ಆಂಧ್ರ ಪ್ರದೇಶ ಸರ್ಕಾರದಿಂದ ಡಿಜಿಟಲ್ ನಗದೀಕರಣಕ್ಕೆ ಎಪಿ ಪರ್ಸ್ ಮೊಬೈಲ್ ಆ್ಯಪ್

ನಗದು ರಹಿತ ವ್ಯವಹಾರಕ್ಕೆ ಆಂಧ್ರಪ್ರದೇಶ ಸರ್ಕಾರ ಎಪಿ ಪರ್ಸ್ ಮೊಬೈಲ್ ಅಪ್ಲೀಕೇಶನ್ ಹೊರತಂದಿದೆ. ಕೇಂದ್ರ ಸರ್ಕಾರ ನೋಟು ನಿಷೇಧ ಮಾಡಿದ ನಂತರ ಸಾರ್ವಜನಿಕರಿಗೆ ಹಣದ ಕೊರತೆ ಎದುರಾಗಿರುವ ಕಾರಣ ಈ ಆ್ಯಪ್ ಅನ್ನು ಹೊರತರಲಾಗಿದೆ. ಆಂಧ್ರ ಪ್ರದೇಶದ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ವಿಜಯವಾಡದಲ್ಲಿ ಈ ಆ್ಯಪ್ ಅನ್ನು ಬಿಡುಗಡೆಗೊಳಿಸಿದರು.

ಪ್ರಮುಖಾಂಶಗಳು:

  • 13 ಮೊಬೈಲ್ ಬ್ಯಾಂಕಿಂಗ್ ಮತ್ತು 10 ಮೊಬೈಲ್ ವ್ಯಾಲೆಟ್ ಗಳನ್ನು ಈ ಅಪ್ಲೀಕೇಶನ್ ಹೊಂದಿದೆ. ಇದನ್ನು ಬಳಸಿ ಸಾರ್ವಜನಿಕರು ವಿವಿಧ ಬಿಲ್ ಗಳನ್ನು ಪಾವತಿಸಬಹುದು ಹಾಗೂ ನಗದು ರಹಿತ ವ್ಯವಹಾರವನ್ನು ನಡೆಸಬಹುದು.
  • ಇದಲ್ಲದೇ ಡಿಜಿಟಲ್ ಆರ್ಥಿಕ ಸಾಕ್ಷರತೆ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಸರ್ಕಾರ “ಮರ್ಪು ನೆಸ್ತಂ” ಹೆಸರಿನ ಏಜೆಂಟ್ ಗಳನ್ನು ನೇಮಕಮಾಡಲಿದೆ. ಇವರಿಗೆ ಸೂಕ್ತ ಸಂಭಾವನೆಯನ್ನು ನೀಡಲಾಗುವುದು.
  • ಇದಕ್ಕಾಗಿ ಎಂಜನಿಯರಿಂಗ್ ವಿದ್ಯಾರ್ಥಿಗಳನ್ನು ಬಳಸಿಕೊಳ್ಳಲು ಸರ್ಕಾರ ನಿರ್ಧರಿಸಿದೆ. ಇದರಿಂದ ಓದಿನ ಜೊತೆಗೆ ಸಂಪಾದನೆ ಮಾಡಲು ಅನುಕೂಲವಾಗಲಿದೆ.

ಅಂಬೇಡ್ಕರ್ ಜನ್ಮದಿನವನ್ನು “ಜಲ ದಿನ”ವನ್ನಾಗಿ ಆಚರಿಸಲು ಕೇಂದ್ರ ಸರ್ಕಾರ ನಿರ್ಧಾರ

ಭಾರತ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜನ್ಮದಿನವನ್ನು “ಜಲ ದಿನ (Water Day)”ವನ್ನಾಗಿ ಆಚರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಡಾ. ಅಂಬೇಡ್ಕರ್ ಜನ್ಮದಿನವನ್ನು ಪ್ರತಿ ವರ್ಷ ಏಪ್ರಿಲ್ 14 ರಂದು ಆಚರಿಸಲಾಗುತ್ತದೆ. ಕೇಂದ್ರ ಜಲ ಸಂಪನ್ಮೂಲ ಸಚಿವೆ ಉಮಾ ಭಾರತಿ ರವರು ನವದೆಹಲಿಯಲ್ಲಿ ಈ ವಿಷಯವನ್ನು ತಿಳಿಸಿದ್ದಾರೆ.

ಉದ್ದೇಶ:

ದೇಶದ ಜನತೆಯಲ್ಲಿ ಅಮೂಲ್ಯವಾದ ನೀರಿನ ಸಂಪನ್ಮೂಲದ ಸದ್ಬಳಕೆಯನ್ನು ಪ್ರೇರೆಪಿಸಲು  ಡಾ.ಬಿ.ಆರ್ ಅಂಬೇಡ್ಕರ್ ಜನ್ಮ ದಿನವನ್ನು ವೇದಿಕೆಯಾಗಿ ಬಳಸಿಕೊಳ್ಳಲಾಗುವುದು. ಅಲ್ಲದೇ ಭಾರತ ಸಂವಿಧಾನದ ರಚನೆಯಲ್ಲದೇ ಭಾರತದಲ್ಲಿನ ನೀರಿನ ಸಂಪನ್ಮೂಲಗಳನ್ನು ನಿರ್ವಹಿಸಲು ಡಾ.ಬಿ.ಆರ್. ಅಂಬೇಡ್ಕರ್ ರವರ ಅಖಿಲ ಭಾರತ ನೀತಿ ಬಗ್ಗೆ ಅರಿವು ಸಹ ಮೂಡಿಸಲಾಗುವುದು.

ಹಿನ್ನಲೆ:

ಡಾ. ಬಿ. ಆರ್. ಅಂಬೇಡ್ಕರ್ ರವರ 125ನೇ ಜನ್ಮದಿನಾಚರಣೆ ದಿನದ ಅಂಗವಾಗಿ “ಜಲ ಸಂಪನ್ಮೂಲ ನಿರ್ವಹಣೆಗೆ ಅಂಬೇಡ್ಕರ್ ಕೊಡುಗೆ” ಕುರಿತಾದ ವರದಿಯನ್ನು ಬಿಡುಗಡೆ ಮಾಡಲಾಗಿತ್ತು. ಸ್ವಾತಂತ್ರ ಭಾರತ ಅವಧಿಯಲ್ಲಿ ಕೈಗೊಳ್ಳಲಾದ ಅನೇಕ ಬಹು ಉದ್ದೇಶ ಯೋಜನೆಗಳಲ್ಲಿ ಇವರ ಪಾತ್ರ ಅತ್ಯಂತ ಪ್ರಮುಖವಾದದ್ದು. ದಾಮೋದರ್, ಹಿರಾಕುಡ್ ಮತ್ತು ಮುಂತಾದ ಅನೇಕ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಅಂಬೇಡ್ಕರ್ ರವರು ನಿಜವಾದ ಸ್ಪೂರ್ತಿ ಎನ್ನಲಾಗಿದೆ.

ಕುದುರೆ ರೇಸ್ ಪ್ರಾಣಿ ಹಿಂಸೆಯಲ್ಲ: ಸುಪ್ರೀಂ ಕೋರ್ಟ್

ಕುದುರೆ ರೇಸ್ ಅನ್ನು ಪ್ರಾಣಿ ಹಿಂಸೆಯಂದು ಭಾವಿಸಲು ಸಾಧ್ಯವಿಲ್ಲವೆಂದು ಸುಪ್ರೀಂಕೋರ್ಟ್ ಹೇಳಿದೆ. ಜಲ್ಲಿಕಟ್ಟು ಕ್ರೀಡೆಗಿಂತ ಕುದುರೆ ರೇಸ್ ಭಿನ್ನವಾಗಿದ್ದು, ಜಲ್ಲಿಕಟ್ಟು ಕ್ರೀಡೆಯಲ್ಲಿ ಪ್ರಾಣಿ ಹಿಂಸೆ ವ್ಯಾಪಕವಾಗಿದೆ ಎಂದು ಕೋರ್ಟ್ ಹೇಳಿದೆ. ರಾಜಸ್ತಾನ ಹೈಕೋರ್ಟ್ ಟೊಂಗ ರೇಸ್ ಅನ್ನು ನಿಷೇಧಿಸಿರುವುದರ ವಿರುದ್ದ ಸಲ್ಲಿಸಲಾಗಿದ್ದ ಪಿಐಎಲ್ ಅರ್ಜಿ ವಿಚಾರಣೆ ವೇಳೆ ನ್ಯಾಯಮೂರ್ತಿ ಎ.ಎಂ.ಖಾನ್ವಿಕರ್ ಮತ್ತು ಡಿ.ವೈ.ಚಂದ್ರಚೂಡ ರವರನ್ನು ಒಳಗೊಂಡ ಪೀಠ ಈ ತೀರ್ಪು ನೀಡಿದೆ.

ಏನಿದು ಪ್ರಕರಣ:

  • ಸುಪ್ರೀಂಕೋರ್ಟ್ 2014 ರಲ್ಲಿ ಜಲ್ಲಿಕಟ್ಟು ಕ್ರೀಡೆಯನ್ನು ನಿಷೇಧಿಸದ ರೀತಿಯಲ್ಲೆ ರಾಜಸ್ತಾನ ಹೈಕೋರ್ಟ್ ಟೊಂಗ ರೇಸ್ ಅನ್ನು ನಿಷೇಧಿಸಿತ್ತು.
  • ರಾಜಸ್ತಾನ ಹೈಕೋರ್ಟ್ನ ಈ ತೀರ್ಪಿನ ವಿರುದ್ದ ಸುಪ್ರೀಂಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಲಾಗಿತ್ತು. ಸುಪ್ರೀಂಕೋಟ್ನ 2014ರ ತೀರ್ಪು ಹೋರಿಗಳಿಗೆ ಸಂಬಂಧಿಸಿದ್ದು, ಕುದುರೆಗಳಿಗಲ್ಲ ಎಂದು ಅರ್ಜಿಯಲ್ಲಿ ತಿಳಿಸಲಾಗಿತ್ತು. ಅಲ್ಲದೇ ಟೊಂಗ ರೇಸ್ ಅನ್ನು ಉತ್ತರ ಅಮೆರಿಕ, ಆಸ್ಟ್ರೇಲಿಯಾ, ಯುರೋಪ್ ಮತ್ತು ನ್ಯೂಜಿಲ್ಯಾಂಡ್ ಸೇರಿದಂತೆ ವಿಶ್ವದಾದ್ಯಂತ ಆಯೋಜಿಸಲಾಗುತ್ತಿದೆ ಎಂದು ಅರ್ಜಿಯಲ್ಲಿ ಹೇಳಲಾಗಿತ್ತು.

ಸುಪ್ರೀಂಕೋರ್ಟ್ ತೀರ್ಪು:

ಕುದುರೆ ರೇಸ್ ಪ್ರಾಣಿ ಹಿಂಸೆಯಲ್ಲೆ, ಆದರೆ ಲೋಹದ ಮೇಲಿನ ರಸ್ತೆಯಲ್ಲಿ ಟೊಂಗ ರೇಸ್ ಆಯೋಜಿಸುವುದರಿಂದ ಪ್ರಾಣಿ ಹಿಂಸೆಯಾಗುತ್ತದೆ. ಹೋರಿಗಳು ಓಟಕ್ಕೆ ಅಸಾಮರ್ಥ್ಯವಾಗಿವೆ ಆದರೆ ಕುದುರೆಗಳ ದೇಹ ಮಾರ್ಪಡು ಓಟಕ್ಕಾಗಿ ಸಾಕಲಾಗುತ್ತದೆ ಎಂದು ಕೋರ್ಟ್ ಹೇಳಿದೆ.

ಭಾರತ ಮತ್ತು ಯುಕೆ ನಡುವಿನ ಜಂಟಿ ಕಡಲ ಸಮರಭ್ಯಾಸ “ಕೊಂಕಣ್-16” ಚಾಲನೆ

 ಭಾರತ ನೌಕಪಡೆ ಮತ್ತು ಯುಕೆಯ ರಾಯಲ್ ನೇವಿ (ಬ್ರಿಟಿಷ್ ನೌಕಪಡೆ) ನಡುವಿನ ವಾರ್ಷಿಕ ದ್ವಿಪಕ್ಷೀಯ ಜಂಟಿ ಕಡಲ ಸಮರಭ್ಯಾಸ ಕೊಂಕಣ್-16 ಗೆ ಮುಂಬೈನಲ್ಲಿ ಚಾಲನೆ ನೀಡಲಾಯಿತು.

ಪ್ರಮುಖಾಂಶಗಳು:

  • ಕೊಂಕಣ್-16 ಸಮರಭ್ಯಾಸ ಎರಡು ಹಂತದಲ್ಲಿ ಮುಂಬೈ ಮತ್ತು ಗೋವಾದಲ್ಲಿ ನಡೆಯಲಿದೆ. ಮೊದಲ ಹಂತದಲ್ಲಿ ಮುಂಬೈನಲ್ಲಿ ಡಿಸೆಂಬರ್ 5 ರಿಂದ 9 ರವರೆಗೆ ನಡೆಯಲಿದೆ.
  • ಎರಡನೇ ಹಂತದಲ್ಲಿ “ಲೈವ್ ಎಕ್ಸರ್ಸೈಸ್ (LIVE EXERCISE) (LIVEX)” ಡಿಸೆಂಬರ್ 12 ರಿಂದ 16 ರವರೆಗೆ ಗೋವಾದಲ್ಲಿ ನಡೆಯಲಿದೆ.
  • ಎರಡು ಹಂತಗಳಲ್ಲಿ ಉಭಯ ಸೇನೆಗಳ ನಡುವೆ ಮಾನವಿಯ ಸಹಕಾರ ಮತ್ತು ವಿಪತ್ತು ನಿರ್ವಹಣೆ ಸಂಬಂಧಿಸಿದ ಕಾರ್ಯಾಚರಣೆ ತಂತ್ರಜ್ಞಾನ ವಿನಿಮಯ ಮಾಡಿಕೊಳ್ಳಲಾಗುವುದು.

ಹಿನ್ನಲೆ:

ಕೊಂಕಣ್ ನೌಕಪಡೆ ಸಮರಭ್ಯಾಸವನ್ನು 2004ರಿಂದ ಆಯೋಜಿಸಲಾಗಿದೆ. ಭಾರತದ ಪಶ್ಚಿಮ ಕರಾವಳಿ ತೀರದ ಹೆಸರನ್ನು ಇದಕ್ಕೆ ಇಡಲಾಗಿದೆ. ವಾರ್ಷಿಕವಾಗಿ ನಡೆಯುವ ಸಮರಭ್ಯಾಸವನ್ನು ಉಭಯ ದೇಶಗಳು ಸರತಿ ಆಧಾರದ ಮೇಲೆ ಆಯೋಜಿಸುತ್ತವೆ.

 

One Thought to “ಪ್ರಚಲಿತ ವಿದ್ಯಮಾನಗಳು-ಡಿಸೆಂಬರ್-9,2016”

Leave a Comment

This site uses Akismet to reduce spam. Learn how your comment data is processed.