ಭಾರತ ವಿಶ್ವದ ನಾಲ್ಕನೇ ಅತಿ ದೊಡ್ಡ ರಕ್ಷಣಾ ಕ್ಷೇತ್ರಕ್ಕೆ ವೆಚ್ಚಮಾಡುವ ರಾಷ್ಟ್ರ

ಇತ್ತೀಚೆಗೆ ಬಿಡುಗಡೆಗೊಂಡ 2016 ಐಎಚ್ಎಸ್ ಜೇನ್ಸ್ ರಕ್ಷಣಾ ಆಯವ್ಯಯ ವರದಿ ಪ್ರಕಾರ ಭಾರತವು ಪ್ರಪಂಚದ ನಾಲ್ಕನೇ ಅತಿ ದೊಡ್ಡ ರಕ್ಷಣಾ ಕೇತ್ರಕ್ಕೆ ವೆಚ್ಚಮಾಡುವ ರಾಷ್ಟ್ರವೆನಿಸಿದೆ. ಅಮೆರಿಕ ಮೂಲದ ಐಎಚ್ಎಸ್ ಜೇನ್ಸ್ ಹೊರತಂದಿರುವ ವರದಿಯಲ್ಲಿ ರಷ್ಯಾ, ಫ್ರಾನ್ಸ್, ಜಪಾನ್ ಮತ್ತು ಸೌಧಿ ಅರೇಬಿಯಾ ರಾಷ್ಟ್ರಗಳನ್ನು ಹಿಂದಿಕ್ಕಿ ಭಾರತ ನಾಲ್ಕನೇ ಸ್ಥಾನವನ್ನು ಗಳಿಸಿದೆ.

ವರದಿಯ ಪ್ರಮುಖಾಂಶಗಳು:

  • ಅಮೆರಿಕ, ಚೀನಾ ಮತ್ತು ಯುಕೆ ರಕ್ಷಣಾ ಕ್ಷೇತ್ರಕ್ಕೆ ವ್ಯಯಿಸುವ ವಿಶ್ವದ ಮೊದಲ ಮೂರು ರಾಷ್ಟ್ರಗಳು.
  • ಅಮೆರಿಕ 622 ಬಿಲಿಯನ್ ಡಾಲರ್ ಅನ್ನು ರಕ್ಷಣಾ ಕ್ಷೇತ್ರಕ್ಕೆ ವ್ಯಯಿಸುವ ಮೂಲಕ ಮೊದಲ ಸ್ಥಾನದಲ್ಲಿದೆ. 191.75 ಬಿಲಿಯನ್ ಡಾಲರ್ ಮೂಲಕ ಚೀನಾ ಎರಡನೇ ಸ್ಥಾನದಲ್ಲಿದೆ.
  • 2016 ರಲ್ಲಿ ರಕ್ಷಣಾ ಕ್ಷೇತ್ರಕ್ಕೆ ಭಾರತ 50.6 ಬಿಲಿಯನ್ ಡಾಲರ್ ಖರ್ಚು ಮಾಡಿದೆ. 2015 ರಲ್ಲಿ 46.6 ಬಿಲಿಯನ್ ಡಾಲರ್ ಅನ್ನು ಭಾರತ ವ್ಯಯಿಸಿತ್ತು. ಆ ಮೂಲಕ ಭಾರತದ ಒಟ್ಟು ಜಿಡಿಪಿಯಲ್ಲಿ ಶೇ 1.8% ರಷ್ಟನ್ನು ರಕ್ಷಣಾ ಕ್ಷೇತ್ರಕ್ಕೆ ಖರ್ಚು ಮಾಡಲಾಗುತ್ತಿದೆ.
  • ವರದಿ ಪ್ರಕಾರ 2018ರ ವೇಳೆಗೆ ಭಾರತವು ಯುಕೆಯನ್ನು ಹಿಂದಿಕ್ಕಲಿದೆ.

ಕಕ್ಷೆಯಲ್ಲಿ ಇಂಧನ ತುಂಬಲು ಹಾಗೂ ಉಪಗ್ರಹವನ್ನು ದುರಸ್ಥಿಗೊಳಿಸಲು ನಾಸಾದಿಂದ ಬಾಹ್ಯಕಾಶ ನೌಕೆ

ಕಕ್ಷೆಯಲ್ಲಿ ಇಂಧನ ತುಂಬಲು ಹಾಗೂ ಉಪಗ್ರಹವನ್ನು ದುರಸ್ಥಿಗೊಳಿಸಲು ನಾಸಾ ಬಾಹ್ಯಕಾಶ ಸಂಸ್ಥೆ ರೊಬೊಟಿಕ್ ಬಾಹ್ಯಕಾಶೆ ನೌಕೆಯನ್ನು ಅಭಿವೃದ್ದಿಪಡಿಸುತ್ತಿದೆ. “ರಿಸ್ಟೋರ್ ಎಲ್ ಸ್ಪೇಸ್ ಕ್ರಾಪ್ಟ್ (Restore-L Spacecraft)” ಎಂದು ಇದಕ್ಕೆ ಹೆಸರಿಡಲಾಗಿದೆ. ರಿಸ್ಟೋರ್-ಎಲ್ ಬಾಹ್ಯಕಾಶ ನೌಕೆಯನ್ನು ಅಭಿವೃದ್ದಿಗೊಳಿಸಲು ನಾಸಾ ಕ್ಯಾಲಿಫೋರ್ನಿಯಾ ಮೂಲದ ಉಪಗ್ರಹ ಸಂಸ್ಥೆ “ಸ್ಪೇಸ್ ಸಿಸ್ಟಂ”ನೊಂದಿಗೆ 127 ಮಿಲಿಯನ್ ಡಾಲರ್ ಒಪ್ಪಂದಕ್ಕೆ ಸಹಿ ಹಾಕಿದೆ. ಸ್ಪೇಸ್ ಸಿಸ್ಟಂ ಈ ಮಿಷನ್ ಗೆ ಅಗತ್ಯವಿರುವ ಹಾರ್ಡ್ ವೇರ್ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಒದಗಿಸಲಿದೆ. 2020 ರಲ್ಲಿ ಈ ನೌಕೆ ತನ್ನ ಕಾರ್ಯಾರಂಭ ಮಾಡಲಿದೆ.

ಪ್ರಮುಖಾಂಶಗಳು:

  • ಈ ರೊಬೊಟಿಕ್ ಬಾಹ್ಯಕಾಶ ನೌಕೆ ಅತ್ಯಾಧುನಿಕ ಉಪಕರಣ ಮತ್ತು ತಂತ್ರಜ್ಞಾನಗಳನ್ನು ಒಳಗೊಂಡಿರಲಿದ್ದು, ಸೇವೆ ನಿರತ ಉಪಗ್ರಹಗಳಿಗೆ ಕಕ್ಷೆಯಲ್ಲಿ ದುರಸ್ಥಿಗೊಳಿಸುವುದು, ಇಂಧನ ತುಂಬವ ಕಾರ್ಯವನ್ನು ಮಾಡಲಿದೆ.
  • ಅಸ್ಥಿತ್ವದಲ್ಲಿರುವ ಉಪಗ್ರಹಗಳ ಕಾರ್ಯಾವಧಿ ವಿಸ್ತರಣೆ ಹಾಗೂ ಕಾರ್ಯಾಚರಣೆ ವೆಚ್ಚ ಸಹ ಇದರಿಂದ ಕಡಿಮೆಯಾಗಲಿದೆ. ಅಲ್ಲದೇ ಬಾಹ್ಯಕಾಶ ತ್ಯಾಜ್ಯವನ್ನು ಸ್ವಚ್ಚಗೊಳಿಸಲು ಇದನ್ನು ಬಳಸಬಹುದಾಗಿದೆ.

ವಿಕಲಚೇತನರ ಹಕ್ಕು ಮಸೂದೆಗೆ ರಾಜ್ಯಸಭೆಯಲ್ಲಿ ಅಂಗೀಕಾರ

ಅಂಗವಿಕಲರ ಹಕ್ಕು ಮಸೂದೆ-2016ಗೆ ರಾಜ್ಯಸಭೆಯಲ್ಲಿ ಅನುಮೋದನೆ ದೊರೆತಿದೆ. ಈ ಮಸೂದೆಯಿಂದ ಅಂಗವಿಕಲರ ಹಕ್ಕು ಕಾಯಿದೆ-1995ಕ್ಕೆ ತಿದ್ದುಪಡಿ ತರಲಾಗುವುದು. ಮಾನಸಿಕ ಅಸ್ವಸ್ಥತೆ ಸೇರಿದಂತೆ ವಿವಿಧ ದೈಹಿಕ ಅಸಾಮರ್ಥ್ಯ ವೈಕಲ್ಯಗಳನ್ನು ಮಸೂದೆಯಡಿ ತರಲಾಗಿದೆ.

ಮಸೂದೆಯ ವಿಶೇಷತೆಗಳು:

  • ಅಂಗವಿಕಲತೆ ವ್ಯಾಖ್ಯಾನ: ಈ ಹಿಂದೆ 7 ನ್ಯೂನತೆಗಳನ್ನು ಮಾತ್ರ ಅಂಗವೈಕಲ್ಯ ಎಂದು ಪರಿಗಣಿಸಲಾಗುತ್ತಿತ್ತು. ಈಗ ಅದನ್ನು 21ಕ್ಕೆ ಏರಿಸಲಾಗಿದೆ.
  • ಮಾತು ಮತ್ತು ಭಾಷಾ ಅಸಾಮರ್ಥ್ಯ ಮತ್ತು ನಿರ್ದಿಷ್ಟ ಕಲಿಕಾ ಅಸಾಮರ್ಥ್ಯವನ್ನು ಮೊದಲ ಬಾರಿಗೆ ಸೇರಿಸಲಾಗಿದೆ. ಆಸಿಡ್ ದಾಳಿಗೆ ಒಳಾಗದವರನ್ನು ಸೇರ್ಪಡೆಗೊಳಿಸಲಾಗಿದೆ.
  • ಅಂಗವಿಕಲರ ಹಕ್ಕುಗಳು: ಅಂಗವಿಕಲರಿಗೆ ಸಮಾನತೆ ಹಕ್ಕಿದ್ದು, ತಾರತಮ್ಯ ಮಾಡುವಂತಿಲ್ಲ. ಎಲ್ಲಾ ಕಟ್ಟಡಗಳು ಅಂಗವಿಕಲ ಸ್ನೇಹಿ ಕಟ್ಟಡಗಳಾಗಿರಬೇಕು.
  • ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ದಿ: ಶಿಕ್ಷಣ, ಸ್ವಯಂ ಉದ್ಯೋಗ ಮತ್ತು ಅಂಗವಿಕಲ ವ್ಯಕ್ತಿಗಳಿಗೆ ವೃತ್ತಿಪರ ತರಬೇತಿ ಪ್ರವೇಶವನ್ನು ಒದಗಿಸುವ ಅವಕಾಶ ಕಲ್ಪಿಸಲಾಗಿದೆ. ಎಲ್ಲಾ ಸರ್ಕಾರಿ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಶೇ 5% ಮೀಸಲಾತಿ ಹಾಗೂ ಸರ್ಕಾರಿ ಅನುದಾನಿತ ಶಾಲೆಗಳಲ್ಲೂ ಮೀಸಲಾತಿಯನ್ನು ಕಲ್ಪಿಸಲಾಗಿದೆ. ಈ ಹಿಂದೆ ಶೇ 3% ಮೀಸಲಾತಿಯನ್ನು ನೀಡಲಾಗಿತ್ತು.
  • ಉದ್ಯೋಗದಲ್ಲಿ ಮೀಸಲಾತಿ: ಕೇಂದ್ರ ಮತ್ತು ರಾಜ್ಯ ಸರ್ಕಾರಿ ಹುದ್ದೆಗಳಲ್ಲಿ ಶೇ 4% ರಷ್ಟು ಮೀಸಲಾತಿ ಕಲ್ಪಿಸಲಾಗಿದೆ.
  • ಜಿಲ್ಲಾ ಮಟ್ಟದ ಸಮಿತಿ: ಅಂಗವಿಕಲರ ಕುಂದು ಕೊರತೆಯನ್ನು ಆಲಿಸಲು ಜಿಲ್ಲಾ ಮಟ್ಟದ ಸಮಿತಿಯನ್ನು ರಾಜ್ಯ ಸರ್ಕಾರಗಳು ರಚಿಸಬೇಕಿದೆ.
  • ಅಂಗವಿಕಲರ ಮುಖ್ಯ ಆಯುಕ್ತರು, ರಾಜ್ಯ ಆಯುಕ್ತರ ಕಚೇರಿಗಳು ನಿಯಂತ್ರಣ ಸಮಿತಿಗಳಾಗಿ ಕೆಲಸ ಮಾಡುವಂತೆ ಬಲಪಡಿಸಲಾಗಿದೆ.
  • ಶಿಕ್ಷೆ: ಅಂಗವಿಕಲರನ್ನು ತಾರತಮ್ಯದಿಂದ ನಡೆಸಿಕೊಂಡವರಿಗೆ ಎರಡು ವರ್ಷವರೆಗೆ ಸಜೆ ಮತ್ತು ಗರಿಷ್ಠ ₹5 ಲಕ್ಷ ದಂಡ ವಿಧಿಸಲು ಅವಕಾಶ ಕಲ್ಪಿಸಲಾಗಿದೆ.

Leave a Comment

This site uses Akismet to reduce spam. Learn how your comment data is processed.