ತಮಿಳುನಾಡು ಮುಖ್ಯಮಂತ್ರಿ ಜೆ ಜಯಲಲಿತಾ ನಿಧನ

ತೀವ್ರ ಅನಾರೋಗ್ಯದ ಹಿನ್ನೆಲೆಯಲ್ಲಿ ಚೆನ್ನೈನ ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಮಿಳುನಾಡು ಮುಖ್ಯಮಂತ್ರಿ ಹಾಗೂ ತಮಿಳರ ಪಾಲಿನ ಪ್ರೀತಿಯ ‘ಅಮ್ಮ’ ಜಯರಾಮ್ ಜಯಲಲಿತಾ ನಿಧನರಾದರು. ಜಯಲಲಿತಾ ದೇಶ ಕಂಡ ಅತ್ಯಂತ ಪ್ರಭಾವಿ ರಾಜಕಾರಣಿ ಹಾಗೂ 1960 ಮತ್ತು 70 ದಶಕದಲ್ಲಿ ಪ್ರಸಿದ್ದ ಚಿತ್ರನಟಿಯಾಗಿದ್ದರು.

ಜೆ ಜಯಲಲಿತಾ:

  • ಜೆ.ಜಯಲಲಿತಾ 1948ರ ಫೆಬ್ರುವರಿ 24 ರಂದು ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಮೇಲುಕೋಟೆಯ ಮಧ್ಯಮ ವರ್ಗದ ಅಯ್ಯಂಗಾರ್ ಮನೆತನದ ಬ್ರಾಹ್ಮಣ ಕುಟುಂಬದಲ್ಲಿ ಜಯರಾಮ್‌, ಸಂಧ್ಯಾ ದಂಪತಿಗೆ ಜನಿಸಿದರು. ಅವರ ಹುಟ್ಟು ಹೆಸರು ‘ಕೋಮಲವಲ್ಲಿ.’ ತಾತ (ತಂದೆಯ ತಂದೆ) ಮೈಸೂರು ಒಡೆಯರ್‌ ಬಳಿ ಕೆಲಸ ಮಾಡುತ್ತಿದ್ದರಿಂದ ಜಯಲಲಿತಾ ಎಂದು ಮರುನಾಮಕರಣ ಮಾಡಿದರು.
  •  1960 ಮೇ ತಿಂಗಳಲ್ಲಿ ಮೈಲಾಪುರದಲ್ಲಿ ಭರತನಾಟ್ಯ ಕಲಾವಿದೆಯಾಗಿ ರಂಗ ಪ್ರವೇಶ. 1961ರಲ್ಲಿ ಕನ್ನಡದ ’ಶ್ರೀಶೈಲ ಮಹಾತ್ಮೆ’ ಸಿನಿಮಾದಲ್ಲಿ ಬಾಲನಟಿಯಾಗಿ ಅಭಿನಯಿಸಿದರು. 1964ರಲ್ಲಿ ಬಿ.ಆರ್. ಪಂತುಲು ಅವರ ‘ಚಿನ್ನದ ಗೊಂಬೆ’ ಚಿತ್ರದಲ್ಲಿ ಕಲ್ಯಾಣ್ ಕುಮಾರ್ ಜೊತೆ ಅಭಿನಸಿದರು. 1964ರಲ್ಲಿ ವೈ.ಜಿ. ಪಾರ್ಥಸಾರಥಿ ನಾಟಕ ತಂಡದ ಮೂಲಕ, ರಂಗಭೂಮಿಗೆ ಪ್ರವೇಶ. 1965ರಲ್ಲಿ ವೆನ್ನಿರ ಅಡೈ ಚಿತ್ರದ ಮೂಲಕ ತಮಿಳು ಸಿನಿಮಾ ರಂಗ ಪ್ರವೇಶ.
  • 1961 ರಲ್ಲಿ ಬಿಡುಗಡೆಯಾದ ‘ಎಪಿಸ್ಟಲ್‌’ ಎಂಬ ಇಂಗ್ಲಿಷ್‌ ಚಿತ್ರದಲ್ಲಿ ಜಯಾ ಮೊದಲ ಬಾರಿ ಕ್ಯಾಮೆರಾ ಎದುರಿಸಿದ್ದರು. 1964 ರಲ್ಲಿ 15 ವರ್ಷದವರಿದ್ದಾಗ ಬಿಡುಗಡೆಯಾದ ‘ಚಿನ್ನದ ಗೊಂಬೆ’ ಕನ್ನಡ ಚಿತ್ರ ಅವರು ನಾಯಕಿಯಾಗಿ ಅಭಿನಯಿಸಿದ್ದ ಮೊದಲ ಚಿತ್ರ. ದಿ. ಕಲ್ಯಾಣ್‌ ಕುಮಾರ್‌ ಚಿತ್ರ ನಾಯಕ.
  • ತಮಿಳು ಚಿತ್ರರಂಗದಲ್ಲಿ ಮೊತ್ತಮೊದಲ ಬಾರಿ ಸ್ಕರ್ಟ್‌ ಧರಿಸಿದ್ದ ಗ್ಲಾಮರಸ್‌ ನಾಯಕಿ ಜಯಾ ಆಗಿನ ಸೂಪರ್‌ ಸ್ಟಾರ್‌ ಎಂ.ಜಿ. ರಾಮಚಂದ್ರನ್‌ ಕಣ್ಣಿಗೆ ಬಿದ್ದರು. ಅಲ್ಲಿಂದ ಮುಂದೆ ಅವರ ಚಿತ್ರ ಬದುಕು, ಖಾಸಗಿ ಬದುಕು ಎಲ್ಲವೂ ಬದಲಾಯಿತು. 1964 ರಿಂದ 1971ರ ಅವಧಿಯಲ್ಲಿ ಈ ಜೋಡಿ 20ಕ್ಕೂ ಹೆಚ್ಚು ಸಿನಿಮಾ ಗಳಲ್ಲಿ ಅಭಿನಯಿಸಿತು. ಅವರು ನಂತರ ನಟಿಸಿದ ಎಲ್ಲಾ ಸಿನೇಮಾ ಗಳ ಸಂಖ್ಯೆ 140ಕ್ಕೂ ಹೆಚ್ಚು.
  • 1982 ರಲ್ಲಿ ನಟ ಎಂ ಜಿ ರಾಮಚಂದ್ರನ್ ರವರ ಮಾರ್ಗದರ್ಶನದಂತೆ ರಾಜಕೀಯಕ್ಕೆ ಪ್ರವೇಶಿಸಿದರು. 1987 ರಲ್ಲಿ ರಾಮಚಂದ್ರನ್ ನಿಧನರಾದ ನಂತರ ಎಐಡಿಎಂಕೆ ಪಕ್ಷದ ನೇತೃತ್ವವನ್ನು ವಹಿಸಿಕೊಂಡರು. ಆನಂತರ 1991 ರಲ್ಲಿ ಮೊದಲ ಬಾರಿಗೆ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಆಯ್ಕೆಯಾದರು.
  • ಜಯಲಲಿಯಾ ಆರು ಬಾರಿ ತಮಿಳುನಾಡಿನ  ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದರು. 1991-96 ರವರೆಗೆ ಮೊದಲ ಬಾರಿಗೆ, 2001 ರಲ್ಲಿ ಎರಡನೇ ಬಾರಿ, 2002-06 ಮೂರನೇ ಬಾರಿ, 2011-14 ರವರೆಗೆ ನಾಲ್ಕನೇ ಬಾರಿ, 2015-16 ಐದನೇ ಬಾರಿ ಮತ್ತು 2016 ಮೇ-ಡಿಸೆಂಬರ್ ಆರನೇ ಬಾರಿ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು.
  • ಜಯಲಲಿತಾ ತಮ್ಮ ಜನಪ್ರಿಯ ಅಮ್ಮ ಮಾದರಿಯ ಯೋಜನೆಗಳಿಂದ ಬಡಜನರ ಮನಗೆದ್ದಿದ್ದರು. ಇವರ ಯೋಜನೆಗಳು ಇತರೆ ರಾಜ್ಯಗಳಿಗೂ ಮಾದರಿಯಾಗಿದ್ದವು.

ವಿದೇಶಿ ನೇರ ಬಂಡವಾಳ ಹೂಡಿಕೆಯಲ್ಲಿ ಮೈಲುಗಲ್ಲು ಸಾಧಿಸಿದ ಭಾರತ

ವಿದೇಶಿ ನೇರ ಬಂಡವಾಳ ಆಕರ್ಷಣೆಯಲ್ಲಿ ಭಾರತ ಹೊಸ ಮೈಲುಗಲ್ಲು ಸಾಧಿಸಿದೆ. ಏಪ್ರಿಲ್ 2000 ಮತ್ತು ಸೆಪ್ಟೆಂಬರ್ 2016 ಅವಧಿಯಲ್ಲಿ ಭಾರತ ಯುಎಸ್ 300 ಬಿಲಿಯನ್ ಡಾಲರ್ ನೇರ ಬಂಡವಾಳ ಹೂಡಿಕೆಯನ್ನು ಆಕರ್ಷಿಸಿದೆ. ಈ ಅವಧಿಯಲ್ಲಿ ಒಟ್ಟಾರೆಯಾಗಿ ಭಾರತ 310.26 ಬಿಲಿಯನ್ ಡಾಲರ್ ಬಂಡವಾಳವನ್ನು ಆಕರ್ಷಿಸಿದೆ. ಆ ಮೂಲಕ ವಿದೇಶ ನೇರ ಬಂಡವಾಳ ಹೂಡಿಕೆಗೆ ವಿಶ್ವಾಸರ್ಹ ರಾಷ್ಟ್ರವೆಂದು ಮತ್ತೊಮ್ಮೆ ಸಾಬೀತುಪಡಿಸಿದೆ.

ಪ್ರಮುಖಾಂಶಗಳು:

  • ಒಟ್ಟಾರೆ ವಿದೇಶಿ ನೇರ ಬಂಡವಾಳ ಹೂಡಿಕೆಯಲ್ಲಿ ಶೇ 33% ಮಾರಿಷಸ್ ನಿಂದ ಹರಿದು ಬಂದಿದೆ. ಏಪ್ರಿಲ್ 2000 ಮತ್ತು ಸೆಪ್ಟೆಂಬರ್ 2016ರ ಅವಧಿಯಲ್ಲಿ 101.76 ಬಿಲಿಯನ್ ಡಾಲರ್ ವಿದೇಶಿ ನೇರ ಬಂಡವಾಳ ಮಾರಿಷಸ್ ನಿಂದ ಭಾರತಕ್ಕೆ ಬಂದಿದೆ.
  • ದುಪ್ಪಟ ತೆರಿಗೆಯನ್ನು (DTAA) ತಪ್ಪಿಸಿಕೊಳ್ಳುವ ಸಲುವಾಗಿ ಮಾರಿಷಸ್ ನಿಂದ ಅಧಿಕ ನೇರ ಬಂಡವಾಳ ಹೂಡಿಕೆಯಾಗಿದೆ ಎನ್ನಲಾಗಿದೆ.

ಟಾಪ್ ಎಫ್ ಡಿ ಐ ರಾಷ್ಟ್ರಗಳು:

  • ಮಾರಿಷಸ್ ನಂತರ ಸಿಂಗಾಪುರ, ಯುಎಸ್, ಯುಕೆ ಮತ್ತು ನೆದರ್ಲ್ಯಾಂಡ್ ಭಾರತಕ್ಕೆ ಅತಿ ಹೆಚ್ಚು ವಿದೇಶಿ ನೇರ ಬಂಡವಾಳ ಹೂಡಿರುವ ರಾಷ್ಟ್ರಗಳು.

ವಲಯ ವಾರು:

  • ಸೇವಾ ಕ್ಷೇತ್ರ (Service Sector) ಶೇ 18% ಬಂಡವಾಳವನ್ನು ಆಕರ್ಷಿಸುವ ಮೂಲಕ ಅತಿ ಹೆಚ್ಚು ವಿದೇಶಿ ನೇರ ಬಂಡವಾಳವನ್ನು ಆಕರ್ಷಿಸಿದ ಕ್ಷೇತ್ರವಾಗಿದೆ. ನಂತರ ಸ್ಥಾನದಲ್ಲಿ ನಿರ್ಮಾಣ ಅಭಿವೃದ್ದಿ, ಕಂಪ್ಯೂಟರ್ ಸಾಪ್ಟ್ ವೇರ್ ಮತ್ತು ಹಾರ್ಡ್ವೇರ್, ದೂರಸಂಪರ್ಕ ಮತ್ತು ಆಟೋಮೊಬೈಲ್ ಇದೆ.
  • ಭಾರತ ಸರ್ಕಾರದ ಪ್ರಮುಖ ಯೋಜನೆಗಳಾದ “ಮೇಕ್ ಇನ್ ಇಂಡಿಯಾ”, “ಸ್ಕಿಲ್ ಇಂಡಿಯಾ”, “ಡಿಜಿಟಲ್ ಇಂಡಿಯಾ”ದಂತಹ ಯೋಜನೆಗಳಿಗೆ ವಿದೇಶಿ ನೇರ ಬಂಡವಾಳ ಹೂಡಿಕೆಯಲ್ಲಿ ಸಡಿಲಗೊಳಿಸಿರುವುದು ಭಾರತಕ್ಕೆ ಪೂರಕವಾಗಿದೆ.

ವಿಕಲಚೇತನರ ಸವಲತ್ತುಗಳ ಅನುಷ್ಠಾನ: ಕರ್ನಾಟಕಕ್ಕೆ ಪ್ರಶಸ್ತಿ

ವಿಕಲಚೇತನರ ಸವಲತ್ತುಗಳನ್ನು ಅನುಷ್ಠಾನ ಮಾಡುವಲ್ಲಿ ಕರ್ನಾಟಕ ತೋರಿರುವ ಬದ್ದತೆಗಾಗಿ ರಾಜ್ಯಕ್ಕೆ “ಅತ್ಯುತ್ತಮ ರಾಜ್ಯ ಪ್ರಶಸ್ತಿ” ಲಭಿಸಿದೆ. ಈ ಪ್ರಶಸ್ತಿಯನ್ನು ಕೇಂದ್ರ ಸರ್ಕಾರದ  ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ನೀಡುತ್ತಿದೆ.

  • ಕೇಂದ್ರ ರಾಜ್ಯ ಸರ್ಕಾರವು ವಿಕಲಚೇತನರ ಕಲ್ಯಾಣಕ್ಕಾಗಿ ಸುಮಾರು 22 ಯೋಜನೆಗಳನ್ನು ಘೋಷಿಸಿದ್ದು, ಇವುಗಳ ಅನುಷ್ಠಾನಕ್ಕೆ ತರುವಲ್ಲಿ ಕರ್ನಾಟಕಕ್ಕೆ “ಅತ್ಯುತ್ತಮ ರಾಜ್ಯ’ ಪ್ರಶಸ್ತಿ ಲಭಿಸಿದೆ.
  • ವಿಶ್ವ ವಿಕಲಚೇತನರ ದಿನಾಚರಣೆ- 2016 ಕಾರ್ಯಕ್ರಮದ ಅಂಗವಾಗಿ ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಇಲಾಖೆಯ ಸಚಿವೆ ಶ್ರೀಮತಿ ಉಮಾಶ್ರೀ ಅವರು ಭಾಗವಹಿಸಿ ಈ ಪ್ರಶಸ್ತಿಯನ್ನು ಸರ್ಕಾರದ ಪರವಾಗಿ ಸ್ವೀಕರಿಸಲಿದ್ದಾರೆ.

ವಿಕಲಚೇತನರಿಗೆ ಇರುವ ಕೆಲವು ಯೋಜನೆಗಳು:

  • ವಿಕಲಚೇತನ ವಿದ್ಯಾರ್ಥಿಗಳಿಗೆ ಟಾಕಿಂಗ್ ಲ್ಯಾಪ್‍ಟಾಪ್ ವಿತರಣೆ, ಬ್ರೈಲ್‍ಯಂತ್ರ ವಿತರಣೆ, ಕೆ.ಎ.ಎಸ್ ಐ.ಎ.ಎಸ್. ಇನ್ನಿತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವ ವಿಕಲಚೇತನರ ವಿದ್ಯಾರ್ಥಿಗಳಿಗೆ ಗರಿಷ್ಠ 1 ಲಕ್ಷದವರೆಗೆ ಧನಸಹಾಯ ನೀಡಲಾಗುತ್ತಿದೆ.
  • ಜಿಲ್ಲಾ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಕಲಚೇತನರ ಪುನರ್ವಸತಿ ಕೇಂದ್ರಗಳ ನಿರ್ವಹಣೆಗಾಗಿ ನೀಡಲಾಗುತ್ತಿರುವ ಅನುದಾನದ ಮೊತ್ತವನ್ನು 28 ಲಕ್ಷ ರೂ. ಗಳಿಂದ 36 ಲಕ್ಷ ರೂ. ಗಳಿಗೆ ಹೆಚ್ಚಳ ಮಾಡಲಾಗಿದೆ. ವಿಕಲಚೇತನರಿಗಾಗಿ 10,000 ರೂ. ಮೌಲ್ಯದ ಸಾಧನ ಸಲಕರಣೆಗಳನ್ನು ಉಚಿತವಾಗಿ ನೀಡಲಾಗುತ್ತಿದ್ದು, ಆ ಮೊತ್ತವನ್ನು 15,000 ರೂ. ಗಳಿಗೆ ಹೆಚ್ಚಿಸಲಾಗಿದೆ.
  • ಅಂಧ ತಾಯಂದಿರಿಗೆ ಜನಿಸಿದ ಮಕ್ಕಳ ಪಾಲನೆ ಪೋಷಣೆಗಾಗಿ ಮಾಸಿಕ 2000 ರೂ. ಗಳ ಶಿಶುಪಾಲನೆ ಭತ್ಯೆ. ಹೀಗೆ ಹತ್ತು ಹಲವು ಯೋಜನೆಗಳನ್ನು ಸರ್ಕಾರ ಹಮ್ಮಿಕೊಂಡಿದೆ.

ಸ್ತನಪಾನ ಉತ್ತೇಜನಕ್ಕೆ “ಸ್ತನಪಾನ ಸುರಕ್ಷ” ಆ್ಯಪ್ ಬಿಡುಗಡೆ

ಎದೆಹಾಲು ಉಣಿಸುವುದನ್ನು ಉತ್ತೇಜಿಸಲು ಮತ್ತು ಮಗುವಿನ ಸಮತೋಲನ ಆಹಾರದ ಮೇಲೆ ನಿಗಾವಹಿಸಲು  “ಸ್ತನಪಾನ ಸುರಕ್ಷ” ಎಂಬ ಮೊಬೈನ್ ಅಪ್ಲಿಕೇಷನ್ ಅನ್ನು ಕೇಂದ್ರ ಬುಡಕಟ್ಟು ವ್ಯವಹಾರ ಸಚಿವ ಜುಲ್ ಓರಮ್ ರವರು ಬಿಡುಗಡೆಗೊಳಿಸಿದರು. ಬ್ರೆಸ್ಟ್ ಫೀಡಿಂಗ್ ಪ್ರೊಮೋಷನ್ ಆಫ್ ಇಂಡಿಯಾ (BPNI) ಈ ಮೊಬೈಲ್ ಆ್ಯಪ್ ಅನ್ನು ಅಭಿವೃದ್ದಿಪಡಿಸಿದೆ.

  • ಎದೆಹಾಲು ಉಣಿಸುವುದನ್ನು ಪ್ರೇರೆಪಿಸಲು ಮತ್ತು ಮಗುವಿನ ಆಹಾರ ಪದಾರ್ಥದ ಮೇಲೆ ಸೂಕ್ತ ನಿಗಾವಹಿಸಲು “ಸ್ತನಪಾನ ಸುರಕ್ಷ” ದಂತಹ ಆ್ಯಪ್ ಬಿಡುಗಡೆಗೊಳಿಸಿರುವುದು ಇದೇ ಮೊದಲು.
  • ಈ ಆ್ಯಪ್ ಬಳಸಿ ಯಾವುದೇ ಬೇಬಿ ಫುಡ್ ಭಾವಚಿತ್ರವನ್ನು ತೆಗೆದು BPNI ಗೆ ಕಳುಹಿಸಕೊಡಬಹುದು.
  • ಪ್ರಸವಪೂರ್ವ ಮತ್ತು ಮಗು ಜನಿಸಿದ ನಂತರದ ಅವಧಿಯಲ್ಲಿ ಎದೆಹಾಲು ಉಣಿಸುವ ಬಗ್ಗೆ ತಾಯಿಗೆ ನೆರವಾಗಲು ಸ್ತನಪಾನ ಸಲಹೆಗಾರ ನಗರವಾರು ಮಾಹಿತಿಯನ್ನು ಈ ಆ್ಯಪ್ ಹೊಂದಿದೆ.
  • ಅಲ್ಲದೇ ಸ್ತನಪಾನ ಸಲಹೆಗಾರರಾಗಿ ಕೆಲಸ ನಿರ್ವಹಿಸಲು ಇಚ್ಚಿಸುವ ಮಹಿಳೆಯರು ಈ ಆ್ಯಪ್ ಮೂಲಕ ನೋಂದಾಣಿಯಾಗಬಹುದಾಗಿದೆ.

ಹಿನ್ನಲೆ:

ಎದೆಹಾಲು ಉಣಿಸುವುದರ ಕುರಿತಾಗಿರುವ ಸಾಂಪ್ರದಾಯಿಕ ಆಚರಣೆಗಳು ಮತ್ತು ಮೂಡನಂಬಿಕೆಗಳಿಂದ ನವಜಾತ ಶಿಶುಗಳು ತಾಯಿ ಹಾಲಿನಿಂದ ವಂಚಿತರಾಗುತ್ತಿರುವುದು ಕಳವಳದ ಸಂಗತಿ. ಆಸ್ಪತ್ರೆಯಲ್ಲಿ ಜನಿಸುವ ಮಕ್ಕಳಲ್ಲಿ ಶೇ 45% ಮಕ್ಕಳಿಗೆ ಮಾತ್ರ ಜನಿಸಿದ ಒಂದು ಗಂಟೆ ಅವಧಿಯೊಳಗೆ ಎದೆಹಾಲನ್ನು ಉಣಿಸಲಾಗುತ್ತಿದೆ. ಈ ಸಮಸ್ಯೆಯನ್ನು ಪರಿಹರಿಸುವ ಸಲುವಾಗಿ ಕೇಂದ್ರ ಸರ್ಕಾರ ಇತ್ತೀಚೆಗೆ “ಮಾ” (MAA: Mothers Absolute Affection) ಕಾರ್ಯಕ್ರಮವನ್ನು ಜಾರಿಗೆ ತಂದಿದೆ.

4 Thoughts to “ಪ್ರಚಲಿತ ವಿದ್ಯಮಾನಗಳು-ಡಿಸೆಂಬರ್-5,2016”

Leave a Comment

This site uses Akismet to reduce spam. Learn how your comment data is processed.