ವಿಶ್ವದ ಅತಿದೊಡ್ಡ ಬೀದಿ ದೀಪ ಕಾರ್ಯಕ್ರಮಕ್ಕೆ ಕೇಂದ್ರ ಇಂಧನ ಸಚಿವಾಲಯದಿಂದ ಚಾಲನೆ

ವಿಶ್ವದ ಅತಿದೊಡ್ಡ ಬೀದಿ ದೀಪ ಕಾರ್ಯಕ್ರಮಕ್ಕೆ ಕೇಂದ್ರ ಇಂಧನ ಸಚಿವಾಲಯ ಚಾಲನೆ ನೀಡಿದೆ. ದಕ್ಷಿಣ ಏಷ್ಯಾದ ಮುನಿಸಿಪಲ್ ಕಾರ್ಪೋರೇಶನ್ ವ್ಯಾಪ್ತಿಯಲ್ಲಿ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿಲಾಯಿತು. ಎಲ್ಇಡಿ ಆಧರಿತ ಬೀದಿ ದೀಪ ರಾಷ್ಟ್ರೀಯ ಕಾರ್ಯಕ್ರಮದಡಿ ಇದನ್ನು ಅನುಷ್ಟಾನಗೊಳಿಸಲಾಗುತ್ತಿದ್ದು, ಇಂಧನ ಸಚಿವಾಲಯದಡಿ ಜಂಟಿ ನೇತೃತ್ವದಲ್ಲಿ ಎನರ್ಜಿ ಎಫಿಶಿಯೆನ್ಸಿ ಸರ್ವೀಸ್ ಲಿಮಿಟೆಡ್ (EESL) ಈ ಕಾರ್ಯಕ್ರಮವನ್ನು ಅನುಷ್ಟಾನಗೊಳಿಸುತ್ತಿದೆ.

ಪ್ರಮುಖಾಂಶಗಳು:

  • ಬೀದಿ ದೀಪ ರಾಷ್ಟ್ರೀಯ ಕಾರ್ಯಕ್ರಮದಡಿ ದಕ್ಷಿಣ ದೆಹಲಿ ಮುನಿಸಿಪಾಲ್ ಕಾರ್ಪೋರೇಶನ್ ವ್ಯಾಪ್ತಿಯಲ್ಲಿ 2 ಲಕ್ಷ ಬೀದಿ ದೀಪಗಳನ್ನು ಎಲ್ಇಡಿ ದೀಪಗಳನ್ನಾಗಿ ಪರಿವರ್ತಿಸಲಾಗುವುದು. ಇದರಿಂದ ವಾರ್ಷಿಕ 2.65 ಕೋಟಿ ಕಿಲೋ ವ್ಯಾಟ್ ವಿದ್ಯುತ್ ಉಳಿತಾಯ, ಜೊತೆಗೆ 22,000 ಹಸಿರು ಮನೆ ಅನಿಲ ಹೊರಸೂಸುವಿಕೆ ತಗ್ಗಲಿದೆ.
  • ಈ ಕಾರ್ಯಕ್ರಮದಿಂದ ದಕ್ಷಿಣ ದೆಹಲಿ ಮುನಿಸಿಪಾಲ್ ಕಾರ್ಪೋರೇಶನ್ ಪ್ರದೇಶದ ನಿವಾಸಿಗಳಿಗೆ ಕತ್ತಲೆಯಿಂದ ಮುಕ್ತಿದೊರೆಯಲಿದೆ. ಅಲ್ಲದೇ ಭದ್ರತೆ ಸಹ ಹೆಚ್ಚಾಗಲಿದೆ.
  • ಮುಂದಿನ ಏಳು ವರ್ಷಗಳಲ್ಲಿ ರೂ 135 ಕೋಟಿ ಉಳಿತಾಯವಾಗಲಿದೆ. ಈ ಮೊತ್ತವನ್ನು ಇತರೆ ಸಾಮಾಜಿಕ ಅಭಿವೃದ್ದಿಗೆ ಬಳಸಿಕೊಳ್ಳಬಹುದು.

ಎಲ್ಇಡಿ ಆಧರಿತ ಬೀದಿ ದೀಪ ರಾಷ್ಟ್ರೀಯ ಕಾರ್ಯಕ್ರಮ

  • ಈ ಕಾರ್ಯಕ್ರಮದಡಿ ದೇಶದ ವಿವಿಧ ನಗರಗಳಲ್ಲಿನ ಬೀದಿ ದೀಪಗಳಲ್ಲಿ ಸಾಂಪ್ರದಾಯಿಕ ಬಲ್ಬ್ ಗಳ ಬದಲಿಗೆ ಎಲ್ಇಡಿ ಬಲ್ಬ್ ಗಳನ್ನು ಅಳವಡಿಸುವ ಉದ್ದೇಶವನ್ನು ಹೊಂದಲಾಗಿದೆ.
  • ಈ ಕಾರ್ಯಕ್ರಮ ಕೇಂದ್ರ ಸರ್ಕಾರದ ಇಂಧನ ದಕ್ಷತೆ ಸಂದೇಶವನ್ನು ಸಾರುವ ಪ್ರಯತ್ನದ ಒಂದು ಉಪಕ್ರಮವಾಗಿದೆ. ಇದರಿಂದ ಇಂಧನ ಉಳಿತಾಯ ಹಾಗೂ ಹಸಿರು ಮನೆ ಅನಿಲ ಹೊರಸುಸುವಿಕೆ ಗಣನೀಯವಾಗಿ ತಗ್ಗಲಿದೆ.
  • ಪ್ರಸ್ತುತ ಈ ಕಾರ್ಯಕ್ರಮ ಪಂಜಾಬ್, ಹಿಮಾಚಲ ಪ್ರದೇಶ, ಉತ್ತರ ಪ್ರದೇಶ, ಅಸ್ಸಾಂ, ತ್ರಿಪುರ, ಜಾರ್ಖಂಡ್, ಚತ್ತೀಸಘರ್, ತೆಲಂಗಣ, ಆಂಧ್ರ ಪ್ರದೇಶ, ಕೇರಳ, ಗೋವಾ, ಮಹಾರಾಷ್ಟ್ರ, ಗುಜರಾತ್ ಮತ್ತು ರಾಜಸ್ತಾನದಲ್ಲಿ ಜಾರಿಯಲ್ಲಿದೆ.

ಎಲ್ಇಡಿ ಬಲ್ಬ್ ಗಳು ದೀರ್ಘಕಾಲ ಬಾಳಿಕೆ ಬರುವ ಬಲ್ಬ್ ಗಳಾಗಿವೆ. ಎಲ್ಇಡಿ ಬಲ್ಬ್ ಸಾಮಾನ್ಯ ಬಲ್ಬ್ ಗಳಿಗಿಂತ 50 ಪಟ್ಟು ಹೆಚ್ಚು ಹಾಗೂ ಸಿಎಫ್ಎಲ್ ಬಲ್ಬ್ ಗಳಿಗಿಂತ 8-10 ಪಟ್ಟು ಹೆಚ್ಚು ಬಾಳಿಕೆ ಬರುತ್ತವೆ. ಇವುಗಳ ಬಳಕೆಯಿಂದ ಇಂಧನ ಉಳಿತಾಯ ಹಾಗೂ ವಿದ್ಯುತ್ ದರ ಉಳಿತಾಯ ಸಹ ಆಗಲಿದೆ.

ಲಿಮ್ಕಾ ದಾಖಲೆ ಸೇರ್ಪಡೆಗೊಂಡ ಕೆಎಸ್ಆರ್ ಟಿಸಿ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್ಟಿಸಿ) ತನ್ನ ಸಾಧನೆಯಿಂದ ಮತ್ತೊಂದು ಗೌರವಕ್ಕೆ ಪಾತ್ರವಾಗಿದೆ. ಅತಿ ಕಡಿಮೆ ಅವಧಿಯಲ್ಲಿ ಹೆಚ್ಚು ಪ್ರಶಸ್ತಿಗಳಿಗೆ ಭಾಜನವಾಗುವ ಮೂಲಕ ಲಿಮ್ಕಾ ದಾಖಲೆ ಪುಟಕ್ಕೆ ಸೇರ್ಪಡೆಗೊಂಡಿದೆ. ಈ ಗೌರವಕ್ಕೆ ಪಾತ್ರವಾದ ದೇಶದ ಮೊದಲ ರಸ್ತೆ ಸಾರಿಗೆ ಸಂಸ್ಥೆ ಎಂಬ ಹಿರಿಮೆಯನ್ನು ತನ್ನದಾಗಿಸಿಕೊಂಡಿದೆ.

ಪ್ರಮುಖಾಂಶಗಳು:

  • ಜುಲೈ 2015 ನಿಂದ ಜೂನ್ 2016ರ ಜೂನ್ ಒಂದು ವರ್ಷದ ಅವಧಿಯಲ್ಲಿ ಕೆಎಸ್‌ಆರ್ಟಿಸಿ 107 ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಈ ಹಿನ್ನೆಲೆಯಲ್ಲಿ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ಇದು ದಾಖಲಾಗಿದೆ.
  • 2016ರ ಜುಲೈನಿಂದ ಈವರೆಗೆ ನಿಗಮಕ್ಕೆ 59 ಪ್ರಶಸ್ತಿಗಳು ಸಂದಿವೆ. ಅಂದರೆ ಒಟ್ಟಾರೆ 165 ಪ್ರಶಸ್ತಿಗಳು ನಮ್ಮ ಕೆಎಸ್ಆರ್ಟಿಸಿಗೆ ಬಂದಿವೆ.
  • ಇತ್ತೀಚೆಗೆ ಕೇಂದ್ರ ಸರ್ಕಾರ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸಚಿವಾಲಯ ಆಂಧ್ರಪ್ರದೇಶದ ವಿಶಾಖಪಟ್ಟಣನಲ್ಲಿ ಹಮ್ಮಿಕೊಂಡಿದ್ದ 20ನೇ ರಾಷ್ಟ್ರೀಯ ಇ-ಆಡಳಿತ ಸಮ್ಮೇಳನದಲ್ಲಿ ಕೆಎಸ್‌ಆರ್ಟಿಸಿಗೆ ಲಭಿಸಿದೆ. ರಾಷ್ಟ್ರೀಯ ಇ-ಆಡಳಿತ ಪ್ರಶಸ್ತಿ ಪಡೆಯುತ್ತಿರುವ ದೇಶದ ಮೊದಲ ಸಾರಿಗೆ ಸಂಸ್ಥೆ ಎಂಬ ಖ್ಯಾತಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಭಾಜನವಾಗಿದೆ.

ಬಾಬರ್-III ಕ್ಷಿಪಣಿ ಯಶಸ್ವಿಯಾಗಿ ಪರೀಕ್ಷೆ ನಡೆಸಿದ ಪಾಕಿಸ್ತಾನ

ಪಾಕಿಸ್ತಾನ ಇದೇ ಮೊದಲ ಬಾರಿಗೆ ಜಲಂತರ್ಗಾಮಿಯಿಂದ ಬಾಬರ್-III ಕ್ಷಿಪಣಿಯನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ. ಈ ಪ್ರಯೋಗದಿಂದ ಪಾಕಿಸ್ತಾನಕ್ಕೆ ಅತಿ ಅಗತ್ಯವಾಗಿ ಬೇಕಿದ್ದ ಕ್ಷಿಪಣೆ ಶಕ್ತಿ ದೊರೆತಾಂಗಿದೆ ಎಂದು ಹೇಳಲಾಗಿದೆ. ಬಾಬರ್-III ಕ್ಷಿಪಣಿಯನ್ನು ಹಿಂದೂ ಮಹಾಸಾಗರದಲ್ಲಿ ಗೌಪ್ಯ ಸ್ಥಳದಿಂದ ಉಡಾವಣೆ ಮಾಡಲಾಗಿದೆ.

ಪ್ರಮುಖಾಂಶಗಳು:

  • ಬಾಬರ್-3 ಕ್ಷಿಪಣಿ ಬಾಬರ್-2 ರ ಮುಂದುವರಿದ ಭಾಗವಾಗಿದ್ದು ಸಮುದ್ರ, ಭೂಮಿ ಮತ್ತು ಆಗಸದಿಂದ ಎದುರಾಗುವ ಪರಮಾಣು ದಾಳಿ ಎದುರಿಸುವ ಸಾಮರ್ಥ್ಯ ಹೊಂದಿದೆ. ಈ ಕ್ಷಿಪಣಿಗೆ ಮೊಘಲ್ ಸಾಮ್ರಾಜ್ಯದ ಮೊದಲ ದೊರೆ “ಝಯೀರ್-ಉದ್-ದಿನ್-ಬಾಬರ್” ಹೆಸರನ್ನು ಇಡಲಾಗಿದೆ.
  • ವರದಿಯ ಪ್ರಕಾರ ಅಣ್ವಸ್ತ್ರ ಸಿಡಿತಲೆ ಹೊತ್ಯೊಯ್ಯುವ ಸಾಮರ್ಥ್ಯವಿರುವ ಕ್ರೂಸ್ ಕ್ಷಿಪಣಿ (ಎಸ್‌ಎಲ್ ಸಿಎಂ) ಬಾಬರ್-3 450 ಕಿಮೀ ಸಾಗುವ ಸಾಮರ್ಥ್ಯ ಹೊಂದಿದೆ.
  • ಭೂಮಿಯ ಮೂಲಕ ಎದುರಾಗುವ ಪರಮಾಣು ದಾಳಿಯನ್ನು ಎದುರಿಸುವ ಸಾಮರ್ಥ್ಯಹೊಂದಿರುವ ಬಾಬರ್-2 ಕ್ಷಿಪಣಿಯನ್ನು ಕಳೆದ ವರ್ಷ ಪಾಕಿಸ್ತಾನ ಯಶಸ್ವಿಯಾಗಿ ಉಡಾವಣೆ ಮಾಡಿತ್ತು.
  • ಈ ಮೂಲಕ ಸಮುದ್ರ, ಭೂಮಿ ಮತ್ತು ಆಗಸದಿಂದ ಎದುರಾಗುವ ಪರಮಾಣು ದಾಳಿ ಎದುರಿಸುವ ಸಾಮರ್ಥ್ಯವನ್ನು ಹೊಂದಿರುವ ರಾಷ್ಟ್ರಗಳ ಪಟ್ಟಿಗೆ ಪಾಕಿಸ್ತಾನವು ಸೇರ್ಪಡೆಯಾಗಿದೆ.

ಭಾರತೀಯ ರೈಲ್ವೆಯಿಂದ “ಐಆರ್ಸಿಟಿಸಿ ರೈಲ್ ಕನೆಕ್ಟ್ ಆ್ಯಪ್” ಬಿಡುಗಡೆ

ಡಿಜಿಟಲ್ ವ್ಯವಸ್ಥೆ ಮೂಲಕ ರೈಲು ಟಿಕೆಟ್ ಪಡೆಯುವುದನ್ನು ಸುಲಭವಾಗಿಸಲು  ಭಾರತೀಯ ರೈಲ್ವೆ “ಐಆರ್ಸಿಟಿಸಿ ರೈಲು ಕನೆಕ್ಟ್ ಆ್ಯಪ್” ಅನ್ನು ಅಭಿವೃದ್ದಿಪಡಿಸಿದೆ. ರೈಲ್ವೆ ಸಚಿವ ಸುರೇಶ್ ಪ್ರಭು ರವರು ಈ ಆ್ಯಪ್ ಗೆ ಚಾಲನೆ ನೀಡಿದರು. ಪ್ರಸ್ತುತ ಇರುವ ಐಆರ್ಸಿಟಿಸಿ ಕನೆಕ್ಟ್ ಆ್ಯಪ್ ಬದಲಾಗಿ ಮೊಬೈಲ್ ಆಧರಿತ ಈ ಹೊಸ ಆ್ಯಪ್ ಅನ್ನು ಬಿಡುಗಡೆಗೊಳಿಸಲಾಗಿದೆ. ರೈಲು ಟಿಕೆಟ್ ಬುಕ್ಕಿಂಗ್ ವಿಧಾನವನ್ನು ಸುಲಭಗೊಳಿಸಿ ಬಳಕೆದಾರ ಸ್ನೇಹಿಯನ್ನಾಗಿಸಲು ಇದನ್ನು ಅಭಿವೃದ್ದಿಪಡಿಸಲಾಗಿದೆ.

ಪ್ರಮುಖಾಂಶಗಳು:

  • ಮುಂದಿನ ತಲೆಮಾರಿನ ಇ-ಟಿಕೆಟಿಂಗ್ ವ್ಯವಸ್ಥೆಯಲ್ಲಿ ದಕ್ಷತೆ ಹಾಗೂ ಭದ್ರತೆಯನ್ನು ಹೆಚ್ಚಿಸುವ ಸಲುವಾಗಿ ಈ ಆ್ಯಪ್ ಅನ್ನು ಅಭಿವೃದ್ದಿಪಡಿಸಲಾಗಿದೆ.
  • ಇದೊಂದು ಪ್ರಯಾಣಿಕರ ಸ್ನೇಹಿ ಆ್ಯಪ್ ಆಗಿದ್ದು, ಸಾಮಾನ್ಯ, ತತ್ಕಾಲ್ ಮತ್ತು ಪ್ರೀಮಿಯಂ ತತ್ಕಾಲ್ ಕೋಟದಡಿ ಟಿಕೆಟ್ ಬುಕ್ ಮಾಡಬಹುದಾಗಿದೆ.
  • ಈ ಆ್ಯಪ್ ನಲ್ಲಿ ಸುಮಾರು 40 ಹೆಚ್ಚು ಬ್ಯಾಂಕ್ ಗಳ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಹಾಗೂ ನೆಟ್ ಬ್ಯಾಂಕಿಂಗ್ ಮೂಲಕ ಪಾವತಿಯನ್ನು ಮಾಡಬಹುದಾಗಿದೆ.

2 Thoughts to “ಪ್ರಚಲಿತ ವಿದ್ಯಮಾನಗಳು-ಜನವರಿ-13,2017”

Leave a Comment

This site uses Akismet to reduce spam. Learn how your comment data is processed.