ಹಿಮಾಚಲ ಪ್ರದೇಶ ಬಯಲು ಮಲ ವಿಸರ್ಜನೆ ಮುಕ್ತ ರಾಜ್ಯ

ಹಿಮಾಚಲ ಪ್ರದೇಶ ರಾಜ್ಯವನ್ನು ಅಧಿಕೃತವಾಗಿ ಬಯಲು ಮಲ ವಿಸರ್ಜನೆ ಮುಕ್ತ ರಾಷ್ಟ್ರವೆಂದು ಘೋಷಿಸಲಾಗಿದೆ. ಸ್ವಚ್ಚ ಭಾರತ ಅಭಿಯಾನದಡಿ ರಾಜ್ಯದಲ್ಲಿ ಎಲ್ಲಾ ಕುಟುಂಬಗಳು ಶೌಚಾಲಯವನ್ನು ನಿರ್ಮಿಸಿಕೊಂಡಿದ್ದು, ಬಳಸಲಾಗುತ್ತಿದೆ. ಆ ಮೂಲಕ ಸಿಕ್ಕಿಂ ನಂತರ ಈ ಸಾಧನೆ ಮಾಡಿದ ಎರಡನೇ ರಾಜ್ಯ ಹಿಮಾಚಲ ಪ್ರದೇಶ. ಆದರೆ ದೊಡ್ಡ ರಾಜ್ಯಗಳ ಪೈಕಿ ಈ ಸಾಧನೆ ಮಾಡಿದ ಮೊದಲ ರಾಜ್ಯವೆನಿಸಿದೆ.

  • ರಾಜ್ಯದ ಎಲ್ಲಾ ಕುಟುಂಬಗಳು ಶೇ 100% ಶೌಚಾಲಯವನ್ನು ನಿರ್ಮಿಸಿಕೊಂಡು, ಬಳಸುತ್ತಿವೆ.
  • ಹಿಮಾಚಲ ಪ್ರದೇಶದ 12 ಜಿಲ್ಲೆಗಳು ಬಯಲು ಮಲ ವಿಸರ್ಜನೆ ಮುಕ್ತವಾಗಿವೆ.

ಬಯಲು ಮಲ ವಿಸರ್ಜನೆ ಮುಕ್ತವೆಂದರೆ?

  • ಯಾವುದೇ ಒಂದು ಪ್ರದೇಶವನ್ನು ಬಯಲು ಮಲ ಮುಕ್ತ ಪ್ರದೇಶವೆಂದು ಘೋಷಿಸಲು ಆ ಪ್ರದೇಶದ ಎಲ್ಲಾ ಕುಟುಂಬಗಳು, ಶಾಲೆ, ಅಂಗನವಾಡಿ ಮತ್ತು ಸಾವರ್ಜನಿಕ ಸಂಸ್ಥೆಗಳು ಶೌಚಾಲಯಗಳನ್ನು ನಿರ್ಮಿಸಿ ಬಳಸಬೇಕು ಅಲ್ಲದೇ ಬಯಲು ಪ್ರದೇಶದಲ್ಲಿ ಮಲ ವಿಸರ್ಜನೆ ಸಂಪೂರ್ಣವಾಗಿ ನಿಂತಿರಬೇಕು.

ಬಯಲು ಮಲದ ವಿಸರ್ಜನೆಯಿಂದಾಗುವ ತೊಂದರೆ:

  • ಜಂತುಗಳ ಸೋಂಕು, ಪೊಲಿಯೊ, ಡಯಾರಿಯೊ ಮತ್ತು ಹೆಪಟಿಟಿಸ್ ಕಾಯಿಲೆಗಳಿಗೆ ಮೂಲ ಕಾರಣ ಬಯಲು ಮಲ ವಿಸರ್ಜನೆ.

ಸಮಗ್ರ ಆರ್ಥಿಕ ಮತ್ತು ವ್ಯಾಪಾರ ಒಪ್ಪಂದಕ್ಕೆ ಐರೋಪ್ಯ ಒಕ್ಕೂಟ ಮತ್ತು ಕೆನಡಾ ಸಹಿ

ಐತಿಹಾಸಿಕ ಸಮಗ್ರ ಆರ್ಥಿಕ ಮತ್ತು ವ್ಯಾಪಾರ ಒಪ್ಪಂದಕ್ಕೆ (CETA) ಐರೋಪ್ಯ ಒಕ್ಕೂಟ ಮತ್ತು ಕೆನಡಾ ಸಹಿ ಮಾಡಿವೆ. ಕೆನಡಾದ ಪ್ರಧಾನಿ ಜಸ್ಟಿನ್ ಟುಡೆ ಮತ್ತು ಐರೋಪ್ಯ ಒಕ್ಕೂಟದ ಹಿರಿಯ ಅಧಿಕಾರಿಗಳು ಈ ಒಪ್ಪಂದಕ್ಕೆ ಬ್ರೆಜಿಲ್ನ ಬ್ರಸೆಲ್ ನಲ್ಲಿ ಸಹಿ ಹಾಕಿದರು. ಐರೋಪ್ಯ ಒಕ್ಕೂಟದ 28 ರಾಷ್ಟ್ರಗಳು ಈಗ ಈ ಒಪ್ಪಂದವನ್ನು ಅನುಮೋದಿಸಬೇಕಿದೆ.

ಸಮಗ್ರ ಆರ್ಥಿಕ ಮತ್ತು ವ್ಯಾಪಾರ ಒಪ್ಪಂದಕ್ಕೆ ಎಂದರೇನು?

  • CETA ಕೆನಡಾ ಮತ್ತು ಐರೋಪ್ಯ ಒಕ್ಕೂಟ ನಡುವಿನ ಮುಕ್ತ ವ್ಯಾಪಾರ ಒಪ್ಪಂದವಾಗಿದೆ. ಇದರಡಿ ಅನೇಕ ಕೈಗಾರಿಕಾ ಸರಕು, ಕೃಷಿ ಮತ್ತು ಆಹಾರ ಪದಾರ್ಥಗಳು ಸೇರಿದಂತೆ ಸುಮಾರು 9,000 ವಸ್ತುಗಳ ಮೇಲೆ ತೆರಿಗೆ ರದ್ದತಿ ಉದ್ದೇಶ ಹೊಂದಿದೆ.
  • ಏಕೀಕೃತ ಐರೋಪ್ಯ ಮಾರುಕಟ್ಟೆಯನ್ನು ವಿಶ್ವದ 10ನೇ ಅತಿದೊಡ್ಡ ಮಾರುಕಟ್ಟೆಯಾದ ಕೆನಡಾದೊಂದಿಗೆ ಸಂಪರ್ಕಿಸಲು ಒಪ್ಪಂದ ಸಹಕಾರಿಯಾಗಲಿದೆ. ಇದರಿಂದ ಐರೋಪ್ಯ ಒಕ್ಕೂಟ ಆರ್ಥಿಕತೆಗೆ 11.6 ಬಿಲಿಯನ್ ಯುರೋ ಮತ್ತು ಕೆನಡಾ ಆರ್ಥಿಕ ವ್ಯವಸ್ಥೆಗೆ 8.2 ಬಿಲಿಯನ್ ಯುರೋ ಸೇರ್ಪಡೆಗೊಳ್ಳಲಿದೆ.
  • ಇದಲ್ಲದೇ ದೂರಸಂಪರ್ಕ, ಹಣಕಾಸು ವಲಯ ಮತ್ತು ಸೇವಾ ವಲಯದಲ್ಲಿ ಸ್ಪರ್ಧೆ ಮತ್ತು ಸಹಕಾರಕ್ಕೆ ನಾಂದಿ ಹಾಡಲಿದೆ.

ಕೇಂದ್ರಾಡಳಿತ ಪ್ರದೇಶಗಳಿಗೆ ರಿಯಲ್ ಎಸ್ಟೇಟ್ (ನಿಯಂತ್ರಣ ಮತ್ತು ಅಭಿವೃದ್ದಿ) ನಿಯಮ ಜಾರಿ

ಕೇಂದ್ರ ವಸತಿ ಸಚಿವಾಲಯವು ರಿಯಲ್ ಎಸ್ಟೇಟ್ (ನಿಯಂತ್ರಣ ಮತ್ತು ಅಭಿವೃದ್ದಿ) ನಿಯಮ-2016 ಅನ್ನು ಐದು ಕೇಂದ್ರಾಡಳಿತ ಪ್ರದೇಶಗಳಿಗೂ ಅನ್ವಯವಾಗುವಂತೆ ಅಧಿಸೂಚನೆ ಹೊರಡಿಸಿದೆ. ಅಂಡಮಾನ್ ಮತ್ತು ನಿಕೋಬರ್ ದ್ವೀಪ ಪ್ರದೇಶ, ದಾದ್ರ ಮತ್ತು ನಗರ ಹವೇಲಿ, ದಮನ್ ಮತ್ತು ದಿಯು, ಲಕ್ಷದ್ವೀಪ ಮತ್ತು ಚಂಡೀಘರ್ ಕ್ಕೆ ಈ ಅಧಿಸೂಚನೆ ಅನ್ವಯವಾಗಲಿದೆ.

ಪ್ರಮುಖಾಂಶಗಳು:

  • ವಸತಿ ಮತ್ತು ವಾಣಿಜ್ಯ ಉದ್ದೇಶಗಳನ್ನು ಸಕಾಲದಲ್ಲಿ ಪೂರ್ಣಗೊಳಿಸಲು ಈ ನಿಯಮಗಳನ್ನು ಕೇಂದ್ರಾಡಳಿತ ಪ್ರದೇಶಗಳಿಗೂ ವಿಸ್ತರಿಸಲಾಗಿದೆ.
  • ಕಾಯಿದೆ ಪ್ರಕಾರ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ ಮತ್ತು ರಿಯಲ್ ಎಸ್ಟೇಟ್ ಮೇಲ್ಮನವಿ ಪ್ರಾಧಿಕಾರವನ್ನು ಏಪ್ರಿಲ್ 2017 ಕೊನೆಗೆ ಸ್ಥಾಪಿಸಬೇಕು.
  • ನಿಯಮ ಉಲ್ಲಘಿಸುವ ಪ್ರವರ್ತಕರಿಗೆ ಗರಿಷ್ಠ ಮೂರು ವರ್ಷ ಜೈಲು ಶಿಕ್ಷೆ ವಿಧಿಸುವ ಅವಕಾಶ ಕಾಯಿದೆಯಲ್ಲಿದೆ. ಅದೇ ರೀತಿ ರಿಯಲ್‌ ಎಸ್ಟೇಟ್‌ ಏಜೆಂಟರು ಮತ್ತು ಖರೀದಿದಾರರು ಕಾನೂನು ಉಲ್ಲಂಘಿಸಿದರೆ ಗರಿಷ್ಠ ಒಂದು ವರ್ಷ ಜೈಲು ಶಿಕ್ಷೆ ನೀಡುವುದಕ್ಕೆ ಅವಕಾಶ ಇದೆ. ಇದರ ಜತೆಗೆ ಯೋಜನೆಯ ಶೇ 10% ಮೊತ್ತವನ್ನು ದಂಡವಾಗಿ ತೆರಬೇಕಾಗುತ್ತದೆ.
  • ಮನೆ ಮತ್ತಿತರ ರಿಯಲ್‌ ಎಸ್ಟೇಟ್‌ ಯೋಜನೆಗಳು ವಿಳಂಬವಾಗುವುದನ್ನು ತಡೆಯಲು ಅಥವಾ ವಿಳಂಬ ಆದಾಗ ಗ್ರಾಹಕರಿಗೆ ಪರಿಹಾರ ಒದಗಿಸಲು ಹಲವು ಕಟ್ಟುನಿಟ್ಟಿನ ನಿಯಮಗಳನ್ನು ರೂಪಿಸಲಾಗಿದೆ.

ಗೋವಾದ ಪ್ರಥಮ ಮಹಿಳಾ ಮುಖ್ಯಮಂತ್ರಿ ಶಶಿಕಲಾ ಕಾಕೋಡ್ಕರ್ ನಿಧನ

ಗೋವಾದ ಪ್ರಥಮ ಮಹಿಳಾ ಮುಖ್ಯಮಂತ್ರಿ ಶಶಿಕಲಾ ಕಾಕೋಡ್ಕರ್‌ (81) ಅವರು ದೀರ್ಘ ಕಾಲದ ಅನಾರೋಗ್ಯದಿಂದ ನಿಧನರಾದರು. ಶಶಿಕಲಾ ನಿಧನದ ಹಿನ್ನೆಲೆಯಲ್ಲಿ ಗೋವಾ ಸರ್ಕಾರ ಎರಡು ದಿನಗಳ  ಶೋಕ ಪ್ರಕಟಿಸಿದೆ. ಸರ್ಕಾರಿ ಕಚೇರಿಗಳಿಗೆ ಶುಕ್ರವಾರ ರಜೆ ನೀಡಲಾಗಿತ್ತು.

  • ಶಶಿಕಲಾ ಅವರು ಗೋವಾದ ಮಾಜಿ ಮುಖ್ಯಮಂತ್ರಿ ದಿವಂಗತ ದಯಾನಂದ ಬಾಂದೋಡ್ಕರ್‌ ಅವರ ಪುತ್ರಿ. ದಯಾನಂದ ಅವರು ಅಧಿಕಾರದಲ್ಲಿದ್ದಾಗಲೇ 1973ರಲ್ಲಿ ನಿಧನರಾಗಿದ್ದರು.
  • ಆ ಬಳಿಕ ಶಶಿಕಲಾ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದರು. 1979ರಲ್ಲಿ ಮಹಾರಾಷ್ಟ್ರವಾದಿ ಗೋಮಾಂತಕ ಪಕ್ಷವು ಒಡೆದ ಬಳಿಕ ಪದಚ್ಯುತಗೊಂಡಿದ್ದರು.

Leave a Comment

This site uses Akismet to reduce spam. Learn how your comment data is processed.