ಬೇಳೆಕಾಳುಗಳ ವಿತರಣೆಗೆ ಅಂಚೆ ಕಚೇರಿಗಳನ್ನು ಬಳಸಿಕೊಳ್ಳಲು ಕೇಂದ್ರ ಸರ್ಕಾರ ನಿರ್ಧಾರ

ದೇಶವ್ಯಾಪ್ತಿ ಇರುವ ಅಂಚೆಕಚೇರಿಗಳ ವ್ಯಾಪಕ ಜಾಲದ ಮೂಲಕ ಬೇಳೆಕಾಳುಗಳನ್ನು ಸಬ್ಸಿಡಿ ದರಗಳಲ್ಲಿ ಮಾರಾಟ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಗ್ರಾಹಕ ವ್ಯವಹಾರ ಕಾರ್ಯದರ್ಶಿ ಹೇಮ ಪಾಂಡೆ ಅವರ ಅಧ್ಯಕ್ಷತೆಯಲ್ಲಿ ಇಲ್ಲಿ ನಡೆದ ಅಂತರ್ ಸಚಿವಾಲಯ ಸಮಿತಿ ಸಭೆಯಲ್ಲಿ  ಈ ನಿರ್ಧಾರ ಕೈಗೊಳ್ಳಲಾಗಿದೆ.

  • ಅಗತ್ಯ ಪದಾರ್ಥಗಳ ಲಭ್ಯತೆ ಅದರಲ್ಲೂ ಬೇಳೆಕಾಳುಗಳ ಲಭ್ಯತೆ ಮತ್ತು ಬೆಲೆ ಬಗ್ಗೆ ಸಮಿತಿಯಲ್ಲಿ ಪರಿಶೀಲಿಸಲಾಯಿತು.
  • ಸಕ್ಕರೆ, ಬೇಳೆಕಾಳು ಮತ್ತು ಇತರೆ ಅಗತ್ಯ ಪದಾರ್ಥಗಳ ಬೆಲೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
  • ಹಬ್ಬದ ದಿನಗಳಲ್ಲಿ ಹೆಚ್ಚು ಬೇಳೆಕಾಳುಗಳನ್ನು ದಾಸ್ತಾನುಗಳಿಂದ ಬಿಡುಗಡೆ ಮಾಡಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಅಂಚೆ ಕಚೇರಿ ಮೂಲಕ ಏಕೆ?:

  • ಹಬ್ಬದ ದಿನಗಳಲ್ಲಿ ತೊಗರಿ, ಉದ್ದು ಮತ್ತು ಕಡಲೆ ಬೇಳೆಗಳಕೊರತೆಯನ್ನು ನೀಗಿಸುವುದು.
  • ಸರ್ಕಾರದ ಮಾರಾಟ ಮಳಿಗೆಗಳು ಇಲ್ಲದ ರಾಜ್ಯಗಳಲ್ಲಿ ಬೇಳೆಕಾಳುಗಳನ್ನು ಪೂರೈಸಿಸುವುದು ಮುಖ್ಯವಾಗಿ ಉದ್ದು ಮತ್ತು ಕಡಲೆ ಪೂರೈಕೆ.
  • ಕೇಂದ್ರ ಸರ್ಕಾರದ ಕಾಪು ದಾಸ್ತಾನಿನಲ್ಲಿನ ಬೇಳೆಕಾಳುಗಳನ್ನು ಅಂಚೆ ಕಚೇರಿಗಳ ಮೂಲಕ ರಿಯಾಯ್ತಿ ದರದಲ್ಲಿ ಮಾರಾಟ ಮಾಡುವುದರಿಂದ ಅವುಗಳ ಲಭ್ಯತೆ ಸುಲಭವಾಗಲಿದೆ.
  • ದೇಶದಲ್ಲಿ ಸುಮಾರು 1.59 ಲಕ್ಷ ಅಂಚೆ ಕಚೇರಿಗಳಿದ್ದು, ಇವುಗಳ ಪೈಕಿ 1.39 ಅಂಚೆ ಕಚೇರಿಗಳು ಗ್ರಾಮೀಣ ಭಾಗದಲ್ಲಿವೆ. ಇವುಗಳನ್ನು ಬೇಳೆಕಾಳು ವಿತರಣೆಗೆ ಬಳಸಿಕೊಂಡು ಸುಲಭವಾಗಿ ಗ್ರಾಹಕರಿಗೆ ಬೇಳೆಕಾಳುಗಳನ್ನು ತಲುಪಿಸಬಹುದಾಗಿದೆ.

ಸರಸ್ವತಿ ನದಿ ಅಸ್ತಿತ್ವದಲ್ಲಿತ್ತು:  ಕೆ ಎಸ್ ವಾಲ್ದೀಯ ಸಮಿತಿ 

ಇದುವರೆಗೂ ಪುರಾಣಗಳಲ್ಲಿ ಉಲ್ಲೇಖಿತವಾಗಿದ್ದ ಸರಸ್ವತಿ ನದಿ ನಿಜವಾಗಲೂ ಅಸ್ತಿತ್ವದಲ್ಲಿತ್ತು ಎಂದು ಕೆ ಎಸ್ ವಾಲ್ದೀಯ ನೇತೃತ್ವದ ಸಮಿತಿ ತನ್ನ ವರದಿಯನ್ನು ಕೇಂದ್ರ ಜಲಸಂಪನ್ಮೂಲ ಸಚಿವಾಲಯಕ್ಕೆ ಸಲ್ಲಿಸಿದೆ. ಭೂಗೋಳಶಾಸ್ತ್ರಜ್ಞರು, ಪುರಾತತ್ತ್ವಜ್ಞರು ಮತ್ತು ಹೈಡ್ರಾಲಾಜಿಸ್ಟ್ ಗಳನ್ನು ಒಳಗೊಂಡಿದ ಸಮಿತಿಯು ಸರಸ್ವತಿ ನದಿ ಮೂಲವನ್ನು ಪತ್ತೆಹಚ್ಚಿರುವುದಾಗಿ ತಿಳಿಸಿದ್ದಾರೆ. ಸರಸ್ವತಿ ನದಿಯನ್ನು ಕಾಲ್ಪನಿಕ ನದಿಯೆಂದೇ ಪರಿಗಣಿಸಲಾಗಿತ್ತು, ಪ್ರಾಚೀನ ಹಿಂದೂ ಪುರಾಣಗಳಲ್ಲಿ, ಋಗ್ವೇದ, ಮಹಾಭಾರತ ಮತ್ತು ರಾಮಾಯಣದಲ್ಲಿ ಈ ನದಿಯ ಬಗ್ಗೆ ಪ್ರಸ್ತಾಪಿಸಲಾಗಿದೆ.

ಸಮಿತಿಯ ಪ್ರಮುಖಾಂಶಗಳು:

  • ಸರಸ್ವತಿ ನದಿಯು ಹಿಮಾಲಯದಲ್ಲಿ ಮೂಲ ಹೊಂದಿದೆ. 4000 ಕಿ.ಮೀ ಉದ್ದವಿದ್ದು, ಭಾರತ ಮತ್ತು ಪಾಕಿಸ್ತಾನದಲ್ಲಿ ಹರಿಯುವ ಮೂಲಕ “ರನ್ ಆಫ್ ಖಚ್ “ಕೊಲ್ಲಿಯಲ್ಲಿ ಅರಬ್ಬಿ ಸಮುದ್ರ ಸೇರುತ್ತಿತ್ತು ಎಂಬ ತೀರ್ಮಾನಕ್ಕೆ ಬರಲಾಗಿದೆ’.
  • ನದಿಯ ಸುಮಾರು 2/3ನೇ ಭಾಗ ಅಂದರೆ 3,000 ಕಿ.ಮೀ ಭಾರತದಲ್ಲಿ ಹರಿಯುತ್ತಿತ್ತು, ಉಳಿದ ಭಾಗ ಪಾಕಿಸ್ತಾನದಲ್ಲಿ ಹರಿಯುತ್ತಿತ್ತು ಎಂದು ಸಮಿತಿ ಅಭಿಪ್ರಾಯಪಟ್ಟಿದೆ.
  • ನದಿ ಪೂರ್ವ ಮತ್ತು ಪಶ್ಚಿಮ ಎಂದು ಎರಡು ಕವಲು ಹೊಂದಿತ್ತು. ಹಿಮಾಲಯದಲ್ಲಿ ಹುಟ್ಟುತ್ತಿದ್ದ ಸಟ್ಲೆಜ್‌ ನದಿ ಪ್ರಸ್ತುತ ಘಗ್ಗರ್‌–ಪಟಿಯಾಲಿವಾಲಿ ಕಾಲುವೆ ಮಾರ್ಗದಲ್ಲಿ ಹರಿಯುತ್ತಿತ್ತು. ಇದು ಪುರಾತನ ಕಾಲದ ಸರಸ್ವತಿ ನದಿಯ ಪಶ್ಚಿಮ ಕವಲಾಗಿತ್ತು. ಸರಸ್ವತಿ ನದಿಯ ಪೂರ್ವ ಕವಲು ಮಾರ್ಕಂಡ ಹಾಗೂ ಸರ್ಸುತಿ (ಸರಸ್ವತಿಯ ಅಪಭ್ರಂಶ) ನದಿಯಾಗಿತ್ತು ಎಂದು ಏಳು ಸದಸ್ಯರನ್ನು ಹೊಂದಿರುವ ಸಮಿತಿ ಹೇಳಿದೆ.
  • ಈ ಎರಡು ಕವಲುಗಳು ಪಾಟಿಯಾಲದಿಂದ 25 ಕಿ.ಮೀ ದೂರದಲ್ಲಿರುವ “ಶಾತ್ರನ” ಎಂಬಲ್ಲಿ ಸಂಗಮವಾಗುತ್ತಿದ್ದವು. ಇಲ್ಲಿಂದ ರನ್ ಆಫ್ ಕಚ್ ದಾಟಿ ಪಶ್ಚಿಮ ಸಮುದ್ರವನ್ನು ಸೇರುತ್ತಿತ್ತು.

ಸರಸ್ವತಿ ನದಿ ಅಸ್ತಿತ್ವ ಕುರಿತು ಸಮಿತಿ ಆರು ತಿಂಗಳ ಕಾಲ ಸಂಶೋಧನೆ ನಡೆಸಿದೆ. ನದಿ ತನ್ನ ಪಥ ಬದಲಿಸಿದ ವಿಶಿಷ್ಟ ಕುರುಹು ಪತ್ತೆಯಾಗಿದ್ದು, ಇದು ಈಗ ಇರುವ ಘಗ್ಗರ್‌, ಸರ್ಸುತಿ , ಹಕ್ರಾ ಹಾಗೂ ನಾರಾ ನದಿಗಳ ಮಾರ್ಗಕ್ಕೆ ಸಂಬಂಧಿಸಿದ್ದು ಎಂದು ವಾಲ್ದಿಯಾ ಅವರು ವಿವರಿಸಿದ್ದಾರೆ. ಹರಪ್ಪ ನಾಗರಿಕತೆ ಇದ್ದ ಕಾಲದಲ್ಲಿ ಈ ವಿಶಿಷ್ಟ ಮಾರ್ಗದ ಸುತ್ತಮುತ್ತ ಅಂದಾಜು 1700 ದೊಡ್ಡ ಸಣ್ಣ ಹಾಗೂ ದೊಡ್ಡ ಗ್ರಾಮ, ಪಟ್ಟಣಗಳಿದ್ದವು. 100ಕ್ಕೂ ಹೆಚ್ಚು ಹೆಕ್ಟೇರ್‌ ವಿಸ್ತೀರ್ಣ ಹೊಂದಿದ್ದ ಕೆಲವು ಪಟ್ಟಣಗಳು ಸುಮಾರು 5500 ವರ್ಷಗಳ ಕಾಲ ಅಸ್ತಿತ್ವದಲ್ಲಿದ್ದವು.  ನೀರಿಲ್ಲದೆ ಈ ಪಟ್ಟಣಗಳು ಅಸ್ತಿತ್ವ ಹೊಂದಲು ಸಾಧ್ಯವಿತ್ತೆ? ಇಲ್ಲ. ಅಂದರೆ ಇಲ್ಲಿ ಹರಿಯುತ್ತಿದ್ದ ನದಿ ಗ್ರಾಮ, ಪಟ್ಟಣಗಳಿಗೆ ನೀರು ಒದಗಿಸುತ್ತಿತ್ತು. ಆ ನದಿ ಯಾವುದಾಗಿತ್ತು? ಅದರ ಹೆಸರೇನು? ಎಂಬುದನ್ನು ಪತ್ತೆ ಮಾಡಲು ನಾವು ಸಂಶೋಧನೆ ನಡೆಸಿದೆವು ಎಂದು ವಾಲ್ದಿಯಾ ಹೇಳಿದ್ದಾರೆ.

“S-400” ವಾಯು ರಕ್ಷಣಾ ವ್ಯವಸ್ಥೆ ಖರೀದಿಸಲು ರಷ್ಯಾದೊಂದಿಗೆ ಭಾರತ ಒಪ್ಪಂದ

ರಷ್ಯಾದಿಂದ ಐದು ಅತ್ಯಾಧುನಿಕ “ಎಸ್-400” ಟ್ರಯಂಪ್ ವಾಯು ರಕ್ಷಣಾ ವ್ಯವಸ್ಥೆಯನ್ನು ಖರೀದಿಸುವುದು ಸೇರಿದಂತೆ ಸುಮಾರು 39,000 ಕೋಟಿ ಮೊತ್ತದ ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದ ಒಪ್ಪಂದಕ್ಕೆ ಭಾರತ ಸಹಿಹಾಕಿದೆ. ಅಲ್ಲದೇ ನಾಲ್ಕು ರಹಸ್ಯ ಯುದ್ದನೌಕೆಗಳ ಅಭಿವೃದ್ದಿಗೆ ಕೈಜೋಡಿಸುವುದು ಮತ್ತು ಮೇಕ್ ಇನ್ ಇಂಡಿಯಾ ಯೋಜನೆಯಡಿ ಕಮಾವ್ 226ಟಿ ಹೆಲಿಕಾಪ್ಟರ್ ಅನ್ನು ಭಾರತದಲ್ಲಿ ತಯಾರಿಸುವುದು ಒಪ್ಪಂದಲ್ಲಿ ಸೇರಿವೆ. ಈ ಸಂಬಂಧ ಉಭಯ ದೇಶಗಳ ನಡುವೆ ಅಂತರ್ ಸರ್ಕಾರ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.

“ಎಸ್-400” ಟ್ರಯಂಪ್ ವಾಯು ರಕ್ಷಣಾ ವ್ಯವಸ್ಥೆ”:

  • ಎಸ್‌–400 ಅಥವಾ ಟ್ರಯಂಫ ಇದು ಜಗತ್ತಿನ ಅತ್ಯಾಧುನಿಕ ಭಾರಿ ಸಾಮರ್ಥ್ಯದ ದೂರಗಾಮಿ ವಾಯು ಪ್ರದೇಶ ರಕ್ಷಣಾ ವ್ಯವಸ್ಥೆ. ನಾಟೋ ಇದನ್ನು ಎಸ್ಎ-21 ಎಂತಲೂ ಕರೆಯುತ್ತಿದೆ.
  • ಇದು ಎಸ್-300 ವಾಯು ರಕ್ಷಣಾ ವ್ಯವಸ್ಥೆಯ ಮುಂದುವರೆದ ತಂತ್ರಜ್ಞಾನವಾಗಿದ್ದು, ಅಲ್ಮಝ್-ಅಂಟೇ ಅಭಿವೃದ್ದಿಪಡಿಸಿದೆ. 2007 ರಿಂದ ರಷ್ಯಾ ಮಿಲಿಟರಿ ಸೇವೆಯಲ್ಲಿ ಇದನ್ನು ಬಳಸಲಾಗುತ್ತಿದೆ.
  • ವಿಭಿನ್ನ ಸಾಮರ್ಥ್ಯಗಳಿರುವ ಮೂರು ಕ್ಷಿಪಣಿಗಳನ್ನು ಇದು ಹೊಂದಿದೆ. ಒಂದೇ ಬಾರಿಗೆ 36 ಕಡೆಗೆ ಗುರಿಯಿಡುವ ಸಾಮರ್ಥ್ಯ ಹೊಂದಿದೆ.
  • ಒಳ ಬರುವ ಶತ್ರು ವಿಮಾನಗಳು, ರಹಸ್ಯ ಕಾರ್ಯಾಚರಣೆ ವಿಮಾನಗಳು, ಕ್ಷಿಪಣಿ ಹಾಗೂ ಡ್ರೋನ್‌ಗಳನ್ನು ಹೊಡೆದುರುಳಿಸುವ ಸಾಮರ್ಥ್ಯ ಮತ್ತು ಸೂಪರ್‌ಸಾನಿಕ್ ಮತ್ತು ಹೈಪರ್‌ಸಾನಿಕ್ ವೇಗದಲ್ಲಿ (ಶಬ್ದಾತೀತಿ ವೇಗ) 120ರಿಂದ 400 ಕಿ.ಮೀ. ವ್ಯಾಪ್ತಿಯಲ್ಲಿರುವ ವೈರಿಯನ್ನು ಛಿದ್ರಗೊಳಿಸುತ್ತದೆ

Ka-226T ಹೆಲಿಕಾಪ್ಟರ್:

  • ಕೆಎ-226ಟಿ ಅಥವಾ ಕಮಾವ್ ವಿವಿಧೋಧ್ದೇಶ ಲಘು ಹೆಲಿಕಾಪ್ಟರ್ ಆಗಿದ್ದು, ಎತ್ತರದ ಪರ್ವತ, ಬಿಸಿ ವಾತಾವರಣ ಮತ್ತು ಸಮುದ್ರ ಸ್ಥಳಗಳಲ್ಲಿ ಬಳಸಲು ವಿನ್ಯಾಸಗೊಳಿಸಲಾಗಿದೆ.
  • ಈ ಹೆಲಿಕಾಪ್ಟರ್ ಗಳನ್ನು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ರಷ್ಯಾದ ಸಹಕಾರದೊಂದಿಗೆ ಮೇಕ್ ಇನ್ ಇಂಡಿಯಾ ಕಾರ್ಯಕ್ರಮದಡಿ ಅಭಿವೃದ್ದಿಪಡಿಸಲಾಗುವುದು. ಚೇತಕ್ ಮತ್ತು ಚೀತ ಹೆಲಿಕಾಪ್ಟರ್ ಗಳ ಬದಲಾಗಿ ಈ ಹೆಲಿಕಾಪ್ಟರ್ ಬಳಸಲಾಗುವುದು.
  • ಸುಮಾರು 20,000 ಅಡಿ ಎತ್ತರದಲ್ಲಿ ಕಾರ್ಯನಿರ್ವಹಿಸುವ ಸಾಮರ್ಥ್ಯ ಹೊಂದಿರುವ ಕಮಾವ್ ಹೆಲಿಕಾಪ್ಟರ್ ಗಳು ಸಿಯಾಚಿನ್ ಗ್ಲೇಸಿಯರ್ ನಲ್ಲಿ ಸೇನಾ ಕಾರ್ಯಕ್ಕೆ ನೆರವಾಗಲಿವೆ.

ಯುದ್ದನೌಕೆ(frigates):

  • ಭಾರತ ಮತ್ತು ರಷ್ಯಾ ನಾಲ್ಕು ರಹಸ್ಯ ಯುದ್ದನೌಕೆಗಳನ್ನು ತಯಾರಿಸಲಿದ್ದು, ತಲ್ವಾರ್ ಕ್ಲಾಸ್ ಯುದ್ದನೌಕೆಗಳಿಗಿಂತಲೂ ಉನ್ನತ ತಂತ್ರಜ್ಞಾನವನ್ನು ಹೊಂದಿರಲಿವೆ.
  • ಇವುಗಳ ಪೈಕಿ ಎರಡು ಯುದ್ದನೌಕೆಗಳನ್ನು ರಷ್ಯಾ ಅಭಿವೃದ್ದಿಪಡಿಸಿದರೆ ಉಳಿದ ಎರಡು ಯುದ್ದನೌಕೆಗಳನ್ನು ರಷ್ಯಾ ಸಹಕಾರದೊಂದಿಗೆ ಭಾರತದಲ್ಲಿ ತಯಾರಿಸಲಾಗುವುದು.

ಭಾರತ ಮತ್ತು ರಷ್ಯಾ ನಡುವೆ ವಿವಿಧ ಕ್ಷೇತ್ರಗಳಲ್ಲಿ 16 ಒಪ್ಪಂದಗಳಿಗೆ ಸಹಿ

ಭಾರತ ಪ್ರಧಾನಿ ನರೇಂದ್ರ ಮೋದಿ ಹಾಗೂ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಶಿಕ್ಷಣ, ರಕ್ಷಣೆ ಸೇರಿದಂತೆ ಸುಮಾರು 16 ಮಹತ್ವದ ಒಪ್ಪಂದಗಳಿಗೆ ಪರಸ್ಪರ ಸಹಿಹಾಕಿದ್ದಾರೆ. ಪ್ರಮುಖವಾಗಿ ರಕ್ಷಣ ಕ್ಷೇತ್ರ, ಶಿಕ್ಷಣ ಕ್ಷೇತ್ರ, ಸ್ಮಾರ್ಟ್ ಸಿಟಿ ಯೋಜನೆ ಹಾಗೂ ಭಾರತದಲ್ಲಿ ನೈಸರ್ಗಿಕ ಅನಿಲ ಉತ್ಪಾದನೆ ಕುರಿತ ಒಪ್ಪಂದಗಳಿಗೆ ಸಹಿ ಹಾಕಲಾಗಿದ್ದು, ಇದಲ್ಲದೆ ಕೂಡಂಕುಳಂ ಅಣುಸ್ಥಾವರ 2ನೇ ಘಟಕ ನಿರ್ಮಾಣ ಹಾಗೂ ಭಾರತದ ರೈಲ್ವೇ ಕ್ಷೇತ್ರದಲ್ಲಿ ರಷ್ಯಾ ಬಂಡವಾಳ ಹೂಡುವ ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ.

ಇಂಡೋ-ರಷ್ಯಾ ಪ್ರಮುಖ ಒಪ್ಪಂದಗಳು ಇಂತಿವೆ.

  • 2016-17 ಶಕ್ತಿ ಸಹಕಾರ ಒಪ್ಪಂದ
  • ಭಾರತ ಮತ್ತು ರಷ್ಯಾ ವಿದೇಶಾಂಗ ಸಚಿವಾಲಯಗಳು ನಡುವೆ ಶಿಷ್ಟಾಚಾರ ಸಮಾಲೋಚನೆ
  • ಸೈಬರ್ ಭದ್ರತಾ ಒಪ್ಪಂದ
  • ರಷ್ಯಾ ಯುದ್ಧನೌಕೆಯು ಖರೀದಿ ಒಪ್ಪಂದ
  • ಎಸ್-400 ಕ್ಷಿಪಣಿ ವ್ಯವಸ್ಥೆ ಖರೀದಿ ಒಪ್ಪಂದ
  • ಸಮಕಾಲೀನ ಪರಿಸ್ಥಿತಿಗೆ ಅನುಗುಣವಾಗಿ ಭಾರತ-ರಷ್ಯಾ ಜಾಗತಿಕ ಭದ್ರತಾ ಜಂಟಿ ಪಾಲುದಾರಿಕೆ ಒಪ್ಪಂದ
  • ಕೂಡಂಕುಳಂ ಘಟಕ 3 ಮತ್ತು 4 ಅಣು ಸ್ಥಾವರಗಳ ಒಪ್ಪಂದ
  • ಕೂಡಂಕುಳಂ ಘಟಕ 2 ಶಕ್ತಿಯ ಉತ್ಪಾದನೆಯ ಪ್ರಾರಂಭ
  • ಆಂಧ್ರ ಪ್ರದೇಶ ಸ್ಮಾರ್ಟ್ ಸಿಟಿ ಯೋಜನೆ
  • ಆಂಧ್ರ ಪ್ರದೇಶ ಹಡಗು ತಯಾರಿಕಾ ಯೋಜನೆ
  • ಹರಿಯಾಣ ಸ್ಮಾರ್ಟ್ ಸಿಟಿ ಯೋಜನೆ
  • ರಾಸ್ನೆಫ್ಟ್ ಮತ್ತು ಎಸ್ಸಾರ್ ತೈಲ ಶುದ್ಧೀಕರಣ ಮೂಲಸೌಕರ್ಯ ಅಭಿವೃದ್ಧಿ
  • ರಾಸ್ನೆಫ್ಟ್ ಮತ್ತು ಒವಿಎಲ್ ಇಂಧನ ಒಪ್ಪಂದ
  • ನಾಗ್ಪುರ-ಸಿಕಂದರಾಬಾದ್-ಹೈದರಾಬಾದ್ ವೇಗದ ರೈಲು ಯೋಜನೆ
  • ಭಾರತದಲ್ಲಿ ರಷ್ಯಾದ ಕೆಎ 226 ಹೆಲಿಕಾಪ್ಟರ್ ನಿರ್ಮಾಣ ಒಪ್ಪಂದ

 

ರಷ್ಯಾದ ರೋಸ್‌ನೆಫ್ಟ್‌ ತೆಕ್ಕೆಗೆ ಎಸ್ಸಾರ್ ತೈಲ ಕಂಪನಿ

ರಷ್ಯಾದ ರೋಸ್‌ನೆಫ್ಟ್‌ ಮತ್ತು ಅದರ ಪಾಲುದಾರ ಕಂಪೆನಿಗಳು ಖಾಸಗಿ ವಲಯದಲ್ಲಿ ಭಾರತದ ಎರಡನೇ ಅತಿದೊಡ್ಡ ತೈಲ ಕಂಪೆನಿ ಎಸ್ಸಾರ್‌ ಆಯಿಲ್‌ ಅನ್ನು  ಖರೀದಿ ಮಾಡಲು ಸಮ್ಮತಿಸಿವೆ. ಸಾಲವನ್ನೂ ಒಳಗೊಂಡು ಒಟ್ಟು ರೂ 87,100 ಕೋಟಿ ಮೊತ್ತದ ಸ್ವಾಧೀನ ಒಪ್ಪಂದ ನಡೆದಿದೆ. ರೋಸ್‌ನೆಫ್ಟ್‌ ಮತ್ತು ಇದರ ಪಾಲುದಾರಿಕೆ ಸಂಸ್ಥೆಗಳಾದ ನೆದರ್ಲ್ಯಾಂಡ್ ಮೂಲದ ಟ್ರಾಫಿಗುರ ಮತ್ತು ಖಾಸಗಿ ಬಂಡವಾಳ ಗ್ರೂಫ್ ಯುನೈಟೆಡ್ ಕ್ಯಾಪಿಟಲ್ ಪಾರ್ಟನರ್ಸ್ ಖರೀದಿಗೆ ಕೈಜೋಡಿಸಿವೆ. ಈ ಮೊತ್ತದಲ್ಲಿ ಎಸ್ಸಾರ್ ಆಯಿಲ್‌ ಹೊಂದಿರುವ ಒಟ್ಟು ರೂ 40,200 ಕೋಟಿ ಸಾಲವೂ ಸೇರಿಕೊಂಡಿದೆ.

  • ಈ ಮೊತ್ತವನ್ನು ಸಂಪೂರ್ಣವಾಗಿ ನಗದು ರೂಪದಲ್ಲಿ ಪಾವತಿಸಲು ಕಂಪೆನಿಗಳು ನಿರ್ಧರಿಸಿವೆ.
  • ಎಸ್ಸಾರ್‌ ಕಂಪೆನಿಯ ಶೇ 49 ರಷ್ಟು ಷೇರುಗಳನ್ನು ರೋಸ್‌ನೆಫ್ಟ್‌ ಖರೀದಿ ಮಾಡಿದೆ. ರಷ್ಯಾದ ಯುನೈಟೆಡ್‌ ಕ್ಯಾಪಿಟಲ್‌ ಪಾರ್ಟ್‌ನರ್ಸ್‌ ಮತ್ತು ನೆದರ್‌ಲೆಂಡ್ಸ್‌ ಮೂಲದ ಟ್ರಾಫಿಗರ್‌ ಗ್ರೂಪ್‌ ಕಂಪೆನಿ ಶೇ 49ರಷ್ಟು ಷೇರುಗಳನ್ನು ಖರೀದಿಸಿವೆ.
  • ಉಳಿದ ಶೇ 2 ರಷ್ಟು ಷೇರು ಮಾತ್ರವೇ ಎಸ್ಸಾರ್‌ ಆಯಿಲ್‌ ಬಳಿ ಇದೆ.

ಖರೀದಿಯ ಮಹತ್ವ:

  • ಇದು ದೇಶದ ಅತಿ ದೊಡ್ಡ ವಿದೇಶಿ ಸ್ವಾಧೀನವಾಗಿದೆ ಮತ್ತು ತೈಲ ಸಂಸ್ಕರಣ ವಲಯದಲ್ಲಿ ಅತಿ ದೊಡ್ಡ ವಿದೇಶಿ ಹೂಡಿಕೆ.
  • ಅಲ್ಲದೇ ಈ ಖರೀದಿಯು ರಷ್ಯಾದ ಅತಿ ದೊಡ್ಡ ವಿದೇಶಿ ಸ್ವಾಧೀನ ಸಹ ಆಗಿದೆ. ಅತ್ಯಂತ ಭರವಸೆಯ ಹಾಗೂ ವೇಗವಾಗಿ ಬೆಳೆಯುತ್ತಿರುವ ವಿಶ್ವದ ಮಾರುಕಟ್ಟೆಗಳಲ್ಲಿ ಒಂದಾದ ಭಾರತದಲ್ಲಿ ಬಂಡವಾಳ ಹೂಡುವುದರಿಂದ ರೋಸ್‌ನೆಫ್ಟ್‌ ವಿಸ್ತರಣೆಯಲ್ಲಿ ಮೈಲಿಗಲ್ಲು ಆಗಲಿದೆ. ರಾಯಲ್ ಡಚ್ ಮತ್ತು ಶೆಲ್ ಹಾಗೂ ಬ್ರಿಟಿಷ್ ಪೆಟ್ರೋಲಿಯಂ ನಂತರ ಭಾರತದ ತೈಲ ಮಾರುಕಟ್ಟೆಗೆ ಪ್ರವೇಶಿಸುತ್ತಿರುವ ಮೂರನೇ ವಿದೇಶಿ ಸಂಸ್ಥೆ ಇದಾಗಿದೆ.
  • ಇವೆಲ್ಲದರ ಜೊತೆಗೆ ರಷ್ಯಾ ಮತ್ತು ಭಾರತ ನಡುವೆ ಈಗಾಗಲೇ ಚಾಲ್ತಿಯಲ್ಲಿರುವ ಒಪ್ಪಂದಗಳಿಗೆ ಮತ್ತಷ್ಟು ಬಲ ಬರಲಿದ್ದು, ಸಂಬಂಧ ಸುಧಾರಿಸಲು ಸಹಕಾರಿಯಾಗಲಿದೆ.

One Thought to “ಪ್ರಚಲಿತ ವಿದ್ಯಮಾನಗಳು- ಅಕ್ಟೋಬರ್-14, 2016”

  1. Vinayaka malapur

    I like karunaduexams. Com

Leave a Comment

This site uses Akismet to reduce spam. Learn how your comment data is processed.