ಅಜಯ್ ಕುಮಾರ್ ಭಲ್ಲ ಡೈರೆಕ್ಟರ್ ಜನರಲ್ ಆಫ್ ಫಾರೀನ್ ಟ್ರೇಡ್ ನ ನೂತನ ಡೈರೆಕ್ಟರ್ ಜನರಲ್

ಹಿರಿಯ ಐಎಎಸ್ ಅಧಿಕಾರಿ ಅಜಯ್ ಕುಮಾರ್ ಭಲ್ಲ ಅವರನ್ನು ಡೈರೆಕ್ಟರ್ ಜನರಲ್ ಆಫ್ ಫಾರೀನ್ ಟ್ರೇಡ್ (Directorate General of Foreign Trade)ನ ನೂತನ ಡೈರೆಕ್ಟರ್ ಜನರಲ್ ಆಗಿ ನೇಮಕಮಾಡಲಾಗಿದೆ. ಅನೂಪ್ ವಾಧ್ವನ್ ಅವರಿಂದ ತೆರವಾಗಿದ್ದ ಸ್ಥಾನವನ್ನು ಭಲ್ಲ ರವರು ತುಂಬಲಿದ್ದಾರೆ. ಅನೂಪ್ ಅವರು ಕೇಂದ್ರ ವಾಣಿಜ್ಯ ಸಚಿವಾಲಯದ ಹೆಚ್ಚುವರಿ ನಿರ್ದೇಶಕರಾಗಿ ನೇಮಕಗೊಂಡ ಕಾರಣ ಈ ಹುದ್ದೆ ಖಾಲಿಯಾಗಿತ್ತು.

ಡೈರೆಕ್ಟರ್ ಜನರಲ್ ಆಫ್ ಫಾರೀನ್ ಟ್ರೇಡ್ (DGFT):

  • ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ ಸಚಿವಾಲಯದಡಿ ಕಾರ್ಯನಿರ್ವಹಿಸುವ ಡೈರೆಕ್ಟರ್ ಜನರಲ್ ಆಫ್ ಫಾರೀನ್ ಟ್ರೇಡ್ ರಫ್ತು ಮತ್ತು ಆಮದು ನಿಯಮಗಳನ್ನು ಜಾರಿ ಮಾಡುವ ನೋಡಲ್ ಏಜೆನ್ಸಿಯಾಗಿದೆ.
  • ವಿದೇಶಿ ವ್ಯಾಪಾರ ನೀತಿಯನ್ನು ರೂಪಿಸುವುದು ಮತ್ತು ಜಾರಿಗೊಳಿಸುವುದು ಅದರಲ್ಲೂ ಮುಖ್ಯವಾಗಿ ದೇಶದ ರಫ್ತು ಹೆಚ್ಚಿಸುವ ಜವಾಬ್ದಾರಿಯನ್ನು ಇದು ಹೊತ್ತಿದೆ.
  • DGFT ವಿವಿಧ ರಾಷ್ಟಗಳೊಂದಿಗೆ ವ್ಯಾಪಾರ ಸಂಬಂಧಗಳ ಅಭಿವೃದ್ದಿಯಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ.

ಹಿರಿಯ ನಟಿ ಲೀಲಾವತಿ ರವರಿಗೆ ಡಾ. ವಿಷ್ಣುವರ್ಧನ್ ಪ್ರಶಸ್ತಿ

ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ವಿಷ್ಣು ಸೇನಾ ಸಮಿತಿಯ ಸಹಯೋಗದಲ್ಲಿ ಪ್ರತಿ ವರ್ಷ ನೀಡುವ ಅಭಿನವ ಬಾರ್ಗವ ಡಾ. ವಿಷ್ಣುವರ್ಧನ್ ಪ್ರಶಸ್ತಿಯನ್ನ ಈ ಬಾರಿ ಕನ್ನಡದ ಹಿರಿಯ ನಟಿ ಲೀಲಾವತಿ ಅವರಿಗೆ ನೀಡಲು ನಿರ್ಧರಿಸಿದೆ. ಇತ್ತೀಚೆಗೆ ನಡೆದ ಕನ್ನಡ ಸಾಹಿತ್ಯ ಪರಿಷತ್ತು ಆಯ್ಕೆ ಸಮಿತಿ ಸಭೆಯಲ್ಲಿ ಈ ನಿರ್ಣಯವನ್ನ ಕೈಗೊಳ್ಳಲಾಗಿದೆ.

ಪ್ರಶಸ್ತಿಯ ಬಗ್ಗೆ:

  • ಕಳೆದ ಮೂರು ವರ್ಷಗಳಿಂದ ಕನ್ನಡ ಸಾಹಿತ್ಯ ಪರಿಷತ್ ಡಾ. ವಿಷ್ಣುವರ್ಧನ್ ಅವರ ಹೆಸರಿನಲ್ಲಿ ಪ್ರಶಸ್ತಿಯನ್ನ ನೀಡಲಾಗುತ್ತಿದೆ.
  • ಮೊದಲ ವರ್ಷ ಎಸ್.ಪಿ ಬಾಲಸುಬ್ರಮಣ್ಯಂರವರಿಗೆ ಹಾಗೂ ಎರಡನೇ ವರ್ಷ ರೆಬಲ್ ಸ್ಟಾರ್ ಡಾ.ಅಂಬರೀಶ್ ರವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಈಗ ಮೂರನೆ ವರ್ಷದ ಪ್ರಶಸ್ತಿಗೆ ಲೀಲಾವತಿಯವರನ್ನ ಆಯ್ಕೆ ಮಾಡಲಾಗಿದೆ.

ಲೀಲಾವತಿ ರವರ ಬಗ್ಗೆ:

ಲೀಲಾವತಿಯವರು ಸುಮಾರು 50 ವರ್ಷಗಳಿಂದ ಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ದಾರೆ. ಕನ್ನಡ, ತೆಲುಗು, ತಮಿಳು ಸೇರಿದಂತೆ 600ಕ್ಕೂ ಅಧಿಕ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಸುಮಾರು 400 ಕ್ಕೂ ಅಧಿಕ ಕನ್ನಡ ಸಿನಿಮಾಗಳನ್ನ ಮಾಡಿದ್ದಾರೆ. ಡಾ.ರಾಜ್ ಕುಮಾರ್, ಡಾ.ವಿಷ್ಣುವರ್ಧನ್, ಶಂಕರ್ ನಾಗ್ ಸೇರಿದಂತೆ ಹಲವು ನಟರ ಜೊತೆ ಲೀಲಾವತಿರವರು ಅಭಿನಯಿಸಿದ್ದಾರೆ.

ದೇಶದ ಅತಿ ಉದ್ದದ ಅಡುಗೆ ಅನಿಲ (LPG) ಕೊಳವೆ ಮಾರ್ಗ ನಿರ್ಮಿಸಲಿರುವ ಇಂಡಿಯನ್ ಆಯಿಲ್ ಕಾರ್ಪೊರೇಷನ್

ದೇಶದ ಅತ್ಯಂತ ಉದ್ದದ ಎಲ್ಪಿಜಿ (ಅಡುಗೆ ಅನಿಲ) ಕೊಳವೆಮಾರ್ಗ ನಿರ್ಮಿಸಲು ಯೋಜನೆ ರೂಪಿಸುತ್ತಿರುವುದಾಗಿ ಸರ್ಕಾರಿ ಸ್ವಾಮ್ಯದ ತೈಲ ಕಂಪೆನಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ) ಹೇಳಿದೆ. ಈ ಮಾರ್ಗವು ಗುಜರಾತ್ ಕರಾವಳಿಯಿಂದ ಉತ್ತರ ಪ್ರದೇಶದ ಗೋರಖ್ಪುರದವರೆಗೆ ನಿರ್ಮಾಣಗೊಳ್ಳಲಿದೆ. ದೇಶದಲ್ಲಿ ಹೆಚ್ಚುತ್ತಿರುವ ಅಡುಗೆ ಅನಿಲ ಬೇಡಿಕೆಯನ್ನು ಪೂರೈಸಲು ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು ಕಂಪೆನಿ ಹೇಳಿದೆ. ಇದಕ್ಕೆ ಅನುಮತಿ ನೀಡುವಂತೆ ಕೋರಿ ಐಒಸಿಯು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ನಿಯಂತ್ರಣ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿದೆ. ಗುಜರಾತ್ನ ಕಾಂಡ್ಲಾ ಬಂದರಿಗೆ ಅನಿಲವನ್ನು ಆಮದು ಮಾಡಿಕೊಳ್ಳಲಿರುವ ಇಂಡಿಯನ್ ಆಯಿಲ್, ಅದನ್ನು ಕೊಳವೆ ಮೂಲಕ ಗೋರಖ್ಪುರಕ್ಕೆ ಸಾಗಿಸಲಿದೆ.

ಪ್ರಮುಖಾಂಶಗಳು:

  • ಈ ಉದ್ದೇಶಿತ ಕೊಳವೆ ಮಾರ್ಗದ ಉದ್ದ 1,987 ಕಿ.ಮೀ. ಗುಜರಾತ್ ನ ಕಾಂಡ್ಲದಿಂದ ಉತ್ತರ ಪ್ರದೇಶದ ಗೋರಖ್ ಪುರಕ್ಕೆ ಅಡುಗೆ ಅನಿಲವನ್ನು ಸರಬರಾಜು ಮಾಡುವುದು ಈ ಯೋಜನೆಯ ಉದ್ದೇಶ.
  • ಕಾಂಡ್ಲ, ಅಹಮದಾಬಾದ್, ಉಜ್ಜಯನಿ, ಭೋಪಾಲ್, ಕಾನ್ಪುರ, ಲಖನೌ, ವಾರಾಣಾಸಿ, ಅಲಹಾಬಾದ್ ಮತ್ತು ಗೋರಖ್ ಪುರ ನಗರಗಳ ಮೂಲಕ ಈ ಕೊಳವೆ ಮಾರ್ಗ ಹಾದುಹೋಗಲಿದೆ.
  • ಈ ಮಾರ್ಗದ ಮೂಲಕ ವಾರ್ಷಿಕವಾಗಿ 37.5 ಲಕ್ಷ ಟನ್ ಅಡುಗೆ ಅನಿಲವನ್ನು ರವಾನಿಸಲಾಗುವುದು.
  • ಸದ್ಯ ಗುಜರಾತ್ನ ಜಾಮ್ ನಗರದಿಂದ ದೆಹಲಿ ಬಳಿಯ ಲೋನಿ ನಡುವೆ ಇರುವ 1,415 ಕಿ.ಮೀ ಉದ್ದದ ಮಾರ್ಗ ದೇಶದ ಅತಿ ದೊಡ್ಡ ಕೊಳವೆ ಮಾರ್ಗ ಎನಿಸಿದೆ.

ಅಂಟೊನಿಯೊ ಗುಟೆರಸ್ ವಿಶ್ವಸಂಸ್ಥೆಯ ನೂತನ ಮಹಾ ಪ್ರಧಾನ ಕಾರ್ಯದರ್ಶಿ

ಪೋರ್ಚುಗಲ್ ಮಾಜಿ ಪ್ರಧಾನಿ ಅಂಟೊನಿಯೊ ಗುಟೆರಸ್ ಅವರನ್ನು ವಿಶ್ವಸಂಸ್ಥೆಯ ನೂತನ ಮಹಾಪ್ರಧಾನ ಕಾರ್ಯದರ್ಶಿಯನ್ನಾಗಿ ಸಾಮಾನ್ಯ ಸಭೆಯು ಅಧಿಕೃತವಾಗಿ ಆಯ್ಕೆ ಮಾಡಲಿದೆ. 15 ರಾಷ್ಟ್ರಗಳ ಸದಸ್ಯರನ್ನು ಒಳಗೊಂಡ ಭದ್ರತಾ ಮಂಡಳಿಯು ಕಳೆದ ವಾರ ನಡೆಸಿದ ರಹಸ್ಯ ಸಭೆಯಲ್ಲಿ ಗುಟೆರಸ್ ಆಯ್ಕೆಗೆ ತೀರ್ಮಾನ ತೆಗೆದುಕೊಂಡಿದ್ದು, ಅನುಮೋದನೆಗಾಗಿ ಅವರ ಹೆಸರನ್ನು 193 ದೇಶಗಳ ಸಾಮಾನ್ಯ ಸಭೆಗೆ ಕಳುಹಿಸಿತ್ತು. ಬಾನ್ ಕಿ ಮೂನ್ ಅವರ ಉತ್ತರಾಧಿಕಾರಿಯಾಗಿ, ಮಹಾಪ್ರಧಾನ ಕಾರ್ಯದರ್ಶಿ ಹುದ್ದೆಗೆ ಗುಟೆರಸ್ ಅವರ ಹೆಸರು ಈ ಹಿಂದೆ ಅನೇಕ ಬಾರಿ ಕೇಳಿಬಂದಿತ್ತು. ವಿಶ್ವಸಂಸ್ಥೆಯ ಈಗಿನ ಮಹಾಪ್ರಧಾನ ಕಾರ್ಯದರ್ಶಿ ಬಾನ್ ಕಿ ಮೂನ್ ಅವರ ಅವಧಿ ಡಿಸೆಂಬರ್ 31ಕ್ಕೆ ಮುಕ್ತಾಯವಾಗಲಿದೆ.
67 ವರ್ಷದ ಗುಟೆರಸ್ ಅವರು ವಿಶ್ವಸಂಸ್ಥೆಯ 9ನೇ ಮಹಾ ಪ್ರಧಾನ ಕಾರ್ಯದರ್ಶಿಯಾಗಿ ನೇಮಕವಾಗಲಿದ್ದು, 2017ರ ಜನವರಿ 1ರಿಂದ 2022ರ ಡಿಸೆಂಬರ್ 31ರವರೆಗೆ ಅವರ ಅಧಿಕಾರ ಅವಧಿ ಇರಲಿದೆ.

ಅಂಟೊನಿಯೊ ಗುಟೆರಸ್:

  • 1976 ರಲ್ಲಿ ರಾಜಕೀಯ ಪ್ರವೇಶಿಸಿದ ಗುಟೆರಸ್ ಅವರು 1995ರಿಂದ 2002ರವರೆಗೆ ಪೋರ್ಚುಗಲ್ನ ಪ್ರಧಾನಿಯಾಗಿದ್ದರು.
  • 2005ರಿಂದ 2015ರವರೆಗೆ ವಿಶ್ವಸಂಸ್ಥೆಯ ನಿರಾಶ್ರಿತರ ಹೈ ಕಮಿಷನರ್ ಆಗಿ ಕರ್ತವ್ಯ ನಿರ್ವಹಿಸಿದ್ದರು.

ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ:

  • ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯು ವಿಶ್ವಸಂಸ್ಥೆಯ ಸಚಿವಾಲಯದ ಮುಖ್ಯಸ್ಥರಾಗಿರುತ್ತಾರೆ. ವಿಶ್ವಸಂಸ್ಥೆಯ ವಕ್ತಾರ ಹಾಗೂ ವಿಶ್ವಸಂಸ್ಥೆಯ ನಾಯಕ ಸಹ ಆಗಿರುತ್ತಾರೆ.
  • ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯ ಕರ್ತವ್ಯಗಳ ಬಗ್ಗೆ ವಿಶ್ವಸಂಸ್ಥೆ ಚಾರ್ಟರ್ ನ ಅಧ್ಯಾಯ XV ಪರಿಚ್ಛೇದ 97 ರಿಂದ 101 ರಲ್ಲಿ ವಿವರಿಸಲಾಗಿದೆ. ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯ ಅವಧಿ ಐದು ವರ್ಷಗಳ ವರೆಗೆ ಇದ್ದು, ಗರಿಷ್ಠ ಎರಡು ಅವಧಿಗೆ ಮಾತ್ರ ನೇಮಕವಾಗಬಹುದು.

ಥಾಯ್ಲೆಂಡ್‌ನ ದೊರೆ ಭೂಮಿಬೋಲ್‌ ಅದುಲ್ಯದೇಜ್‌ ನಿಧನ

ಸತತ 70 ವರ್ಷಗಳ ಆಡಳಿತ ನಡೆಸಿದ್ದ ಥಾಯ್ಲೆಂಡ್‌ನ ದೊರೆ ಭೂಮಿಬೋಲ್‌ ಅದುಲ್ಯದೇಜ್‌ ನಿಧನರಾಗಿದ್ದಾರೆ. ಅವರಿಗೆ  88 ವರ್ಷ ವಯಸ್ಸಾಗಿತ್ತು. ಭೂಮಿಬೋಲ್ ಜಗತ್ತಿನಲ್ಲಿ ಸುದೀರ್ಘ ಆಡಳಿತ ನಡೆಸಿದ ರಾಜನೆಂಬ ಖ್ಯಾತಿ ಹೊಂದಿದ್ದರು. ಕಳೆದ 2 ವರ್ಷಗಳಿಂದ ಅವರು ಬಹು ಸಮಯ ಆಸ್ಪತ್ರೆಯಲ್ಲಿಯೇ ಕಳೆದಿದ್ದರು.

  • ಥಾಯ್ಲೆಂಡ್‌ ಜನತೆಯಿಂದ ದೇವಮಾನವ ಎಂದೇ ಕರೆಯಲ್ಪಡುತ್ತಿದ್ದ ಅವರು ಚಕ್ರಿ ಸಾಮ್ರಾಜ್ಯದ 9ನೇ ಸಾಮ್ರಾಟರಾಗಿದ್ದರು. ಅಣ್ಣನ ಸಾವಿನ ನಂತರ 1946ರಲ್ಲಿ ಪಟ್ಟಕ್ಕೇರಿದ್ದ ಅವರಿಗೆ ‘ರಾಮ 9’ ಎಂದೂ ಕರೆಯಲಾಗುತ್ತಿತ್ತು.
  • 63 ವರ್ಷದ ಯುವರಾಜ ಮಹಾ ವಾಚಿರಾಲೋನ್‌ಕೊನ್ ಮುಂದಿನ ದೊರೆಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ಪ್ರಧಾನಿ ಪ್ರಯುತ್‌ ಚಾನ್‌–ಓಚಾ ತಿಳಿಸಿದ್ದಾರೆ.
  • 2014ರ ನಂತರದ ಘರ್ಷಣೆ ಬಳಿಕ ಜಾರಿಯಲ್ಲಿರುವ ಮಿಲಿಟರಿ ಆಡಳಿತ ದೊರೆಯ ನಿಧನದ ನಂತರವೂ ಮುಂದುವರಿಯಲಿದೆ.’

One Thought to “ಪ್ರಚಲಿತ ವಿದ್ಯಮಾನಗಳು- ಅಕ್ಟೋಬರ್-16, 2016”

  1. shiva shankar

    how im i download day wise current affairs

Leave a Comment

This site uses Akismet to reduce spam. Learn how your comment data is processed.