ಕೊಲ್ಕತ್ತಾದಲ್ಲಿ ಏಳನೇ ವಿಶ್ವ ಆಯುರ್ವೇದ ಕಾಂಗ್ರೆಸ್ (World Ayurveda Congress)

ಏಳನೇ ವಿಶ್ವ ಆಯುರ್ವೇದ ಕಾಂಗ್ರೆಸ್ ಕೊಲ್ಕತ್ತಾದಲ್ಲಿ ಡಿಸೆಂಬರ್ 2 ರಿಂದ 4 ರವರೆಗೆ ಜರುಗಿತು. ವಿಶ್ವ ಆರ್ಯರ್ವೇದ ಫೌಂಡೇಷನ್ ಕೇಂದ್ರ ಆಯುಷ್ ಸಚಿವಾಲಯದ ಸಹಕಾರದೊಂದಿಗೆ ಈ ಕಾಂಗ್ರೆಸ್ ಅನ್ನು ಆಯೋಜಿಸಿತ್ತು. ಆಯುಷ್ ಚಿಕಿತ್ಸಾ ಪದ್ದತಿ ಅಂದರೆ ಆಯುರ್ವೇದ, ಯೋಗ, ನಚುರೊಪತಿ, ಯುನಾನಿ, ಸಿದ್ದ ಮತ್ತು ಹೊಮಿಯೋಪತಿ ಚಿಕಿತ್ಸೆಯನ್ನು ಪ್ರೋತ್ಸಾಹಿಸಿ ಅಭಿವೃದ್ದಿಪಡಿಸಲು ಆಯುರ್ವೇದ ಕಾಂಗ್ರೆಸ್ ಅನ್ನು ಆಯೋಜಿಸಲಾಗುತ್ತಿದೆ.

ಪ್ರಮುಖಾಂಶಗಳು:

  • ಏಳನೇ ವಿಶ್ವ ಆಯುರ್ವೇದ ಕಾಂಗ್ರೆಸ್ ನ ಧ್ಯೇಯವಾಕ್ಯ : ಆಯುರ್ವೇದ ಪರಿಸರ ವ್ಯವಸ್ಥೆಯನ್ನು ಬಲಪಡಿಸುವುದು (Strengthening the Ayurveda Ecosystem“).
  • ಈ ಕಾಂಗ್ರೆಸ್ನ ಅಂಗವಾಗಿ ಸಾರ್ವಜನಿಕರಿಗೆ ಆಯುರ್ವೇದ ಕ್ಲಿನಿಕ್ ತೆರೆಯಲಾಗಿತ್ತು. ಆಯುರ್ವೇದ ಕುರಿತಾದ ಸಾರ್ವಜನಿಕ ಉಪನ್ಯಾಸಗಳನ್ನು ಏರ್ಪಡಿಸಲಾಗಿತ್ತು.

ಅಸ್ಸಾಂನ ಹೈಲಕಂಡಿ (Hailakandi) ನಗದು ರಹಿತ ವೇತನ ಪಾವತಿ ಮಾಡಿದ ದೇಶದ ಮೊದಲ ಜಿಲ್ಲೆ

ಅಸ್ಸಾಂ ರಾಜ್ಯದ ಹೈಲಕಂಡಿ ಜಿಲ್ಲೆಯಲ್ಲಿ ಚಹಾ ತೋಟದ ಕಾರ್ಮಿಕರಿಗೆ ನೇರವಾಗಿ ವೈಯುಕ್ತಿಕ ಖಾತೆಗೆ ವೇತನವನ್ನು ಪಾವತಿ ಮಾಡಲಾಗಿದೆ. ಆ ಮೂಲಕ ನಗದು ರಹಿತ ವೇತನ ಪಾವತಿ ಮಾಡಿದ ದೇಶದ ಮೊದಲ ಜಿಲ್ಲೆ ಎಂಬ ಗೌರವಕ್ಕೆ ಹೈಲಕಂಡಿ ಪಾತ್ರವಾಗಿದೆ. ಡಿಸೆಂಬರ್ 15, 2016 ರರೊಳಗೆ ನಗದು ರಹಿತ ವೇತನ ಪಾವತಿ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವಂತೆ ಅಸ್ಸಾಂ ರಾಜ್ಯ ಸರ್ಕಾರ ಆದೇಶಿಸಿತ್ತು. ಆದರೆ ನಿಗದಿತ ಅವಧಿಗೆ ಮುನ್ನವೇ  ಈ ಜಿಲ್ಲೆಯಲ್ಲಿ ನಗದು ಪಾವತಿ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಾಗಿದೆ.

ಪ್ರಮುಖಾಂಶಗಳು:

  • ಬರ್ನಿ ಬ್ರೆಸ್ ಟೀ ಎಸ್ಟೇಟ್ ನ ಸರಿ ಸುಮಾರು 540 ಕಾರ್ಮಿಕರು ತಮ್ಮ ವೇತನವನ್ನು ಬ್ಯಾಂಕ್ ಖಾತೆ ಮೂಲಕ ಪಡೆದುಕೊಂಡಿದ್ದಾರೆ.
  • ಅಸ್ಸಾಂ ಗ್ರಾಮೀಣ ವಿಕಾಸ ಬ್ಯಾಂಕ್ ಮೂಲಕ ನಗದು ರಹಿತ ವೇತನವನ್ನು ಪಾವತಿಸಲಾಗಿದೆ.
  • ಬ್ಯಾಂಕ್ ನೌಕರರು, ಚಹಾ ತೋಟದ ಕಾರ್ಮಿಕರು ಮತ್ತು ಮೊಬೈಲ್ ಸೇವಾದಾರರ ಸಂಘಟಿತ ಪ್ರಯತ್ನದಿಂದ ಈ ಸಾಧನೆಯನ್ನು ಮಾಡಲಾಗಿದೆ.

ಹಿನ್ನಲೆ:

ಕೇಂದ್ರ ಸರ್ಕಾರ ನವೆಂಬರ್ 8 ರಂದು ರೂ 500 ಮತ್ತು ರೂ 1000 ಮುಖಬೆಲೆಯ ನೋಟುಗಳನ್ನು ರದ್ದುಮಾಡಿದ ಹಿನ್ನಲೆಯಲ್ಲಿ ಅಸ್ಸಾಂ ಸರ್ಕಾರ ಡಿಸೆಂಬರ್ 15, 2016ರ ರೊಳಗೆ ಚಹಾ ತೋಟ ಕಾರ್ಮಿಕರಿಗೆ ನಗದು ರಹಿತ ವೇತನ ಪಾವತಿ ವ್ಯವಸ್ಥೆ ಅಳವಡಿಸಿಕೊಳ್ಳುವಂತೆ ಆದೇಶ ಮಾಡಿತ್ತು.

ಲಡಾಖ್ ನಲ್ಲಿ ಇತಿಹಾಸ ಪೂರ್ವ ಪುರಾತನ ವಸತಿ ಪ್ರದೇಶ ಪತ್ತೆ

ಇತಿಹಾಸ ಪೂರ್ವ ಮಾನವನ ಪುರಾತನ ವಸತಿ ಪ್ರದೇಶವೊಂದನ್ನು ಭಾರತೀಯ ಪುರಾತತ್ವ ಇಲಾಖೆಯ ಲಡಾಖ್ ನಲ್ಲಿ ಪತ್ತೆಹಚ್ಚಿದೆ. ಲಡಾಕ್ ನ ನುಬ್ರಾ ಕಣಿವೆಯ ಸಸೆರ್ ಲಾ ಬಳಿ 4,200 ಮೀಟರ್ ಎತ್ತರದಲ್ಲಿ ಈ ಪ್ರದೇಶ ಪತ್ತೆಯಾಗಿದೆ. ಪುರಾತನ ಕಾಲದಲ್ಲಿ ಈ ಪ್ರದೇಶದಲ್ಲಿ ಭೇಟೆಗಾರರು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ತೆರಳುವ ಮೊದಲು ಇಲ್ಲಿ ತಾತ್ಕಲಿಕವಾಗಿ ಉಳಿದುಕೊಳ್ಳುತ್ತಿದ್ದರು ಎನ್ನಲಾಗಿದೆ.

ಪ್ರಮುಖಾಂಶಗಳು:

  • ಈ ವಸತಿ ಪ್ರದೇಶವು ಕಾರಕೋರಂ ಪಾಸ್ ನ ಸಸೆರ್ ಲಾ ಬಳಿ ಪತ್ತೆಹಚ್ಚಲಾಗಿದೆ. ತಾತ್ಕಲಿಕವಾಗಿ ಉಳಿದುಕೊಳ್ಳಲು ಮಾತ್ರ ಇದನ್ನು ಬಳಸಿಕೊಳ್ಳಲಾಗಿತ್ತು ಎಂದು ಸಂಶೋಧನೆಯಿಂದ ತಿಳಿದುಬಂದಿದೆ.
  • ಕಲ್ಲಿದ್ದಲ ಚೂರು ಮತ್ತು ಮೂಳೆ ಅವಶೇಷಗಳು ಪತ್ತೆಯಾಗಿವೆ.
  • ಕಾರ್ಬನ್ ಡೇಟಿಂಗ್ ಪ್ರಕಾರ ಕಲ್ಲಿದ್ದಲ ಚೂರುಗಳನ್ನು ಸುಮಾರು 8500BCE ವರ್ಷಗಳಷ್ಟು ಹಿಂದಿನವು ಎಂದು ತಿಳಿದುಬಂದಿದೆ.

ವೈಜ್ಞಾನಿಕ ದತ್ತಾಂಶದ ಪ್ರಕಾರ ಸಸೆರ್ ಲಾ ಪ್ರದೇಶ ಲಡಾಖ್ ನಲ್ಲಿ ಪತ್ತೆಯಾದ ಆರಂಭಿಕ ಇತಿಹಾಸ ಪೂರ್ವ ವಸತಿ ಪ್ರದೇಶವಾಗಿದೆ. ಲಡಾಖ್ ನಲ್ಲಿ ಈ ಮುಂಚೆ ಯಾವುದೇ ಪುರಾತತ್ವ ಪ್ರಾಮುಖ್ಯತೆ ಪ್ರದೇಶ ಪತ್ತೆಯಾಗಿರಲಿಲ್ಲ. ಹೀಗಾಗಿ, ಇದೊಂದು ಗಮನಾರ್ಹ ಸಂಶೋಧನೆಯಾಗಿದೆ.

ಅಂತಾರಾಷ್ಟ್ರೀಯ ಮಕ್ಕಳ ಶಾಂತಿ ಪ್ರಶಸ್ತಿ ಗೆದ್ದ ಭಾರತೀಯ ಮೂಲದ ಬಾಲಕಿ

ಯುಎಇಯಲ್ಲಿ ನೆಲೆಸಿರುವ ಭಾರತೀಯ ಮೂಲದ ಪರಿಸರ ಹೋರಾಟಗಾರ್ತಿ ಕೆಹಕಶನ್ ಬಸು ಅವರಿಗೆ 2016 ಅಂತಾರಾಷ್ಟ್ರೀಯ ಮಕ್ಕಳ ಶಾಂತಿ ಪ್ರಶಸ್ತಿ ದೊರೆತಿದೆ. ಹವಾಮಾನ ನ್ಯಾಯ ಮತ್ತು ಪರಿಹರ ಸಂರಕ್ಷಣೆ ಕುರಿತು ಹೋರಾಟ ನಡೆಸುತ್ತಿರುವುದಕ್ಕಾಗಿ ಈ ಪ್ರಶಸ್ತಿ ಲಭಿಸಿದೆ.  ಹೇಗ್ನಲ್ಲಿ ನಡೆದ ಸಮಾರಂಭದಲ್ಲಿ ಬಾಂಗ್ಲಾದೇಶದ ನೊಬೆಲ್ ಶಾಂತಿ ಪ್ರಶಸ್ತಿ ವಿಜೇತ ಮೊಹಮ್ಮದ್ ಯೂನುಸ್ ರವರು ಕೆಹಕಶನ್ ಬಸು ಪ್ರಶಸ್ತಿ ಪ್ರದಾನ ಮಾಡಿದರು.

ಕೆಹಕಶನ್ ಬಸು:

  • ಕೆಹಕಶನ್ ತಮ್ಮ 8ನೇ ವಯಸ್ಸಿನಲ್ಲಿ ನೆರೆಹೊರೆಯವರಿಗೆ ಪರಿಸರದ ಮಹತ್ವ ಕುರಿತು ತಿಳಿಸಿಕೊಡುವ ಮೂಲಕ ಪರಿಸರ ಸಂರಕ್ಷಣೆಯ ತಮ್ಮ ಅಬಿಯಾನವನ್ನು ಆರಂಭಿಸಿದರು.
  • ಕೆಹಕಶನ್ ಮಕ್ಕಳ ಜೊತೆಗೂಡಿ ತ್ಯಾಜ್ಯ ವಿಲೇವಾರಿ ಮತ್ತು ಮರುಬಳಕೆ ಹಾಗೂ ಸಸಿಗಳನ್ನು ನೆಡುವ ಕಾರ್ಯಕೈಗೊಂಡಿದ್ದಾರೆ.
  • ತಮ್ಮ 12ನೇ ವಯಸ್ಸಿನಲ್ಲಿ ಗ್ರೀನ್ ಹೋಪ್ ಎಂಬ ಸಂಸ್ಥೆಯನ್ನು ಸ್ಥಾಪಿಸಿ ಅದರ ಮೂಲಕ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿ ಪರಿಸರ ಜಾಗೃತಿ ಮೂಡಿಸಿದ್ದಾರೆ.
  • ಜಗತ್ತಿನ 10ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಈ ಸಂಸ್ಥೆ ಇಂದು 1000 ಕ್ಕೂ ಹೆಚ್ಚು ಸ್ವಯಂಸೇವಕರನ್ನು ಹೊಂದಿದೆ.
  • ಕೊಲಂಬಿಯಾ, ಮೆಕ್ಸಿಕೊ, ಫ್ರಾನ್ಸ್, ನೇಪಾಳ, ಒಮೆನ್ ಮತ್ತು ಅಮೆರಿಕದಲ್ಲಿ 5000ಕ್ಕೂ ಹೆಚ್ಚು ಸಸಿಗಳನ್ನು ಸಂಸ್ಥೆ ನೆಟ್ಟಿದೆ.

ಅಂತಾರಾಷ್ಟ್ರೀಯ ಮಕ್ಕಳ ಶಾಂತಿ ಪ್ರಶಸ್ತಿ:

  • ಮಕ್ಕಳ ಹಕ್ಕುಗಳ ಬಗ್ಗೆ ವಾದಿಸುವ ಮತ್ತು ದುರ್ಬಲ ಸ್ಥಿತಿಯಲ್ಲಿರುವ ಮಕ್ಕಳ ಪರಿಸ್ಥಿತಿಯನ್ನು ಸುಧಾರಿಸಲು ಶ್ರಮಿಸುವ ಮಕ್ಕಳಿಗೆ ಈ ಪ್ರಶಸ್ತಿಯನ್ನು ಪತ್ರಿ ವರ್ಷ ನೀಡಲಾಗುತ್ತದೆ.
  • ಪ್ರಶಸ್ತಿ ಗೆದ್ದವರಿಗೆ 100,000 ಯುರೋ ವನ್ನು ನೀಡಲಾಗುವುದು.
  • ಪ್ರಶಸ್ತಿಯನ್ನು 2005ರಲ್ಲಿ ಡಚ್ ಕಿಡ್ಸ್ ರೈಟ್ಸ್ ಫೌಂಡೇಶನ್ ಸಂಸ್ಥಾಪಕ ಮಾರ್ಕ್ ಡುಲ್ಲರೆಟ್ ಸ್ಥಾಪಿಸಿದ್ದಾರೆ.
  • 2006 ರಲ್ಲಿ ಭಾರತದ ಓಂ ಪ್ರಕಾಶ್ ಗುರ್ಜರ್ ರವರಿಗೆ ಈ ಪ್ರಶಸ್ತಿಯನ್ನು ನೀಡಲಾಗಿತ್ತು. ಗುರ್ಜರ್ ರವರು ಮಕ್ಕಳ ಸ್ನೇಹಿ ಹಳ್ಳಿಗಳ ನೆಟವರ್ಕ್ ಸ್ಥಾಪಿಸುವ ಮೂಲಕ ಪ್ರತಿ ಮಕ್ಕಳಿಗೂ ಜನನ ಪ್ರಮಾಣ ಪತ್ರ ನೀಡಿ ಮಕ್ಕಳ ಶೋಷಣೆ ವಿರುದ್ದ ಹೋರಾಡಲು ಶ್ರಮಿಸಿದ್ದಕ್ಕಾಗಿ ಈ ಪ್ರಶಸ್ತಿಯನ್ನು ನೀಡಲಾಗಿತ್ತು.

ವಿಶ್ವಪ್ರಸಿದ್ದ ಹಾರ್ನ್ ಬಿಲ್ ಉತ್ಸವಕ್ಕೆ ನಾಗಲ್ಯಾಂಡ್ ನಲ್ಲಿ ಚಾಲನೆ

ವಿಶ್ವಪ್ರಸಿದ್ದ ಹಾರ್ನ್ ಬಿಲ್ ಉತ್ಸವ ನಾಗಲ್ಯಾಂಡ್ ನಲ್ಲಿ ಆರಂಭಗೊಂಡಿದೆ. ನಾಗ ಹೆರಿಟೇಜ್ ವಿಲೇಜ್ ಕಿಸಮ ದಲ್ಲಿ ಉತ್ಸವಕ್ಕೆ ಚಾಲನೆ ನೀಡಲಾಯಿತು. ಡಿಸೆಂಬರ್ 1 ನಾಗಲ್ಯಾಂಡ್ ರಾಜ್ಯ ಸಂಸ್ಥಾಪನ ದಿನವಾಗಿದ್ದು, ಈ ತಿಂಗಳ ಮೊದಲ ವಾರದಲ್ಲಿ ಹಾರ್ನ್ ಬಿಲ್ ಉತ್ಸವವನ್ನು ಆಯೋಜಿಸಲಾಗುತ್ತದೆ. ಈ ಹಬ್ಬವನ್ನು “ಫೆಸ್ಟಿವಲ್ ಆಫ್ ಫೆಸ್ಟಿವಲ್ (Festival of Festival)” ಎಂದು ಕರೆಯಲಾಗುತ್ತದೆ. ಹಾರ್ನ್ ಬಿಲ್ ಉತ್ಸವ ನಾಗಾ ಬುಡಕಟ್ಟು ಜನರ ಜೀವನ ಮತ್ತು ಇತಿಹಾಸದ ಕಡೆ ಸಂಪೂರ್ಣ ಬೆಳಕು ಚೆಲ್ಲುತ್ತದೆ. ಏಳು ದಿನಗಳ ಕಾಲ ನಡೆಯುವ ಈ ಹಬ್ಬದಲ್ಲಿ ವಿವಿಧ ನಾಗಾ ಬುಡಕಟ್ಟು ಜನಾಂಗಗಳ ಶ್ರೀಮಂತ ಮತ್ತು ಸ್ಪಂದನಶೀಲ ಸಂಸ್ಕೃತಿಯನ್ನು ಪ್ರದರ್ಶಿಸಲಾಗುತ್ತದೆ.

ಪ್ರಮುಖಾಂಶಗಳು:

  • ಹಾರ್ನ್ ಬಿಲ್ ಉತ್ಸವವನ್ನು ಪ್ರತಿ ವರ್ಷ ಡಿಸೆಂಬರ್ ಮೊದಲ ವಾರದಲ್ಲಿ ಆಯೋಜಿಸಲಾಗುತ್ತದೆ. ಇದು ದೇಶದ ಅತಿ ದೊಡ್ಡ ಹಬ್ಬಗಳಲ್ಲಿ ಒಂದು.
  • ಹಾರ್ನ್ ಬಿಲ್ ಹಕ್ಕಿಯ ಗರಿಯನ್ನು ನಾಗಾ ಬುಡಕಟ್ಟು ಜನರು ತಮ್ಮ ಶಿರವಸ್ತ್ರದಲ್ಲಿ ಅಳವಡಿಸಿರುವ ಕಾರಣ ಈ ಹಬ್ಬಕ್ಕೆ ಹಾರ್ನ್ ಬಿಲ್ ಹೆಸರು ಬಂದಿದೆ. ಹಾರ್ನ್ ಬಿಲ್ ಹಕ್ಕಿಯನ್ನು ನಾಗ ಜನರು ಪೂಜ್ಯಹಕ್ಕಿ ಎಂದೇ ಭಾವಿಸಿದ್ದಾರೆ.
  • ಈ ಹಕ್ಕಿ ನಾಗ ಜನರ ಸಾಂಸ್ಕೃತಿಕ ಮತ್ತು ಸಾಮಾಜಿಕ ಜೀವನದ ಭಾಗವಾಗಿದೆ. ಹಾರ್ನ್ ಬಿಲ್ ಉತ್ಸವವನ್ನು ನೃತ್ಯ ಪ್ರದರ್ಶನ, ಕರಕುಶಲ, ಮೆರವಣಿಗೆಗಳು, ಆಟಗಳು, ಕ್ರೀಡೆ, ಆಹಾರ ಜಾತ್ರೆಗಳು ಮತ್ತು ಧಾರ್ಮಿಕ ಸಮಾರಂಭಗಳ ಮೂಲಕ ಆಚರಿಸಲಾಗುತ್ತದೆ.
  • ಉತ್ಸವದಲ್ಲಿ ಭಾಗವಹಿಸುವ ಪ್ರವಾಸಿಗಳು ನಾಗಾ ಜೀವನದ ವಿವಿಧ ಅಂಶಗಳನ್ನು ಬಿಂಬಿಸುವ ಸಾಂಪ್ರದಾಯಿಕ ವರ್ಣಚಿತ್ರಗಳು, ಮರದ ಕೆತ್ತನೆಗಳು, ಶಾಲುಗಳು ಮತ್ತು ಶಿಲ್ಪಕಲೆಗಳು ಸೇರಿದಂತೆ ಮನೆ ವಿವಿಧ ನಾಗಾ ಸ್ಮರಣಿಕೆಗಳನ್ನು ತೆಗೆದುಕೊಳ್ಳಬಹುದು. ನಾಗಾ ವೀರರ ಕೆಚ್ಚೆದೆಯ ಕೆಲಸವನ್ನು ಹೊಗಳುವ ಹಾಡುಗಳು ಹಬ್ಬದ ಸಮಯದಲ್ಲಿ ದೊಡ್ಡ ಆಕರ್ಷಣೆಗಳಲ್ಲಿ ಒಂದಾಗಿದೆ.

 

2 Thoughts to “ಪ್ರಚಲಿತ ವಿದ್ಯಮಾನಗಳು-ಡಿಸೆಂಬರ್-7,2016”

  1. hemaraju

    good work in kannada subject

Leave a Comment

This site uses Akismet to reduce spam. Learn how your comment data is processed.