ಕೇರಳ ಮತ್ತು ಕೊಲ್ಕತ್ತಾ ಹೈಕೋರ್ಟ್ ಗೆ ನೂತನ ಮುಖ್ಯನ್ಯಾಯಾಧೀಶರುಗಳ ನೇಮಕ

ಮೋಹನ್ ಎಂ ಶಾಂತನಗೌಡ ರವರನ್ನು ಕೇರಳ ಹೈಕೋರ್ಟ್ನ ಮುಖ್ಯನ್ಯಾಯಾಧೀಶರನ್ನಾಗಿ ಮತ್ತು ಗಿರೀಶ್ ಚಂದ್ರ ಗುಪ್ತಾ ಅವರನ್ನ ಕಲ್ಕತ್ತಾ ಹೈಕೋರ್ಟ್ನ ಮುಖ್ಯನ್ಯಾಯಾಧೀಶರನ್ನಾಗಿ ನೇಮಕ ಮಾಡಲಾಗಿದೆ.

ಮೋಹನ್ ಎಂ ಶಾಂತನಗೌಡ: ಕರ್ನಾಟಕ ಮೂಲದ ಮೋಹನ್ ಎಂ ಶಾಂತನಗೌಡರವರು ಕೇರಳ ಹೈಕೋರ್ಟ್ನ ಮುಖ್ಯನ್ಯಾಯಾಧೀಶರಾಗಿ ನೇಮಕಗೊಂಡಿದ್ದಾರೆ. ಕೇರಳ ರಾಜ್ಯಪಾಲರಾದ ನಿವೃತ ಮುಖ್ಯನಾಯಾಧೀಶರಾದ ಪಿ.ಸಾಥಸಿವಂ ಪ್ರಮಾಣ ವಚನ ಭೋದಿಸಿದರು.

  • ಶಾಂತನಗೌಡ ರವರು 5 ಮೇ 1958 ರಲ್ಲಿ ಹಾವೇರಿ ಜಿಲ್ಲೆಯ ಚಿಕ್ಕೆರೂರಿನಲ್ಲಿ ಜನಿಸಿದರು.
  • ಕರ್ನಾಟಕ ಹೈಕೋರ್ಟ್ನ ಹೆಚ್ಚುವರಿ ನ್ಯಾಯಾಧೀಶರಾಗಿ 2003 ರಲ್ಲಿ ನೇಮಕ. ತದನಂತರ 29 ಸೆಪ್ಟೆಂಬರ್ 2004 ರಲ್ಲಿ ಖಾಯಂ ನ್ಯಾಯಾಧೀಶರಾಗಿ ನೇಮಕಗೊಂಡರು.

ಗಿರೀಶ್ ಚಂದ್ರ ಗುಪ್ತಾ: ಕಲ್ಕತ್ತಾ ಹೈಕೋರ್ಟ್ನನಲ್ಲಿ ನ್ಯಾಯಾಧೀಶರಾಗಿ ಸೇವೆ ಸಲ್ಲಿಸುತ್ತಿದ್ದು, ಇವರನ್ನು ಮುಖ್ಯನ್ಯಾಯಾಧೀಶರನ್ನಾಗಿ ನೇಮಕ ಮಾಡಲಾಗಿದೆ. ಪಶ್ಚಿಮ ಬಂಗಾಳದ ರಾಜ್ಯಪಾಲ ಕೇಸರಿ ನಾಥ್ ತ್ರಿಪಾಠಿ ರವರು ಗುಪ್ತಾ ಅವರಿಗೆ ಪ್ರಮಾಣ ವಚನ ಭೋದಿಸಿದರು. ಗುಪ್ತಾ ರವರು ಡಿಸೆಂಬರ್ 2016 ರಲ್ಲಿ ನಿವೃತ್ತಿ ಹೊಂದಲ್ಲಿದ್ದು, ಅಲ್ಪ ಅವಧಿಗೆ ಮುಖ್ಯನ್ಯಾಯಾಧೀಶರಾಗಿ ಸೇವೆ ಸಲ್ಲಿಸಲ್ಲಿದ್ದಾರೆ.

  • ಗುಪ್ತಾ ಅವರು 1982 ರಲ್ಲಿ ಅಡ್ವೋಕೆಟ್ ಆಗಿ ನೊಂದಾಯಿಸಿಕೊಳ್ಳುವ ಮೂಲಕ ವಕೀಲ ವೃತ್ತಿಯನ್ನು ಆರಂಭಿಸಿದರು.
  • ಸೆಪ್ಟೆಂಬರ್ 2000 ರಲ್ಲಿ ಕಲ್ಕತ್ತಾ ಹೈಕೋರ್ಟ್ನ ಖಾಯಂ ನ್ಯಾಯಾಧೀಶರಾಗಿ ನೇಮಕಗೊಂಡರು.

ರೈಲ್ವೆ ಬಜೆಟ್ ಅನ್ನು ಹಣಕಾಸು ಬಜೆಟ್ ನೊಂದಿಗೆ ವಿಲೀನಗೊಳಿಸಲು ಕೇಂದ್ರ ಸರ್ಕಾರ ಒಪ್ಪಿಗೆ

ರೈಲ್ವೆ ಬಜೆಟ್ ಅನ್ನು ಪ್ರತ್ಯೇಕವಾಗಿ ಮಂಡಿಸಿದೆ ಹಣಕಾಸು ಬಜೆಟ್ ನೊಂದಿಗೆ ವಿಲೀನಗೊಳಿಸುವ ಹಣಕಾಸು ಇಲಾಖೆಯ ಪ್ರಸ್ತಾವನೆಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಅದರಂತೆ ಮುಂದಿನ ಹಣಕಾಸು ಬಜೆಟ್ ನಲ್ಲಿ ರೈಲ್ವೆ ಬಜೆಟ್ ಅನ್ನು ವಿಲೀನಗೊಳಿಸಲಾಗುವುದು. ಆ ಮೂಲಕ 92 ವರ್ಷಗಳ ಚರಿತ್ರೆ ಹೊಂದಿರುವ ಪ್ರತ್ಯೇಕ ರೈಲ್ವೆ ಬಜೆಟ್ ಮಂಡನೆ ಸಂಪ್ರದಾಯಕ್ಕೆ ಅಂತ್ಯ ಹಾಡಲಾಗುವುದು. ನೀತಿ ಆಯೋಗದ ಸದಸ್ಯ ಬಿಬೇಕ್ ದೇಬ್ ರಾಯ್ ನೇತೃತ್ವದ ಸಮಿತಿ ರೈಲ್ವೆ ಬಜೆಟ್ ಅನ್ನು ಸಾಮಾನ್ಯ ಬಜೆಟ್ನಲ್ಲಿ ವಿಲೀನಗೊಳಿಸುವಂತೆ ಶಿಫಾರಸ್ಸು ಮಾಡಿತ್ತು.

  • ವಿಲೀನ ಪ್ರಕ್ರಿಯೆಯಂದ ರೈಲ್ವೆ ಕೂಡಾ ಇತರೆ ಇಲಾಖೆಯಂತೆ ಕಾರ್ಯನಿರ್ವಹಿಸಲಿದೆ.
  • ಈಗ ಅಸ್ಥಿತ್ವದಲ್ಲಿರುವ ಮಾರ್ಗಸೂಚಿಯಂತೆ ರೈಲ್ವೆ ಇಲಾಖೆ ಕಾರ್ಯಾತ್ಮಕ ಸ್ವಾಯತತೆ ಮತ್ತು ಹಣಕಾಸು ಅಧಿಕಾರವನ್ನು ಹೊಂದಿರಲಿದೆ.
  • ಇದರ ಹಣಕಾಸು ವ್ಯವಸ್ಥೆ ಈಗಿರುವಂತೆಯೇ ಮುಂದುವರೆಯಲಿದೆ. ಅಂದರೆ ರೈಲ್ವೆ ಇಲಾಖೆ ತನ್ನ ಆದಾಯದ ಮೂಲಕವೇ ಖರ್ಚನ್ನು ಭರಿಸಲಿದೆ.

ಪ್ರಯೋಜನಗಳು:

  • ಬಜೆಟ್ ಪ್ರಕ್ರಿಯೆಯನ್ನು ವಿಲೀನಗೊಳಿಸುವುದರಿಂದ ರೈಲ್ವೆ ವ್ಯವಹಾರಗಳು ಒಂದೆಡೆ ಕೇಂದ್ರೀಕರಣಗೊಳ್ಳಲಿದ್ದು, ಸರ್ಕಾರದ ಆರ್ಥಿಕ ಸ್ಥಾನಮಾನದ ಸಮಗ್ರ ಚಿತ್ರಣ ದೊರೆಯಲಿದೆ.
  • ಸಾಮಾನ್ಯ ಬಜೆಟ್ ನೊಂದಿಗೆ ಮಂಡನೆ ಮಾಡುವುದರಿಂದ ಹೊಸ ನೀತಿಯನ್ನು ಜಾರಿಗೆ ತರಲು ಸುಲಭವಾಗಲಿದೆ. ಪ್ರತ್ಯೇಕ ಬಜೆಟ್ ಮಂಡನೆಯಿಂದ ಹೊಸ ನೀತಿ ಜಾರಿಗೆ ತರಲು ಸಾಕಷ್ಟು ಸಮಯ ವ್ಯರ್ಥವಾಗುತ್ತಿತ್ತು.
  • ಇನ್ನು ಮುಂದೆ ವಾರ್ಷಿಕ ಲಾಭಾಂಶವನ್ನು ರೈಲ್ವೆ ಇಲಾಖೆ ಸರ್ಕಾರಕ್ಕೆ ನೀಡುವ ಅಗತ್ಯವಿಲ್ಲ. ಆದ್ದರಿಂದ ಈ ಹಣವನ್ನು ರೈಲ್ವೆ ಇಲಾಖೆ ಮೂಲಭೂತ ಸೌಕರ್ಯಗಳ ಅಭಿವೃದ್ದಿಗೆ ಬಳಸಬಹುದಾಗಿದೆ.

ಹಿಂದೂಸ್ತಾನ್ ಡೈಮೆಂಡ್ ಕಂಪನಿ ಪ್ರೈವೆಟ್ ಲಿಮಿಟೆಡ್ ವಿಸರ್ಜನೆಗೆ ಕೇಂದ್ರ ಸರ್ಕಾರ ಒಪ್ಪಿಗೆ

ಹಿಂದೂಸ್ತಾನ್ ಡೈಮೆಂಡ್ ಕಂಪನಿ ಪ್ರೈವೆಟ್ ಲಿಮಿಟೆಡ್ (HDCPL) ಅನ್ನು ವಿರ್ಸಜಿಸಲು ಕೇಂದ್ರ ಆರ್ಥಿಕ ವ್ಯವಹಾರಗಳ ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ. ಪ್ರಸ್ತುತ ದೇಶದಲ್ಲಿ ವಜ್ರ ಉದ್ಯಮ ಸಾಕಷ್ಟು ಬೆಳೆದಿರುವ ಕಾರಣ ಸರ್ಕಾರದ ಈ ಕ್ರಮದಿಂದ ವಜ್ರ ಉದ್ದಿಮೆಗೆ ಕಚ್ಚಾ ವಜ್ರಗಳ ಪೂರೈಕೆ ಮೇಲೆ ಯಾವುದೇ ವ್ಯತ್ಯಯ ಆಗುವುದಿಲ್ಲ ಎನ್ನಲಾಗಿದೆ.

ಹಿಂದೂಸ್ತಾನ್ ಡೈಮೆಂಡ್ ಕಂಪನಿ ಪ್ರೈವೆಟ್ ಲಿಮಿಟೆಡ್:

  • ಹಿಂದೂಸ್ತಾನ್ ಡೈಮೆಂಡ್ ಕಂಪನಿ ಪ್ರೈವೆಟ್ ಲಿಮಿಟೆಡ್ ಕೇಂದ್ರ ಸರ್ಕಾರ ಮತ್ತು ಡಿ ಬೀರ್ಸ್ ಸೆಂಟಿನರಿ ಮಾರಿಷಿಯಸ್ ಲಿಮೆಟೆಡ್ ನ ಜಂಟಿ ಸಂಸ್ಥೆಯಾಗಿದೆ. ಇದರಲ್ಲಿ ಕೇಂದ್ರ ಸರ್ಕಾರ ಮತ್ತು ಡಿ ಬೀರ್ಸ್ ಸೆಂಟಿನರಿ ಮಾರಿಷಿಯಸ್ ಲಿಮೆಟೆಡ್ 50:50 ಪಾಲು ಹೊಂದಿವೆ.
  • ವಜ್ರ ಉದ್ದಿಮೆಗೆ ಕಚ್ಚಾ ವಜ್ರವನ್ನು ಪೂರೈಸುವ ಸಲುವಾಗಿ ಕಂಪನಿ ಕಾಯಿದೆ 1956 ರಡಿ 1978 ರಲ್ಲಿ ಇದನ್ನು ಸ್ಥಾಪಿಸಲಾಗಿದೆ.
  • ಅದರಲ್ಲೂ ಮುಖ್ಯವಾಗಿ ಸಣ್ಣ ಮತ್ತು ಮಧ್ಯಮ ಗಾತ್ರದ ವಜ್ರ ಆಭರಣ ರಪ್ತುದಾರರಿಗೆ ಕಚ್ಚಾ ವಜ್ರವನ್ನು ಪೂರೈಸುವುದು ಇದರ ಪ್ರಮುಖ ಕಾರ್ಯವಾಗಿದೆ.

ಖ್ಯಾತ ಸಾಹಿತಿ ಗೋಪಾಲ ವಾಜಪೇಯಿ ನಿಧನ

ಖ್ಯಾತ ಸಾಹಿತಿ ಗೋಪಾಲ ವಾಜಪೇಯಿ ರವರು ನಿಧನರಾಗಿದ್ದಾರೆ. ಅವರಿಗೆ 64 ವರ್ಷ ವಯಸ್ಸಾಗಿತ್ತು. ಸಂಯುಕ್ತ ಕರ್ನಾಟಕ, ಕಸ್ತೂರಿ, ಕರ್ಮವೀರದಲ್ಲಿ ಗೋಪಾಲ ವಾಜಪೇಯಿ ಅವರು ಕಾರ್ಯ ನಿರ್ವಹಿಸಿದ್ದರು. ಗೋಪಾಲ ವಾಜಪೇಯಿ ಅವರು ನಟ ದಿ.ಶಂಕರನಾಗ್, ದಿ.ಸಿ.ಅಶ್ವತ್ಥ್ ಮತ್ತು ಗಿರೀಶ್ ಕಾರ್ನಾಡ್ ಅವರ ಒಡನಾಡಿಯಾಗಿದ್ದರು. ಸೂಪರ್ ನೋವಾ ಎಂಬ ಮಕ್ಕಳ ಚಿತ್ರದಲ್ಲಿ ಚಿನ್ನವನ್ನು ತಯಾರಿಸಲು ಪ್ರಯತ್ನಿಸುವ ಅಕ್ಕಸಾಲಿಗನ ಪಾತ್ರ ನಿರ್ವಹಿದ್ದರು ಗೋಪಾಲ ವಾಜಪೇಯಿ.

  • ಹುಬ್ಬಳ್ಳಿಯಲ್ಲಿ ‘ಅಭಿನಯ ಭಾರತಿ’ ಹೆಸರಿನಲ್ಲಿ ಕಲಾ ತಂಡವೊಂದನ್ನು ಅವರು ಕಟ್ಟಿದ್ದರು.
  • “ದೊಡ್ಡಪ್ಪ” ಎಂಬ ನಾಟಕ ಅವರಿಗೆ ಅಪಾರ ಕೀರ್ತಿ ತಂದುಕೊಟ್ಟಿತ್ತು.
  • ನಾಗಮಂಡಲ, ಸಂತ ಶಿಶುನಾಳ ಶರೀಫ, ಸಂತೆಯಲ್ಲಿ ನಿಂತ ಕಬೀರ ಸಿನಿಮಾಗಳಿಗೆ ಗೀತ ರಚನೆ ಮಾಡಿದ್ದರು.
  • ಇತ್ತೀಚೆಗೆ ಬಿಡುಗಡೆಯಾದ ಶಿವರಾಜ ಕುಮಾರ್ ಅಭಿನಯದ ಸಂತೆಯಲ್ಲಿ ನಿಂತ ಕಬೀರದಲ್ಲಿನ ಗೀತೆಗಳು ಅವರ ಹಿಂದಿನ ಚಿತ್ರಗೀತೆಗಳಂತೆಯೇ ಜನಮೆಚ್ಚುಗೆಗೆ ಪಾತ್ರವಾಗಿದ್ದವು.

ಸೆಪ್ಟೆಂಬರ್ 21: ಅಂತಾರಾಷ್ಟ್ರೀಯ ಶಾಂತಿ ದಿನ (International Day of Peace)

ಅಂತಾರಾಷ್ಟ್ರೀಯ ಶಾಂತಿ ದಿನವನ್ನು ಪ್ರತಿ ವರ್ಷ ಸೆಪ್ಟೆಂಬರ್ 21 ರಂದು ಆಚರಿಸಲಾಗುವುದು. ರಾಷ್ಟ್ರದೊಳಗೆ ಮತ್ತು ರಾಷ್ಟ್ರಗಳ ನಡುವೆ ಶಾಂತಿ ಆದರ್ಶಗಳನ್ನು ಬಲಪಡಿಸುವ ಸಲುವಾಗಿ ಅಂತಾರಾಷ್ಟ್ರೀಯ ಶಾಂತಿ ದಿನವನ್ನು ಆಚರಿಸಲಾಗುತ್ತಿದೆ. ಅಲ್ಲದೇ ಸಂಘರ್ಷವನ್ನು ಕೊನೆಗೊಳಿಸಿ, ಶಾಂತಿಯನ್ನು ಪ್ರಚಾರ ಮಾಡಲು ಶ್ರಮಿಸಿದ ವ್ಯಕ್ತಿಗಳ ಪ್ರಯತ್ನಗಳನ್ನ ಗೌರವಿಸುವುದು ಸಹ ಈ ದಿನದ ಮುಖ್ಯ ಉದ್ದೇಶವಾಗಿದೆ. ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿಯಾದ ಬಾನ್-ಕಿ-ಮೂನ್ ರವರು ವಿಶ್ವಸಂಸ್ಥೆ ಪ್ರಧಾನ ಕಚೇರಿಯಲ್ಲಿ ಅಳವಡಿಸಿರುವ ಶಾಂತಿ ಗಂಟೆ (Peace Bell) ಬಾರಿಸುವ ಮೂಲಕ ಅಂತಾರಾಷ್ಟ್ರೀಯ ಶಾಂತಿ ದಿನಕ್ಕೆ ಚಾಲನೆ ನೀಡಿದರು.

2016 ಧ್ಯೇಯ ವಾಕ್ಯ: The Sustainable Development Goals: Building Blocks for Peace ಇದು ಈ ವರ್ಷದ ಅಂತಾರಾಷ್ಟ್ರೀಯ ಶಾಂತಿ ದಿನದ ಧ್ಯೇಯವಾಕ್ಯವಾಗಿದೆ.

ಹಿನ್ನಲೆ:

  • ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಸೆಪ್ಟೆಂಬರ್ 21ರನ್ನು ಅಂತಾರಾಷ್ಟ್ರೀಯ ಶಾಂತಿ ದಿನವನ್ನಾಗಿ ಆಚರಿಸುವ ಸಲುವಾಗಿ 1981 ರಲ್ಲಿ ನಿರ್ಣಯವನ್ನು ಮಂಡಿಸಿತು. ಅಂದಿನಿಂದ ಸೆಪ್ಟೆಂಬರ್ 21 ರಂದು ಅಂತಾರಾಷ್ಟ್ರೀಯ ಶಾಂತಿ ದಿನವನ್ನು ಆಚರಿಸಲಾಗುತ್ತಿದೆ.
  • 2001 ರಲ್ಲಿ ಮತ್ತೊಮ್ಮೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಸೆಪ್ಟೆಂಬರ್ 21 ಅಹಿಂಸಾ ಮತ್ತು ಕದನ ವಿರಾಮ ದಿನವನ್ನಾಗಿ ಘೋಷಿಸಿತು.

Leave a Comment

This site uses Akismet to reduce spam. Learn how your comment data is processed.