ಬಿಎಸ್ಎಫ್ಪುನರ್ರಚನೆ:

ಗಡಿ ಭದ್ರತಾ ಪಡೆಯ (ಬಿಎಸ್‌ಎಫ್‌) ಬಹಳ ಕಾಲದಿಂದ ಬಾಕಿಯಿದ್ದ ಕೇಡರ್‌ ವ್ಯವಸ್ಥೆ ಪುನರ್‌ರಚನೆಗೆ ಸಂಪುಟ ಒಪ್ಪಿಗೆ ನೀಡಿದೆ. ಇದರಿಂದಾಗಿ ಬಿಎಸ್‌ಎಫ್‌ನಲ್ಲಿ 74 ಹುದ್ದೆಗಳು ಸೃಷ್ಟಿಯಾಗಲಿವೆ. ಬಿಎಸ್‌ಎಫ್‌ನ ಕಾರ್ಯಾಚರಣಾ ಸಾಮರ್ಥ್ಯ ಮತ್ತು ಆಡಳಿತಾತ್ಮಕ ಸಾಮರ್ಥ್ಯವನ್ನು ಹೆಚ್ಚಿಸುವುದು ಈ ನಿರ್ಧಾರದ ಉದ್ದೇಶವಾಗಿದೆ.

ಸೆಪ್ಟೆಂಬರ್ 14: ರಾಷ್ಟ್ರೀಯ ಹಿಂದಿ ದಿವಸ್

ರಾಷ್ಟ್ರೀಯ ಹಿಂದಿ ದಿವಸವನ್ನು ಸೆಪ್ಟೆಂಬರ್ 14 ರಂದು ಆಚರಿಸಲಾಗುತ್ತದೆ. ರಾಷ್ಟ್ರವ್ಯಾಪ್ತಿ ಹಿಂದಿ ಮಾತನಾಡುವ ರಾಜ್ಯಗಳಲ್ಲಿ ಮತ್ತು ಹಿಂದಿ ಅಧಿಕೃತ ಭಾಷೆಯಾಗಿರುವ ಇತರೆ ರಾಷ್ಟ್ರಗಳಲ್ಲೂ ಸಹ ರಾಷ್ಟ್ರೀಯ ಹಿಂದಿ ದಿವಸ್ ಅನ್ನು ಆಚರಿಸಲಾಗುವುದು. ಹಿಂದಿ ಭಾಷೆಯನ್ನು ಪ್ರೋತ್ಸಾಹಿಸುವುದು ಮತ್ತು ಅದರ ಸಾಂಸ್ಕೃತಿ ಪರಂಪರೆ ಹಾಗೂ ಮೌಲ್ಯಗಳನ್ನು ಸಾರಲು ಈ ದಿನವನ್ನು ವೇದಿಕೆಯನ್ನಾಗಿ ಬಳಸಲಾಗುವುದು. ಜೊತೆಗೆ  ಮಾತೃಭಾಷೆಯನ್ನು ಪ್ರೇರಿಪಿಸಿ ಭಾಷೆಯ ಮಹತ್ವವನ್ನು ಸಾರುವುದು ಈ ದಿನದ ಉದ್ದೇಶವಾಗಿದೆ. ಈ ದಿನದಂದು ರಾಷ್ಟ್ರಪತಿಗಳು ರಾಜಭಾಷಾ ಪ್ರಶಸ್ತಿಗಳನ್ನು ರಾಷ್ಟ್ರಪತಿ ಭವನದಲ್ಲಿ ವಿತರಿಸುವರು.  ರಾಜಭಾಷಾ ಪ್ರಶಸ್ತಿಗಳನ್ನು ಗೃಹ ಸಚಿವಾಲಯದಡಿ ಕಾರ್ಯನಿರ್ವಹಿಸುವ ಆಡಳಿತ ಭಾಷೆ ಇಲಾಖೆ ನೀಡುತ್ತಿದೆ. ಹಿಂದಿ ಭಾಷೆ ಬೆಳವಣಿಗೆಗೆ ಪ್ರಾಮುಖ್ಯತೆ ನೀಡಿರುವ ಕೇಂದ್ರ ಸಚಿವಾಲಯಗಳು, ಇಲಾಖೆಗಳು ಮತ್ತು ರಾಷ್ಟ್ರೀಕೃತ ಬ್ಯಾಂಕ್ ಗಳಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.

ರಾಷ್ಟ್ರೀಯ ಹಿಂದಿ ದಿವಸ್ ಬಗ್ಗೆ:

  • ರಾಷ್ಟ್ರೀಯ ಹಿಂದಿ ದಿವಸವನ್ನು ಪ್ರತಿ ವರ್ಷ ಸೆಪ್ಟೆಂಬರ್ 14 ರಂದು ಆಚರಿಸಲಾಗುತ್ತದೆ. ಹಿಂದಿ ಭಾಷೆಯನ್ನು ಅಧಿಕೃತ ಭಾಷೆಯನ್ನಾಗಿ 1949 ರಲ್ಲಿ ಈ ದಿನದಂದು ಅಳವಡಿಸಿಕೊಳ್ಳಲಾಯಿತು. ಅದರ ಸ್ಮರಣಾರ್ಥ ಈ ದಿನವನ್ನು ರಾಷ್ಟ್ರೀಯ ಹಿಂದಿ ದಿವಸ್ ಎಂದು ಆಚರಿಸಲಾಗುತ್ತಿದೆ.
  • ಹಿಂದಿ ಭಾಷೆಯನ್ನು ಭಾರತದ ಅಧಿಕೃತ ಭಾಷೆಯನ್ನಾಗಿ ಅಳವಡಿಸಿಕೊಳ್ಳುವ ನಿರ್ಧಾರವನ್ನು ಭಾರತ ಸಂವಿಧಾನ ಜನವರಿ 26, 1950 ರಂದು ಅನುಮೋದನೆ ನೀಡಿದ್ದು, ಅಂದಿನಿಂದ ಜಾರಿಗೆ ಬಂದಿದೆ
  • ಭಾರತ ಸಂವಿಧಾನದ 343 ಪರಿಚ್ಚೇದದಡಿ ದೇವನಗರಿ ಲಿಪಿಯಲ್ಲಿರುವ ಹಿಂದಿ ಭಾಷೆ ಅಧಿಕೃತ ಭಾಷೆಯಾಗಿದೆ. ಆದರೆ ಪ್ರಸ್ತುತ ಹಿಂದಿ ಮತ್ತು ಇಂಗ್ಲೀಷ್ ದೇಶದ ಅಧಿಕೃತ ಆಡಳಿತ ಭಾಷೆಗಳಾಗಿವೆ.

ಪ್ಯಾರಾಲಿಂಪಿಕ್ಸ್ ಜಾವೆಲಿನ್ ಎಸೆತದಲ್ಲಿ ಭಾರತಕ್ಕೆ ಚಿನ್ನದ ಪದಕ ತಂದ ದೇವೇಂದ್ರ ಝಝಾರಿಯಾ

ಭಾರತದ ದೇವೆಂದ್ರ ಝಝಾರಿಯಾ ರಿಯೋ ಪ್ಯಾರಾಲಿಂಪಿಕ್ಸ್ ಎಫ್46 ಜಾವೆಲಿನ್ ಎಸೆತದಲ್ಲಿ ಚಿನ್ನದ ಪದಕವನ್ನು ಗೆದ್ದಿದ್ದಾರೆ. ಆ ಮೂಲಕ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಎರಡು ಬಾರಿ ಚಿನ್ನದ ಪದಕವನ್ನು ಗೆದ್ದ ಭಾರತದ ಏಕೈಕ ಆಟಗಾರ ಎಂಬ ಐತಿಹಾಸಿಕ ದಾಖಲೆ ಮಾಡಿದರು. ದೇವೇಂದ್ರ ಗೆದ್ದ ಚಿನ್ನದ ಮೂಲಕ ಈ ಬಾರಿಯ ಪ್ಯಾರಾಲಿಂಕ್ ನಲ್ಲಿ ಭಾರತಕ್ಕೆ ಎರಡು ಚಿನ್ನ, ಒಂದು ಬೆಳ್ಳಿ ಮತ್ತು ಕಂಚು ಸೇರಿದಂತೆ ಈವರೆಗೆ ನಾಲ್ಕು ಪದಕ ಲಭಿಸಿವೆ.

ದೇವೆಂದ್ರ ಝಝಾರಿಯಾ ಬಗ್ಗೆ:

  • ರಾಜಸ್ತಾನದ ಚುರು ಜಿಲ್ಲೆಯ 36 ರ ಹರೆಯದ ದೇವೇಂದ್ರ ಝಝಾರಿಯಾ ಬಾಲ್ಯದಲ್ಲಿ ವಿದ್ಯುತ್ ತಂತಿ ತಗುಲಿ ಎಡಗೈ ಸಂಪೂರ್ಣ ಸುಟ್ಟಿತ್ತು, ಆಸ್ಪತ್ರೆಯಲ್ಲಿ ಚಿಕಿತ್ಸೆ ವೇಳೆ ವೈದ್ಯರು ಕೈಯನ್ನು ಕತ್ತರಿಸಬೇಕಾದ ಅನಿವಾರ್ಯತೆ ಎದುರಾದ ಕಾರಣ ಕೈಕಳೆದುಕೊಂಡರು.
  • 2004 ರ ಅಥೆನ್ಸ್ ಪ್ಯಾರಾಪಿಂಪಿಕ್ಸ್ ನಲ್ಲಿ 62.15 ಮೀಟರ್ ಎಸೆದಿದ್ದ ದೇವೆಂದ್ರ ಚಿನ್ನದ ಪದಕವನ್ನು ಗೆದ್ದಿದ್ದರು. ಈ ಬಾರಿ 63.97 ಮೀಟನ್ ದೂರ ಎಸೆದು ತಮ್ಮದೇ ದಾಖಲೆಯನ್ನು ಅಳಿಸಿ ಚಿನ್ನವನ್ನು ಗೆದ್ದಿದ್ದಾರೆ.
  • ದೇವೆಂದ್ರ ಅವರಿಗೆ 2004 ರಲ್ಲಿ ಅರ್ಜುನ ಪ್ರಶಸ್ತಿ ಮತ್ತು 2012 ರಲ್ಲಿ ಪದ್ಮಶ್ರಿ ಪ್ರಶಸ್ತಿಯನ್ನು ನೀಡಲಾಗಿದೆ. ಈ ಪ್ರಶಸ್ತಿಯನ್ನು ಪಡೆದ ಮೊದಲ ಪ್ಯಾರಾಲಿಂಪಿಕ್ ಆಟಗಾರ.
  • ದೇವೇಂದ್ರ ಅವರು 2004 ರಲ್ಲಿ ಕೊನೆಯದಾಗಿ ಪ್ಯಾರಾಲಿಂಪಿಕ್ ನಲ್ಲಿ ಭಾಗವಹಿಸಿದ್ದರು. 2008 ಮತ್ತು 2012ರಲ್ಲಿ ಎಫ್46 ಕೂಟವಿರದ ಕಾರಣ ಈ ಪ್ಯಾರಾಲಿಂಪಿಕ್ ಗಳಲ್ಲಿ ಅವರು ಭಾಗವಹಿಸಿರಲಿಲ್ಲ.

ಭಾರತ-ಅಮೆರಿಕಾ ಜಂಟಿ ಮಿಲಿಟರಿ ಅಭ್ಯಾಸ “ಯುದ್ದ ಅಭ್ಯಾಸ್”ಉತ್ತರಖಂಡ್ ನಲ್ಲಿ ಆರಂಭ

ಭಾರತ-ಅಮೆರಿಕಾ ನಡುವಿನ ಜಂಟಿ ಮಿಲಿಟರಿ ಅಭ್ಯಾಸ “ಯುದ್ದ ಅಭ್ಯಾಸ್-2016” ಉತ್ತರಖಂಡದ ಚೌಭಾಟಿಯಾದಲ್ಲಿ ಆರಂಭಗೊಂಡಿದೆ. ಇದು ಉಭಯದೇಶಗಳ ನಡುವೆ ನಡೆಯುತ್ತಿರುವ 12ನೇ ಜಂಟಿ ಮಿಲಿಟರಿ ಅಭ್ಯಾಸವಾಗಿದೆ. ಎರಡು ವಾರಗಳ ಕಾಲ ನಡೆಯಲಿರುವ ಈ ಅಭ್ಯಾಸದಲ್ಲಿ ಉಭಯ ದೇಶಗಳ 225 ಯೋಧರು ಭಾಗವಹಿಸಲಿದ್ದಾರೆ.

ಪ್ರಮುಖಾಂಶಗಳು

  • ಭಾರತ ಮತ್ತು ಅಮೆರಿಕಾ ನಡುವೆ ನಡೆಯುತ್ತಿರುವ ಸೇನಾ ಅಭ್ಯಾಸಗಳಲ್ಲಿ ದೀರ್ಘ ಕಾಲ ನಡೆಯುವ ಅಭ್ಯಾಸಗಳಲ್ಲಿ ಇದು ಒಂದಾಗಿದೆ. ಎರಡು ದೇಶಗಳ ನಡುವೆ ದ್ವಿಪಕ್ಷೀಯ ರಕ್ಷಣಾ ಸಹಕಾರ ಬಲಪಡಿಸುವ ಪ್ರಯತ್ನ ಸಹ ಆಗಿದೆ.
  • ಪರ್ವತ ಪ್ರದೇಶಗಳಲ್ಲಿ ಭಯೋತ್ಪಾದನೆ ನಿಗ್ರಹಿಸುವುದು ಮತ್ತು ಒಳನುಸುಳುವಿಕೆಯನ್ನು ತಡೆಯುವ ಕೌಶಲ್ಯವನ್ನು ಪಡೆಯುವುದು ಈ ಅಭ್ಯಾಸದ ಮೂಲ ಉದ್ದೇಶವಾಗಿದೆ.
  • ಈ ಸಮರಾಭ್ಯಾಸದಲ್ಲಿ ಉಭಯ ದೇಶಗಳು ಮಿಲಿಟರಿ ತಂತ್ರಜ್ಞಾನ ಪರಿಚಯ ಮಾಡಿಕೊಳ್ಳುವುದರ ಜೊತೆಗೆ ವಿವಿಧ ರೀತಿಯ ಯುದ್ದ ಕೌಶಲ್ಯಗಳಲ್ಲಿ ಭಾಗವಹಿಸಲಿವೆ.

ವಿಶಾಖಪಟ್ಟಣದಲ್ಲಿ “3ನೇ ಬ್ರಿಕ್ಸ್ ನಗರೀಕರಣ ವೇದಿಕೆ” ಸಭೆಗೆ ಚಾಲನೆ

ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಮೂರನೇ ಬ್ರಿಕ್ಸ್ ನಗರೀಕರಣ ವೇದಿಕೆ ಸಭೆ ಆರಂಭಗೊಂಡಿತು. ಮೂರು ದಿನಗಳ ಈ ಸಭೆಯನ್ನು ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಉದ್ಘಾಟಿಸಿದರು. ಕೇಂದ್ರ ಸಚಿವ ವೆಂಕಯನಾಯ್ಡು ರವರು ಉದ್ಘಾಟಣ ಭಾಷಣವನ್ನು ಮಾಡುವ ಮೂಲಕ ಸಭೆಗೆ ಚಾಲನೆ ನೀಡಿದರು.

  • ಈ ಸಭೆಯಲ್ಲಿ ಬ್ರಿಕ್ಸ್ ರಾಷ್ಟ್ರಗಳಾದ ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾದ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಬ್ರಿಕ್ಸ್ ರಾಷ್ಟ್ರಗಳ ನೂರು ಮತ್ತು ವಿಶ್ವದ ಇತರೆ ರಾಷ್ಟ್ರಗಳ ನಾಲ್ಕು ನೂರು ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ
  • ಮೂರು ದಿನಗಳ ಸಭೆಯಲ್ಲಿ ಹವಾಮಾನ ಬದಲಾವಣೆ, ನಗರೀಕರಣ ಮತ್ತು ಅದರ ಸವಾಲುಗಳು, ಸ್ಮಾರ್ಟ್ ನಗರ ಅಭಿವೃದ್ದಿಗೆ ಹಣಕಾಸು ನೆರವು ಹಾಗೂ ನಗರ ಮೂಲಸೌಕರ್ಯ ಅಭಿವೃದ್ದಿ ಬಗ್ಗೆ ಚರ್ಚಿಸಲಾಗುವುದು.
  • ಸಭೆಯ ಕೊನೆಯ ದಿನದಂದು ಚರ್ಚಿತವಾದ ವಿಷಯಗಳ ಆಧಾರದ ಮೇಲೆ “ವಿಝಾಗ್ ಘೋಷಣೆ (Vizag Declaration)”ಯನ್ನು ಮಾಡಲಾಗುವುದು. ಈ ಘೋಷಣೆ ಗೋವಾದಲ್ಲಿ ಅಕ್ಟೋಬರ್ 15-16 ರಂದು ನಡೆಯಲಿರುವ ಬ್ರಿಕ್ಸ್ ಶೃಂಗಸಭೆಯಲ್ಲಿ ಪ್ರಮುಖ ಪಾತ್ರವಹಿಸಲಿದೆ.

ಅಂಚೆ ದೂರು ದಾಖಲಿಸಲು ಉಚಿತ ಟೋಲ್ ಸಂಖ್ಯೆ ಜಾರಿಗೊಳಿಸಿದ ಕೇಂದ್ರ ಸರ್ಕಾರ

ಅಂಚೆ ಸಂಬಂಧಿಸಿದ ದೂರು ದಾಖಲಿಸುವ ಸಲುವಾಗಿ ಕೇಂದ್ರ ಸರ್ಕಾರ “1924” ಉಚಿತ ಟೋಲ್ ಸಂಖ್ಯೆ ಜಾರಿಗೊಳಿಸಿದೆ. ಅಂಚೆ ಇಲಾಖೆ ಈ ಸೇವೆಯನ್ನು ಅನುಷ್ಟಾನಗೊಳಿಸುತ್ತಿದೆ.

ಪ್ರಮುಖಾಂಶಗಳು:

  • ಈ ಸೇವೆ ಬೆಳಿಗ್ಗೆ 8 ರಿಂದ ರಾತ್ರಿ 8 ರವರೆಗೆ 12 ಗಂಟೆಗಳ ಕಾಲ ಲಭ್ಯವಿರಲಿದೆ.
  • ಪಾಲಿಸಿ ವಿಷಯಗಳನ್ನು ಹೊರತುಪಡಿಸಿ ಇತರೆ ದೂರುಗಳನ್ನು ದೂರು ದಾಖಲಾದ 24 ಗಂಟೆಯೊಳಗೆ ಪರಿಹಾರ ನೀಡಲಾಗುವುದು.
  • ಪ್ರಾಥಮಿಕ ಹಂತದಲ್ಲಿ ಮೂರು ಭಾಷೆಗಳಲ್ಲಿ ಅಂದರೆ ಹಿಂದಿ, ಇಂಗ್ಲೀಷ್ ಮತ್ತು ಮಲೆಯಾಳಂ ಭಾಷೆಯಲ್ಲಿ ಸೇವೆ ಲಭ್ಯವಿರಲಿದ್ದು, ಮುಂದಿನ ಹಂತಗಳಲ್ಲಿ ಎಲ್ಲಾ ಸ್ಥಳೀಯ ಭಾಷೆಗಳಲ್ಲಿ ಜಾರಿಗೆ ತರಲಾಗುವುದು.
  • ಉಚಿತ ಟೋಲ್ ಸಂಖ್ಯೆ ಮೂಲಕ ನೀಡಲಾಗುವ ದೂರುಗಳು ಗಣಕೀಕೃತ ಗ್ರಾಹಕ ಸೇವಾಕೇಂದ್ರದಲ್ಲಿ ನೋಂದಣಿಯಾಗಲಿದೆ. ದೂರುದಾರರಿಗೆ 11 ಸಂಖ್ಯೆಯ ಟಿಕೆಟ್ ನಂಬರನ್ನು ನೀಡಲಾಗುವುದು.
  • ಈ ಟಿಕೆಟ್ ನಂಬರ್ ಬಳಸಿ ದೂರುದಾರರು ತಮ್ಮ ದೂರಿನ ಸ್ಥಿತಿಗತಿಯನ್ನು ಪತ್ತೆಹಚ್ಚಬಹುದಾಗಿದೆ.

“ಆರ್ಮಿ ಗ್ರೀನ್”ಗೆ 2016 ಡುರಾಂಡ್ ಕಪ್ ಪುಟ್ಬಾಲ್ ಪ್ರಶಸ್ತಿ

2016 ಡುರಾಂಡ್ ಕಪ್ ಪುಟ್ಬಾಲ್ ಟೈಟಲ್ ಅನ್ನು ಆರ್ಮಿ ಗ್ರೀನ್ ತಂಡ ಗೆದ್ದುಕೊಂಡಿತು. ಫೈನಲ್ ಪಂದ್ಯದಲ್ಲಿ ನೆರೊಕ ಪುಟ್ಬಾಲ್ ತಂಡವನ್ನು ಮಣಿಸುವ ಮೂಲಕ ಆರ್ಮಿ ಗ್ರೀನ್ ಚಾಂಪಿಯನ್ ಆಗಿ ಹೊರಹೊಮ್ಮಿತು. ನವದೆಹಲಿಯ ಅಂಬೇಡ್ಕರ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಉಭಯ ತಂಡಗಳು ಗೋಲು ಬಾರಿಸಲು ವಿಫಲವಾದವು. ಆದರೆ ಪೆನಾಲ್ಟಿ ಶೂಟೌಟ್ ನಲ್ಲಿ ಆರ್ಮಿ ಗ್ರೀನ್ ತಂಡ ನೆರೊಕ ತಂಡವನ್ನು 6-5 ರಲ್ಲಿ ಸೋಲಿಸಿತು. ನೆಕೊರ ಪುಟ್ಬಾಲ್ ತಂಡ ಈ ಪ್ರತಿಷ್ಠಿತ ಟೂರ್ನಿಯಲ್ಲಿ ಭಾಗವಹಿಸಿದ ಮಣಿಪುರದ ಮೊದಲ ಪುಟ್ಬಾಲ್ ತಂಡ.

ಡುರಾಂಡ್ ಕಪ್:

  • ಡುರಾಂಡ್ ಕಪ್ ಭಾರತದ ಪ್ರತಿಷ್ಠಿತ ಪುಟ್ಬಾಲ್ ಟೂರ್ನಮೆಂಟ್ ಆಗಿದೆ.
  • 1888ರಲ್ಲಿ ಸ್ಥಾಪಿತಗೊಂಡಿರುವ ಈ ಟೂರ್ನಮೆಂಟ್ ಏಷ್ಯಾದ ಅತ್ಯಂತ ಹಳೆಯ ಮತ್ತು ವಿಶ್ವದ ಮೂರನೇ ಹಳೆಯ ಪುಟ್ಬಾಲ್ ಟೂರ್ನಮೆಂಟ್ ಆಗಿದೆ.
  • ಇಂಗ್ಲೆಂಡ್ ನ ಪುಟ್ಬಾಲ್ ಅಸೋಸಿಯೇಶನ್ ಕಪ್ ವಿಶ್ವದ ಹಳೆಯ ಪುಟ್ಬಾಲ್ ಕಪ್ ಆಗಿದೆ.

ಉನ್ನತ ಶಿಕ್ಷಣ ಹಣಕಾಸು ಸಂಸ್ಥೆ (HEFA) ಸ್ಥಾಪನೆಗೆ ಕೇಂದ್ರ ಸಂಪುಟ ಅಸ್ತು

ದೇಶದ ಉನ್ನತ ಶಿಕ್ಷಣ ವ್ಯವಸ್ಥೆಗೆ ಉತ್ತಮ ಗುಣಮಟ್ಟದ ಮೂಲಸೌಕರ್ಯವನ್ನು ನಿರ್ಮಿಸಲು ಉನ್ನತ ಶಿಕ್ಷಣ ಹಣಕಾಸು ಸಂಸ್ಥೆ (Higher Education Financing Agency) ಸ್ಥಾಪನೆಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಉನ್ನತ ಶಿಕ್ಷಣ ಹಣಕಾಸು ಸಂಸ್ಥೆಯನ್ನು ಸ್ಥಾಪಿಸಲು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ದಿ ಸಚಿವಾಲಯ ಸಲ್ಲಿಸಿದ ಪ್ರಸ್ತಾವನೆಗೆ ಪ್ರಧಾನ ಮಂತ್ರಿ ನೇತೃತ್ವ ಸಂಪುಟ ಸಮ್ಮತಿಸಿದೆ.

ಪ್ರಮುಖಾಂಶಗಳು:

  • ಉನ್ನತ ಶಿಕ್ಷಣ ಹಣಕಾಸು ಸಂಸ್ಥೆಯನ್ನು 2 ಸಾವಿರ ಕೋಟಿ ಬಂಡವಾಳದಲ್ಲಿ ಆರಂಭಿಸಲಾಗುವುದು. ಇದರಲ್ಲಿ ಕೇಂದ್ರದ ಪಾಲು ₹ 1 ಸಾವಿರ ಕೋಟಿ ಆಗಿರಲಿದೆ.
  • ಎಚ್‌ಇಎಫ್‌ಎಯನ್ನು ಕೇಂದ್ರ ಸರ್ಕಾರವು ಬ್ಯಾಂಕೇತರ ಹಣಕಾಸು ಸಂಸ್ಥೆ ಅಥವಾ ಸರ್ಕಾರಿ ಬ್ಯಾಂಕ್‌ ಜೊತೆ ಸೇರಿ ಆರಂಭಿಸಲಿದೆ.
  • ಎಚ್‌ಇಎಫ್‌ಎಯ ಬಂಡವಾಳವನ್ನು ₹ 20 ಸಾವಿರ ಕೋಟಿವರೆಗೆ ಹೆಚ್ಚಿಸಲು ಅವಕಾಶ ಇದೆ. ಈ ಹಣ ಬಳಸಿ ಐಐಟಿ, ಐಐಎಂ, ಎನ್‌ಐಟಿಗಳಲ್ಲಿ ವಿಶ್ವದರ್ಜೆಯ ಪ್ರಯೋಗಾಲಯಗಳು ಹಾಗೂ ಮೂಲಸೌಕರ್ಯ ನಿರ್ಮಿಸಲು ನೆರವು ನೀಡಲಾಗುವುದು.
  • ಪ್ರಯೋಗಾಲಯಕ್ಕೆ ಸಂಬಂಧಿಸಿದ ಕಾಮಗಾರಿಗಳಿಗೆ ಹಣವನ್ನು ಎಚ್‌ಇಎಫ್‌ಎಯು 10 ವರ್ಷ ಅವಧಿಯ ಸಾಲದ ರೂಪದಲ್ಲಿ ನೀಡಲಿದೆ. ಸಾಲದ ಅಸಲನ್ನು ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಿಂದ ಪಡೆಯುವ ಶುಲ್ಕ, ಸಂಶೋಧನೆಯಿಂದ ಬರುವ ವರಮಾನ ಬಳಸಿ ಪಾವತಿಸಬೇಕು. ಬಡ್ಡಿಯ ಮೊತ್ತವನ್ನು ಸರ್ಕಾರ ಪಾವತಿಸಲಿದೆ.
  • ಸರ್ಕಾರಿ ಹಾಗೂ ಖಾಸಗಿ ಉದ್ದಿಮೆಗಳು ಸಾಮಾಜಿಕ ಕಾರ್ಯಗಳಿಗೆ ಮೀಸಲಿಡುವ ಹಣವನ್ನೂ ಎಚ್‌ಇಎಫ್‌ಎ ಬಳಸಿಕೊಂಡು ಶೈಕ್ಷಣಿಕೆ ಸಂಸ್ಥೆಗಳಲ್ಲಿ ಸಂಶೋಧನೆಯನ್ನು ಪ್ರೋತ್ಸಾಹಿಸಲಾಗುವುದು.
  • ಕೇಂದ್ರದಿಂದ ಅನುದಾನ ಪಡೆಯುವ ಉನ್ನತ ಶಿಕ್ಷಣ ಸಂಸ್ಥೆಗಳು ಎಚ್‌ಇಎಫ್‌ಎ ಸದಸ್ಯತ್ವ ಪಡೆಯಬಹುದಾಗಿದೆ.

One Thought to “ಪ್ರಚಲಿತ ವಿದ್ಯಮಾನಗಳು- ಸೆಪ್ಟೆಂಬರ್ 14, 2016”

Leave a Comment

This site uses Akismet to reduce spam. Learn how your comment data is processed.