ಕ್ಯೂಬಾದ ಮಾಜಿ ಅಧ್ಯಕ್ಷ ಫಿಡೆಲ್ ಕ್ಯಾಸ್ಟ್ರೋ ನಿಧನ

ಕ್ಯೂಬಾದ ಮಾಜಿ ಅಧ್ಯಕ್ಷ ಮತ್ತು ಕಮ್ಯೂನಿಷ್ಟ್ ಕ್ರಾಂತಿಯ ನಾಯಕ  ನಿಧನರಾದರು. ಅವರಿಗೆ 90 ವರ್ಷ ವಯಸ್ಸಾಗಿತ್ತು. 1959ರ ಕ್ಯೂಬಾ ಕ್ರಾಂತಿ ವೇಳೆ ಕ್ಯಾಸ್ಟ್ರೋ ರವರು ಕಮಾಂಡರ್ ಇನ್ ಚೀಫ್ ಆಗಿ ಪ್ರಮುಖ ಪಾತ್ರವಹಿಸಿದ್ದರು. 1976 ರಿಂದ 2008 ರವರೆಗೆ  ಕ್ಯೂಬಾದ ಅಧ್ಯಕ್ಷರಾಗಿ ಸುಮಾರು ಅರ್ಧ ಶತಕ ಕಾಲ ಮುನ್ನಡೆಸಿದ್ದರು. ಅನಾರೋಗ್ಯ ಕಾರಣ 2008 ರಲ್ಲಿ ತಮ್ಮ ಸಹೋದರ ರೌಲ್ ಕ್ಯಾಸ್ಟ್ರೋ ರವರಿಗೆ ಅಧ್ಯಕ್ಷ ಸ್ಥಾನವನ್ನು ಬಿಟ್ಟುಕೊಟ್ಟಿದ್ದರು.

ಫಿಡೆಲ್ ಕ್ಯಾಸ್ಟ್ರೋ ಬಗ್ಗೆ:

  • ಕ್ಯಾಸ್ಟ್ರೋ ಜನಿಸಿದ್ದು ಆಗಸ್ಟ್ 13, 1926 ಕ್ಯೂಬಾದ ಹೊಲ್ಗೈನ್ ಪ್ರಾಂತ್ಯದ ಬಿರನ್ ನಲ್ಲಿ. ಫಿಡೆಲ್ ಅಲೆಜಂಡ್ರೊ ಕ್ಯಾಸ್ಟ್ರೋ ರುಝ್ ಇವರ ಮೂಲ ಹೆಸರು.
  • 1956 ರಲ್ಲಿ ಮಾರ್ಕ್ಸ್‌ವಾದಿ ಹೋರಾಟಗಾರರಾದ ಚೆ ಗುವೆರಾ ಹಾಗೂ ಫಿಡೆಲ್‌ ಕ್ಯಾಸ್ಟ್ರೊ ಕ್ಯೂಬಾ ಸರ್ಕಾರದ ವಿರುದ್ದ ಗೆರಿಲ್ಲಾ ಯುದ್ದ ನಡೆಸುವ ಮೂಲಕ ಸುದ್ದಿಯಾದರು.
  • 1959 ರಲ್ಲಿ ಫುಲ್ಗೆನ್ಸಿಯೊ ಬಟಿಸ್ಟ ಸರ್ಕಾರವನ್ನು ಕಮ್ಯೂನಿಷ್ಟ್ ಕ್ರಾಂತಿ ಮೂಲಕ ಕಿತ್ತೊಗೆದು 1959 ರಿಂದ 1976 ರವರೆಗೆ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದರು.
  • 1976ರಿಂದ 2008ರವರೆಗೆ ಅಧ್ಯಕ್ಷರಾಗಿ ಅಧಿಕಾರದಲ್ಲಿದ್ದರು. ಅನಾರೋಗ್ಯದ ಕಾರಣದಿಂದ 2008ರಲ್ಲಿ ಕ್ಯೂಬಾ ಅಧ್ಯಕ್ಷ ಹುದ್ದೆ ತೊರೆದು, ಸಕ್ರಿಯ ರಾಜಕೀಯಕ್ಕೆ ವಿದಾಯ ಘೋಷಿಸಿ ತಮ್ಮ ಸೋದರ ರೌಲ್‌ ಕ್ಯಾಸ್ಟ್ರೊಗೆ ಅಧಿಕಾರ ಚುಕ್ಕಾಣಿ ಹಸ್ತಾಂತರಿಸಿದ್ದರು.
  • ಕ್ಯಾಸ್ಟ್ರೋ ರವರು ರಾಣಿ ಎಲಿಜಬೆತ್ ಮತ್ತು ಥಾಯ್ಲೆಂಡ್ ದೊರೆ ನಂತರ ದೀರ್ಘ ಕಾಲ ಆಡಳಿತ ನಡೆಸಿದ ಮೂರನೇಯವರು.
  • ಕ್ಯಾಸ್ಟ್ರೊ ಈ ವರ್ಷದ ಆಗಸ್ಟ್ 13ರಂದು ತಮ್ಮ 90ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು.

ನವೆಂಬರ್ 26: ಸಂವಿಧಾನ ದಿನ

ಭಾರತ ಸಂವಿಧಾನ ದಿವಸ ಅಥವಾ ಸಂವಿಧಾನ ದಿನವನ್ನು ನವೆಂಬರ್ 26 ರಂದು ಆಚರಿಸಲಾಗುತ್ತದೆ. ಭಾರತ ಸಂವಿಧಾನದ ಬಗ್ಗೆ ಅರಿವು ಮೂಡಿಸುವುದು ಈ ದಿನವನ್ನು ಆಚರಿಸುವ ಉದ್ದೇಶ. 1949 ರ ಈ ದಿನದಂದು ಭಾರತ ಸಂವಿಧಾನವನ್ನು ಅಳವಡಿಸಿಕೊಳ್ಳಲಾಯಿತು. ಜನವರಿ 26, 1950ರಿಂದ ಭಾರತ ಸಂವಿಧಾನ ಜಾರಿಗೆ ಬರುವ ಮೂಲಕ ಸ್ವಾತಂತ್ರ ಭಾರತದಲ್ಲಿ ಹೊಸ ಇತಿಹಾಸ ಬರೆಯಲಾಯಿತು. ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ಸಂವಿಧಾನ ಆಚರಣೆಯ ನೋಡಲ್ ಏಜೆನ್ಸಿ ಆಗಿದೆ. ಸಂವಿಧಾನ ದಿವಸ್ ಅಂಗವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ರವರು “ಮೇಕಿಂಗ್ ಆಫ್ ಕನ್ಸ್ಟಿಟ್ಯೂಷನ್” ಮತ್ತು “ನ್ಯೂ ವರ್ಷನ್ ಆಫ್ ಕನ್ಸ್ಟಿಟ್ಯೂಷನ್ ಆಫ್ ಇಂಡಿಯಾ” ಎಂಬ ಎರಡು ಪುಸ್ತಕಗಳನ್ನು ಬಿಡುಗಡೆಗೊಳಿಸಿದರು.

ಭಾರತ ಸಂವಿಧಾನದ ಪ್ರಮುಖಾಂಶಗಳು:

  • ಭಾರತ ಸಂವಿಧಾನ ವಿಶ್ವದ ಅತಿ ದೊಡ್ಡ ಲಿಖಿತ ಸಂವಿಧಾನವಾಗಿದೆ. ನಮ್ಮ ಸಂವಿಧಾನವು 448 ಪರಿಚ್ಛೇದಗಳು, 25 ಭಾಗಗಳು ಮತ್ತು 12 ಷೆಡ್ಯೂಲ್ ಗಳನ್ನು ಒಳಗೊಂಡಿದೆ. ಸರ್ಕಾರ ವ್ಯವಸ್ಥೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಇದು ಮೂಲಭೂತ ಡಾಕ್ಯುಮೆಂಟ್ ಆಗಿದೆ.
  • ಸಾರ್ವಜನಿಕರ ಮೂಲಭೂತ ಹಕ್ಕುಗಳು, ಕರ್ತವ್ಯಗಳು, ಸರ್ಕಾರದ ಪಾತ್ರ, ಪ್ರಧಾನಿ ಮಂತ್ರಿ, ರಾಷ್ಟ್ರಪತಿ, ಮುಖ್ಯಮಂತ್ರಿ ಮತ್ತು ರಾಜ್ಯಪಾಲರ ಅಧಿಕಾರ, ಸರ್ಕಾರ ಮತ್ತು ಸಾರ್ವಜನಿಕರ ನಡುವಿನ ಸಂಬಂಧ ಹಾಗೂ ಒಕ್ಕೂಟ ವ್ಯವಸ್ಥೆ ಹೇಗೆ ಕಾರ್ಯನಿರ್ವಹಿಸ ಬೇಕು ಎನ್ನುವ ಸಿದ್ದಾಂತವನ್ನು ಒಳಗೊಂಡಿದೆ.
  • ಭಾರತ ಸಂವಿಧಾನದ ರಚನೆ ಮತ್ತು ಪರಿಕಲ್ಪನೆಯನ್ನು ಯುಕೆ, ಅಮೆರಿಕ, ಜರ್ಮನಿ, ಐರ್ಲ್ಯಾಂಡ್, ಆಸ್ಟ್ರೇಲಿಯಾ, ಕೆನಡಾ ಮತ್ತು ಜಪಾನ್ ನಿಂದ ಎರವಲು ಪಡೆಯಲಾಗಿದೆ.

ಹಿನ್ನಲೆ:

  • ಕಳೆದ ಅಕ್ಟೋಬರ್ 2015 ರಲ್ಲಿ ಪ್ರಧಾನಿ ಮೋದಿ ರವರು ನವೆಂಬರ್ 26 ರಂದು ಸಂವಿಧಾನ ದಿನವೆಂದು ಘೋಷಿಸಿದ್ದರು.

ನಗದು ರಹಿತ ಆರ್ಥಿಕತೆ: ಅಮಿತಾಬ್ ಕಾಂತ್ ಸಮಿತಿ ರಚಿಸಿದ ಕೇಂದ್ರ ಸರ್ಕಾರ

ಭಾರತವನ್ನು ನಗದು ರಹಿತ ಅರ್ಥ ವ್ಯವಸ್ಥೆಯನ್ನಾಗಿ ಪರಿವರ್ತಿಸಲು ಕೇಂದ್ರ ಸರ್ಕಾರ ಪಣತೊಟ್ಟಿದ್ದು, ಅದರಂತೆ ಈ ಪ್ರಕ್ರಿಯೆಯನ್ನು ಚುರುಕುಗೊಳಿಸುವ ಸಲುವಾಗಿ ಅಮಿತಾಬ್ ಕಾಂತ್ ಸಮಿತಿಯನ್ನು ಕೇಂದ್ರ ಸರ್ಕಾರ ರಚಿಸಿದೆ. ಅಮಿತಾಬ್ ಕಾಂತ್ ರವರು ನೀತಿ ಆಯೋಗದ ಸಿಇಓ. ಡಿಜಿಟಲ್ ನಗದು ಪಾವತಿಗೆ ಇರುವ ತೊಡಕುಗಳನ್ನು ಗುರುತಿಸುವ ಹೊಣೆಗಾರಿಕೆಯನ್ನು ಸಮಿತಿಗೆ ವಹಿಸಲಾಗಿದೆ.

ಸಮಿತಿಯ ಹೊಣೆಗಾರಿಕೆ:

  • ಬಳಕೆದಾರ ಸ್ನೇಹಿ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಎಲ್ಲಾ ಆರ್ಥಿಕ ಕ್ಷೇತ್ರಗಳಲ್ಲಿ ಸಾಧ್ಯವಾದಷ್ಟು ಬೇಗನೆ ಗುರುತಿಸುವುದು.
  • ವಿಭಿನ್ನ ಅರ್ಥಿಕ ಕ್ಷೇತ್ರಗಳಿಗೆ ಸೂಕ್ತವಾದ ವಿವಿಧ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಗುರುತಿಸುವುದು ಮತ್ತು ಸುಲಭವಾಗಿ ಕಾರ್ಯರೂಪಕ್ಕೆ ತರಲು ಸಹಕರಿಸುವುದು.
  • ಕೇಂದ್ರ ಸಚಿವಾಲಯಗಳು, ರಾಜ್ಯ ಸರ್ಕಾರಗಳು, ಸ್ಥಳೀಯ ಸಂಸ್ಥೆಗಳು, ಜಿಲ್ಲಾಡಳಿತಗಳು ಮತ್ತು ವ್ಯಾಪಾರ ಹಾಗೂ ಉದ್ದಿಮೆ ಸಂಸ್ಥೆಗಳೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದು ಡಿಟಿಜಲ್ ನಗದು ಪಾವತಿ ವ್ಯವಸ್ಥೆ ಅಳವಡಿಸಿಕೊಳ್ಳಲು ಸಹಕರಿಸುವುದು.
  • ವಿವಿಧ ನಗದು ಪಾವತಿ ವ್ಯವಸ್ಥೆಯನ್ನು ಜಾರಿಗೆ ತರಲು ತಗಲಬಹುದಾದ ವೆಚ್ಚವನ್ನು ಅಂದಾಜು ಮಾಡುವುದು.

ಹಿನ್ನಲೆ:

  • ಕೇಂದ್ರ ಸರ್ಕಾರ ದೊಡ್ಡ ಮೊತ್ತದ ನೋಟುಗಳನ್ನು ಅಮಾನ್ಯಗೊಳಿಸಿದ ಬಳಿಕ ಪ್ರಧಾನ ಮಂತ್ರಿ ಕಚೇರಿ ಸೂಚನೆಯಂತೆ ಸಮಿತಿಯನ್ನು ರಚಿಸಲಾಗಿದೆ. ಸರ್ಕಾರದ ಎಲ್ಲಾ ಪಾವತಿ ವ್ಯವಸ್ಥೆಯನ್ನು ಡಿಜಿಟಲ್ ರೂಪಕ್ಕೆ ತರಲು ಕೇಂದ್ರ ಸರ್ಕಾರ ಸಜ್ಜಾಗಿದೆ.

Leave a Comment

This site uses Akismet to reduce spam. Learn how your comment data is processed.