ಹೆಚ್ಐವಿ ಮತ್ತು ಏಡ್ಸ್ (ತಡೆ ಮತ್ತು ನಿಯಂತ್ರಣ) ಮಸೂದೆ, 2014 ತಿದ್ದುಪಡಿ ತರಲು ಕೇಂದ್ರ ಸಂಪುಟ ಒಪ್ಪಿಗೆ

ಹೆಚ್ಐವಿ/ಏಡ್ಸ್ ಮಸೂದೆ-2014ರ ಪ್ರಮುಖ ತಿದ್ದುಪಡಿಗಳಿಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಮಸೂದೆಯು ಎಚ್‌ಐವಿ-ಏಡ್ಸ್ ಪೀಡಿತರ ವಿರುದ್ಧ ತಾರತಮ್ಯದ ದೂರುಗಳ ತನಿಖೆಗೆ ಕಾನೂನು ಉತ್ತರದಾಯಿತ್ವ ಹಾಗೂ ಔಪಚಾರಿಕ ವ್ಯವಸ್ಥೆಯನ್ನು ಒದಗಿಸುತ್ತದೆ ಹಾಗೂ ಚಿಕಿತ್ಸೆಯನ್ನು ರೋಗಿಯ ಕಾನೂನು ಬದ್ಧ ಹಕ್ಕನ್ನಾಗಿಸುತ್ತದೆ.

ಮಸೂದೆಯ ಪ್ರಮುಖಾಂಶಗಳು:

  • ಹೆಚ್ಐವಿ/ಏಡ್ಸ್ ಪ್ರಸರಣವನ್ನು ತಡೆಯುವುದು ಮತ್ತು ನಿಯಂತ್ರಿಸುವುದು ಮಸೂದೆಯ ಉದ್ದೇಶವಾಗಿದೆ. ಎಚ್‌ಐವಿ-ಏಡ್ಸ್ ಪೀಡಿತರ ವಿರುದ್ಧ ತಾರತಮ್ಯವನ್ನು ಹೋಗಲಾಡಿಸುವುದು ಸಹ ಒಳಗೊಂಡಿದೆ.
  • ಎಚ್‌ಐವಿ ಪೀಡಿತರು ಮತ್ತು ಕುಟುಂಬಿಕರಿಗೆ ಉದ್ಯೋಗ, ಶಿಕ್ಷಣ, ಆರೋಗ್ಯ, ವಿಮೆ, ಆಸ್ತಿ, ಬಾಡಿಗೆ ಮನೆ ಇತ್ಯಾದಿಗಳನ್ನು ನಿರಾಕರಿಸಬಾರದು ಅಥವಾ ತಾರತಮ್ಯ ಮಾಡಬಾರದು.
  • ರೋಗಿಯ ಅನುಮತಿ ಅಥವಾ ನ್ಯಾಯಾಲಯದ ಆದೇಶದ ಹೊರತಾಗಿ ಆತನ ಕಾಯಿಲೆಯ ಸ್ಥಿತಿಗತಿ ಬಹಿರಂಗ ಪಡಿಸಬಾರದು.
  • ಉದ್ಯೋಗದ ಸ್ಥಳ, ಶಿಕ್ಷಣ ಸಂಸ್ಥೆ, ಆರೋಗ್ಯ ಸೌಲಭ್ಯ, ಸಾರ್ವಜನಿಕ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ಎಚ್‌ಐವಿ ಪೀಡಿತರನ್ನು ಅನುಚಿತವಾಗಿ ನಡೆಸಿಕೊಳ್ಳಬಾರದು.
  • ಔಷಧೋಪಚಾರ ಪಡೆಯುವುದು ರೋಗಿಯ ಕಾನೂನುಬದ್ಧ ಹಕ್ಕು.
  • 12 ವರ್ಷದ ಮೇಲಿನ 18ರೊಳಗಿನ ವ್ಯಕ್ತಿಯೊಬ್ಬ ಪಕ್ವ ತಿಳುವಳಿಕೆ ಹಾಗೂ ಕುಟುಂಬ ನಿರ್ವಹಣೆ ಸಾಮರ್ಥ್ಯ ಪಡೆದಿದ್ದರೆ, ಆತ ತನ್ನ ಎಚ್‌ಐವಿ ಪೀಡಿತ ಕುಟುಂಬದ ಪಾಲಕನಾಗಬಲ್ಲನು.
  • ಎಚ್‌ಐವಿ ಪೀಡಿತನಿಗೆ ತನ್ನ ಕುಟುಂಬದವರೊಂದಿಗೆ ಮನೆಯಲ್ಲಿ ವಾಸಿಸುವ ಹಾಗೂ ಮನೆಯ ಸೌಕರ್ಯ ಅನುಭವಿಸುವ ಹಕ್ಕಿದೆ.
  • ಒಟ್ಟಾರೆಯಾಗಿ ಎಚ್‌ಐವಿ ಪೀಡಿತರನ್ನು ಸಾಮಾನ್ಯ ವ್ಯಕ್ತಿ ಗಳಂತೆಯೇ ನಡೆಸಿಕೊಳ್ಳಬೇಕು.

ಹಿರಿಯ ಕಲಾವಿದ ಯೂಸಫ್ ಅರಕ್ಕಲ್ ವಿಧಿವಶ

ದೇಶದ ನವ್ಯ ಕಲಾವಿದರ ಸಾಲಿನಲ್ಲಿ ಅಗ್ರಪಂಕ್ತಿಯ ಕಲಾವಿದರಾಗಿದ್ದ ಹಿರಿಯ ಚಿತ್ರ ಕಲಾವಿದ ಯೂಸುಫ್ ಅರಕ್ಕಲ್ ಬೆಂಗಳೂರಿನ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ಅವರಿಗೆ 71 ವರ್ಷ ವಯಸ್ಸಾಗಿತ್ತು. ಕಳೆದ ಕೆಲ ತಿಂಗಳುಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.

  • ಕೇರಳದ ಚವಕ್ಕಾಡ್ ಮೂಲದವರಾದರೂ ಯೂಸುಫ್ ಅವರು ಬೆಂಗಳೂರಿನ ಚಿತ್ರಕಲಾ ಪರಿಷತ್ ನಲ್ಲಿ ವಿದ್ಯಾಭ್ಯಾಸ ಮಾಡಿ, ಬೆಂಗಳೂರಿನಲ್ಲೇ ತಮ್ಮ ವೃತ್ತಿ ಬದುಕು ಕಂಡುಕೊಂಡು ಅಂತಾರಾಷ್ಟ್ರೀಯ ಮಟ್ಟಕ್ಕೇರಿದರು.
  • ಕರ್ನಾಟಕ ಚಿತ್ರಕಲಾ ಪರಿಷತ್​ನಲ್ಲಿ ಚಿತ್ರಕಲಾ ಡಿಪ್ಲೋಮಾ ಮುಗಿಸಿದ ಬಳಿಕ ಮುದ್ರಣ ಕಲೆಯಲ್ಲಿ ವಿಶೇಷವಾದ ತರಬೇತಿ ಪಡೆದರು. ನಂತರ ದೆಹಲಿಯ ರಾಷ್ಟ್ರೀಯ ಅಕಾಡೆಮಿ ಕಮ್ಯೂನಿಟಿ ಸ್ಟುಡಿಯೋದಲ್ಲಿ ಮುದ್ರಣ ಕಲೆಯ ವಿಶೇಷ ಅಧ್ಯಯನ ಮಾಡಿದರು.
  • ರೇಖಾಚಿತ್ರ, ವರ್ಣಚಿತ್ರ, ಶಿಲ್ಪ, ಮ್ಯೂರಲ್, ಮುದ್ರಣ ಕಲೆ ಮತ್ತು ತಮ್ಮದೇ ಶೈಲಿಯ ಛಾಪು ಮೂಡಿಸಿದ್ದರು.

ಪ್ರಶಸ್ತಿಗಳು:

  • ಯೂಸುಫ್ ಅವರಿಗೆ ಎರಡು ಬಾರಿ ಕರ್ನಾಟಕ ಲಲಿತಕಲಾ ಅಕಾಡೆಮಿ ಪ್ರಶಸ್ತಿ.
  • 1983ರಲ್ಲಿ ರಾಷ್ಟ್ರೀಯ ಪ್ರಶಸ್ತಿ, 1986ರಲ್ಲಿ ಢಾಕಾದಲ್ಲಿ ನಡೆದ ಬಿಯೆನ್ನಾಲೆ ಪ್ರದರ್ಶನದಲ್ಲಿ ವಿಶೇಷ ಪ್ರಶಸ್ತಿ ಲಭಿಸಿತ್ತು.
  • ಫ್ಲಾರೆನ್ಸ್ ಬಿಯನ್ನಾಲೆಯ ಪ್ರತಿಷ್ಠಿತ ಲಾರೆನ್ಜೋ ಡೆ ಮೆಡಿಸಿ ಸ್ವರ್ಣ ಪದಕ ಗೌರವ ಪಡೆದರು.

ಜಿಸ್ಯಾಟ್-18 ಸಂವಹನ ಉಪಗ್ರಹ ಉಡಾವಣೆ ಯಶಸ್ವಿ

ಭಾರತದ ಅತ್ಯಾಧುನಿಕ ಸುಧಾರಿತ ಸಂವಹನ ಉಪಗ್ರಹ ಜಿಸ್ಯಾಟ್-18ನ್ನು ಫ್ರೆಂಚ್ ಗಯಾನಾದ ಕೊವುರುನಲ್ಲಿರುವ ಉಡಾವಣಾ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ. ಏರಿಯಾನ್-5 ವಿಎ-231 ರಾಕೆಟ್ ಬಳಸಿ ಈ ಉಪಗ್ರಹವನ್ನು ಕಕ್ಷೆಗೆ ಯಶಸ್ವಿಯಾಗಿ ರವಾನಿಸಲಾಯಿತು. ಭೂಸ್ಥಾಯಿ ವರ್ಗಾವಣೆ ಕಕ್ಷೆಗೆ ಜಿಸ್ಯಾಟ್-18 ಅನ್ನು ಸೇರಿಸಲಾಗಿದೆ. ಯುರೋಪ್ ಬಾಹ್ಯಕಾಶ ಸಂಸ್ಥೆಯಿಂದ ಇಸ್ರೋ ಯಶಸ್ವಿಯಾಗಿ ಉಡಾಯಿಸಿದ 20ನೇ ಉಪಗ್ರಹವಾಗಿದೆ.

ಜಿಸ್ಯಾಟ್-18 ಪ್ರಮುಖಾಂಶ:

  • ಭಾರತೀಯ ಬಾಹ್ಯಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸ್ವದೇಶಿ ತಂತ್ರಜ್ಞಾನ ಬಳಸಿ ನಿರ್ಮಿಸಲಾಗಿರುವ ಉಪಗ್ರಹ ಇದಾಗಿದೆ. ಇದರ ತೂಕ 3,404 ಕೆ.ಜಿ. ಈ ಉಪಗ್ರಹ 15 ವರ್ಷಗಳ ಕಾಲ ಸೇವೆ ಸಲ್ಲಿಸಲಿದೆ.
  • ಜಿಸ್ಯಾಟ್ ಉಪಗ್ರಹ 48 ಸಂವಹನ ಟ್ರಾನ್ಸ್ಪಂಡರ್ ಗಳನ್ನು ಒಳಗೊಂಡಿದೆ.
  • ಈ ಟ್ರಾನ್ಸ್ಪಂಡರ್ ಗಳು ಜಿಸ್ಯಾಟ್ ಸಿ-ಬ್ಯಾಂಡ್, ಕೆ.ಯು. ಬ್ಯಾಂಡ್​ಗಳಲ್ಲಿ ಸೇವೆ ಒದಗಿಸಲಿದೆ.
  • ಜಿಸ್ಯಾಟ್-18 ಉಪಗ್ರಹವು ದೂರದರ್ಶನ, ದೂರಸಂಪರ್ಕ ಸೇರಿದಂತೆ ಡಿಜಿಟಲ್ ಉಪಗ್ರಹ ಸೇವೆಯನ್ನು ನೀಡಲಿದೆ.
  • ಇಸ್ರೋ ನಿರ್ಮಿಸಿರುವ ಜಿಸ್ಯಾಟ್-18 ಉಪಗ್ರಹ ಅತ್ಯಾದುನಿಕ ಸಂವಹನ ಉಪಗ್ರಹವಾಗಿದ್ದು, ಈಗಾಗಲೇ ಕಾರ್ಯ ನಿರ್ವಹಿಸುತ್ತಿರುವ 14 ಸಂವಹನ ಉಪಗ್ರಹಗಳೊಂದಿಗೆ ಸೇವೆ ಸಲ್ಲಿಸಲಿದೆ.

ಮೂವರು ಸಾಧಕರಿಗೆ 2016 ರಸಾಯನಶಾಸ್ತ್ರ ವಿಭಾಗದಲ್ಲಿ ನೊಬೆಲ್ ಪ್ರಶಸ್ತಿ

ರಸಾಯನಶಾಸ್ತ್ರಕ್ಕೆ ನೀಡಲಾಗುವ 2016ರ ನೊಬೆಲ್ ಪ್ರಶಸ್ತಿ ಜೀನ್ -ಪಿಯರ್ರೆ ಸೌವಾಜ್, ಜೆ. ಫ್ರೇಸರ್ ಸೊಡ್ಡಾರ್ಟ್ ಮತ್ತು ಬರ್ನಾಡ್ ಫೆರಿಂಗ ಅವರಿಗೆ ಲಭಿಸಿದೆ. ಮೊಲ್ಯಾಕ್ಯುಲರ್(ಅಣುಗಳ) ಮೆಶಿನ್ ಗಳನ್ನು ಅಭಿವೃದ್ಧಿ ಪಡಿಸಿದಕ್ಕಾಗಿ ಈ ಮೂವರನ್ನು ರಸಾಯನಶಾಸ್ತ್ರಕ್ಕೆ ನೀಡಲಾಗುವ 2016ರ ನೊಬೆಲ್ ಪುರಸ್ಕಾರಕ್ಕೆ ಪರಿಗಣಿಸಲಾಗಿದೆ. ಎಂಟು ದಶಲಕ್ಷ ಸ್ವೀಡಿಶ್ ಕ್ರೌನ್ (9,31,000 ಡಾಲರ್) ಪ್ರಶಸ್ತಿಯನ್ನು ಈ ಮೂವರು ವಿಜ್ಞಾನಿಗಳು ಹಂಚಿಕೊಂಡಿದ್ದಾರೆ.

ಮೊಲ್ಯಾಕುಲ್ಯರ್ ಮೆಶಿನ್:

  • ಮೊಲ್ಯಾಕುಲ್ಯರ್ ಮೆಶಿನ್ ಅಥವಾ ನ್ಯಾನೋಮೆಶಿನ್ ವಿಶ್ವದ ಅತಿ ಚಿಕ್ಕ ಮೆಶಿನ್ಗಳು.
  • ಜೀವಕೋಶಗಳ ಒಳಗೆ ಪ್ರೋಟಿನ್ ಗಳು ನೈಸರ್ಗಿಕವಾಗಿ ಜೈವಿಕ ಯಂತ್ರಗಳಂತೆ ವರ್ತಿಸುವುದು ಇವರ ಸಂಶೋಧನೆಗೆ ಸ್ಪೂರ್ತಿಯಾಗಿದೆ.

ಮೊಲ್ಯಾಕುಲ್ಯರ್ ಮೆಶಿನ್ ಅಭಿವೃದ್ದಿಗೆ ಸಾಧಕರ ಕೊಡುಗೆ:

ಫ್ರಾನ್ಸ್‌ನ ಜೀನ್‌ ಪಿರ್ರೆ ಸುವಾಜ್‌: 1983ರಲ್ಲಿ ಅಣು ಯಂತ್ರದ ಅಭಿವೃದ್ಧಿಗೆ ಮುನ್ನುಡಿ ಬರೆದಿದ್ದರು. ಬಳೆ ಅಥವಾ ಉಂಗುರ ಆಕಾರದ ಎರಡು ಅಣುಗಳನ್ನು ಪರಸ್ಪರ ಕೂಡಿಸುವ ಮೂಲಕ ಅಣುಗಳ ಸರಪಣಿ ಸೃಷ್ಟಿಸುವಲ್ಲಿ ಯಶ ಕಂಡಿದ್ದರು. ಅಣು ಯಂತ್ರಗಳ ಅಭಿವೃದ್ಧಿಯಲ್ಲಿ ಇದು ಮೊದಲ ಹಂತ ಎಂದು ಬಣ್ಣಿಸಲಾಗಿದೆ. ‘ಯಂತ್ರವು ಕೆಲಸ ಮಾಡಬೇಕಾದರೆ, ಪರಸ್ಪರ ಚಲಿಸುವಂತಹ ಭಾಗಗಳನ್ನು ಅವು ಹೊಂದಿರಬೇಕಾಗುತ್ತದೆ. ಸುವಾಜ್‌ ಅವರು ಸಂಪರ್ಕ ಬೆಸೆದ ಎರಡು ಅಣು ಬಳೆಗಳು ಈ ಅಗತ್ಯವನ್ನು ಪೂರೈಸಿವೆ’ ಎಂದು ನೊಬೆಲ್‌ ಪ್ರಶಸ್ತಿ ತೀರ್ಪುದಾರರ ಮಂಡಳಿ ಹೇಳಿದೆ.

ಜೆ. ಫ್ರೇಸರ್ ಸೊಡ್ಡಾರ್ಟ್: 1991ರಲ್ಲಿ ಜೆ.ಫ್ರೇಸರ್‌ ಸ್ಟೊಡಾರ್ಟ್‌ ಅವರು ಅಣು ಯಂತ್ರ ಅಭಿವೃದ್ಧಿಯ ಎರಡನೇ ಹಂತವನ್ನು ಕೈಗೆತ್ತಿಕೊಂಡಿದ್ದರು. ಅಣು ಬಳೆಗಳನ್ನು ತೆಳ್ಳನೆಯ ಅಣು ದಂಡಕ್ಕೆ (ಆ್ಯಕ್ಸಲ್‌) ಅವರು ಪೋಣಿಸಿದ್ದರು. ಅಲ್ಲದೇ ಈ ದಂಡದ ಜೊತೆಗೆ ಅಣು ಬಳೆಗಳೂ ಚಲಿಸುತ್ತವೆ ಎಂಬುದನ್ನು ಪ್ರಾತ್ಯಕ್ಷಿಕೆ ಮೂಲಕ ತೋರಿಸಿದ್ದರು. ಸ್ಟೊಡಾರ್ಡ್‌ ಅವರು ಅಣುಗಳ ಲಿಫ್ಟ್‌, ಅಣು ಆಧಾರಿತ ಕಂಪ್ಯೂಟರ್‌ ಚಿಪ್‌ಗಳನ್ನು ಈಗಾಗಲೇ ಅಭಿವೃದ್ಧಿ ಪಡಿಸಿದ್ದಾರೆ.
ಬರ್ನಾಡ್ ಫೆರಿಂಗ: ಅಂತಿಮವಾಗಿ ಅಣು ಯಂತ್ರವನ್ನು ಅಭಿವೃದ್ಧಿ ಪಡಿಸಿದ್ದು ಬರ್ನಾರ್ಡ್‌ ಫೆರಿಂಗಾ. ಒಂದೇ ದಿಕ್ಕಿನಲ್ಲಿ ನಿರಂತರವಾಗಿ ತಿರುಗುವ ಅಣು ಬ್ಲೇಡ್‌ ರೂಪಿಸಲು 1999ರಲ್ಲಿ ಅವರು ಯಶಸ್ವಿಯಾಗಿದ್ದರು. ಅಣು ಯಂತ್ರಗಳನ್ನು ಬಳಸಿ ನ್ಯಾನೊ ಕಾರುಗಳನ್ನು ರೂಪಿಸಿದ ಹೆಗ್ಗಳಿಕೆಯೂ ಫೆರಿಂಗಾ ಅವರಿಗಿದೆ.

One Thought to “ಪ್ರಚಲಿತ ವಿದ್ಯಮಾನಗಳು- ಅಕ್ಟೋಬರ್-6, 2016”

Leave a Comment

This site uses Akismet to reduce spam. Learn how your comment data is processed.