಪರಿಚ್ಛೇದ 338, 338ಎ ನಂತರ, 338 ಬಿ ಪರಿಚ್ಛೇದವಾಗಿ ಸೇರ್ಪಡೆಗೊಳ್ಳಲಿದೆ.
  • ಹಿಂದಿನ ಎನ್​ಸಿಬಿಸಿ ಕಾಯ್ದೆ ಪ್ರಕಾರ, ಆಯೋಗಕ್ಕೆ ಕೇವಲ ಒಬಿಸಿ ಪಟ್ಟಿಯಿಂದ ನಿರ್ದಿಷ್ಟ ಸಮುದಾಯಗಳನ್ನು ಸೇರಿಸುವಂತೆ ಇಲ್ಲವೇ ಕೈಬಿಡುವಂತೆ ಶಿಫಾರಸು ಮಾಡಲು ಅಧಿಕಾರವಿತ್ತು. ಹೊಸ ಮಸೂದೆಗೆ ಸಂಸತ್ತಿನಲ್ಲಿ ಅಂಗೀಕಾರ ದೊರೆತ ನಂತರ, ಆಯೋಗ ಹಿಂದುಳಿದ ವರ್ಗಳ ಅಭಿವೃದ್ಧಿ ಹಾಗೂ ಕಲ್ಯಾಣಕ್ಕಾಗಿ ಯೋಜನೆಗಳನ್ನು ಕೂಡ ರೂಪಿಸಬಹುದಾಗಿದೆ. ಶೈಕ್ಷಣಿಕ ಸಂಸ್ಥೆಗಳು ಹಾಗೂ ಉದ್ಯೋಗದಲ್ಲಿ ಮೀಸಲಾತಿ ನಿಯಮಗಳ ಉಲ್ಲಂಘನೆ ಕುರಿತ ದೂರುಗಳ ವಿಚಾರಣೆ ನಡೆಸಬಹುದು. ಪ್ರಸ್ತುತ ಈ ದೂರುಗಳನ್ನು ಪರಿಶಿಷ್ಟ ಜಾತಿಗಳ ಆಯೋಗವೇ ಪರಿಶೀಲಿಸುತ್ತಿದೆ. ಆಯೋಗ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಮೂರು ಸದಸ್ಯರನ್ನೊಳಗೊಂಡಿರಲಿದೆ.

ಭಾರತ-ಆಸ್ಟ್ರೇಲಿಯಾ ನಡುವೆ ಆರು ಒಪ್ಪಂದಕ್ಕೆ ಸಹಿ

ಭಯೋತ್ಪಾದನೆ ನಿಗ್ರಹ, ಕ್ರೀಡೆ, ಆರೋಗ್ಯ, ವಿಮಾನಯಾನ ಕ್ಷೇತ್ರದಲ್ಲಿ ಪರಸ್ಪರ ಸಹಕಾರಕ್ಕೆ ಸಂಬಂಧಿಸಿದಂತೆ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಆರು ಒಪ್ಪಂದಗಳಿಗೆ ಸಹಿ ಹಾಕಲಾಯಿತು. ಪ್ರಧಾನಿ ನರೇಂದ್ರ ಮೋದಿ ಹಾಗೂ ಆಸ್ಟ್ರೇಲಿಯಾದ ಪ್ರಧಾನಿ ಮಾಲ್ಕೊಮ್ ಟರ್ನಬುಲ್ ನಡುವಿನ ದ್ವಿಪಕ್ಷೀಯ ಮಾತುಕತೆ ವೇಳೆ ಈ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ.

ಸಹಿ ಹಾಕಲಾದ ಒಪ್ಪಂದಗಳು:

  • ಕ್ರೀಡಾ ಕ್ಷೇತ್ರದಲ್ಲಿ ಪರಸ್ಪರ ಸಹಕಾರ ಒಪ್ಪಂದಕ್ಕೆ ಸಹಿ
  • ಆರೋಗ್ಯ ಮತ್ತು ಔಷಧೀಯ ಕ್ಷೇತ್ರದಲ್ಲಿ ಸಹಕಾರಕ್ಕೆ ಸಹಿ
  • ಪರಿಸರ, ಹವಾಮಾನ ಮತ್ತು ವನ್ಯಜೀವಿ ಕ್ಷೇತ್ರದಲ್ಲಿ ಸಹಕಾರಕ್ಕೆ ಸಹಿ
  • ನಾಗರಿಕ ವಿಮಾನಯಾನ ಭದ್ರತೆ ಕ್ಷೇತ್ರದಲ್ಲಿ ಅಭಿವೃದ್ದಿ ಮತ್ತು ಪರಸ್ಪರ ಸಹಕಾರಕ್ಕೆ ಸಹಿ
  • ಅಂತಾರಾಷ್ಟ್ರೀಯ ಭಯೋತ್ಪಾದನೆ ಮಟ್ಟ ಹಾಕಲು ಸಹಕಾರಕ್ಕೆ ಸಹಿ
  • ಇಸ್ರೋ ಮತ್ತು ಆಸ್ಟ್ರೇಲಿಯಾದ ಜಿಯೋಸೈನ್ಸ್ ನಡುವೆ ಭೂವೀಕ್ಷಣೆ ಹಾಗೂ ಉಪಗ್ರಹ ನ್ಯಾವಿಗೇಷನ್ ಸಂಬಂಧಿಸಿದಂತೆ ಸಹಿ ಹಾಕಲಾಗಿದೆ.

ಕೇಂದ್ರ ಪ್ರಾಯೋಜಿತ ಯೋಜನೆಗಳ ಸಂಖ್ಯೆ 28ಕ್ಕೆ ಇಳಿಕೆ

ಕೇಂದ್ರ ಪ್ರಾಯೋಜಿತ ಯೋಜನೆಗಳನ್ನು ಕೇಂದ್ರ ಸರ್ಕಾರ 66 ರಿಂದ 28ಕ್ಕೆ ಇಳಿಸಿದೆ. 2016-17ನೇ ಸಾಲಿನಿಂದಲೇ ಈ ನಿರ್ಣಯ ಜಾರಿಗೆ ಬರಲಿದೆ. ಕೇಂದ್ರ ಪ್ರಾಯೋಜಿತ ಯೋಜನೆಗಳ ತರ್ಕಬದ್ದತೆಗೆ ಮುಖ್ಯಮಂತ್ರಿಗಳ ಉಪಸಮಿತಿ ಶಿಫಾರಸ್ಸಿನ ಮೇರಿಗೆ ಯೋಜನೆಗಳ ಸಂಖ್ಯೆಯನ್ನು 66 ರಿಂದ 28ಕ್ಕೆ ಇಳಿಸಲಾಗಿದೆ.

ಪ್ರಮುಖಾಂಶಗಳು:

ಕೇಂದ್ರ ಪ್ರಾಯೋಜಿತ ಯೋಜನೆಗಳನ್ನು ಕೋರ್ ಸ್ಕೀಂ (Core Scheme), ಕೋರ್ ಆಫ್ ದಿ ಕೋರ್ (Core of the core) ಮತ್ತು ಐಚ್ಚಿಕ ಯೋಜನೆಗಳೆಂದು ವಿಂಗಡಿಸಲಾಗಿದೆ. ಇವುಗಳಲ್ಲಿ ಕೋರ್ ಯೋಜನೆಗಳು 20, ಕೋರ್ ಆಫ್ ದಿ ಕೋರ್ 6 ಹಾಗೂ 2 ಐಚ್ಚಿಕ ಯೋಜನೆಗಳು ಸೇರಿವೆ.

  • ಕೋರ್ ಯೋಜನೆಗಳು: ಕೋರ್ ಯೋಜನೆಗಳಿಗೆ ಕೇಂದ್ರ ಮತ್ತು ರಾಜ್ಯದ ಪಾಲು 60:40 ಇರಲಿದೆ. ಈಶಾನ್ಯ ಹಾಗೂ ಹಿಮಾಲಯ ರಾಜ್ಯಗಳಿಗೆ 90:10 ಇರಲಿದೆ.
  • ಕೋರ್ ಆಫ್ ದಿ ಕೋರ್ ಯೋಜನೆಗಳು: ಈ ಯೋಜನೆಗಳಿಗೆ ಸಂಪೂರ್ಣ ಹಣವನ್ನು ಕೇಂದ್ರ ಸರ್ಕಾರವೇ ಭರಿಸಲಿದೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ, ರಾಷ್ಟ್ರೀಯ ಸಾಮಾಜಿಕ ಸಹಾಯ ಯೋಜನೆ, ವಿಕಲಚೇತನರ ರಾಷ್ಟ್ರೀಯ ಕಾರ್ಯಕ್ರಮ ಇವು ಈ ಯೋಜನೆಯಡಿ ಬರಲಿವೆ.
  • ಐಚ್ಚಿಕ ಯೋಜನೆಗಳು: ಸಾಮಾಜಿಕ ರಕ್ಷಣೆ ಮತ್ತು ಸಾಮಾಜಿಕ ಸೇರ್ಪಡೆ ಯೋಜನೆಗಳು ಇದರಡಿ ಬರಲಿವೆ. ಈ ಯೋಜನೆಗೆ ಕೇಂದ್ರ ಮತ್ತು ರಾಜ್ಯಗಳು 50:50 ಅನುಪಾತದಲ್ಲಿ ಖರ್ಚನ್ನು ಭರಿಸಲಿವೆ. ಈಶಾನ್ಯ ರಾಜ್ಯಗಳಿಗೆ ಈ ಅನುಪಾತ 80:20 ಇರಲಿದೆ.

ಕೇಂದ್ರ ಪ್ರಾಯೋಜಿತ ಯೋಜನೆಗಳೆಂದರೇನು?

ಕೇಂದ್ರ ಪ್ರಾಯೋಜಿತ ಯೋಜನೆಗಳೆಂದರೆ ಯೋಜನೆಯ ಬಹು ಪಾಲನ್ನು ಕೇಂದ್ರ ಸರ್ಕಾರ ಭರಿಸಿ ನಿಗದಿಪಡಿಸಿದ ಹಣವನ್ನು ರಾಜ್ಯ ಸರ್ಕಾರ ಭರಿಸಿ ಹಾಗೂ ರಾಜ್ಯ ಸರ್ಕಾರ ಅನುಷ್ಟಾನಗೊಳಿಸುವ ಯೋಜನೆಗಳಾಗಿವೆ.

ಚೂರು ಪಾರು:

  • ಟ್ವೀಟರ್ ನಿಂದ ಟ್ವೀಟರ್ ಲೈಟ್: ಸಾಮಾಜಿಕ ಸಂಪರ್ಕ ಜಾಲ ತಾಣ ಟ್ವೀಟರ್‌ಲಘು ಮಾದರಿಯಲ್ಲಿ ಇರುವ ‘ಟ್ವೀಟರ್‌ ಲೈಟ್‌’ಗೆ ದೇಶದಲ್ಲಿ ಚಾಲನೆ ನೀಡಲಾಗಿದೆ.ಟ್ವೀಟರ್‌ ಆ್ಯಪ್‌ಗೆ ಹೋಲಿಸಿದರೆ, ಶೇ 70 ರಷ್ಟು ಕಡಿಮೆ ಡೇಟಾ ಬಳಸುವ  ಮತ್ತು ಶೇ 30ರಷ್ಟು ವೇಗವಾಗಿ ಕಾರ್ಯನಿರ್ವಹಿಸುವ ಈ ತಾಣವು ಕನ್ನಡವೂ ಸೇರಿದಂತೆ ಒಟ್ಟು 42 ಭಾಷೆಗಳಲ್ಲಿ ಲಭ್ಯ ಇರಲಿದೆ. ಹಿಂದಿ, ಬಂಗಾಲಿ, ತಮಿಳು, ಗುಜರಾತಿ ಮತ್ತು ಮರಾಠಿ ಭಾಷೆಗಳಲ್ಲೂ ಟ್ವೀಟ್‌ ಮಾಡುವ  ಸೌಲಭ್ಯ ಇರಲಿದೆ.
  • 327 ದಿನಗಳಲ್ಲಿ ಸುಮಾರು 6,065 ಪ್ರಕರಣಗಳನ್ನು ವಿಲೇವಾರಿ ಮಾಡಿ ದಾಖಲೆ: ಮುಜಾಫರ್‌ನಗರದ ಕೌಟುಂಬಿಕ ನ್ಯಾಯಾಲಯ 327 ದಿನಗಳಲ್ಲಿ ಸುಮಾರು 6,065 ಪ್ರಕರಣಗಳನ್ನು ವಿಲೇವಾರಿ ಮಾಡಿದೆ. ಆ ಮೂಲಕ ಮೂಲಕ ಗಿನ್ನಿಸ್‌ ದಾಖಲೆ ಸೇರಿದೆ. ‘ಕೌಟುಂಬಿಕ ನ್ಯಾಯಾಲಯದಲ್ಲಿ 903 ದಂಪತಿಗಳು ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಂಡು ಮತ್ತೆ ಒಂದಾಗಿದ್ದಾರೆ’.
  • ಭಾರತ ಬಾಕ್ಸಿಂಗ್ ಫೆಡರೇಷನ್ ಗೆ ಐಒಎ ಮಾನ್ಯತೆ: ಭಾರತ ಬಾಕ್ಸಿಂಗ್ ಫೆಡರೇಷನ್‌ಗೆ ಭಾರತ ಒಲಿಂಪಿಕ್‌ ಸಂಸ್ಥೆ (ಐಒಎ) ಮಾನ್ಯತೆ ಪಡೆಯುವಲ್ಲಿ ಯಶಸ್ವಿಯಾಗಿದೆ. ‘ಬಾಕ್ಸಿಂಗ್ ಫೆಡರೇಷನ್‌ಗೆ ಮಾನ್ಯತೆ ನೀಡುವಂತೆ ಫೆಬ್ರುವರಿ 7ರಂದು ಅಂತರರಾಷ್ಟ್ರೀಯ ಒಲಿಂಪಿಕ್‌ ಸಮಿತಿ ಪತ್ರ ಬರೆದಿತ್ತು. ಈಗ ಐಒಎ ಕೂಡ ಮಾನ್ಯತೆ ಕೊಟ್ಟಿದೆ. ಇದರಿಂದ ಭಾರತದ ಬಾಕ್ಸರ್‌ಗಳು ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ರಾಷ್ಟ್ರಧ್ವಜದ ಅಡಿ ಸ್ಪರ್ಧಿಸಲು ಅವಕಾಶ ಸಿಕ್ಕಿದೆ.
  • ಚೀನಾ ಗ್ರ್ಯಾಂಡ್‌ ಪ್ರಿ ಫಾರ್ಮುಲಾ–1 ರೇಸ್‌ನಲ್ಲಿ ಹ್ಯಾಮಿಲ್ಟನ್ ಗೆ ಪ್ರಶಸ್ತಿ: ಮರ್ಸಿಡೀಸ್‌ ತಂಡದ ಮೋಟಾರು ಕಾರು ಸಾಹಸಿ ಲೂಯಿಸ್‌ ಹ್ಯಾಮಿಲ್ಟನ್‌ ಅವರು ಚೀನಾ ಗ್ರ್ಯಾಂಡ್‌ ಪ್ರಿ ಫಾರ್ಮುಲಾ–1 ರೇಸ್‌ನಲ್ಲಿ ಪ್ರಶಸ್ತಿ ಪಡೆದುಕೊಂಡರು. ಈ ಮೂಲಕ ಶಾಂಘೈನಲ್ಲಿ ಐದನೇ ಕಿರೀಟ ಮುಡಿಗೇರಿಸಿಕೊಂಡ ಸಾಧನೆಗೂ ಭಾಜನರಾಗಿದ್ದಾರೆ. ಹ್ಯಾಮಿಲ್ಟನ್‌ ಅವರು ವೃತ್ತಿ ಬದುಕಿನಲ್ಲಿ ಗೆದ್ದ 54ನೇ ರೇಸ್‌ ಇದಾಗಿದೆ.

One Thought to “ಪ್ರಚಲಿತ ವಿದ್ಯಮಾನಗಳು-ಏಪ್ರಿಲ್,12,2017”

  1. Mahesh

    Sir april month current events update

Leave a Comment

This site uses Akismet to reduce spam. Learn how your comment data is processed.