14ನೇ ಪ್ರವಾಸಿ ಭಾರತೀಯ ದಿವಸ್ ಗೆ ಬೆಂಗಳೂರಿನಲ್ಲಿ ಚಾಲನೆ

ದೇಶದ ಐಟಿ ರಾಜಧಾನಿ ಬೆಂಗಳೂರಿನಲ್ಲಿ 14ನೇ ಪ್ರವಾಸಿ ಭಾರತೀಯ ದಿವಸಕ್ಕೆ ಅದ್ದೂರಿ ಚಾಲನೆ ನೀಡಲಾಯಿತು. “ರಿ ಡಿಫೈನಿಂಗ್ ಎಂಗೇಂಜ್ ಮೆಂಟ್ ವಿತ್ ದಿ ಇಂಡಿಯನ್ ಡಯಾಸ್ಪೋರ” ಇದು ಈ ವರ್ಷ ಪ್ರವಾಸಿ ದಿವಸದ ಧ್ಯೇಯವಾಕ್ಯ. ಮೂರು ದಿನಗಳ ಪ್ರವಾಸಿ ಭಾರತೀಯ ದಿವಸದ ಮೊದಲ ದಿನದಂದು ಯುವ ಪ್ರವಾಸಿ ಭಾರತೀಯ ದಿವಸಕ್ಕೆ ಚಾಲನೆ ನೀಡಲಾಯಿತು. ಕೇಂದ್ರ ಯುವಜನ ವ್ಯವಹಾರ ಹಾಗೂ ಕ್ರೀಡಾ ಸಚಿವ (ಸ್ವತಂತ್ರ ನಿರ್ವಹಣೆ) ವಿಜಯ್‌ಗೋಯಲ್‌ ಚಾಲನೆ ನೀಡಿದರು. ಪ್ರಧಾನಿ ನರೇಂದ್ರ ಮೋದಿರವರು ಮುಖ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು,  ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಪೋರ್ಚಗಲ್‌ ಪ್ರಧಾನಿ ಡಾ.ಅಂತೋನಿಯೋ ಕೋಸ್ಟಾ ಮುಖ್ಯ ಅತಿಥಿಯಾಗಲಿದ್ದಾರೆ.
ಪ್ರವಾಸಿ ಭಾರತೀಯ ದಿವಸ:

  • ಪ್ರವಾಸಿ ಭಾರತೀಯ ದಿವಸವನ್ನು 2003ರಿಂದ ಪ್ರತಿ ವರ್ಷ ಆಚರಿಸಲಾಗುತ್ತಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯ ಪ್ರವಾಸಿ ಭಾರತೀಯ ದಿವಸವನ್ನು ಆಯೋಜಿಸುತ್ತಿದ್ದು, ವಿದೇಶದಲ್ಲಿ ನೆಲೆಸಿರುವ ಭಾರತೀಯ ಸಮುದಾಯ ಹಾಗೂ ಸರ್ಕಾರದ ನಡುವೆ ಹೊಂದಾಣಿಕೆಯನ್ನು ಉತ್ತಮಪಡಿಸುವ ಕಾರಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ.
  • ಮಹಾತ್ಮಗಾಂಧಿ ರವರು ದಕ್ಷಿಣ ಆಫ್ರಿಕಾದಿಂದ ಜನವರಿ 9, 1915ರಂದು ಭಾರತಕ್ಕೆ ಹಿಂತಿರುಗಿ ಬಂದ ಕಾರಣ ಜನವರಿ 9 ರಂದು ಪ್ರವಾಸಿ ಭಾರತೀಯ ದಿವಸವನ್ನು ಆಯೋಜಿಸಲಾಗುತ್ತಿದೆ.

ಅನಿವಾಸಿ ಕನ್ನಡರಿಗೆ ಕಾರ್ಡ್” ರಾಜ್ಯ ಸರ್ಕಾರ ಘೋಷಣೆ:

  • ಕರ್ನಾಟಕದಲ್ಲಿ ₹250 ಕೋಟಿಗಿಂತ ಹೆಚ್ಚು ಬಂಡವಾಳ ಹೂಡುವ ಅನಿವಾಸಿ ಭಾರತೀಯರಿಗೆ ವಿವಿಧ ರಿಯಾಯ್ತಿ ಮತ್ತು ವಿಶೇಷ ಪ್ರೋತ್ಸಾಹ ಧನ ನೀಡುವುದಾಗಿ ರಾಜ್ಯ ಸರ್ಕಾರ ಪ್ರವಾಸಿ ದಿವಸದಂದು ಘೋಷಿಸಿದೆ. 14ನೇ ಪ್ರವಾಸಿ ದಿನದಂದು ಮುಖ್ಯಮಂತ್ರಿ ಸಿದ್ದರಾಮಯ್ಯರವರು ಅನಿವಾಸಿ ಭಾರತೀಯ ನೀತಿಯನ್ನು ಬಿಡುಗಡೆಗೊಳಿಸಿದರು. ನೀತಿಯ ಪ್ರಮುಖಾಂಶಗಳು ಇಲ್ಲಿವೆ.
  • ಅನಿವಾಸಿ ಭಾರತೀಯರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ರಾಜ್ಯ ಮಟ್ಟದಲ್ಲಿ ಅನಿವಾಸಿ ಭಾರತೀಯ ಸಮಿತಿ, ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ.
  • ಅನಿವಾಸಿ ಕನ್ನಡಿಗರಿಗೆ (ಎನ್‌.ಆರ್.ಕೆ) ಅಧಿಕೃತ ಗುರುತಿನ ಚೀಟಿಯಾಗಿ ‘ಅನಿವಾಸಿ ಕನ್ನಡಿಗ ಕಾರ್ಡ್’ ವಿತರಣೆ.
  • ಅನಿವಾಸಿ ಕನ್ನಡಿಗರು ಮತ್ತು ರಾಜ್ಯದ ವಿವಿಧ ಸಂಘಟನೆಗಳೊಂದಿಗೆ ಸಂಪರ್ಕ ಕಲ್ಪಿಸುವ ಜಾಲತಾಣ ಸೃಷ್ಟಿ.
  • ಅನಿವಾಸಿ ಕನ್ನಡಿಗರಿಗೆ ಅಪಘಾತ ಸಂಭವಿಸಿದರೆ ₹ 2 ಲಕ್ಷಗಳವರೆಗೆ ವಿಮಾ ಸೌಲಭ್ಯ.
  • ಕರ್ನಾಟಕ ಮತ್ತು ಅನಿವಾಸಿ ಕನ್ನಡಿಗರಿಗೆ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮ ಆಯೋಜನೆ. ಅವರಿಗಾಗಿ ವಿಶೇಷ ಪ್ರವಾಸ ಏರ್ಪಡಿಸುವುದು.
  • ‘ನಮ್ಮ ಊರು, ನಮ್ಮ ನಾಡು’ ಯೋಜನೆ ಆರಂಭ ಮಾಡಲಾಗುವುದು. ಇದರಡಿ ಕರ್ನಾಟಕದಲ್ಲಿ ಸೇವೆ ಸಲ್ಲಿಸಲು ಆಸಕ್ತಿ ಇರುವ ಅನಿವಾಸಿ ಕನ್ನಡಿಗರಿಗೆ ಉತ್ತೇಜನ ನೀಡುವುದು.
  • ವಿಶ್ವದೆಲ್ಲೆಡೆ ಕನ್ನಡ ಕೂಟ ಆರಂಭಿಸಲು ಪ್ರೋತ್ಸಾಹ. ಕನ್ನಡ ಭಾಷೆ ಮತ್ತು ಸಂಸ್ಕೃತಿ ರಕ್ಷಿಸಲು ಉತ್ತೇಜನ ನೀಡುವುದು.
  • ಉತ್ತಮ ಸಾಧನೆ ಮಾಡಿದ ಒಬ್ಬ ಅನಿವಾಸಿ ಕನ್ನಡಿಗನಿಗೆ ಪ್ರತಿ ವರ್ಷ ಪ್ರವಾಸಿ ಭಾರತ್ ದಿವಸ್ ಕಾರ್ಯಕ್ರಮದಲ್ಲಿ ಕರ್ನಾಟಕ ಸರ್ಕಾರದ ವತಿಯಿಂದ ‘ವರ್ಷದ ಅನಿವಾಸಿ ಕನ್ನಡಿಗ ಪ್ರಶಸ್ತಿ’ ಪ್ರದಾನ.
  • ಸಾಗರೋತ್ತರ ದೇಶಗಳಲ್ಲಿ ಕನ್ನಡಿಗರು ಉದ್ಯೋಗ ಪಡೆಯಲು ಪ್ರೋತ್ಸಾಹ. ವಿದೇಶದಲ್ಲಿ ಉನ್ನತ ಶಿಕ್ಷಣಕ್ಕೆ, ಉದ್ಯೋಗಕ್ಕೆ ತೆರಳುವವರಿಗೆ ಪೂರ್ವಭಾವಿ ಮಾರ್ಗದರ್ಶನ.
  • ಅನಿವಾಸಿ ಕನ್ನಡಿಗರು ಎದುರಿಸುತ್ತಿರುವ ಕಾನೂನು ವಿವಾದ, ವಾಣಿಜ್ಯ ವಿವಾದಗಳನ್ನು ತ್ವರಿತವಾಗಿ ಬಗೆಹರಿಸಲು ಕಾನೂನು ಸಲಹೆಗಾರರು ಮತ್ತು ವಕೀಲರ ಮೂಲಕ ನೆರವು ನೀಡುವುದು.
  • ಅನಿವಾಸಿ ಕನ್ನಡಿಗರು ವಿದೇಶದಲ್ಲಿ ಮೃತರಾದರೆ, ಸ್ವದೇಶಕ್ಕೆ ಮೃತ ದೇಹ ಸಾಗಿಸಲು ವಿಮಾನ ವೆಚ್ಚವನ್ನು ಸರ್ಕಾರದಿಂದ ಭರಿಸುವುದು.

2016-17ನೇ ಸಾಲಿನಲ್ಲಿ ಭಾರತದ ಜಿಡಿಪಿ ಬೆಳವಣಿಗೆ ದರ ಶೇ 7.1%: ಸಿಎಸ್ಓ

ಕೇಂದ್ರಿಯ ಅಂಕಿ ಅಂಶ ಕಚೇರಿ ಬಿಡುಗಡೆಗೊಳಿಸಿರುವ ವರದಿಯ ಪ್ರಕಾರ ಭಾರತದ ಒಟ್ಟು ದೇಶಿಯ ಉತ್ಪನ್ನ (ಜಿಡಿಪಿ) ಬೆಳವಣಿಗೆ ಮಂದಗತಿಯಲ್ಲಿ ಇರಲ್ಲಿದ್ದು 2016-17ನೇ ಸಾಲಿನಲ್ಲಿ  ಶೇ 7.1% ರಷ್ಟು ಇರಲಿದೆ ಎಂದು ಹೇಳಿದೆ. 2015-16ನೇ ಸಾಲಿನಲ್ಲಿ ಜಿಡಿಪಿ ಬೆಳವಣಿಗೆ ದರ ಶೇ 7.6% ರಷ್ಟಿತ್ತು. ಕೈಗಾರಿಕ ವಲಯದ ಬೆಳವಣಿಗೆಯಲ್ಲಾಗಿರುವ ಕುಂಠಿತವೇ ಜಿಡಿಪಿ ದರದ ಮಂದಗತಿ ಬೆಳವಣಿಗೆಗೆ ಕಾರಣ ಎನ್ನಲಾಗಿದೆ.

ಪ್ರಮುಖಾಂಶಗಳು:

  • 2016-17ನೇ ಸಾಲಿನಲ್ಲಿ ತಲಾವಾರು ಆದಾಯ: 2015-16ನೇ ಸಾಲಿನಲ್ಲಿ ರೂ 93,293 ರಷ್ಟಿದ್ದ ಭಾರತದ ತಲಾವಾರು ಆದಾಯ 2016-17ನೇ ಸಾಲಿನಲ್ಲಿ ರೂ 1,03,007 ರಷ್ಟು ಅಂದರೆ ಶೇ 10% ರಷ್ಟು ಹೆಚ್ಚಾಗಲಿದೆ ಎಂದು ಅಂದಾಜಿಸಲಾಗಿದೆ.
  • ಕೃಷಿ, ಅರಣ್ಯ ಮತ್ತು ಮೀನುಗಾರಿಕೆ: 2016-17ನೇ ಸಾಲಿನಲ್ಲಿ ಕೃಷಿ, ಅರಣ್ಯ ಮತ್ತು ಮೀನುಗಾರಿಕೆ ಕ್ಷೇತ್ರದ ಬೆಳವಣಿಗೆ ಶೇ 4.1% ರಷ್ಟು ಇರಲಿದೆ ಎನ್ನಲಾಗಿದೆ.
  • ಉತ್ಪಾದನ ವಲಯ: 2015-16ನೇ ಸಾಲಿನಲ್ಲಿ ಶೇ 9.3% ಬೆಳವಣಿಗೆ ಕಂಡಿದ್ದ ಉತ್ಪಾದನ ವಲಯ 2016-17ನೇ ಸಾಲಿನಲ್ಲಿ ಶೇ 7.4% ರಷ್ಟಿರಲಿದೆ.
  • ಗ್ರಾಹಕ ಬೆಲೆ ಸೂಚ್ಯಂಕ: 2016-17ನೇ ಏಪ್ರಿಲ್-ನವೆಂಬರ್ ಅವಧಿಯಲ್ಲಿ ಗ್ರಾಹಕ ಬೆಲೆ ಸೂಚ್ಯಂಕದಲ್ಲಿ ಶೇ 5% ರಷ್ಟು ಏರಿಕೆಯಾಗಲಿದೆ. 

“ಉತ್ತಮ ಪರೋಪಕಾರಿ ನೀತಿ” ಜಾರಿಗೊಳಿಸಲಿರುವ ದೆಹಲಿ ಸರ್ಕಾರ

ರಸ್ತೆ ಅಪಘಾತ ಸಂತ್ರಸ್ತರಿಗೆ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ನೆರವಾಗುವಂತೆ ಜನರನ್ನು ಉತ್ತೇಜಿಸಲು ದೆಹಲಿ ಸರ್ಕಾರ “ಉತ್ತಮ ಪರೋಪಕಾರಿ ನೀತಿ (Good Samaritan Policy)”ಯನ್ನು ಅನುಮೋದಿಸಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ನೀತಿಯನ್ನು ಅಂಗೀಕರಿಸಲಾಯಿತು. ಅಪಘಾತ ಸಂದರ್ಭದಲ್ಲಿ ಸಂತ್ರಸ್ಥರಿಗೆ ನೆರವಾಗುವವರಿಗೆ ಸೂಕ್ತ ಪ್ರೋತ್ಸಾಹ ಧನವನ್ನು ನೀಡುವುದು ಹಾಗೂ ಕಾನೂನಿನ ಚೌಕಟ್ಟಿನಡಿ ರಕ್ಷಣೆ ನೀಡುವ ಅವಕಾಶವನ್ನು ನೀತಿಯಡಿ ಕಲ್ಪಿಸಲಾಗಿದೆ.

ನೀತಿಯ ಪ್ರಮುಖಾಂಶಗಳು:

  • ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಅಪಘಾತ ಸಂದರ್ಭದಲ್ಲಿ ಸಂತ್ರಸ್ತರನ್ನು ಆಸ್ಪತ್ರೆಗೆ ಸಾಗಿಸಲು ನೆರವಾಗುವವರಿಗೆ ರೂ 2000 ಪ್ರೋತ್ಸಾಹ ಧನ ಹಾಗೂ ಪ್ರಶಂಸ ಪತ್ರವನ್ನು ನೀಡಲಾಗುವುದು.
  • ಅಪಘಾತ ಸಂದರ್ಭದಂತಹ ತುರ್ತು ಪರಿಸ್ಥಿತಿಯಲ್ಲಿ ಸಂತ್ರಸ್ಥರಿಗೆ ಸೂಕ್ತ ಚಿಕಿತ್ಸೆ ಕೊಡಿಸಲು ಮುಂದಾಗುವಂತೆ ಜನರನ್ನು ಪ್ರೋತ್ಸಾಹಿಸಿ ಅಮೂಲ್ಯವಾದ ಜೀವವನ್ನು ಕಾಪಾಡುವ ಉದ್ದೇಶದಿಂದ ನೀತಿಯನ್ನು ಜಾರಿಗೆ ತರಲಾಗುತ್ತಿದೆ.
  • ವಾಸ್ತವ ಸ್ಥಿತಿಯಲ್ಲಿ ಸಾಕಷ್ಟು ಜನರು ಕಾನೂನು ಭಯ ಅಥವಾ ಪೊಲೀಸರ ತನಿಖೆ ಭಯದಿಂದ ಅಪಘಾತ ಸಂತ್ರಸ್ತರನ್ನು ರಕ್ಷಿಸಲು ಹಿಂದೆಟ್ಟು ಹಾಕುತ್ತಿರುವುದು ಸಾಮಾನ್ಯವಾಗಿದೆ. ಈ ನೀತಿ ಜನರ ಮಾನಸಿಕ ಸ್ಥಿತಿಯನ್ನು ಬದಲಿಸಲು ಸಹಾಯವಾಗಲಿದೆ.

2 Thoughts to “ಪ್ರಚಲಿತ ವಿದ್ಯಮಾನಗಳು-ಜನವರಿ-9,2017”

    1. Kariyappa

      Great job sir

Leave a Reply to Mahalinga Cancel reply

This site uses Akismet to reduce spam. Learn how your comment data is processed.